ಬಿಂಬ-ಪ್ರತಿಬಿಂಬ
ನೀನು
ಅಲ್ಲಿ ಉಂಟೆಂದು
ನಾನು
ಇಲ್ಲಿ ತೆವಳಿ ತೆವಳಿ ಬಳಲಿದೆ
ನೀನು ಎಲ್ಲಿರುವೆ
ಎಂಬುದು ನನ್ನ ಕಣ್ಣರಿವು
ಎಂಬುದ
ನಾನಲ್ಲದೆ ನೀನರಿದೆಯಾ ಹೇಳೇ
ಅಕ್ಕಾ
ಬೆಳಕ ತಿಂದಲ್ಲದೆ ಕನ್ನಡಿಯಲಿ ಉದಯಿಸದು ಬಿಂಬ
ಅರಿದ ಅರಿವನು ಉಪಮಿಸಬಾರದು
ತನ್ನರಿವ ತಾನುಣದೆ ಅನ್ಯರಿಗೆ
ಉಣಬಡಿಸುವ ಕೇಡು ನನದಲ್ಲ
ತನ್ನರಿವ ತಾನರಿಯದಾ ಕತ್ತಲು
ಇಳಿದು ಬಾರದಾ ಅರಿವು ತಾನರಿಯದೆ
ಒಳಗಣ ಜ್ಯೋತಿಯೂ
ಹೊರಗಣ ಕತ್ತಲೂ ಸಮನಿಸವು.
****************
ಆ ಮರದ ಕಾಯಲಿ ನೀರು
ತುಂಬಿದೆ ಹೇಗೆಂಬುದ ಎಚ್ಚರದಲಿ
ಹೇಳು ಪುರಾಣ ಕಟ್ಟಿಡು
ಅರಿಯುವ ಅರಿವ ಕಿತ್ತಿಡಲಾರೆ
ಒಣಹುಲ್ಲಿಗೆ ಬೆಂಕಿ ಇಟ್ಟು
ಹಸಿ ಹುಲ್ಲಲಿ ನಂದಿಸದಿರು
ನನ್ನ ಬಿಂಬ ನಿನ್ನಲಿ ಮೂಡದಿರೆ
ನಿನ್ನ ಕನ್ನಡಿ ಎಂಬುವವರು
ಯಾರೇ ಅಕ್ಕಾ
ನಾನಲ್ಲವೇ ನಿನ್ನ ಬಿಂಬ
ಇರಲಿ ಈಗ ಹೇಳು
ಲೌಕಿಕ ಪಾರಮಾರ್ಥಿಕ
ಜ್ಞಾನ ಕರ್ಮ
ಯಾವುದು
ನನ್ನ ನೆರಳು ನನಗಂಟದು
ಕಣ್ಣ ಮುಚ್ಚದು ಕನ್ನಡಿ ಬಿಂಬ
ಕಣ್ಣ ಮುಚ್ಚಿದರೆ ಕಾಣದು ಬಿಂಬ
ನನ್ನ ಹುಟ್ಟಿನೊಂದಿದೆ ಈ ಜೀನ್ಸ್
ನಕ್ಷತ್ರ ಸುಡುವ ಕಣ್ಣ ಹೊಳಪು.
Comments 2
Geetha Jayraj
Feb 6, 2020ಒಳಗಣ ಜ್ಯೋತಿಯೂ, ಹೊರಗಣ ಕತ್ತಲು ಸಮನಿಸವು! ಆಹಾ!!
ಕವಿತಾ ಲಕ್ಷ್ಮೇಶ್ವರ
Feb 9, 2020ಮತ್ತೆ ಕವನಗಳು ಬಯಲಿನಲ್ಲಿ ಶುರುವಾಗಿದ್ದು ತುಂಬಾ ಖುಷಿಯಾಯಿತು. ಇಲ್ಲಿಯ ಕವನಗಳು ವಿಶಿಷ್ಟವಾಗಿರುತ್ತವೆ. ಹೊಸ ದಿಕ್ಕಿನತ್ತ ಬೊಟ್ಟು ಮಾಡುತ್ತವೆ.