
ಸಂತೆಯ ಸಂತ
ಕನ್ನಡಿಯೊಳಗಿನ ಕಣ್ಣ ನಿಲುವಿಗೆ ನನ್ನದೇನು ಕಾಣಿಕೆ
ಕಣ್ಣಿಗೆ ಕರುಳು ಇರಬಾರದು
ಒಂದೆಂಬುದು ಒಂದಲ್ಲ ಎರಡೆಂಬುದು ಎರಡಲ್ಲ
ಸಂತೆಯೊಳಗೊಬ್ಬ ಸಂತನಿದ್ದಾನೆ ಕಂಡಿರಾ
ಈ ಮೂರು ಮೊಳದ ಗುಂಡಿಯ ತೋಡುವರೈದು ಮಂದಿ
ಓಡುವ ಸೂರ್ಯನ ಹಿಡಿಯಲಾಗದು ನೆರಳು
ಬಿಡಮ್ಮಾ ಇದು ಯಾವ ತತ್ವದ ಹಾಡೋ
ತಂಬೂರಿ ಮೀಟುವ ಬೆರಳು ಮೊಂಡು
ನೆನೆದರೆ ಕಾಡುವುದು ಮರೆಹು
ಮರೆದರೆ ಕಾಡುವುದು ನೆನಹು
ಅರಿದರೆ ಕಾಡುವುದು ನೆನಹು ಮರೆಹು
ಶಬ್ದದೊಳಗಣ ನಿಸದ್ದುವ ಬಲ್ಲವರೇ ಬಲ್ಲರು
ನಿನ್ನಿಂದ ನಾನರಿದೆನಲ್ಲದೆ ಎನ್ನಿಂದ ನೀನಾಗಲಿಲ್ಲ
ಅಂತರಂಗದಲಿ ಅಡಗಿಸಿಟ್ಟ ಭಾವ
ಬಹಿರಂಗದಲಿ ಪೂಜೆಗೊಳ್ಳದು
ಕಣ್ಣ ಒಳಗಣ ಬಿಂಬ ಕಣ್ಣಿಗೆ ಇಂಬು
ಬೆಟ್ಟ ಏರಿ ಬಂದವನ ಕೂಡೇನು ಕಷ್ಟ ಸುಖ
ನೆಲದಲಿ ತೆವಳುವ ಮಣ್ಣು
ಮಣ್ಣಿಲ್ಲದೆ ಇರದು
ಅಂಗವಿಲ್ಲದವಗೆ ಅಂಗಿ ತೊಡಿಸಲುಂಟೇ…
Comments 2
Mariswamy Gowdar
Sep 10, 2020ಕಣ್ಣೊಳಗಣ ಕರುಳು ಹಿಂಗಿದಲ್ಲದೆ ನಿನ್ನ ನೋಡಲಾಗದು… ವಚನ ನೆನಪಿಸಿದಿರಿ. ಸುಂದರ ಕವನ.
Nagaraju M.P
Sep 13, 2020ಕವನ abstract art ಅನ್ನು ನೆನಪಿಸುವಂತಿದೆ. ನಿಮ್ಮ ಅಲ್ಲಮ ಮತ್ತು ಅಕ್ಕನ ನೆನಪಿನ ಕವನಗಳನ್ನು ನಾನು ಓದಿದ್ದೇನೆ, ಚೆನ್ನಾಗಿವೆ ಸರ್.