ಯಾಕೀ ಗೊಡವೆ?
ಸಾಯುವುದು
ಒಂದು ದಿನ ಇದ್ದೇ ಇದೆ
ಬಿಡು
ದಿನಾ ಏಕೆ ಸಾಯುವುದು
ದಿನಕೆ ಸಾವಿಲ್ಲವೇ
ಹುಟ್ಟುವ ಭರವಸೆ ಖಂಡಿತಾ
ಹುಟ್ಟೇ ಒಂದು ಮದ
ಸಾವರಿತರೆ ಮದ ಸಾವುದು
ನಿತ್ಯ ಸತ್ಯದ ಗೊಡವೆ ಬೇಕೇ
ಅಲುಗಿಗೆ ಸವರಿದ ತುಪ್ಪ
ಮೂಗಿಗೆ ರುಚಿ ನಾಲಿಗೆಗೆ ಅರುಚಿ
ಕಡಲಾಳ ಅಳೆಯಲು ಮುಳುಗಿರುವೆ
ಮೇಲೇಳದೆ ಅಳೆಯೆ ಆಳ
ಆಳ ಅಳೆದರೆ ಮೇಲೇರಲಾರೆ
ಹೀಗೆ ಬಂದು ಹಾಗೆ ಹೋಗುವುದೇ ಈ ಜೀವ
ಯಾವುದಕ್ಕೂ ಯಾವ ಉದ್ದೇಶವೂ ಇಲ್ಲ
ಸಾಯುವುದು ಇಂದು
ಅಳುವುದು ನಾಳೆಯೇ
ತಳ ಕಾಣದ ಬಾವಿಯಲಿ
ಸೇದಿದಷ್ಟೂ ನೀರು
ಊರ ಬೀದಿಯಲಿ ಆಡುತ್ತಾ
ಹಾಡುತ್ತಾ ಅಲೆದಾಡುವ
ತಥಾಗತ ನಾನಲ್ಲವೇ?
ನನಗೇಕೆ ಈ ಗೊಡವೆ
ನಾನುಂಟು ನನ್ನ ಬದುಕುಂಟು.
Comments 2
Jayaraj Unakal
Aug 16, 2023ಸಾವರಿತರೆ ಹುಟ್ಟಿನ ಮದ ಸಾಯುವುದು… ಬ್ಯೂಟಿಫುಲ್ ಸಾಲುಗಳು.
Gangadhara Koppal
Aug 25, 2023ತಳ ಕಾಣದ ಬಾವಿಯಲಿ
ಸೇದಿದಷ್ಟೂ ನೀರು- wonderful.