Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ವಚನಗಳು ಮತ್ತು ಹಿಂದುಸ್ಥಾನಿ ಸಂಗೀತ
Share:
Articles April 6, 2024 Bayalu

ವಚನಗಳು ಮತ್ತು ಹಿಂದುಸ್ಥಾನಿ ಸಂಗೀತ

ಆರಂಭಿಕ ದಿನಗಳು

ವಚನ ಸಾಹಿತ್ಯ ಮತ್ತು ಹಿಂದುಸ್ಥಾನಿ ಸಂಗೀತದ ನಡುವೆ ಇರುವ ಸಂಬಂಧ ಸುಮಾರು ೯೦ ವರ್ಷಗಳಷ್ಟು ಹಳೆಯದು. ಸಾಮಾನ್ಯವಾಗಿ ಇವೆರಡರ ಸಂಬಂಧವನ್ನು ಮಲ್ಲಿಕಾರ್ಜುನ ಮನ್ಸೂರರ ಹಿಂದುಸ್ಥಾನಿ ಸಂಗೀತಕ್ಕೆ ತಳಕು ಹಾಕುತ್ತಾರೆ. ವಚನಗಳನ್ನು ಪ್ರಥಮ ಬಾರಿಗೆ ಸಂಗೀತ ರೂಪದಲ್ಲಿ ಹಾಡಿದ್ದು ಮನ್ಸೂರರು ಎಂಬ ನಂಬಿಕೆಯನ್ನು ಇದು ಸೂಚಿಸುತ್ತದೆ. ಮನ್ಸೂರರ ಹಿಂದುಸ್ಥಾನಿ ಸಂಗೀತಕ್ಕೆ ವಚನ ಸಾಹಿತ್ಯದ ಸ್ಪರ್ಶ ನೀಡಿ ಅದನ್ನು ಜನಪ್ರಿಯಗೊಳಿಸುವಲ್ಲಿ ಅವರ ಪಾತ್ರ ಹಿರಿದು. ಇದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಮನ್ಸೂರರಿಗಿಂತ ಮೊದಲೆ ವಚನಗಳನ್ನು ಹಿಂದುಸ್ಥಾನಿ ಸಂಗೀತಕ್ಕೆ ಅಳವಡಿಸಿ, ಹಾಡುವ ಪರಿಪಾಟವನ್ನು ೧೯೩೦ರ ದಶಕದಲ್ಲೆ ಶುರುಮಾಡಲಾಯಿತು. ಈ ಹಿನ್ನಲೆಯಲ್ಲಿ ಮನ್ಸೂರರ ವಚನ ಸಂಗೀತವನ್ನು ಈ ದಶಕದಲ್ಲಿ ಆರಂಭವಾದ ವಚನ ಸಂಗೀತ ಸಂಪ್ರದಾಯದ ಮುಂದುವರಿಕೆಯ ಭಾಗವಾಗಿ ನೋಡಬೇಕಾಗಿದೆ.

ವಚನಗಳು 12 ನೇ ಶತಮಾನದ ಶಿವಶರಣರ (ಶಿವಭಕ್ತರು) ಕನ್ನಡ ಗದ್ಯ-ಕಾವ್ಯ ರಚನೆಗಳಾಗಿವೆ. ಈ ಶಿವಶರಣರು ಮತ್ತು ಅವರ ಅಸಂಖ್ಯಾತ ವಚನಗಳು ಈಗ ಕರ್ನಾಟಕದಲ್ಲಿ ಜನಪ್ರಿಯ ಪ್ರಜ್ಞೆಯ ಭಾಗವಾಗಿವೆ. ಫ.ಗು ಹಳಕಟ್ಟಿ ಅವರು ೧೯೨೩ ರಲ್ಲಿ ಹೊಸ ಮತ್ತು ಆಧುನಿಕ ವ್ಯಾಖ್ಯಾನಗಳೊಂದಿಗೆ ವಚನಗಳನ್ನು ಒಟ್ಟುಗೂಡಿಸಿ ಪ್ರಕಟಿಸಿದರು. ರಾಷ್ಟ್ರೀಯ/ವಿಶ್ವ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆಯಾಗಿ ವಚನಗಳನ್ನು ಜನಪ್ರಿಯಗೊಳಿಸಲು ಅವರು ಕೈಗೊಂಡ ಅವಿರತ ಪ್ರಯತ್ನಗಳಲ್ಲಿ ಹಿಂದೂಸ್ತಾನಿ ಸಂಗೀತವು ಕೂಡ ಒಂದು. ವಚನಗಳನ್ನು ಎಲ್ಲೆಡೆ ಜನಪ್ರಿಯಗೊಳಿಸಲು ಅವರು ಅತ್ಯಂತ ಮಹತ್ವದ ಸಾಂಸ್ಕೃತಿಕ ಸ್ಥಾನಮಾನವನ್ನು ಹೊಂದಿರುವ ಎಲ್ಲಾ ಸಾರ್ವಜನಿಕ ಕ್ಷೇತ್ರಗಳಿಗೆ ಪ್ರವೇಶಿಸುವ ಸಾಹಸ ಮಾಡಿದರು. ಈ ಪ್ರಯತ್ನಗಳು ವಚನಗಳನ್ನು ಪ್ರಚಾರ ಮಾಡುವ ದೆಸೆಯಲ್ಲಿ ಆರಂಭಿಕ ಹಂತಗಳಾಗಿವೆ ಮತ್ತು ಹಿಂದುಸ್ಥಾನಿ ಸಂಗೀತದ ಪ್ರವೇಶ ಇದನ್ನು ನಿರ್ವಿವಾದವಾಗಿ ನಿರೂಪಿಸುತ್ತದೆ.

ಸುಮಾರು 1930 ರ ದಶಕದಲ್ಲಿ, ಹಿಂದೂಸ್ತಾನಿ ರಾಗಗಳಿಗೆ ಅನುಗುಣವಾಗಿ ವಚನಗಳನ್ನು ಸಂಯೋಜಿಸಲು ಹಲವಾರು ಪ್ರಯತ್ನಗಳನ್ನು ಮಾಡಲಾಯಿತು. ಹಳಕಟ್ಟಿಯವರು ವಚನಗಳ ವಿಚಾರಗಳನ್ನು ಪ್ರಸಾರ ಮಾಡಲು ಮಾತ್ರ ಸೀಮಿತವಾಗಲಿಲ್ಲ. ಕನ್ನಡ ಸಂಪ್ರದಾಯ ಮತ್ತು ಸಂಗೀತಕ್ಕೆ ವಚನಗಳು ದೊಡ್ಡ ಕೊಡುಗೆಯಾಗಿವೆ ಎಂಬ ಸತ್ಯವನ್ನು ನೆಲೆಗೊಳಿಸುವ ಸಲುವಾಗಿ ಅವರು ಅವಿರತ ಪ್ರಯತ್ನಗಳನ್ನು ಕೈಗೊಂಡರು. ಸಂಗೀತದ ಸಂಸ್ಕೃತಿಯ ನಡುವೆ ಬೆಳೆದ ಅವರು ಹಿಂದೂಸ್ತಾನಿ ಸಂಗೀತ ಶೈಲಿಗೆ ಅನುಕೂಲಕರವಾದ ವಚನಗಳ ಸಂಗೀತ ಗುಣಗಳನ್ನು ಎತ್ತಿ ತೋರಿಸಿದರು. ಅವರು ಮತ್ತು ಅವರ ಸಂಗಡಿಗರು ಹಿಂದೂಸ್ತಾನಿ ಶೈಲಿಯಲ್ಲಿ ಹಾಡಲು ಆಯ್ಕೆಮಾಡಿದ ವಚನಗಳನ್ನು ಗಮನಿಸಿದರೆ ಅವರು ವಹಿಸಿದ ಎಚ್ಚರಿಕೆ ಮತ್ತು ಜಾಗರೂಕತೆಯನ್ನು ಅರ್ಥ ಮಾಡಿಕೊಳ್ಳಬಹುದು. ಹಿಂದುಸ್ಥಾನಿ ಸಂಗೀತದಲ್ಲಿ ಹಾಡಲು ಆಯ್ಕೆ ಮಾಡಿಕೊಂಡ ವಚನಗಳು ಸ್ವಯಂ ಸುಧಾರಣೆ, ನಿಜವಾದ ಭಕ್ತಿ, ವಿಶಾಲ-ಮನಸ್ಸು, ಸಹಿಷ್ಣುತೆ, ನಿಸ್ವಾರ್ಥ ಜೀವನ, ವೈಚಾರಿಕತೆ, ಉದಾರವಾದ ಇತ್ಯಾದಿ ವಿಷಯಗಳನ್ನು ಪ್ರತಿಪಾದಿಸುತ್ತವೆ.

ಹಳಕಟ್ಟಿಯವರು ವಚನಗಳನ್ನು ಸಂಗೀತದ ಜಲಾಶಯವನ್ನಾಗಿ ಉತ್ತೇಜಿಸುವುದಕ್ಕೆ ತಮ್ಮದೆ ಆದ ಐತಿಹಾಸಿಕ ಕಾರಣಗಳು, ಅವಶ್ಯಕತೆ ಮತ್ತು ಮಹತ್ವವನ್ನು ಹೊಂದಿದ್ದರು. ೧೯೩೦ರ ದಶಕದಲ್ಲಿ ಉದಯೋನ್ಮುಖ ಮಧ್ಯಮ ವರ್ಗದ ಸಾಂಸ್ಕೃತಿಕ ಕಲ್ಪನೆಯನ್ನು ಹಿಂದೂಸ್ತಾನಿ ಸಂಗೀತವು ಈಗಾಗಲೇ ಆಕ್ರಮಿಸಿಕೊಂಡಿತ್ತು. ಅದೇ ಸಮಯದಲ್ಲಿ, ಇದು ಸಾಮಾಜಿಕ ಮತ್ತು ಸಾಂಸ್ಕೃತಿಕ ಗುರುತನ್ನು ಕೂಡ ಬೆಳೆಸುತ್ತಿತ್ತು. ಹಿಂದುಸ್ಥಾನಿ ಸಂಗೀತಗಾರರಿಗೆ ಮತ್ತು ಗಾಯಕರಿಗೆ ಇದು ಸಾಮಾಜಿಕ ಮತ್ತು ಸಾಂಸ್ಕೃತಿಕ ಮೇಲ್ಚಲನೆಯನ್ನು ಸೂಚಿಸುತ್ತಿತ್ತು. ಜೊತೆಗೆ ಇದು ಕನ್ನಡ ಭಾಷಾಭಿಮಾನವನ್ನು ಕೂಡ ಸಂಕೇತಿಸುತ್ತಿತ್ತು. ಕನ್ನಡ ವಚನಗಳೊಂದಿಗೆ ಹಿಂದೂಸ್ತಾನಿ ಸಂಗೀತವನ್ನು ಪ್ರವೇಶಿಸಿದವರಲ್ಲಿ ಇದು ಹೆಚ್ಚು ಎದ್ದುಕಾಣುತ್ತದೆ. ಈ ದಿಕ್ಕಿನಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಹಳಕಟ್ಟಿಯವರು ವಚನಗಳ ವಾಚನ ಮತ್ತು ಗಾಯನಕ್ಕೆ ಅನುವು ಮಾಡಿಕೊಡಲು ಮತ್ತು ವಚನಗಳನ್ನು ಹಿಂದೂಸ್ತಾನಿ ರಾಗಗಳಾಗಿ ಪರಿವರ್ತಿಸಲು ಸಂಗೀತ ಶಿಕ್ಷಕ ಪರಪ್ಪ ವೀರಪ್ಪ ಪಾಟೀಲ್ (ಪಿ.ವಿ. ಪಾಟೀಲ್) ಅವರನ್ನು ತಾವೇ ಶುರು ಮಾಡಿದ ಸಿದ್ಧೇಶ್ವರ ಹೈಸ್ಕೂಲ್ ನಲ್ಲಿ ನೇಮಿಸಿದರು. ಈ ಶಿಕ್ಷಕರು ಷಣ್ಮುಖಸ್ವಾಮಿ, ಅಕ್ಕಮಹಾದೇವಿ, ಬಸವಣ್ಣ, ಉರಿಲಿಂಗಪೆದ್ದಿ ಮತ್ತು ಚೆನ್ನಬಸವಣ್ಣ ಮುಂತಾದ ಹಲವಾರು ಶಿವಶರಣರ ವಚನಗಳನ್ನು ಹೇಗೆ ಹಾಡಬೇಕು ಎಂಬುದನ್ನು ಕುರಿತು ಹಳಕಟ್ಟಿಯವರ ಶಿವಾನುಭವ ಪತ್ರಿಕೆಯಲ್ಲಿ ಅನೇಕ ಲೇಖನಗಳನ್ನು ಬರೆದಿದ್ದಾರೆ. ಇವರ ಜೊತೆಗೆ ಮಿಣಜಗಿ ಎಂಬ ಮತ್ತೋರ್ವ ಶಿಕ್ಷಕರು ಕೂಡ ಕೈ ಜೊಡಿಸಿ ವಚನ ಸಾಹಿತ್ಯವನ್ನು ಹಿಂದುಸ್ಥಾನಿ ಸಂಗೀತದ ತಾಳಕ್ಕೆ ಮತ್ತು ರಾಗಕ್ಕೆ ಜೋಡಿಸಲು ಪ್ರಯತ್ನ ಮಾಡಿದರು. ಇದಕ್ಕೆ ಹಳಕಟ್ಟಿಯವರು ಪ್ರೊತ್ಸಾಹ ನೀಡಿ, ಬೆನ್ನು ತಟ್ಟಿದರು.

ಮತ್ತೊಂದು ದಿನ ಹಳಕಟ್ಟಿಯವರು ಪಾಟೀಲ ಮತ್ತು ಮಿಣಜಗಿಯವರನ್ನು “ಹಿಜ್ ಮಾಸ್ಟರ‍್ಸ್ ವಾಯಿಸ್” ದಲ್ಲಿ ರೆಕಾರ್ಡ್ ಮಾಡಲು ಹೈಸ್ಕೂಲ್ ಖರ್ಚಿನಿಂದ ಮುಂಬಯಿಗೆ ಕಳುಹಿಸಿದರು. ಪಾಟೀಲರು ಸೋಲಾಪುರದ ಮತ್ತೊಬ್ಬ ಸಂಗೀತಗಾರ ಡಿ.ಸಿ. ಬೋರಮಣಿ ಅವರೊಂದಿಗೆ ಸೇರಿಕೊಂಡು ಮಿಶ್ರ ಪಹಾಡಿ, ದೇಶಕರ್, ತಿಲಕ್ ಕಾಮೋದ ಮತ್ತು ನಂದಾ ಮುಂತಾದ ವಿಭಿನ್ನ ಹಿಂದೂಸ್ತಾನಿ ರಾಗಗಳಲ್ಲಿ ವಚನಗಳಿಗೆ ಸಂಗೀತ ಟಿಪ್ಪಣಿಗಳನ್ನು ರಚಿಸಿದರು. ಇಂತಹ ಪ್ರಯತ್ನ ಬಿಜಾಪುರಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಇದು ಇತರ ಪ್ರದೇಶಗಳಿಗೂ ಹರಡಿತು. ಇನ್ನೊಬ್ಬ ಹಿಂದೂಸ್ತಾನಿ ಸಂಗೀತ ಗಾಯಕ ಮತ್ತು ಸಂಯೋಜಕ, ಶಿಕಾರಿಪುರದ ಧಾರ್ಮಿಕ ಕೇಂದ್ರವಾದ ಶಿವಯೋಗಾಶ್ರಮದ ಸಂಗಮೇಶ್ವರ ದೇವರು, ಬಸವಣ್ಣನವರ ವಚನಗಳನ್ನು ಪ್ರತ್ಯೇಕವಾಗಿ ಮುಲ್ತಾನಿ ಮತ್ತು ಯಮನ್ ರಾಗಗಳಾಗಿ ಪರಿವರ್ತಿಸಿದರು. ೧೯೪೦ ರ ಹೊತ್ತಿಗೆ ಪಿ.ವಿ. ಪಾಟೀಲರ ಪ್ರಯತ್ನಗಳಿಂದಾಗಿ ಸುಮಾರು ೭೫ ವಚನಗಳನ್ನು ಸಂಗೀತಕ್ಕೆ ಜೋಡಿಸಲಾಯಿತು. ಅವುಗಳನ್ನು ಹಳಕಟ್ಟಿಯವರು ಮುದ್ರಿಸಿ “ಸಂಗೀತದಲ್ಲಿ ಶಿವಶರಣರ ವಚನಗಳು” ಎಂಬ ಚಿಕ್ಕ ಪುಸ್ತಕದ ೫೦೦ ಪ್ರತಿಗಳನ್ನು ಪ್ರಕಟಿಸಿದರು. ಪಿ.ವಿ. ಪಾಟೀಲರು ತಮ್ಮ ಲೇಖನದಲ್ಲಿ ಜ್ಞಾಪಿಸಿಕೊಂಡಿರುವ ಹಾಗೆ ಹಳಕಟ್ಟಿಯವರು ವಚನ ಸಾಹಿತ್ಯ ಪ್ರಚಾರ ಆಗಲಿ ಎಂಬ ಉದ್ದೇಶದಿಂದ ಒಂದಕ್ಕೆ ಅರ್ಧ ಬೆಲೆ ಅಂದರೆ ಕೇವಲ ನಾಲ್ಕಾಣೆ ಇಟ್ಟಿದ್ದರು. ಇವರಿಬ್ಭರ ಪ್ರಯತ್ನಗಳಿಂದ ಅನೇಕ ವಚನಗಳ ಅರ್ಥ ಕೆಡದಂತೆ ಭಾವಪೂರಿತವಾಗಿ ಜೋಡಿಸಲು ಸಾಧ್ಯವಾಯಿತು ಎಂದು ಪಿ.ವಿ. ಪಾಟೀಲರು ನೆನಪಿಸಿಕೊಂಡಿದ್ದಾರೆ. ಅವರು ವಚನಗಳನ್ನು ಹಿಂದುಸ್ಥಾನಿ ಶೈಲಿಯಲ್ಲಿ ಮೊಟ್ಟ ಮೊದಲ ಬಾರಿಗೆ ಹಾಡಿದಾಗ ರಿಕಾರ್ಡ್ ಆದ ಮೊದಲಿನ ಎರಡು ವಚನಗಳು ಈ ರೀತಿ ಇವೆ: ೧. ದಯವಿಲ್ಲದ ಧರ್ಮ ಯಾವುದಯ್ಯಾ (ರಾಗ ಪಟದೀಪ, ತಾಳ-ತ್ರಿತಾಲ), ೨. ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ (ರಾಗ-ಭೈರವಿ, ತಾಲ-ದಾದರಾ).

ಉತ್ತರ ಕರ್ನಾಟಕದಲ್ಲಿ ಹಳಕಟ್ಟಿ ಮತ್ತು ಇತರರ ಪ್ರಯತ್ನಗಳು ವೈಯಕ್ತಿಕವಾಗಿದ್ದವು ಮತ್ತು ಯಾವುದೇ ರಾಜ್ಯದ ಪ್ರಾಯೋಜಕತ್ವ ಅವರಾರಿಗೂ ಇರಲಿಲ್ಲ. ತಮ್ಮ ಸ್ವಂತ ಶಕ್ತಿಯಿಂದ, ವಚನಗಳನ್ನು ಜನಪ್ರಿಯಗೊಳಿಸುವ ಏಕೈಕ ಉದ್ದೇಶದಿಂದ ಅವರು ಪ್ರಯಾಸ ಪಟ್ಟರು. ಒಟ್ಟಾರೆಯಾಗಿ, ಈ ಸಂಗೀತ ಸಂಯೋಜನೆಗಳು ಮತ್ತು ಪ್ರಯೋಗಗಳು ಮುಂದಿನ ದಿನಗಳಲ್ಲಿ ಹಿಂದೂಸ್ತಾನಿ ಗಾಯಕರು ಮತ್ತು ಸಂಗೀತಗಾರರಿಗೆ ಮಾರ್ಗದರ್ಶಿಗಳಾದವು.

Previous post ನನ್ನೆದುರು ನಾ…
ನನ್ನೆದುರು ನಾ…
Next post ನಡುವೆ ಸುಳಿವಾತ್ಮ…
ನಡುವೆ ಸುಳಿವಾತ್ಮ…

Related Posts

ಕುಂಬಾರ ಲಿಂಗಾಯತರು
Share:
Articles

ಕುಂಬಾರ ಲಿಂಗಾಯತರು

April 9, 2021 Bayalu
-ಬಸವರಾಜ ಕುಂಚೂರು ಲಿಂಗವಂತ ಕುಂಬಾರರ ಎಲ್ಲ ಆಚರಣೆಗಳೂ ಮಿಕ್ಕ ಲಿಂಗವಂತರಂತೆಯೇ ಇವೆ. ಅಂದರೆ ಹೆರಿಗೆಯಾದ ಮೇಲೆ ಬಾಣಂತಿ ಮತ್ತು ಕೂಸಿಗೆ ತಿಂಗಳೊಪ್ಪತ್ತು ಬೇವಿನ ಎಲೆ ಹಾಕಿ...
ನೆಲದ ಮರೆಯ ನಿಧಾನದಂತೆ…
Share:
Articles

ನೆಲದ ಮರೆಯ ನಿಧಾನದಂತೆ…

April 29, 2018 ಕೆ.ಆರ್ ಮಂಗಳಾ
ಜಗತ್ತಿನ ಎಲ್ಲ ನಾಗರಿಕತೆಗಳೂ ವಿಧವಿಧ ಬಗೆಯಲ್ಲಿ ಜಗದ ನಿಯಾಮಕನನ್ನು ಕುರಿತು ಯೋಚಿಸಿವೆ. ಈ ಸೃಷ್ಟಿಯ ಒಡೆಯ ಯಾರು? ಸೃಷ್ಟಿಕರ್ತ ಇದ್ದಾನೆಯೇ/ ಇಲ್ಲವೇ? ಇದ್ದರೆ, ಯಾವ...

Comments 10

  1. VIJAYAKUMAR KAMMAR
    Apr 7, 2024 Reply

    “ವಚನ ಗಾಯನ ಮತ್ತು ಹಿಂದುಸ್ತಾನಿ ಸಂಗೀತ” ಲೇಖನ ಚನ್ನಾಗಿದೆ. Specific date ಇದ್ದಿದ್ದರೆ ಇನ್ನೂ ಚಂದ ಇರತಿತ್ತು

  2. ದೇವರಾಜ್ ಚನ್ನಯ್ಯ
    Apr 12, 2024 Reply

    ಹಿಂದೂಸ್ಥಾನಿಯಲ್ಲಿ ವಚನಗಳ ಬಳಕೆಯನ್ನು ಗಮನಿಸಿದರೆ ತುಂಬಾ ಕಡಿಮೆ ಎಂದೇ ತೋರುತ್ತದೆ. ಸಂಗೀತ ಗುರುಗಳು ಸಹ ವಚನಗಳನ್ನು ಕಲಿಸುವುದು ಕೇವಲ ಹೆಸರಿಗೆ ಮಾತ್ರ ಒಂದೆರಡು ಹೇಳಿಕೊಡುತ್ತಾರೆ. ಇದರ ಹಿಂದೆ ದೊಡ್ಡ ಷಡ್ಯಂತ್ರವೇ ಇರುವುದನ್ನು ಗಮನಿಸಬಹುದು.

  3. Gowrishankara
    Apr 12, 2024 Reply

    ವಚನಗಳನ್ನೇ ಉಸಿರಾಗಿಸಿಕೊಂಡಿದ್ದ ಫ.ಗು.ಹಳಕಟ್ಟಿಯವರ ಪಾದಗಳಿಗೆ ನಮೋನಮಃ. ಅವರ ನಿಸ್ವಾರ್ಥ ಸೇವೆ ಬೆಲೆಕಟ್ಟಲಾಗದ್ದು.

  4. ಶೋಭಾದೇವಿ ಅಮರಶೆಟ್ಟಿ, ಧಾರವಾಡ
    Apr 16, 2024 Reply

    ವಚನಗಳನ್ನು ಫ. ಗು. ಹಳಕಟ್ಟಿ ಯವರು ಹಿಂದೂಸ್ತಾನಿ ಸಂಗೀತದಲ್ಲಿ ಹಾಡಿಸಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ…👌👌👍👍🙏🙏

  5. ಜಯಪ್ರಕಾಶ ಪಾಟೀಲ್
    Apr 20, 2024 Reply

    ಹಳಕಟ್ಟಿಯವರ ಕಾರ್ಯಗಳು ಅಸಾಧಾರಣ. ಏಕವ್ಯಕ್ತಿ ಪ್ರಯತ್ನಗಳು ಇಷ್ಟೊಂದು ವ್ಯಾಪಕವಾಗಿರುತ್ತವೆಯೇ?

  6. ಮಂಜುನಾಥ ಹಡಗಲಿ
    Apr 20, 2024 Reply

    ಕರ್ನಾಟಕದಲ್ಲಿ ಕನ್ನಡದಲ್ಲೇ ಇರುವ ವಚನಗಳನ್ನು ಸಂಗೀತಕ್ಕೆ ಅಳವಡಿಸಲು, ಸಂಗೀತ ಮಟ್ಟುಗಳಲ್ಲಿ ಪ್ರಯೋಗ ಮಾಡಲು ಈಗಲೂ ಸಂಗೀತಗಾರರು ಹೆಚ್ಚಿನ ಆಸಕ್ತಿ ವಹಿಸದೇ ಇರುವುದರ ಹಿಂದೆ ದೊಡ್ಡ ರಾಜಕೀಯವೇ ಅಡಗಿದೆ. ಗಾಯನದಲ್ಲಿ ವಚನಗಳು ಬೆರೆತು ಹೋಗಿದ್ದರೆ ಜನರ ಬಾಯಲ್ಲಿ ಅವು ಸುಲಭವಾಗಿ ಹರಿದಾಡಬಹುದಿತ್ತು. ಸಂಗೀತ ಮತ್ತು ನೃತ್ಯ ಲೋಕಕ್ಕೆ ವಚನಗಳು ಹೆಚ್ಚು ಹೆಚ್ಚು ಅಳವಡಲಿ. ಈ ರಾಜಕೀಯದ ಹೆಬ್ಬಂಡೆಯನ್ನು ಇನ್ನಾದರೂ ಬೇಧಿಸುವ ಶಕ್ತಿ ವಚನಪ್ರೀಯರಿಗೆ ಬರಲಿ.

  7. Rajashekhara G
    Apr 22, 2024 Reply

    1930 ರ ದಶಕದಲ್ಲಿ, ಹಿಂದೂಸ್ತಾನಿ ರಾಗಗಳಿಗೆ ಅನುಗುಣವಾಗಿ ವಚನಗಳನ್ನು ಸಂಯೋಜಿಸಲು ಹಲವಾರು ಪ್ರಯತ್ನಗಳನ್ನು ಮಾಡಲಾಯಿತು ಎನ್ನುವುದು ನನ್ನಲ್ಲಿ ಸಖೇದಾಶ್ಚರ್ಯವನ್ನುಂಟು ಮಾಡಿತು. ಮಲ್ಲಿಕಾರ್ಜುನ ಮನ್ಸೂರ್ ಅವರ ಕಂಠದಿಂದ ‘ಅಕ್ಕ ಕೇಳವ್ವಾ, ನಾನೊಂದ ಕನಸಕಂಡೆ’ ವಚನವನ್ನು ಬಾಲಕನಿದ್ದಾಗ ಕೇಳಿ ಮುದಗೊಂಡಿದ್ದ ನನಗೆ ವಚನಗಳು ಸಂಗೀತಕ್ಷೇತ್ರದಲ್ಲೇಕೆ ವ್ಯಾಪಕವಾಗಿಲ್ಲಾ ಎನ್ನುವ ಚಿಂತೆ ಮೊದಲಿನಿಂದ ಕಾಡುತ್ತಿತ್ತು.

  8. Shivaguna Murthy, Mumbai
    Apr 30, 2024 Reply

    1930ರ ದಶಕದಲ್ಲಿ ವಚನಗಳು ಅಗಾಧ ಪ್ರಮಾಣದಲ್ಲಿ ದೊರೆತಿರಲಿಲ್ಲ. ಆಗಿನ್ನೂ ಆ ಪ್ರಯತ್ನವನ್ನು ಹಳಕಟ್ಟಿಯವರು ಪ್ರಾರಂಬಿಸುವ ಜೊತೆಜೊತೆಗೆ ಅವುಗಳನ್ನು ಜನರಿಗೆ ತಲುಪಿಸಲು, ಅವರ ನಾಲಿಗೆಯಲ್ಲಿ ಹಾಡಾಗಿ ಜಾಗಪಡೆದುಕೊಳ್ಲಲು ನಡೆಸಿದ ಪ್ರಯತ್ನ ನಿಜಕ್ಕೂ ಅದ್ಭುತವಾದದ್ದು.

  9. Shantha B.Patil
    May 1, 2024 Reply

    ಜನಪದ ಶೈಲಿಯಲ್ಲಿ ವಚನಗಳನ್ನು ಹಾಡಲಾಗುತ್ತಿದೆ. ಆದರೆ ಹಿಂದೂಸ್ತಾನಿಗೆ ಅಳವಡಿಸುವುದು ಅಷ್ಟೇ ಮುಖ್ಯವೆನಿಸುತ್ತದೆ.

  10. ನಾಗೇಶ್ ಇಳಕಲ್
    May 1, 2024 Reply

    ನನ್ನದೊಂದು ಕುತೂಹಲದ ಪ್ರಶ್ನೆ ಇದೆ ಸರ್. ವಚನಗಳ ಮೂಲ ರಾಗ ಯಾವುದು? ಅವುಗಳನ್ನು ಶರಣರು ಹಾಡುತ್ತಿದ್ದರೆ ಅಥವಾ ಓದುತ್ತಿದ್ದರೆ? ಆ ಮಾಹಿತಿ ವಚನಗಳಲ್ಲೇನಾದರೂ ಸಿಗಬಹುದೇ?

Leave a Reply to Rajashekhara G Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಮೈಸೂರು ಜನಗಣತಿಗಳು: ತಪ್ಪಿದ ಸುವರ್ಣಾವಕಾಶವೆ?
ಮೈಸೂರು ಜನಗಣತಿಗಳು: ತಪ್ಪಿದ ಸುವರ್ಣಾವಕಾಶವೆ?
April 6, 2023
ನಡುವೆ ಸುಳಿವಾತ್ಮ…
ನಡುವೆ ಸುಳಿವಾತ್ಮ…
April 6, 2024
ಕರ್ತಾರನ ಕಮ್ಮಟ
ಕರ್ತಾರನ ಕಮ್ಮಟ
January 4, 2020
ಮರೆಯಲಾಗದ ಜನಪರ ಹೋರಾಟಗಾರ
ಮರೆಯಲಾಗದ ಜನಪರ ಹೋರಾಟಗಾರ
May 10, 2023
ಪ್ರೇಮ ಮತ್ತು ದ್ವೇಷ
ಪ್ರೇಮ ಮತ್ತು ದ್ವೇಷ
July 10, 2025
ಈ ಕನ್ನಡಿ
ಈ ಕನ್ನಡಿ
March 6, 2024
ಎರವಲು ಮನೆ…
ಎರವಲು ಮನೆ…
August 10, 2023
ತತ್ವಪದಗಳ ಜಾಡು ಹಿಡಿದು…
ತತ್ವಪದಗಳ ಜಾಡು ಹಿಡಿದು…
October 6, 2020
ವಚನಗಳಲ್ಲಿ ವೈಜ್ಞಾನಿಕ ಚಿಂತನೆ
ವಚನಗಳಲ್ಲಿ ವೈಜ್ಞಾನಿಕ ಚಿಂತನೆ
March 6, 2024
ಹಾಯ್ಕುಗಳು
ಹಾಯ್ಕುಗಳು
November 10, 2022
Copyright © 2025 Bayalu