
ಬರಿದಾಗುವ ಬೆರಗು
ನಿಂತಲ್ಲೇ ಬಯಲು
ಕೊನೆಗೊಳ್ಳದು ಗೆಳೆಯ
ನಡೆಯಬೇಕು ನೀನೇ ಖುದ್ದು
ಭವದ ಬೇಲಿಗಳ ದಾಟುತ್ತ
ಸಾವಿರ ಹೆಜ್ಜೆಗಳ ಮಿಡಿದು
ಈ ಸಮಯ
ಜಗ ಹುಚ್ಚನೆಂದರೂ ಸರಿಯೇ
ಹತ್ತು ಮುಳ್ಳುಗಳ ಮಧ್ಯೆ
ಹೂವೊಂದು ಬಿರಿವಂತೆ
ನೂರು ಕಷ್ಟಗಳ ನಡುವೆ
ನಲುಗದೆ ನಗಬೇಕು ಹಾಗೆ!
ಕಣ್ ಹಾಯಿಸಿದಷ್ಟೇ
ನೆಲ, ಕಡಲು, ಆಗಸ ಎಲ್ಲಾ
ಕಣ್ಣಿನಿಂದಾಚೆಗೆ ಕಾಣಬೇಕು
ಕಂಡುಕೊಳ್ಳಬೇಕು
ಕರ ಚಾಚಬೇಕು
ಕರೆತರಬೇಕು
ಅಸಾಧ್ಯತೆಯಲ್ಲಿಯೇ
ಸಾಧ್ಯತೆ ಅವಿತಿದೆ
ಸಾಧಿಬೇಕಷ್ಟೆ ಗೆಳೆಯ
ಇರದ ದಾರಿಗಳ ಒಮ್ಮೆ ಶೋಧಿಸಿ ನೋಡು
‘ಇಲ್ಲಿ ಮೊದಲು ಏನೂ ಇರಲಿಲ್ಲ’
ಎಂದು ತಿಳಿಯುವುದು
ಸಿಕ್ಕದ್ದು ಕಳೆದು
ಎಲ್ಲವೂ ನಶ್ವರ ಎಂಬ ಸತ್ಯ ಬೆಳಗುವುದು
ಗುರಿಗೂ ಗಮ್ಯಕೂ
ಅದೇಷ್ಟು ದೂರ
ಮುಗಿಲಿಗೂ ಕಡಲಿಗೂ ಇದ್ದಷ್ಟೇ ಅಂತರ
ಅಂಗೈಗೆ ಸಿಕ್ಕಂತೆ ಸಿಕ್ಕಿ
ಮರಳ ಕಣಗಳಂತೆ ಸೋರಿ
ಬರಿದಾಗುವ ಬೆರಗು
ಈ ಬದುಕ ವೈಖರಿ.
Comments 2
ದಿನೇಶ್ ಕೆ.ಪಿ
Feb 18, 2025ಬೆರಗೇ ಬದಲಾಗುವಾಗ ಉಳಿಯೋದೇನಿದೆ…. ಬರೀ ಶೂನ್ಯ 😒
ಕಾಳಿದಾಸ ಲಮಾಣಿ
Feb 22, 2025ಬಣ್ಣನೆ ಬೇಕೇ ಬಯಲಿಗೆ, ಬರಿದಾಗುವ ಚೆಲುವಿಗೆ… ಆದರೂ ಜೀವನ ಶೂನ್ಯ ಮಾತ್ರ ಅಲ್ಲಾ ಅಣ್ಣಾ.