ಬೆಳಕು ನುಂಗಿದ ಕತ್ತಲು
ಬೂದಿ ಮುಚ್ಚಿದ ಮುಗಿಲು
ಹರಿದ ಗಾಳಿ ಅಲೆಗಳಿಗೆ ನೆನೆದು
ನೆಲದ ಬಾಗಿಲು ತೆರೆದು
ತೋರಿ ಬಯಲು
ಮುರಿದ ಕೈ
ಕುಂಟುವ ಕಾಲು
ನಾಲಿಗೆ ಚಾಚಿದ ಬಯಕೆ ನೂರು
ನೋಡು… ನೋಡು… ನೋಡು…
ದಾಟುವುದಾದರೂ ಹೇಗೆ
ಈ ಆಲಯವನು?
ಏನನ್ನೂ ಕಾಣದ ಕಣ್ಣು
ಕಾಣದೇನನ್ನೋ ಅರಸುವುದು
ಉತ್ತರ ಸಿಗದ ಒಗಟಿನ ಪ್ರಶ್ನೆಗೆ
ತಲೆ ಸಿಡಿದು ಚೂರಾಗುವುದು ಸಾವಿರ
ಕಾಲಚಕ್ರದಿ ಸಿಲುಕಿದ ಬದುಕಿನ ಪುಟಗಳು
ಉಸಿರ ಬಿಗಿ ಹಿಡಿದು
ನಾಟುತ್ತಿವೆ ಬಿದಿರ ಕೊಲುಗಳನ್ನು
ಮನದ ಕೊಳದಲ್ಲಿ
ಹೇಳಿಕೊಳ್ಳಲಾಗದ ನೋವು
ನಗುವನ್ನು ಕೊಂದು ನಡೆದಿದೆ
ಕರಗಳ ಬಿರುಸಾಗಿ ಬೀಸುತ ಏಕಾಂಗಿಯಾಗಿ
ಉಳಿದಿದ್ದೇನೆ ಹೀಗೆ…
ಅಮೂರ್ತ ಸಂಕೋಲೆಗಳಲ್ಲಿ ಸಿಲುಕಿ
ಏಕಾಂತದ ಬಂಧನದಲ್ಲಿ
ಬೆಳಕು ನುಂಗಿದ ಕತ್ತಲು
ಭ್ರಮೆಯ ಕುಯಿಲು
ತೆರೆದ ಬಾಗಿಲು ಮತ್ತೆ ಮುಚ್ಚಿಹೋಗುವ ಹೊತ್ತು
ಎಲ್ಲಿದೆ ಬಿಡುಗಡೆ
ಗಮ್ಯ ಕಾಣದವನ ನಿಲುಗಡೆ.





Comments 1
ಮಂದಾರಾ ವಿ ಚನ್ನಗಿ
Dec 15, 2025ಮುಗಿಲು ಬಯಲಿಗೆ ಬಾಗಿಲು ತೋರುವುದೆನ್ನುವ ಕಲ್ಪನೆ👌🤌