ಕಾಯೋ ಗುರುವೇ…
ನಾನು:
ಗಾಳಿಯೇ ಆಡದ, ಕತ್ತಲ ಕೋಣ್ಯಾಗ
ಕಳೆದು ಹೋಗಿನಿ ನನ ಗುರುವೆ
ಚಿಲಕವ ಸರಿಸಿ, ಬಾಗಿಲು ತೆಗೆದು
ಬೆಳಕಾ ತೋರಿಸು ನನ ಗುರುವೆ
ತಡವುತ ಎಡವುತ, ಅಲ್ಲಲ್ಲೇ ಸುತ್ತುತ
ಹೈರಾಣಾಗಿಹೆ ನನ ಗುರುವೆ
ರಾಗವೂ ಬೇಡ, ಮೋಹವೂ ಬೇಡ
ಆಗಸ ತೋರಿಸು ನನ ಗುರುವೆ
ಕನಸಲಿ ಕರಗುತ, ಭವದಲಿ ಬೇಯುತ
ಬಸವಳಿದಿರುವೆ ನನ ಗುರುವೆ
ಅಂಟನು ಬಿಡಿಸಿ, ವಿಷಯವ ಹರಿಸಿ
ಮುಕ್ತಿಯ ತೋರೊ ನನ ಗುರುವೆ
ಗುರು:
ಕೋಣೆಯೂ ಇಲ್ಲ, ಕತ್ತಲೂ ಇಲ್ಲ
ಬಾಗಿಲು ಎಲ್ಲಿದೆ ಹೇಳಮ್ಮಾ
ಇಲ್ಲದ ಕೋಣೆಗೆ ಚಿಲಕವ ಜಡಿದು
ಒಳಗೆ ಅಡಗಿದೆ ಯಾಕಮ್ಮಾ?
ಕಣ್ಣನು ತೆರೆದು ಕಸವನು ತೆಗೆದು
ನಿಜವನು ತಿಳಿದು ನೋಡಮ್ಮ
ಭ್ರಮೆಯನು ಜಾಡಿಸಿ, ಮನಸನು ಕೊಡವಲು
ಅಲ್ಲೇ ಬಯಲಿದೆ ಕಾಣಮ್ಮ
ನೀನೇ ಬೆಳಗು, ನೀನೇ ಆಗಸ
ನೀನೇ ಲಿಂಗವು ಅರಿಯಮ್ಮಾ.
Comments 5
nynitha
Feb 12, 2022ಕಾಯೋ ಗುರುವೆ ಕವನ ಬಹಳ ಸೊಗಸಾಗಿದೆ!
Manohara acharya
Feb 12, 2022Very nice
Padmalaya
Feb 17, 2022ವಾವ್…ಸೂಪರ್
Perooru Jaru
Feb 17, 2022ಬಾಗಿಲು ನೀವು ಹಾಕಿಕೊಂಡಿಲ್ಲ, ಈ ಸಮಾಜ ಹಾಕಿದೆ. ಯಾವ ಗುರುವೂ ಈ ಸಮಾಜದ ಸೆರೆಮನೆಯಿಂದ ನಿಮ್ಮನ್ನು ಸಾವಿನ ತನಕ ಬಿಡಿಸಲಾರ.
Suma
Feb 17, 2022Amazing ..eloquently written