Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಕವನಗಳಲ್ಲಿ ಹಳಕಟ್ಟಿಯವರು: ಒಂದೆರಡು ಟಿಪ್ಪಣಿಗಳು
Share:
Articles October 13, 2026 ಡಾ. ವಿಜಯಕುಮಾರ ಬೋರಟ್ಟಿ

ಕವನಗಳಲ್ಲಿ ಹಳಕಟ್ಟಿಯವರು: ಒಂದೆರಡು ಟಿಪ್ಪಣಿಗಳು

ಸಾಮಾನ್ಯವಾಗಿ ಯಾವುದೇ ವ್ಯಕ್ತಿಯ ಜೀವನ ಚರಿತ್ರೆಯನ್ನು ಅರ್ಥಮಾಡಿಕೊಳ್ಳಲು ಹಲವು ಮಾರ್ಗಗಳಿರುತ್ತವೆ. ಅದರಲ್ಲಿ ಮುಖ್ಯವಾಗಿ ಅವರ ಬಗ್ಗೆ ಬೇರೆಯವರು ಬರೆದ ಬಯೋಗ್ರಫಿ, ಕಾವ್ಯ, ಪ್ರಬಂಧ ಅಥವಾ ತಾವೇ ಬರೆದ ಸ್ವಚರಿತ್ರೆ (autobiography). ಪ್ರಸ್ತುತ ಲೇಖನದಲ್ಲಿ ‘ವಚನ ಗುಮ್ಮಟ’ವೆಂಬ ಪ್ರಶಂಸೆಗೆ ಅರ್ಹರಾದ ಫ.ಗು.ಹಳಕಟ್ಟಿಯವರನ್ನು (1880-1964) ಕಾವ್ಯದಲ್ಲಿ ಹೇಗೆ ಕಟ್ಟಿ ಕೊಡಲಾಗಿದೆ ಎಂದು ಚರ್ಚಿಸಲಾಗಿದೆ. ಜೀವಂತ ಇದ್ದಾಗಲೆ ಅವರ ಮಹತ್ವವನ್ನು ಅರಿತು, ಅವರ ಬಗ್ಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿರುವ ಎರಡು ಕವನಗಳನ್ನು ಇಲ್ಲಿ ವಿಶ್ಲೇಷಣಾತ್ಮಕವಾಗಿ ಅನಾವರಣಗೊಳಿಸಲಾಗಿದೆ.

ಭಾರತದಲ್ಲಿ ಅಥವಾ ಪ್ರಪಂಚದ ಯಾವುದೇ ಮೂಲೆಯಲ್ಲಿ ಜಾನಪದೀಯ ಅಥವಾ ಶಿಷ್ಟ ಪರಂಪರೆಯ ಕಾವ್ಯಗಳಲ್ಲಿ ತಮ್ಮ ನೆಚ್ಚಿನ ನಾಯಕ ಅಥವಾ ವ್ಯಕ್ತಿಯ ಬಗ್ಗೆ ಕಥೆ- ಕವನ ಕಟ್ಟಿ ಹಾಡಿ- ಹೊಗಳೋದು ಸರ್ವೆಸಾಮಾನ್ಯ. ಎಷ್ಟೋ ಬಾರಿ ಕವನಗಳ ಮೂಲಕ ತಮ್ಮ ನೆಚ್ಚಿನ ವ್ಯಕ್ತಿಯ ಬಗ್ಗೆ ಗೌರವದಾರಗಳನ್ನು ತಿಳಿಸುತ್ತಾರೆ. ಹೀಗೆ ಕಟ್ಟಿಕೊಂಡ ಕವನವು ವ್ಯಕ್ತಿಯ ಬಗ್ಗೆ ಪ್ರಶಂಸೆ, ಸಾಧನೆ, ಯಶಸ್ಸು, ಹಿರಿಮೆ-ಗರಿಮೆಗಳನ್ನು ಅನಾವರಣಗೊಳಿಸುವುದಲ್ಲದೆ ಅವರು ನಡೆದು ಬಂದ ಹಾದಿ, ಸವೆಸಿದ ಜೀವನ, ಎದುರಿಸಿದ ಕಷ್ಟಗಳು, ಎದೆಯೊಡ್ಡಿ ಸ್ವೀಕರಿಸಿದ ಸವಾಲುಗಳು, ಅಡೆ-ತಡೆಗಳ ನಿವಾರಣೆ, ಸಮಾಜ ಸೇವೆ, ಕಟ್ಟಿದ ಸಂಘ-ಸಂಸ್ಥೆಗಳು, ಕಂಡ ಯಶಸ್ಸು, ಅನುಭವಿಸಿದ ನೋವು-ನಲಿವುಗಳ ಬಗ್ಗೆ ವಿವರಗಳನ್ನು ಹೊಂದಿರುತ್ತವೆ. ಹಳಕಟ್ಟಿಯವರ ಬಗ್ಗೆ ಇರುವ ಪ್ರಸ್ತುತ ಎರಡು ಕವನಗಳು ಮೇಲ್ಕಂಡ ಎಲ್ಲಾ ಅಂಶಗಳನ್ನು ತೋರಿಸುತ್ತವೆ. ಈ ಎರಡು ಪದ್ಯಗಳನ್ನು ಹಳಕಟ್ಟಿಯವರು ತಮ್ಮದೇ ಆದ ನಿಯತಕಾಲಿಕದಲ್ಲಿ (ಶಿವಾನುಭವ) ಪ್ರಕಟಿಸಿರುವುದು ಸೋಜಿಗವೆ ಸರಿ. ಹಳಕಟ್ಟಿಯವರಿಗೆ ವಯಸ್ಸಾಗುತ್ತಿದ್ದಂತೆ ಆರೋಗ್ಯದ ಸಮಸ್ಯೆಗಳು ಆಗಾಗ ಕಾಣಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಈ ಪದ್ಯಗಳನ್ನು ಬರೆಯಲಾಗಿದೆ ಎಂದು ಊಹಿಸಬಹುದು. ಈ ಪದ್ಯಗಳನ್ನು ಬರೆದವರ ಬಗ್ಗೆ ಅಷ್ಟೊಂದು ಮಾಹಿತಿಗಳು ನನ್ನ ಬಳಿ ಇಲ್ಲ. ಹಾಗಾಗಿ ಅವರು ಬರೆದಿರುವ ಪದ್ಯಗಳನ್ನ ಮಾತ್ರ ನಾನು ಗಮನಿಸಿದ್ದೇನೆ. ಇವುಗಳನ್ನು ಬರೆದವರು ಹಳಕಟ್ಟಿಯವರ ಅಭಿಮಾನಿಯಾಗಿ ಮತ್ತು ಅವರ ಸಾಧನೆಗಳನ್ನು ಸನಿಹದಿಂದ ಗಮನಿಸಿ ಈ ಪದ್ಯಗಳನ್ನು ರಚಿಸಿದ್ದಾರೆ ಎಂದು ಹೇಳಬಹುದು. ಈ ಎರಡು ಪದ್ಯಗಳ ಮೂಲಕ ಹಳಕಟ್ಟಿಯವರ ವ್ಯಕ್ತಿತ್ವವನ್ನು ನಾವು ಅರಿತುಕೊಳ್ಳಬಹುದು.

ಮೊದಲನೆ ಪದ್ಯವನ್ನು ಬರೆದವರು ತು.ರಂ.ಕೋಪರಡೆ ಎಂಬುವವರು. ಇದನ್ನು ಶಿವಾನುಭವ ಪತ್ರಿಕೆಯಲ್ಲಿ ೧೯೫೮ರಲ್ಲಿ (ಸಂ. ೩೨, ಸಂಖ್ಯೆ ೫) ಪ್ರಕಟಿಸಲಾಗಿದೆ. ಈ ಪದ್ಯದ ಶೀರ್ಷಿಕೆ ‘ರಾವಬಹಾದ್ದೂರ ಹಳಕಟ್ಟಿಯವರು’. ಶೀರ್ಷಿಕೆ ಸೂಚಿಸುವ ಹಾಗೆ ಈ ಪದ್ಯವು ಹಳಕಟ್ಟಿಯವರ ಗುಣಗಾನಕ್ಕೆ ಮೀಸಲಾಗಿದೆ. ರಾವಬಹಾದ್ದೂರ ಎಂಬ ಬಿರುದನ್ನು ಬ್ರಿಟೀಷರಿಂದ ಪಡೆದುಕೊಂಡ ಹಳಕಟ್ಟಿಯವರು (ಪ್ರಾಯಶಃ ಹಳಕಟ್ಟಿಯವರು ಮೊದಲನೆ ಮಹಾಯುದ್ಧದಲ್ಲಿ ಭಾರತೀಯ ಸೇನೆಗೆ ನೀಡಿದ ಸೇವೆಯನ್ನು ಪರಿಗಣಿಸಿ ಕೊಟ್ಟ ಬಿರುದು ಇದಾಗಿರಬಹುದು) ಸಮಾಜದಲ್ಲಿ ಬಹಳ ಉನ್ನತವಾದ ಗೌರವವನ್ನು ಹೊಂದಿದ್ದರು. ನಾಲ್ಕು ಮತ್ತು ಮೂರು ಸಾಲುಗಳ ಹತ್ತು ಸ್ಟಾಂಜಾಗಳನ್ನು ಒಳಗೊಂಡ ಈ ಪದ್ಯದಲ್ಲಿ ಹಳಕಟ್ಟಿಯವರ ಹಿರಿಮೆಯನ್ನು ಪದ್ಯದಾದ್ಯಂತ ಪದೆ, ಪದೆ ಹೊಗಳಲಾಗಿದೆ.
ಉದಾಹರಣೆಗೆ ಮೊದಲನೆ ಸ್ಟಾಂಜಾದಲ್ಲಿ ಕೆಲವು ಸಾಲುಗಳು ಹೀಗೆ ಇವೆ-

ಜಯವಿರಲಿ ಚಿರಕಾಲ ಪುಣ್ಯಾತ್ಮನೇ ನಿನಗೆ/
ನಯದಿಂದ ರಂಜಿತನೆ ಪರಮಾ ಶಿವಶರಣನೇ/

ಹಳಕಟ್ಟಿಯವರು, “ಶರಣ ಜನವಚನ ನಿಕ್ಷೇಪವನು ಹೊರದೆಗೆದು ಸಕಲರಿಗೆ” ಕೊಟ್ಟು ಲಿಂಗಾಯತ ಸಮಾಜವನ್ನು ಸದ್ಗತಿಯಲ್ಲಿ ನಡೆಸುದುದನ್ನು ಈ ಪದ್ಯದಲ್ಲಿ ನೆನೆಸಿಕೊಳ್ಳಲಾಗಿದೆ. ಅವರು ಅವಿರತವಾಗಿ, ಸದಾ ಕಾಲ ಲಿಂಗಾಯತ ಸಮಾಜದ ಒಳಿತನ್ನು ಚಿಂತಿಸುತ್ತಿದ್ದುದ್ದಕ್ಕಾಗಿ ಅವರನ್ನು ನಿಃಸ್ವಾರ್ಥಿಯೆಂದು ವರ್ಣಿಸಿ, ಪರಮ ಲೋಕಸೇವಕನೆಂದು ಮೆಚ್ಚುಗೆ ಸೂಚಿಸಲಾಗಿದೆ. ಅವರ ಸೇವೆಯು ಲಿಂಗಾಯತ ಸಮಾಜಕ್ಕೆ ಮಾಡಿದ ಬಹುದೊಡ್ಡ ಉಪಕಾರವೆಂದು ಸ್ಮರಿಸುತ್ತಾ ಅದನ್ನು “ಶಿವಮತದ ಜನರೆಂದಿಗೂ” ಮರೆಯುದಿಲ್ಲವೆಂದು ಆಣೆ ಮಾಡಲಾಗಿದೆ. “ಶಿವಶರಣರ ವಚನಗಳ ಹೊತ್ತಿಗೆಗಳೆಲ್ಲವೂ ಹುಳುಹತ್ತಿ ಮಾಯವಾಗುವಾಗ ಅವುಗಳನ್ನು ನೀ ಸಂಗ್ರಹಿಸಿ ಮುದ್ರಿಸಿದೆ” ಅದಕ್ಕಾಗಿ ಇಡೀ ಕನ್ನಡ ಜನರು ಹಳಕಟ್ಟಿಯವರಿಗೆ ಚಿರರುಣಿಯಾಗಿರುತ್ತದೆಯೆಂದು ಇಲ್ಲಿ ಹಾಡಲಾಗಿದೆ. ಕನ್ನಡ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆಯನ್ನು ಹೃದಯದುಂಬಿ ಸ್ಮರಿಸಲಾಗಿದೆ.
ಮುಂದುವರೆಸುತ್ತಾ ಎಂಟನೇ ಸ್ಟಾಂಜಾದಲ್ಲಿ ಹಳಕಟ್ಟಿಯವರ ಸುಕೃತ್ಯವನ್ನು ಹೀಗೆ ಬಣ್ಣಿಸಲಾಗಿದೆ-

ಚೆನ್ನಕೃತ್ಯದೆ ನಿನ್ನ ಪ್ರೋನ್ನತಿಯ ಪಡೆದಿಹುದು/
ಮನ್ನಣೆಗೆ ಸತ್ಪಾತ್ರ ವೀರಶೈವರ ಮತವು/

ಈ ಸಾಲುಗಳಲ್ಲಿ ವೀರಶೈವ ಪರಿಕಲ್ಪನೆಯನ್ನು ಆಗಾಗ ನೋಡುತ್ತೇವೆ. ಹಳಕಟ್ಟಿಯವರು ತಮ್ಮ ಲೇಖನಗಳಲ್ಲಿ ಲಿಂಗಾಯತ/ವೀರಶೈವ ಎಂಬ ಎರಡು ಪರಿಕಲ್ಪನೆಗಳನ್ನು ಬರೆದಿರುವುದನ್ನು ಜ್ಞಾಪಿಸಕೊಳ್ಳಬಹುದು. ಆದರೆ ಈ ಪದ್ಯದ ಕರ್ತೃ ವೀರಶೈವ ಪದವನ್ನು ಮಾತ್ರ ಬಳಸಿದ್ದಾರೆ. ಪದ್ಯದ ಕೊನೆಯಲ್ಲಿ ಹಳಕಟ್ಟಿಯವರಿಗೆ ಆಯುರಾರೋಗ್ಯ ನೀಡಲೆಂದು ಪ್ರಾರ್ಥಿಸಲಾಗಿದೆ-

ಕಾರುಣ್ಯ ನಿಧಿಯಾದ ಪಾರ್ವತೀಶನು ಕೊಡಲಿ/
ಪಾರವಿಲ್ಲದ ಸುಖವ ಮತ್ತು ದೀರ್ಘಾಯುವನು ನಿನಗೆ
ತಾಂ ಹರುಷದಿಂದೆ//

***
ಎರಡನೇ ಪದ್ಯವನ್ನು ವಿರುಪಾಕ್ಷಯ್ಯ ನಾಗಯ್ಯ ಹಿರೇಮಠ ಎಂಬುವವರು ‘ಶ್ರೀಯುತ ಹಳಕಟ್ಟಿಯವರು’ ಎಂಬ ಶೀರ್ಷಿಕೆಯಡಿಯಲ್ಲಿ ಬರೆದಿರುವರು. ಈ ಎರಡು ಕವನಗಳ ನಡುವೆ ಎರಡು ವರ್ಷಗಳ ಅಂತರವಿದೆ. ಈ ಅಂತರ ಹಳಕಟ್ಟಿಯವರ ಬಗ್ಗೆ ಇದ್ದ ಅಭಿಮಾನದ ನಿರಂತರತೆಯನ್ನು ಸೂಚಿಸುತ್ತದೆ. ಇದನ್ನು ಕೂಡ ಸ್ವತಃ ಹಳಕಟ್ಟಿಯವರು ತಮ್ಮ ಶಿವಾನುಭವ ಪತ್ರಿಕೆಯಲ್ಲಿ ೧೯೬೦ರಲ್ಲಿ (ಸಂಪುಟ ೩೪, ಸಂಖ್ಯೆ. ೫-೬) ಪ್ರಕಟಿಸಿದ್ದಾರೆ.

ಬೀಸುವ ಕಲ್ಲಿನ ಪದದಂತೆ ಈ ಪದ್ಯವನ್ನು ಬರೆಯಲಾಗಿದೆ. ಅಂದರೆ ಒಂದು ಬಗೆಯ ಜಾನಪದ ಶೈಲಿಯಲ್ಲಿ ಈ ಪದ್ಯವನ್ನು ಪ್ರಸ್ತುತಗೊಳಿಸಲಾಗಿದೆ. ಹೆಂಗಸರು ತಮ್ಮ ಮನೆಯಲ್ಲಿ ಬೀಸುವ ಕಲ್ಲಿನಲ್ಲಿ ಅಕ್ಕಿ, ಜೋಳ, ರಾಗಿ ಅಥವಾ ಮತ್ಯಾವುದೊ ಧಾನ್ಯವನ್ನು ತೌಡನ್ನಾಗಿ ಕುಟ್ಟುತ್ತಿರಬೇಕಾದರೆ ಸ್ವ-ಪ್ರೇರಣೆಗಾಗಿ ಹಾಡುವ ಹಾಡಿನ ಶೈಲಿಯಲ್ಲಿ ಈ ಪದ್ಯವನ್ನು ಬರೆಯಲಾಗಿದೆ. ಆದರೆ ಈ ಪದ್ಯದ ಶೀರ್ಷಿಕೆ ಮಾತ್ರ ಶಿಷ್ಟ ರೂಪದಲ್ಲಿದೆ. ಶ್ರೀಯುತ ಎಂಬುದು ಗೌರವ ಸೂಚಕವಾದ ಸಂಸ್ಕೃತ ಪದ. ಕವಿಯು ಸಂಸ್ಕೃತದ ಪ್ರಭಾವವನ್ನು ಮೀರಲು ಸಾಧ್ಯವಾಗಿಲ್ಲವೆಂದು ತಿಳಿಯಬಹುದು. ಈ ಪದ್ಯವನ್ನು ಏಕೆ ಜಾನಪದ ಶೈಲಿಯಲ್ಲಿ ಬರೆಯಲಾಗಿದೆ ಎಂದು ಎಲ್ಲಿಯು ಈ ಕವಿ ಹೇಳಿಕೊಂಡಿಲ್ಲ. ಜಾನಪದ ಲೋಕದಲ್ಲಿ ಹಳಕಟ್ಟಿಯವರು ಜನಪ್ರಿಯರಾಗಿದ್ದರು ಎಂದು ಈ ಪದ್ಯವು ಸಾರುತ್ತಿರಬಹುದು. ಹಳಕಟ್ಟಿಯವರನ್ನು ಮೆಚ್ಚುಗಯಿಂದ ಹೊಗಳುವ ಈ ಪದ್ಯವು ಹೀಗೆ ಶುರುವಾಗುತ್ತದೆ-

ಊರ ನೋಡಾಕ ಬಂದ್ಯಾ ದಾರಿ ತಿಳಿಯದೆ ನಿಂತ್ಯಾ/
ಊರ ಹೆಸರ ಏನ ವಿಜಾಪೂರ ತಂಗಿ ಊರ ನೋಡಾಕ ಬಂದ್ಯಾ//ಪ//
ಊರಿಗೆ ಗುಣವಂತಾ ಶರಣ ಫಕೀರಣ್ಣ / ಗುರು ಚರಣ ಸೇವಾ
ದಲ್ಲಿ ಇರವೂರ ತಂಗಿ ಊರನೋಡಾಕ ಬಂದ್ಯಾ //೧//

ಹೀಗೆ ಶುರುವಾಗುವ ಈ ಪದ್ಯ ಹದಿನೇಳು ದ್ವಿಸಾಲುಗಳನ್ನು ಹೊಂದಿದೆ. ಈ ಪದ್ಯದಲ್ಲಿ ಹಳಕಟ್ಟಿಯವರನ್ನು ಹಾಡಿ-ಹೊಗಳಿರುವುದಲ್ಲದೆ ಅವರ ಅನೇಕ ಸಾಧನೆಗಳನ್ನು ಮುಕ್ತ ಮನಸ್ಸಿನಿಂದ ಬಣ್ಣಿಸಲಾಗಿದೆ. ಮೊದಲಿಗೆ ಹಳಕಟ್ಟಿಯವರ ಗ್ರಂಥ ಸಂಪಾದನೆಯ ಬಗ್ಗೆ ಹೇಳುತ್ತಾ, ಆ ಗ್ರಂಥಗಳನ್ನು “ತಗೆದು ಓದಿದರೆ ಆನಂದ ತಂಗೀ” ಎಂದು ಆ ಗ್ರಂಥಗಳ ಮಹತ್ವವನ್ನು ತಿಳಿಸಲಾಗಿದೆ. “ತಂಗೀ” ಎಂದು ಸಂಬೋಧಿಸುವ ಪದದಲ್ಲಿ ಆತ್ಮೀಯತೆ ಅಥವಾ ನಿಕಟತೆಯನ್ನು ಕಾಣಬಹುದು. ಅನುಭವ ಮಂಟಪದ ಹಾಗೆ ಬಸವಣ್ಣನವರ ವಚನಗಳನ್ನು ಓದಿ, ಕೇಳುವ ಅವಕಾಶವನ್ನು ಹಳಕಟ್ಟಿಯವರು ಮಾಡಿಕೊಟ್ಟರು ಎಂದು ಬರೆಯಲಾಗಿದೆ. ಹಳಕಟ್ಟಿಯವರು ವಕೀಲರಾಗಿ ವೃತ್ತಿಯನ್ನು ಅನುಸರಿಸಿದರೂ ಅದನ್ನು ತ್ಯಜಿಸಿ ಜನಸೇವೆಯಲ್ಲಿ ತೊಡಗಿಸಿಕೊಂಡಿರುವುದನ್ನೂ ನೆನೆಯಲಾಗಿದೆ. ಹಳಕಟ್ಟಿಯವರು ಊರೂರು ತಿರುಗಿ ವಚನ ಸಾಹಿತ್ಯವನ್ನು ಪ್ರಸರಣ ಮಾಡಿದ್ದು, ಶಿವಾನುಭವ ಸಂಸ್ಥೆಯನ್ನು ಸ್ಥಾಪಿಸಿ ಲಿಂಗಾಯತ ಸಾಹಿತ್ಯವನ್ನು ಜನಸಾಮಾನ್ಯರಿಗೆ ತಲುಪಿಸಿದ್ದನ್ನು ಹೀಗೆ ವರ್ಣಿಸಲಾಗಿದೆ,

ಎಲ್ಲೆಲ್ಲಿ ತಿರುಗಿದರು/ ಜನರ ಹಿತಕ್ಕಾಗಿ/ಯಾರೂ ದೊರತಿದ್ದಿಲ್ಲ
ಇಲ್ಲಿ ದೊರಕಿದರ ತಂಗಿ ಊರ ನೋಡಾಕ ಬಂದ್ಯಾ//೫//

ಹಳಕಟ್ಟಿಯವರು ಶಿವಮತ (ಲಿಂಗಾಯತ ಅಥವಾ ವೀರಶೈವ)ವು ದುರ್ಬಲವಾಗುತ್ತಿರುವುದನ್ನು ತಪ್ಪಿಸಿ “ಬಿದ್ದಮತವನ್ನೂ ಎಬ್ಬಿಸಿದರ”. ಲಿಂಗಾಯತರು ಮತ್ತು ಅನೇಕ ಜನರಲ್ಲಿ ಆಗ ಇದ್ದ ಅಜ್ಞಾನವನ್ನು ಶಿವಾನುಭವದ ಮೂಲಕ ಹೋಗಲಾಡಿಸಿ ಸುಜ್ಞಾನಿಯಾಗಲು ದಾರಿದೀಪವಾದರು ಎಂದು ಹೇಳಲಾಗಿದೆ. ಹಳಕಟ್ಟಿಯವರ ನಿಯತಕಾಲಿಕ ಹಾಗು ಅವರು ಶುರು ಮಾಡಿದ ಶಿವಾನುಭವ ಸಂಸ್ಥೆಯನ್ನು ಈ ಸಾಲುಗಳು ಸೂಚಿಸುತ್ತಿವೆ. ಶಿವಶರಣರ ಚರಿತ್ರೆಯನ್ನು ತಮ್ಮ ಪತ್ರಿಕೆಯ ಮೂಲಕ ಕಟ್ಟಿಕೊಟ್ಟಿರುವ ವಿಷಯ ಎಲ್ಲರಿಗು ತಿಳಿದಿರುವುದು. ಅನೇಕ ಶಿವಶರಣರ ಸಾಧನೆ, ಹಿರಿಮೆ-ಗರಿಮೆಯನ್ನು ಅವರ ಜೀವನ ಚರಿತ್ರೆಯ ಮೇಲೆ ಸಂಶೋಧನೆ ಮಾಡಿ, ಇತರರಿಗು ಸಂಶೋಧಿಸಲು ಪ್ರೊತ್ಸಾಹಿಸಿದ ಹಳಕಟ್ಟಿಯವರನ್ನು ಈ ಪದ್ಯದಲ್ಲಿ ಜ್ಙಾಪಿಸಿಕೊಳ್ಳಲಾಗಿದೆ. “ಶಿವಮತದ ಉದ್ಧಾರಕ್ಕೆ ಸಿದ್ದಾಗಿ ನಿಂತ” ಅವರ ಸಂಶೋಧನೆಗೆ ಮನ್ನಣೆಯನ್ನು ನೀಡಲಾಗಿದೆ. ಅನೇಕ ಕಷ್ಟ-ನಷ್ಟಗಳನ್ನು ಅನುಭವಿಸಿದರೂ, ಬಿಟ್ಟು ಬಿಡದ ತ್ರಿವಿಕ್ರಮನಂತೆ “ಬೇನೆ ಬೇಸರಿಕೆ ಬಂದ್ರೂ ಬಿಡದ ಫಕೀರಣ್ಣಾ” ತಮ್ಮ ಜೀವನದಲ್ಲಿ ನಡೆದುಕೊಂಡಿದ್ದು ಅವರ ತಾಯಿಯ ಪುಣ್ಯವೆ ಸರಿ ಎಂದು ಇಲ್ಲಿ ಚಿತ್ರಿಸಲಾಗಿದೆ. ಶಿವಶರಣರಂತೆ ಸತ್ಯ ಮಾರ್ಗದಲ್ಲಿ ನಡೆದು, ವಚನಗಳನ್ನು ಜನ ಅನುಸರಿಸಬೇಕೆಂದು ಹಳಕಟ್ಟಿ ಸಾರಿ, ಸಾರಿ ಹೇಳಿರುವುದನ್ನು ಇಲ್ಲಿ ಗುರುತಿಸಲಾಗಿದೆ. ವಚನಗಳನ್ನು ಸಾಂಪ್ರದಾಯಿಕವಾಗಿ ನೋಡುತ್ತಿದ್ದ ಕಾಲದಲ್ಲಿ ಹಳಕಟ್ಟಿಯವರು ವಚನಗಳನ್ನು ಅರ್ಥಮಾಡಿಕೊಳ್ಳಲು ಭದ್ರ ಸಿದ್ದಾಂತವನ್ನು ನೀಡಿದುದನ್ನು ನಾವು ಜ್ಞಾಪಿಸಿಕೊಳ್ಳಬಹುದು. ಇಷ್ಟೆಲ್ಲಾ ಸಾಧನೆಗಳನ್ನು ಕೈಗೊಂಡ ಹಳಕಟ್ಟಿಯವರಿಗೆ ಆ ಶಿವನು (“ಪಾರ್ವತಿ ಪತಿ”) ದೀರ್ಘಾಯುಷ್ಯವನ್ನು ಕರುಣಿಸಬೇಕೆಂದು ಪದ್ಯದಲ್ಲಿ ಪ್ರಾರ್ಥಿಲಾಗಿದೆ. ಅವರು ಹಾಕಿಕೊಟ್ಟ ಹಾದಿಯಲ್ಲಿ ನಾವು ನಡೆಯಬೇಕು ಮತ್ತು ಅವರು ಆರಂಭಿಸಿದ ಜನಸೇವೆಯು ಸಂಪೂರ್ಣವಾಗಲೆಂದು ಇಲ್ಲಿ ಆಶಿಸಲಾಗಿದೆ.

ಒಟ್ಟಾರೆಯಾಗಿ ನೋಡುವುದಾದರೆ ಈ ಎರಡು ಪದ್ಯಗಳಲ್ಲಿ ಹಳಕಟ್ಟಿಯವರನ್ನು ಲಿಂಗಾಯತ ಸಮುದಾಯ, ಕನ್ನಡ ಜನ ಮತ್ತು ಸಾಹಿತ್ಯದ ಮುಖ್ಯ ಕೇಂದ್ರ ಬಿಂದುವೆಂದು ಹೊಗಳಲಾಗಿದೆ. ಅವರ ಸಾಧನೆಗಳನ್ನು ಜ್ಞಾಪಿಸಿಕೊಳ್ಳುತ್ತಾ ಈ ಎರಡು ಪದ್ಯಗಳು ಹಳಕಟ್ಟಿಯವರ ಬಗ್ಗೆ ತಮ್ಮ ಅಭಿಮಾನವನ್ನು ತುಂಬು ಹೃದಯದಿಂದ ವ್ಯಕ್ತ ಪಡಿಸಿವೆ. ಹಳಕಟ್ಟಿಯವರು ನಮ್ಮ ನಡುವೆ ಇಲ್ಲದಿದ್ದರೂ ಅವರು ನಮ್ಮ ಮನಸ್ಸಿನಲ್ಲಿ ಅಜರಾಮರರಾಗಿ ಉಳಿಯಲು ಈ ಪದ್ಯಗಳು ತಮ್ಮದೆ ಆದ ನುಡಿಗಟ್ಟನ್ನು ಕಟ್ಟಿಕೊಟ್ಟಿವೆ. ಹನ್ನೆರಡನೇ ಶತಮಾನದ ವಚನ ಸಾಹಿತ್ಯವನ್ನು ಆಧುನಿಕರಿಗೆ, ಅವರದೆ ಜಾತ್ಯಾತೀತ ಭಾಷೆಯಲ್ಲಿ ಕಟ್ಟಿಕೊಟ್ಟ ಹಳಕಟ್ಟಿಯವರ ಪ್ರಯತ್ನಗಳು ಇಂದಿಗೂ ದಾರಿದೀಪ. ಹಳಕಟ್ಟಿಯವರ ಬಗ್ಗೆ ಇರುವ ಈ ಎರಡು ಪದ್ಯಗಳನ್ನು ಗಮನಿಸಿದಾಗ ಅವರ ಬಗ್ಗೆ ಕಾದಂಬರಿ ಅಥವಾ ನಾಟಕ ಯಾಕೆ ಇಲ್ಲ ಎಂಬ ಕೊರಗು ಮತ್ತು ಪ್ರಶ್ನೆ ನಮ್ಮನ್ನು ಕಾಡುತ್ತದೆ. ಉತ್ತರ ಕರ್ನಾಟಕದ ಭಾಗದಲ್ಲಿ ಇದ್ದರು ಅವು ನನ್ನ ಗಮನಕ್ಕೆ ಬಂದಿಲ್ಲ.

ಹಳಕಟ್ಟಿಯವರ ವ್ಯಕ್ತಿತ್ವನ್ನು ಉತ್ರ್ಪೇಕ್ಷಿಸದೆ ಅವರನ್ನು ವಸ್ತುನಿಷ್ಠವಾಗಿ ಕಟ್ಟಿಕೊಡುವ ಸಾಹಿತ್ಯ ನಮಗೆ ಈಗ ಬೇಕಾಗಿದೆ. ವಚನ ಸಾಹಿತ್ಯವನ್ನು ಆಧುನಿಕ ಕಾಲದ ಸಾಂಪ್ರದಾಯಿಕ ಶಕ್ತಿಗಳಿಂದ ಮುಕ್ತಿಗೊಳಿಸಿದ್ದು, ಅನೇಕ ಮಠ-ಮಾನ್ಯಗಳಿಗೆ ವಚನ ಸಾಹಿತ್ಯದ ಮಹತ್ವವನ್ನು ತಿಳಿಸಿದ್ದು, ಶಿವಾನುಭವ ಸಂಸ್ಥೆಯನ್ನು ಕಟ್ಟಿ ಊರೂರು ಅಲೆದಾಡಿದ್ದು, ಕೊನೆಗೆ ಹಿಂದು ಮಹಾಸಭೆ ಎಂಬ ಬಲಪಂಥೀಯ ಗುಂಪಿಗೆ ಹಳಕಟ್ಟಿಯವರು ಸೇರಿಕೊಂಡ ಪರಿಸ್ಥಿತಿ, ಒತ್ತಡ, ಅನಿರ್ವಾಯತೆ ಮತ್ತು ಸಂದರ್ಭಗಳು ಸಾಹಿತಿಗಳಿಗೆ ಒಂದೊಂದು ಪ್ರತ್ಯೇಕ ವಸ್ತುವಾಗಬಹುದು. ಈ ದಿಕ್ಕಿನಲ್ಲಿ ಸಾಹಿತಿಗಳು ಮತ್ತು ಸಾಹಿತ್ಯಾಸಕ್ತರು ಗಮನ ಹರಿಸುವರೆ?

Previous post ಪಾದಪೂಜೆಯ ಪ್ರಸ್ತುತತೆ…
ಪಾದಪೂಜೆಯ ಪ್ರಸ್ತುತತೆ…
Next post ರಾಜಸತ್ತೆಯ ವಿರುದ್ಧದ ಪ್ರಜಾಸತ್ತೆ
ರಾಜಸತ್ತೆಯ ವಿರುದ್ಧದ ಪ್ರಜಾಸತ್ತೆ

Related Posts

ಬಸವ ಸ್ಮರಣೆ ಇಂದಿಗೂ ಏಕೆ?
Share:
Articles

ಬಸವ ಸ್ಮರಣೆ ಇಂದಿಗೂ ಏಕೆ?

May 6, 2020 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
`ಕಲ್ಲು ಎಷ್ಟೇ ಕಾಲ ನೀರಲ್ಲಿದ್ದರೂ ನೆನದು ಮೃದುವಾಗದು’. ಈ ನುಡಿಗಟ್ಟು ಬಸವಣ್ಣನವರದು. ಕಲ್ಲನ್ನು ಬೇಕಾದರೆ ಮೃದುಗೊಳಿಸಬಹುದು. ಆದರೆ ಕಾಡುಗಲ್ಲಿನಂತಿರುವ ಮನುಷ್ಯರನ್ನು...
ಅಚಲ ಕಥಾಲೋಕ
Share:
Articles

ಅಚಲ ಕಥಾಲೋಕ

February 10, 2023 Bayalu
ಅನುಭಾವಿ ಲೇಖಕರಾದ ಶರಣ ಪದ್ಮಾಲಯ ನಾಗರಾಜ ಅವರು ಅಚಲ ಕಥಾಲೋಕ (ಅಚಲ-ಝೆನ್ ಅನುಸಂಧಾನ) ಪುಸ್ತಕದಲ್ಲಿ ಬರೆದ ದೀರ್ಘ ಪ್ರಸ್ತಾವನೆಯ ಮಧ್ಯದಲ್ಲಿ ಬರುವ ಕೆಲವು ಮಾತುಗಳನ್ನು ಮಾತ್ರ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಬಯಲು ಮತ್ತು ಆವರಣ
ಬಯಲು ಮತ್ತು ಆವರಣ
March 6, 2024
ಕಾಯಕಯೋಗಿನಿ ಕದಿರ ರೆಮ್ಮವ್ವೆ
ಕಾಯಕಯೋಗಿನಿ ಕದಿರ ರೆಮ್ಮವ್ವೆ
April 29, 2018
ನೀರು… ಬರಿ ನೀರೇ?
ನೀರು… ಬರಿ ನೀರೇ?
December 13, 2024
ಕನ್ನಡ ಕವಿ ಸಂತರಲ್ಲಿ ಧರ್ಮ…
ಕನ್ನಡ ಕವಿ ಸಂತರಲ್ಲಿ ಧರ್ಮ…
May 10, 2022
ಅಳಿದು ಕೂಡುವುದು- ಅಳಿಯದೆ ಕೂಡುವುದು
ಅಳಿದು ಕೂಡುವುದು- ಅಳಿಯದೆ ಕೂಡುವುದು
March 9, 2023
ಬೆಳಕಿನೆಡೆಗೆ…
ಬೆಳಕಿನೆಡೆಗೆ…
June 10, 2023
ಮಣ್ಣು ಮೆಟ್ಟಿದ ದಾರಿ
ಮಣ್ಣು ಮೆಟ್ಟಿದ ದಾರಿ
October 5, 2021
ಶೂನ್ಯ ತುಂಬಿಕೊಂಡ ಬಿಂದಿಗೆ
ಶೂನ್ಯ ತುಂಬಿಕೊಂಡ ಬಿಂದಿಗೆ
September 6, 2026
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-3
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-3
December 6, 2020
ಕರ್ತಾರನ ಕಮ್ಮಟ- ಭಾಗ 3
ಕರ್ತಾರನ ಕಮ್ಮಟ- ಭಾಗ 3
September 5, 2019
Copyright © 2026 Bayalu