Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಸತ್ಯ ಸಂಶೋಧನಾ ಲೇಖನ – ಒಂದು ಹೊಸ ಹೆಜ್ಜೆ
Share:
Articles April 29, 2018 ಡಾ. ಶಶಿಕಾಂತ ಪಟ್ಟಣ

ಸತ್ಯ ಸಂಶೋಧನಾ ಲೇಖನ – ಒಂದು ಹೊಸ ಹೆಜ್ಜೆ

ಶರಣ ಸಾಹಿತ್ಯವು ಸಾರ್ವಕಾಲಿಕ ದಯೆ, ಸಮತೆ, ಶಾಂತಿ, ಪ್ರೀತಿ ಬೀರಿದ ಶ್ರೇಷ್ಠ ದೇಸಿ ಸಾಹಿತ್ಯ. ಬಸವಣ್ಣ, ಅಲ್ಲಮ, ಚೆನ್ನಬಸವಣ್ಣ, ಸಿದ್ಧರಾಮ, ಅಕ್ಕಮಹಾದೇವಿ, ಮುಕ್ತಾಯಕ್ಕ, ಆಯ್ದಕ್ಕಿ ಲಕ್ಕಮ್ಮ, ಸತ್ಯಕ್ಕ, ಕಾಳವ್ವೆ, ಗಂಗಮ್ಮ ಮುಂತಾದ ಅನೇಕರಿಂದ ಹುಟ್ಟು ಪಡೆದ ಅಪೂರ್ವ ಜನಪರ ಸಾಹಿತ್ಯ. ಸಹಜ ಕವಿಗಳಾದ ಕ್ರಾಂತಿಕಾರಕ ವಚನಕಾರರಿಂದ ಯಾವುದೇ ಪೂರ್ವಭಾವಿ ತಯಾರಿ ಇಲ್ಲದೆ ರಚಿತಗೊಂಡ ವಚನ ಸಾಹಿತ್ಯವು ಬದುಕಿನ ಎಲ್ಲಾ ಮಗ್ಗಲುಗಳನ್ನು ತನ್ನದೇ ಆದ ವಿಶೇಷ ರೀತಿಯಲ್ಲಿ ತಟ್ಟಿ ನೋಡಿದೆ. ಧಾರ್ಮಿಕ, ಸಾಮಾಜಿಕ, ರಾಜಕೀಯ, ಆರ್ಥಿಕ, ನೈತಿಕ ಕ್ಷೇತ್ರಗಳ ಒಳ ಪದರುಗಳನ್ನು ಇಲ್ಲಿ ಕಾಣಬಹುದು. ವಚನಗಳು ಕನ್ನಡದ ಆಸ್ತಿ. ಶರಣರು ಅಪ್ಪಟ ಕನ್ನಡದ ಹೋರಾಟಗಾರರು. ಕನ್ನಡ ನಾಡು ನುಡಿಗೆ ದುಡಿದ ಸಾಂಸ್ಕೃತಿಕ ಹರಿಕಾರರು.
ವಚನ ಸಾಹಿತ್ಯವು ಕಲ್ಯಾಣ ಕ್ರಾಂತಿಯ ನಂತರ ಸುಮಾರು 300 ವರ್ಷಗಳವರೆಗೆ ಕಾಲಗರ್ಭದಲ್ಲಿ ಹುದುಗಿ ಹೋಗಿತ್ತು. ಎಡೆಯೂರು ಶ್ರೀ ಸಿದ್ಧಲಿಂಗ ಯತಿಗಳು 15 ನೇ ಶತಮಾನದಲ್ಲಿ ನೂರೊಂದು ವಿರಕ್ತರನ್ನು ಸಂಘಟಿಸಿ ಹಳ್ಳಿಗೆ ಏಕ ರಾತ್ರಿ ಪಟ್ಟಣಕ್ಕೆ ಪಂಚ ರಾತ್ರಿಯಾಗಿ ಸಂಚರಿಸಿ ಮರೆತು ಹೋಗಿದ್ದ ವಚನ ಸಾಹಿತ್ಯವನ್ನು ಮತ್ತೆ ಬೆಳಕಿಗೆ ತಂದು ಸಂಸ್ಕರಿಸಿ ಸಂಕಲಿಸಿ ಎರಡನೆಯ ಅಲ್ಲಮನೆನಿಸಿಕೊಂಡರು. ಮುಂದೆ 16 ನೇ ಶತಮಾನದಲ್ಲಿ ಹಂಪಿಯ ಪ್ರೌಢದೇವರಾಯನ ಕಾಲದಲ್ಲಿ ಮತ್ತೆ ಸಂಕಲನ ಕಾರ್ಯ ನಡೆಯಿತು. ಆಗ ಅನೇಕ ಶರಣರ ಚರಿತ್ರೆ ಮತ್ತು ವಚನಗಳು ವಿಕ್ಷಿಪ್ತಗೊಂಡವು. ಲಿಂಗಾಯತ ಚಳವಳಿಯಲ್ಲಿ ವೀರಶೈವ ಪದ ಸೇರಿಕೊಂಡಿದ್ದು 17 ನೇ ಶತಮಾನದಲ್ಲಿ.
ಶೂನ್ಯ ಸಂಪಾದನೆ ಕೃತಿಯು ಪ್ಲೇಟೋನ ಸಂಭಾಷಣೆಗಿಂತ ಉತ್ಕೃಷ್ಟವಾಗಿದೆ. ಆದರೆ ಅದರಲ್ಲಿ ಅಲ್ಲಲ್ಲಿ ತತ್ವಗಳಿಗೆ ಅಭಾಸ ಎನಿಸುವ ಅನಗತ್ಯ ವೈಭವೀಕರಣ, ಪ್ರಕ್ಷಿಪ್ತತೆ, ಸ್ವಲ್ಪ ಮಟ್ಟಿಗೆ ಐತಿಹಾಸಿಕ ಮತ್ತು ಚಾರಿತ್ರಿಕ ದೋಷಗಳು ಸೇರಿಕೊಂಡಿವೆ. ಇವನ್ನು ಜವಾಬ್ದಾರಿಯುತವಾಗಿ ಸರಿಪಡಿಸಿದರೆ ಶೂನ್ಯ ಸಂಪಾದನೆಯು ಜಗತ್ತಿನ ಎಲ್ಲಾ ಪ್ರಶಸ್ತಿಗಳನ್ನೂ ಮೀರುವ ಮೌಲಿಕ ಗ್ರಂಥವೆನಿಸುತ್ತದೆ.
ಅದೇ ರೀತಿ ಅನೇಕ ಕೆಳಸ್ತರದ ವಚನಕಾರರ ಅನುಭವವನ್ನು ಮುಚ್ಚಿ ಹಾಕುವ ಕ್ರೂರ ಕಾರ್ಯಕ್ಕೆ ಕೆಲ ಶೈವ ಸಂಕಲನಕಾರರು ಕೈ ಹಾಕಿದರು. ಇವರು ಉದ್ದೇಶಪೂರ್ವಕವಾಗಿ ವಚನಕಾರರ ಕಾಯಕ, ನಾಮ ಮತ್ತು ವೃತ್ತಿಗಳನ್ನು ಬದಲಿಸುವುದರ ಜೊತೆಗೆ ಮಡಿವಂತಿಕೆ ಮುಂದುವರೆಸಿಕೊಂಡು ಹೋದರು. ವಚನ ಸಾಹಿತ್ಯದಲ್ಲಿ ಇಂತಹ ತಪ್ಪುಗಳನ್ನು ತಿದ್ದುವ ಪರಿಷ್ಕರಣೆ ಕಾರ್ಯ ನಡೆಯಲೇ ಇಲ್ಲ. ದುರಾದೃಷ್ಟವಶಾತ್ ಡಾ ಫ ಗು ಹಳಕಟ್ಟಿ, ಪ್ರೊ ಎಸ್.ಎಸ್. ಬಸವನಾಳ, ಡಾ ಆರ್ ಸಿ ಹಿರೇಮಠ, ಡಾ ಎಂ ಎಂ ಕಲ್ಬುರ್ಗಿ, ಡಾ ಎಂ ಚಿದಾನಂದ ಮೂರ್ತಿ ಅವರು ಸಹಿತ ಇಂತಹ ಪ್ರಮಾದಗಳನ್ನು ಸರಿಪಡಿಸಲಿಲ್ಲ. ಇದು ಅವರ ಮೇಲಿನ ಆರೋಪ ಖಂಡಿತಾ ಅಲ್ಲ. ಅವರಿಗೂ ಸರಿ ಯಾವುದು ತಪ್ಪು ಯಾವುದು ಎಂದು ನಿರ್ಣಯಿಸಲಾಗಲಿಲ್ಲ. ಈಗ ವಚನಗಳು ಕರ್ನಾಟಕ ಸರಕಾರದ ಜನಪ್ರಿಯ ಸಮಗ್ರ ವಚನ ಸಂಪುಟಗಳಾಗಿ ಹೊರ ಹೊಮ್ಮಿವೆ. ಶರಣ ಸಾಹಿತ್ಯ ಅಧ್ಯಯನ, ವಚನಾಸಕ್ತರ ಸಂಖ್ಯೆ ಹೆಚ್ಚಿದೆ.
ಶರಣರ ವಚನಗಳು, ಅವುಗಳ ಮೂಲ ಆಶಯ, ತತ್ವಗಳನ್ನು ಅರಿತಾಗ ತಪ್ಪು ಗ್ರಹಿಕೆಗೆ ಒಳಗಾದ ಅಭಿಮತಗಳನ್ನು ತಿದ್ದುವ ಕಾರ್ಯ ಮತ್ತು ಆ ದಿಶೆಯಲ್ಲಿ ಚಿಂತಿಸುವ ಕಾರ್ಯ ಇವತ್ತಿನ ತುರ್ತು ಅಗತ್ಯ. ವಚನಗಳ ಆಳ ಅಧ್ಯಯನದಿಂದ ಹಲವು ವಿಷಯಗಳು ಇತ್ತೀಚಿಗೆ ಬೆಳಕಿಗೆ ಬರಲಾರಂಭಿಸಿವೆ. ಇಂತಹ ನನ್ನ ಒಂದು ಪ್ರಯತ್ನದ ಫಲ ಈ ಲೇಖನ ಮಾಲೆ. ಈ ಬಗೆಯ ಸಣ್ಣ ಪ್ರಮಾಣದ ಶೋಧನೆ, ಸಂಶೋಧನೆ ಮತ್ತು ಪರಿಷ್ಕರಣೆಯಿಂದ ಅನೇಕ ಅನಗತ್ಯ ಗೊಂದಲಗಳು ದೂರವಾಗುತ್ತವೆ ಹಾಗೂ ಶರಣರ ಬಗ್ಗೆ ಮತ್ತಷ್ಟು ಸ್ಪಷ್ಟತೆ ಸಿಗುತ್ತದೆಂಬುದು ನನ್ನ ಪ್ರಬಲ ನಂಬಿಕೆ. ವಚನಕಾರನ ಹೆಸರಿನಲ್ಲಿ, ಕಾಯಕದಲ್ಲಿ ಕಾಲಾನಂತರದಲ್ಲಿ ಆದ ಬದಲಾವಣೆ, ತಿದ್ದುಪಡಿ ಅಥವಾ ಸಂಕಲನದ ಸಮಯದಲ್ಲಿ ಘಟಿಸಿದ ಪ್ರಮಾದ ಅಥವಾ ಉದ್ದೇಶಪೂರಿತ ಪ್ರಕ್ಷಿಪ್ತತೆ ಎಲ್ಲವನ್ನೂ ಗಣನೆಗೆ ತಗೆದುಕೊಂಡು ಅವುಗಳನ್ನು ತಕ್ಕ ಮಟ್ಟಿಗೆ ಪರಿಷ್ಕರಣೆ ಮಾಡುವ ಪ್ರಾಮಾಣಿಕ ಪ್ರಯತ್ನವನ್ನು ಇಲ್ಲಿ ಕಾಣಬಹುದು.
ಅನೇಕ ವಚನಕಾರರು ತಮ್ಮ ವೃತ್ತಿಯನ್ನು ತಮ್ಮ ವಚನಗಳಲ್ಲಿ ನಮೂದಿಸಿದ್ದಾರೆ. ಆದರೆ ಕಾಲಾನಂತರದಲ್ಲಿ ಅಕ್ಷರಗಳ ಪಲ್ಲಟವಾಗಿ ಅಥವಾ ವಚನಕಾರರ ಹೆಸರು ಅರ್ಥೈಸುವಲ್ಲಿ ಅನಗತ್ಯ ಪದಗಳ ಸೇರ್ಪಡೆಯಾಗಿ, ಸಂಪಾದಕರ ಕಲ್ಪನೆ ಊಹೆ ಗ್ರಹಿಕೆಗಳಿಂದ ತಪ್ಪು ತಿಳಿವಳಿಕೆ ಸೃಷ್ಟಿಯಾಗಿರುವ ಸಾಧ್ಯತೆಗಳೂ ಇವೆ. ಅಲ್ಲದೆ ಅನಗತ್ಯ ಸಂಸ್ಕೃತ ಪದಗಳ, ಶ್ಲೋಕಗಳ ಸೇರ್ಪಡೆಯಿಂದಲೂ ವಚನಗಳು ಕೆಲವೆಡೆ ಪ್ರಕ್ಷಿಪ್ತಗೊಂಡಿವೆ. ಇವನ್ನು ಸರಿಪಡಿಸುವ ಕಾರ್ಯ ನಡೆಯಬೇಕಿದೆ. ಸತ್ಯಾಸತ್ಯತೆಯ ನಿಷ್ಕರ್ಷೆ ಮತ್ತು ಪರಾಮರ್ಶೆ ನಡೆಯಬೇಕಿದೆ.
ಇಂತಹ ಅನೇಕ ವಿಷಯಗಳಲ್ಲಿ ಅತ್ಯಂತ ಜಾಗರೂಕತೆಯಿಂದ ವಚನಕಾರರ ಮೂಲ ಆಶಯಗಳಿಗನುಗುಣವಾಗಿ ವಚನಗಳಲ್ಲಿನ ಮಾರ್ಪಾಡು, ಪರ್ಯಾಯ ಪದ ಜೋಡಣೆಯಲ್ಲಿ ಆದ ದೋಷಗಳನ್ನು ಸರಿಪಡಿಸುವ ಕಾರ್ಯ ಅತ್ಯಂತ ತೀವ್ರವಾಗಿ ನಡೆಯಬೇಕಿದೆ. ಕಾಲ ಘಟ್ಟದಲ್ಲಿ ನಡೆದು ಹೋದ ಪ್ರಮಾದಗಳನ್ನು ಪರಿಷ್ಕರಿಸಿ ವಚನಾಸಕ್ತರಿಗೆ ಇವನ್ನು ಶುದ್ಧ ರೂಪದಲ್ಲಿ ನೀಡುವುದು ನಮ್ಮ ಆದ್ಯ ಕರ್ತವ್ಯ.

ಈ ನಿಟ್ಟಿನಲ್ಲಿ ನನಗೆ ಕಂಡು ಬಂದ ವಿರಳ ವಚನಕಾರ ಕದಂಬ ಮಾರಿತಂದೆ (ಪ್ರಕ್ಷಿಪ್ತಗೊಂಡಿದ್ದು ಕಂಬದ ಮಾರಿ ತಂದೆ)ಗಳ ಜೀವನ ಚರಿತ್ರೆ. ಇವರ ಕುರಿತು ಹಲವು ಗಮನಾರ್ಹ ಅಂಶಗಳನ್ನು ನಿಮ್ಮ ಗಮನಕ್ಕೆ ತಂದಿದ್ದೇನೆ.

ಯಾರು ಕದಂಬ ಮಾರಿ ತಂದೆ?

ಬಸವ ಸಮಕಾಲೀನ ವಚನಕಾರರಲ್ಲಿ ಬಹು ಮುಖ್ಯ ಹಾಗೂ ಅಷ್ಟೇ ಕುತೂಹಲ ಮೂಡಿಸಿದ ಶ್ರೇಷ್ಠ ಶರಣ ಕಂಬದ ಮಾರಿ ತಂದೆ (ಕದಂಬ ಮಾರಿ ತಂದೆ).
ಇಲ್ಲಿಯವರೆಗೆ ಈತನ ಜೀವನ ವೃತ್ತಾಂತ ಕುರಿತು ತಿಳಿದು ಬಂದಿಲ್ಲಾ. ಕಲ್ಯಾಣ ಕ್ರಾಂತಿಯಲ್ಲಿ ಅನೇಕ ವಚನಗಳು ನಶಿಸಿ ಹೋಗಿದ್ದು ಮತ್ತು ಪಾಠಾ೦ತರ ಕಾಲದಲ್ಲಿ ಇತಿಹಾಸಕಾರರು ಮತ್ತು ಸಂಶೋಧಕರು ವಚನಕಾರರ ಸಮಗ್ರ ಜೀವನ ಚಿತ್ರಣ ಕೊಡುವಲ್ಲಿ ಗಮನ ನೀಡಿಲ್ಲ ಅಥವಾ ಸಿಕ್ಕ ದಾಖಲೆಗಳ (ವಚನಗಳ) ಆಧಾರದ ಮೇಲೆ ಸಂಶೋಧಕರು ತಮ್ಮ ತರ್ಕ ಊಹೆ ಕಲ್ಪನೆಗೆ ಅನುಗುಣವಾಗಿ ಶರಣರ ಚರಿತ್ರೆ ನಿರ್ಧರಿಸಿದ್ದಾರೆ. ಶರಣರ ಜೀವನ ಕಾಲ ಮತ್ತು ವೃತ್ತಿ ಹಾಗೂ ಅವರ ಮೂಲ ಸ್ಥಳಗಳ ಸಮಗ್ರ ಮಾಹಿತಿ ಸಂಗ್ರಹಿಸಿ ಖಚಿತಪಡಿಸುವ ಕಾರ್ಯ ಇದುವರೆಗೆ ಆಗಿಲ್ಲ.

ಕದಂಬ ಮಾರಿ ತಂದೆ (ಕಂಬದ ಮಾರಿ ತಂದೆ) 12 ನೇ ಶತಮಾನದ ವಚನಕಾರ. ಅವನ ಹನ್ನೊಂದು ವಚನಗಳು ಬೆಳಕಿಗೆ ಬಂದಿವೆ. ಆತ ಕದಂಬ ರಾಜ್ಯದ ಮೀನುಗಾರ. ತನ್ನ ಆಧ್ಯಾತ್ಮಿಕ ಮತ್ತು ಲೌಕಿಕ ಜೀವನ ನಿರ್ವಹಣೆಗೆ ಆತ ಆಯ್ಕೆ ಮಾಡಿಕೊಂಡಿದ್ದು ಕದಂಬ ರಾಜನ ಸಂಬಂಧಿ ಕಲ್ಯಾಣ ಕಳಚೂರ್ಯರ ನೂರ್ಮಡಿ ತೈಲಪನ ಆಶ್ರಯವನ್ನು. ಮುಖ್ಯವಾಗಿ ಆತ ಬಸವಣ್ಣನವರ ಸಾಮಾಜಿಕ ಚಳುವಳಿಯಲ್ಲಿ ಭಾಗವಹಿಸಬೇಕೆನ್ನುವ ಉತ್ಕಟ ಇಚ್ಛೆ ಹೊಂದಿದ್ದ. ಕದಂಬ ಮಾರಿ ತಂದೆಯ ವಚನಗಳಲ್ಲಿ ತಿರುವು ತೆಪ್ಪ ಮತ್ಸ್ಯ ಗಾಳ ಕೀಟ ಬಲೆ ಸೆಳೆಗೋಲು ಮುಂತಾದ ಪದಗಳು ಬರುವುದರಿಂದ ಆತ ಮೀನುಗಾರನೆ ಎಂದು ಖಚಿತಪಡಿಸಬಹುದು.

ನನ್ನ ಗ್ರಹಿಕೆಯ ಪ್ರಕಾರ ಮೀನುಗಾರನಾಗಿದ್ದ ಆತ ಕರಾವಳಿಯ ಕಡೆಯಿಂದ ಬಂದವ. ಕದ೦ಬ ರಾಜ್ಯದ ಆಡಳಿತಕ್ಕೆ ಒಳಪಟ್ಟ ಪ್ರದೇಶದವನಾಗಿದ್ದು, ಮುಂದೆ ಕಲ್ಯಾಣ ರಾಜ್ಯ ಸೇರಿ, ಪ್ರಮುಖ ವಚನಕಾರನಾಗಿ ತನ್ನ ವ್ಯಕ್ತಿತ್ವವನ್ನು ಉನ್ನತೀಕರಿಸಿಕೊಳ್ಳುತ್ತಾನೆ. ಕದಂಬ ಪದವು ಅಪಭ್ರ೦ಶವಾಗಿ ಕ೦ಬದ ಮಾರಿತಂದೆ ಎಂದಾಗಿರುವ ಎಲ್ಲ ಸಾಧ್ಯತೆಗಳೂ ಇವೆ.

ಕದಂಬ ರಾಜ್ಯದ ಪೊಂಡಾದಲ್ಲಿ ಮಂಗೇಶ ದೇವಸ್ಥಾನ ಎಂಬ ಒಂದು ಶೈವ ದೇವಾಲಯವಿದೆ ಮತ್ತು ಅಲ್ಲಿಂದ ಕೆಲ ದೂರದಲ್ಲಿ ಶಾಂತ ದುರ್ಗಾಶಿವ ಮಂದಿರ ಕಂಡು ಬರುತ್ತದೆ. ಬಹುತೇಕವಾಗಿ ಕದಂಬ ಮಾರಿ ತಂದೆ ಆ ಭಾಗದವನಾಗಿರಲು ಸಾಕು. ಆತ ಮೀನು ಹಿಡಿಯುವ ಕಾಯಕದವನಾಗಿದ್ದು ಅಂತಹ ಆಹಾರ ಪದ್ಧತಿಯ ಜನರಿಗೆ ಮೀನು ಹಿಡಿದು ಮಾರುತ್ತಿದ್ದನು.

ಇನ್ನು ಮಾರಿ ತಂದೆ ಎನ್ನುವ ಪದ ಅನೇಕ ವಚನಕಾರರ ಮುಂದೆ ಅಂಟಿಕೊಂಡಿದೆ. ಉದಾ – ಅರಿವಿನ ಮಾರಿ ತಂದೆ, ನಗೆ ಮಾರಿ ತಂದೆ, ಕೂಗು ಮಾರಿ ತಂದೆ, ಕಂಬದ (ಕದಂಬ) ಮಾರಿ ತಂದೆ… ಹೀಗೆ ಸುಮಾರು ಹತ್ತಾರು ವಚನಕಾರರ ಮುಂದೆ ಮಾರಿ ತಂದೆ ಎನ್ನುವ ಪದ ಬಂದಿದೆ. ಮಾರು ಹೋಗುವವರು ಅಂದರೆ ಅಲೆಮಾರಿಗಳು (Nomads) ಎಂದು ಸೂಚಿಸುವ ಪದ ಇದು. ನಿರ್ದಿಷ್ಟ ಕಾಯಕವನ್ನು ಸಾಂದರ್ಭಿಕವಾಗಿ ಬೇರೆ ಬೇರೆ ಪ್ರದೇಶಗಳಲ್ಲಿ ಕಾಯಕ ಮಾಡುವವರಿಗೆ ಮಾರಿ ತಂದೆ (ಅಲೆಮಾರಿ) ಎಂದು ಕರೆದಿರಬಹುದು.
ಕದಂಬ ಮಾರಿ ತಂದೆ ತನ್ನ ವೃತ್ತಿಯಾದ ಮೀನುಗಾರಿಕೆಯ ಪರಿಭಾಷೆಯಲ್ಲಿ ತನ್ನ ಆಧ್ಯಾತ್ಮಿಕ ನಿಲುವನ್ನು ವಚನಗಳಲ್ಲಿ ಸೊಗಸಾಗಿ ವ್ಯಕ್ತಪಡಿಸಿದ್ದಾನೆ. ಒಂದು ವಚನದಲ್ಲಿ ಅವನು ತನ್ನ ಅನುಭವವನ್ನು ಈ ರೀತಿ ಹೇಳುತ್ತಾನೆ:

ಕಾಯದಿಂದ ಕರ್ಮವ ಕಂಡು,
ಭಾವದಿಂದ ಲಿಂಗವ ಕಂಡು,
ಲಿಂಗದಿಂದ ಸ್ವಾನುಭಾವವಾಗಿ,
ಅಂಗದ ಸಂಗಕ್ಕೆ ಹೊರಗಾಯಿತ್ತು,
ಕದ೦ಬಲಿಂಗವನರಿಯಲಾಗಿ.
(ಸಂಕೀರ್ಣ ವಚನ ಸಂಪುಟ -2 -ಪುಟ 1-ಕ೦ಬದ ಮಾರಿ ತಂದೆಯ ವಚನ )

ತನ್ನ ಶರೀರದಿಂದ ತಾನು ತನ್ನ ಕಾಯಕವನ್ನು ಕಂಡು, ಭಾವನೆಯಿಂದ ಲಿಂಗ ಪ್ರಜ್ಞೆಯ ಕಂಡು, ಲಿಂಗವೇ ಸಮಾಜವೆಂಬ ಸ್ವಾನುಭಾವವನ್ನು ಕಂಡು, ಅಂತಹ ಸ್ವಾನುಭಾವದ ಅರಿವಿನ ಕುರುಹು ಅಂಗಕ್ಕೆ ಸೋಂಕಿದಾಗ ಸಮುದಾಯದ ಹಿತ ಸುಖ ಅರಿಯದೆ ಲಿಂಗ ತತ್ವ ಅರಿಯದೆ ಲಿಂಗವ ಕಟ್ಟಿದರೆ ಅದು ಹೊರಗಾಗಿತ್ತು ಎಂದು ವಿಡಂಬನಾತ್ಮಕವಾಗಿ ಹೇಳುತ್ತಾನೆ.
ಜಂಗಮ ತತ್ವ ಲಿಂಗ ಪ್ರಜ್ಞೆ ಅರಿಯದೆ ದೇಹಕ್ಕೆ ಲಿಂಗವ ಕಟ್ಟಿದರೆ ಪ್ರಯೋಜನವಿಲ್ಲ ಎಂದು ಎಚ್ಚರಿಸುವ ಮೂಲಕ ಸ್ಥಾವರ ಭಾವದಿಂದ ಜಂಗಮ ಪ್ರಜ್ಞೆಗೆ ಕರೆದೊಯ್ಯುವ ದಿಟ್ಟ ಶರಣರ ಆಶಯ ಮಹತ್ತರವಾದದ್ದು. ಭಾವಲಿಂಗ ಪ್ರಾಣಲಿಂಗವಾಗಿ ಬದುಕು ನಡೆಸುವ ಶರಣರ ಜೀವನವೇ ಲಿಂಗಮಯವಾಗಿರುತ್ತದೆ.

ಗಂಪಕ್ಕೆ ಸಿಕ್ಕೆ, ಬಲೆಗೊಳಗಾಗೆ
ಗೂಳಿಯ ಇರಿತದ ಡಾವರಕ್ಕೆ ನಿಲ್ಲೇ,
ಸೆಳೆಗೋಲಿನ ಗಾನದ ಕೀಟವನೊಲ್ಲೆ.
ನಿನ್ನಾಟ ಅದೇತರ ಮಡುವಿನಾಟ ಹೇಳಾ
ಕದಕತನ ಬೇಡ ಕದಂಬಲಿಂಗ. ಸ.ವ.ಸ೦ 2 ಪುಟ 2 ಸಂಖ್ಯೆ 3

ಇಲ್ಲಿ ತಾನು ಹಿಡಿಯುವ ಮೀನು ತನಗೆ ಸಿಗದೇ, ಬಲೆಯಲ್ಲಿ ಸಿಲುಕದೆ, ಕೀಟವನ್ನೊಲ್ಲದೆ ದೊಡ್ಡ ಮೀನಿನ ಇರಿತಕ್ಕೂ ಬಗ್ಗದೆ ಕಾಡುತ್ತಿರುವ ಪ್ರಸಂಗವನ್ನು ವಿವರಿಸುತ್ತಾ ಏನು ನಿನ್ನಾಟ? ಮಡುವಿನಾಟ? ಎಂದು ಕೇಳುತ್ತಾನೆ. ಅಂದರೆ ತನ್ನೊಂದಿಗೆ ಈ ಬಗೆಯ ಮೋಸಗಾರಿಕೆ, ದ್ರೋಹ ಮಾಡಬೇಡ ಎಂದು ಎಚ್ಚರಿಸುತ್ತಾನೆ.

ಸಾಲು ಕೊಡಬೆಗೆ ಹುಗದು
ಆರು ಕೊಡಬೆಗೆ ಬಾರದು
ಮೂರು ಕುಳಿಗೆ ಸಿಕ್ಕದು ನೋಡಾ!
ಬಸವಣ್ಣನ ಅಂಗದಲ್ಲಿ ಹರಿದು
ಚೆನ್ನಬಸವಣ್ಣನ ಹೃದಯದಲ್ಲಿ ಮೂಡಿ
ಪ್ರಭುದೇವರ ಕರದಲ್ಲಿ ಸಿಕ್ಕಿದೆಯಲ್ಲಾ
ಸಿಕ್ಕಿ ನಿನ್ನ ಕುಲಿಶದ ಹೊಳಸೇಕೆ
ಇಂತಿ ತ್ರಿವಿಧದ ಕಲಾಸಾಟವ ಬಿಡು
ಕದಕತನ ಬೇಡಾ ಕದಂಬಲಿಂಗಾ. ಸ.ವ ಸ೦.2 ವಚನ 10 ಪುಟ 9

ಇದು ತನ್ನ ವೃತ್ತಿಯ ಮೀನುಗಾರಿಕೆಯ ಪಾರಿಭಾಷೆಯ ಗತ್ತಿನಲ್ಲಿ ಬರೆದ ವಚನ. ಸಾಲಾದ ಮೀನು ಹಿಡಿಯುವ ಬುಟ್ಟಿಯಲ್ಲಿ (ಕೊಡಬೆ) ಮೀನು ಪ್ರವೇಶ ಮಾಡದು. ಆರು ಮೀನು ಹಿಡಿಯುವ ಬುಟ್ಟಿಯಲ್ಲಿ ಮೀನುಬಾರದು. ಆದರೆ ಚಿಕ್ಕದಾದ ತೋಡಿದ ಹಳ್ಳದಲ್ಲಿ ಮೀನು ಸಿಕ್ಕಿತು. ಅಂತಹ ತುಂಟ ಮೀನು ಬಸವಣ್ಣನ ಅಂಗದಲ್ಲಿ ಹರಿದು, ಚೆನ್ನಬಸವಣ್ಣನ ಹೃದಯದಲ್ಲಿ ಮೂಡಿ, ಪ್ರಭುದೇವರ ಕರದಲ್ಲಿ ಸಿಕ್ಕಿದೆಯಲ್ಲಾ ಎಂದು ಕುಲಿಶವೆಂಬ ಮೀನನ್ನು ಪ್ರಶ್ನಿಸುತ್ತಾರೆ. ನೀನು ಇಂತಹ ಪವಿತ್ರ ಪುಣ್ಯ ಪುರುಷರ ಸ್ಪರ್ಶದಿಂದ ಪಾವನವಾಗಿರುವಾಗ ತ್ರಿವಿಧದ ಕಲಸಾಟ ಬಿಡು, ನಾನು ನಂಬಿದ ವೃತ್ತಿಗೆ ಮೋಸ ಮಾಡಬೇಡಾ ಕದಂಬಲಿಂಗ ಎಂದು ಹೇಳಿದ್ದಾರೆ.

ಹರದ ಕಾಯಕದ ಮಾರಯ್ಯಗಳ ಪುಣ್ಯ ಸ್ತ್ರೀ. ಗಂಗಮ್ಮ ( ಹಾದರ ಕಾಯಕವಲ್ಲ)

ಕಲ್ಯಾಣ ಶರಣೆಯರಲ್ಲಿ ವಿವಿಧ ಸ್ತರದ ಕಾಯಕವನ್ನು ಮಾಡುವ ಮಹಿಳೆಯರು ಕಂಡು ಬರುತ್ತಾರೆ. ಒಬ್ಬೊಬ್ಬ ಶರಣೆಯೂ ತನ್ನ ನೆಲೆಯನ್ನು, ಸ್ವಂತಿಕೆಯನ್ನೂ ಆ ಕಾಲದಲ್ಲಿ ಅಭಿವ್ಯಕ್ತಿಸುವ ರೀತಿಯೇ ಅಪೂರ್ವವಾಗಿದೆ. ಆದರೆ ಇತಿಹಾಸದ ತಪ್ಪು ದಾಖಲೆಗಳು ಇಲ್ಲಿಯೂ ಅನೇಕ ಗೊಂದಲಗಳನ್ನು ಹುಟ್ಟುಹಾಕಿವೆ. ಅವುಗಳಲ್ಲಿ ಒಂದು, ಹರದ ಕಾಯಕದ ಮಾರಯ್ಯಗಳ ಪುಣ್ಯ ಸ್ತ್ರೀ ಗಂಗಮ್ಮ ತಾಯಿಯವರಿಗೆ ಸಂಬಂಧಿಸಿದ್ದು. ಅತ್ಯಂತ ವಿಚಿತ್ರ ಹಾಗೂ ನೋವಿನ ಸಂಗತಿ ಎಂದರೆ ಗಂಗಮ್ಮನವರದು ಹಾದರ ಕಾಯಕ ಎಂದು ದಾಖಲಾದದ್ದು. ಈ ಹಿಂದಿನ ಶೈವ ಸಂಕಲನಕಾರರ ಕೈವಾಡವೇ ಇದಕ್ಕೆ ಕಾರಣ ಎನ್ನದೆ ವಿಧಿಯಿಲ್ಲ.
ಹರದ ಕಾಯಕದವೆಂದರೆ, ಬುಟ್ಟಿಯಲ್ಲಿ ತರಕಾರಿ ಹಣ್ಣು ಹಂಪಲ ಇಟ್ಟುಕೊಂಡು ಮಾರುಕಟ್ಟೆಗೆ ಬಂದು ತಾನು ತಂದಿದ್ದ ತರಕಾರಿ ಮತ್ತು ಇತರ ವಸ್ತುಗಳನ್ನು ಹರವಿಕೊಂಡು (ಹರದ) ಮಾರುವುದು. ಇದೇ ಹರದ ಕಾಯಕ. ಹೀಗೆ ಬಂದ ಕಾಯಕದ ಆದಾಯದಲ್ಲಿ ಜಂಗಮಸೇವೆ ಮಾಡುವ ಶರಣೆ ಗಂಗಮ್ಮ. “ಯಾವ ಕಾಯಕ ಮಾಡಿದಡೂ ಒಂದೇ ಕಾಯಕವಯ್ಯಾ” ಎಂದು ಹೇಳುವ ಮೂಲಕ ಗಂಗಮ್ಮ ತಾನು ಕೆಳಸ್ತರದ ಮಹಿಳೆ ಎಂದು ಹೇಳಿಕೊಂಡಿದ್ದಾಳೆ, ಅಷ್ಟೇ. ಅಂತಹ ಶರಣೆಗೆ ಹಾದರದ ಪಟ್ಟ ಕಟ್ಟಿದರು 16 ನೇ ಶತಮಾನದ ಸಂಕಲನಕಾರರು. ಅಂದು ಸೂಳೆ ಸಂಕವ್ವೆ ಮತ್ತು ಕೆಲವು ವೇಶ್ಯೆಯರು ಬಸವಣ್ಣನವರ ಹಾಗೂ ಶರಣರ ಪ್ರಭಾವಕ್ಕೆ ಒಳಗಾಗಿ ತಾವು ಕೈಕೊಂಡಿದ್ದ ವೃತ್ತಿಯನ್ನು ಬಿಟ್ಟು ಸಮಾಜಮುಖಿಯಾದ ಅನೇಕ ಪ್ರಸಂಗಗಳಿವೆ. ಆದರೆ ಗಂಗಮ್ಮನವರು ಹಾಗೆ ಬಂದವರಲ್ಲ.
ಮಾರಯ್ಯಗಳ ಪುಣ್ಯ ಸ್ತ್ರೀ ಗಂಗಮ್ಮನವರ ಒಂದೇ ಒಂದು ವಚನ ದೊರೆಕಿದೆ. ಇವರ ವಚನಾಂಕಿತ- ಗಂಗೇಶ್ವರ. ಓಣಿ ಓಣಿ ತಿರುಗಿ, ಸಂತೆಗೆ ಒಯ್ದು ಬುಟ್ಟಿಯೊಳಗಿನ ಸರಕನ್ನು ಹರವಿಕೊಂಡು ಮಾರಿ ಉದ್ಯೋಗ ಮಾಡುತ್ತಿದ್ದುದು ಇವರ ಕಾಯಕವಾಗಿತ್ತು.
ಯಾವ ಕಾಯಕ ಮಾಡಿದಡೂ ಒಂದೇ ಕಾಯಕವಯ್ಯಾ
ಯಾವ ವ್ರತವಾದಡೂ ಒಂದೇ ವ್ರತವಯ್ಯಾ.
ಆಯಾ ತಪ್ಪಿದಡೆ ಸಾವಿಲ್ಲ, ವ್ರತ ತಪ್ಪಿದಡೆ ಕೂಟವಿಲ್ಲ.
ಕಾಕಪಿಕದಂತೆ ಕೂಡಲು ನಾಯಕ ನರಕ
ಗಂಗೇಶ್ವರಲಿಂಗದಲ್ಲಿ.

ಈ ವಚನವನ್ನು ಮೇಲ್ನೋಟದಲ್ಲಿ ಕಂಡು ಗಂಗಮ್ಮನವರದ್ದು ವೇಶ್ಯಾವೃತ್ತಿ ಎಂದು ಥಟ್ಟನೆ ತೀರ್ಮಾನಿಸುವುದು ಸರಿಯಲ್ಲ. ಕೆಲವು ಸಂಶೋಧಕರು ಪುಣ್ಯ ಸ್ತ್ರೀ ಎಂದರೆ ಸೂಳೆಯರು ಎಂದು ಅಭಿಮತಕ್ಕೆ ಬಂದಿದ್ದು ಇಂತಹ ಸಾರ್ವರ್ತಿಕ ತಪ್ಪು ಕಲ್ಪನೆಗೆ ಗ್ರಾಸವಾಗುತ್ತದೆ. ಪುಣ್ಯಸ್ತ್ರೀ ಮತ್ತು ಈಗಿನ ಧರ್ಮಪತ್ನಿ ಒಂದೇ ಎಂದು ತಿಳಿಯುವುದು ಸಂಶೋಧಕರ ಆದ್ಯ ಕರ್ತವ್ಯ.
ಇಲ್ಲಿ ಕಾಯಕದ ಬಗ್ಗೆ ಮಾತನಾಡುವ ಗಂಗಮ್ಮನವರದ್ದು ಇಂತಹುದೇ ಕಾಯಕ ಎಂದು ಖಚಿತವಾಗಿ ಹೇಳಿ, ನಿರ್ದಿಷ್ಟ ತೀರ್ಮಾನಕ್ಕೆ ಬರಲು ಕಠಿಣವೆನಿಸುತ್ತದೆ. ಗಂಗಮ್ಮ ತನ್ನಂತೆ ಕೆಳ ಸ್ತರದಲ್ಲಿರುವ, ವೇಶ್ಯಾ ವೃತ್ತಿ ಮಾಡುವ ಮಹಿಳೆಯರನ್ನು ಕಂಡು ಈ ವಚನವನ್ನು ಬರೆದಿರಬಹುದು. ಗಂಗಮ್ಮ ಹರದ ಕಾಯಕದ ಶರಣೆ. ಜೊತೆಗೆ ಮಾರಯ್ಯನವರ ಪುಣ್ಯಸ್ತ್ರೀ. ಈ ಅಂಶಗಳನ್ನು ಗಮನಿಸಿದರೆ ಇತಿಹಾಸ ದಾಖಲೆಯಲ್ಲಾದ ಪ್ರಮಾದ ಸ್ಪಷ್ಟವಾಗುತ್ತದೆ. ಅಕ್ಷರಗಳ ಹಿಂದುಮುಂದು ಜೋಡಣೆಯಲ್ಲಾಗುವ ಸಣ್ಣಪುಟ್ಟ ಪ್ರಮಾದ, ಅಪಭ್ರಂಶಗಳಿಂದ ವಚನಕಾರರ ಕಾಯಕ ಮತ್ತು ವೃತ್ತಿಯ ಬಗ್ಗೆ ತಪ್ಪು ಕಲ್ಪನೆ ಮೂಡುತ್ತದೆ. ಕಾರಣ ಹಾದರ ಕಾಯಕದ ಮಾರಯ್ಯನವರ ಪುಣ್ಯ ಸ್ತ್ರೀ ಎಂದೆನ್ನುವದಕ್ಕಿಂತ “ಹರದ ಕಾಯಕದ ಪುಣ್ಯ ಸ್ತ್ರೀ” ಎಂದಾಗಲೇ ಯೋಗ್ಯವೆನಿಸುತ್ತದೆ ಎನ್ನುವುದು ನನ್ನ ಸ್ಪಷ್ಟ ಅಭಿಮತ.

Previous post ಕಾಣಿಕೆಯ ರೂಪದ ಕಪ್ಪುಹಣ
ಕಾಣಿಕೆಯ ರೂಪದ ಕಪ್ಪುಹಣ
Next post ಛಲಬೇಕು ಶರಣಂಗೆ…
ಛಲಬೇಕು ಶರಣಂಗೆ…

Related Posts

ಅಸ್ತಿತ್ವವಾದಿ ಬಸವಣ್ಣ
Share:
Articles

ಅಸ್ತಿತ್ವವಾದಿ ಬಸವಣ್ಣ

September 7, 2021 ಪ್ರೊ.ಫಣಿರಾಜ್ ಕೆ
ಸಮುದಾಯದಲ್ಲಿ ಬದುಕುವ ಮನುಷ್ಯ ಜೀವಿ ತನ್ನ ಪಾಡಿಗೆ ತಾನು ಯಾರ ಹಂಗು ಇಲ್ಲದಂತೆ ಬದುಕಲು ಸಾಧ್ಯವಿಲ್ಲವೇ? ನಮ್ಮ ಇರುವಿಕೆಯನ್ನು ಸಾರುವುದು ನಮ್ಮ ಜೀವಂತ ದೇಹ ಮಾತ್ರವೇ; ಅದಕ್ಕೆ...
ಆ ಬಿರುಗಾಳಿ ಹುಟ್ಟಲೊಡನೆ…
Share:
Articles

ಆ ಬಿರುಗಾಳಿ ಹುಟ್ಟಲೊಡನೆ…

January 8, 2023 ಡಾ. ಚಂದ್ರಶೇಖರ ನಂಗಲಿ
೧) ನಾನೆಂಬ ಅಹಂಕಾರ ತಲೆದೋರಿದಲ್ಲಿ ಅಟಮಟ ಕುಟಿಲ ಕುಹಕವೆಂಬ ಬಿರುಗಾಳಿ ಹುಟ್ಟಿತ್ತು! ಆ ಬಿರುಗಾಳಿ ಹುಟ್ಟಲೊಡನೆ ಜ್ಞಾನಜ್ಯೋತಿ ಕೆಟ್ಟಿತ್ತು! ಜ್ಞಾನಜ್ಯೋತಿ ಕೆಡಲೊಡನೆ ನಾ...

Comments 1

  1. Vivekanand Golasangimath
    May 20, 2025 Reply

    ಸಾಲು ಕೊಡಬೆಗೆ ಹುಗದು…
    …..ಬಲೆಗೆ ಬೀಳದು
    ಆರು ಕೊಡಬೆಗೆ ಬಾರದು..
    ……. ಆರು ಗ್ರಂಥಿಗಳು (ಪ್ರಜ್ಞಾ ಸ್ಥಲಗಳಲ್ಲಿ) ಸಿಗದು.

    ಮೂರು ಕುಳಿಗೆ ಸಿಕ್ಕದು ನೋಡಾ!
    ದೇಹದೊಳಗಿನ ಮೂರು ಕೋಶಗಳಿಗೆ (ತ್ರಿಲಿಂಗ…. ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗ – ಅನ್ನಮಯಕೋಶ, ಪ್ರಾಣಮಯ ಕೋಶ, ಮನೋಮಯ ಕೋಶ) ಸಿಗದು.

    #ಬಸವಣ್ಣನ ಅಂಗದಲ್ಲಿ ಹರಿದು
    ….. ಭಕ್ತ ಪ್ರಜ್ಞೆ ಅಂಗದಲ್ಲಿ ಮೂಡಿ
    #ಚೆನ್ನಬಸವಣ್ಣನ ಹೃದಯದಲ್ಲಿ ಮೂಡಿ
    ಜಂಗಮ ಪ್ರಜ್ಞೆ ಹೃದಯದಲ್ಲಿ ಮೂಡಿ
    #ಪ್ರಭುದೇವರ ಕರದಲ್ಲಿ ಸಿಕ್ಕಿದೆಯಲ್ಲಾ
    ಐಕ್ಯಯೋಗದಲ್ಲಿ ಕರಗತವಾಗುತ್ತದೆ.
    ಇಷ್ಟರವರೆಗೆ ಅರ್ಥಪೂರ್ಣ ಎನಿಸುತ್ತದೆ..

    #ಮುಂದೆ….
    ಸಿಕ್ಕಿ ನಿನ್ನ ಕುಲಿಶದ ಹೊಲಸೇಕೆ ಅಡಗದು?
    ಇಂತೀ ತ್ರಿವಿಧದ ಕಲಸಾಟವ ಬಿಡು
    ಕದಕತನ ಬೇಡ (ಕದಂಬಲಿಂಗಾ).
    …..ತ್ರಿವಿಧದ ಕಲಸಾಟ ಎಂದರೆ ಸತ್,ರಜಸ್,ತಮಸ್ ಗಳ ಕೆಸರಾಟ ಬಿಡು ಎಂದರ್ಥೈಸಬಹುದು.
    ಇಲ್ಲಿ ಕುಲಿಶ ಶುದ್ಧಾತ್ಮ ಎಂದರೆ #ಹೊಲಸಾಟ ಪದ ಸರಿ ಎನಿಸುವುದಿಲ್ಲ. ವಚನ ತಾತ್ಪರ್ಯಕ್ಕೆ ವಿರೋಧಾಭಾಸ ಆಗುತ್ತದೆ

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಮಿಥ್ಯಾದೃಷ್ಟಿ ರಹಿತ ಬಯಲ ದರ್ಶನ
ಮಿಥ್ಯಾದೃಷ್ಟಿ ರಹಿತ ಬಯಲ ದರ್ಶನ
February 7, 2021
ನಡೆದಾಡುವ ದೇವರು
ನಡೆದಾಡುವ ದೇವರು
April 9, 2021
ಕನ್ನಗತ್ತಿಯ ಮಾರಯ್ಯ
ಕನ್ನಗತ್ತಿಯ ಮಾರಯ್ಯ
April 3, 2019
ಹೀಗೊಂದು ಸಂವಾದ…
ಹೀಗೊಂದು ಸಂವಾದ…
April 6, 2023
ಒಂದಾಗಿ ನಿಂತೆ…
ಒಂದಾಗಿ ನಿಂತೆ…
April 6, 2024
ಮನ ಉಂಟೇ ಮರುಳೇ, ಶಿವಯೋಗಿಗೆ?
ಮನ ಉಂಟೇ ಮರುಳೇ, ಶಿವಯೋಗಿಗೆ?
November 10, 2022
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ
December 3, 2018
ಹೀಗೊಂದು ತಲಪರಿಗೆ (ಭಾಗ-2)
ಹೀಗೊಂದು ತಲಪರಿಗೆ (ಭಾಗ-2)
July 4, 2021
ಮನುಷ್ಯತ್ವ ಮರೆಯಾಗದಿರಲಿ
ಮನುಷ್ಯತ್ವ ಮರೆಯಾಗದಿರಲಿ
August 6, 2022
ದಾಟಿಸುವ ತೆಪ್ಪಗಳನ್ನು ದಾಟುವ ವಿವೇಕ
ದಾಟಿಸುವ ತೆಪ್ಪಗಳನ್ನು ದಾಟುವ ವಿವೇಕ
September 10, 2022
Copyright © 2025 Bayalu