ಭಕ್ತನಾಗುವುದೆಂದರೆ…
ರಿಚರ್ಡ್ ಫೈನ್ಮಾನ್ ತನ್ನ ‘ದಿ ವ್ಯಾಲ್ಯೂ ಆಫ್ ಸೈನ್ಸ’ ಎಂಬ ಲೇಖನದಲ್ಲಿ ಒಂದು ಒಳ್ಳೆಯ ಪದ್ಯವನ್ನು ಕೂಡ ಓದುಗರೊಡನೆ ಹಂಚಿಕೊಂಡಿದ್ದಾನೆ. ಕಡಲೆದುರಿಗೆ ನಿಂತವನ ಕಣ್ಣಿಗೆ ಕಂಡದ್ದು ವಿಶಾಲ ಸಾಗರದ ಮಧ್ಯದಿಂದ ತೀರಕ್ಕೆ ಬಂದು ಅಪ್ಪಳಿಸುತ್ತಿದ್ದ ಅಲೆಗಳು. ಅವು ಏನನ್ನೋ ಹೇಳಲು ಬಯಸುತ್ತಿವೆ ನಮಗೆ ಅರ್ಥವಾಗುತ್ತಿಲ್ಲ, ಅವುಗಳ ಭಾಷೆ ನಮಗೆ ಗೊತ್ತಾಗುತ್ತಿಲ್ಲ. ದಡಕ್ಕೆ ಹೊಡೆದು ಹೊಡೆದು ಏನನ್ನು ಹೇಳಲು ಪ್ರಯತ್ನಿಸುತ್ತಿವೆ. ಪ್ರಕೃತಿಯ ಭಾಷೆಯೇ ಹೀಗೆ… ಹಕ್ಕಿಗಳು ಇಲ್ಲವೇ ಪ್ರಾಣಿಗಳು ಹಲವಾರು ಸಂದರ್ಭಗಳಲ್ಲಿ ಆ ಸಂದರ್ಭಗಳನ್ನು ಅನುಸರಿಸಿ ದನಿಯ ಏರಿಳಿತಗಳನ್ನು ಮಾಡುತ್ತಾ ಕೂಗುತ್ತವೆ. ಕಾಗೆ ಬೇರೆ ಬೇರೆ ದನಿಗಳನ್ನು ಹೊರಡಿಸಬಲ್ಲದು. ಆಹಾರ ಸಾಕಷ್ಟು ಇದೆ ಎಂದಾಗ ತನ್ನೆಲ್ಲ ಬಳಗವನ್ನು ಕೂಗಿ ಕರೆಯಲು ಒಂದು ಧ್ವನಿ, ಸಂಕಷ್ಟದಲ್ಲಿದ್ದಾಗ ಇನ್ನೊಂದು ಧ್ವನಿ (ಬಸವಣ್ಣನವರ ಕಾಗೆಯೊಂದಗುಳ ಕಂಡರೆ ಕೂಗಿ ಕರೆಯದೆ ತನ್ನ ಬಳಗವೆಲ್ಲವ… ಎನ್ನುವ ಒಂದು ವಚನ ಕಾಗೆಯ ಈ ನಡೆಯನ್ನು ಕುರಿತು ತಾನೆ ಹೇಳಿದ್ದು), ಪ್ರಣಯಕೇಳಿಗಾಗಿ ಮತ್ತೊಂದು ದನಿ ಹೀಗೆ ಸಂದರ್ಭಕ್ಕನುಸಾರವಾಗಿ ಬೇರೆ ಬೇರೆ ದನಿಗಳಿಂದ ಪ್ರಾಣಿಗಳು ಕೂಗುತ್ತವೆ. ಈ ದನಿಗಳನ್ನು ಕೇಳಿದ ತಕ್ಷಣ ಉಳಿದೆಲ್ಲ ಪ್ರಾಣಿ ಪಕ್ಷಿಗಳು ಎಚ್ಚರಗೊಳ್ಳುತ್ತವೆ. ತಿನ್ನುವುದಕ್ಕಾಗಿ ಎಂದು ಗೊತ್ತಾದ ಕ್ಷಣ ಕಾ ಕಾ ಎನ್ನುತ್ತ ಸಂಭ್ರಮದಿಂದ ಪಾಲ್ಗೊಳ್ಳುತ್ತವೆ. ಸಂಕಟದಲ್ಲಿದೆ ಎಂದಾದರೆ ಸುತ್ತ ಎಲ್ಲ ಹರಡಿಕೊಂಡು ಆ ಸಂಕಟದ ಧ್ವನಿ ನಮಗೆಲ್ಲರಿಗೂ ಕೇಳುವಂತೆ ಕೂಗಾಡುತ್ತವೆ. ಭಾಷೆ ಎನ್ನುವುದು ಕೇವಲ ಮನುಷ್ಯರಿಗೆ ಮಾತ್ರ ಸೀಮಿತವಾಗಿಲ್ಲ. ಮರ-ಗಿಡಗಳಿಗೂ ಒಂದು ಭಾಷೆ ಇದ್ದಿರಲೇಬೇಕು. ಅದನ್ನು ನಾವು ಸರಿಯಾಗಿ ಗ್ರಹಿಸಲು ಆಗದಿರಬಹುದು. ನಾವು ಕುಡುಗೋಲನ್ನೋ ಕೊಡಲಿಯನ್ನೋ ತೆಗೆದುಕೊಂಡು ಮರದ ಹತ್ತಿರ ಹೋದಾಗ ಅದು ತನ್ನ ಪಕ್ಕದ ಮರಗಳಿಗೆ ತನ್ನ ಸಂಕಟವನ್ನು ನೋವನ್ನು ತನ್ನದೇ ರೀತಿಯಲ್ಲಿ ನಿವೇದನೆ ಮಾಡಿಕೊಳ್ಳುತ್ತಿರಬಹುದಾದ ವಿಚಾರ ನಮಗೆ ಗೊತ್ತಿಲ್ಲ. ಪ್ರಕೃತಿಯ ಎಲ್ಲ ವರ್ತನೆಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ಬೇಕಾದಂತಹ ಪರಿಕರಗಳು, ಸಲಕರಣೆಗಳು ನಮ್ಮಲ್ಲಿಲ್ಲ. ಮನುಷ್ಯನಿಗಿರುವ ಭಾಷೆ ಮತ್ತು ಅದರ ಬಳಕೆಯನ್ನು ಹೇಗೆ ಸಮೃದ್ಧಗೊಳಿಸಿಕೊಂಡಿದ್ದಾನೆ ಎಂದರೆ ಅವನ ಮನಸ್ಸಿನೊಳಗೆ ಮೂಡುವಂತಹ ಅತ್ಯಂತ ಸೂಕ್ಷ್ಮ ಕಣಕಣಗಳಿಗೂ ತಲುಪಬಹುದಾದಂತಹ ಸನ್ನೆಗಳನ್ನು, ಅದು ಸಾಧ್ಯವಾಗಲಿಲ್ಲವೆಂದರೆ ರೂಪಕಗಳನ್ನೂ, ಪ್ರತಿಮೆಗಳನ್ನೂ ರೂಪಿಸಿಕೊಂಡಿದ್ದಾನೆ, ರೂಢಿಸಿಕೊಂಡಿದ್ದಾನೆ. ಅಲ್ಲಮರಂಥ ವಚನಕಾರರ ಈ ವಚನವನ್ನು ನೋಡಿ:
ಮೇರುವ ಸಾರಿದ ಕಾಗೆ ಹೊಂಬಣ್ಣವಾಗದಿದ್ದಡೆ
ಆ ಮೇರುವಿಂದತ್ತಣ ಹುಲುಮೊರಡಿಯೆ ಸಾಲದೆ? ದೇವಾ
ನಿಮ್ಮ ಪೂಜಿಸಿ ಧಾವತಿಗೊಂಬಡೆ
ಆ ಧಾವತಿಯಿಂದ ಮುನ್ನಿನ ವಿಧಿಯೇ ಸಾಲದೆ? ಗುಹೇಶ್ವರಾ
ನಿಮ್ಮ ಪೂಜಿಸಿ ಸಾವಡೆ
ನಿಮ್ಮಿಂದ ಹೊರಗಣ ಜನವೆ ಸಾಲದೆ?
ಅಲ್ಲಮರು ಈ ವಚನದ ಮೂಲಕ ಏನು ಹೇಳುವುದಕ್ಕೆ ಪ್ರಯತ್ನಪಡುತ್ತಾರೆ ಗಮನಿಸೋಣ. ಮೇರು ಎನ್ನುವುದು ಒಂದು ಚಿನ್ನದ ಪರ್ವತ, ಇಡೀ ಪರ್ವತವೇ ಚಿನ್ನ. ಎಲ್ಲ ಕಡೆ ಸುವರ್ಣಮಯವಾಗಿ ಹೊಂಬಣ್ಣದಿಂದ ಹೊಳೆಯುತ್ತಿರುವ ಆ ಪರ್ವತವನ್ನು ಏರುವಂತಹ ಕಾಗೆಯೊಂದು ತನ್ನ ಕಪ್ಪುಬಣ್ಣವನ್ನು ಕಳೆದುಕೊಂಡು ಹೊಂಬಣ್ಣದಿಂದ ಹೊಳೆಯಲಾಗದಿದ್ದರೆ ಅದರ ಏರಿಕೆಯನ್ನು ಸಾಧನೆ ಎನ್ನಲಾದೀತೆ? ಹೊಂಬಣ್ಣವನ್ನು ಮೈಗೂಡಿಸಿಕೊಳ್ಳದ ಕಾಗೆ ಆ ಪರ್ವತದ ಮಹತಿಯನ್ನು ಪ್ರತಿಬಿಂಬಿಸಲಾದೀತೆ? ಒಬ್ಬ ಅದ್ಭುತ ಗುರುವಿನ ಬಳಿ ಅವನು ಹೇಳುವಂತಹ ಪಾಠವನ್ನು ನಿದರ್ಶನಗಳನ್ನು ತಿಳಿಯದಿದ್ದರೆ ನಿಜವಾದ ಭಕ್ತನಾಗಿ ಪರಿವರ್ತನೆಯಾಗದಿದ್ದರೆ ಅವನು ಯಾತಕ್ಕಾಗಿ ಆ ಗುರುವಿನ ಬಳಿ ಹೋದ? ಗುರುವಿನ ಬಳಿ ಹೋಗಿ ತಾನೇ ಏನು ಪ್ರಯೋಜನ? ಅಂತಹ ಗುರುವಿನ ಹತ್ತಿರ ಹೋದದ್ದೇ ವ್ಯರ್ಥವಾಗಿ ಹೋಯಿತು ಅಲ್ಲವೇ? ಅಮೆರಿಕದಲ್ಲಿದ್ದು ನೊಬೆಲ್ ಪ್ರಶಸ್ತಿಪಡೆದಂತಹ ನಮ್ಮವರೇ ಆದ ಸರ್ ಎಸ್. ಚಂದ್ರಶೇಖರ್ ಇಬ್ಬರು ವಿದ್ಯಾರ್ಥಿಗಳಿಗೆ ಪಾಠ ಮಾಡಲು ತಾವೇ ತಮ್ಮ ಕಾರನ್ನು ಚಾಲನೆ ಮಾಡಿಕೊಂಡು 80 ಕಿಲೋಮೀಟರ್ ಹೋಗುತ್ತಿದ್ದರು. ಅದನ್ನು ನೋಡುತ್ತಿದ್ದ ಅವರ ಸಹೋದ್ಯೋಗಿಗಳು ಮತ್ತು ಮಿತ್ರರು “ಅಯ್ಯೋ, ಇಷ್ಟು ದೊಡ್ಡ ಪ್ರೊಫೆಸರಾಗಿ ಇಬ್ಬರು ಪಡ್ಡೆಹುಡುಗರಿಗೆ ನೀನೆ ವಾಹನ ಚಾಲನೆ ಮಾಡಿಕೊಂಡು ಹೋಗಿ ಪಾಠ ಹೇಳುತ್ತಿದ್ದೀಯಲ್ಲ, ಇದೇನಯ್ಯ ನಿನಗೆ ಬಂದಿರೋ ಗ್ರಹಚಾರ?” ಎಂದು ಗೇಲಿ ಮಾಡಿದಾಗ, “ನಿಮಗೆ ಗೊತ್ತಿಲ್ಲ, ಅವರಿಗೆ ಪಾಠ ಹೇಳೋದಕ್ಕೆ ನಾನು ಹೋಗುತ್ತಿಲ್ಲ, ಪಾಠ ಹೇಳುವುದರ ಮೂಲಕ ಅವರಿಂದ ಪಾಠ ಕಲಿಯೋದಕ್ಕೆ ನಾನು ಹೋಗುತ್ತಿದ್ದೇನೆ ಎಂದರಂತೆ.” ಇವರಿಗೆ ನೋಬೆಲ್ ಪ್ರಶಸ್ತಿ ಬರುವುದಕ್ಕೆ ಮೊದಲೇ ಅವರಿಬ್ಬರಿಗೂ ನೋಬೆಲ್ ಪ್ರಶಸ್ತಿ ಬಂದದ್ದು ಇತಿಹಾಸ. ಪಾಠ ಹೇಳಿಕೊಟ್ಟ ಮೇಷ್ಟ್ರಿಗೆ ಪ್ರಶಸ್ತಿ ಸಿಕ್ಕಿದ್ದು ತಡವಾಗಿ. ‘ಚಂದ್ರಶೇಖರ್ ಮಿತಿ’ ಅನ್ನೋದನ್ನ ಪ್ರಚುರಪಡಿಸಿ ಬಹಳ ತಡವಾಗಿ ನೊಬೆಲ್ ಪ್ರಶಸ್ತಿ ಪಡೆದುಕೊಂಡಂತಹ ಚಂದ್ರಶೇಖರ್ಗಿಂತಲೂ ಆ ಇಬ್ಬರು ವಿಜ್ಞಾನಿಗಳು ಮೊದಲು ನೊಬೆಲ್ ಪ್ರಶಸ್ತಿ ಪಡೆದದ್ದನ್ನು ಗಮನಿಸಿದರೆ ಅಲ್ಲಮನ ಮೇಲಿನ ವಚನದಲ್ಲಿ ಆತನ ಇಂಗಿತ ವ್ಯಕ್ತವಾಗಿರುವುದನ್ನು ಕಾಣಬಹುದು.
ಪಕ್ಷಿಗಳಲ್ಲೆಲ್ಲಾ ಅತ್ಯಂತ ನಿಕೃಷ್ಟವಾದ ಪಕ್ಷಿ ಅಂತ ಗುರುತಿಸಿರುವುದು ಗೂಬೆಯನ್ನು, ಅದನ್ನು ಬಿಟ್ಟರೆ ಕಾಗೆಯನ್ನೆ. ಇಂತಹ ಕಾಗೆ ಚಿನ್ನದ ಪರ್ವತಕ್ಕೆ ಹೋದಮೇಲೂ ಅದರ ಕಪ್ಪುಬಣ್ಣ ಹೊಂಬಣ್ಣಕ್ಕೆ ತಿರುಗದೆ ಇದ್ದರೆ ಅಲ್ಲಿಗೆ ಕಾಗೆ ಹೋದದ್ದಾದರೂ ಯಾತಕ್ಕೆ? ಮೇರು ಪರ್ವತ ಚಿನ್ನದ್ದು ಎನ್ನುವುದೇ ಒಂದು ವಿಶೇಷ ವಿಚಾರ. ಬೇರೆಲ್ಲ ಪರ್ವತಗಳು ಕಲ್ಲು ಮಣ್ಣಿನಿಂದ ನಾನಾ ರೀತಿಯ ಗಿಡಮರಗಳಿಂದ ಕೂಡಿ ಸಾಮಾನ್ಯ ರೂಪದಲ್ಲಿದ್ದರೆ ಮೇರು ಗಿರಿಯ ಮೈಯೆಲ್ಲ ಸುವರ್ಣಮಯ. ಹಾಗೆಯೇ ಅತ್ಯಂತ ಎತ್ತರದ್ದೂ ಹೌದು. ಅಂತಹ ವಿಶಿಷ್ಟರೂಪ ಪಡೆದ ಕಾರಣದಿಂದಲೇ ಇರಬೇಕು ಮೇರುಪರ್ವತದ ಹೆಸರೇ ಶ್ರೇಷ್ಟತೆಯನ್ನು ಗುರುತಿಸುವ ಗುಣವಾಚಕವಾಗಿದೆ. ಇಂತಹ ಮೇರುಪರ್ವತವನ್ನು ಏರುವೆನೆನ್ನುವ ಕಾಗೆಗೆ ಅದನ್ನು ಏರಬೇಕೆನ್ನುವ ಗುರಿಗಿಂತಲೂ ಆ ಪರ್ವತದ ಮೈಯನ್ನೆಲ್ಲ ಹೊಂಬಣ್ಣದಿಂದ ಹೊಳೆಯಿಸುತ್ತಿರುವ ಬಂಗಾರ ತನ್ನ ಮೈಗೂ ಲೇಪನವಾಗಿ ಪೂರ್ವ ಕೃಷ್ಣವರ್ಣನಷ್ಟವಾಗಿ ಸುವರ್ಣವರ್ಣದಿಂದ ಸಂಪೂರ್ಣ ಮೈ ಬೆಳಗಬೇಕು ಎನ್ನುವ ಹಿರಿದಾದ ಹಂಬಲವಿರಬೇಕು. ವಿಶಿಷ್ಟವಾದದ್ದನ್ನು ಮಾಡಿದಾಗ ವಿಶೇಷ ಫಲ ಸಿಗದಿದ್ದರೆ ಅದನ್ನು ಏಕೆ ಮಾಡಬೇಕು? ಎಂದು ಅಲ್ಲಮರು ಕಾಗೆಯ ನಿದರ್ಶನದ ಮೂಲಕ ಕೇಳುತ್ತಾರೆ. ಶ್ರೇಷ್ಠನೂ ಮೇಧಾವಿಯೂ ಆದ ಗುರುವಿನ ಬಳಿ ಪಾಠ ಕೇಳಿಯೂ ಒಬ್ಬ ಶಿಷ್ಯ ಲೌಕಿಕದಲ್ಲಿ ಹಲ್ಲಂಡೆಯಾಗಿದ್ದಾನೆಂದರೆ ‘ಅವನು ಯಾತಕ್ಕಾದರೂ ಆ ಗುರುವಿನ ಬಳಿ ಕಲಿಯಲು ಬಯಸಿದ? ಗುರುವಿಗೆ ಕೆಟ್ಟ ಹೆಸರು ತರೋದಕ್ಕೆ ಯಾಕೆ ಹೋದ?’ ಅಂತ ಆ ಶಿಷ್ಯನಲ್ಲಿ ಜನ ದೋಷ ಕಾಣುವುದಿಲ್ಲವೇ? ಅಲ್ಲಮರು ಈ ರೀತಿಯ ರೂಪಕದಿಂದ ನಿಜವಾದ ಭಕ್ತನಾಗುವ ಪ್ರಕ್ರಿಯೆಯ ಕಡೆಗೆ ಗಮನಸೆಳೆಯುತ್ತಾರೆ.
ಮೇರು ಪರ್ವತಕ್ಕೆ ಹೋಗಿ ಬಣ್ಣದ ಗುಣಹೊಂದದಿದ್ದರೆ ಅಲ್ಲಿಗೆ ಹೋದದ್ದು ವ್ಯರ್ಥವಲ್ಲವೆ? ಸುಮ್ಮನೆ ಕಾಗೆ ಮೇರು ಪರ್ವತಕ್ಕೆ ಹೋಗುವ ಬದಲು ಹುಲುಮೊರಡಿಯೊಂದರಲ್ಲಿ ಆಡಿದ್ದರೆ ಸಾಕಾಗಿತ್ತಲ್ಲವೆ? ಹುಲುಮೊರಡಿಯಲ್ಲಾಡಿದ ಯಾವ ಕಾಗೆಯ ಬಣ್ಣವೂ ಬದಲಾಗಿಲ್ಲವಾಗಿ, ಮೇರುಪರ್ವತಕ್ಕೆ ಹೋಗಿಯೂ ಕಾಗೆ ಕಪ್ಪಾಗಿಯೇ ಉಳಿಯಿತೆಂದರೆ ಆ ಕಾಗೆಗೂ ಹುಲುಮೊರಡಿಯಲ್ಲಾಡಿದ ಕಾಗೆಗೂ ವ್ಯತ್ಯಾಸವೆಲ್ಲಿಯದು? ಆಕಾಶದೆತ್ತರಕ್ಕೂ ಚಾಚಿ ಸ್ವರ್ಣಲೇಪನದಿಂದ ಹೊಳೆಯುತ್ತಿದ್ದ ಮೇರು ಪರ್ವತವನ್ನು ನೋಡಿ ತಾನೂ ಬಂಗಾರದ ಕಾಗೆಯಾಗಿ ಮಿಂಚಬೇಕೆನ್ನುವ ಹಂಬಲದಿಂದ ಮುಗಿಲೆತ್ತರಕ್ಕೆ ಹಾರಬೇಕಾದ ಕಠಿಣ ಘನತರ ಸಾಹಸಕ್ಕೆ ತೊಡಗಿ ತುತ್ತತುದಿಯನ್ನು ಮುಟ್ಟುವುದರಲ್ಲಿ ಯಶಸ್ವಿಯಾದರೂ ಬಣ್ಣ ಬದಲಾಗದಿದ್ದರೆ ಅದರ ಘನತರ ಆಕಾಂಕ್ಷೆ ಈಡೇರಿತೇನು? ಆ ಪರ್ವತವನ್ನು ಏರಿಯೂ ಕಾಗೆ ಕಪ್ಪಾಗಿ ಉಳಿಯಿತೆಂದರೆ ಅದು ಕಳಕೊಂಡದ್ದೂ ಏನೂ ಇಲ್ಲ, ಪಡೆದುಕೊಂಡದ್ದೂ ಏನೂ ಇಲ್ಲ. ಮೇರು ಪರ್ವತ ಸುವರ್ಣಮಯವಾಗಿರುವ ಬಗೆ ಹೇಗೆ ಎಂದು ಕಾಗೆ ಆಲೋಚಿಸಬಹುದಿತ್ತೇನೋ. ಕಲ್ಲು ಮಣ್ಣು ಗಿಡ ಮರಗಳಿಂದ ಕೂಡಿದ ಪರ್ವತವೊಂದು ತನ್ನ ಸ್ಥಿತಿಯನ್ನು ಬದಲಾಯಿಸಿಕೊಂಡ ಕ್ರಮದ ಸುಳಿವು ತಿಳಿಯಲು ಆಗುತ್ತಿತ್ತೇನೋ. ಆಗ ತಾನೂ ಆ ಕ್ರಮವನ್ನು ಅನುಸರಿಸಿ ಬಣ್ಣ ಪಡೆಯುವ ವಿಚಾರಮಾಡಬಹುದಿತ್ತು. ಪರ್ವತದ ಸ್ಥಿತಿ ಬದಲಾವಣೆಯ ಹಿಂದಿರಬಹುದಾದ ಕಾರಣವನ್ನು ಗುರುತಿಸಲು ಕಾಗೆ ಅಸಮರ್ಥವಾಯಿತೆಂದಿಟ್ಟುಕ್ಕೊಂಡರೂ ಆ ಪರ್ವತದ ಬಳಿಸಾರಿ ಉಪಾಸನೆಗೈದು ಪರ್ವತವೇ ಪ್ರಕಟಗೊಳಿಸಬಹುದಾದ ವರ್ತನೆ ಸುಳಿವುಗಳನ್ನು ಬೆಂಬತ್ತಿ ಕಾಗೆ ಹೊಂಬಣ್ಣವನ್ನು ಪಡೆಯಲು ಪ್ರಯತ್ನಿಸಬೇಕಿತ್ತು. ತುಂಬಿದ ಕೆರೆ ಕೊಳಗಳನ್ನು ಕಂಡಾಗಲೆಲ್ಲ ಅಲ್ಲಿಯ ನೀರಲ್ಲಿ ಮೈಯನ್ನೊಮ್ಮೆ ತಲೆಯನ್ನು ಮೂರ್ನಾಲ್ಕು ಬಾರಿ ಮುಳುಗಿಸಿ ಮೆಲ್ಲನೆ ಹೆಜ್ಜೆ ಹಾಕುತ್ತ ದಡಕ್ಕೆ ಬಂದು ರೆಕ್ಕೆ ಪುಕ್ಕಗಳನ್ನೂ ಮೈಯನ್ನೂ ಒದರಿ ಒದರಿ ಶುಭ್ರವಾಗುವ ಕಾಗೆಗೆ ಹೊಂಬಣ್ಣವಾಗುವ ಪರಿ ಅಸಾಧ್ಯವೇನಲ್ಲ. ಆದರೆ ಅದು ಕಾರ್ಯಗತವಾಗಬೇಕಾದರೆ ಕಾಗೆ ತನ್ನ ಗುರಿಯೆಡೆಗೆ ಒತ್ತಾಸೆಯಿಂದ ವಿಚಾರಮಾಡುತ್ತ ಕಾರ್ಯೋನ್ಮುಖವಾಗಬೇಕು. ತನಗೆ ತಾನೇ ಹೇಳಿಕೊಂಡ ನುಡಿ ನಡೆಯಾಗಬೇಕು.
ಎಲ್ಲರೂ ದೇವರನ್ನು ಪೂಜಿಸುವುದು ನೆಮ್ಮದಿ ಮತ್ತು ಮನಃಶಾಂತಿಗಾಗಿ. ಆದರೆ ದೇವರನ್ನು ಪೂಜಿಸಿಯೂ ಧಾವಂತದಿಂದ ಹೊರಬರಲಾಗದೆ ಇರತೊಡಗಿದರೆ ಆ ಪೂಜೆಯಿಂದ ಏನು ಪ್ರಯೋಜನ? ಪೂಜಿಸಿದ ನಂತರ ಮಗದೊಂದು ಧಾವಂತಕ್ಕೆ ಈಡಾಗಿ ಸಂಕಷ್ಟಪಟ್ಟರೇನು ಬಂತು. ಅಂತಹ ಪೂಜೆ ಮಾಡುವ ತಾಪತ್ರಯಕ್ಕೆ ಕೈಹಾಕುವ ಬದಲು ಪೂಜೆಗೂ ಪೂರ್ವದಲ್ಲಿದ್ದ ಸ್ಥಿತಿಯಲ್ಲಿಯೇ ಇರುವುದು ಲೇಸಲ್ಲವೆ? ಎಂದು ಕೇಳುತ್ತಾರೆ ಅಲ್ಲಮ. ಕೊನೆಗೆ ಅಲ್ಲಮರು, ಗುಹೇಶ್ವರನನ್ನು ಪೂಜಿಸಿದ ಮೇಲೆಯೂ ಸಾವಿಗೆ ತುತ್ತಾಗುವ ಹಾಗಿದ್ದರೆ ಅವನನ್ನು ಪೂಜಿಸುವುದರಿಂದ ವಿಶೇಷ ಲಾಭವೇನು? ಆತನ ಬದಲು ಹೊರಗಿನ ಮರ್ತ್ಯ ಜೀವನ ಸಾಕಲ್ಲವೆ? ಎನ್ನುತ್ತಾರೆ.
ಗುಹೇಶ್ವರನನ್ನು ಪೂಜಿಸಿದರೆ ಸಾವಿಗೆ ತುತ್ತಾಗುವ ಅವಕಾಶವಿರುವುದಿಲ್ಲ. ಅದು ಹೇಗೆ? ಗುಹೇಶ್ವರನನ್ನು ಪೂಜಿಸುವುದು ಎಂದರೆ ತನ್ನನ್ನೇ ತಾನು ಅರಿಯುವುದು. ಅಂದರೆ ತನ್ನ ಮನಸ್ಸು ಹೇಗೆ ವರ್ತಿಸುತ್ತದೆ, ತಾನು ಹೇಗೆ ಅಹಂಕಾರಕ್ಕೆ ತುತ್ತಾಗಿದ್ದೇನೆ, ತಾನು ಹೇಗೆ ಇಂದ್ರಿಯಗಳಿಗೆ ತುತ್ತಾಗಿದ್ದೇನೆ ಎನ್ನುವುದನ್ನು ಅರಿಯುವುದು ಮತ್ತು ಆ ಎಲ್ಲದರಿಂದ ಬಿಡುಗಡೆ ಪಡೆಯುವುದು. ಅದೇ ಬಿಡುಗಡೆ. ಅದೇ ಸಾವಿಗೆ ತುತ್ತಾಗದಿರುವುದು. ಗುಹೇಶ್ವರನ ನಿಜವಾದ ಪೂಜೆ ವ್ಯಕ್ತಿಗೆ ಸಾವಿನಿಂದ ಬಿಡುಗಡೆ ಕೊಡುತ್ತದೆ. ಹಾಗಾಗದಿದ್ದಾಗ ಅಂದರೆ ಸಾವಿನಿಂದ ಬಿಡುಗಡೆ ಇಲ್ಲದಿದ್ದರೆ ಗುಹೇಶ್ವರನನ್ನು ಪೂಜಿಸಿ ಫಲವೇನು? ಅದರ ಬದಲು ಸಾಮಾನ್ಯ ಜನರನ್ನೇ ಪೂಜಿಸಬಹುದು.
ಮೇರು ಪರ್ವತವು ತನ್ನ ಚಿನ್ನದ ಮೈಗೆ ಹೆಸರುವಾಸಿಯಾದದ್ದು. ಆದರೆ ಅಲ್ಲಿಗೆ ಹೋಗುವ ಮಾತ್ರದಿಂದ ಅದರ ಗುಣ ಯಾರಿಗೂ ಬರುವುದಿಲ್ಲ. ಅದೇ ರೀತಿ ಯಾಂತ್ರಿಕವಾಗಿ ಗುಹೇಶ್ವರನನ್ನು ಪೂಜಿಸಿದರೆ ಯಾವ ಪ್ರಯೋಜನವೂ ಇಲ್ಲ. ಆತನನ್ನು ಮನಸಾ ಪೂಜಿಸಿದರೆ ಸಾವಿಗೆ ತುತ್ತಾಗುವುದನ್ನು ತಡೆಯಬಹುದು. ಹಾಗಾಗದಿದ್ದರೆ, ಅಂದರೆ ಯಾಂತ್ರಿಕವಾಗಿ ಪೂಜಿಸುವ ಹಾಗಿದ್ದರೆ ಅದಕ್ಕೆ ಗುಹೇಶ್ವರನೇ ಏಕೆ ಬೇಕು? ಯಾರನ್ನೂ ಅಂದರೆ ಸಾಮಾನ್ಯರನ್ನೂ ಪೂಜಿಸಬಹುದು ಎನ್ನುತ್ತಾರೆ ಅಲ್ಲಮರು. ಜನರು, ಸಾಮಾನ್ಯವಾಗಿ ಒಳ್ಳೆಯತನಕ್ಕೆ ಹೆಸರುವಾಸಿಯಾದವನ ಹಿಂದೆ ಹೋಗುತ್ತಾರೆ. ಆದರೆ ಅದರಿಂದ ಯಾವ ಲಾಭವೂ ಇಲ್ಲ. ಅವರ ಹತ್ತಿರವಿರುವುದರಿಂದ ನಮಗೆ ಅವರ ಗುಣ ಬರುವುದಿಲ್ಲ. ನಮ್ಮ ಒಳಗು ಬದಲಾಗಬೇಕು, ಎಂಬುದನ್ನು ಸೂಚಿಸುತ್ತದೆ ಈ ವಚನ.
ಎಲ್ಲ ಧರ್ಮಗಳಲ್ಲಿ ಪ್ರತಿಪಾದಿಸಿರುವಂತೆ ಲಿಂಗಾಯತ ಧರ್ಮದಲ್ಲೂ ಸೃಷ್ಟಿಯ ಹುಟ್ಟು ಉಗಮ ಹಾಗೂ ಇಲ್ಲಿಯ ಚರಾಚರ ವಸ್ತುಗಳ ರಚನೆ, ಸಕಲ ಜೀವ ವೈವಿಧ್ಯಗಳ ವರ್ತನೆ, ಪ್ರಾಣಿ ಪಕ್ಷಿಸಂಕುಲಗಳ ಬದುಕು, ಈ ಎಲ್ಲದರ ಬಗ್ಗೆ, ವ್ಯಷ್ಟಿ ಹಾಗೂ ಸಮಷ್ಟಿಯ ಕಾಯಕರೂಪಿತ ಸಾಂಘಿಕ ಸಹಕಾರದ ಬದುಕಿನ ಬಗ್ಗೆ ಶರಣರೂ ಆಲೋಚಿಸಿದ್ದಾರೆ. ಲಿಂಗಾಯತ ಧರ್ಮದಲ್ಲಿ ಬ್ರಹ್ಮಚರ್ಯಾಶ್ರಮಕ್ಕೆ ಸಂವಾದಿಯಾಗಿ ಭಕ್ತಸ್ಥಲ ಹುಟ್ಟಿಕೊಳ್ಳುತ್ತದೆ. ಗುರುಶಿಷ್ಯರ ಸಂಬಂಧ ಹೇಗಿರಬೇಕು ಎಂಬುದನ್ನು ಅಲ್ಲಮರ ಮೇಲಿನ ವಚನ ಅತ್ಯಂತ ಪರಿಣಾಮಕಾರಿಯಾಗಿ ಸ್ಪಷ್ಟಗೊಳಿಸಿದೆ. ಆ ವಚನದಲ್ಲಿ ಅಲ್ಲಮರು ಏನನ್ನು ನಿರೀಕ್ಷಿಸಿರುವರೋ ಹಾಗಾಗದಿದ್ದ ಪಕ್ಷದಲ್ಲಿ ಮುಂದಿನ ವಚನದಲ್ಲಿನ ಕ್ರಮವನ್ನು ಆಯಾ ಯುಗಧರ್ಮಕ್ಕೆ ಅನುಸಾರವಾಗಿ ಅಳವಡಿಸಿಕೊಳ್ಳಬೇಕು ಎನ್ನುತ್ತಾರೆ.
ಕೃತಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬಡಿದು ಬುದ್ಧಿಯ ಕಲಿಸಿದಡೆ ಆಗಲಿ ಮಹಾಪ್ರಸಾದವೆಂದೆನಯ್ಯಾ.
ತ್ರೇತಾಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬೈದು ಬುದ್ಧಿಯ ಕಲಿಸಿದಡೆ ಆಗಲಿ ಮಹಾಪ್ರಸಾದವೆಂದೆನಯ್ಯಾ.
ದ್ವಾಪರದಲ್ಲಿ ಶ್ರೀಗುರು ಶಿಷ್ಯಂಗೆ ಝಂಕಿಸಿ ಬುದ್ಧಿಯ ಕಲಿಸಿದಡೆ ಆಗಲಿ ಮಹಾಪ್ರಸಾದವೆಂದೆನಯ್ಯಾ.
ಕಲಿಯುಗದಲ್ಲಿ ಶ್ರೀಗುರು ಶಿಷ್ಯಂಗೆ ವಂದಿಸಿ ಬುದ್ಧಿಯ ಕಲಿಸಿದಡೆ ಆಗಲಿ ಮಹಾಪ್ರಸಾದವೆಂದೆನಯ್ಯಾ.
ಗುಹೇಶ್ವರಾ ನಿಮ್ಮ ಕಾಲದ ಕಟ್ಟಳೆಯ ಕಲಿತನಕ್ಕೆ ನಾನು ಬೆರಗಾದೆನು.
ಕೃತಯುಗದಲ್ಲಿ ರಾಜನ ಮಗನೇ ಆಗಲಿ ಅಥವಾ ಇನ್ಯಾರ ಮಗನೇ ಆಗಲಿ ಒಮ್ಮೆ ಅವನನ್ನು ಗುರುವಿಗೆ ಒಪ್ಪಿಸಿದರೆ ಅಲ್ಲಿಂದಾಚೆಗೆ ಆತನನ್ನು ಗುರು ವಿದ್ಯೆ ಕಲಿಯುವಂತೆ ಅಣಿಮಾಡುತ್ತಿದ್ದ, ಕೈಕಾಲು ಮುರಿಯುವಷ್ಟೂ ಒಮ್ಮೊಮ್ಮೆ ಹೊಡೆದು ಬಡಿದು ಶಿಷ್ಯನಿಗೆ ಪಾಠಕಲಿಸುವ ಪರಿಪಾಠ ಆಗಿತ್ತು. ನಂತರದ ತ್ರೇತಾಯುಗದಲ್ಲಿ ದಂಡಮಾರ್ಗ ಮರೆಯಾಗಿ ಹೆಚ್ಚೆಂದರೆ ಗದರಿಸಿ ಅಥವಾ ಬೈದು ಶಿಷ್ಯನಿಗೆ ಗುರು ಪಾಠ ಹೇಳಬೇಕಿತ್ತು. ಅದಕ್ಕಿಂತ ಹೆಚ್ಚಿನ ಶಿಕ್ಷೆ ಕೊಡುವ ಹಾಗಿರಲಿಲ್ಲ. ವಿದ್ಯಾರ್ಥಿಯ ಪೋಷಕರೂ, “ಗುರುಗಳೇ, ನಮ್ಮ ಹುಡುಗನಿಗೆ ವಿದ್ಯೆ ಕಲಿಸಬೇಕು. ಕಲಿಸುವಾಗ ದಯಮಾಡಿ ಹೊಡೆಯಬೇಡಿ, ಬೇಕಾದರೆ ಒಂದು ಮಾತು ಬೈಯಿರಿ. ಹೋಡೀಬೇಡಿ. ಬೈದೇ ಅವನನ್ನು ತಿದ್ದಿ” ಎಂದು ಗುರುಗಳಿಗೆ ಬೇಡಿಕೊಳ್ಳುತ್ತಲೇ ಪರೋಕ್ಷವಾಗಿ ತಾಕೀತನ್ನೂ ಮಾಡುತ್ತಿದ್ದರು. ದ್ವಾಪರಯುಗದಲ್ಲಿ ಹೋಡಿಯೋದೂ ಇಲ್ಲ ಬೈಯೋದೂ ಇಲ್ಲ, ಹೆಚ್ಚೆಂದರೆ ಶಿಷ್ಯನಿಗೆ “ನೋಡು, ನೀನು ಪಾಠ ಕಲಿಯದೆ ಇದ್ದರೆ ಸುಮ್ಮನಿರೋಲ್ಲ, ಹಾಗೆ ಮಾಡ್ತೀನಿ, ಹೀಗೆ ಮಾಡ್ತೀನಿ” ಅಂತ ಗುರು ಝಂಕಿಸಿ ಬುದ್ಧಿ ಕಲಿಸುತ್ತಿದ್ದದ್ದು ರೂಢಿಯಾಗಿತ್ತು. ಕಲಿಯುಗದಲ್ಲಂತೂ ಗುರು ಶಿಷ್ಯನಿಗೆ “ನಿನ್ನ ದಮ್ಮಯ್ಯ ಅಂತೀನಪ್ಪ, ಸ್ವಲ್ಪ ಗಮನಕೊಟ್ಟು ಕಲಿಯೋ ಮರಿ” ಅನ್ನುತ್ತ ವಂದಿಸಿ ಬುದ್ಧಿ ಕಲಿಸುವಂತಾಗಿದೆ. ದೇಶಕಾಲಗಳ ನಿರಂತರ ಬದಲಾವಣೆಯ ಜೊತೆಗೆ ವ್ಯಷ್ಟಿ ಮತ್ತು ಸಮಷ್ಟಿಯ ಬುದ್ಧಿಯೂ ಪರಿಣಾಮಕಾರಿಯಾಗಿ ವಿಕಾಸಹೊಂದಿ ಆಯಾ ಯುಗಧರ್ಮದ ವೈಶಿಷ್ಟ್ಯಕ್ಕೆ ಕಾರಣವಾದ ನೆಲೆಗಟ್ಟಿನಲ್ಲಿ ವಿಶ್ಲೇಷಿಸುವುದಾದರೆ ಈ ಮೇಲಿನ ವಚನಕ್ಕೆ ಇನ್ನೊಂದು ಸಕಾರಣವಾದ ವಿವರಣೆಯ ಸಾಧ್ಯತೆಯೂ ಇದೆ. ಕೃತಯುಗದಲ್ಲಿ ಮೊದಲಿಗೆ ಏನೂ ಇರಲಿಲ್ಲ. ಮೊದಲನೇ ಸಲ ಪಾಠ ಹೇಳಲು ಗುರು ಕುಳಿತದ್ದು ಇದೇ ಕೃತಯುಗದಲ್ಲಿ. ಬರವಣಿಗೆ ಶಾಸ್ತ್ರ ಗ್ರಂಥಗಳ ಮಾತಿರಲಿ, ಭಾಷೆಯಲ್ಲಿನ ಪ್ರಯೋಗಗಳು, ಧ್ವನಿಯ ಏರಿಳಿತಗಳೂ ಸ್ಪಷ್ಟವಾಗಿ ಗೊತ್ತಿಲ್ಲದಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿ ಕಲಿಕೆಯೆನ್ನುವುದು ವಿದ್ಯಾರ್ಥಿಗೆ ಅತ್ಯಂತ ಕಷ್ಟವಾಗಿತ್ತು. ವೇದಗಳ ಉಚ್ಛಾರಣೆ ಎಷ್ಟು ಕ್ಲಿಷ್ಟ ಎನ್ನುವುದನ್ನು ಈಗಲೂ ವೇದಘೋಷಮಾಡುವಾಗ ಕಂಡಿದ್ದೇವೆ, ಕೇಳಿದ್ದೇವೆ. ಶಿಕ್ಷೆ ಕೊಟ್ಟಾದರೂ ಜ್ಞಾನದ ಸಾರ ವಿಸ್ತಾರಗಳನ್ನು ಕಲಿಸಲೇಬೇಕೆನ್ನುವ ಅನಿವಾರ್ಯತೆಯೂ ಇತ್ತೆನಿಸುತ್ತದೆ. ಬಹುಶಃ ಆಹಾರ ದೊರಕಿಸಿಕೊಳ್ಳುವ ಅಗತ್ಯ, ಜೀವ ರಕ್ಷಣೆಯ ಉಪಾಯ, ಪ್ರಕೃತಿ ವಿಕೋಪಗಳ ಅಪಾಯಗಳಿಂದ ಪಾರಾಗುವಿಕೆಯ ತಂತ್ರಗಳೂ ಹಾಗೆಯೇ ತಾವೇ ಕಲ್ಪಿಸಿಕೊಂಡಿದ್ದ ದೇವಾನುದೇವತೆಗಳ ಅನುಗ್ರಹಕ್ಕೆ ಪಾತ್ರರಾಗಬೇಕಾದ ಕಾರ್ಯಕಾರಣಗಳೇ ಈ ರೀತಿಯ ಕಲಿಕೆಗೆ ಇಂಬುಗೊಟ್ಟಿದ್ದವೆನಿಸುತ್ತದೆ. ಆದರೆ ಕಾಲದ ಮುನ್ನಡೆಯಲ್ಲಿ ಅದುವರೆಗೆ ಬೇರೂರಿದ್ದ ವಿಶಿಷ್ಟಜ್ಞಾನದ ಪ್ರಮುಖ ಅಂಶಗಳೆಲ್ಲ ಸಾಮಾನ್ಯಜ್ಞಾನದ ಭಾಗವಾಗಿ ಪರಿಣಮಿಸಿದುದರಿಂದಾಗಿ ಶಿಕ್ಷಣ ನೀಡುವಾಗ ಹಿಂದೆ ಅನುಸರಿಸುತ್ತಿದ್ದ ಕಠಿಣಕ್ರಮಗಳನ್ನು ಕೈಬಿಟ್ಟು ಸೌಮ್ಯಮಾರ್ಗ ಅನುಸರಿಸಿರಬೇಕು. ಹೀಗಾದುದನ್ನೇ ತ್ರೇತಾಯುಗದಲ್ಲಿ ಬೈದು, ದ್ವಾಪರದಲ್ಲಿ ಝಂಕಿಸಿ, ಕಲಿಯುಗದಲ್ಲಿ ನಮಿಸಿ ಆದರದಿಂದ ವಿದ್ಯಾರ್ಥಿಯನ್ನು ಕಂಡು ಶಿಕ್ಷಣ ನೀಡಲಾಯಿತು ಎಂದು ಅರುಹುದರ ಮೂಲಕ ಕಲಿಸುವಿಕೆಯಲ್ಲಾದ ಸಂದರ್ಭೋಚಿತ ಬೆಳವಣಿಗೆಯನ್ನು ವಚನದಲ್ಲಿ ಪ್ರತಿಬಿಂಬಿಸಲಾಗಿದೆಯೆನ್ನಬಹುದು.
ಎಲ್ಲ ಉತ್ತಮ ಅಧ್ಯಾಪಕರಿಗೂ ಆಗಿರಬಹುದಾದ ಒಂದು ವಿಶಿಷ್ಟ ಅನುಭವವಿದೆ. ಇಂತಹವರು ಪಾಠ ಮಾಡುತ್ತಿದ್ದ ತರಗತಿಗಳಲ್ಲಿ ಕೆಲ ಬುದ್ಧಿವಂತರು ಅವರ ಪಾಠವನ್ನು ಎಷ್ಟು ಚೆನ್ನಾಗಿ ಜೀರ್ಣಿಸಿಕೊಳ್ಳುತ್ತಿದ್ದರು ಅಂದರೆ ಪುನಹ ನಾಳೆಗೇ ಬಂದು ಅಧ್ಯಾಪಕರು ಹಿಂದಿನ ದಿನ ಹೇಳಿದ್ದ ಎಲ್ಲವನ್ನೂ ಚಾಚೂ ತಪ್ಪದೆ ಮೆಚ್ಚುವ ರೀತಿಯಲ್ಲಿ ಒಪ್ಪಿಸಿ ಬಿಡುತ್ತಿದ್ದುದು ಆ ಅಧ್ಯಾಪಕರ ಹೃದಯವನ್ನು ಸೆಳೆದಿದೆ. ಆ ಸಂತೋಷದ ಕ್ಷಣಗಳಿಗೆ ಸಾಕ್ಷಿಯಾಗಿ ಒಳಗೊಳಗೇ ಆನಂದ ಪಡುತ್ತಿದ್ದ ಅಧ್ಯಾಪಕರ ಕಣ್ಣಿನಿಂದ ಒಂದೆರಡು ಹನಿಗಳೂ ತೊಟ್ಟಿಕ್ಕಿವೆ. ಆದರೆ ಯಾಕೋ ಏನೋ ಸರಿಯಾಗಿ ತರಗತಿಗೆ ಬರದಿದ್ದಾಗ ವಿದ್ಯಾರ್ಥಿಯನ್ನು ಕರೆದು “ಅಯ್ಯಾ ನೀನು ಯಾಕೆ ತರಗತಿಗೆ ಬರದೆ ತಪ್ಪಿಸಿಕೊಳ್ಳುತ್ತ ಎಲ್ಲೆಲ್ಲೋ ಸುತ್ತಾಡುತ್ತಿರುವೆ. ನೀನು ಬುದ್ಧಿವಂತನಿದ್ದೀಯ. ಮುಂದೆ ನಿನ್ನಿಂದ ಏನೇನೋ ಆಗಬೇಕಾಗಿದೆ. ನೀನು ಹೀಗೆ ಇರೋದರಿಂದಲೇ ನನಗೆ ತರಗತಿಯಲ್ಲಿ ಪಾಠಮಾಡುವುಕ್ಕೆ ಆಸಕ್ತಿ ಹೆಚ್ಚಾಗುತ್ತದೆ. ನೀನಿಲ್ಲದಿದ್ದರೆ ನನ್ನ ಮನಸ್ಸಿಗೆ ಬೇಸರವಾಗುತ್ತದೆ. ಪಾಠ ಹೇಳುವುದಕ್ಕೆ ಒಂದು ಥರ ಕಷ್ಟ ಆಗುತ್ತೆ. ನೀನು ತರಗತಿಯಲ್ಲಿದ್ದರೆ ಮಾತ್ರ ಪಾಠ ಇನ್ನೂ ಚೆನ್ನಾಗಿ ಮಾಡಬೇಕಲ್ಲ ಅನ್ನುವಂತಹ ಹುಮ್ಮಸ್ಸು ಬರುತ್ತೆ” ಅಂತೆಲ್ಲ ನಾವು ಹೇಳುವುದಿಲ್ಲವೇ. ಹೀಗೆ ಮಾಡುವಾಗ ನಾವು ವಂದಿಸಿ ಬುದ್ಧಿ ಹೇಳು ಅನ್ನೋದನ್ನ ಅನುಸರಿಸಿದ್ದೇವೆ ಅಂತಲೇ ಅರ್ಥ. ಈ ಮೊದಲೇ ಪ್ರಸ್ತಾಪಿಸಲಾದ ಲೀ ಮತ್ತು ಯಾಂಗ್ ಎಂಬ ಇಬ್ಬರೇ ವಿದ್ಯಾರ್ಥಿಗಳಿಗೆ ಪಾಠ ಹೇಳಲು 80 ಕಿಮೀ ದೂರ ಚಂದ್ರಶೇಖರ್ರವರು ತಮ್ಮ ಕಾರಿನಲ್ಲೇ ಹೋಗುತ್ತಿದ್ದ ಸಂಗತಿಯನ್ನು ಗಮನಿಸುವುದಾದರೆ ಅಲ್ಲಿ ಈ ವಂದಿಸಿ ಬುದ್ಧಿಹೇಳಬೇಕೆಂಬುದು ಕೆಲಸಮಾಡಿದೆ ಎಂದೇ ಗ್ರಹಿಸಬೇಕಾಗಿದೆ. ಸಮರ್ಥ ವಿದ್ಯಾರ್ಥಿಗಳನ್ನು ರೂಪಿಸುವಲ್ಲಿ ಪವಿತ್ರ ಶಿಕ್ಷಣದ ಶ್ರೇಷ್ಠತೆಯನ್ನು ಎತ್ತಿಹಿಡಿಯುವಂತಹ ಈ ಭಿನ್ನ ನಿರೂಪಣೆಯನ್ನು ಮೇಲಿನ ವಚನದಲ್ಲಿ ಗುರುತಿಸದಿದ್ದರೆ ಈ ವಚನದ ನೈಜಸಂದೇಶ ಎದುರಿಗಿದ್ದರೂ ಅಂಧಬಿಂದುವಿನಂತಾಗಿ (dark spot) ಬಿಡುತ್ತದೆ. ಅಲ್ಲಮನ ಇನ್ನೊಂದು ವಚನವೂ ಈ ಭಕ್ತಸ್ಥಲವನ್ನು ಅರಿಯುವ ಸಂದರ್ಭದಲ್ಲಿ ಉಚಿತವೆನಿಸುತ್ತದೆ.
ಬೆವಸಾಯವ ಮಾಡಿ ಮನೆಯ ಬೀಯಕ್ಕೆ ಬತ್ತವಿಲ್ಲದಿದ್ದಡೆ ಆ ಬೆವಸಾಯದ ಘೋರವೇತಕಯ್ಯಾ?
ಕ್ರಯ ವಿಕ್ರಯವ ಮಾಡಿ ಮನೆಯ ಸಂಚನಳೆಯದನ್ನಕ್ಕ ಆ ಕ್ರಯ ವಿಕ್ರಯದ ಘೋರವೇತಕಯ್ಯಾ?
ಒಡೆಯನಂ ಒಲೈಸಿ ತನುವಿಂಗೆ ಅಷ್ಟಭೋಗವ ಪಡೆಯದಿದ್ದಲ್ಲಿ ಆ ಓಲಗದ ಘೋರವೇತಕಯ್ಯಾ?
ಭಕ್ತನಾಗಿ ಭವಂ ನಾಸ್ತಿಯಾಗದಿದ್ದಡೆ ಆ ಉಪದೇಶವ ಕೊಟ್ಟ ಗುರು ಕೊಂಡ ಶಿಷ್ಯ ಇವರಿಬ್ಬರ ಮನೆಯಲ್ಲಿ ಮಾರಿ ಹೋಗಲಿ…
ವ್ಯವಸಾಯ ಮಾಡಿ ಮನೆಯಲ್ಲಿ ಊಟಕ್ಕೆ ನಾಲ್ಕು ಕಾಳು ಬತ್ತ ಕೂಡ ಇಲ್ಲ ಅಂದರೆ ಅಂತಹ ವ್ಯವಸಾಯ ಮಾಡಿ ಏನು ಪ್ರಯೋಜನ? ಬೆಳಗಿನಿಂದ ಸಂಜೆವರೆಗೂ ಅಂಗಡಿಯಲ್ಲಿ ವ್ಯಾಪಾರ ಅಂತ ಕುಳಿತಿದ್ದರೂ ನಾಲ್ಕು ಕಾಸು ಸಂಪಾದನೆಯಾಗದಿದ್ದರೆ, ಆ ವ್ಯಾಪಾರದಿಂದ ಏನು ಪ್ರಯೋಜನ, ಅಂತಹದನ್ನು ಬಿಟ್ಟು ಬಿಡುವುದೇ ವಾಸಿ. ರಾಜನ ಸೇವೆ ಮಾಡಿಯೂ ಮನೆಯಲ್ಲಿ ತಂಗಳನ್ನ ಕೂಡ ಇಲ್ಲದಂತಹ ಹೀನಾಯ ಪರಿಸ್ಥಿತಿಯಿದೆಯೆಂದರೆ ಆ ಓಲೈಕೆಯಿಂದ ಏನು ಪ್ರಯೋಜನ. ರಾಜನ ಸೇವೆ ಮಾಡಿದ ಮೇಲೆ ಅಷ್ಟಭೋಗಗಳಿರಬೇಕು. ಮನೆತುಂಬ ಧವಸ ಧಾನ್ಯಗಳಿರಬೇಕು. ಇಂತಹದ್ದೇನೂ ಇಲ್ಲ ಎಂದಮೇಲೆ ಆ ರೀತಿ ರಾಜನನ್ನು ಓಲೈಸುವುದಾದರೂ ಏತಕ್ಕೆ?
ಅಲ್ಲಮ ಎಂತಹ ಶಾಪಹಾಕುತ್ತಿದ್ದಾರೆ ಇಲ್ಲಿ. ಆ ಶಾಪ ಹಾಕೋದಕ್ಕೆ ಮುಂಚೆ ಅದೆಂತಹ ಪ್ರತಿಮೆಗಳನ್ನು ಮುಂದೆ ತಂದು ನಿಲ್ಲಿಸುತ್ತಾರೆ ಅನ್ನುವುದು ಗಮನಾರ್ಹ. ಒಂದು ಸಾಮಾನ್ಯ ವಿಷಯವನ್ನು ಅದೆಷ್ಟು ಅಚ್ಚುಕಟ್ಟಾಗಿ ನಮ್ಮ ಮನಸ್ಸಿಗೆ ಮುಟ್ಟಿಸುತ್ತಿದ್ದಾರೆ! ಈ ವಿಚಾರವನ್ನು ಯಾರನ್ನು ಬೇಕಾದರು ಎದುರು ಕೂರಿಸಿಕೊಂಡು ಹೇಳಬಹುದು. ಇದು ಒಂದು ಜಾತಿಗೆ ಪಂಥಕ್ಕೆ ಸೀಮಿತವಾಗಿರುವ ವಚನವಲ್ಲ. ಯಾವ ಜಾತಿಯವರೇ ಆಗಲಿ ಅವರನ್ನೆಲ್ಲ ಕೂರಿಸಿಕೊಂಡು ಹೇಳಬಹುದಾದ ಅದ್ಭುತ ವಚನ ಇದು. ಒಬ್ಬ ಗುರುವಿನ ಹತ್ತಿರ ಹೋಗಿ ಸೇರಿಕೊಂಡ ಮೇಲೆ ನಿನಗೆ ಇನ್ನು ಜನ್ಮಾಂತರಗಳಿಲ್ಲ ಎನ್ನುವ ರೀತಿಯಲ್ಲಿ ಶಿಷ್ಯನಿಗೆ ಪಾಠ ಹೇಳಿ ಕೊಡಬೇಕು. ಆತನನ್ನು ಪರಮ ಶಿಷ್ಯನನ್ನಾಗಿ ಮಾಡಬೇಕು. ಅಂತಹವನು ನಿಜವಾದ ಗುರು. ಆತನಿಂದ ಹೀಗೆ ಕಲಿತವನು ನಿಜವಾದ ಶಿಷ್ಯ. ಈ ಶಿಷ್ಯನ ಮುಂದಿನ ಭವಗಳನ್ನೆಲ್ಲ ನಾಶ ಮಾಡಿದರೆ ಸಾಕು. ಈ ಒಂದು ಜನ್ಮದಲ್ಲೇ ಇಡೀ ಸೃಷ್ಟಿಯ ಎಲ್ಲವೂ ನನಗೆ ಅರ್ಥವಾಗಿಬಿಟ್ಟಿದೆ. ಈ ಎಲ್ಲವೂ ಅರ್ಥವಾದ ಮೇಲೆ ಮತ್ತೆ ಹುಟ್ಟೇಕೆ? ನಾವು ಮತ್ತೆ ಮತ್ತೆ ಹುಟ್ಟುವುದು ಏಕೆಂದರೆ ನಮಗೆ ಇನ್ನೂ ಬೇಕಾಗಿದೆ. ಇನ್ನೂ ಪೂರ್ಣಗೊಳ್ಳದ ಆಸೆಗಳಿವೆ. ಅವುಗಳನ್ನು ನಮ್ಮದಾಗಿಸಿಕೊಳ್ಳುವ ಹಂಬಲವೇ ಮರುಹುಟ್ಟುಗಳಿಗೆ ಪ್ರೇರೇಪಿಸುತ್ತದೆ. ಮತ್ತೆ ಮತ್ತೆ ಐಹಿಕದ ಹಿಂಸೆಯೊಳಗೆ ಸಿಲುಕಿ ದುಃಖಕ್ಕೀಡು ಮಾಡುತ್ತದೆ. ಇದರಿಂದ ಬಿಡುಗಡೆಗಾಗಿ ಮನದೊಳಗಿನ ಆಸೆಗಳನ್ನು ಧ್ವಂಸ ಮಾಡಬೇಕು. ಬುದ್ಧ ಇದನ್ನೇ ತಾನೆ ಹೇಳಿದ್ದು. ಈ ವಚನದ ಅಂತರಾಳದಲ್ಲಿ ಹೀಗೆ ಬುದ್ಧ ಇಲ್ಲೇ ಸೃಷ್ಟಿಯಾಗಿಬಿಡುತ್ತಾನೆ. ಒಂದು ಧರ್ಮ ಇನ್ನೊಂದು ಧರ್ಮವನ್ನು ಜೀರ್ಣಿಸಿಕೊಳ್ಳುವ ಬಗೆ ಎಂದರೆ ಇದೇ. ಹಿಂದಿನ ಧರ್ಮಗಳನ್ನು ಪ್ರತ್ಯೇಕಿಸಿ ನೋಡದೆ ಹೀಗೆ ಅವುಗಳನ್ನು ಜೀರ್ಣಿಸಿಕೊಳ್ಳುತ್ತ ಸಾಗಿದರೆ ಅದೇ ಸತ್ಪಥ.
-ಎನ್. ಬೋರಲಿಂಗಯ್ಯ, ನಿವೃತ್ತ ಪ್ರಾಧ್ಯಾಪಕರು, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.
ನಿರೂಪಣೆ: ಡಾ.ಕೆ.ಎಸ್.ಮಲ್ಲೇಶ್
Comments 11
Vijaykumar Kammar
Jan 11, 2021Excellant article. Beautiful narration, Came to know the high spirit of teaching about Dr. Chandrashekhar. Very very heart touching & emotional thing. my thanks to Dr. Boralingayya for his excellnt work. I understand the amount of hard work of reading & reading to articulate a subject like this to connect mediaval & modern literature. Thank you very much.
Devaraj B.S
Jan 13, 2021ಲೇಖಕರ ನಿರೂಪಣೆ ಚೆನ್ನಾಗಿದೆ, ಹೃದಯ ಮುಟ್ಟುವಂತಿದೆ. ಆದರೆ ಭಕ್ತನಾಗುವುದು ಹೇಗೆ? ತಿಳಿಯಲಿಲ್ಲ…
Harsha m patil
Jan 14, 2021Nice post. I was checking continuously this blog and I am inspired!
Extremely useful information
Ravindra Desai
Jan 15, 2021ವಿಜ್ಞಾನಿ ಚಂದ್ರಶೇಖರ್ ಅವರಂತಹ ಗುರುಗಳು ಆಧ್ಯಾತ್ಮಿಕ ಲೋಕದಲ್ಲಿ ಸಿಗುತ್ತಾರೆಯೇ? ದುರ್ಲಭ, ದುರ್ಲಭ… ಗುರುಗಳೇ ಅರೆಬೆಂದ ಕಾಳಿನಂತಿದ್ದಾರೆ, ಇನ್ನು ಇವರು ತಯಾರು ಮಾಡುವ ಶಿಷ್ಯರು… !! ಕಲ್ಯಾಣದ ಒಬ್ಬೊಬ್ಬ ಶರಣರೂ ಗುರುವಾಗಿದ್ದರು, ತಾವೂ ಕಲಿತರು, ಪಕ್ಕದವರಿಗೂ ಕಲಿಸಿದರು.
B.S.Patil
Jan 15, 2021ಬೆವಸಾಯವ ಮಾಡಿ ಮನೆಯ ಬೀಯಕ್ಕೆ ಬತ್ತವಿಲ್ಲದಿದ್ದಡೆ ಆ ಬೆವಸಾಯದ ಘೋರವೇತಕಯ್ಯಾ?… ವಚನ ವ್ಯಾಖ್ಯಾನ ಬಹಳ ಚೆನ್ನಾಗಿ ಮೂಡಿಬಂದಿದೆ. ಶಿಷ್ಯನ ಭವವನ್ನು ನಾಶ ಮಾಡುವ ಗುರುವಿಗೆ ನಮೋನಮಃ
Tippeswamy
Jan 17, 2021ಗುಹೇಶ್ವರನನ್ನು ಪೂಜಿಸುವುದು ಎಂದರೆ ತನ್ನನ್ನೇ ತಾನು ಅರಿಯುವುದು. ಅಂದರೆ ತನ್ನ ಮನಸ್ಸು ಹೇಗೆ ವರ್ತಿಸುತ್ತದೆ, ತಾನು ಹೇಗೆ ಅಹಂಕಾರಕ್ಕೆ ತುತ್ತಾಗಿದ್ದೇನೆ, ತಾನು ಹೇಗೆ ಇಂದ್ರಿಯಗಳಿಗೆ ತುತ್ತಾಗಿದ್ದೇನೆ ಎನ್ನುವುದನ್ನು ಅರಿಯುವುದು ಮತ್ತು ಆ ಎಲ್ಲದರಿಂದ ಬಿಡುಗಡೆ ಪಡೆಯುವುದು… ಶರಣರು ಮನೋವೈದ್ಯರು. ಭಕ್ತನಾಗುವುದೆಂದರೆ ಪ್ರತಿಯೊಬ್ಬರೂ ತಮ್ಮ ಮನಸ್ಸಿಗೆ ತಾವೇ ವೈದ್ಯರಾಗುವುದು… ಅಲ್ಲವೇ ಸರ್?
ಗಾಯತ್ರಿ ತಿಪಟೂರು
Jan 18, 2021ಬೆವಸಾಯವ ಮಾಡಿ ಮನೆಯ ಬೀಯಕ್ಕೆ ಬತ್ತವಿಲ್ಲದಿದ್ದಡೆ ಆ ಬೆವಸಾಯದ ಘೋರವೇತಕಯ್ಯಾ?- ವಚನದ ವಿಶ್ಲೇಷಣೆ ಬಹಳ ಚನ್ನಾಗಿದೆ.
Lakshman Kollur
Jan 18, 2021ಶರಣರು ಲಿಂಗವನ್ನು ಯಾಕೆ ಪೂಜಿಸಿದರು? ಗುಹೇಶ್ವರನನ್ನು ಪೂಜಿಸುವ ಮಾರ್ಗ ಯಾವುದು ಎನ್ನುವುದನ್ನು ಲೇಖನದಲ್ಲಿ ತಿಳಿಸಿದ್ದರೆ ಚನ್ನಾಗಿತ್ತು.
ಹರಪ್ರಸಾದ್ ಗಿರಿ
Jan 20, 2021ನಿಜವಾದ ಗುರು ಸಿಗೋಕೆ ಪುಣ್ಯ ಮಾಡಿರಬೇಕು. ಭವದ ಕೊಳೆ ತೊಳೆಯುವ ಗುರುವನ್ನು ಎಲ್ಲಿ ಹುಡುಕುವುದು? ನಿಮಗೆ ಯಾರಾದರೂ ಗೊತ್ತಿದ್ದರೆ ದಯವಿಟ್ಟು ತಿಳಿಸುವಿರಾ ಶರಣರೇ?
Girish Mysuru
Jan 21, 2021ಶಿಷ್ಯಂದಿರಿಗೆ ನೊಬೆಲ್ ಸಿಕ್ಕ ಮೇಲೆ ಗುರುವಿಗೆ ಸಿಕ್ಕ ಅಪರೂಪದ ಘಟನೆ ಓದಿ ಆನಂದ, ಆಶ್ಚರ್ಯಗಳಾದವು. ಇಂತಹ ಗುರು-ಶಿಷ್ಯ ಪರಂಪರೆ ಮುಂದುವರೆಯಬೇಕು. ಶರಣರಲ್ಲಿಯೂ ಗುರು-ಶಿಷ್ಯ ಇಬ್ಬರಲ್ಲಿ ಇಂತಹುದೇ ಅನ್ಯೋನ್ಯ ಸಂಬಂಧವಿದ್ದುದನ್ನು ಅವರ ವಚನಗಳಲ್ಲಿ ಕಾಣಬಹುದು. ಲೇಖನ ಬಹಳ ಹಿಡಿಸಿತು.
ಆನಂದ ತಾವರಗಿ
Jan 25, 2021ಗುರು-ಶಿಷ್ಯರ ಆಪ್ತ ಚಿತ್ರಣ ಓದಿ ನಿಮ್ಮಲ್ಲಿ ನನ್ನ ನಾಲ್ಕು ಮಾತು ಹೇಳಬೇಕೆನಿಸಿತು. ಬದುಕಿನ ಎಲ್ಲಾ ಸಂಬಂಧಗಳಿಗಿಂತಲೂ ಗುರು-ಶಿಷ್ಯರ ನಡುವಿನ ಸಂಬಂಧ ತುಂಬಾ ವಿಶೇಷವಾದದ್ದೆನ್ನುವುದರಲ್ಲಿ ಯಾವ ಅನುಮಾನಗಳೂ ಇಲ್ಲ. ಗುರು ಶಿಷ್ಯನಲ್ಲಿ ತನ್ನನ್ನು ಕಾಣಲು, ತನಗಿಂತ ಉತ್ತಮ ಮೂರ್ತಿಯನ್ನು ಕೆತ್ತಲು ಸದಾ ಪ್ರಯತ್ನಿಸುತ್ತಿರುತ್ತಾನಂತೆ. ಪ್ರತಿಯೊಬ್ಬರಿಗೂ ಅಂತಹ ಗುರುವಿನ ಅಗತ್ಯ ಇದ್ದೇ ಇರುತ್ತದೆ. ಗುರುವಿಗಾಗಿ ಕಾಯುವ ಅನೇಕರನ್ನು ನಾನು ನೋಡಿದ್ದೇನೆ. ಅದರಲ್ಲೂ ಆಧ್ಯಾತ್ಮದ ಪ್ರಯಾಣದಲ್ಲಿ ಶಿಷ್ಯನನ್ನು ಕೈ ಹಿಡಿದು ಮುನ್ನಡೆಸುವ ಗುರು ಬೇಕೇ ಬೇಕಾಗುತ್ತಾನೆ.