ಶೂನ್ಯ ತುಂಬಿಕೊಂಡ ಬಿಂದಿಗೆ
ಝೆನ್ ಹೇಳುತ್ತದೆ, ಹೀಗೆ…
ನನಗೆ ಎಲ್ಲಾ ಗೊತ್ತಿದೆ ಎಂದರೆ
ನಿನಗೆ ಏನೂ ಗೊತ್ತಿಲ್ಲ ಎಂದರ್ಥ
ನನಗೇನೂ ಗೊತ್ತಿಲ್ಲ ಎಂದರೆ
ಆಗಲೂ…
ನಿನಗೆ ಏನೂ ಗೊತ್ತಿಲ್ಲವೆಂದೇ ಅರ್ಥ
ಗೊತ್ತಿಲ್ಲದ್ದನ್ನು
ಗೊತ್ತುಮಾಡಿಕೊಳ್ಳಲು
ಅಲೆಮಾರಿಯಾಗುತ್ತದೆ ಮನಸ್ಸು
ಎಲ್ಲವೂ ಅರಿವಿಗೆ ಬಂದಾಗ
ಏನೂ ಉಳಿಯುವುದಿಲ್ಲ ಆಗ
ಖಾಲಿತನದ ಹೊರತು
ಶೂನ್ಯ ತುಂಬಿದ ಬಿಂದಿಗೆಯಲ್ಲಿ
ಚಂದಿರನ ಬಿಂಬ ಇಣುಕುವುದಿಲ್ಲ, ಇಲ್ಲ
ಶೂನ್ಯ ತುಂಬಿಕೊಂಡಿರುವ ಬಿಂದಿಗೆ
ಎಂದಿಗೂ ಖಾಲಿಯಲ್ಲ, ಅಲ್ಲ
ಖಯಾಲಿಯ ಹೊರತಾಗಿ ಇಲ್ಲಿ
ತುಂಬಿಕೊಳ್ಳಲು ಏನೂ ಇಲ್ಲ
ಸುರಿಯಬೇಕು ಮೊದಲು
ತುಂಬಿಕೊಂಡ ಎಲ್ಲವನು
‘ನಾನು’ ಎಂಬ ನನ್ನನು.





Comments 3
ಜಯಾ ಎಂ ಮರಡಿ
Sep 8, 2026ಶೂನ್ಯ ತುಂಬಿದ ಬಿಂದಿಗೆಯಲ್ಲಿ ಚಂದಿರನ ಬಿಂಬ ಇಣುಕುವುದಿಲ್ಲಾ… ಮನನ ಮಾಡಿಕೊಳ್ಳುವ ಸಾಲುಗಳು, ಝೆನ್ ಆಶಯವನ್ನು ಹೊತ್ತ ಕವನ ಸುಂದರವಾಗಿದೆ.
ಶಿವರಾಜ್ ವಿಜಯಪುರ
Sep 25, 2026ಕವನ ತುಂಬಾ ಇಷ್ಟವಾಯಿತು❣️
ಕಮಲಾ ತಂಗಡಗಿ
Sep 30, 2026ಶೂನ್ಯವೆಂದರೆ ಬಯಲೇ ಅಲ್ಲವೆ?