Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಆಕಾಶ, ಭೂಮಿ, ನಾನು…
Share:
Poems October 13, 2026 ಕೆ.ಆರ್ ಮಂಗಳಾ

ಆಕಾಶ, ಭೂಮಿ, ನಾನು…

ಮಳೆ ಇಳಿವ ಮುನ್ನ
ಆಕಾಶದ ಚಹರೆ ಬದಲಾಗುತ್ತದೆ…
ಅರಳಿ ಮೋಡಗಳು ಕಪ್ಪಾಗುತ್ತವೆ
ಅನಾಮಿಕ ನೆರಳು ಹರಡುತ್ತದೆ
ಗಾಳಿ ಭಾಷೆ ಬದಲಿಸುತ್ತದೆ
ನೋಡನೋಡುತ್ತಿದ್ದಂತೆ ಏನೋ ಸಂಚಲನ
ಇಳೆಯೊಳಗೂ… ಎದೆಯೊಳಗೂ…
ಬದುಕಿನ ಕೆಲ ಸಂಗತಿಗಳು ಹೀಗೆಯೇ…
ಅವು ಬರುವ ಮುನ್ನ
ವಾತಾವರಣ ಬದಲಾಗುತ್ತದೆ…

ಭೂಮಿ ಪ್ರಶ್ನಿಸುವುದಿಲ್ಲ
ತಡವಾದುದಕೂ… ಅತಿಯಾದುದಕೂ…
ಆಕಾಶ ಕೊಟ್ಟದ್ದನ್ನೆಲ್ಲ
ಇಡಿಯಾಗಿ ಸ್ವೀಕರಿಸುತ್ತದೆ…
ಬಹುಶಃ
ಮೈತ್ರಿಯ ಅರ್ಥವೂ ಅದೇ—
ಕೊಡುವುದಕ್ಕೆ ಕಾರಣವಿರುವುದಿಲ್ಲ,
ಪಡೆವುದಕ್ಕೆ ಅಳುಕಿರುವುದಿಲ್ಲ…

ಮೊದಲ ಹನಿಗಳು ಅಲ್ಲೊಂದು ಇಲ್ಲೊಂದು
ಟಪ್ ಟಪ್…
ಯಾರೋ
ಮುಚ್ಚಿದ ಬಾಗಿಲನು
ಮೆಲ್ಲಗೆ ತಟ್ಟಿದಂತೆ…
ಹತ್ತಾರು ಹನಿ
ನೂರಾಗಿ, ಸಾವಿರಾಗಿ
ಲೆಕ್ಕಮೀರಿ ಧುಮುಕುವಾಗ
ಭೂಮಿಯಿಂದ ಎದ್ದೇಳುವ ಆ ವಾಸನೆ…
ಅದು ಕೇವಲ ವಾಸನೆಯಲ್ಲ—
ಹೇಳಲಾಗದೆ ಉಳಿದ
ಮಣ್ಣ ಮಾತುಗಳೆಲ್ಲಾ
ಜೀವ ತಳೆದು ಉಸಿರಾಡುವ
ಆ ಮಾಂತ್ರಿಕ ಗಳಿಗೆಗೆ
ಅದೆಷ್ಟು ಬಾರಿ ಸಾಕ್ಷಿಯಾಗಿದ್ದೇವೆ!

ಆಕಾಶ ತನ್ನ ಹೃದಯ
ಬಿಚ್ಚಿ ನಿಂತಂತೆ
ಮಳೆ ತನ್ನ ದನಿ ಏರಿಸುತ್ತಾ
ಧೋ ಎಂದು ಸುರಿಯುತ್ತದೆ
ಭೂಮಿಗೆ ಮಾತ್ರವೆ ಗೊತ್ತಾಗುವ
ಮುಗಿಲ ಮಾತುಗಳಿಗೆ
ಹಕ್ಕಿ, ಗಿಡ, ಬೆಟ್ಟ, ಬಯಲು, ನದಿ
ಕಿವಿಯಾಗುತ್ತವೆ…
ನೀರ ಪರದೆಯ ಹಿಂದೆ
ರಸ್ತೆಗಳು ಮಸುಕಾಗುತ್ತವೆ
ಗೋಡೆಗಳಾಚೆಗಿನ ಕಟ್ಟಡಗಳೆಲ್ಲಾ
ಅಸ್ಪಷ್ಟವಾಗುತ್ತವೆ…
ಇಡೀ ಜಗತ್ತು
ತನ್ನ ಶಬ್ದ ಕಳೆದುಕೊಳ್ಳುತ್ತದೆ…
ಕಿಟಕಿಯ ಬಳಿ ನಿಂತ ನಾನು
ಮಳೆಯ ನೋಡುವುದಿಲ್ಲ,
ನನ್ನನ್ನೇ ನೋಡುತ್ತೇನೆ…
ಮಳೆಯಲ್ಲಿ ಎಲ್ಲವೂ ಒಂದಾಗುತ್ತವೆ
ಆಕಾಶ, ಭೂಮಿ, ನಾನು…

ಬರುವ ಮುನ್ನವೂ, ಸುರಿವಾಗಲೂ
ನಿಂತ ಬಳಿಕವೂ
ಸಂಭವಿಸುವ ಆ ಮಹಾಮೌನದಲ್ಲಿ
ಜೀವ ತೇವಗೊಳ್ಳುತ್ತದೆ,
ಹಗುರಾಗುತ್ತದೆ, ಹಸನಾಗುತ್ತದೆ
ಬದುಕಿನಲ್ಲಿ ಎಷ್ಟು ಮಳೆಗಳು ಬಂದಿವೆ…
ಕೆಲವು ನೆನೆಸಿವೆ…
ಕೆಲವು ಮುಳುಗಿಸಿವೆ…
ಕೆಲವು ಒಳ ಕಸವನೆಲ್ಲಾ ತೊಳೆದುಹಾಕಿವೆ…
ಇನ್ನೂ ಕೆಲವು ನಿಂತುಹೋದ ಮೇಲೆ
ಹಿಂದಿದ್ದವಳು ನಾನಲ್ಲ
ಎಂಬುದನ್ನು ಉಸುರಿ ಹೋಗಿವೆ…
ಅದಕ್ಕೇ ಇರಬೇಕು
ಕಣ್ಣು ಕುಕ್ಕುವ
ಬಿಸಿಲ ಹಗಲುಗಳಿಗಿಂತ
ಕತ್ತಲುಗಟ್ಟಿದ ಮಳೆಮೋಡದ
ದಿನಗಳೇ ಇಷ್ಟವಾಗೋದು…

ಮಳೆ ಥೇಟು ಗುರುವಿನಂತೆ
ಬದಲಾಯಿಸಲು ಬರುವುದಿಲ್ಲ;
ಭೂಮಿಗೆ ತನ್ನಂತರಂಗವನು
ನೆನಪಿಸಲು ಬರುತ್ತದೆ…
ಬೇರಿದೆಯೋ, ಬೀಜವಿದೆಯೋ…
ಏನಾದರೂ ಸರಿ, ಎಚ್ಚರಗೊಳ್ಳು!!
ಮಳೆ ಕೇವಲ ಮಳೆಯಲ್ಲ;
ಆಕಾಶ ನೆಲಕ್ಕೂ ಹೆಣೆದ ಸೇತುವೆ,
ಮೌನ ಧ್ಯಾನವಾಗುವ ಹದ,
ಅದು ನಾನು
ನನ್ನನ್ನೇ ಕಂಡುಕೊಳ್ಳುವ ಪದ…

Previous post ಸದ್ದ ಸಂಭ್ರಮ
ಸದ್ದ ಸಂಭ್ರಮ

Related Posts

ಚಿತ್ತ ಸತ್ಯ…
Share:
Poems

ಚಿತ್ತ ಸತ್ಯ…

June 14, 2024 ಕೆ.ಆರ್ ಮಂಗಳಾ
ಚಿತ್ತದೊಳಿವೆ ಎರಡು ಕವಲು ಒಂದು ರಂಗುರಂಗಿನ ದಾರಿ ಅದು ಮಹಾ ಹೆದ್ದಾರಿ ಪ್ರಪಂಚದರಿವು ಬಂದಾಗಿನಿಂದ ಅತ್ತಲೇ ನಡೆದು ರೂಢಿ ಅನಾದಿ ಕಾಲದ ದಾಸ್ತಾನುಗಳೆಲ್ಲ ಅಲ್ಲಿ...
ಹುಡುಕಾಟ
Share:
Poems

ಹುಡುಕಾಟ

January 15, 2026 ಜಬೀವುಲ್ಲಾ ಎಂ.ಅಸದ್
ಭವದ ಒಡಲಿಗೆ ಬಿದ್ದ ಮೇಲೆ ಇನ್ನೆಲ್ಲಿಯ ಬಿಡುಗಡೆ ಇಹದ ಬಾಳು ಬಯಕೆಗಳ ಸಂಕೋಲೆ ಜಡಿದ ಬೇಗುದಿಯ ಕಡಲು ಈಜಬೇಕಷ್ಟೆ ಕಾಣದ ತೀರ ಭೂಮಿ, ಬಾನು ಒಂದಾದಂತೆ ಕಾಣುವ ದಿಗಂತ ಕಣ್ಣಿಗೆ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಕುರುಹಿಲ್ಲದಾತಂಗೆ ಹೆಸರಾವುದು?
ಕುರುಹಿಲ್ಲದಾತಂಗೆ ಹೆಸರಾವುದು?
February 6, 2019
ಸನ್ಯಾಸ ದೀಕ್ಷೆ
ಸನ್ಯಾಸ ದೀಕ್ಷೆ
June 12, 2025
ವಚನಗಳ ಓದು ಮತ್ತು ಅರ್ಥೈಸುವಿಕೆ
ವಚನಗಳ ಓದು ಮತ್ತು ಅರ್ಥೈಸುವಿಕೆ
August 5, 2018
ಒಳಗನರಿವ ಬೆಡಗು
ಒಳಗನರಿವ ಬೆಡಗು
September 10, 2022
ಅಲ್ಲಮಪ್ರಭು ಮತ್ತು ಮಾಯೆ (ಭಾಗ-2)
ಅಲ್ಲಮಪ್ರಭು ಮತ್ತು ಮಾಯೆ (ಭಾಗ-2)
February 11, 2022
ಪದ, ಬಳಕೆ ಮತ್ತು ಅರ್ಥ
ಪದ, ಬಳಕೆ ಮತ್ತು ಅರ್ಥ
November 9, 2021
ಸತ್ಯ ಸಂಶೋಧನಾ ಲೇಖನ – ಒಂದು ಹೊಸ ಹೆಜ್ಜೆ
ಸತ್ಯ ಸಂಶೋಧನಾ ಲೇಖನ – ಒಂದು ಹೊಸ ಹೆಜ್ಜೆ
April 29, 2018
ಅಷ್ಟಾವರಣವೆಂಬ ಭಕ್ತಿ ಸಾಧನ
ಅಷ್ಟಾವರಣವೆಂಬ ಭಕ್ತಿ ಸಾಧನ
August 6, 2022
ಕಾಲನೆಂಬ ಜಾಲಗಾರ…
ಕಾಲನೆಂಬ ಜಾಲಗಾರ…
January 7, 2019
ಶರಣರು ಕಂಡ ಸಮಸಮಾಜ
ಶರಣರು ಕಂಡ ಸಮಸಮಾಜ
July 4, 2022
Copyright © 2026 Bayalu