Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಸಾಧನಾ ಚತುಷ್ಟಯಗಳು
Share:
Articles October 13, 2026 ಪದ್ಮಾಲಯ ನಾಗರಾಜ್

ಸಾಧನಾ ಚತುಷ್ಟಯಗಳು

ಸಾಂಖ್ಯ, ತಾರಕ, ಅಮನಸ್ಕ, ಪರಿಪೂರ್ಣ ಬಯಲು ಈ ನಾಲ್ಕು ಪರಿಭಾಷೆಗಳಿಗೆ ನಮ್ಮ ಭಾರತದ ಸಾಂಸ್ಕೃತಿಕ ಚರಿತ್ರೆಯಲ್ಲಿ ಪ್ರಾಚೀನವಾದ ಮಹತ್ವ ಇರುವುದನ್ನು ಕಾಣಬಹುದು. ಈ ಪದಗಳು ಅತ್ಯಂತ ಪ್ರಾಚೀನವೆಂಬುದರಲ್ಲಿ ಸಂಶಯವಿಲ್ಲ. ವೈದಿಕ ಸಾಹಿತ್ಯದ ಯೋಗ ಸೂತ್ರಗಳು, ಉಪನಿಷತ್ತು, ಪತಂಜಲಿ ಯೋಗ ಸೂತ್ರಗಳಲ್ಲೂ ಈ ಪರಿಭಾಷೆಗಳಿವೆ. ಇವು ಮುಖ್ಯವಾಗಿ ಅದ್ವಯ ತತ್ವವನ್ನು ಸೈದ್ಧಾಂತೀಕರಿಸಿದರೆ ಮತ್ತೊಂದೆಡೆ ಅದ್ವೈತ ತತ್ವವನ್ನು ಕಟ್ಟಲು ಇವನ್ನು ಬಳಸಿಕೊಂಡಿರುವುದು ಸ್ಪಷ್ಟ! ಮಹಾಯಾನ ಬೌದ್ಧ ಪ್ರಜ್ಞಾ ಪಾರಮಿತ ಸೂತ್ರಗಳಲ್ಲೂ ಈ ಪರಿಭಾಷೆಗಳಿವೆ. ಹಿಂದೆ ಹೇಳಿದಂತೆ ನಮ್ಮ ಶರಣರ ವಚನಗಳನ್ನು ಈ ಕ್ರಮದಲ್ಲಿ ಜೋಡಿಸಿ ಓದಿಕೊಂಡರೆ ಶರಣ ಮಾರ್ಗದ ಹೊಸದೊಂದು ಕ್ರಮ ನಮ್ಮನ್ನು ಅಚ್ಚರಿಗೊಳಿಸಬಲ್ಲದು. ಶೈವ ತಂತ್ರ ಹಾಗೂ ಬೌದ್ಧ ತಂತ್ರಗಳಲ್ಲಿ ಈ ನಾಲ್ಕೂ ಪರಿಭಾಷೆಗಳು ಅತ್ಯಂತ ರಹಸ್ಯ ತಂತ್ರಗಳೆನಿಸಿಕೊಂಡಿವೆ. ಇಲ್ಲಿ ಸಿದ್ದ ಸಾಹಿತ್ಯದ ಚರ್ಯಾಗೀತೆ ಅಥವಾ ಚರ್ಯಾ ಪದಗಳು ಉಲ್ಲೇಖಾರ್ಹವಾದವುಗಳು. ಚರ್ಯ ಎಂದರೆ ನಡೆ, ಆಚಾರ ಅಥವಾ ಜೀವನ ವಿಧಾನ ಎಂಬರ್ಥಗಳಿವೆ. ಪದ ಎಂದರೆ ಮಾರ್ಗ! ಚರ್ಯ ಪದಗಳ ವಾಚ್ಯಾರ್ಥ ಒಂದಿದ್ದರೆ ಲಕ್ಷ್ಯಾರ್ಥ ಬೇರೆಯದೇ ಇರುತ್ತದೆ. ಇಲ್ಲಿ ವಾಚಕರು ರೂಪಕಕ್ಕಷ್ಟೇ ಸೀಮಿತ! ಲಕ್ಷ್ಯವೂ ಸಹಜ ಜೀವನ ಸಂಜ್ಞೆಯಾಗಿರುತ್ತದೆ.

ವೈದಿಕ ಸಾಹಿತ್ಯದಲ್ಲಿರುವ ಈ ನಾಲ್ಕೂ ಪರಿಭಾಷೆಗಳಿಗೆ ನಿರ್ದಿಷ್ಟವಾದ ಅರ್ಥಗಳುಂಟು, ಹಾಗೆಯೇ ನಿರ್ದಿಷ್ಟ ಸಿದ್ದಾಂತವು ಉಂಟು. ವೈದಿಕ ಸಾಹಿತ್ಯದಲ್ಲಿರುವಂತೆ ಈ ಪರಿಭಾಷೆಗಳು ಶಾಸ್ತ್ರೀಯವಾದ ನಂಬಿಕೆಗಳನ್ನು ಅವಲಂಬಿಸಿವೆ. ಬೌದ್ಧರ ಸಾಹಿತ್ಯದಲ್ಲಿರುವ ಇದೇ ಪರಿಭಾಷೆಗಳು ಪರಿಶುದ್ಧ ನಡೆ ಮತ್ತು ನೈಸರ್ಗಿಕವಾಗಿ ಬದುಕಗೊಳ್ಳುವುದರ ಮೇಲೆ ಆಧಾರ ಪಟ್ಟಿವೆ. ವೈದಿಕ ಮತ್ತು ಬೌದ್ಧ ಇವೆರಡಕ್ಕೂ ಅಸಂಬದ್ದವೆನಿಸುವಷ್ಟು ವಿರೋಧಾಭಾಸಗಳಂತೂ ಇವೆ. ಇವೆರಡನ್ನೂ ಭಾರತದ ಸಾಂಸ್ಕೃತಿಕ ಚರಿತ್ರೆಯಲ್ಲಿ ಆಗಿಹೋದ ಕ್ರಾಂತಿ – ಪ್ರತಿಕ್ರಾಂತಿ ನೆಲೆಯ ಹಿನ್ನೆಲೆಯಲ್ಲಿ ನೋಡಿದಾಗ ಇವೆರಡರ ಉದ್ದೇಶ ಅತ್ಯಂತ ಸುಸ್ಪಷ್ಟವಾಗತೊಡಗುತ್ತದೆ. ಒಂದು ನಂಬಿಸಲು ತಹತಹಿಸುತ್ತದೆ. ಮತ್ತೊಂದು ಬದುಕಲು ಉತ್ತೇಜಿಸುತ್ತದೆ. ಒಂದು ಭ್ರಮೆಗಳೇ ಅಂತಿಮ ಸತ್ಯವೆಂದು ಹೇಳುತ್ತದೆ, ಮತ್ತೊಂದು ಲೋಕದ ವಸ್ತು ಸ್ಥಿತಿಗೆ ಮಾನವನನ್ನು ತಂದು ನಿಲ್ಲಿಸಲು ಹೇಳುತ್ತದೆ.

ಅಚಲಧಾರೆಯ ಸಾಂಖ್ಯ, ತಾರಕ, ಅಮನಸ್ಕ, ಪರಿಪೂರ್ಣ ಇವು ಮಾನವನ ಮನಸ್ಸನ್ನು ಲೋಕದೆದುರಿಗಿಟ್ಟು ಪರಿಶುದ್ಧಗೊಳಿಸುವ ಕೈಮರಗಳು. ಭ್ರಮೆಗಳಿಂದ ಲೋಕದ ವಸ್ತು ಸ್ಥಿತಿಗೆ ಕಣ್ದೆರೆಸುವ ಬೆಳಕಿನ ಕಿರಣಗಳು, ಮುಂದೆ ಇವುಗಳನ್ನು ಒಂದೊಂದಾಗಿ ತತ್ವ ಪದಗಳ ಅರಿವಿನಲ್ಲಿ ವಿವರಿಸಿಕೊಳ್ಳಬಹುದು.

ಸಾಂಖ್ಯ:
ಸಾಂಖ್ಯವು ಭಾರತೀಯ ದರ್ಶನಗಳಲ್ಲಿ ಮಹತ್ವದ ಭೌತಿಕ ದರ್ಶನವಾಗಿದೆ. ಕಪಿಲಮುನಿ ಈ ದರ್ಶನದ ಮೂಲ ಕರ್ತೃ. ಸಾಂಖ್ಯದ ನಂತರದಲ್ಲಿ ಬಂದ ಪಂಥೀಯ ತತ್ವಗಳನ್ನು ಸಾಂಖ್ಯವು ಪ್ರಭಾವಿಸಿದಷ್ಟು ಮತ್ತಾವ ದರ್ಶನವೂ ಪ್ರಭಾವಿಸಿಲ್ಲ. ಮೂಲ ಸಾಂಖ್ಯವನ್ನು ಪಂಥಗಳು ತಂತಮ್ಮ ತತ್ವ ಸ್ವರೂಪಗಳನ್ನು ಸಮರ್ಥಿಸಿಕೊಳ್ಳಲು ಬಳಸಿಕೊಂಡಿವೆ. ಬುದ್ಧ ಗುರುವಿನ ಧಮ್ಮದಲ್ಲಿನ ತ್ರಿಪಿಟಕ, ಪಂಚಶೀಲ, ಆರ್ಯ ಅಷ್ಟಾಂಗಮಾರ್ಗ, ದ್ವಾದಶಿ, ಪ್ರತಿತ್ಯಾ ಸಮುತ್ಪಾದ, ಪಂಚಸ್ಕಂದ ಹೀಗೆ ನೋಡುತ್ತಾ ಹೋದಾಗ ಅವೆಲ್ಲವೂ ಗಣಿತದ ಸಂಖ್ಯಾ ಸೂಚಕ ಸೂತ್ರಗಳಿಂದ ತುಂಬಿ ಹೋಗಿವೆ. ಸಂಖ್ಯಾ ಸೂತ್ರಗಳಿಂದ ಸೈದ್ಯಾಂತೀಕರಿಸುವುದು ಸಾಂಖ್ಯರ ದೊಡ್ಡ ಕೊಡುಗೆ.

ಕಪಿಲ ಸಾಂಖ್ಯವು ಲೋಕವನ್ನು ಶುದ್ಧ ಭೌತಿಕ ರೂಪದಲ್ಲಿ ವಿವರಿಸಲು ಪ್ರಯತ್ನಿಸಿದೆ. ಆದ್ದರಿಂದ ಚರಿತ್ರೆಕಾರರು ಇದನ್ನು ಮೊದಲ ಭೌತ ವಿಜ್ಞಾನವೆಂದೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರಕೃತಿ ಮತ್ತು ಪುರುಷ ಎಂಬೆರಡು ಜಿಜ್ಞಾಸೆಗಳನ್ನು ಅವಲಂಬಿಸಿದೆ. ಸಾಂಖ್ಯರ ಪ್ರಕಾರ ಪ್ರಕೃತಿಯೇ ಭೌತಿಕ ಜಗತ್ತಿನ ಪ್ರಧಾನ ಚೇತನ! ಪುರುಷ ಸತ್ವ ಪ್ರಕೃತಿಯಿಂದಲೇ ಉಂಟಾಗುತ್ತದೆ. ಕೆಲವೊಮ್ಮೆ ಪ್ರಕೃತಿಯಲ್ಲಿ ಚೈತನ್ಯವನ್ನು ಪ್ರತ್ಯಕ್ಷವಾಗಿ ನೋಡಲು ಅಸಾಧ್ಯವೆನಿಸಿದರೂ ಪ್ರಕೃತಿಯ ನಿರಂತರತೆಯ ಪರಿಣಾಮದಲ್ಲಿ ಚೈತನ್ಯ ಅನುಭವಕ್ಕೆ ದಕ್ಕುವಂತಹದ್ದಾಗಿದೆ. ಆದ್ದರಿಂದ ಚೈತನ್ಯ ಪ್ರಕೃತಿಯ ಬಹು ಮಹತ್ವದ ದ್ರವ್ಯ (matter) ಆಗಿದೆ. ಚೈತನ್ಯ ಬಹಿರಂತರ್ಗತವಾಗಿ ತುಂಬಿಕೊಂಡು ನಿರಂತರವಾಗಿರುವ ಶಕ್ತಿ. ಪ್ರಕೃತಿ (ಚೈತನ್ಯ) ಪುರುಷ ಇವೆರಡರಲ್ಲಿ ಪ್ರಕೃತಿಯೇ ಮಹತ್!!! ಎಂಬುದು ಸಾಂಖ್ಯರ ನಿಲುವು.

ಈ ನೆಲದ ಸಂತ ಮಹಾಂತರೂ ಸಾಂಖ್ಯ ದರ್ಶನವನ್ನು ಎದುರುಗೊಳ್ಳದೆ ತಪ್ಪಿಸಿಕೊಳ್ಳಲಾಗಲಿಲ್ಲವೆಂಬುದು ಅತ್ಯಾಶ್ಚರ್ಯಕರ ಸಂಗತಿ! ಭೌತ ಜಗತ್ತನ್ನು ವಿಶ್ಲೇಷಿಸುವ ಕಪಿಲ ಸಾಂಖ್ಯ ನಂತರದ ಕಾಲದಲ್ಲಿ ಪಾಂಥಿಕ ತತ್ವವಾಗಿ ಸಂಕರಗೊಂಡಿತು. ಇದರಿಂದಾಗಿ ನಂತರ ಸಾಂಖ್ಯ ದರ್ಶನವನ್ನು ಪಾಂಥಿಕ ಜಗತ್ಕಾರಣ ಸಿದ್ದಾಂತಗಳನ್ನು ರೂಪಿಸಿಕೊಳ್ಳಲು ಬಳಸಿಕೊಳ್ಳಲಾಯಿತು. ಈ ಪರಿಪಾಠ ಭೌತ ಲೋಕಕ್ಕಿಂತ ಭ್ರಾಮಕ ಲೋಕವೇ ಸತ್ಯವೆನ್ನುವ ಮನಸ್ತತ್ವವನ್ನು ರೂಪಿಸಲು ಮುಖ್ಯಪಾತ್ರ ವಹಿಸಿತು.

ನಮ್ಮ ಅಲ್ಲಮಪ್ರಭುಗಳು ಮತ್ತು ಚನ್ನಬಸವಣ್ಣವನರ ವಚನಗಳಲ್ಲಿ ಸಾಂಖ್ಯ ದರ್ಶನದ ಈ ಎರಡೂ ಭಿನ್ನತೆಗಳ ನಿರ್ವಚನ ಪ್ರಮುಖವೆನಿಸುತ್ತದೆ. ಅಲ್ಲಮಪ್ರಭುಗಳು ಸಾಂಖ್ಯವನ್ನು ಕಲ್ಪಿತ ಮತ್ತು ಅಕಲ್ಪಿತ ಎಂಬೆರಡು ನೆಲೆಗಳಲ್ಲಿ ನಿರ್ವಚಿಸುತ್ತಾರೆ. ಅವರಲ್ಲಿ ವಸ್ತುಲೋಕವನ್ನು ಪಾಂಥಿಕ ದೃಷ್ಠಿಕೋನಗಳಿಂದ ನೋಡುವ ಪಾರಂಪರಿಕ ಪರಿಪಾಠ ಕಲ್ಪಿತವೆನಿಸಿದೆ. ಅದೇ ನಿಸರ್ಗದತ್ತವಾದ ಭೌತಿಕ ಲೋಕವನ್ನು ಅದು ಹೇಗಿದೆಯೋ ಹಾಗೆ ನೈಸರ್ಗಿಕ ಸ್ವಾನುಭಾವದಿಂದ ನೋಡುವುದು ಅಕಲ್ಪಿತವೆನಿಸಿದೆ. ಈ ಬಗೆ ಮಾನವನ ಮನೋಕೋಶದಲ್ಲಿ ನೆಲೆಗೊಂಡಿರುವ ಭಾವನಾವಾದದ ಪಾರಂಪರಿಕ ಅಪಕಲ್ಪನೆಗಳನ್ನು ಶುಭ್ರಗೊಳಿಸಿ ಕಣ್ಣೆದುರಿನ ಶುದ್ಧ ಭೌತಿಕ ಲೋಕದ ವಿವೇಕಕ್ಕೆ ಕಣ್ತೆರೆಸುವ ಪ್ರಯತ್ನವಿಲ್ಲಿ ಅನಾವರಣಗೊಳ್ಳುತ್ತದೆ.

ಅಚಲ ಪರಂಪರೆ ಕೂಡಾ ಇದೇ ಮಾರ್ಗವನ್ನು ಅನುಸರಿಸುತ್ತದೆ. ಅಚಲರ ಮೂಲ ಗುರುಗಳ ಸ್ತುತಿಯಲ್ಲಿ ಅಲ್ಲಮಪ್ರಭು ಮತ್ತು ಬಸವಣ್ಣನವರ ಹೆಸರುಗಳು ಪ್ರಾರಂಭದಲ್ಲಿಯೇ ಇರುವುದು ಕುತೂಹಲಕಾರಿಯಾದದ್ದು. ಅಚಲ ಸಾಧಕರಲ್ಲಿ ಗೌರವನೀಯ ಗುರುಗಳೆನಿಸಿಕೊಂಡಿರುವ ನರಸಿಂಹದಾಸು, ಸುಭ್ರಮಣ್ಯ, ರಾಮಸಾಗರ ವೀರಾಚಾರಿ, ಪಗಡಾಲ ವೆಂಕಟೇಶಾವಧೂತರು ತಮ್ಮ ತತ್ವಪದಗಳಲ್ಲಿ ಸಾಂಖ್ಯವನ್ನು ಯಾವುದೇ ಅನುಮಾನಕ್ಕೆ ಎಡೆಯಿಲ್ಲದೇ ವಿವರಿಸಿಕೊಂಡಿರುವುದನ್ನು ಕಾಣುತ್ತೇವೆ.

ತತ್ವಪದ:
ಸುಳ್ಳಲ್ಲ ನಿಜವೆ ನಿಜವಹುದೋ
ಸದ್ಗುರುವಿನ ಕರುಣೆ
ಮರಳಿ ಜನ್ಮ ಬಾಧೆಯಿಲ್ಲವೋ ||ಪ||
ಸುಳ್ಳೇನಲ್ಲ ನಿಜವು ನಿಜವೇ
ಆಗದೆಂದರು ತಿಳಿದುಕೊಂಡೆ
ಮರಳಿ ಜನ್ಮದ ಬಾಧೆ ಸೊನ್ನೆಯ
ಮಹಿಮೆ ತಿಳಿದ ಜನರಿಗೆಲ್ಲಾ || ಸುಳ್ಳಲ್ಲ ||

ಈ ತತ್ವಪದದ ಮೊದಲ ಸಾಲು ಮತ್ತೆ ಹುಟ್ಟುವ ಸಂಕಟದಿಂದ ಬಿಡುಗಡೆಗೊಳಿಸುವ ಗುರುವಿನ ಕರುಣಾ ಮಾರ್ಗವನ್ನು ಸ್ಮರಿಸಿಕೊಳ್ಳುತ್ತಾ ಪ್ರಾರಂಭವಾಗುತ್ತದೆ. ಪ್ರಾರಂಭ ಅಂತ್ಯ ಎಂಬೆರಡೂ ತುದಿಗಳಿಲ್ಲದ (ಆದಿ ಮಧ್ಯಂತರಹಿತ) ಸದಾ ಪರಿವರ್ತನಾಶೀಲ ಭೌತಿಕ ಜಗತ್ತಿನ ವಸ್ತು ಸ್ಥಿತಿಯನ್ನು ಮುಂದಿಟ್ಟು ; ಈ ವಸ್ತು ಸ್ಥಿತಿಯಲ್ಲಿ ಮಾನಸಿಕ ಸಂರಚನೆಗಳ ಶೂನ್ಯತೆಯನ್ನು ಮನಗಾಣಿಸಿ ಮಾನಸಿಕ ಸಂರಚನೆಗಳ ಪುನರ್ ಭವವೇ ಜನ್ಮ ಕಾರಣವೆಂದು ಹೇಳುವುದು ಈ ತತ್ವಪದದ ವಿಶಿಷ್ಟತೆಯಾಗಿದೆ.

ಅಕ್ಷರಗಳ ಐದನು ಓದಿರೋ
ಸದ್ಗುರುವಿನ ಕರುಣೆ | ಐದು ಐದಲ
ಇಪ್ಪತ್ತೈದಲೆ | ಐದು ಅಂಡ ಪಿಂಡ ಬ್ರಹ್ಮಾಂಡ
ವಾದ ವಿದವ ತಿಳಿದು ಐದು ಕಳೆದು ಆರರನ್ನು
ಖೈದು ಮಾಡುವ ನರರಿಗೆಲ್ಲಾ || ಸುಳ್ಳಲ್ಲ ||

ಐದು ಭೌತಿಕಾಂಶಗಳಾದ ಭೂಮಿ, ಅಗ್ನಿ, ವಾಯು, ನೀರು, ಆಕಾಶದಿಂದ ಏರ್ಪಟ್ಟಿರುವ ಜೀವ ಶರೀರ ವ್ಯವಸ್ಥೆಯನ್ನು ಸೈದ್ಧಾಂತೀಕರಿಸುವುದು ಅಚಲರಲ್ಲಿ ಅಂಡ ಪಿಂಡ ಬ್ರಹ್ಮಾಂಡ ಜ್ಞಾನವೆನ್ನುತ್ತಾರೆ. ಇದನ್ನು ಸರಳವಾಗಿ ವಿವರಿಸಿಕೊಂಡರೆ, ಈ ಭೌತಿಕಾಂಶಗಳಿಂದ ಕೂಡಿದ ಜೀವ ಶರೀರ ಪಂಚಭೂತಗಳೈದು, ಜ್ಞಾನೇಂದ್ರಿಯಗಳೈದು, ಕರ್ಮೇಂದ್ರಿಯಗಳೈದು, ವಿಷಯೇಂದ್ರಿಯಗಳು ಐದು, ಅಂತಃಕರಣಗಳು ನಾಲ್ಕು, ಒಂದು ಮನಸ್ತತ್ವದಿಂದ ಉಂಟಾಗಿದೆ ಎಂಬ ತಿಳುವಳಿಕೆ ಪಿಂಡಜ್ಞಾನವೆನಿಸುತ್ತದೆ. ನಂತರ ಬ್ರಹ್ಮಾಂಡದ ವಿವರಣೆ. ಭೌತಿಕಾಂಶದ ಸ್ವಭಾವಗಳನ್ನು ವಿವರಿಸುತ್ತದೆ. ಮೂಳೆ, ಚರ್ಮ, ಉಗುರು ಮತ್ತು ಕೂದಲು- ಭೂ ಗುಣಗಳು; ಬೆವರು, ಮೂತ್ರ, ರಕ್ತ, ಶುಕ್ಲ (ವೀರ್ಯ), ಶೋಣಿಕ (ಅಂಡಾಶಯ ರಕ್ತ, ಶ್ಲೇಷ್ಮ, ಲಾಲಾ)- ಇವು ಜಲಗುಣಗಳು; ಹಸಿವು, ನೀರಡಿಕೆ, ಆಲಸ್ಯ, ನಿದ್ದೆ, ಸಂಗ- ಇವು ಅಗ್ನಿಗುಣಗಳು; ಕೆರೆದುಕೊಳ್ಳುವಿಕೆ, ತಿರುಗುವಿಕೆ, ಮಡಚುವಿಕೆ, ಚಾಚುವಿಕೆ, ದಾಟುವಿಕೆ- ಇವು ವಾಯು ಗುಣಗಳು; ಆಸೆ, ಭಯ, ಕ್ರೋಧ, ಮೋಹ- ಇವು ಆಕಾಶ ಗುಣಗಳು.

ಕಿವಿಗಳಿಗೆ ಶಬ್ದ; ಚರ್ಮಕ್ಕೆ ಸ್ಪರ್ಶ; ನೇತ್ರಗಳಿಗೆ ರೂಪ (ನೋಟ); ಜಿಹ್ವೆಗೆ ರಸ; ಮೂಗಿಗೆ ವಾಸನೆ; ಕೈಗಳಿಗೆ ದಾನ; ಪಾದಗಳಿಗೆ ಗಮನ; ಗುಹ್ಯಕ್ಕೆ (ಗುಪ್ತಾಂಗಕ್ಕೆ) ಸಂಗಮ; ಗುದಕ್ಕೆ ವಿಸರ್ಜನೆ; ಮನಸ್ಸಿಗೆ ಕಲ್ಪನೆ; ಬುದ್ಧಿಗೆ ನಿಶ್ಚಯ; ಚಿತ್ತಕ್ಕೆ ಚಿಂತನೆ; ಅಹಂಕಾರಕ್ಕೆ ಅಭಿಮಾನ; ಎಲ್ಲವನ್ನೂ ತಿಳಿಯುತ್ತಿರುವುದು ಯಾವುದೋ ಅದು ‘ಜ್ಞಾನ’ ಎಂದೆನಿಸಿಕೊಳ್ಳುತ್ತದೆ.

ಚೇತನವೆಂದರೂ, ಕ್ಷೇತ್ರಜ್ಞನೆಂದರೂ, ಜ್ಞಾನವೆಂದರೂ, ಅಹಂಕಾರವೆಂದರೂ, ಭೌತವೆಂದರೂ ಚಿದ್ರೂಪ (ಕಲ್ಪಿತ) ವೆಂದರೂ, ಸ್ವಸ್ವರೂಪವೆಂದರೂ, ಸಾಕ್ಷಿಯೆಂದರೂ, ಈಶ್ವರನೆಂದರೂ, ವಿಷ್ಣುವೆಂದರೂ, ಪರಮಾತ್ಮ ಎಂದರೂ, ಬ್ರಹ್ಮನ್ ಎಂದರೂ, ಆದಿಶಕ್ತಿಯೆಂದರೂ, ಪರಮಪದವೆಂದರೂ, ಪ್ರಕೃತಿಯೆಂದರೂ ಈ ನಾಮ ನಟನೆಗಳೆಲ್ಲವೂ ಹೇಗೆ ಹುಟ್ಟಿದವೆಂದರೆ ಹುಟ್ಟಿದುದರ ವಿಷಯವಾಗಿ ಹುಟ್ಟಿದವು. ಆದರೆ ಅದ್ಯಾವುದೂ ರೂಪ ರಹಿತವಾದ ಬಯಲಿಗೆ ಇಲ್ಲವೇ ಇಲ್ಲ!!!

ಈ ಮೇಲಿನ ತತ್ವಪದದ ‘‘ಐದು ಕಳೆದು ಆರರನ್ನು ಖೈದು ಮಾಡುವ ನರರಿಗೆಲ್ಲಾ’’ ಎಂಬ ಸಾಲು ಸಾಂಖ್ಯ ಬೋಧೆಯಲ್ಲಿ ‘ಜ್ಯೋತಿ ದರ್ಶನ’ ಕ್ರಿಯೆಗೆ ಸಂಬಂಧಿಸಿದೆ. ಗುರು ಮತ್ತು ಶಿಷ್ಯ ಇವರಿಬ್ಬರ ಮಧ್ಯೆ ನಡೆಯುವ ಅತ್ಯಂತ ರಹಸ್ಯ ಪ್ರಕ್ರಿಯೆಯಿದು. ಗುರು ತನ್ನ ಎದುರಿನ ಶಿಷ್ಯನಿಗೆ ಜ್ಯೋತಿಯೊಂದನ್ನು ಬೆಳಗಿಸಿ ಮುಂದಿಟ್ಟು ಲೋಕ ಸತ್ಯದ ಪ್ರತ್ಯಕ್ಷಾನುಭವವನ್ನು ಬೋಧಿಸುತ್ತಾರೆ.

ಈ ಜ್ಯೋತಿಯ ಬೆರಗು ಹೇಗಿದೆಯೋ ನೋಡು ಮಗನೇ! ಎಣ್ಣೆ, ಬತ್ತಿ, ಬೆಂಕಿ ಜ್ವಾಲೆ, ಗಾಳಿ, ಬೆಳಕು, ಬಿಸಿ ಈ ಸರಣಿಯನ್ನು ನೋಡು; ಇವುಗಳಲ್ಲಿ ಯಾವುದಾದರೂ ಒಂದಿಲ್ಲದಿದ್ದರೂ ಮತ್ತೊಂದು ಸಂಭವಿಸಲಾರದು. ಈ ಸರಣಿಯನ್ನು ನೋಡದೆ ನಾವು ‘ದೀಪ’ ಎಂಬ ನಾಮಕ್ಕಷ್ಟೇ ಜೋತುಬೀಳುತ್ತೇವೆ. ಆದರೆ ದೀಪವೊಂದು ಬದಲಾವಣೆಯ ಸರಣಿಗೆ ಅಧೀನವಾಗಿದೆ. ಎಣ್ಣೆಯ ಮೂಲ ಬೀಜ; ಬೀಜದ ಮೂಲ ಮರ; ಮರದ ಮೂಲ ಮಣ್ಣು; ಮಣ್ಣಿನಲ್ಲಿರುವ ಅನಂತ ಕೋಟಿ ಜೀವಗಳ ವಿಸರ್ಜಿತ ಪದಾರ್ಥಗಳು ಎಣ್ಣೆಯಲ್ಲಿ ಸಂಗಮಿಸಿದೆ. ಹಾಗೆಯೇ ಬತ್ತಿ ಕೂಡ! ಹಾಗೆಯೇ ಬೆಂಕಿರೂಪದಲ್ಲಿರುವ ಜ್ಯೋತಿ ಒಂದೆಂದು ಭಾವಿಸುತ್ತೇವೆ. ಆದರೆ ಅನೇಕ ಜ್ಯೋತಿಗಳು ಈ ಅವಕಾಶದಲ್ಲಿ ಸಂಭವಿಸಿ ಭಂಗಗೊಳ್ಳುತ್ತವೆ. ಇಲ್ಲಿ ಹೊಗೆ ಕೊನೆಯೇ, ಆರಂಭವೇ? ಎಣ್ಣೆ ಕೊನೆಯೇ, ಆರಂಭವೇ? ಇಲ್ಲಿಯ ಸರಣಿಯಲ್ಲಿ ಯಾವುದಕ್ಕೂ ಕೊನೆಯೂ ಇಲ್ಲ; ಆರಂಭವೂ ಇಲ್ಲ; ಎಲ್ಲವೂ ಆಗುತ್ತಿರುತ್ತವೆ ಇಲ್ಲಿ ಯಾವುದಕ್ಕೂ ಸ್ಥಿರ ಸ್ಥಿತಿಯೂ ಇಲ್ಲ… ಈ ನೈಸರ್ಗಿಕ ಜಗನ್ನಾಟಕದಲ್ಲಿ ನಾನು – ನೀನು; ಜೀವ – ಈಶ್ವರ; ಕ್ಷರ – ಅಕ್ಷರ ಇತ್ಯಾದಿಗಳು ಎಲ್ಲಿವೆ? ತೋರಿಸು…? ಇಲ್ಲಿಯ ತನಕ ನೀನು ತಿಳಿದುಕೊಂಡಿಹ ಅರಿವಿನ ಪ್ರಪಂಚಕ್ಕಷ್ಟೇ ಇದೆ! ಆ ಅರಿವು ನೀನಿದ್ದಷ್ಟೊತ್ತು ಇತ್ತು ನೀನಿಲ್ಲದಿದ್ದರೆ ಅವು ನಿನಗೂ ಇಲ್ಲ. ಇತರರಿಗೂ ಇಲ್ಲ!!! ನಿನ್ನ ಅರಿವೂ ಅನಿತ್ಯವೆಂದರಿ, ಅನಿತ್ಯವಾದ ಅರಿವಿನಿಂದ ಅರಿತ ಸತ್ಯ ಅನಿತ್ಯವಲ್ಲದೇ ನಿತ್ಯ ಸತ್ಯವಾಗುವುದಾದರೂ ಹೇಗೆ? ಆದ್ದರಿಂದ ನಾನು ಎಂಬ ಅರಿವು ಎದುರಿನಲ್ಲಿ ಸರ್ವ ವಸ್ತು ವಿಷಯಗಳನ್ನು ಅನ್ಯವೆಂದು ತಪ್ಪಾಗಿ ಭಾವಿಸುತ್ತದೆ. ಇದುವೇ ಅಹಂ ಪದಾರ್ಥ!

ಶ್ಲೋಕ : ಅಹಮೇವ ಬಂಧಃ | ಅಹಮೇವ ಮೋಕ್ಷಃ | ಅಹಮೇವ ಬ್ರಾಂತಿ |
ಅಹಮೇವ ಸ್ತೂಲಃ | ಅಹಮೇವ ಸೂಕ್ಷ್ಮಃ | ಅಹಮೇವ ಕಾರಣ |
ಕಾರ್ಯಪರಿಣಾಮಂ | ಅಹಮೇವ ಮಹಾಕಾರಣಂ | ಅಹಮೇವ ಈಶ್ವರಃ |
ಅಹಮೇವ ಸಂಶಯಃ | ಅಹಂ ವೃತ್ತಿ ರಹಿತಾತ್ ಪರಿಪೂರ್ಣಮೇವ ಸ್ವತಃ ಸಿದ್ಧಃ

ಅಹಂಕಾರದಿಂದಲೇ ಬಂಧನ | ಅಹಂಕಾರದಿಂದಲೇ ಮೋಕ್ಷ | ಅಹಂಕಾರದಿಂದಲೇ ಭ್ರಾಂತಿ | ಅಹಂಕಾರವೇ ಸ್ತೂಲ | ಅಹಂಕಾರದಿಂದಲೇ ಸೂಕ್ಷ್ಮ | ಅಹಂಕಾರದಿಂದಲೇ ಕಾರಣ ಕಾರ್ಯ ಪರಿಣಾಮ | ಅಹಂಕಾರದಿಂದಲೇ ಮಹಾಕಾರಣ ಹುಟ್ಟಿತು | ಅಹಂಕಾರದಿಂದಲೇ ಈಶ್ವರನಾದ | ಅಹಂಕಾರದಿಂದಲೇ ಸಂಶಯ |

ಅಹಂಕಾರವು ಭ್ರಾಮಕ, ಮನೋಭೂಮಿಕೆಯ ಸಕಲ ವಿಷಯ ಜನಕ ವಸ್ತು. ಅಹಂ ಶೂನ್ಯವಾದರೆ ಉಳಿದ ಶೇಷ ಪರಿಪೂರ್ಣವಾಗುತ್ತದೆ. ಪರಿಪೂರ್ಣನು ಎಷ್ಟೇ ಪ್ರಭಾವಶಾಲಿಯಾದ ಮನೋ ಸಂರಚನೆಗಳಿಗೆ ವಿಚಲಿತನಾಗುವುದಿಲ್ಲ. ಬದಲಾಗಿ ಗಾಳಿಯಿಲ್ಲದೆಡೆ ಬೆಳಗಿಸಿಟ್ಟ ಜ್ಯೋತಿಯಂತೆ ನಿಶ್ಚಲ ನಿರತಿಶಯವಾದ ಚಿತ್ತದ ಬೆಳಕಿನಲ್ಲಿ ಆತ ನಿಶ್ಚಿಂತ!!! ಪರಿಪೂರ್ಣವು ಏನೂ ಅಲ್ಲದ ಶೂನ್ಯವಲ್ಲ; ಅದು ಆಗಮಸಂಚಿತ ಪ್ರಾರಬ್ದ ಶೂನ್ಯತೆ! ಬಂಧ ಪೇಕ್ಷಾಪೇಕ್ಷಶೂನ್ಯತೆ! ತಾನು ಮತು ಇದಿರು ಎಂಬ ದ್ವೈತ ಭಾವಗಳ ಶೂನ್ಯತೆ. ನಿರಂತರ ನಿರ್ಮಲ ಉಪಮಾನ ರಹಿತವಾಗಿ ಎಲ್ಲಾ ಕಾಲಗಳಲ್ಲೂ ಸಹಜಾಮನಸ್ಕವೆನಿಸುವ ಉತ್ಕೃಷ್ಟ ಪರಮಾರ್ಥವಾಗಿದೆ.

ನಾಮರೂಪ ನಟನೆಗಳ ಲೋಕಗಳಲ್ಲಿ ಮುಳುಗಿಹೋಗಿರುವ ಮನೋಕೋಶವನ್ನು ಆತ ದಾಟಿಕೊಂಡವನಾದ್ದರಿಂದ ಇತರರನ್ನು ಆತ ಸುಲಭವಾಗಿ ದಾಟಿಸಬಲ್ಲವನಾಗಿರುತ್ತಾನೆ. ಆತ ಮನೋಕೋಶಗಳಲ್ಲಿ ಅಡಗಿರುವ ರಚನೆಗಳ ತಲ್ಲಣಗಳನ್ನು ಇತರರಿಗೆ ವಿವರಿಸಬಲ್ಲವನಾಗಿರುತ್ತಾನೆ. ಶುದ್ಧಮನಸ್ಸಿನಿಂದ ಬದುಕನ್ನೂ ಸುಂದರವಾಗಿ ಸೃಜಿಸಿಕೊಂಡು ಪೂರ್ಣ ಸ್ವಾತಂತ್ರ್ಯದಲ್ಲಿ ಜೀವಿಸುವನಾಗಿದ್ದಾನೆ.

ದರುವು :
ಗುರುವಿನ ಕರುಣೆಯಿಂದ | ಮನೋಜ್ಞವಾದ
ರಾಜಯೋಗವಾಯ್ತು | ಸಾಂಖ್ಯದೊಳು ಇಪ್ಪತ್ತಾರನೇ
ತತ್ವ ಸ್ಥಿರವಾಯಿತಯ್ಯಾ.
(- ಸೀತಾರಾಮ ಶತಕ)

(ಇಪ್ಪತ್ತೈದು ತತ್ವಪದಗಳು ಯಾವುವೂ ನಿತ್ಯವಲ್ಲವೆಂದು, ಪರಿಪೂರ್ಣವನ್ನು ಇಪ್ಪತ್ತಾರನೇ ತತ್ವವೆಂದು ಇಲ್ಲಿ ಹೇಳಲಾಗಿದೆ)

ದರುವು :
ಕಂಡ ವಸ್ತುಗಳೆಲ್ಲವೂ ಸ್ಥಿರವಲ್ಲವೆಂದು | ಹೃತ್ಕಮಲ
ದೊಳಗೆ ನಾಶವಿಲ್ಲದ ಬಯಲನ್ನಾಗಿಸಿದೆಯಯ್ಯಾ
ಪರಶುರಾಮ ಸೀತರಾಮ.
(- ಸೀತಾರಾಮ ಶತಕ)

ಅಚಲರ ಪರಿಪೂರ್ಣಕ್ಕೆ ಅಲ್ಲಮಪ್ರಭುದೇವರ ವಚನಗಳು ಹೇಗೆ ಸ್ಪಂದಿಸುತ್ತವೆಂಬುದು ಆಸಕ್ತಿದಾಯಕ ಸಂಗತಿಯಾಗಿದೆ.

ಓಡಿನಲ್ಲುಂಟೆ ಕನ್ನಡಿಯ ನೋಟ?
ಮರಳಿನ ಕೂಟ ವಿಪರೀತ ಚರಿತ್ರೆ!
ನೋಟದ ಸುಖ ತಾಗಿ ಕೋಟಲೆಗೊಂಡೆನು
ಗುಹೇಶ್ವರ ಲಿಂಗವು ಒಬ್ಬನೇ ಅಚಲ
ಉಳಿದವರೆಲ್ಲರೂ ಸೂತಕಿಗಳು.

ವಚನದ ಕ್ಲಿಷ್ಟಪದಗಳ ವಿವರಣೆ: ಓಡು = ಮಡಿಕೆ, ಮಣ್ಣಿನಿಂದಾದ ; ಮರಳಿನ ಕೂಟ = ಸ್ಥಿರತೆಯಿಲ್ಲದ ಸಂಘಟನೆ, ಕುಸಿಯುವ ನಿರ್ಮಾಣ; ನೋಟದ ಸುಖ = ತಪ್ಪಾದ ಗ್ರಹಿಕೆ ; ಕೋಟಲೆಗೊಂಡೆನು = ಮಾನಸಿಕ ತಲ್ಲಣ, ದಂದುಗ, ಸಂಕೀರ್ಣತೆ, ಇಕ್ಕಟ್ಟು ಅಥವಾ ಭವ!
‘ಮಣ್ಣಲ್ಲಿ ಪ್ರತಿಬಿಂಬದ ದೃಷ್ಟಿಯಿಲ್ಲ; ಸ್ಥಿರತೆಯಿಲ್ಲದ ಈ ಮಣ್ಣು ಉಂಟುಮಾಡಿರುವ ಕೂಟದ ಎಲ್ಲಾ ನಿರ್ಮಾಣಗಳೂ ಅಲ್ಲಮ ಗುರುವಿಗೆ ವಿಪರೀತ ಚರಿತೆಗಳೇ ನೋಟ, ಸುಖದ ಕ್ಷಣಿಕವು ತಾಗಿ ಮನಸಿನ ಕಾಟಕ್ಕೆ ಗುರಿಯಾದೆ. ಇವುಗಳ ಹೊರತಾಗಿ ಗುಹೇಶ್ವರ ಲಿಂಗ ಒಬ್ಬನೇ ಅಚಲ (ಪರಿರ್ಪೂಣ) ಉಳಿದವರೆಲ್ಲರೂ ಸೂತಕಿಗಳು’
ಪರಿಪೂರ್ಣ ಬಯಲು ಅಲ್ಲಮರಲ್ಲಿ-

ನಾರು ಬೇರಿನ ಕುಟಿಲ ಕಪಟದ ಯೋಗವಲ್ಲಿದು
ನಿಲ್ಲಿಬೋ
ಕಾಯ ಸಮಾಧಿ ಕರಣ ಸಮಾಧಿ ಯೋಗವಲ್ಲಿದು
ನಿಲ್ಲಿಬೋ
ಜೀವ ಸಮಾಧಿ ಎಂಬುದಿಲ್ಲ
ನಿಜ ಸಹಜ ಸಮಾಧಿ ಗುಹೇಶ್ವರ.

ಪಾರಿಭಾಷಿಕ ಶಬ್ದಕೋಶದ ಸಂದರ್ಭದಲ್ಲಿ ಗುರು ಪರಂಪರೆಗಳು ಒಂದು ಮರೆಭಾಷೆಯನ್ನು ಬಳಸಿರುವುದು ತಿಳಿಯುತ್ತದೆ. ತತ್ತ್ವಪದಗಳೂ ಅಷ್ಟೇ ಅದೊಂದು ಮರೆಭಾಷೆ. ಆ ಭಾಷೆಯ ನಿಗೂಢ ವಿವರಗಳನ್ನು ಗುರುವೇ ತಿಳಿ ಹೇಳಬೇಕು. ಕೀಲಿ ಕೈಲಿ ಆತನಲ್ಲೇ ಇರುತ್ತದೆ. ಇಲ್ಲವೇ ಒಂದು ತತ್ವ ಪದದಲ್ಲಿರುವ ಪರಿಭಾಷೆಗಳನ್ನು ಇನ್ನೊಂದು ತತ್ವ ಪದದ ವಿವರಣೆಗಳಲ್ಲಿ ಹುಡುಕಿ ತಿಳಿಯಬೇಕಾಗುತ್ತದೆ. ಇಲ್ಲಿಯ ತನಕ ನಾವು ಗ್ರಹಿಸಿದ ರೀತಿಯಲ್ಲಿ ಸಮಾನಾರ್ಥಕಗಳನ್ನು ತುಂಬಾ ಸ್ಪಷ್ಟವಾಗಿ ಹುಡುಕಬಹುದು. ಇವರು ಹೇಳುವ ಸಮಾನಾರ್ಥಕಗಳನ್ನು ಶಬ್ದಕೋಶಗಳು ಒಪ್ಪಲಾರವು.
ಉದಾ: 1. ಅಹಂ = ಭ್ರಮೆ = ನಾನು = ಈಶ್ವರ = ಬ್ರಹ್ಮ = ಶಾಸ್ತ್ರ = ಪಾರಂಪರಿಕ ಜ್ಞಾನ = ಕಂಗಳ ಕತ್ತಲು = ದು:ಖ = ದಂದುಗ = ಸಂಶಯ.
2. ಪರಿಪೂರ್ಣ = ಮನೋ ಸಂರಚನೆಗಳಿಂದ ಶಮಗೊಂಡ ನಿರ್ಮಲಜ್ಞಾನ = ಸಹಜಾಮನಸ್ಕ = ಅಮನಸ್ಕ = ಆಳ ನಿರಾಳ = ನಿರತಿಶಯ = ನಿರ್ಗುಣ = ಶೂನ್ಯತಾ ಬಯಲು = ಬಟಾಬಯಲು = ಅದ್ವಯ = ಭೂಮ = ಅನಂತ = ಅನಾವರಣ = ಚೇತನಾ ಪರಮಾರ್ಥ.

Previous post ರಾಜಸತ್ತೆಯ ವಿರುದ್ಧದ ಪ್ರಜಾಸತ್ತೆ
ರಾಜಸತ್ತೆಯ ವಿರುದ್ಧದ ಪ್ರಜಾಸತ್ತೆ
Next post ಬದುಕಲು ಇನ್ನೆಷ್ಟು ಬೇಕು?
ಬದುಕಲು ಇನ್ನೆಷ್ಟು ಬೇಕು?

Related Posts

ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ- 2
Share:
Articles

ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ- 2

July 21, 2024 ಪದ್ಮಾಲಯ ನಾಗರಾಜ್
ಐದು ಮನವ ಕುಟ್ಟಿ ಒಂದು ಮನವ ಮಾಡು, ಕಂಡಾ ಮದವಳಿಗೆ! ಇದು ನಮ್ಮ ಬಾಳುವೆ, ಮದವಳಿಗೆ! ಇದು ನಮ್ಮ ವಿಸ್ತಾರ, ಮದವಳಿಗೆ! ಮದವಳಿದು ನಿಜವುಳಿದ ಬಳಿಕ ಅದು ಸತ್ಯ ಕಾಣಾ,...
ಕವನಗಳಲ್ಲಿ ಹಳಕಟ್ಟಿಯವರು: ಒಂದೆರಡು ಟಿಪ್ಪಣಿಗಳು
Share:
Articles

ಕವನಗಳಲ್ಲಿ ಹಳಕಟ್ಟಿಯವರು: ಒಂದೆರಡು ಟಿಪ್ಪಣಿಗಳು

October 13, 2026 ಡಾ. ವಿಜಯಕುಮಾರ ಬೋರಟ್ಟಿ
ಸಾಮಾನ್ಯವಾಗಿ ಯಾವುದೇ ವ್ಯಕ್ತಿಯ ಜೀವನ ಚರಿತ್ರೆಯನ್ನು ಅರ್ಥಮಾಡಿಕೊಳ್ಳಲು ಹಲವು ಮಾರ್ಗಗಳಿರುತ್ತವೆ. ಅದರಲ್ಲಿ ಮುಖ್ಯವಾಗಿ ಅವರ ಬಗ್ಗೆ ಬೇರೆಯವರು ಬರೆದ ಬಯೋಗ್ರಫಿ, ಕಾವ್ಯ,...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಬೇಡವಾದುದನ್ನು ಡಿಲೀಟ್ ಮಾಡುತ್ತಿರಬೇಕು
ಬೇಡವಾದುದನ್ನು ಡಿಲೀಟ್ ಮಾಡುತ್ತಿರಬೇಕು
January 7, 2022
ಆ ಬಿರುಗಾಳಿ ಹುಟ್ಟಲೊಡನೆ…
ಆ ಬಿರುಗಾಳಿ ಹುಟ್ಟಲೊಡನೆ…
January 8, 2023
ವಚನಗಳಲ್ಲಿ ಶಿವ
ವಚನಗಳಲ್ಲಿ ಶಿವ
September 4, 2018
ಬಿಸಿಲಿಗೆ ಗಡಿಗಳುಂಟೆ?…
ಬಿಸಿಲಿಗೆ ಗಡಿಗಳುಂಟೆ?…
September 6, 2026
ಹೊತ್ತು ಹೋಗದ ಮುನ್ನ…
ಹೊತ್ತು ಹೋಗದ ಮುನ್ನ…
April 29, 2018
ಲಿಂಗಾಯತ ಧರ್ಮ ಪೌರಾಣಿಕವಾದುದಲ್ಲ…
ಲಿಂಗಾಯತ ಧರ್ಮ ಪೌರಾಣಿಕವಾದುದಲ್ಲ…
August 11, 2025
ಪ್ರಭುವಿನ ಗುರು ಅನಿಮಿಷ -2
ಪ್ರಭುವಿನ ಗುರು ಅನಿಮಿಷ -2
September 14, 2024
ಸಾಮರಸ್ಯದ ಮಹಾನದಿ: ಕಡಕೋಳ ಮಡಿವಾಳಪ್ಪ
ಸಾಮರಸ್ಯದ ಮಹಾನದಿ: ಕಡಕೋಳ ಮಡಿವಾಳಪ್ಪ
February 10, 2023
ತೊತ್ತುಗೆಲಸವ ಮಾಡು
ತೊತ್ತುಗೆಲಸವ ಮಾಡು
June 5, 2021
ದೇವರು: ಶರಣರು ಕಂಡಂತೆ
ದೇವರು: ಶರಣರು ಕಂಡಂತೆ
April 29, 2018
Copyright © 2026 Bayalu