ಶಿವನ ಕುದುರೆ…
ಆ ಕಣಿವೆ ಪ್ರದೇಶದಲ್ಲಿ ಯುದ್ಧಗಳಿಗೆ ಬರವೇನೂ ಇದ್ದಿರಲಿಲ್ಲ. ಹೀಗೆ ಬಂದು ಹಾಗೆ ಹಾದು ಹೋಗುವ ಪ್ರತಿಯೊಂದು ಸೈನ್ಯದ ತುಕಡಿಯೂ ಊರನ್ನೂ ಸೂರೆಯಾಡುವಲ್ಲಿ ಒಂದು ಕೈ ಮೇಲಾಗಿರುತ್ತಿತ್ತು. ಅರಬಸ್ಥಾನದ ಕುದುರೆ ಸವಾರಿಯ ಸೈನ್ಯಕ್ಕೆ ಮುಖವೇ ಇದ್ದಿರಲಿಲ್ಲ. ಆ ಚಲ್ಲಾಪಿಲ್ಲಿಯಾದ ಬದುಕು, ಸಣ್ಣಮಟ್ಟದ ಪ್ರತಿರೋಧಗಳಿಗೆ ಸಾವುನೋವಿನ ಪ್ರತಿಕಾರ, ಆ ಅಸಂಖ್ಯ ಸಾವು, ಅಬಲೆಯರ ಗೋಳಾಟ, ಅಸಹಾಯಕರ ಪರದಾಟಗಳು, ಅದೆಲ್ಲದರ ನಡುವೆ ಮೂರಾಬಟ್ಟೆಯಾದ ಬದುಕನ್ನು ತಲೆಎತ್ತಿ ನಿಲ್ಲುವಂತೆ ಮತ್ತೆ ಕಟ್ಟಿಕೊಳ್ಳಲು ಹೆಣಗಾಡುವ ಹೆಂಗಸರು, ದೇವರನ್ನು ಸಾಕ್ಷಾತ್ ಭೇಟಿಯಾದವರ ಹಾಗೆ ಸಾಂತ್ವನ ಹೇಳುವ ಸಂತರು, ಸನ್ಯಾಸಿಗಳು ಅಲ್ಲಿ ಕಣಿವೆ ನಾಡಲ್ಲಿ ಓಡಾಡುತ್ತಿದ್ದರು. ಇದೆಲ್ಲವನ್ನೂ ಮೀರಿದ ಬುದ್ಧನ ನಗು ಅಲ್ಲಿತ್ತು. ಆ ನಗುವನ್ನು ತದೇಕಚಿತ್ತದಿಂದ ದೃಷ್ಟಿಸುತ್ತಿದ್ದ ಭೋಲಾ ಎಂಬ ಬಾಲಕ ಈ ಶಾಂತಿಗಾಗಿ ನಗುವುದನ್ನು ಹೇಗೆ ಕಲಿಯುವುದು? ಬದುಕುವುದೆಂದರೆ ಹೇಗೆ..? ಮತ್ತು ಯಾಕಾಗಿ ಎಂಬುದನ್ನು ಯೋಚಿಸುತ್ತಿದ್ದ.
ಅವನ ಹೆಸರೇನೂ ಭೋಲಾ ಅಲ್ಲವಾದರೂ ಜನ ಅವನನ್ನು ಹಾಗೆ ಕರೆಯುತ್ತಿದ್ದರು. ಭೋಲಾಶಂಕರ ಎನ್ನುವುದು ಉದ್ದವಾಗುತ್ತದೆಂದು ತಾಯಿ ಮುದ್ದಿನಿಂದ ಭೋಲಾ ಎನ್ನುತ್ತಿದ್ದಳು. ಅದೇ ಹೆಸರು ಮುಂದೆ ಊರಲ್ಲೆಲ್ಲ ಕರೆಯಲ್ಪಟ್ಟು ಶಂಕರ ಎನ್ನುವ ಹೆಸರೇ ಮರೆತುಹೋಗುವಷ್ಟು ಭೋಲಾ ಪ್ರಸಿದ್ಧನಾಗಿದ್ದ. ಕಟ್ಟಿಗೆ ತರಲು ಮುದುತದುಕರಿಗೆ ಸಹಾಯ ಮಾಡುತ್ತಿದ್ದ. ಬಾಣಂತಿ ಹೆಂಗಸರ ಮನೆಗೆ ದೂರದ ಸುರಂಗದೊಳಗಿನ ಒರತೆಯಿಂದ ನೀರು ಹೊತ್ತು ತಂದು ಹಾಕುತ್ತಿದ್ದ. ಕುರಿಮೇಕೆ ಕಳೆದು ಹೋದರೆ ಒಬ್ಬಂಟಿಗರಿಗೆ ಹುಡುಕಿಕೊಡಲು ಸಹಾಯ ಮಾಡುತ್ತಿದ್ದ. ದಾರಿಹೋಕರಿಗೆ ಅನ್ನಾಹರಕ್ಕಾಗಿ ಸಹಾಯ ಮಾಡುತ್ತಿದ್ದ. ತಾಯಿಯಂದಿರ ಮಡಿಲಲ್ಲಿ ರಚ್ಚೆ ಹಿಡಿದು ಅಳುವ ಕೂಸನ್ನು ಎತ್ತಿ ಆಡಿಸುತ್ತಿದ್ದ. ಸೈನಿಕರ ಹಾವಳಿಯಿಂದ ಅರೆಜೀವವಾದವರಿಗೆ ಆಸರಾಗುತ್ತಿದ್ದ, ಔಷಧೋಪಚಾರ ಮಾಡುತ್ತಿದ್ದ. ಸಂತರು ಸನ್ಯಾಸಿಗಳು ಆ ಊರಿಗೆ ಬಂದರೆ ಸಾಕು ಅವರೊಂದಿಗೆ ಇದ್ದು ಭಿಕ್ಷಾನ್ನವನ್ನು ಚಿಸ್ತಿಗೆ(ಭಿಕ್ಷಾ ಪಾತ್ರೆ) ಹಾಕಿಸಿಕೊಂಡು ತರುತ್ತಿದ್ದ. ಅವನ ಪ್ರೀತಿಯ ಆರೈಕೆಯ ಕಾರಣಕ್ಕಾಗಿಯೇ ಅವನು ಭೋಲಾ ಎಂದು ಹೆಸರುವಾಸಿಯಾಗಿದ್ದ.
ಮಗ ಚೂರುಚೂರೇ ಬೆಳೆಯುತ್ತಿದ್ದಂತೆ ತಾಯಿಯ ಮುಖದಲ್ಲಿ ಆತಂಕ ಹೆಚ್ಚಾಗತೊಡಗಿತ್ತು. ಎದೆಯುದ್ದ ಬೆಳೆದ ಮಗ ಯಾವ ಗಳಿಗೆಯಲ್ಲಿ ಯಾವ ದಂಡಿನ ದಾಳಿಗೆ ತುತ್ತಾಗುತ್ತಾನೋ ಅನ್ನೋ ಭಯ. ‘ಭೋಲೆಶಂಕರಾ ನಿನ್ನ ಹೆಸರನ್ನೆ ಮಗನಿಗೂ ಇಟ್ಟಿದ್ದೇನೆ, ನೀನೆ ಕಾಯಪ್ಪಾ’ ಅಂತ ಗಲ್ಲಾಗಲ್ಲಾ ಬಡಕೊಂಡು ಹಣೆಗೆ ಭಸ್ಮಾ ಹಚ್ಚಿಕೊಳ್ಳುತ್ತಿದ್ದಳು. ತಾಯಿ ಮೇಕೆ ಕಾಯಲು ಹೋದರೆ ಭೋಲಾ ಕತ್ತೆಗಳ ಸಹಾಯದಿಂದ ಆ ಕಣಿವೆ ನಾಡಲ್ಲಿ ಸಾಮಾನು ಸರಂಜಾಮು ಸಾಗಿಸುವ ಕೆಲಸಕ್ಕೆ ಹೋಗುತ್ತಿದ್ದ. ಅವನ ತಾಯಿ ಈ ಕಣಿವೆ ನಾಡಿನಿಂದ ಅತ್ತ ದೂರ ಹೋಗಬೇಕೆಂದು ಎಷ್ಟೋ ಸಲ ಯೋಚಿಸಿದರೂ ದರೋಡೆಕಾರರು, ಸೈನಿಕರ ದಂಡುದಾಳಿಗೆ ಸಿಕ್ಕುಬಿಟ್ಟರೆ ಎಂಬ ಅಂಜಿಕೆಗಾಗಿ ಸುಮ್ಮನುಳಿದಿದ್ದಳು. ನಾಲ್ಕೈದು ಮೇಕೆಗಳು, ಎರಡು ಕತ್ತೆಗಳ ಹೊರತಾಗಿ ಅವರಲ್ಲಿ ಏನೂ ಇದ್ದಿರಲಿಲ್ಲವಾಗಿ ತಾಯಿ-ಮಗನ ಹೊಟ್ಟೆಗೆ ಬಟ್ಟೆಗೆ ಸಾಕಾಗುವಷ್ಟು ದುಡಿಮೆ ಇದ್ದುದರಿಂದ ಬದುಕು ನಿರುಮ್ಮಳವಾಗಿತ್ತು. ಆದರೆ ಭೋಲಾನ ವಯಸ್ಸು ಹದಕ್ಕೆ ಬಂದಂತೆಲ್ಲ ಅವನು ಬದುಕುವ ರೀತಿಯೂ ಬದಲಾಗುತ್ತಾ ಹೊರಟಿತ್ತು…
ಹಾಡುತ್ತಾ ತಿರುಗುವ ಫಕೀರರನ್ನು ಕಂಡರೆ ಅವನ ಮನಸ್ಸು ಅರಳುತ್ತಿತ್ತು. ಈ ಸಾವು-ನೋವುಗಳು, ರಾಜ್ಯ ಐಶ್ವರ್ಯಗಳಾದಿಯಾಗಿ ಮನುಷ್ಯನ ಬದುಕುವ ಹಂಬಲಗಳ ಬಗ್ಗೆ ಕೆಟ್ಟ ಕುತೂಹಲದ ಪ್ರಶ್ನೆಗಳು ಅವನನ್ನು ಕಾಡುತ್ತಿದ್ದವು. ಆ ಬೃಹತ್ ಬುದ್ಧನ ಮೂರ್ತಿಗಳು ತದೇಕಚಿತ್ತದಿಂದ ಆಕಾಶದೆತ್ತರಕ್ಕೆ ಚಾಚಿಕೊಂಡು ಅನಂತ ಅವಕಾಶವನ್ನು ನಿರೀಕ್ಷಿಸುವುದರಲ್ಲಿ ಏನೋ ಅರ್ಥವಿದೆ ಎನಿಸತೊಡಗಿತು. ಆ ಕಣಿವೆ ನಾಡಿಗೆ ಒಮ್ಮೊಮ್ಮೆ ಭಂತೆಗಳು, ಮತ್ತೊಮ್ಮೆ ಫಕೀರರು ಇನ್ನೊಮ್ಮೆ ಸಾಧು-ಸನ್ಯಾಸಿಗಳು ಬಂದು ಹೋಗುವುದು, ಅವರು ಏನನ್ನೋ ಹುಡುಕುವ ಆಶಾಭಾವನೆಯನ್ನು ಹೊತ್ತುಕೊಂಡೇ ತಿರುಗುವುದು ಎಲ್ಲವೂ ವಿಚಿತ್ರದ ಸಂಗತಿಗಳ ಹಾಗೆ ಅವನಿಗೆ ಕಾಣಿಸುತ್ತಿದ್ದವು. ಅವರಾಡುವ ಮಾತುಗಳು, ಹೇಳುವ ಹಾಡುಗಳು, ಭೂಮ್ಯಾಕಾಶದ ನಡುವಿನ ಅನಂತ ಅವಕಾಶವನ್ನು ನಿಟ್ಟುಸಿರು ಬಿಟ್ಟು ನೋಡುವುದು ಇವೆಲ್ಲದರ ನಡುವೆ ಯಾವುದೋ ಮಹತ್ ಇದೆಯೆಂಬುದು ಅರಿವಿಗೆ ಬರುತ್ತಾ… ಈ ಜ್ಞಾನವೆಂದರೇನು, ದೇವರೆಂದರೇನು, ದೇವರಿದ್ದಾನೆಂದರೆ ಅವನಿರುವುದು ನಮ್ಮ ಅರಿವಿಗೆ ಬರುವುದು ಹೇಗೆ ಎಂಬ ಪ್ರಶ್ನೆ ಅವನನ್ನು ಕಾಡತೊಡಗಿತು.
ಒಂದು ಮದ್ಯಾಹ್ನ ತಾಯಿಯ ತೊಡೆಯ ಮೇಲೆ ತಲೆಯಿಟ್ಟು ಮಲಗಿದ್ದ ಭೋಲಾ ‘ಅಮ್ಮಾ ಈ ಬುದ್ಧ ಅಂದರೆ ಯಾರು?’ ಅಂತ ಕೇಳಿದ. ಆಕೆ ಅದೆಷ್ಟೋ ಬಾರಿ ಅವನ ಕತೆ ಹೇಳಿದ್ದಿರಬಹುದು. ಪ್ರತಿ ಸಲ ಹೇಳುವಾಗಲೂ ಹೊಸತೇ ಕತೆಮಾಡಿ ಹೇಳುತ್ತಿದ್ದಳು. ಈ ಸಲ ಹೇಳುವಾಗ ಬುದ್ಧ ಜ್ಞಾನದ ಸಿದ್ಧನಾದ ಕತೆ ಹೇಳಿದಳು.
ರೋಗಿ, ಮುದುಕ, ಮತ್ತು ಸಾವಿನ ಬಗ್ಗೆ ಅವನೊಳಗೆ ಶುರುವಾದ ವ್ಯಥೆ, ಮನೆಬಿಟ್ಟು ದೇಹದ ಸ್ಥಿತಿಗತಿ ಯಾಕೆ ಕಾಲಕಾಲಕ್ಕೆ ಬದಲಾಗುತ್ತದೆ, ಈ ಜಗತ್ತು ಅಂದರೇನು, ತಪಸ್ಸು ಅಂದರೇನು, ಉಪವಾಸ-ವನವಾಸ ಅನುಭವಿಸಿ ದೇವರನ್ನು ಒಲಿಸಿಕೊಳ್ಳುವ ಇತರ ಸನ್ಯಾಸಿಗಳ ಜೊತೆ ತಿರುಗಿ, ಕಾಡುಮೇಡೆಲ್ಲ ಅಲೆದು, ರಾಜಕುಮಾರನ ಸುಖದ ಮೈ ಸೊರಗಿ ಸಣಕಲಾಗಿ ಕಾಣದ ದೇವರಿಗಾಗಿ ಹುಡುಕಾಡಿ ಕೊನೆಗೆ ಹಸಿವನ್ನು ತಾಳಲಾರದೇ ಒಬ್ಬಂಟಿಯಾಗಿ ಕಾಡೊಳಗಿನ ಅರಳೀಮರದ ಕೆಳಗೆ ಕುಳಿತುಬಿಟ್ಟನಂತೆ… ಅಸಾಧ್ಯದ ಹಸಿವು ಇನ್ನೇನು ಆ ರಾಜಕುಮಾರನನ್ನು ನುಂಗಿನೀರು ಕುಡಿದು ಬಿಡುವುದೋ ಅನ್ನುವಷ್ಟರಲ್ಲಿ ಸುಜಾತ ಎನ್ನುವ ಮಹಾತಾಯಿ ಆ ಅರಳೀಮರದ ಕೆಳಗಿನ ಕಾಡಿನ ದೈವಕ್ಕೆ ಎಡೆಮಾಡಿ ತಂದಳಂತೆ. ಅದು ಎಂಥಾ ಅಡುಗೆ -ತನಗೆ ಗಂಡುಮಗು ಹುಟ್ಟಿದರೆ ನಿನಗಾಗಿ ಐವತ್ತು ಹಸುವಿನ ಹಾಲನ್ನು ಇಪ್ಪತ್ತೈದು ಹಸುವಿಗೆ ಕುಡಿಸಿ, ಆ ಇಪ್ಪತ್ತೈದು ಹಸುವಿನ ಹಾಲನ್ನು ಹತ್ತು ಹಸುವಿಗೆ ಕುಡಿಸಿ, ಆ ಹತ್ತು ಹಸುವಿನ ಹಾಲನ್ನು ಐದು ಹಸುವಿಗೆ ಕುಡಿಸಿ, ಆ ಐದು ಹಸುವಿನ ಹಾಲನ್ನು ಒಂದು ಹಸುವಿಗೆ ಕುಡಿಸಿ, ಆ ಒಂದು ಹಸುವಿನ ಹಾಲನ್ನು ಕರೆದು ಅದರೊಳಗೆ ಪಾಯಸ ಮಾಡಿ ಹುಣ್ಣಿಮೆಯ ನಡುರಾತ್ರಿ ನಿನ್ನ ಗದ್ದುಗೆಗೆ ಹಾಲಿನ ಪಾಯಸ ಮುಟ್ಟಿಸುತ್ತೇನೆ- ಎಂದು ಹರಕೆ ಹೊತ್ತಿದ್ದಳಂತೆ. ಆ ಮರದ ಕೆಳಗೆ ಹಸಿವು ಎಂದು ಒರಲುತ್ತಾ ಕುಳಿತಿದ್ದ ಕೃಶ ದೇಹವನ್ನು ಕಂಡ ಆ ಸುಜಾತ ಸಾಕ್ಷಾತ್ ಕಾಡಿನ ದೈವವೇ ನನ್ನ ಹರಕೆಗೆ ಬಾಯಿ ತೆರೆದುಕೊಂಡು ಕುಂತಿದ್ದಾನಲ್ಲವ್ವಾ.. ಅಂತ ತಾನು ತಂದ ಅಡುಗೆಯನ್ನು ರಾಜಕುಮಾರನ ಬಾಯಿಗೆ ಹಾಕಿದಳಂತೆ.. ಆಗ ಬುದ್ಧನಿಗೆ ಜ್ಞಾನೋದಯವಾಯ್ತಂತೆ… ಈ ಜಗತ್ತಿನ ಬದುಕಿನ ಸಕೀಲು ಬೇರೆಲ್ಲೂ ಇಲ್ಲ ಅದು ಇರುವುದು ಸಿಕ್ಕಷ್ಟರಲ್ಲಿಯೇ ತೃಪ್ತನಾಗುವುದರಲ್ಲಿ ಅಂದುಕೊಂಡನಂತೆ. ಹೀಗೆ ಬುದ್ಧ ಆಸೆಯನ್ನು ತ್ಯಜಿಸಿ, ಬಂದಂತೆ ನಗುನಗುತಾ ಬದುಕು ಅಂತ ಜನರಲ್ಲಿ ಬೋಧನೆ ಮಾಡತಾ ಶುದ್ಧಸಿದ್ಧನಾದ ಅಂತ ತಾಯಿ ಕತೆ ಮಾಡಿ ಹೇಳಿದಳು. ಇಂಥ ಎಷ್ಟೋ ಸಾಧಕರ ಕತೆಗಳನ್ನ ಆ ತಾಯಿ ಅವನಿಗೆ ಹೇಳುತ್ತಿದ್ದಳು.
******* ******* *****
ಅದೊಂದು ಮದ್ಯಾಹ್ನ ಫಕೀರನೊಬ್ಬ ಮನೆಯವರೆಗೂ ಚಿಸ್ತಿ ಹಿಡಿದುಕೊಂಡು ಭಿಕ್ಷೆಗೆ ಬಂದ. ಭೋಲಾನ ಮುಖ ಲಕ್ಷಣ ಕಂಡವನೇ ತನ್ನ ಕೈಯೊಳಗಿನ ದಮ್ಮಡಿಯನ್ನು ಖಣಗುಡಿಸುತ್ತಾ ಮೇಲಕ್ಕೆ ಮುಖ ಮಾಡಿ ಹಾಡಲಾರಂಭಿಸಿದ.
“ಓ ದಯಾಮಯೀ ದೇವರೇ..!
ನೀನಲ್ಲದೆ ಮತ್ತಾರು ಈ ಪವಾಡ ಮಾಡುವರು…
ಜೀನವ ತೊಟ್ಟು ನಿಂತ ಕುದುರೆ
ನಿನಗಾಗಿ ಕಾದು ನಿಂತಿಹುದು..
ಗುಪ್ತವೆನ್ನುವುದು ಇಲ್ಲೇನಿದೆ..?
ಯಾರ ಭಕ್ತಿಗೆ ನೀ ಸಾಕ್ಷಿಯಾಗಲು
ಧರೆಗೆ ಇಳಿದು ಬಂದಿರುವೆ ದಯಾಮಯೀ
ನೀನಲ್ಲದೆ ಮತ್ತಾರು ಈ ಪವಾಡ ಮಾಡುವರು…
ಹಾಡು ಮುಗಿಸಿದ ಫಕೀರನು ಭೋಲಾನ ಮೈದಡವಿ ‘ಹೊರಡು ನನ್ನಪ್ಪಾ.. ನೀ ಬಂದು ಇಲ್ಲಿ ನಿಂತಿರುವುದೇಕೆ.. ದೂರ ಕ್ಷಿತಿಜದ ಅಂಚು ಮುಗಿಯುವವರೆಗೂ ನಡೆ, ನಿನ್ನ ಪಂಚೇಂದ್ರಿಯಗಳು ಲೋಕದ ಅನುಭವಕ್ಕೆ ಸಿದ್ಧಗೊಂಡಿವೆ ಹೊರಡು’ ಎಂದಾಗ ಭೋಲಾನ ತಾಯಿಯ ಎದೆ ಧಸಕ್ಕೆಂದಿತು. ಪಾವು ನವಣೆಯನ್ನು ಫಕೀರನ ಜೋಳಿಗೆಗೆ ಹಾಕುತ್ತಾ ‘ನೀವು ಏನು ಹಾಡಿದಿರಿ, ಭೋಲಾನಿಗೆ ಏನು ಹೇಳಿದಿರಿ ನನಗೆ ತಿಳಿಯದು. ಬಿಡಿಸಿ ಹೇಳಿರಿ’ ಎಂದು ಪರಿಪರಿಯಾಗಿ ಕೇಳಿಕೊಂಡಳು. ಆಗ ಆ ಫಕೀರನು ಭೋಲಾನ ಮುಖಲಕ್ಷಣದಲ್ಲಿ ದೇವಕಳೆ ಇರುವುದಾಗಿಯೂ, ಆತ ಲೋಕಸಂಚಾರ ಮಾಡುತ್ತಾ.. ಎಲ್ಲಿ ಘನಗೊಂಡಂಥ ಧರ್ಮದ ನಡೆಯಿರುವುದೋ ಅಲ್ಲಿಗೆ ಹೋಗಿ, ಮತ್ತೊಂದು ದೇವರ ಕುದುರೆ ಬರುವವರೆಗೂ ಗುಪ್ತಭಕ್ತನಾಗಿ ಆ ಅರಿವಿನ ಬೆಳಕಿಗೆ ಸಾಕ್ಷಿಯಾಗುವನು ಎಂದು ಹೇಳಿದನು.
ಫಕೀರ ಅತ್ತ ಹೊರಟದ್ದೆ ಇತ್ತ ತಾಯಿಯ ಎದೆಯಲ್ಲಿ ತಳಮಳ ಆರಂಭಗೊಂಡಿತು. ಎಲಾ ಎಲಾ ನವಮಾಸ ಹೊತ್ತು ಸಾಕಿ ಸಲುಹಿದಂಥಾ ಕಂದಮ್ಮಾ ಮನೆಬಿಟ್ಟು, ಊರುಬಿಟ್ಟು ದೇಶಾಂತರ ಹೋಗುವ ದೇವಕಳೆ ಯಾತರದ್ದು..? ಹಡೆದ ಕರುಳು-ಗಿರುಳು ಅನ್ನೋದು ಆ ಭೋಲಾ ಶಂಕರನಿಗೆ ಇಲ್ಲವೇನಪ್ಪಾ.. ಅಂತ ಚಿಂತಾಕ್ರಾಂತಳಾದ ಆಕೆಯ ಒಡಲೊಳಗೆ ಸಂಕಟ ಬತ್ತಿ ಹೊಸೆಯತೊಡಗಿತು. ಭೋಲಾ ಯಾವುದರ ಬಗ್ಗೆಯೂ ಅರಿವಿಲ್ಲದಂತೆ ತನ್ನ ಪಾಡಿಗೆ ತಾನು ಕತ್ತೆ ಕೊರಳಿಗೊಂದು ಹಗ್ಗ ಹೊಸೆಯುವುದರಲ್ಲಿ ನಿರತನಾಗಿದ್ದನು.
ಮಗ ‘ಶಿವನ ಕುದುರೆ ಆಗತಾನೆ’ ಅನ್ನೋ ಫಕೀರನೊಬ್ಬನ ಮಾತು ಆಕೆಯ ನಿದ್ದೆಯನ್ನು ಕಸಿದಿತ್ತು. ಅವನ ಮುಖದಲ್ಲಿನ ಚಿತ್ಕಳೆ ಬೇರೇನೂ ಅಲ್ಲ, ದೇವಕಳೆಯೇ ಹೌದೆಂದು ಆಕೆಗೂ ಅನಿಸಲಾರಂಭಿಸಿದಾಗ ಈಗಿಂದೀಗಲೇ ಮಗನ ಮದುವೆ ಮಾಡಿ ಮುಗಿಸಿದರಾಯ್ತೆಂದು ತೀರ್ಮಾನಿಸಿದಳು. ತಾಯಿಯ ಮನಸ್ಸಿನಲ್ಲಿ ಭೋಲಾನ ಮದುವೆಯ ಲೆಕ್ಕಾಚಾರ ಶುರುವಾಗಿತ್ತು. ಅಣ್ಣನ ಹಿರಿಯ ಮಗಳು ಭೋಲಾನಿಗಿಂತ ವಯಸ್ಸಿನಲ್ಲಿ ದೊಡ್ಡವಳಾದರೂ ನಡತೆಯಲ್ಲಿ ಗರತಿಯಂಥವಳು. ಎರಡನೆಯವಳು ಭೋಲಾನ ಸರಿಸಮಾನ ವಯಸ್ಸಿನವಳು, ಆದರೂ ಮೂಗು ಸ್ವಲ್ಪ ಮೊಂಡು, ಸ್ವಭಾವದಲ್ಲಿ ಅಷ್ಟೇ ಹಠಮಾರಿ. ಮೂರನೆಯವಳು ತನ್ನ ಮನೆಗೆ ಒಪ್ಪತಕ್ಕವಳೇ ಆದರೂ ಆಕೆಯ ನಡತೆ-ಗಿಡತೆ ಏನೂ ತಿಳಿಯದ ಗಂಡರಾಮಿ.. ನಾಲ್ಕನೆಯವಳು ನೋಡಲಿಕ್ಕೆ ಚಲುವೆ ಆದರೆ ಆಕೆ ಹುಟ್ಟುತ್ತಲೇ ಕೆಮ್ಮುಧಮ್ಮು ಜನ್ಮಕ್ಕಂಟಿಸಿಕೊಂಡು ಬಂದಂಥವಳು. ಐದನೆಯವಳೋ ಇನ್ನೂ ಸಣ್ಣವಳು.. ಇವರೆಲ್ಲರೊಳಗೆ ಮೂರನೆಯವಳೇ ಆದರೆ ಸರಿಜೋಡಿಯಾದೀತು ಎಂದು ಮನಸ್ಸಿನಲ್ಲೆ ಬಗೆದು, ಮದುವೆ ಮನೆಯ ಕನಸನ್ನೆಲ್ಲ ಹೊಸೆಯುತ್ತಾ.. ಯಾರನ್ನ ಕರೀಬೇಕು, ಯಾರು ಯಾವ ಕೆಲಸ ಮಾಡಿದರೆ ಶುಭಕಾರ್ಯ ಸುಗಮವಾದೀತು ಇಂಥದೇ ಆಲೋಚನೆಗಳಲ್ಲಿ ದಿನದೂಡಿದಳು.
ಅದೊಂದು ದಿನ ಮಧ್ಯಾಹ್ನದ ಉರಿಬಿಸಿಲಲ್ಲಿ ಮಗನಿಗೆ ಊಟಕ್ಕೆ ಹಾಕಿ ನೀರು ತುಂಬಿಡಲು ಬಿಂದಿಗೆಗೆ ಕೈಹಾಕುತ್ತಾಳೆ, ಹರವಿಯಲ್ಲಿ ನೀರಿಲ್ಲ, ಅಯ್ಯ ಶಿವನೇ ಇದೇನಾಯ್ತಪಾ ಅಂತ ಗಡಬಡಿಸಿ ಕಣಿವೆಯಿಂದಿಳಿದು ಸುರಂಗದೊಳಗೆ ಹೊಕ್ಕು ನೀರು ತರಲೆಂದು ಅವಸರದಲ್ಲಿ ಧಾವಿಸುತ್ತಾಳೆ. ಮಗನ ಭವಿಷ್ಯವಾಣಿ ಕೇಳಿದಂದಿನಿಂದ ಊಟಿಲ್ಲ, ನೀರಿಲ್ಲ, ದಣಿವಿಗೆ ಕಣ್ಣಿಗೆ ನಿದ್ದೆ ಎನ್ನುವುದು ಇಲ್ಲವಾಗಿದ್ದ ಆಕೆಗೆ ನಿತ್ರಾಣ ಸೋಸಿ ಬಂದಿತ್ತು. ಮೇಲೆ ರಣಹೊಡೆಯುವ ಬಿಸಿಲ ತಾಪಕ್ಕೆ ಎತ್ತಿನ ಮೈ ಅದುರಿದಂತೆ ಆ ತಾಯಿಯ ಮೈ ಅದುರಿ ಕಣ್ಣಿಗೆ ಬವಳಿ ಬಂದಂತಾಗಿ ನೀರಿನ ಕೊಡದೊಂದಿಗೆ ರೊಪ್ಪೆಂದು ಜಾರಿ ಸುರಂಗದೊಳಗೆ ಬಿದ್ದಳು. ನೋಡಿದವರು ಹಾ.. ಹೋ.. ಅನ್ನುವುದರೊಳಗೆ ಆಳದ ಸುರಂಗದೊಳಗಿನ ಸುಳಿಯೊಂದು ಎಳೆದು ನುಂಗಿಕೊಂಡಂತೆ ಭೋಲಾನ ತಾಯಿ ನೀರುಪಾಲಾದಳು.
ಊಟಕ್ಕೆ ಕೂತಿದ್ದ ಮಗರಾಯನ ಗಂಟಲಲ್ಲಿ ತುತ್ತು ಸಿಕ್ಕಂತೆ ಉಕ್ಕುತ್ತಿತ್ತು ಬಿಕ್ಕಳಿಕೆ, ಅದೇನ ವಿಧಿಯೋ.. ಅವನ ಕರುಳಿಗೆ ಅಮ್ಮಾ ಎಂಬ ಶಬ್ದವೊಂದು ಕೂಗುವುದಕ್ಕೂ ಹೊರಗಿನಿಂದ ಜನರ ಗದ್ದಲವು ಮನೆಯತ್ತಲೇ ಬಂತು. ಏನಾಯ್ತೆಂದು ಕೇಳಿದರೆ ತಾಯಿ ಸುಳಿಯೊಳಗೆ ಬಿದ್ದಳೆಂಬ ಅನಾಮತ್ತ ಅವಘಡದ ಸುದ್ದಿ ಕಿವಿಗೆ ಬಿದ್ದದ್ದೇ ಭೋಲಾ ನೆಲ-ಮುಗಿಲು ಒಂದಾಗುವಂತೆ ಅಮ್ಮಾ ಎಂದು ಕಿರುಚುತ್ತಾ ಸುರಂಗದತ್ತ ಓಡತೊಡಗಿದ. ನಿಂತವರು ತಡೆಹಿಡಿದು… ಆ ಸುಳಿ ನುಂಗಿದವರ ಹೆಣವೂ ಸಿಕ್ಕಲಾರದಪ್ಪಾ ಎಂದು ಸಂತೈಸಿ ಎಷ್ಟು ಹೇಳಿದರೂ ಅವನ ದುಃಖದ ಕಟ್ಟೆಯನ್ನು ಸಂತೈಸಲಿಕ್ಕಾಗಲಿಲ್ಲ. ಹೀಗೆ ಬರುತ್ತೇನೆಂದು ಹೋದವಳು ಎಲ್ಲಿ ಹೋದಳು ಎಂಬಂತೆ ಸನ್ನೆ ಮಾಡಿ ಅಳುತ್ತಲೇ ಇದ್ದ ಭೋಲಾ ತಬ್ಬಲಿಯಂತಾಗಿದ್ದ. ಮುಂದಲ ಮೂರು ದಿನ ಸುರಂಗದ ಮುಂದೆ ಮಂಡಿಯೂರಿ ಕುಳಿತು ಆ ಶಂಕರನನ್ನು ಭಜಿಸಿದ. ಮೂರನೇ ದಿನದ ಮುಂಜಾವಿಗೆ ಸುಳಿ ನುಂಗಿದ್ದ ತಾಯಿಯ ದೇಹವು ಠೊಳಕ್ ಅಂತ ಊದಿಕೊಂಡು ಮೇಲೆದ್ದು ಬಂದಾಗ ಅವನ ಕಣ್ಣಲ್ಲಿ ಅಳುವುದಕ್ಕೂ ಹನಿ ಕಣ್ಣೀರು ಉಳಿದಿರಲಿಲ್ಲ.
ಸಂಸ್ಕಾರದ ನಿಯಮಗಳನ್ನು ಪಾಲಿಸಿದ ಮೇಲೆ ಭೋಲಾನ ಮನಸ್ಸಿನೊಳಗೆ ಶೂನ್ಯದ ಹೊರತು ಮತ್ತೇನೂ ಉಳಿದಿರಲಿಲ್ಲ. ಭೋಲಾನ ಸೋದರಮಾವ ಊರಿಗೆ ಹೊರಟು ಬಾ ಎಂದು ಎಷ್ಟು ಕರೆದರೂ ಅವನಿಗೆ ಹೋಗುವ ಮನಸ್ಸಾಗದೆ ಖಾಲಿಮನೆಯ ನೆತ್ತಿಯ ಬೆಳಕಿಂಡಿಯನ್ನು ನೋಡುತ್ತಾ ಕುಳಿತುಬಿಟ್ಟಿದ್ದ. ಸತ್ತವರು ಏನಾಗುತ್ತಾರೆ..? ಈಗ ನನ್ನ ಅಮ್ಮ ಎಲ್ಲಿರಬಹುದು. ಉಸಿರಿರುವಾಗ ದೇಹಕ್ಕೆ ಒಂದು ಅರ್ಥ ಬರುವುದಾದರೆ ಸತ್ತ ಮೇಲೇಕೆ ಆ ಅರ್ಥವಿರುವುದಿಲ್ಲ. ಈ ಸಾವಿನ ಗುಂಭ ಪ್ರಪಂಚವನ್ನು ಅರಿಯುವುದು ಹೇಗೆ..? ನಾನು ಯಾರು..? ಯಾಕಾಗಿ ಹುಟ್ಟಿ ಬಂದಿದ್ದೇನೆ..? ದೇವರು ಇದ್ದಾನೆ ಎಂದರೆ ಆತನ ಇರುವಿಕೆ ಹೇಗಿದೆ..? ಈ ಪಂಚಮಹಾಭೂತಗಳಿಗೆ ಏನಾದರೂ ಅರ್ಥವಿದೆಯೇ… ಎಷ್ಟು ಉಪಯೋಗವೋ ಅಷ್ಟೇ ವಿನಾಶಕಾರಿಯಾದ ಇವುಗಳನ್ನು ಮನುಷ್ಯರು ಪೂಜಿಸುವುದೇಕೆ… ದೇವರು ಹೊರಗೆಲ್ಲೋ ಇದ್ದಾನೋ ಅಥವಾ ನನ್ನೊಳಗಿದ್ದಾನೋ… ನಾನು ದೇವರೇ..? ಇಂಥದೇ ಹತ್ತಾರು ಪ್ರಶ್ನೆಗಳ ಸುಳಿಯೊಳಗೆ ಭೋಲಾ ಬಿದ್ದುಬಿಟ್ಟಿದ್ದ.
ಎಂಥಾ ಕೂಸಿಗೆ ಎಂಥಾ ಫಜೀತಿ ಬಂತಲ್ಲವಾ..! ತಾಯಿ ಇಲ್ಲಾಂದರೆ ಏನಾಯ್ತು ನಮಗೆಲ್ಲ ಆಸರಕ್ಕೆ ಬ್ಯಾಸರಕ್ಕೆ ಆಗಿರೋ ಗಂಡು ಮಗ ಉಪವಾಸ ಇದ್ದಾನು ಅಂತ ಊರ ಗರತೇರೆಲ್ಲ ಊಟ ಕೊಟ್ಟು ಕಳಿಸಿದರು.. ಮುದುತದುಕರು ಕೈ ಕೋಲು ಊರಿಕೊಂಡು ಬಂದು ಗಲ್ಲ ಸವರಿ ಸಾಂತ್ವನ ಹೇಳಿದರು. ಇದ್ಯಾವುದರ ಕಡೆಗೂ ಲಕ್ಷ್ಯವಿಲ್ಲದಂತೆ ಕುಳಿತಿದ್ದ ಭೋಲಾ… ಅಂದು ಬಂದು ಹಾಡಿ ಹೋದ ಫಕೀರನು ಹೇಳಿದ್ದೇನು…? ನಾವು ಅನುಭವಿಸುವುದು ಮುಖ್ಯವೇ ಅಥವಾ ನಮ್ಮ ಅನುಭವವನ್ನು ಮೀರಿದ್ದೊಂದು ಶಕ್ತಿ ಇದೆಯೇ… ಇದ್ದರೆ ತಾನು ಅದನ್ನು ತಿಳಿಯುವುದು ಹೇಗೆ…? ಏನಾದರಾಗಲಿ ನನ್ನ ಅಸ್ತಿತ್ವದ ಅರಿವನ್ನು ತಿಳಿದುಕೊಳ್ಳಲೇಬೇಕೆಂದು ನಿರ್ಧರಿಸಿದ. ಅವನೇ ಸಾಕಿ ಬೆಳೆಸಿದ್ದ ಕತ್ತೆಗಳ ಮೈದಡವಿ ಕಣ್ಣಿ ಬಿಚ್ಚಿದ, ಮೇಕೆಗಳ ದೊಡ್ಡಿ ತೆರೆದು ಹೊರಗೆ ಬಿಟ್ಟು ‘ಈ ಸಮಸ್ತ ಇಳಾತಳದೊಳಗೆ ನಾನೂ ಒಬ್ಬ ನಿಮ್ಮಂತದೇ ಪ್ರಾಣಿ, ಆದರೆ ಬುದ್ಧಿ ಇರುವ ಪ್ರಾಣಿಯಾದ್ದರಿಂದ ನಿಮ್ಮ ಸಾಕಿಹೆನೆಂಬ ಹಮ್ಮು ನನಗಿಲ್ಲ. ನಾನು ಹೇಗೋ ಹಾಗೆಯೇ ನೀವು, ಹೊರಡಿರಿ.. ನೀರು ಕಂಡಲ್ಲಿ ಕುಡಿದು ಹುಲ್ಲು ಕಂಡಲ್ಲಿ ಮೇಯ್ದು ಈ ಜಗದ ಭಾಗವಾಗಿ ಬದುಕಿರಿ’ ಎಂದಷ್ಟೇ ಹೇಳಿ ಭೋಲಾ ಮನೆಯಿಂದೆದ್ದು ಹೊರಟೇಬಿಟ್ಟ.
***** ****** ******
ಸಾಧುಜನ ಸಾಲುಸಾಲಾಗಿ ಕೈಯಲ್ಲಿ ಬೆತ್ತ ಹಿಡಿದು ಪೊನ್ನಾಟಿಗೆ ಹೊರಟವರೊಂದಿಗೆ ಹೆಜ್ಜೆ ಹಾಕಿದ. ನವಿಲುಗರಿಯ ಗುಚ್ಚಹಿಡಿದು ಹಾಡುತ್ತಾ ಹೊರಟ ಫಕೀರರ ಜೊತೆ ತಿರುಗಿದ. ಭಂತೆಗಳ ಜೊತೆ ಸೇರಿ ಭಿಕ್ಷುವಾದ. ಹಿಮಾಲಯದಲ್ಲಿ ಕುಳಿತ ಘನಘೋರ ಸಿದ್ಧರ ಒಡನಾಟದಲ್ಲೊಂದಷ್ಟು ದಿನ ಕಳೆದ. ಅವರೆಲ್ಲರ ಏಕಾಗ್ರತೆ ಒಂದೇ ಆದರೂ ಭಿನ್ನಭಿನ್ನ ಬಗೆಯಲ್ಲಿ ಆರ್ತರಾಗಿ ದೇವರನ್ನು ಹುಡುಕುವ ರೀತಿಯನ್ನು ಕಂಡ. ಅನುಭವಕ್ಕೆ ಬಾರದ ಮಾಂತ್ರಿಕ ಯಕ್ಷಿಯರೊಡನೆ ಒಡನಾಡುವ, ಸಾವಿನ ಸಮೀಪಕ್ಕೆ ಹೋಗಿ ದೇವರನ್ನು ಕಂಡು ಆಲಂಗಿಸುವ, ಯಾರು ಪ್ರಕೃತಿಯನ್ನು ಮುಂದಿಟ್ಟುಕೊಂಡು ಬದುಕಿನ ಉಪದೇಶ ಮಾಡಿದ್ದರೋ ಅವರನ್ನೇ ದೇವರಾಗಿಸಿ ಪೂಜಿಸುವ, ಹಸಿವು ನಿದ್ದೆ ನೀರಡಿಕೆ ತೊರೆದು ದೇಹವನ್ನೇ ದಂಡಿಸುತ್ತಾ ತಾವೇ ದೇವರೆಂಬಂತೆ ಓಡಾಡುವವರು ಹೀಗೆ ಯಾರೆಲ್ಲ ಜೊತೆಗಿದ್ದನೋ ಅವರೆಲ್ಲ ಯಾವುದೋ ಅಮಿತವಾದ ಶಕ್ತಿಯೊಂದನ್ನು ಪಡೆಯಲು ಹಲಬುವವರೇ ಎಂಬುದು ತಿಳಿದಾಗ ಬೇಸರವೆನಿಸಿತು. ಕಾಶಿಯಲ್ಲಿ ಧರ್ಮದ ಬಗ್ಗೆ ತಿಳಿದವರಿದ್ದಾರೆ ಎಂದು ಯಾರೋ ಹೇಳಿದರು, ಅಲ್ಲಿಗೂ ಹೋದ, ಕರುಣೆಯ ಮಹಾಪೂರ ಗಂಗೆಯಲ್ಲಿ ತೇಲುವ ಹಾಗೆಯೇ ಧಗಾ-ವಂಚನೆ, ಅರ್ಥವಿಲ್ಲದೆ ಬಡಬಡಿಸುವ ಮಂತ್ರಗಳು, ಅದೊಂದು ಸಾವುನೋವಿನ ಪ್ರಯಾಣದ ತಾಣವೆಂದಷ್ಟೆ ಎನಿಸಿತು.
ದೇವರು ಇದ್ದಾನೆ ಎನ್ನುವುದಾದರೆ ಎಲ್ಲಿದ್ದಾನೆಂದು ಯಾರೂ ನಿಖರವಾಗಿ ಹೇಳಲಾರರು. ದೇವರಿದ್ದಲ್ಲಿ ಧರ್ಮವಿರುತ್ತದೆ, ನಡೆ-ನುಡಿ ಸಿದ್ಧಾಂತವಾಗಿರುತ್ತದೆ. ಆ ದೇವರನ್ನು ಪೂಜಿಸು, ಈ ದೇವರನ್ನು ತ್ಯೆಜಿಸು ಎನ್ನುವುದರಲ್ಲಿ ಧರ್ಮವಿಲ್ಲ. ಅಂಥಪ್ಪ ನಾಡೊಂದು ಈ ಭೂಮಿಯ ಮೇಲೆ ಇದ್ದಿರಲಿಕ್ಕಿಲ್ಲವೆಂದು ಭಾವಿಸಿ ಗಂಗಾ ನದಿಗುಂಟ ನಡೆದು ಸಮುದ್ರದ ದಂಡೆ ಸೇರಿದ. ಕಾಶಿಯಲ್ಲಿ ತೇಲಿಬಿಟ್ಟ ಹೆಣಗಳು, ಹೆಣಸುಟ್ಟ ಬೂದಿಯು ಈ ಮಹಾಸಮದ್ರವನ್ನು ಸೇರುವುದೇ ಕೈಲಾಸವೆಂದು ಭಾವಿಸಿದ್ದಾರೆ ಜನ ಎನಿಸಿತು. ಮೊದಲ ಬಾರಿ ಮುಖ ಸಡಿಲಿಸಿ ನಕ್ಕ. ಆಕಾಶ ಮಂಡಲದಲ್ಲಿ ಮಿಂಚೊಂದು ಸೆಳ್ಳು ಹೊಡೆದಂತ ಅನುಭವ ತನ್ನೊಳಗೆ ಆಯ್ತು. ಈಗ ನಕ್ಕದ್ದು ಬರೀ ನಗುವಲ್ಲ ಈ ಡಂಭಾಚಾರವ ಕಂಡು ನಕ್ಕಿದ್ದಲ್ಲವೇ..! ಹಾಗಿದ್ದರೆ ಈ ತೆರನಾದ ಅಜ್ಞಾನ ಕಳೆದು ಸುಜ್ಞಾನ ಬಿತ್ತಿ ಬೆಳೆವ ನಾಡು ಈ ಭೂಮಿಯ ಮೇಲೆ ಸಿಕ್ಕೀತೆ? ನನ್ನಂತೆ ಲೋಕದ ಅಜ್ಞಾನವ ಕಂಡು ಮರುಗುವ, ತಿಳಿಸಿ ಹೇಳುವ ಜನರು ಇದ್ದಾರೆಯೇ ಎಂಬ ಅನುಮಾನ ಮತ್ತೆ ಹುಟ್ಟಿತು.
ಬೆಸ್ತರ ಕುಲದ ಹೆಂಗಸೊಬ್ಬಳು ಈ ಕೃಶವಾದ ದೇಹವನ್ನು ಕಂಡು ಮರುಗಿರಬೇಕು. ಸಾಧು ಜನ ಕಾಡುಮೇಡು ತಿರುಗುತ್ತಾ ಅಲೆವವ, ಉಂಡು ಏಸು ದಿನವಾಗಿದೆಯೋ ಎಂದು ಮರುಗುತ್ತಾ ‘ಸ್ವಾಮಿ ಈ ಸೀಮೆಯಲ್ಲಿ ಈ ದಿವಸ ಹಾವುಗಳ ರಾಜನಿಗೆ ವಿಶೇಷ ಪೂಜೆ ಇರತದೆ, ವಿಶೇಷ ಭಕ್ಷ್ಯಭೋಜ್ಯವೂ ಇರತದೆ. ನೀವು ನಮ್ಮ ಮನೆಗೆ ಬಂದರೆ ಅತಿಥಿಗಳ ಸತ್ಕರಿಸಿದ ಪುಣ್ಯ ಬರುತ್ತದೆ, ದಯಮಾಡಿ ನನ್ನ ಮನೆಗೆ ಬನ್ನಿರಿ’ ಎಂದಳಾಕೆ. ತಾನು ಆಕೆಯ ಮನೆಗೆ ಹೋಗುವುದರಿಂದ ಆಕೆಗೆ ಪುಣ್ಯ ಲಭಿಸುವುದಾದರೆ ಒಳ್ಳೆಯದೆ ಅಲ್ಲವೇ ಎಂದು ಅವಳ ಮನೆಗೆ ನಡೆದ.
ಊರ ಜನರೆಲ್ಲ ಆ ದಿನ ಕೇದಗೆಯ ಬನ ದಾಟಿ ನಾಗಬನದಲ್ಲಿ ನೆರೆದು ನಾಗರಕಲ್ಲಿನ ಮುಂದೆ ತಾವು ನೋಡಿ ಕಲಿತ ಹಾವಿನ ಶೈಲಿಯ ನೃತ್ಯ ಮಾಡುವವರಿದ್ದರು. ಆಕೆಯ ಹಿರಿಮಗಳು ನೃತ್ಯ ಮಾಡುವವಳಿದ್ದಳಲ್ಲ ಹಂಗಾಗಿ ಅಕ್ಕಿಹಿಟ್ಟಿನಲ್ಲಿ ಬಣ್ಣ ಕಲೆಸಿ ಮುಖಕೆಲ್ಲ ವಿಶೇಷ ಅಲಂಕಾರ ಮಾಡಿಕೊಳ್ಳುತ್ತಿದ್ದಳು. ಕೈ-ಕಾಲುಗಳಿಗೆಲ್ಲ ಮದರಂಗಿ ಎಲೆಯ ರಸದಿಂದ ಅಲಂಕಾರಗೊಂಡಿದ್ದ ಅವಳ ಮೈಯೊಳಗೆ ಸೂಜಿಗಲ್ಲಿನಂಥ ಆಕರ್ಷಣೆ ಇರುವುದು ಅನುಭವಕೆ ಬಂದಿತು. ನಾಗಸ್ವರ ಕೇಳುತ್ತಿದ್ದಂತೆಯೇ ಮನೆಯಲ್ಲಿನ ಹೆಂಗಸರೆಲ್ಲ ಗಡಿಬಿಡಿಯಲ್ಲಿ ತಯಾರಾಗತೊಡಗಿದರು. ನೆಸಳು ಕೊರೆಯುವಲ್ಲಿ ಆಕೆಯ ಕೈಗಳು ಸಹಕರಿಸಲಿಲ್ಲ. ತಾಯಿಯನ್ನು ಕರೆದಳು.. ಆಕೆಯೋ ಮುದುಕಿ, ನಡಗುವ ಕೈಯಿಟ್ಟುಕೊಂಡು ನೊಸಲ ನೆಸಲು ತಗಿಯಬಲ್ಲಳೇ..! ಅದಾಗದೆಂದು ತಾನಿದ್ದಲ್ಲಿಂದ ಎದ್ದು ಬಂದು ಇವನ ಮುಂದೆ ಕುಳಿತು ‘ನೊಸಲ ಗೆರೆ ಬರೆಯುತ್ತೀರಾ.. ದಂಡಿನವರೆಲ್ಲ ಹೊರಟಾಯ್ತು’ಎಂದಳು.
ದಾಸವಾಳದ ಹೂ ಕುದಿಸಿ ತೆಗೆದ ಬಣ್ಣವದು.. ಹಗೂರಕ್ಕೆ ಕಡ್ಡಿಯಿಂದೆತ್ತಿ ಆಕೆಯ ಹಣೆಯ ಮೇಲೆ ಗೆರೆ ಬರೆಯುವಾಗ ತನ್ನಲ್ಲಿ ಅದ್ಯಾವುದೋ ಮಾಯದ ಮೋಹವೊಂದು ಉದಿಸಿದಂತಾಗಿ ಅನ್ಯಮನಸ್ಕನಾದ. ಪದ್ಧತಿಯಂತೆ ಆ ಹಾವು ವೇಷಧಾರಿಯ ಮುಂದೆ ಬಿಂದಿಗೆ ನೀರು ಸುರಿಯುತ್ತಾ, ಮತ್ತೊಬ್ಬರು ಬುಟ್ಟಿ ತುಂಬಾತುಂಬಿದ್ದ ಪರಿಮಳದ ಹೂಗಳನ್ನು ಚೆಲ್ಲುತ್ತಾ ನಾಗಬನಕ್ಕೆ ಕರೆದೊಯ್ಯಬೇಕು. ತಾಯಿ-ಮಗಳನ್ನು ಬಿಟ್ಟರೆ ಬೇರಾರು ಇಲ್ಲದ ಈ ಹೊತ್ತಿನಲ್ಲಿ ‘ಅತಿಥಿಯೇ ಆಸರಾಗು’ಎಂದು ತಾಯಿ ಕೇಳಿಕೊಂಡಾಗ ಇವನ ಮನಸ್ಸು ಕರಗಿತು. ಬಿಂದಿಗೆ ಹೊತ್ತು ಅವರು ಹೇಳಿದ ದಾರಿಯಲ್ಲಿ ನೀರು ಸುರಿಯುತ್ತಾ ಇವನು ಮುಂದೆಮುಂದೆ, ಅವಳ ತಾಯಿ ಹೂಚಲ್ಲುತ್ತಾ ಹಿಂದೆಹಿಂದೆ, ಆ ಹೂವಿನ ದಾರಿಯಲ್ಲಿ ಆಕೆ ಮೃದುವಾದ ಹೆಜ್ಜೆಯನ್ನಿಡುತ್ತಾ ನಾಗಸ್ವರದ ಏರಿಳಿತಕ್ಕೆ ತನ್ನ ಮೈ ಬಳಕಿಸುತ್ತಾ, ಗೋಣು ಕೊಂಕಿಸುತಾ ಥೇಟ್ ಹಾವಿನಂತದೆ ನಡಿಗೆಯಲಿ ನಡೆದು ಬರುವಾಗ ಯಾವದೋ ಗಂಧರ್ವ ಲೋಕದ ಅಪ್ಸರೆಯನ್ನು ಧರೆಗಿಳಿಸಿಕೊಂಡು ಬರುತ್ತಿರುವ ಹಾಗೆ ಕಾಣುತ್ತಿತ್ತು. ನಾಗರಕಟ್ಟೆಯ ಮೇಲೆ ಏರಿ ಕುಣಿದು, ಕುಪ್ಪಳಿಸಿ ಆಡುತ್ತಾಡುತಾ ಹಾಲೆರೆದು, ಕುಣಿತದ ಆವೇಶವೆಲ್ಲ ಇಳಿದು ಬಾಯಾರಿ ಮನೆಗೆ ಬರುವಲ್ಲಿಗೆ ಆ ದಿನದ ಸೂರ್ಯ ಕಳೆಗುಂದಿ ಧೋ ಅಂತ ಜಡಿಮಳೆಯ ಕಾರ್ಮೋಡ ಮುಗಿಲ ತುಂಬ ಆವರಿಸಿಕೊಂಡು ಸುರಿಯಲಾರಂಭಿಸಿತು.
ಕಣ್ಣಂಚಿನಲ್ಲಿ ತುಂಬಿತುಳುಕುತ್ತಿದ್ದ ಕಣ್ಣೀರಿನಲ್ಲಿ ಇದ್ದಕ್ಕಿದ್ದಂತೆ ಸುಳಿಯೊಳಗೆ ಬಿದ್ದ ಅಮ್ಮ ನೆನಪಾದಳು. ಥೇಟ್ ಅವಳದೇ ಪ್ರತಿರೂಪದಂತೆ ಆ ಬೆಸ್ತರ ಚೆಲುವೆಯ ಕಂಗಳು ಹೊಳಪನ್ನು ಸೂಸುತ್ತಿದ್ದವು. ಅತಿಥಿಯಾಗಿ ಬಂದಿದ್ದವನು ದಿನಕಳೆದು ದಿನ ಬೆಳಗಾದರೆ ಗೊತ್ತುಗುರಿಯಿಲ್ಲದೆ ಹೊರಟು, ಆಡುವ ನುಡಿಯೊಳಗಿನ ಧರ್ಮವೇ ಬದುಕಾಗಿರುವ ಸೋಜಿಗವು ಈ ಜಗತ್ತಿನಲ್ಲಿ ಎಲ್ಲಾದರೂ ಇದೆಯಾ ಅಂತ ಹುಡುಕಿ ಹೊರಟಿದ್ದವನು ತಿಂಗಳು ಕಳೆದರೂ ಆ ಮನೆ ಬಿಟ್ಟು ಕದಲಲಿಲ್ಲ. ಮುದುಕಿಗೆ ಇವರ ಪ್ರೇಮದ ಭಾಷೆ ಅರ್ಥವಾಗುವುದು ತಡವಾಗಲಿಲ್ಲ. ಮದುವೆಯೂ ಆಯ್ತು. ಸುಖವೆಂದರೆ ಇದಿಷ್ಟೇ ಎಂಬಂತೆ ಜೀವಿಸುವ ಹಂಬಲದಲ್ಲಿ ದಿನಗಳು ತಿಂಗಳಾದವು, ತಿಂಗಳುಗಳು ವರ್ಷಗಳಾದವು… ಆಹಾ ಅವರಿಬ್ಬರ ಸೊಗಸಾದ ಭಾವಜೀವನಕ್ಕೆ ಪ್ರಕೃತಿಯೇ ನಾಚಿ ನೀರಾಗಿತ್ತು. ಹೀಗೆ ಬದುಕೆಂಬುದು ಯಾವ ದಡವನ್ನೂ ಮುಟ್ಟದೇ ನಿರಾತಂಕವಾಗಿ ನಡೆದಿರುವಾಗ್ಗೆ ಒಂದು ಘಟನೆ ಜರಿಗಿತು.
ಬೇಸಿಗೆ ಕಳೆದು ಮಳೆಗಾಲ ಆರಂಭವಾಗುವ ಮುನ್ನ ಗಂಡಸರಾದವರು ಕಟ್ಟಿಗೆಯ ದಾಸ್ತಾನು ಮಾಡುವುದು, ಹೆಂಗಸರಾದವರು, ಹಣ್ಣು-ಕಾಯಿಗಳನ್ನು ಸಂಗ್ರಹಿಸಿ, ಉಪ್ಪಿನಕಾಯಿಯೋ, ಸ್ವಾದಿಷ್ಟ ರಸದ ಖಾದ್ಯವನ್ನೋ, ಇಲ್ಲವೇ ಹಿಂಡಿ, ಚಟ್ನಿಪುಡಿಗಳನ್ನೋ ಮಾಡಿಟ್ಟುಕೊಳ್ಳುವುದು ಆ ಸೀಮೆಯ ವಾಡಿಕೆಯಾಗಿತ್ತು. ಅಡ್ಡಮಳೆಗಳ ಗುಡುಗು ಸಿಡಿಲಿನ ಆರ್ಭಟದ ಮೊದಲಿನ ದಿನಗಳ ಹೊತ್ತಿಗೆ ಅದೊಂದು ಮಧ್ಯಾಹ್ನ ಜಾಂಬಳೆ ಹಣ್ಣು ಕೊಯ್ದುಕೊಂಡು ಬರಲು ತಾಯಿ-ಮಗಳು ಅತ್ತ ಕಾಡಿಗೆ ಹೋಗಿರಲು ಇತ್ತ ಭೋಲಾಶಂಕರನೆಂಬ ಖ್ಯಾತಿಯ ಇವನು ದೊಡ್ಡದಾದ್ದೊಂದು ದಿಮ್ಮಿಯನ್ನು ಸೀಳಿ ದಾಸ್ತಾನು ಮಾಡಿಟ್ಟುಕೊಳ್ಳುತ್ತಿದ್ದ. ದೂರದ ಗುಡ್ಡದ ಮೇಲೆಯೇ ಮೋಡಗಳೆದ್ದು ಸುತ್ತಲ ಬೆಟ್ಟಗುಡ್ಡಗಳನ್ನಾವರಿಸಲು, ತಾಯಿ-ಮಗಳು ಮಳೆ ಬರುವ ಮುನ್ನ ಹೋಗುವ ತರಾತುರಿಯಲ್ಲಿ ಹಣ್ಣಿನ ಬುಟ್ಟಿಗಳನ್ನು ತಲೆಯ ಮೇಲಿಟ್ಟುಕೊಂಡು ಮನೆಕಡೆಗೆ ಬರತೊಡಗಿದ್ದರು. ಅವರು ಬರುವುದು ಇವನಿಗೆ ಕಾಣುತ್ತಿರುವ ಹಾಗೆಯೇ ಆಕಾಶ ಮಾರ್ಗದಲ್ಲೊಂದು ಮಿಂಚು ಬಳುಕಿ, ಅದರ ಬೆನ್ನಲ್ಲಿ ಗುಡುಗೊಂದು ಅಬ್ಬರಿಸಿತು. ಆಕೆ ಹೆದರಿಕೆಯಿಂದ ಮೈ ಅದುರಿಸಿ, ತಲೆತಗ್ಗಿಸುವುದನ್ನು ಕಂಡ ಇವನೊಳಗೆ ಅದೆಂಥದೋ ಪೌರುಷದ ಪುಳಕವೆದ್ದಿತ್ತು. ಮಳೆಹನಿ ಸಿಡಿಯಲು ಚಣ ತಡೆದು ಹೋದರಾದೀತೆಂದು ತಾಯಿ-ಮಗಳು ದೇವದಾರು ಮರದ ಕೆಳಗೆ ನಿಂತಿದ್ದರಷ್ಟೇ ‘ಖಡ್ ಖಡಲ್’ ಎಂಬ ಸ್ಫೋಟದೊಂದಿಗೆ ಬೆಂಕಿಯ ಉಂಡೆಯೊಂದು ಆಕಾಶದಿಂದಿಳಿದು ದೇವದಾರು ಮರವನ್ನು ಬುಡಸಮೇತ ಸುಟ್ಟುಹಾಕಿತು.
ಹಾ.. ಪ್ರಾಣಘಾತುಕವಾದುದಲ್ಲ… ಎಂದು ಉದ್ಘರಿಸಿ ಸರಸರನೇ ಅವರು ನಿಂತಿದ್ದ ಗಿಡದ ಕಡೆಗೆ ಓಡಿಬರುತ್ತಾನೆ. ಅಲ್ಲೇನಿದೆ.. ಎರಡು ದೇಹಗಳು ತನ್ನ ಕಣ್ಣಮುಂದೆಯೇ ಸುಟ್ಟು ಕರಕಲಾಗಿ ಬೆಂದು ಹೋಗುತ್ತಿದ್ದವು. ಯಾರು ತಾಯಿ, ಯಾರು ಮಗಳು ಎಂಬ ಕುರುಹೂ ಇಲ್ಲದಂತೆ ಸುಡುತ್ತಿದ್ದ ಆ ದೇಹಗಳನ್ನು ಮುಟ್ಟಲು ಸಾಧ್ಯವಿಲ್ಲದಂತ ಮಳೆಯೊಂದು ಬಂತು. ನೀರ್ಯಾವುದೋ ಕಣ್ಣೀರಾವುದೋ… ತೊಯ್ದು ತಪ್ಪಡಿಯಾಗಿದ್ದ ಕಾಡಿನ ಪ್ರತಿಯೊಂದು ಗಿಡಮರ, ಬಳ್ಳಿ, ಚಿಗುರುಗಳೆಲ್ಲವೂ ಅವನ ದುಃಖವನ್ನು ಕಂಡು ತಲೆಬಾಗಿ ನಿಂತಿದ್ದವು.
ವಾತ್ಸಲ್ಯದ ಸೆಲೆಯೊಂದು ನೀರೊಳಗೆ ಹೋದುದು, ನವಿರಾದ ಪ್ರೇಮವು ಹೀಗೆ ಆಕಾಶದಿಂದುದುರಿದ ಬೆಂಕಿಯ ಮೊತ್ತಕ್ಕೆ ಬಲಿಯಾಯ್ತು. ಅಂದು ಬಂದು ಹಾಡಿ ಹೋದ ಫಕೀರನ ಹಾಡಿಗೂ, ಈ ಪಂಚಮಹಾಭೂತಗಳ ಎಚ್ಚರಿಕೆಗೂ ಏನಾದರೂ ಸಂಬಂಧವಿದ್ದುದೇ ಎಂಬ ಶಂಕೆಯೊಂದು ಮನದಲ್ಲಿ ಮೂಡಿತು. ಲೋಕವ ತಿರುಗಿದ ಅನುಭವದ ಆಧಾರದಲ್ಲಿ ತಾನು ಸಿದ್ಧನಾಗಬೇಕು. ಬರೀ ಸಿದ್ಧನಲ್ಲ ಶುದ್ಧ ಸಿದ್ಧನಾಗಬೇಕು. ಈ ಭವದ ಕೇಡನ್ನು ಅರಿಯುವ ಅರಿವಿನ ಪ್ರಸನ್ನಮೂರ್ತಿಯಾಗಬೇಕು ಎಂದುಕೊಂಡವನೇ ಅಲ್ಲಿಂದೆದ್ದು ದಕ್ಷಿಣದ ಶ್ರೀಗಿರಿಯತ್ತ ಪ್ರಯಾಣ ಬೆಳೆಸಿದನು.
(ಕತೆ ಮುಂದುವರೆಯುವುದು)
(ಕಲ್ಪನೆ ಕೂಡ ಚಿಂತನೆಯ ಒಂದು ಪ್ರಕ್ರಿಯೆ ಎಂದು ನಂಬಿರುವ ನಾನು ಮರುಳಶಂಕರದೇವರ ಕತೆಯನ್ನು ಬರೆಯುವಾಗ ಬಹಳಷ್ಟು ಸಂಗತಿಗಳನ್ನು ಕಲ್ಪಿಸಿಕೊಂಡು ಬರೆದಿದ್ದೇನೆ. ಮರುಳಶಂಕರದೇವರು ಅಫ್ಘಾನಿಸ್ಥಾನ ಮೂಲದಿಂದ ಬಂದವರು ಎಂಬುದನ್ನು ಬಿಟ್ಟರೆ ಮತ್ತೇನೂ ಕುರುಹುಗಳು ಸಿಕ್ಕಲಿಲ್ಲವಾದ್ದರಿಂದ ಕಲ್ಪನೆಯ ಬೆನ್ನು ಹತ್ತಿ ಭೋಲಾನನ್ನು ಶರಣರ ನಾಡಿಗೆ ಕರೆತರುವ ಪ್ರಯತ್ನ ಮಾಡಿದ್ದೇನೆ. ಹೀಗೆ ಶರಣರ ಸುತ್ತಲೂ ಕಥನಾವರಣಗಳು ಸೃಷ್ಟಿಯಾಗುವಲ್ಲಿ ಬಹುತೇಕ ಲೇಖಕರ ನಿಲುವುಗಳಿಗೆ ತಕ್ಕಂತೆ ಪಾತ್ರದ ಆವರಣಗಳು ಬದಲಾಗುವ ನಿರೀಕ್ಷೆ ಇರುತ್ತದೆ. ಆದ್ದರಿಂದ ಇಲ್ಲಿ ಭೋಲಾನನ್ನು ಎಷ್ಟು ಸಾಧ್ಯವೋ ಅಷ್ಟು ಮುಗ್ಧವಾಗಿಯೇ ಚಿತ್ರಿಸಲು ಪ್ರಯತ್ನಿಸಿದ್ದೇನೆ.)
Comments 13
MariGowdar Hasan
May 6, 2019ಆಹಾ! ಎಂಥ ಕತೆ, ಏನು ಕಲ್ಪನೆ, ನನ್ನನ್ನು ಅನಾಮತ್ತಾಗಿ ಅಲ್ಲಿಗೆ ಒಯ್ದುಬಿಟ್ಟ ಕತೆಗಾರ ಮಹಾದೇವರಿಗೆ ಶರಣು ಶರಣು.
ಗೀತಾ ನಾಗರಾಜ್
May 6, 2019ಭೋಲಾನ ಬಾಲ್ಯ ಹೃದಯತಟ್ಟುವಂತಿತ್ತು. ತಾಯಿ-ಮಗನ ಬಾಂಧವ್ಯ ಮತ್ತು ಅದಕ್ಕೆ ಹೊಂದುವ ಚಿತ್ರಗಳು ಚೆನ್ನಾಗಿವೆ. ಇಡೀ ಕತೆ ಓದಲು ಕಾತರನಾಗಿದ್ದೇನೆ. ಮರಳು ಶಂಕರರ ಬಗ್ಗೆ ನನಗೆ ಏನೂಗೊತ್ತಿರಲಿಲ್ಲ. ಅವರ ವಚನಗಳನ್ನು ಕೊಡಿ ಮುಂದಿನ ಭಾಗದಲ್ಲಿ.
-ಗೀತಾ ನಾಗರಾಜ್, ಮೈಸೂರು
gowrishankar g.K
May 6, 2019‘ಶಿವನ ಕುದುರೆ ಆಗತಾನೆ’ ಎನ್ನುವ ಭವಿಷ್ಯವಾಣಿಯೇ ಆ ತಾಯಿಯ ಆತಂಕಕ್ಕೂ, ಮೃತ್ಯುವಿಗೂ ಕಾರಣವಾಗಿದ್ದು ವಿಧಿಯ ವಿಪರ್ಯಾಸ. ಶರಣರ ಕತೆಗಳನ್ನು ಇಷ್ಟು ರೋಚಕವಾಗಿ ಕೊಡುತ್ತಿರರುವ ಬಯಲುಗೆ ಅನಂತ ಪ್ರಣಾಮಗಳು.
gangadhara Navale
May 6, 2019ಕಣ್ಣೆದುರೇ ಪ್ರೀತಿ ಉರಿದು ಹೋದಾಗ, ಮಮತೆ ನೀರಲ್ಲಿ ಕೊಚ್ಚಿ ಹೋದಾಗ ಭೋಲಾ ಶಂಕರನಲ್ಲಿ ಆದ ಪರಿವರ್ತನೆಯನ್ನು ಹಡಪದ ಅವರು ಕಣ್ಣಿಗೆ ಕಟ್ಟುವಂತೆ ಬರೆದಿದ್ದಾರೆ. ಮರಳುಶಂಕರರ ಜೀವನ ಪಯಣ ಯಾತನಾಮಯ, ಅಷ್ಠೇ ಅದ್ಭುತ!
ಡಾ. ವೀರಣ್ಣ ಗುಂಟೂರು
May 6, 2019ಎಲ್ಲಿಂದ ಎಲ್ಲಿಗೋ ಕರೆದೊಯ್ಯುವ ಪಯಣದಲ್ಲಿ ಭೋಲಾನ ಯಾತ್ರೆ ಒಂದು ಉದಾಹರಣೆ. ತಾಯಿ ಮಗನನ್ನು ಎತ್ತರದಲ್ಲಿ ನೋಡಲು ಬದುಕಬೇಕಿತ್ತು. ಅಲೆಯಂತೆ ಬಂದು ಹೋದ ನಾಗಕನ್ನಿಕೆ ಮರೆಯಲಾಗದ ಪಾತ್ರಗಳು.
ಕಾವ್ಯ ಜಗನ್ನಾಥ
May 8, 2019ಮರುಳಶಂಕರರ ಅಲೆಮಾರಿ ಜೀವನದಲ್ಲೇ ಹುಡುಕಾಟ ಇದ್ದಂತಿದೆ. ರಮ್ಯ ನಿರೂಪಣೆಯಿಂದ ಕತೆ ಗಮನ ಸೆಳೆಯುತ್ತದೆ. ಶರಣರ ಕತೆಗಳನ್ನು ಕೊಡುತ್ತಿರುವ ಬಯಲುಗೆ ನನ್ನ ಅನಂತ ವಂದನೆಗಳು.
Dr.mallesh, Mysuru
May 9, 2019ಭೋಲಾನನ್ನು ವಿಭಿನ್ನ ರೀತಿಯಲ್ಲಿ ಸಾಕ್ಷಾತ್ಕರಿಸಿರುವುದು ಕನ್ನಡದಲ್ಲಿ ವ್ಯಕ್ತಿ ಚಿತ್ರಣದ ಬರವಣಿಗೆಯ ಪರಂಪರೆಗೆ ಹೊಸ ದಾರಿಯನ್ನು ತೋರಿಸಿದೆ. ಕಲ್ಪನೆಯೂ ಚಿಂತನೆಯ ಒಂದು ಕ್ರಮ ಎಂದು ಲೇಖಕರು ಭಾವಿಸಿ ಬರೆದಿರುವುದು ಆ ಲೇಖನ ದೊಳಗಿನ ಸಂದೇಶವನ್ನು ಸಂವಹನಗೊಳಿಸುವಲ್ಲಿ ಸಾರ್ಥಕ್ಯ ಪಡೆದಿದೆ. ಮುಂದಿನ ಭಾಗವನ್ನು ತಿಳಿದುಕೊಳ್ಳಲು ಓದುಗರನ್ನು ತುದಿಗಾಲಲ್ಲಿ ನಿಲ್ಲಿಸಿದೆ.
ಕೆ. ಎಸ್. ಮಲ್ಲೇಶ್
devuru mysuru
May 10, 2019ನಾಟಕೀಯ ಅಂಶಗಳಿಂದ ಕೂಡಿದರೂ ಕತೆ ಕುತೂಹಲಕರವಾಗಿದೆ. ವಚನಗಳನ್ನು ಬಳಸಿಕೊಂಡರೆ ಕತೆಗೆ ಹೆಚ್ಚು ವಾಸ್ತವತೆ ಸಿಗುತ್ತದೆ ಎನ್ನುವದು ನನ್ನ ಸಲಹೆ.
mahadev hadapad
May 10, 2019ಖಂಡಿತ ಶರಣರೇ.. ಆ ವಚನಗಳ ಹಿನ್ನೆಲೆಯಲ್ಲಿಯೇ ಕಥೆ ಕಟ್ಟಲು ಪ್ರಯತ್ನಿಸಲಾಗಿದೆ. ಯಥಾವತ್ ಬಳಸುವುದು ಬೇಡವೆಂದು ಬಿಡಲಾಗಿದೆ.
ಗಣೇಶಯ್ಯ ಶಿರೂರು
May 13, 2019ಕತೆಗಾರರ ಕಲ್ಪನೆ ನನ್ನನ್ನು ಬೇರೊಂದು ಲೋಕಕ್ಕೆ ಎತ್ತಿಕೊಂಡು ಹೋಯಿತು. ಭೋಲಾ ಶಂಕರ ಮರುಳಶಂಕರದೇವರಾಗೋದನ್ನು ಓದಲು ಕಾಯುವಂತೆ ಮಾಡಿದೆ. ಬಯಲು ನನ್ನ ಮೆಚ್ಚಿನ ಓದುವ ತಾಣ.
Sunitha S.M
May 26, 2019ಭೋಲಾ ಶಂಕರನ ನಾಗಕನ್ನಿಕೆ ನೃತ್ಯ ರೂಪಕದಂತಿದೆ. ಆತನ ಬಾಲ್ಯ ಮತ್ತು ಬದುಕು ಮಹತ್ವದ ಘಟನೆಯ ನಿರೀಕ್ಷೆಯಂತೆ ಕಾಣುತ್ತದೆ. ಕತಾ ನಿರೂಪಣೆ ಕುತೂಹಲಕಾರಿಯಾಗಿದೆ.
shobhadevi
May 27, 2019ಬಯಲಿನಲ್ಲಿ ಬಂದ ಎರಡೂ ಕತೆಗಳು ನನಗೆ ಇಷ್ಟವಾದವು. ಶಿವನ ಕುದುರೆಯ ಕತೆ ಕಟ್ಟುವಿಕೆಯ ಕಲ್ಪನೆ ವಿನೂತನವೆನಿಸಿತು.
ಶಾಂತಲಿಂಗಯ್ಯ ಮಠಪತಿ
Jun 13, 2019ಅದ್ಭುತವಾಗಿ ಬರೆದಿರುವ ಮಾಹಾದೇವಣ್ಣನವರಿಗೆ ಶರಣು ಶರಣಾರ್ಥಿ.