ನನ್ನೆದುರು ನಾ…
ಅದೇಕೋ ಮೊನ್ನೆ ಮೊನ್ನೆ
ಸಂತೆ ತೋರುವೆ, ಜಾತ್ರೆ ನೋಡುವೆ
ನಡಿ ನನ್ನೊಡನೆ ಎಂದ ಗುರು
ಹಿಗ್ಗಿನಲಿ, ಗೆಲುವಿನಲಿ
ಚೆಂದದ ಸಿಂಗಾರದಲಿ
ಹೊರಟಿತ್ತು ನನ್ನ ಮೆರವಣಿಗೆ
ಸಂಭ್ರಮವೇನು, ಕುತೂಹಲಗಳೇನು
ಪ್ರಶ್ನೆಗಳ ಸುರಿಮಳೆಯೇನು…
ಆತನ ದಾಪುಗಾಲಿಗೆ ಸಮವೇ
ನನ್ನ ಪುಟ್ಟ ಹೆಜ್ಜೆ
ಸೋಲುತಿದ್ದವು… ಎಷ್ಟುದ್ದದ ದಾರಿ…
ಸಾಕೆನಿಸಿ ದಣಿವಾಗಿ ಅಲ್ಲಲ್ಲಿ ನಿಂತಾಗ
ಕತೆಯ ನೇಯುತ ನಡೆಸುತಿದ್ದ
ದಣಿವ ಮರೆಸುತ್ತಾ…
ಯಾರ ಮಾತೂ ಯಾರಿಗೂ ಕೇಳದ
ಜನಜಂಗುಳಿಯ ಮುಂದೆ…
ಬಂದು ನಿಂತದ್ದೇ ತಿಳಿಯಲಿಲ್ಲ
ಗೌಜಿನಲಿ ಕಳೆದೀಯ,
ತಪ್ಪಿಸಿಕೊಂಡು ಅಲೆದೀಯ
ಜೋಪಾನವೆನುತಾ ಕೈಯ ಬಿಟ್ಟಿದ್ದಾ…
ಯಾರಿವರು ನೆರೆದವರು
ನಂಟರು, ಗುರುತಿನವರು
ಯಾರಾದರೂ ಇದ್ದಾರೆಯೇ
ಕತ್ತು ಹೊರಳಿಸಿದಲೆಲ್ಲಾ
ಕಣ್ಣಿಟ್ಟು ದಿಟ್ಟಿಸಿದಡಲೆಲ್ಲಾ
ಅರೆ, ನನ್ನದೇ ನೋಟ!!
ಮೈಯು ಬೆವತಿತ್ತು, ಎದೆಯು ನಡುಗಿತ್ತು
ಎಲ್ಲ ಮುಖಗಳಲೂ ನನ್ನದೇ ಬಿಂಬ
ಮರೆವೋ… ಅರಿವೋ…
ಭ್ರಮೆಯ ಹಿಂದಿತ್ತು
ನಾನು, ನಾನು, ನಾನು…
ಕನ್ನಡಿಯ ಕೋಣೆಯಲಿ
ಸಿಕ್ಕಿ ಬಿದ್ದಿಹ ಸತ್ಯ ಕಣ್ಣೆದುರೆ ತೆರೆದಿತ್ತು…
ಅಹಂಕಾರ ಮನವನಿಂಬುಗೊಂಡಲ್ಲಿ
ಲಿಂಗ ತಾನೆಲ್ಲಿಯದೋ?
Comments 1
ಮುಗದ
Mar 20, 2024ಹುಡುಕುವದು ನನ್ನೊಳಗೆ ಇದೆ ಎಂಬುದು ತಿಳಿಯದೆ ಕಾಡು ಮೇಡುಗಳನ್ನೆಲ್ಲ ಸುತ್ತಿ ಅಲೆದೆ.