ಸುತ್ತಿ ಸುಳಿವ ಆಟ
ಜೀವದ ಗೆಳೆಯಾ ಅಂತ ಕಟ್ಟಿಕೊಂಡೆ
ಪ್ರಾಣ ಹಿಂಡೊ ಗಂಡನಾಗಿ ನನ್ನ ಆಳುತಾನವ್ವ
ಜೇನಿನಂಥ ಮಾತುಗಳ ನಂಬಿಬಿಟ್ಟೆ
ಗಾಳಿಯಲ್ಲಿ ಅವನ ಜೊತೆ ತೇಲಿಬಿಟ್ಟೆ
ಗಿರಿಗಿಟ್ಲೆ ಆಟದಲ್ಲಿ ಸಿಕ್ಕಿಕೊಂಡೆ
ಸುತ್ತ ತಿರುಗೋ ಲೋಕದಾಗೆ ಕಳೆದುಹೋದೆ
ಮಾತಿನಲ್ಲೂ ಅವನೇ ಮೇಲು
ಮೌನದಲ್ಲೂ ನನದೇ ಸೋಲು
ಬೈಗು-ಬೆಳಗು ಎರಡರಲ್ಲೂ ನಿಲ್ಲದಾಯ್ತು ಜೀತ
ರೆಕ್ಕೆ ಮರೆತ ಹಕ್ಕಿಯಾದೆ
ಬಾನು ತೊರೆದು ಬಂಧಿಯಾದೆ
ಸ್ನೇಹವೆಲ್ಲಿ? ಪ್ರೀತಿಯೆಲ್ಲಿ?
ನಕ್ಕು ನಲಿದ ಕಾಲವೆಲ್ಲಿ?
ನಿಜವು ಎಲ್ಲಿದೆ ಬದುಕಿನಲ್ಲಿ?
ಇರುವುದ ಮರೆತು ಇಲ್ಲದ್ದು ಕಟ್ಟಿಕೊಂಡು
ಹೈರಾಣವಾಯ್ತು ಜೀವ
ಹೂವಿನ ಹಂಗು ತೊರೆಯದ ಹೊರತು
ಉಸಿರ ಪರಿಮಳ ತಿಳಿವುದೇ?
ಅಕ್ಕ ಹಾಕಿದ ಪ್ರಶ್ನೆಯಲ್ಲಿ
ಗುರುವು ತೋರಿದ ಹಾದಿ ಕಂಡೆ
ನನ್ನ ನಾನರಿವುದಕೆ ಕಿಂಡಿಯೊಂದು ಇಲ್ಲಿದೆ.
Comments 2
Jyothilingappa
May 7, 2021ಹೂವಿನ ಹಂಗು ತೊರೆಯುವ ಸಾಹಸದ ‘ಸುತ್ತಿ ಸುಳಿವ ಆಟ’… ಓದಲು ಸರಳ… ತಿಳಿಯಲು ಸರಳವೇ… ಅಭಿನಂದನೆಗಳು.💐💐
Veeresh
Sep 15, 2024ಮಾತಿನಲ್ಲೂ ಅವನೇ ಮೇಲು ಮೌನದಲ್ಲೂ ನನದೇ ಸೋಲು
👌🏻