ಎಲ್ಲಿದೆ ಈ ಕ್ಷಣ?
ವರ್ತಮಾನದಲ್ಲಿ ನಡೆಯಲರಿಯದೆ
ನುಡಿಯಲರಿಯದೆ ಬಾಳಲರಿಯದೆ
ಕಳದೇ ಹೋಗುವ ಬದುಕು
ಕಾಣಲಾರದು ಯಾಕೆ- ‘ಈ ಕ್ಷಣ’?
ರಾಗಾಲಾಪಗಳ ಬಣ್ಣಗಳಲಿ
ಮಿಂದೇಳುತಿರುವಾಗ
ಬಯಕೆ ಬೇಗುದಿಗಳಲಿ
ಬೇಯುತಿರುವಾಗ, ಎಲ್ಲಿದೆ ಈ ಕ್ಷಣ?
ಅವರಿವರ ಸುದ್ದಿಯಲೇ
ದಿನ ಸವೆಯುತಿರುವಾಗ
ದ್ವೇಷ-ರೋಷ-ವಿಷಯಗಳ
ವಿಷ ತೊನೆಯುತಿರುವಾಗ, ತಿಳಿದೀತೆ ಈ ಕ್ಷಣ?
ಹಿಂದುಮುಂದುಗಳ ಗೊಂದಲ
ತಲೆ ತುಂಬಿಕೊಂಡಾಗ
ಆಸೆ ಆಮೋದಗಳಿಗೆ
ಹಗಲಿರುಳು ಸವೆವಾಗ, ಅರಿವಾದೀತೇ ಈ ಕ್ಷಣ?
ಸುಖ-ದುಃಖ ಸರಪಳಿಯ
ನನಗೆ ನಾನೇ ಹೊಸೆದು
ಸ್ವಹಿತದ ಸಂಬಂಧಗಳ
ಕೂಡಿ ಕಳೆಯುತಿರುವಾಗ ಸಿಕ್ಕೀತೆ ಈ ಕ್ಷಣ?
ಕಣ್ಣು ಹಾಯಿಸಿದಲೆಲ್ಲಾ
ಮನವು ಹರಿದಲೆಲ್ಲಾ
ಪೂರ್ವ ಸಂಚಿತಗಳೇ
ಬಗೆಬಗೆಯಾಗಿ ತೋರುವಾಗ, ಕಂಡೀತೆ ಈ ಕ್ಷಣ?
ಮಾತಲ್ಲೂ ಮೌನದಲೂ
ಪೂಜೆಯಲೂ, ಧ್ಯಾನದಲೂ
ಸಿಗದ ಈ ಕ್ಷಣ
ಕಣ್ಮುಂದೆ, ಕಾಲಡಿಯೇ
ಸರಿದು ಹೋಗುವ ಪರಿಗೆ
ಕಂಗಾಲಾಗಿ ಬೆಚ್ಚಿ ನಿಂತಾಗ
ಕರುಣಾಮಯಿ ಗುರು ಹೇಳಿದ-
ಈ ಕ್ಷಣಕೂ ಮುಖ್ಯ
ಇನ್ನೇನೋ ಇದೆ ಎನುವ
ಮನದ ಮೋಡಿ ಮಾತಿಗೆಲ್ಲಾ
ಕಿವಿಯಾಗಬೇಡಮ್ಮಾ
ಅಲ್ಲೇನಿದೆ…
ಬರಿ ತೆವಲುಗಳು
ಸುಖದ ಅಮಲುಗಳು
ಒಣ ಯೋಚನೆಗಳು
ನಾಳಿನ ಭಯಗಳು
ಏನೇನೋ ಆತಂಕಗಳು…
ಚಿತ್ತದಾಟದಲಿ ಮುಳುಗಿರುವುದೂ
ಗಾಢ ನಿದ್ದೆಯೇ!
ಕಂಗಳ ಕರುಳ ಕೊಯ್ಯದೆ
ಮನದ ತಿರುಳ ಹುರಿಯದೆ
ಹಿಡಿಯಲಾರೆ ನೀನದರ ಜಾಡ
ಕಾಣಲಾರೆ ಅದರ ಬೆಳಗ.
ತಿಳಿ ಮಗಳೇ-
ಈ ಕ್ಷಣವೆಂದರೆ
ಬೇರೇನೂ ಅಲ್ಲ-
ಅದೊಂದು ಬಿಡುಗಡೆ, ಮಹಾ ಎಚ್ಚರ!
Comments 1
ಶೋಭಾದೇವಿ ಅಮರಶೆಟ್ಟಿ, ಧಾರವಾಡ
Oct 24, 2024ಈ ಕ್ಷಣವೆಂದರೆ ನಿಜವಾಗಿಯೂ ಮಹಾ ಎಚ್ಚರವೇ!!!
ಎಲ್ಲಿದೆ ಈ ಕ್ಷಣ ತುಂಬ ಚೆನ್ನಾಗಿದೆ👌👌👍