ಹೀಗೊಂದು ತಲಪರಿಗೆ (ಭಾಗ- 3)
ಸಾಮಾನ್ಯರಲ್ಲಿ ಸಾಮಾನ್ಯರಂತೆ ಕಾಣುತ್ತಿದ್ದ ಸ್ಮಶಾನವಾಸಿಯ ಒಂದೊಂದು ಮಾತುಗಳೂ ಅಸಾಮಾನ್ಯವಾಗಿದ್ದವು. ಸಾಧಕ ಜೀವನದಲ್ಲಿ ಅಲೆದಲೆದು ತಾನು ತುಳಿದು ಬಂದ ಹಾದಿಯಲ್ಲಿ ಪಡೆದ ಪ್ರಸಾದವನ್ನು ಉಣಿಸುವಂತಿದ್ದ ಅವರ ನುಡಿಗಳಲ್ಲಿ ತಂದೆ ಮಗುವಿಗೆ ತಿಳಿಹೇಳುವ ಅಕ್ಕರೆ ಕಾಣುತ್ತಿತ್ತು. ಹಾದಿ ತಪ್ಪಿ ಅಲೆಯುತ್ತಿದ್ದ ಕರುವನ್ನು ನಿಜದ ನೆಲೆಗೆ ಹಚ್ಚುವ ಕಾಳಜಿ ಇತ್ತು. ಎದೆಯ ಬನಿಯನ್ನು ಎಚ್ಚರಿಸುವಂತಿದ್ದ ಅವರ ಅಪಾರ ವಾತ್ಸಲ್ಯಕ್ಕೆ ನನ್ನ ಮನಸ್ಸು ಮೂಕವಾಗಿ ಹೋಗಿತ್ತು.
ವಚನಗಳಲ್ಲಿ ಗುರು-ಲಿಂಗ-ಜಂಗಮ- ಪಾದೋದಕ- ಪ್ರಸಾದ ಶಬ್ದಗಳು ಹಾಸುಹೊಕ್ಕಾಗಿವೆ. ಶರಣ ಮಾರ್ಗದ ದಿಕ್ಕು ತೋರಿಸಬೇಕಿದ್ದ ಇವು ಕಾಲಾಂತರದಲ್ಲಿ ಆರೋಪಿಸಲ್ಪಟ್ಟ ಅರ್ಥ ವ್ಯಾಖ್ಯಾನಗಳಿಂದ ಗೊಂದಲಗಳನ್ನು ಸೃಷ್ಟಿಸಿವೆ. ಅಷ್ಟೇ ಅಲ್ಲ, ಅವು ಅನೇಕ ಅಧ್ಯಯನಕಾರರ ಉತ್ಸಾಹದ ಬರವಣಿಗೆಗಳಲ್ಲಿ, ಭಾಷಣಗಳಲ್ಲಿ ತಮ್ಮ ಮೂಲಸ್ವರೂಪದಿಂದ ಗಾಬರಿ ಹುಟ್ಟಿಸುವಷ್ಟು ಸಂಪೂರ್ಣ ಭಿನ್ನವಾಗುತ್ತಾ ಬಂದಿವೆ. ಆರಂಭಿಕ ದಿನಗಳಿಂದಲೂ ಶರಣರ ಗುರು-ಲಿಂಗ-ಜಂಗಮದಂತಹ ಹಲವಾರು ಶಬ್ದ ಪ್ರಯೋಗಗಳ ನಿಜವಾದ ಅಂತರಾಳವನ್ನು ಅರಿಯಬೇಕೆಂಬ ನನ್ನ ಹಂಬಲಕ್ಕೆ ಈಗ ಕಾಲ ಕೂಡಿ ಬಂದಿತ್ತು.
ಮಂಗಳಾ: ಲಿಂಗ ಮತ್ತು ಲಿಂಗಪೂಜೆಯ ಕುರಿತು ನೀವು ಏನನ್ನು ಹೇಳುತ್ತೀರಿ?
ಸ್ಮಶಾನವಾಸಿ: ಯಾರೋ ಹೇಳಿದ್ದನ್ನು ನಾನು ನಂಬುವವನಲ್ಲ, ಯಾರೋ ಹೇಳಿದ ಪೂಜೆಯನ್ನು ಮಾಡುವವನೂ ಅಲ್ಲ. ಲಿಂಗವನ್ನು ಕಂಡುಹಿಡಿಯಲಾಗದಿದ್ದಲ್ಲಿ ಲಿಂಗದ ಪ್ರಶ್ನೆ ಯಾಕೆ?
ಶರೀರದಲ್ಲಿ ಷಡಾಧಾರ ಚಕ್ರವುಂಟೆಂಬರು.
ಆಧಾರವೊಂದರಿಂದ ಆದುದನರಿಯದೆ ಆರುಂಟೆಂದು ಬೇರೆ ಕಲ್ಪಿಸಬಹುದೆ?
ಅದಕ್ಕೆ ದೃಷ್ಟ:
ಹುತ್ತದ ಬಾಯಿ ಹಲವಾದಡೆ ಒಡಲೊಂದೆ ಘಟಭೇದ.
ಆಧಾರ ನಾನೆಂಬುದನರಿತಲ್ಲಿ ಷಡಾಧಾರ ನಿಂದಿತ್ತು.
ಅದು ತನ್ನಯ ಚಿತ್ತದ ಭೇದವಲ್ಲದೆ ವಸ್ತುವನರಿವ ಭೇದವಲ್ಲ.
ಹಲವು ಓಹರಿಯಲ್ಲಿ ತಿಳಿದು ನೋಡುವ ಒಬ್ಬನೆ ಮನೆಯೊಡೆಯ.
ಆ ಹೊಲಬನರಿತಲ್ಲಿಯೆ ನಿಂದುದು, ಸದಾಶಿವಮೂರ್ತಿಲಿಂಗದ ಅಂಗ.
ಇದು ಲಿಂಗವೆಂದು ಕೆಲವರು ಕೈಯಲ್ಲಿ ಹಿಡಿದು ಕೂತಿಹರು; ನಿಜ ಲಿಂಗವನ್ನಾಗಲಿ, ನಿಜ ಲಿಂಗಪೂಜೆಯ ವಿಧಾನವನ್ನಾಗಲಿ ತಿಳಿಯುವ ಸಾಹಸ ಮಾಡುವುದಿಲ್ಲ. ಅರಿವಿನ ಮಾರಿತಂದೆಯವರು ಲಿಂಗ ಅಂಗದ ಸ್ವಸ್ವರೂಪದ ಬಗ್ಗೆ ತುಂಬಾ ಸೊಗಸಾಗಿ ಅರುಹುವ ವಚನವಿದು. ಈ ವಚನವನ್ನು ಅವಲೋಕಿಸಿ ನೋಡಿ-
ಶರೀರದಲ್ಲಿ ಷಡಾಧಾರ ಚಕ್ರವುಂಟೆಂಬರು- ತಾವು ಜ್ಞಾನಿಗಳೆಂದು, ತಾವು ತಿಳಿಯುವ ಹಠಯೋಗವನ್ನು ಅನುಸರಿಸುವೆವೆಂದು ಕೊಚ್ಚಿಕೊಳ್ಳುವವರು ಶರೀರದೊಳಗೆ ಆಧಾರ, ಸ್ವಾದಿಷ್ಟ, ಮಣಿಪೂರಕ, ಆಗ್ನೇಯ, ಅನಾಹತ, ವಿಶುದ್ಧ, ಸಹಸ್ರಾರ ಚಕ್ರಗಳಿವೆ ಎಂದು ಹೇಳುತ್ತಾರೆ.
ಆಧಾರವೊಂದರಿಂದ ಆದುದನರಿಯದೆ- ಸಕಲ ಜೀವಿಗಳಿಗೂ ಆಧಾರವಾಗಿರುವಂತಹದ್ದು ಪ್ರಾಣ. ಜೀವಿಯ ಒಳಗೆ ಪ್ರಾಣಮಯವಿರುವಂತೆ ಜೀವಿಯ ಹೊರಗೂ ಪ್ರಾಣಮಯವನ್ನು ಪೋಷಿಸುವ ಅಂಶಗಳಿವೆ.
ಆರುಂಟೆಂದು ಬೇರೆ ಕಲ್ಪಿಸಬಹುದೆ?- ಈ ಪ್ರಾಣದ ಮಹತ್ವದಿಂದ ಆದದ್ದರೊಳಗೆ ಆರು ಚಕ್ರಗಳಿವೆ ಎಂದು ಕಲ್ಪಿಸಿಕೊಳ್ಳುವುದು ನ್ಯಾಯೋಚಿತವೇ?
ಅದಕ್ಕೆ ದೃಷ್ಠ- ಪ್ರಕೃತಿಯಿಂದಾದುದಕ್ಕೆ ಪ್ರತ್ಯಕ್ಷ ಪ್ರಮಾಣವೇನೆಂದರೆ-
ಹುತ್ತದ ಬಾಯಿ ಹಲವಾದಡೆ ಒಡಲೊಂದೆ ಘಟಭೇದ- ಹುತ್ತದಲ್ಲಿ ಅನೇಕಬಿಲಗಳು ತೆರೆದುಕೊಂಡಿದ್ದರೂ ಹುತ್ತದ ಪೂರ್ತಿ ಒಡಲು ಮಣ್ಣಿಂದಾದುದೇ ಅಲ್ಲವೇ? ಘಟಭೇದ- ಎಂಬ ಶಬ್ದವನ್ನಿಲ್ಲಿ ಗಮನಿಸಬೇಕು. ಘಟ ಎಂದರೆ ಮಣ್ಣಿನಿಂದ ಮಾಡಿದ ಮಡಕೆ. ಮಡಕೆಗಳು ವಿನ್ಯಾಸದಲ್ಲಿ ಹಲವಿದ್ದರೂ ಅವೆಲ್ಲವೂ ಮಣ್ಣಿಂದಾಯಿತು ಎಂಬ ಉಪಮೆ.
ಆಧಾರ ನಾನೆಂಬುದನರಿತಲ್ಲಿ ಷಡಾಧಾರ ನಿಂದಿತ್ತು- ನಾನು ಪ್ರಾಣನಾಗಿದ್ದೇನೆ. ಪ್ರಾಣದ ಹೊರತಾಗಿ ಇರುವ ಸಂಕಲ್ಪ- ವಿಕಲ್ಪ- ಕಲ್ಪನಾ ಲೋಕದ ಮನೋ ಸಂರಚನೆಗಳು ನಾನಲ್ಲ. ಏಕೆಂದರೆ ನಾನು ಪ್ರಾಣವಿಲ್ಲದಿದ್ದಾಗ ಯಾವ ಮನಸ್ಸಿನ ಕಲ್ಪನೆಗಳಿಗೂ ಅಸ್ತಿತ್ವವಿಲ್ಲ. ಮನಸ್ಸೆಂಬುದು ಪ್ರಾಣದ ಅವಲಂಬಿ ಮಾತ್ರ. ಸಕಲ ಜೀವಿಗಳಿಗೂ ಆಧಾರವಾಗಿರುವಂತಹದ್ದು ಪ್ರಾಣವೇ ಹೊರತು ಮನಸ್ಸಿನ ಭಾವಗಳಲ್ಲ ಎಂಬ ಸತ್ಯ ಅರಿವಾದಾಗ ಷಾಡಾಧಾರವು ಮಾನವ ನಿರ್ಮಿತ ಭಾವವೆಂದು ನಿರಾಕರಣೆಯಾಗುತ್ತದೆ ಮತ್ತು ನಿರಸನವಾಗುತ್ತದೆ.
ಅದು ತನ್ನ ಚಿತ್ತದ ಬೇಧವಲ್ಲದೆ ವಸ್ತುವರಿತ ಬೇಧವಲ್ಲ- ಪಂಚ ಜ್ಞಾನೇಂದ್ರಿಯಗಳ ಕಿಂಡಿಗಳ ಮೂಲಕ ಎಲ್ಲವನ್ನೂ ಚಿತ್ತ ತನ್ನದೇ ಆದ ದೃಷ್ಟಿಕೋನಗಳಿಂದ ನೋಡುತ್ತಿದೆಯಾದ್ದರಿಂದ ಚಿತ್ತದಲ್ಲಿ ಬೇಧಗಳು ಏರ್ಪಟ್ಟವು.
ಲೋಕ ಸ್ಥಿತಿಯೊಂದು ಹೇಗೆ ರೂಪುಗೊಂಡಿದೆಯೆಂದರೆ, ಈ ಅನಂತವಾದ ಭೌತಿಕ ವಸ್ತು ಪ್ರಪಂಚವು ಸಂಬಂಧದಿಂದ ಒಂದೇ ಆಗಿದೆ. ಈ ಏಕೋರೂಪದ ಸಂಬಂಧವನ್ನರಿಯದೇ ಚಿತ್ತವು ತನ್ನ ವಿಷಯ ಬೇಧದ ಮೂಲಕ ಎಲ್ಲವನ್ನೂ ವಿಂಗಡಿಸಿಕೊಂಡು ಕೂತಿದೆ.
ಈ ಸಕಲ ಚರಾಚರ ಜಗತ್ತಿನಲ್ಲಿ ಯಾವ ಜೀವಿಯನ್ನಾಗಲೀ ವಸ್ತುವನ್ನಾಗಲೀ ಇದು ಬೇರೆಯೆಂದು ಬೇರ್ಪಡಿಸಲಾಗದು. ಹಾಗೆ ಬೇರ್ಪಡಿಸಿದಾಗ ಯಾವ ಜೀವಿಗಾಗಲಿ, ವಸ್ತುವಿಗಾಗಲಿ ಅಸ್ತಿತ್ವವೇ ಇಲ್ಲ. ಗಾಳಿಯಿಂದ ಬೆಂಕಿಯನ್ನಾಗಲಿ, ಬೆಂಕಿಯಿಂದ ಗಾಳಿಯನ್ನಾಗಲಿ, ನೀರಿನಿಂದ ಭೂಮಿಯನ್ನಾಗಲಿ, ಭೂಮಿಯಿಂದ ನೀರನ್ನಾಗಲಿ, ಆಕಾಶದಿಂದ ಭೂಮಿಯನ್ನಾಗಲಿ, ಭೂಮಿಯಿಂದ ಆಕಾಶವನ್ನಾಗಲಿ ಬೇರ್ಪಡಿಸಲಾಗದು. ಗಾಳಿಯಿಂದ ಬೆಂಕಿ; ಬೆಂಕಿಯಿಂದ ಗಾಳಿ, ಭೂಮಿಯಿಂದ ನೀರು, ನೀರಿನಿಂದ ಭೂಮಿ; ಆಕಾಶದಿಂದ ಭೂಮಿ, ಭೂಮಿಯಿಂದ ಆಕಾಶ… ಹೀಗೆ ಒಂದರ ಸಂಬಂಧದಲ್ಲಿ ಮತ್ತೊಂದು ಇರಲು ಸಾಧ್ಯವಾಗಿದೆ. ಹಾಗೇ ಈ ಪಂಚಭೌತಿಕ ವಸ್ತುಗಳ ಮಧ್ಯೆ ಇರುವ ಅನ್ಯೋನ್ಯ ಸಂಬಂಧದಿಂದ ‘ಜೀವ’ ಸತ್ಯವೂ ಸಾಧ್ಯಗೊಂಡಿದೆ. ಆದ್ದರಿಂದ ಸಂಬಂಧದಿಂದ ಎಲ್ಲವೂ ಒಂದೇ (ಅದ್ವಯ) ಆಗಿವೆ. ಎಲ್ಲವೂ ಮತ್ತು ಎಲ್ಲರೂ ಈ ಅನಂತ ವಿಶ್ವದ ಅವಿಭಾಜ್ಯ ಅಂಗಗಳು ಅಥವಾ ಆಗುವಿಕೆಯ ಅಧೀನಾಂಶಗಳು. ಆದರೆ ವಿಚಿತ್ರವೆಂದರೆ ನಮ್ಮ ಚಿತ್ತವು ಇದು ಪರಮಾತ್ಮ, ಇದು ಜೀವಾತ್ಮ, ಪರಮಾತ್ಮ ಪವಿತ್ರ, ಜೀವಿ ಅಪವಿತ್ರ ಎಂಬುದರಿಂದ ಮೊದಲ್ಗೊಂಡು ಸಕಲವನ್ನೂ ಬೇಧದಿಂದಲೇ ಕಾಣುತ್ತಿದೆ. ಒಳ್ಳೆಯದು * ಕೆಟ್ಟದ್ದು; ಜ್ಞಾನಿ * ಅಜ್ಞಾನಿ; ಮೋಕ್ಷ * ಬಂಧನ… ಹೀಗೆ ಅನಂತಕೋಟಿ ದ್ವಂದ್ವ ನೀತಿಗಳನ್ನೂ ಅವುಗಳಿಗೆ ಸಂಬಂಧಿಸಿದ ವಿಷಯ ಕೋಶಗಳನ್ನೂ ಸೃಷ್ಟಿಸಿಕೊಂಡು ವಿಷಯ ಪ್ರಾಧಾನ್ಯತೆಯ ಆಧಾರದ ಮೇಲೆ ಎಲ್ಲಗಳೊಂದಿಗೆ ಇರುವ ಅಂತರ್ ಸಂಬಂಧವನ್ನು ಅಲ್ಲಗಳೆದು ತಾರತಮ್ಯ ಧೋರಣೆಗೆ ತಗುಲಿಕೊಂಡಿದೆ. ಆದ್ದರಿಂದ ಇದು ಚಿತ್ತದ ಲೀಲಾ ಬೇಧವೇ ವಿನಾ ವಸ್ತು ಬೇಧವಲ್ಲ. ವಸ್ತುವೊಂದು ಸಂಬಂಧದಿಂದ ಸಾಧ್ಯವಾಗಿದೆ.
ಹಲವು ಓಹರಿಯಲ್ಲಿ ತಿಳಿದು ನೋಡುವ ಒಬ್ಬನೇ ಮನೆಯೊಡೆಯ- ಹಲವು ವಿಭೇದಗಳನ್ನು ಸೃಷ್ಟಿಸಿಕೊಂಡು ತಿಳಿದು ನೋಡುವ ಒಬ್ಬನೇ ಮನೆಯೊಡೆಯ, ಅವನಾರೆಂದರೆ ಚಿತ್ ಸ್ವರೂಪಿ ಮನಸ್ಸು.
ಆ ಹೊಲಬನರಿತಲ್ಲಿಯೇ ನಿಂದುದು- ಈ ಚಿತ್ತದ ಹೊಲಬು ತಿಳಿದ ಕ್ಷಣದಲ್ಲಿಯೇ ಅದು ಮಿಥ್ಯವೋ ಸತ್ಯವೋ ಅರಿವಾಗಿ ಚಿತ್ತ ಚಲನವು ನಿಂತು ಹೋಗುತ್ತದೆ.
ಈ ಚಿತ್ತದ ಬೇಧದ ಚಲನವು ಅಚಲವಾದಾಗ ಉಳಿದದ್ದು ಏನಿದೆಯೋ ಅದು ಸದಾಶಿವ ಲಿಂಗದ ಅಂಗ!!! ಅದರಿಂದಾಗಿ ಬಸವಣ್ಣನವರು, “ದಂದುಗ ಬಿಡದು ಮನದ ಸಂದೇಹ ಹಿಂಗದಾಗಿ, ಮುಂದೆ ಲಿಂಗವ ಕಂಡಿಹೆನೆಂಬುದು ಹುಸಿ ನೋಡಾ” ಎಂದರು. ದಂದುಗ ಎಂದರೆ ದ್ವಂದ್ವ ಎಂದರ್ಥ! ತರತಮ ಬೇಧ ಎಂದರ್ಥ! ಎಲ್ಲಿಯವರೆಗೂ ತರತಮ ಧೋರಣೆ ಅಳಿಯುವುದಿಲ್ಲವೋ ಅಲ್ಲಿಯವರೆಗೂ ಲಿಂಗಾನುಭವ ಅಳವಡದು. ಅಭಿಪ್ರಾಯ ಬೇಧವೇ ಚಂಚಲ. ಅದು ಸದಾ ಬೀದಿ ಬೀದಿ ಅಲೆಯುವ ಹುಚ್ಚು ನಾಯಿ ಇದ್ದಂತೆ. ಅದು ಎಂದಿಗೂ ವಿರಮಿಸಿಕೊಳ್ಳದೆ ಅಲೆಯುವ ಅಲೆಮಾರಿ ನಾಯಿ! ಈ ಹುಚ್ಚು ನಾಯಿಯಂತೆ ಬೀದಿಬೀದಿ ಅಲೆಯುವ ಚಿತ್ತವನ್ನು ಹೊತ್ತುಕೊಂಡು ನಾನು ಲಿಂಗವ ಕಂಡೆ ಎಂಬುದು ಮಹಾಸುಳ್ಳು!!
ಲಿಂಗವೆಂದರೆ ಇದೆಯೆಂಬುದೂ ಅಲ್ಲ, ಅಲ್ಲವೆಂಬುದೂ ಅಲ್ಲ. ಏಕೆಂದರೆ ಅದು ಸದಾ ಆಗುವಿಕೆ. ಆಗುವಿಕೆಯೆಂದರೆ ಸದಾ ಹೊಸತನದೊಂದಿಗಿನ ಬದಲಾವಣೆ; ಬದಲಾಗುವಿಕೆ ಎಂದರೆ ಅದೇ ಜಂಗಮ. ಅರಿವಾದರೆ ತಿಳಿದುಕೊ, ಇಲ್ಲವಾದರೆ ಬಾಯಿಮುಚ್ಚಿಕೊಂಡು ಸುಮ್ಮನಿರು. ನಿನ್ನ ಹುಚ್ಚು ನಾಯಿ ಬುದ್ಧಿಯಿಂದ ಅದನ್ನು ತಿಳಿಯಲಾಗದು. ವಚನಗಳಲ್ಲಿ ಲಿಂಗ ಸಿಕ್ಕಿ ಬಿಡುತ್ತದೆಂದು ನೋಡಬೇಡ., ಮತಿ ಭ್ರಾಂತಿಯಾಗುತ್ತದೆ. ಏಕೆಂದರೆ ಮತ್ತೆ ನಿನ್ನ ಅಭಿಪ್ರಾಯ ಬೇಧಗಳಿಂದಲೇ ವಚನಗಳನ್ನು ನೋಡಿಕೊಂಡು ದಿಗ್ಭ್ರಾಂತಳಾಗುತ್ತೀಯಾ, ಜೋಕೆ!!
ಮಂಗಳಾ: ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ,
ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀಚರಣ,
ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮಕುಟ,
ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ, ಕೂಡಲಸಂಗಮದೇವಯ್ಯಾ,
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ- ಎಂದರಲ್ಲಾ ಬಸವಣ್ಣನವರು. ನೀವು ಹೇಳಿದ ವಿವರಣೆ ಇಲ್ಲಿ ಹೇಗೆ ತಾಳೆಯಾಗುತ್ತದೆ?
ಸ್ಮಶಾನವಾಸಿ: ಇಲ್ಲಿ ಸುಸ್ಪಷ್ಟವಾಗಿಯೇ ಬಸವಣ್ಣ ಹೇಳಿದ್ದಾರೆ. ಚಿತ್ತವೆಂಬುದು ಪ್ರಮಾಣ! ಅದಕ್ಕೆ ಮಿತಿಗಳಿವೆ. ಆದರೆ ಕೂಡಲಸಂಗಯ್ಯನೆಂಬ ಲಿಂಗ ಅಪ್ರಮಾಣ! ಆದರೆ ನೀವೇನು ಮಾಡುತ್ತಿದ್ದೀರಿ? ನಿಮ್ಮ ಲಿಂಗ ಕಣ್ಮನಗಳಿಗೆ ಗೋಚರವಾಗುವಂತಹದ್ದು. ನಿಮ್ಮ ಲಿಂಗ ಪ್ರತಿಮಾ ಸ್ವರೂಪಿ. ಪ್ರತಿಮೆಯಲ್ಲದಾ ಅಪ್ರತಿಮ ಲಿಂಗ ಸ್ವರೂಪದ ಕುರುಹಾಗಿ ನಿಮ್ಮ ಕೈಗದನ್ನು ಕೊಟ್ಟು ಹೋದರು. ನೀವು ಆ ಸೀಮಿತ ಲಿಂಗದಲ್ಲೇ ಹೂತು ಹೋದಿರಿ. ಅಪ್ರತಿಮವನ್ನು ಜಗತ್ಕಾರಣವೆಂದು ಅಪವ್ಯಾಖ್ಯಾನಿಸಿದಿರಿ!! ಲಿಂಗವು ಕಾರಣವೆಂದು ವಚನದಲ್ಲಿ ಇದೆಯೇ? ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ- ಎಂಬ ಮಹತ್ವವನ್ನೇ ತಪ್ಪಾಗಿ ಗ್ರಹಿಸಿಕೊಂಡಿರಿ. ಅಸಲಿಗೆ ಕರಸ್ಥಲ- ಎಂದರೆ ಅಂಗೈ ಅಲ್ಲ, ಕೈಹಿಡಿತ ಎಂದಾಗುತ್ತದೆ. ಯಾವ ಹಿಡಿತ? ಸತ್ಯವನ್ನು ಸಾಧಿಸಿಕೊಂಡ ಹಿಡಿತವದು! ಭಕ್ತಿಯ ಹಿಡಿತಕ್ಕೆ ಸಿಗುವಂತಹದ್ದು ಎಂದರು. ನಿಮ್ಮ ಅರ್ಥದಲ್ಲಿ ಭಕ್ತಿ ಏನಾಗಿದೆ? ಬಸವಣ್ಣನವರ ವಚನದಲ್ಲಿ ಭಕ್ತಿಯ ಕುರಿತು ಸ್ಪಷ್ಟತೆ ಇದೆ ನೋಡಿದ್ದೀರಾ?
ಭಕ್ತಿಯೆಂಬುದು ಅನಿಯಮ ನೋಡಯ್ಯಾ,
ಅದು ವಿಷದ ಕೊಡ; ತುಡುಕಬಾರದು,
ಅಂಗಕ್ಕೆ ಹಿತವಲ್ಲ, ಸಿಂಗಿ ನೋಡಯ್ಯಾ,
ಅದು ವಿಚಿತ್ರ, ವಿಸ್ಮಯ ಕೂಡಲಸಂಗಮದೇವಾ.
ಭಕ್ತಿಯೆಂಬುದು ನಿಮಗೆ ಚೊಕ್ಕವಾಗಿ ಧೂಪದೀಪ ಪುಷ್ಪಗಳ ಸುವಾಸನೆಯಲ್ಲಿ ಮಾಡುವ ಮಧುರಾತಿ ಮಧುರವಾದ ಸುಕರ್ಮ! ಕ್ಷಣಕಾಲ ಸಂಕಟಗಳಿಂದ ಪಲಾಯನವಾಗಲು ಮಾಡುವ ಪರಿಣಾಮರಹಿತ ಕರ್ಮವದು! ಬಸವಣ್ಣನವರು ಹೇಳಿದ ಭಕ್ತಿ ಅಂಗಕ್ಕೆ ಹಿತವಲ್ಲ ಎನ್ನುತ್ತಾರೆ. ಏಕೆಂದರೆ ಈ ಮನುಷ್ಯ ಸಮಾಜದ ಪ್ರವಾಹದಲ್ಲಿ ಎದುರಾಗಿ ಈಜುವ ಪ್ರಯಾಣವದು!
ವಿಷದ ಕೊಡ- ಎಂದರು, ಏಕೆಂದರೆ ಅದು ನಿನ್ನ ಅಹಂಕಾರಕ್ಕೆ ವಿಷವಾಗಿ ಪರಿಣಮಿಸಿ ಅಹಂಕಾರವನ್ನು ಕೊಂದು ಹಾಕುತ್ತದೆ. ಶತಶತಮಾನಗಳಿಂದ ಬಳುವಳಿಯಾಗಿ ಬಂದು ನಿನ್ನ ಮನಸ್ಸಿನಲ್ಲಿ ಸಂಗ್ರಹಗೊಂಡಿರುವ ಕೊಳೆಯನ್ನು ಪರಿಶುದ್ಧಗೊಳಿಸಿಕೊಳ್ಳುವ ಮಹಾ ಚಾಕರಿಯದು!! ಇಂತಹ ವಿಶಾಲವಾದ ಭಕ್ತಿಯನ್ನು ಎಷ್ಟೊಂದು ಸಣ್ಣದಾಗಿ ನೋಡಲನುವಾಗಿದ್ದೀರಿ ಎಂಬುದನ್ನು ನೀವೇ ತಿಳಿದು ನೋಡಬೇಕು.
ಪರಿಶುದ್ಧಗೊಂಡ ನಂತರ ಪಡೆದ ಆ ವಿಸ್ಮಯ ಶರಣರ ಹಾದಿ ಸವೆಸಿದವನಿಗೇ ತಿಳಿವುದೇ ವಿನಾ ಡಂಬಾಚಾರದ ಭಕ್ತರಿಗಲ್ಲ ಎಂದು ಸ್ಪಷ್ಟವಾಗುವುದಿಲ್ಲವೇ?
ಲಿಂಗದ ಕುರಿತಾಗಿ ಇನ್ನೊಂದು ಅದ್ಭುತ ವಚನವಿದೆ-
ಎಲ್ಲರ ಪ್ರಾಣಲಿಂಗ ಒಂದೆ ಕಂಡಯ್ಯಾ,
ಎನ್ನ ಪ್ರಾಣಲಿಂಗ ಬೇರೆ ಕಂಡಯ್ಯಾ.
ಕೂಡಲಸಂಗಮದೇವ ಕೇಳಯ್ಯಾ,
ಜಂಗಮವೆನ್ನ ಪ್ರಾಣಲಿಂಗ ಕಂಡಯ್ಯಾ.
ಎಲ್ಲರ ಪ್ರಾಣಲಿಂಗ ಒಂದೆ ಕಂಡಯ್ಯಾ- ಎಲ್ಲಾ ಮಾನವರು ಪ್ರಾಣವನ್ನು ಎಲ್ಲಿಂದ ಲೆಕ್ಕ ಹಾಕುತ್ತಾರೆ? ಜನನದಿಂದ! ತಾನು ಜನಿಸಿದ್ದು ಜೀವಿಸಿದ್ದು ಮತ್ತು ಮರಣ ಹೊಂದಿದ ಕಾಲಕ್ಕೆ ಅದು ಮುಗಿದು ಹೋಗುತ್ತದೆ.
ಎನ್ನ ಪ್ರಾಣಲಿಂಗ ಬೇರೆ ಕಂಡಯ್ಯಾ- ಆದರೆ ನಾನು ಹಾಗೆ ಸಂಕುಚಿತ ಭಾವದಲ್ಲಿ ಲೆಕ್ಕ ಹಾಕುವವನಲ್ಲ. ನನ್ನ ಲೆಕ್ಕ ಅನಂತವಾದ, ಅಗಣಿತವಾದ, ಅವಾಚ್ಯವಾದ ಲೆಕ್ಕವಾಗಿದೆ.
ಎನ್ನ ಪ್ರಾಣಲಿಂಗ ಬೇರೆಯದೇ ಇದೆ, ಅದು ಜಂಗಮ ಸ್ವರೂಪಿ!!! ಜಂಗಮ ಎಂದರೆ ಏನು ಗೊತ್ತೆ? ಸದಾ ಗತಿಗಳನ್ನು ಬದಲಾಯಿಸಿಕೊಳ್ಳುತ್ತಾ, ಕ್ಷಣಕ್ಷಣ ಬದಲಾವಣೆಯಲ್ಲಿರುವ ಚಲನಶೀಲ ಅಪ್ರತಿಮ ಅಗೋಚರ ಪ್ರಕ್ರಿಯೆಯಲ್ಲಿ ಬಂದಿರುವ ಪ್ರಾಣವಾದ್ದರಿಂದ ಅದಕ್ಕೆ ಪ್ರಾರಂಭವಾಗಲಿ, ಅಂತ್ಯವಾಗಲಿ ಇಲ್ಲ. ನಾನು ಎಂಬ ಪ್ರಾಣಲಿಂಗ ಇಲ್ಲವಾಗುವುದೂ ಇಲ್ಲ. ಇದೆ ಎಂದಾಗಲಿ ಅಲ್ಲ. ಏಕೆಂದರೆ ಚಲನಶೀಲತೆಯಲ್ಲಿ ಗತಿ ಎಂಬುದೇ ಇಲ್ಲ. ನಾನು ಸತ್ತಾಗ ಉಳಿದ ಎಲ್ಲಾ ಭೌತವಸ್ತುಗಳೂ ಭೌತಿಕದಲ್ಲೇ ಲಯವಾಗಿ ಮತ್ತೊಂದು ರೂಪದಲ್ಲಿ ಉಂಟಾಗಲು ಪ್ರೇರಣೆಯನ್ನು ಪಡೆಯುತ್ತವೆ. ಗೊಬ್ಬರ ಬೆರೆತ ಮಣ್ಣಿನಲ್ಲಿ ಬಿದ್ದ ಬೀಜ ಕಾಳುಗಳಾಯಿತಲ್ಲ, ಕಾಳು ಆಹಾರವಾಯಿತು, ಆಹಾರ ಗೊಬ್ಬರವಾಗಿ ಮಣ್ಣನ್ನೇ ಸೇರಿ ಮತ್ತೊಂದಕ್ಕೆ ಜೀವ ದ್ರವ್ಯವಾಗುವಾಗ ನಾನು ಸದಾ ಪ್ರಾಣಲಿಂಗದ ಮಹಾಪ್ರಜ್ಞೆಯಲ್ಲಿ ಬದಲಾಗುತ್ತಿರುವುದೇ ನನ್ನ ಗತಿಯಾಗಿರುವುದರಿಂದ ನನಗೆ ಮರಣವೂ ಇಲ್ಲ, ಜನನವೂ ಇಲ್ಲ. ಸ್ವರ್ಗ ನರಕಾದಿಗಳ ಭಯವೂ ಇಲ್ಲ. ಆದ್ದರಿಂದಲೇ ಶರಣರು ಆ ಮಹಾ ಪ್ರಾಣಲಿಂಗವನ್ನು ನಿತ್ಯ ನಿರಂಜನ ಪರಂಜ್ಯೋತಿ ವಸ್ತುವೆಂದು ಕರೆದರು. ಪ್ರಾಣಲಿಂಗದ ನಿತ್ಯ ನಿರಂಜನ ತತ್ವಕ್ಕೆ ಯಾವ ಧರ್ಮಗಳ, ದೇವರುಗಳ, ಅರ್ಚನೆಗಳ ಹಂಗಿಲ್ಲ. ಅದು ಯಾವುದಕ್ಕೂ ಬಗ್ಗುವುದಿಲ್ಲ, ಜಗ್ಗುವುದಿಲ್ಲ. ಸಚರಾಚರವೆಲ್ಲ ನನ್ನ ಕುಟುಂಬ, ನನ್ನ ಸಹೋದರ, ಸಹೋದರಿಯರು, ಸಕಲ ಜೀವಿಗಳು ನನ್ನಂತೆ ಅಸಹಾಯಕವು ಎಂಬ ದಯೆಗೆ ಮಾತ್ರ ದಕ್ಕುವಂತಹದ್ದು. ಆದ್ದರಿಂದ ಧರ್ಮಾತೀತವಾದ, ದೈವಾತೀತವಾದ, ಆಗಮ ಕರ್ಮಾತೀತವಾದ ನಿತ್ಯ ನಿರಂಜನ ತತ್ವ ಸುಲಭ ಸಾಧ್ಯವಲ್ಲ. ಇದರಿಂದಾಗಿಯೇ ಬಸವಣ್ಣನವರು ಹೇಳಿದ್ದು- “ಜಂಗಮವೇ ಲಿಂಗವೆಂದು ಫಲಿಸಿದಡೆ ಇಂದಿನ ಪುಣ್ಯಕ್ಕೆ ಸರಿಯುಂಟೆ?” ಎಂದು.
ತನುವಿಡಿದಿಹುದು ಪ್ರಕೃತಿ; ಪ್ರಕೃತಿವಿಡಿದಿಹುದು ಪ್ರಾಣ
ಪ್ರಾಣವಿಡಿದಿಹುದು ಜ್ಞಾನ; ಜ್ಞಾನವಿಡಿದಿಹುದು ಗುರು
ಈ ಜೀವಶರೀರವು ಪ್ರಕೃತಿಯ ಆಧಾರದಲ್ಲಿದೆ. ಪ್ರಕೃತಿಯು ಸಕಲ ಪ್ರಾಣಿಗಳ ಇರುವಿಕೆಯಿಂದ ತನ್ನ ಇರುವಿಕೆಯನ್ನು ಸ್ಥಾಪಿಸಿಕೊಂಡಿದೆ. ಹಾಗೆಯೇ ಪ್ರಾಣವು ಜ್ಞಾನವನ್ನು ಹಿಡಿದುಕೊಂಡಿದೆ. ಜ್ಞಾನವೆಂಬ ರೋಗಕ್ಕೆ ಸರಿದಾರಿ ತೋರುವ ಗುರುವಿದ್ದಾಗ ಮತ್ತು ಗುರುವಿನ ಹಾದಿಯಲ್ಲಿ ನಿನ್ನ ಪ್ರಯತ್ನ ಸರಿಯಾಗಿದ್ದಾಗ ಮಾತ್ರ ಪ್ರಾಣಲಿಂಗವೆಂಬ ಮಹಾಪ್ರಸಾದ ನಿನ್ನ ಕರಸ್ಥಲಕ್ಕೆ ಬರುವುದೇ ವಿನಾ ಇನ್ನಾವ ರಹದಾರಿಯಿಂದಲೂ ಬರಲಾರದ್ದೆಂದು ತಿಳಿದುಕೋ. ಜ್ಞಾನವೆಂಬ ಕರ್ಪೂರ, ಗುರುವೆಂಬ ಬೆಂಕಿ ಇವೆರಡೂ ಕೂಡಿದಾಗ ಏನಾಗುತ್ತದೆ? ಹೇಳುವೆಯಾ?
ನನ್ನ ಸಮಯವನ್ನು ನಿನ್ನ ಪ್ರಶ್ನೆಗಳು ಹಾಳುಮಾಡದೇ ಇರಬೇಕೆಂದ ಪಕ್ಷದಲ್ಲಿ ಯಾವುದೇ ಮತಾಚಾರದಿಂದಾಗಲಿ, ದೈವಿಕ ದೃಷ್ಟಿಕೋನಗಳಿಂದಾಗಲಿ, ಯೋಗ ಮಾರ್ಗಗಳಿಂದಾಗಲಿ ಬಸವ ವಚನ ಚಂದ್ರಿಕೆಯನ್ನು ಓದಬೇಡ. ಖಾಲಿಯಾಗಿ ಯಾರ ಹಂಗಿಲ್ಲದೆ, ಯಾವುದರ ಹಂಗಿಲ್ಲದೆ ಓದಿಕೋ, ಬಸವ ಈಗಲೇ ನಿನ್ನೊಡನಿರುತ್ತಾನೆ.
ನಿತ್ಯನಿರಂಜನ ಪರಂಜ್ಯೋತಿವಸ್ತು:
ಉಪದೇಶವ ಕೊಟ್ಟು ಗುರುವಾದ,
ಕರಸ್ಥಲಕ್ಕೆ ಬಂದು ಲಿಂಗವಾದ,
ಹಸರವಾದ ಪ್ರಪಂಚನಳಿದು ದಾಸೋಹವ ಮಾಡಿಸಿಕೊಂಡು ಜಂಗಮವಾದ,
ಇಂತೀ ಗುರುಲಿಂಗಜಂಗಮ ಒಂದೆಯಲ್ಲದೆ ಭಿನ್ನವಿಲ್ಲ.
ಈ ಮೂರಕ್ಕೆ ಮೂರನಿತ್ತು ಮೂರನೊಂದ ಮಾಡಬಲ್ಲಡೆ,
ಆತ ಪ್ರಸಾದಕಾಯನಯ್ಯಾ, ಕೂಡಲಸಂಗಮದೇವಾ.
ಮಂಗಳಾ: ಮೂರಕ್ಕೆ ಮೂರನಿತ್ತು ಮೂರನೊಂದು ಮಾಡಬಲ್ಲಡೆ ಆತ ಪ್ರಸಾದಕಾಯನಯ್ಯಾ, ಕೂಡಲಸಂಗಮದೇವಯ್ಯಾ- ಈ ವಾಕ್ಯದ ಆಚಾರವನ್ನು ತಿಳಿಸುತ್ತೀರಾ?
ಸ್ಮಶಾನವಾಸಿ: ಬಹಳ ಒಳ್ಳೆಯ ಪ್ರಶ್ನೆ. ಕನ್ನಡಿಗರಾಗಿ ಹುಟ್ಟಿದ ಮೇಲೆ ಬಸವಣ್ಣನವರ ಕುರಿತಾಗಿ ಗೌರವದ ಭಾವನೆ ಬರಬೇಕಾದರೆ ವಚನಗಳಲ್ಲಿ ಮುಖ್ಯವಾಗಿ ತಿಳಿದುಕೊಳ್ಳಬೇಕಾದವು ಮೂರಿವೆ! ಈ ಮೂರನ್ನೂ ಕಳೆದುಕೊಂಡು ಪ್ರತಿಯೊಬ್ಬ ಮಾನವನು ಅನುಪಮ ಸುಖವನ್ನು ಅನುಭವಿಸಬೇಕೆಂಬ ದಯೆಯಿಂದ ಮಹತ್ವಪೂರ್ಣವಾದ ಮೂರು ತಂತ್ರಾಂಶಗಳನ್ನು ಅವರು ಕಂಡುಹಿಡಿದರು. ಅಂದರೆ ತಿಳಿದುಕೊಳ್ಳಬೇಕಾದಂತಹವು ಮೂರು! ತಿಳಿದದ್ದನ್ನು ಕಳೆದುಕೊಳ್ಳಲು ಮೂರು! ವಚನ ಸಾಹಿತ್ಯದಲ್ಲಿ ಈ ಮೂರು ಮೂರು ಆರರ ಸಂಕಥನ ರೋಮಾಂಚನಕಾರಿಯಾಗಿ ಅಭಿವ್ಯಕ್ತಗೊಂಡಿದೆ. ವಚನಗಳಲ್ಲಿ ನಿತ್ಯ ಮತ್ತು ಅನಿತ್ಯ ವಸ್ತು ವಿವೇಕ ಎಂದೂ ಕರೆಯಲಾಗಿದೆ.
ನೀವು ವಚನಗಳನ್ನು ಗಮನವಿಟ್ಟು ಓದಿಕೊಂಡಿದ್ದರೆ ಅಲ್ಲಿ ತ್ರಿಪುಟ, ತ್ರಿಬಿಂದು, ಕವಾಟ, ಮಾಯೆ ಎಂಬ ಪದಗಳು ಬಂದಿವೆ. ಅವರು ಅನಿತ್ಯವಾದ ಸಂಸಾರವನ್ನು ಅಥವಾ ಭವವನ್ನು ತ್ರಿಪುಟ ಎಂದು ಕರೆದದ್ದು ಯಾಕೆಂದರೆ, ಭವವು ಕೇವಲ ಮೂರು ಬಿಂದುಗಳಲ್ಲಿ ಮಾತ್ರ ಚಲಿಸುತ್ತಿರುತ್ತದೆ. ಅದರಾಚೆಗೆ ಅದಕ್ಕೆ ಯಾವುದೇ ಅಸ್ತಿತ್ವವಿಲ್ಲ. ಆ ಮೂರು ಬಿಂದುಗಳು ಯಾವುವೆಂದರೆ- ಜ್ಞಾನ, ಜ್ಞಾತೃ, ಜ್ಞೇಯ.
ನಿನ್ನ ಜೀವಿತಾವಧಿಯ ಹಿಂದಿನ ಕಾಲದಲ್ಲಿ ನೀನು ಅನುಭವಿಸಲ್ಪಟ್ಟ ಅನುಭವದ ಜ್ಞಾನವು ಮುಂದಿನ ಕಾರ್ಯಗಳನ್ನು ಪ್ರೇರೇಪಿಸುತ್ತಿರುತ್ತದೆ. ಪ್ರತಿ ಕಾರ್ಯಕ್ಕೂ ಅದರದೇ ಆದ ಫಲ ಇದ್ದೇ ಇರುತ್ತದೆ. ಜೀವನದ ಸುಖದುಃಖಾದಿ ಅನಂತ ಭಾವಗಳು ಭವದ ಕೂಪವನ್ನು ಮತ್ತಷ್ಟು ಹಿಗ್ಗಿಸುತ್ತಲೇ ಹೋಗುತ್ತದೆ. ಭವ ಎಂದರೆ ಅನುಭವಕ್ಕೆ ಬರುತ್ತಿರುವ ದ್ವಂದ್ವ ಭಾವಗಳು ಎಂದಾಗುತ್ತದೆ. ಎಲ್ಲಾ ದ್ವಂದ್ವ ಭಾವಗಳಿಗೂ ನಮ್ಮ ತಪ್ಪಾದ ಜ್ಞಾನದ ಸಂಗ್ರಹಾಗಾರವೇ ಕಾರಣ. ಇದನ್ನ ಸಂಸಾರ ಎಂದರೂ ಕರೆಯಬಹುದು. ಸಂಸಾರ ಎಂದರೆ ಸಂರಚನಾತ್ಮಕ ಜ್ಞಾನದ ಸಾರ! ತನಗೆ ತಾನೇ ತನ್ನೊಳಗೆ ಲೋಕವನ್ನು ಕಂಡು ಸಂರಚಿಸಿಕೊಂಡ ವಿಷಯಾನು ಪ್ರಪಂಚ ಯಾವುದಿದೆಯೋ ಅದು ಸಂಸಾರ! ಇಲ್ಲಿ ಹೊಸತನವೂ ಇಲ್ಲ! ಬಿಡುಗಡೆಯೂ ಇಲ್ಲ! ಕ್ಷಣಕ್ಷಣ ವಿಚಾರ ವಿಘಟನೆ! ಸದಾ ಕ್ರೌರ್ಯ ಸ್ವಭಾವಗಳ ಉತ್ಪತ್ತಿ! ನರಳಾಡುವಿಕೆಯಲ್ಲಿ ಸುಖವನ್ನು ಹುಡುಕುವ ವ್ಯರ್ಥ ಪ್ರಯತ್ನ!!!
ಜ್ಞಾನ, ಜ್ಞಾತೃ, ಜ್ಞೇಯವೆಂಬ ಮೂರು ರೂಪದಲ್ಲಿ ತಲೆದೋರುತ್ತಿರುವ ಸಂಸಾರವೆಂಬ ಮನೋರೋಗಕ್ಕೆ ಗುರು, ಲಿಂಗ, ಜಂಗಮವೆಂಬ ಮೂರು ದಿವೌಷಧಿಗಳನ್ನು ಕಂಡುಹಿಡಿದು ಕೊಟ್ಟವರು ನಮ್ಮ ಶರಣರು.
“ನಿನ್ನೊಳಗೆ ಈಗಾಗಲೇ ಸಂಗ್ರಹಿಸಿಟ್ಟುಕೊಂಡಿರುವ ತಪ್ಪು ತಿಳುವಳಿಕೆ (ಜ್ಞಾನ)ಗಳನ್ನು ಸಂಸ್ಕರಿಸಿ ನಿಜಜ್ಞಾನವನ್ನು ತೋರಲು ಗುರು”
“ತಪ್ಪು ತಿಳುವಳಿಕೆಗಳನ್ನು ಅನುಸರಿಸಿಕೊಂಡು ನಡೆವ ನಡೆಗಳನ್ನು ಸಂಸ್ಕರಿಸಿಕೊಳ್ಳಲು ಲಿಂಗ”
“ಸಂಸಾರ ಫಲರೂಪಿಯಾಗಿರುವ ಅಸಮತೆಯನ್ನು ಸಂಸ್ಕರಿಸಿ ಸರ್ವಜೀವಿಗಳೂ ಸಮ ಎಂಬ ವಿಶ್ವ ಕುಟುಂಬದಲ್ಲಿ ಬದುಕಲು ಜಂಗಮ”!!!
ಗುರು ನೀಡಿದ ವಾಕ್ಯಗಳಿಂದಾಗಿ ನಿನ್ನಲ್ಲಿರುವ ವಿವೇಕ ಕಣ್ತೆರೆದಾಗ ಮಾತ್ರ ಲಿಂಗ ಎಂದರೆ ಯಾವುದೆಂದು ತಿಳಿಯುತ್ತದೆ. ದೇಹವೆಲ್ಲಾ ತುಂಬಿಕೊಂಡಿರುವ ಲಿಂಗದ ಆಚಾರ ನಿನಗೆ ನೀನೇ ಕಂಡುಹಿಡಿಯಬೇಕು. ಲಿಂಗವು ಪ್ರತಿಮೆಯೂ ಅಲ್ಲ, ಅಪ್ರತಿಮೆಯೂ ಅಲ್ಲ. ಅದೊಂದು ಪರಿಶುದ್ಧಗೊಳಿಸಲ್ಪಟ್ಟ ಆಚಾರ!!! ಆಚಾರವು ಕ್ರಿಯಾಧೀನವೇ ಹೊರತು ವಿಷಯಾಧಾರವಲ್ಲ. ವಿಷಯಾಧಾರಗೊಳಿಸಿದಾದಲ್ಲಿ ಬಸವ ಸಿದ್ಧಾಂತ ಭ್ರಷ್ಟತೆಗೀಡುಮಾಡಬೇಕಾದ ಕಳಂಕ ನಮಗೆ ತಟ್ಟುತ್ತದೆ. ಎಲ್ಲಿಯ ತನಕ ಲಿಂಗದ ಆಚಾರವನ್ನು ನಮ್ಮೊಳಗೆ ತಿಳಿಯಲಾಗುವುದಿಲ್ಲವೋ ಅಲ್ಲಿಯ ತನಕ ನಿತ್ಯ ಯಾವುದು? ಅನಿತ್ಯ ಯಾವುದು ಎಂಬ ನಿಜಜ್ಞಾನ ತಿಳಿಯಲಾಗದು.
ಜ್ಞಾನ, ಜ್ಞಾತೃ, ಜ್ಞೇಯವೆಂಬ ಕಲ್ಮಶವಾದ ಮನಸ್ಸಿಗೆ ಗುರು, ಲಿಂಗ, ಜಂಗಮವೆಂಬ ಮೂರನ್ನೂ ಸಮರ್ಪಿಸಿದಾಗ ಉಳಿವುದೊಂದೇ… ಅನಂತವಾದ ಅದ್ವಯ ತತ್ವ ಅಥವಾ ಜಂಗಮ ತತ್ವ! ಲಿಂಗಾಚಾರ ತಿಳಿದರೆ ಮಾತ್ರ ಜಂಗಮ ಕ್ರಿಯೆ ತಂತಾನೇ ವಿಕಸಿಸುತ್ತದೆ. ಜಂಗಮಶೀಲ ವಿಶ್ವ ಕುಟುಂಬದಲ್ಲಿ ಸಕಲ ಪ್ರಾಣಗಳೂ ಸಮ. ಅಲ್ಲೊಂದು ಸಮರಸ, ಸಹಬಾಳ್ವೆ, ಸಮರಸೈಕ್ಯವೊಂದೇ ಉಳಿಯುತ್ತದೆ.
* * * * *
ನಡೆಯ ಬಲವನ್ನು ಕಳೆದುಕೊಂಡ ವಚನ ವ್ಯಾಖ್ಯಾನಗಳಿಗೆ ಕವಡೆ ಕಾಸಿನ ಕಿಮ್ಮತ್ತೂ ಇರುವುದಿಲ್ಲವೆಂಬ ಸತ್ಯ ಸ್ಮಶಾನವಾಸಿಯ ಅನುಭಾವಿಕ ನುಡಿಗಳಿಂದ ಸ್ಪಷ್ಟವಾಗುತ್ತಿತ್ತು. ಪ್ರಶ್ನೆಗಳ ಮೂಟೆಯನ್ನೇ ಹೊತ್ತಿದ್ದ ತಲೆ ಕೆಲವೇ ಪ್ರಶ್ನೆಗಳನ್ನು ಕೇಳುತ್ತಿದ್ದ ಹಾಗೆ ಖಾಲಿಯಾಗತೊಡಗಿದಂತೆ ಭಾಸವಾಯಿತು. ಅವರು ಕೊಟ್ಟ ಉತ್ತರಗಳಲ್ಲಿಯೇ ನನ್ನ ಇತರೆ ಅನೇಕ ಗೊಂದಲಗಳು ಕರಗಿಹೋಗಿದ್ದವು. ಓದಿ ಮತ್ತು ಕೇಳಿ ಒಳಗೆ ತುಂಬಿಸಿಕೊಂಡಿದ್ದ ಜ್ಞಾನಗಳು ಮೂಕವಾಗಿ ಮೂಲೆ ಸೇರಿದ್ದವು. ತಾವೇ ಅಂತಿಮ ನಿಜವೆಂದು ಗಾಢವಾಗಿ ನನ್ನೊಳಗೆ ತೂರಿಕೊಂಡಿದ್ದ ವಿಚಾರಗಳು ನೆಲೆಕಳೆದುಕೊಂಡಿದ್ದವು…
(ಮುಂದುವರಿಯುವುದು)
Comments 24
ಪ್ರದೀಪ್ ಪಾಟೀಲ್, ಹುಬ್ಬಳ್ಳಿ
Aug 10, 2021ನಿಮ್ಮಗಳ ಸಂಭಾಷಣೆಯ ಗುಣಮಟ್ಟ ಸಾಮಾನ್ಯವಾದುದಲ್ಲ. ಅದನ್ನು ಓದಿ ಅರಗಿಸಿಕೊಳ್ಳಲು ಖಂಡಿತವಾಗಿ ಸಮಯಬೇಕಾಗುತ್ತದೆ. ಓದಿದೆ, ಮತ್ತೆ ಓದಬೇಕೆನಿಸಿತು, ಓದಿದೆ… ಈಗ ಓದುತ್ತಲೇ ಇದ್ದೇನೆ.
ವೀರಭದ್ರಪ್ಪ ಎಚ್.ವಿ
Aug 10, 2021ಇಷ್ಟಲಿಂಗಪೂಜೆ ಶಿವಯೋಗವಲ್ಲವೇ? ಶಿವಯೋಗ ಯಾವ ವಿಧದ ಯೋಗ ನನಗೆ ಸರಿಯಾಗಿ ಗೊತ್ತಿಲ್ಲ. ಅದನ್ನು ಯೋಗಗಳ ಯೋಗವೆಂದು ಹಿರಿಯರು ಹೇಳಿದ್ದನ್ನು ಕೇಳಿದ್ದೇನೆ. ನೀವು ಹೇಳಿದ ಲಿಂಗಪೂಜೆಯ ವಿವರಣೆ ನನಗೆ ಸಂಪೂರ್ಣ ಅರ್ಥವಾಗಲಿಲ್ಲ. ನಿಮಗೆ ಸಿಕ್ಕ ಸ್ಮಶಾನವಾಸಿಗಳು ಅನುಭಾವಿಗಳೇ ಆಗಿರಬೇಕು. ಅವರ ಮಾತುಗಳು ಎಲ್ಲರ ಮಾತುಗಳಂತಿಲ್ಲ.
SHARAN swami
Aug 11, 2021ಅನುಭಾವ ಅತೀತವಾದ ಸತ್ಯವನ್ನು ಸಂಭಾಷಣೆಯ ಮೂಲಕ ಸ್ಮಶಾನವಾಸಿಯು ಮತ್ತು ಮಂಗಳ ತಾಯಿಯವರು ಪ್ರಸ್ತುತ ಪಡಿಸಿದ್ದಾರೆ.
ಕಾಣಬಾರದುದ ಕಂಡಿಹೆನೆಂದರೆ ಸಿಕ್ಕದೆಂಬ ಬಳಲಿಕೆಯು ನೋಡಾ,
ಕಂಡುದನೆ ಕಂಡು (ಇಷ್ಟಲಿಂಗ) ಗುರು ಪಾದವಿಡಿದಲ್ಲಿ ಕಾಣಬಾರದುದ ಕಾಣಬಹುದು ಗುಹೇಶ್ವರ
ಎಂಬ ಅಲ್ಲಮರ ವಚನ ಸಾರದಂತೆ ಈ ಲೇಖನ ತೋರುತ್ತದೆ. ಶರಣುಗಳು
ಪರಮೇಶ್ವರ ಜವಳಿ
Aug 14, 2021ಲಿಂಗ ಎಂದರೆ ದೇವರು. ಲಿಂಗ ಪೂಜೆಯೆಂದರೆ ಇಷ್ಟ ಲಿಂಗ ಪೂಜೆಯೆಂದು ನಂಬಿದ್ದ ನಮಗೆ ಸ್ಮಶಾನವಾಸಿಗಳ ಚಿಂತನೆ ಮರು ವಿಮರ್ಶೆಗೆ ಒಡ್ಡುವಂತಿದೆ. ಬಯಲು ಮಾರ್ಗಕ್ಕೆ ಕರೆದೊಯ್ಯುವಂತಿರುವ ಅನುಭಾವಿಕ ದರ್ಶನ ನೀಡುವ ಲೇಖನ.
Lingaraj Patil
Aug 14, 2021ಲಿಂಗ, ಜಂಗಮಕ್ಕೆ ಇರುವ ವಿಶಾಲಾರ್ಥಗಳು ವಚನಗಳ ಸಾಲುಗಳಲ್ಲಿ ಹೂತುಹೋಗಿವೆ. ನಮ್ಮ ಗಮನಕ್ಕೆ ಬಾರದ ಈ ನಿಧಿಯನ್ನು ತೋರುವ ಯತ್ನ ನಿಮ್ಮಿಬ್ಬರ ಸಂಭಾಷಣೆಯಲ್ಲಿ ಕಂಡುಕೊಂಡೆ. ಅನಂತ ಶರಣುಗಳು.
ಕಲ್ಯಾಣಪ್ಪ ಸೋಲಾಪುರ್
Aug 14, 2021ಕೈಯಲ್ಲಿರುವ ಇಷ್ಟಲಿಂಗ ಪ್ರತಿಮಾ ಸ್ವರೂಪಿಯೇ? ಸೀಮಿತ ಲಿಂಗವೇ? ಸರ್ವವ್ಯಾಪಿ ಲಿಂಗದ ಕುರುಹನ್ನು ದೀಪಾರತಿಗಳಿಂದ ಪೂಜಿಸುವುದು ಹೇಗೆ ತಪ್ಪಾಗುತ್ತದೆ? ನನ್ನ ತಿಳಿವಳಿಕೆಗೂ ನಿಮ್ಮ ಮಾತುಗಳಿಗೂ ತಾಳೆಯಾಗುತ್ತಿಲ್ಲ. ಅಥವಾ ನಮ್ಮ ಪೂಜಾ ವಿಧಾನ ಸರಿಯಿಲ್ಲವೇ?
ಜಿ.ಎಚ್.ಜ್ಯೋತಿಲಿಂಗಪ್ಪ ಶಿವನಕೆರೆ
Aug 16, 2021ಯಾವುದೇ ಮತಾಚಾರದಿಂದಾಗಲೀ ದೈವಿಕ ದೃಷ್ಟಿ ಕೋನಗಳಿಂದಾಗಲೀ ಯೋಗ ಮಾರ್ಗ ಗಳಿಂದಾಗಲೀ ಓದದೆ ಖಾಲಿಯಾಗಿ ಓದು.. ಇಷ್ಟು ಸಾಕಲ್ಲವೇ ನಮ್ಮ ವಚನಗಳ ಹೊಸ ನಿಜದ ಓದಿಗೆ…
ಇಬ್ಬರಿಗೂ ಧನ್ಯವಾದಗಳು… ಮುಂದಿನ ಮಾತುಕತೆಗೆ ಕಾಯುತಿರುವೆ..
ನಿರಂಜನ ಗವಿಮಠ
Aug 16, 2021ಮೂರಕ್ಕೆ ಮೂರ ಕೊಡುವುದೆಂದರೇನು, ಅವು ಒಂದಾಗುವುದೆಂದರೇನು? ತಾತ್ವಿಕ ಪ್ರಶ್ನೆಗೆ ಅನುಭಾವಿಕ ವಿವರಣೆ ಬಹಳ ಬಹಳ ಗಹನವಾಗಿದೆ. ದೇಹಕ್ಕೆ ಗುರು, ಪ್ರಾಣಕ್ಕೆ ಲಿಂಗ, ಆತ್ಮಕ್ಕೆ ಜಂಗಮ ಇರಬೇಕೆಂದು ನಾನು ಕೇಳಿದ್ದೆ, ಆದರೆ ಅವುಗಳ ಆಚಾರದ ಸ್ಪಷ್ಟತೆ ಇರಲಿಲ್ಲ. ಈಗ ಹೊಸ ಬಗೆಯ ತಾತ್ವಿಕ ವಿವರಣೆ ನಿಮ್ಮಲ್ಲಿ ಓದಿದೆ.
Haraprasad
Aug 18, 2021ದಂದುಗ ಎಂದರೆ ದ್ವಂದ್ವ ಎಂದರ್ಥ! ತರತಮ ಬೇಧ ಎಂದರ್ಥ! ಎಲ್ಲಿಯವರೆಗೂ ತರತಮ ಧೋರಣೆ ಅಳಿಯುವುದಿಲ್ಲವೋ ಅಲ್ಲಿಯವರೆಗೂ ಲಿಂಗಾನುಭವ ಅಳವಡದು. ಅಭಿಪ್ರಾಯ ಬೇಧವೇ ಚಂಚಲ…. ಅಬ್ಬಬ್ಬಾ ಬರಹದ ಒಂದೊಂದು ಮಾತು ಮುತ್ತಿನ ಹಾರ, ಸ್ಫಟಿಕದ ಶಲಾಕೆ, ಮಾಣಿಕ್ಯದ ದೀಪ್ತಿ. ಸ್ಮಶಾನವಾಸಿ ಶರಣರೇ ನಮೋ ನಮೋ.
Y.B. Patil
Aug 19, 2021ಇಷ್ಟಲಿಂಗವು ಪೂಜೆಗಾಗಿ ಅಲ್ಲ, ಸಾಧನೆಗಾಗಿ ಅಲ್ಲ, ಅರ್ಚನೆಗಾಗಿ ಅಲ್ಲ. ದೇವರಿಗೆ ಇದಾವುದೂ ಬೇಕಿಲ್ಲ ಎನ್ನುವ ನಿಮ್ಮ ಮಾತನ್ನು ಒಪ್ಪೋಣ. ಅಪ್ರತಿಮ ಲಿಂಗ ಸ್ವರೂಪದ ಕುರುಹಾಗಿ ಇಷ್ಟಲಿಂಗವನ್ನು ಕೈಗೆ ಯಾಕೆ ಕೊಟ್ಟರು? ಅದೂ ಮುಂದೊಂದು ದಿನ ಉಪಾಸನಾ ವಸ್ತುವಾಗಬಹುದೆಂಬ ಅಪಾಯದ ಸೂಚನೆ ಅವರಿಗೆ ಬರಲಿಲ್ಲವೇ?
ಮಹಾದೇವ
Aug 19, 2021ಕಂಡದ್ದನ್ನೇ ಕಾಣುವ ಮೂಲಕ ಮತ್ತೆಮತ್ತೆ ಕಂಡುಕೊಳ್ಳುವುದು ಯಾಂತ್ರಿಕತೆಯೇ ಎಂಬ ಪ್ರಶ್ನೆ ಕಾಡುತ್ತಿದೆ.
Tipperudrappa Ramanagar
Aug 21, 2021ಇಡೀ ಸಂದರ್ಶನವನ್ನು ಎರಡೆರಡು ಬಾರಿ ಓದಿದೆ. ಅಲ್ಲೊಂದು ಸಾಲು ಬರುತ್ತದೆ- “ಲಿಂಗವನ್ನು ಕಂಡುಹಿಡಿಯಲಾಗದಿದ್ದಲ್ಲಿ ಲಿಂಗದ ಪ್ರಶ್ನೆ ಯಾಕೆ?” ಅನುಭಾವಿಗಳಾದ ಸ್ಮಶಾನವಾಸಿಗಳು ಇಲ್ಲಿ ಏನನ್ನು ಹೇಳುತ್ತಿದ್ದಾರೆ? ಲಿಂಗವನ್ನು ಕಂಡುಹಿಡಿಯುವುದೆಂದರೇನು… ಬಸವಣ್ಣನವರು ಇಷ್ಟಲಿಂಗವನ್ನು ಕಂಡುಹಿಡಿದು ನಮ್ಮ ಕೈಗೆ ಕೊಟ್ಟಿದ್ದಾರಲ್ಲಾ, ಮತ್ತೆ ನಾವು ಕಂಡುಹಿಡಿಯಬೇಕೆಂದರೆ ಏನು…. ನನ್ನದು ಅಜ್ಞಾನಿಯ ಪ್ರಶ್ನೆ ಎಂದುಕೊಳ್ಳುತ್ತೀರೆಂದು ಗೊತ್ತು. ದಯವಿಟ್ಟು ನನ್ನ ಅಜ್ಞಾನವನ್ನು ಹೋಗಲಾಡಿಸಿ.
ಬೋರಲಿಂಗಯ್ಯ ಸಾಲೀಮಠ
Aug 21, 2021ಮೂರಕ್ಕೆ ಮೂರನಿತ್ತು ಮೂರನೊಂದು ಮಾಡಬಲ್ಲಡೆ ಆತ ಪ್ರಸಾದಕಾಯನಯ್ಯಾ- ಈ ಪ್ರಶ್ನೆ, ಇದಕ್ಕೆ ಕೊಟ್ಟ ಉತ್ತರ ನನಗೆ ಪೂರ್ತಿಯಾಗಿ ಅರ್ಥವಾಗದಿದ್ದರೂ ಯಾವುದೋ ವಿಶೇಷವಾದ ಜ್ಞಾನವನ್ನು ಹೇಳಲು ಯತ್ನಿಸುವಂತೆ ತೋರಿತು. ನೀವು ಪ್ರಶ್ನೋತ್ತರಗಳ ಮೂಲಕ ನೀಡುತ್ತಿರುವ ಜ್ಞಾನ ದಾಸೋಹಕ್ಕೆ ನನ್ನ ಶರಣುಗಳು.
Kalyani Gowda
Aug 23, 2021ಶರೀರದಲ್ಲಿ ಷಡಾಧಾರ ಚಕ್ರವುಂಟೆಂಬರು- ವಚನ ವಿಶ್ಲೇಷಣೆ ಬಹಳ ವೈಜ್ಞಾನಿಕವಾಗಿದೆ. ಚಕ್ರಗಳು, ಯೋಗಗಳು…. ಎನ್ನುವ ಆಧ್ಯಾತ್ಮ ಸಾಧನೆಗಳನ್ನು ಮರುವಿಮರ್ಶಿಸಿಕೊಳ್ಳಲು ನಿಮ್ಮ ಮಾತುಗಳು ಪ್ರಚೋದಿಸುತ್ತವೆ. ಒಟ್ಟಾರೆ ಸಂದರ್ಶನ ಬಹಳ ಬಹಳ ಅರ್ಥಪೂರ್ಣವಾಗಿ ಮೂಡಿಬಂದಿದೆ.
Nataraj Indi
Aug 23, 2021ಪ್ರವಾಹಕ್ಕೆ ಎದುರಾಗಿ ಈಜಿಸುವ ಭಕ್ತಿ ಸುಲಭದ್ದಲ್ಲ, ಅದು ಗರಗಸದಂತೆ ಎಂದು ಇನ್ನೊಂದು ಕಡೆ ಹೇಳಿದ್ದಾರೆ ಬಸವಣ್ಣನವರು. ದೇವರು ಭಕ್ತಿಯನ್ನು ಪರೀಕ್ಷಿಸುವುದರಿಂದ ಹೀಗೆ ಹೇಳಿದ್ದಾರೆಂದು ನಾನು ಅಂದುಕೊಳ್ಳುತ್ತಿದ್ದೆ. ಇಲ್ಲಿ ಪರೀಕ್ಷೆಯೆಲ್ಲಾ ಇಲ್ಲವೇ ಇಲ್ಲ. ದೇವರು ಪರೀಕ್ಷೆಗಾಗಿ ನಾನಾ ತೊಂದರೆಗಳನ್ನು ತಂದೊಡ್ಡುವ ಮಾತೇ ಇಲ್ಲ!!
Gangadhara Murthy
Aug 24, 2021ಎಲ್ಲಾ ಸಂದರ್ಶನಗಳು ಸಂಗ್ರಹಯೋಗ್ಯವಾಗಿವೆ. ದಯವಿಟ್ಟು ಇದನ್ನು ಮುಂದುವರಿಸಿ. ನಮ್ಮಲ್ಲಿನ ಅಪಕಲ್ಪನೆಗಳನ್ನು ಹೋಗಲಾಡಿಸಲು ನಿಮ್ಮ ಮಾತುಗಳು ಸಹಾಯವಾಗುತ್ತವೆ, ನಮ್ಮಲ್ಲಿರುವ ಧರ್ಮದ ತಿಳುವಳಿಕೆ ಬಾಲಿಶವಾದುದು ಎಂದು ನನಗೆ ಇದನ್ನು ಓದುವಾಗ ಅನೇಕ ಸಲ ಅನ್ನಿಸಿದೆ. ವಂದನೆಗಳು.
ಗುರುಸ್ವಾಮಿ, ಮೈಸೂರು
Aug 30, 2021ತಲಪರಿಗೆ ಎಂದರೆ ನೀರಿನ ಬುಗ್ಗೆ ಎಂದು ಹೇಳಿದ್ದೀರಿ. ಅದು ನಿಸರ್ಗದಲ್ಲಿ ನಿರಂತರವಾಗಿ ಉಕ್ಕುತ್ತಿರುವ ಜೀವಸೆಲೆ. ನೀರು ಹನಿಸಿ ಹಸಿರು ಹುಟ್ಟಿಸುವ ತಲಪರಿಗೆಯಂತೆ ನಿಮ್ಮ ಮಾತುಗಳಿವೆ. ನಮ್ಮ ಬರಡಾದ ಹೃದಯದಲ್ಲಿ ಚಿಂತನೆಯ ಹಸಿರನ್ನು ಇವು ಹುಟ್ಟಿಸಲೆಂಬುದು ನನ್ನ ಬಯಕೆ. ಅನಂತಾನಂತ ವಂದನೆಗಳು ಸ್ಮಶಾನವಾಸಿಗಳಿಗೆ, ಹಾಗೂ ಅವರನ್ನು ಇಲ್ಲಿಗೆ ಕರೆತಂದ ಅಕ್ಕನವರಿಗೆ.
ರಾಜಪ್ಪ ಮಾಲಗೋಡಿ
Aug 31, 2021ಶರೀರದಲ್ಲಿ ಷಡಾಧಾರ ಚಕ್ರವುಂಟೆಂಬರು- ವಚನದಲ್ಲಿ ಅರಿವಿನ ಮಾರಿತಂದೆ ಶರಣರು ಷಟ್ಚಕ್ರಗಳು ನಮ್ಮೊಳಗಿವೆ ಎನ್ನುವ ನಂಬಿಕೆಯನ್ನು ಬುಡಮೇಲು ಮಾಡಿದ್ದನ್ನು ಓದಿ ಬಹಳ ಬಹಳ ಆಶ್ಚರ್ಯವಾಯಿತು. ಈಗಲೂ ಶಿವಯೋಗದ ಬಗ್ಗೆ ಮಾತನಾಡುವವರು, ಇಷ್ಟಲಿಂಗಯೋಗದ ಕುರಿತು ಸಾಧನೆ ಮಾಡಲು ಹೇಳಿಕೊಡುವವರು ಆಧಾರ, ಸ್ವಾಧಿಷ್ಟಾನ, ಇತ್ಯಾದ ಚಕ್ರಗಳ ಮೂಲಕವೇ ಹೇಳಿಕೊಡುತ್ತಾರೆ…. ಹಾಗಾದರೆ ಅವರಿಗೆ ಈ ವಚನದ ಆಶಯ ತಿಳಿದಿಲ್ಲವೇ? ಬಸವಣ್ಣನವರ ಯಾವ ವಚನದಲ್ಲೂ ನಾನು ಚಕ್ರಗಳ ಸಾಧನೆಯನ್ನು ಓದಿಲ್ಲ. ಕೆಲವು ವಚನಗಳಲ್ಲಿ ಮಾತ್ರ ಕಂಡುಬಂದ ಚಕ್ರ ಸಾಧನೆಯನ್ನು ಶಿವಯೋಗಕ್ಕೆ ಗಂಟುಹಾಕಿರುವುದು ಅನೇಕ ಗೊಂದಲಗಳಿಗೆ ಕಾರಣವಾಗುತ್ತದಲ್ಲವೇ?
Bhadranna Yargod
Aug 31, 2021ಇಲ್ಲಿ ಬಂದ ವಚನಗಳ ವಿವರಣೆ ನನಗೆ ತುಂಬಾ ಹಿಡಿಸಿತು. ಆದರೆ ಕೆಲವೊಂದು ವಿಷಯಗಳು ನನ್ನ ತಿಳುವಳಿಕೆಯನ್ನು ಮೀರಿದಂತೆ ಕಂಡವು. ಉದಾಹರಣೆಗೆ ಲಿಂಗವನ್ನು ಕಂಡುಹಿಡಿಯುವುದೆಂದರೆ ಏನು? ಹೇಗೆ? ಪ್ರಶ್ನೋತ್ತರದ ಕೆಲವು ಮಾತುಗಳು ನನಗೆ ಒಗಟೊಗಟಾಗಿ ಕಾಣಿಸಿದವು.
Jayanna D.K
Sep 4, 2021ಚಿತ್ತದ ಚಲನವು ಅಚಲವಾದಾಗ ಲಿಂಗ ದರುಶನವಾಗುತ್ತದೆ ಎನ್ನುವ ದರ್ಶನವನ್ನು ಶರಣರು ನೀಡಿದ್ದಾರೆ. ಚಿತ್ತದ ಚಲನವನ್ನು ನಿಲ್ಲಿಸುವುದಕ್ಕೆ ಅವರು ತುಳಿದ ಹಾದಿಯನ್ನು ವಚನಗಳು ತೋರಿಸುತ್ತವೆ. ಸ್ಮಶಾನವಾಸಿಗಳು ವಚನಗಳ ಒಳಹೊಕ್ಕು ತೋರಿಸಿದ ಶರಣರ ದರ್ಶನದಲ್ಲಿ ಆಧ್ಯಾತ್ಮದ ಗುಟ್ಟಿದೆ.
Ambaraya Biradar
Sep 12, 2021ತಮ್ಮ ವ್ಯಾಖ್ಯಾನ ತಿಳಿದುಕೊಳ್ಳುವುದು ಅರಗಿಸಿಕೊಳ್ಳಲು ತಿಣಕಾಡಬೇಕಾಗುತ್ತದೆ. ಓದಿ ತಿಳಿದುಕೊಳ್ಳಬೇಕೆಂಬ ಬಯಕೆವುಳ್ಳ ಜಿಜ್ಞಾಸುಗಳಿಗೆ ಚಿಂತನೆಗೆ ಹಚ್ಚುತ್ತದೆ.
ವಿಭಿನ್ನವಾದ ನೆಲೆಯಲ್ಲಿ ತಮ್ಮ ಪ್ರಯತ್ನ ವಚನ ಅಭ್ಯಾಸಿಗಳಿಗೆ ಹೊಸ ಆಯಾಮವನ್ನು ನೀಡುತ್ತದೆ.
Madhukar
Sep 13, 2021ಲೋಕಸ್ಥಿತಿಯಲ್ಲಿ ಚಿತ್ತದ ಬೇಧಗಳಿಗೆ, ಆ ಬೇಧಗಳಿಂದ ಹುಟ್ಟುವ ಅಭಿಪ್ರಾಯಗಳಿಗೆ ಯಾವುದೇ ಮಹತ್ವವಿಲ್ಲ. ಈ ಬೇಧಗಳು ಸೃಷ್ಟಿಯಲ್ಲಿರುವ ಅಂತರ್ ಸಂಬಂಧವನ್ನು ಗುರುತಿಸಲಾರವು ಎನ್ನುವ ಅಂಶ ತಮ್ಮ ಮೊದಲ ಪ್ರಶ್ನೆಯ ಉತ್ತರದಲ್ಲಿ ಕಂಡುಕೊಂಡೆ. ಸುಮಾರು ಮೂರ್ನಾಲ್ಕು ಸಲ ಓದಿದಾಗ ಇದಿಷ್ಟನ್ನು ತಿಳಿದುಕೊಳ್ಳಲು ನನಗೆ ಸಾಧ್ಯವಾಯಿತು ಅಕ್ಕಾ.
ಜಗದೀಶ್ ಹತ್ತಿ, ಧಾರವಾಡ
Sep 30, 2021“ಲಿಂಗವೆಂದರೆ ಇದೆಯೆಂಬುದೂ ಅಲ್ಲ, ಅಲ್ಲವೆಂಬುದೂ ಅಲ್ಲ. ಏಕೆಂದರೆ ಅದು ಸದಾ ಆಗುವಿಕೆ. ಆಗುವಿಕೆಯೆಂದರೆ ಸದಾ ಹೊಸತನದೊಂದಿಗಿನ ಬದಲಾವಣೆ; ಬದಲಾಗುವಿಕೆ ಎಂದರೆ ಅದೇ ಜಂಗಮ.” ಎನ್ನುವ ವಿವರಣೆ ಹೊಸದೇನನ್ನೋ ಕಾಣಿಸುವಂತಿದೆ. “ಲಿಂಗ ಜಂಗಮ ಒಂದೇ ಎಂಬೆ” ಎನ್ನುವ ಹಲವಾರು ವಚನಗಳಿವೆ. ಹಾಗಾದರೆ ಅವುಗಳ ಹಿನ್ನೆಲೆ ಇದೇ ವಿವರಣೆಯೇ?
ಭರತೇಶ್ ಕೊರಲಿ
Sep 30, 2021ಶರಣರು ಅದ್ವಯಿಗಳೇ? ಶಿವಾದ್ವೈತಿಗಳೇ?