ಮಾನವರ ವಿಘಟನೆಗೆ ಕಾರಣರಾರು?
ಈ ಅಖಂಡ ವಿಶ್ವದೊಳಗಿರುವ ನಮ್ಮ ಭೂಮಿ ಈ ಹೊತ್ತಿಗೆ ಸುಮಾರು ೮೧೦ ಕೋಟಿ ಮಾನವ ಜೀವಗಳಿಗೆ ಆಶ್ರಯಕೊಟ್ಟಿದೆ. ಎಲ್ಲ ಮಾನವರ, ಪ್ರಾಣಿಗಳ, ಸಸ್ಯ, ಚರ ಮತ್ತು ಅಚರಗಳಲ್ಲಿರುವ ಪ್ರಾಣ ಚೈತನ್ಯ ಒಂದೇ. ಅನಂತ ಕೋಟಿ ಜೀವಿಗಳಲ್ಲಿ ಮಾನವ ಜೀವಿ ಮಾತ್ರ ಬಹು ವಿಭಿನ್ನ. ಸೃಷ್ಟಿಯಲ್ಲಿ ಮಾನವ ಅದೆಷ್ಟು ಬುದ್ಧಿವಂತನೋ ಅಷ್ಟೇ ಮೂರ್ಖ ಕೂಡ! ಮಾನವ ಬುದ್ಧಿವಂತ ಮತ್ತು ಮೂರ್ಖನಾಗಲು ಕಾರಣ ಆತನ ವಿಪರೀತ ಕಲ್ಪನಾಶಕ್ತಿ!!
ಮನುಷ್ಯ ತನ್ನ ಕಲ್ಪನಾಶಕ್ತಿಯಿಂದ ಇಲ್ಲದುದನ್ನು ಇದೆ ಎಂದೂ, ಇರುವುದನ್ನು ಇಲ್ಲ ಎಂದೂ ಕಲ್ಪಿಸಿ, ಭ್ರಮಿಸಿ ತನ್ನಿಂದ ತಾನೇ ಕಲ್ಪನಾ ವ್ಯೂಹದೊಳಗೆ ಸಿಕ್ಕಿ ಬಳಲಿ ಬೆಂಡಾಗಿ ಹೋಗಿರುವುದನ್ನು ನಾವು ಕಾಣಬಹುದು. ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ಜಗತ್ತಿನಲ್ಲಿರುವ ಅನೇಕ ಧರ್ಮಗಳು, ದೇವರುಗಳು, ಅವುಗಳ ಹಿಂದಿರುವ ತತ್ವ ಸಿದ್ಧಾಂತಗಳು, ನಂಬಿಕೆಗಳು ಮತ್ತು ಆಚರಣೆಗಳು. ಜಗತ್ತಿನ ಅನೇಕ ಧರ್ಮಗಳು ಆಸ್ತಿಕತ್ವವನ್ನು ಪ್ರತಿಪಾದಿಸಿದರೆ ಮತ್ತೆ ಕೆಲವು ನಾಸ್ತಿಕತ್ವವನ್ನು ಪ್ರತಿಪಾದಿಸುತ್ತವೆ. ಆಸ್ತಿಕವೇ ಇರಲಿ ನಾಸ್ತಿಕವೇ ಇರಲಿ, ಎಲ್ಲವೂ ಆಯಾ ಧರ್ಮದ್ರಷ್ಟಾರನ ಕಾಲ, ಸಾಮಾಜಿಕ, ಧಾರ್ಮಿಕ ಸ್ಥಿತಿಗತಿ ಮತ್ತು ಜೀವನ ಮಾರ್ಗಗಳ ಆಧಾರದಲ್ಲಿ ರೂಪುಗೊಂಡಿರುತ್ತವೆ. ಕೆಲವೊಮ್ಮೆ ಕೆಲವು ಸಿದ್ಧಾಂತಿಗಳು ಮೇಲೆ ಹೇಳಿದ ಯಾವ ಹಿನ್ನೆಲೆಯ ಗೊಡವೆಯೂ ಇಲ್ಲದೆ ತಮ್ಮಷ್ಟಕ್ಕೆ ತಾವೇ ಧ್ಯಾನಾಸಕ್ತರಾಗಿ, ಧ್ಯಾನದಲ್ಲಿ ಕಂಡುಂಡ ವಿಚಾರಗಳನ್ನು ಸಿದ್ಧಾಂತವೆಂದು ಮಂಡಿಸಿರುವುದೂ ಉಂಟು. ಯಾವುದೇ ತತ್ವವಿರಲಿ, ಸಿದ್ಧಾಂತವಿರಲಿ ಅದು ಆ ಸಿದ್ಧಾಂತಿಯ ಮನೋಭೂಮಿಕೆಯ, ಭಾವದ ಅಂಗಳದಲ್ಲಿ ತಯಾರಾದ ಪಾಕವೆಂದು ಹೇಳಬಹುದು.
ಈ ಅಖಂಡ ಜಗತ್ತಿನ ಆದಿ, ಅಂತ್ಯ ಮತ್ತು ಸ್ವರೂಪಗಳನ್ನು ಸ್ಪಷ್ಟವಾಗಿ, ನಿಖರವಾಗಿ ಹೀಗೇ ಎಂದು ಹೇಳಲು ಯಾರಿಗೂ ಸಾಧ್ಯವಿಲ್ಲ. ಒಂದುವೇಳೆ ಯಾರಾದರೂ ತನ್ನ ವಿಚಾರವೇ ಅಂತಿಮ ಸತ್ಯ ಉಳಿದುದೆಲ್ಲವೂ ಮಿಥ್ಯ ಎಂದರೆ ಅದು ಆ ಚಿಂತಕನ ಅಪಕ್ವತೆಯನ್ನು ತೋರಿಸುತ್ತದೆ. ಸೃಷ್ಟಿಯ ನಿಗೂಢತೆ ಮತ್ತು ಅಗಾಧತೆಗಳನ್ನು ಭೇದಿಸಲಸಾಧ್ಯ! ಕೇವಲ ಊಹೆ ಮಾತ್ರ ಸಾಧ್ಯ! ಊಹೆ ಸತ್ಯವಿರಬಹುದು ಅಥವಾ ಇಲ್ಲದಿರಬಹುದು, ಊಹೆಯು ಊಹೆ ಮಾತ್ರ ಎಂಬುದು ನೆನಪಿರಲಿ. ಬುದ್ಧ, ಬಸವಣ್ಣ, ಅಂಬೇಡ್ಕರ್, ಕುವೆಂಪು, ಜಿ.ಎಸ್ ಶಿವರುದ್ರಪ್ಪ, ಡಿವಿಜಿಯವರಂಥಾ ಮೇರು ಪ್ರತಿಭೆಗಳು ಕಲ್ಪಿತ ದೇವರು, ಸ್ಥಾವರಗೊಂಡ ಧರ್ಮ, ಆಚಾರ, ವಿಚಾರಗಳಿಂದ ಹೊರಬಂದು ನಿಸರ್ಗದೊಂದಿಗೆ, ಸಕಲ ಜೀವಿಗಳೊಂದಿಗೆ ನಿಷ್ಕಲ್ಮಷ, ನಿಷ್ಕಪಟ ಬಾಂಧವ್ಯ ಹೊಂದುವುದೇ ದೇವರು, ಧರ್ಮ, ವ್ರತ, ಆಚಾರಗಳಾಗಿವೆ ಎಂದು ಸಾರಿರುವುದನ್ನು ಅರಿಯಬೇಕು.
ಇಂದು ನಿಜಾರ್ಥದಲ್ಲಿ ಸಮಾಜವನ್ನು ಒಟ್ಟುಗೂಡಿಸಬೇಕಾಗಿದ್ದ ದೇವರು, ಧರ್ಮ, ನಂಬಿಕೆ, ಆಚಾರ, ವಿಚಾರಗಳೇ ಸಮಾಜದ ಒಡಕಿಗೆ, ಜನರ ಮಧ್ಯೆ ದ್ವೇಷಕ್ಕೆ ಕಾರಣವಾಗಿರುವುದು ವಿಪರ್ಯಾಸ. ಸಾಮಾಜಿಕ ವಿಘಟನೆಗೆ ನೇರವಾಗಿ ದೇವರೇ ಕಾರಣ! ದೇವರಿಗೊಂದು ಹೆಸರಿಟ್ಟಿದ್ದರಿಂದ ಸಮಾಜದ ಒಡಕಿನ ಆರಂಭ! ಹೆಸರಿಲ್ಲದುದಕ್ಕೆ ಹೆಸರಿನ ಹಂಗೇಕೆ? ಧರ್ಮವೆಂದರೆ ಈಗ ಚಾಲ್ತಿಯಲ್ಲಿರುವ ಸ್ಥಾಪಿತ ಧರ್ಮಗಳಲ್ಲ ಎಂಬುದು ನಮಗೆ ಸ್ಪಷ್ಟವಾಗಿ ತಿಳಿದಿರಬೇಕು. ಧರ್ಮವೆಂದರೆ ಮಾನವನ ದೈನಂದಿನ ಜೀವನದಲ್ಲಿ ಸರ್ವಜೀವಿಗಳಲ್ಲಿಯೂ ದಯೆ, ಕರುಣೆ, ಅನುಕಂಪ, ಸತ್ಯವನ್ನೇ ನುಡಿಯುವುದು, ಅಪಹಾಸ್ಯ, ಪರನಿಂದೆ, ಸ್ವಪ್ರಶಂಸೆಗಳಿಲ್ಲದಿರುವುದು, ಹಸಿದವರಿಗೆ ಅನ್ನವನಿಕ್ಕುವುದು, ಒಳ್ಳೆಯ ಮಾತುಗಳನ್ನಾಡುವುದು ಮುಂತಾದ ಸದಾಚಾರ ಭರಿತ ಸದ್ಗುಣಗಳ ಆಗರವಾಗಿರುವುದೇ ನಿಜ ಅರ್ಥದಲ್ಲಿ ಧರ್ಮ. ಇಂಥಾ ಧರ್ಮಕ್ಕೆ ಯಾವುದೇ ಹೆಸರಿಲ್ಲ, ಹೆಸರಿಲ್ಲದ ಧರ್ಮಕ್ಕೆ ಒಂದು ಹೆಸರುಬೇಕೆ? ಹೆಸರಿಟ್ಟಾಕ್ಷಣವೇ ಅಲ್ಲೊಂದು ನಿಯಮ, ಕಟ್ಟುಕಟ್ಟಳೆ, ಸೀಮಿತ ವಲಯ ನಿರ್ಮಾಣವಾಗಿ ಇವು ಸಂಕುಚಿತ ಚಿಂತನೆಗೆ ಕಾರಣವಾಗುವುದು ಖಚಿತ. ಸಮಾಜದ ಒಡಕು ಪ್ರಾರಂಭ. ಅದಕ್ಕೇ ಶ್ರೀ ಕುವೆಂಪುರವರು ನೂರು ದೇವರನೆಲ್ಲಾ ನೂಕಾಚೆ ದೂರ ಎಂದು ಹೇಳುತ್ತಾರೆ.
ಸಂಸ್ಕೃತಿ ಎಂದಾಕ್ಷಣ ನಾವು ತಿಳಿಯುವುದು ಕೇವಲ ಉಡುಗೆ, ತೊಡುಗೆ, ಭಾಷೆ, ದೇವರ ಕುರಿತು ನಂಬಿಕೆ, ಆಚಾರ, ನೃತ್ಯ, ಸಂಗೀತ ಇತ್ಯಾದಿ, ಇವುಗಳನ್ನು ನಮ್ಮದು ಶ್ರೇಷ್ಠ ಸಂಸ್ಕೃತಿ ಎಂದು ಪ್ರಚಾರ ಮಾಡಲು, ಬಿಂಬಿಸಲು ಉಪಯೋಗಿಸುವುದನ್ನು ನಾವು ನಿತ್ಯ ಕಾಣುತ್ತೇವೆ. ವಾಸ್ತವದಲ್ಲಿ ಇವು ಸಂಸ್ಕೃತಿಯ ಕೇವಲ ೨೫% ಮಾತ್ರವೇ ಆಗಿದ್ದು ಉಳಿದ ೭೫% ಭಾಗವು ಮಾನವನೊಬ್ಬ ತನ್ನ ಸುತ್ತಲಿನ ಸಮಾಜ ಮತ್ತು ಪ್ರಕೃತಿಯೊಡನೆ ಬದುಕುವ ರೀತಿ ನೀತಿಯ ಮೇಲೆ ಅವಲಂಬಿತವಾಗಿದೆ. ಇದರ ಆಧಾರದ ಮೇಲೆ ಆ ವ್ಯಕ್ತಿಯ ಸಂಸ್ಕೃತಿ ಎಂಥಾದ್ದೆಂದು ತಿಳಿಯುತ್ತದೆ. ಇಡೀ ವಚನ ಸಾಹಿತ್ಯ ನಮಗೆ ಇಂಥಾ ಬದುಕುವ ಕಲೆಯನ್ನು ಕಲಿಸಿಕೊಡುತ್ತದೆ.
ಶರಣರೂ ಕಲ್ಪಿತ ದೇವರು, ಅದರ ಸುತ್ತ ಹೆಣೆಯಲಾದ ನಂಬಿಕೆ, ಕಟ್ಟುಪಾಡುಗಳು ಮತ್ತು ಆಚಾರಗಳ ಕುರಿತು ಮಹತ್ತರವಾಗಿ ಚಿಂತಿಸಿ, ವೈಚಾರಿಕವಲ್ಲದ, ವಿವೇಕರಹಿತ ನಂಬಿಕೆಗಳು ಮತ್ತು ಆಚಾರಗಳನ್ನು ಖಡಾಖಂಡಿತವಾಗಿ ನಿರಾಕಾರಿಸಿ, ಕೆಲವೊಮ್ಮೆ ಖಂಡಿಸಿ ಆಚರಣಾ ಯೋಗ್ಯ, ವೈಚಾರಿಕ ಹಾಗೂ ವೈಜ್ಞಾನಿಕ ನೆಲೆಗೆ ಒದಗಬಹುದಾದ ವಿಚಾರಗಳನ್ನು ಮಾತ್ರ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕಾಗಿ ಪ್ರತಿಪಾದಿಸಿದರು ಎಂಬುದು ಶರಣರ ವಚನಗಳನ್ನು ಸರಿಯಾಗಿ ಅಧ್ಯಯನ ಮಾಡಿದಾಗ ಗೋಚರಿಸುತ್ತದೆ. ಶರಣರ ವಚನಗಳಲ್ಲಿ ಪ್ರಕೃತಿಯಲ್ಲಿ ಇರುವ ಯಾವುದನ್ನೇ ಆಗಲೀ ಅದರ ಮೂಲಸ್ವರೂಪಕ್ಕೆ ಚ್ಯುತಿಬಾರದಂತೆ ಬಳಸಬೇಕು. ಮಾನವನ ಹಸ್ತಕ್ಷೇಪದಿಂದ ನಮ್ಮ ಸುತ್ತಲಿನ ಪರಿಸರಕ್ಕೆ ಯಾವುದೇ ರೀತಿಯಲ್ಲೂ ಹಾನಿಯಾಗಬಾರದು, ಯಾವುದೇ ಜೀವರಾಶಿಗೂ ಮಾನವನಿಂದ ತೊಂದರೆ ಉಂಟಾಗಬಾರದು. ಮನುಷ್ಯನ ಜೀವನವು ಪರಿಸರ ನಾಶದ ತಳಹದಿಯ ಮೇಲೆ ನಿರ್ಮಾಣವಾಗದೆ ಸುಂದರ ಪರಿಸರದೊಂದಿಗೆ ಅವಿನಾಭಾವ ಸಂಬಂಧದ ತಳಹದಿಯ ಮೇಲೆ ನಿರ್ಮಾಣವಾಗಬೇಕು ಎಂಬುದು ಶರಣರ ಆಶಯ. ಪಶು ಪಕ್ಷಿ ಗಿಡಮರ ಮತ್ತು ಮನುಷ್ಯ – ಮನುಷ್ಯರ ನಡುವೆ ಬೆಸೆಯಬೇಕಾದ ಅವಿನಾಭಾವ ಸಂಬಂಧಗಳನ್ನು ಅನುಭಾವದ ವಚನಗಳ ಮೂಲಕ ಶರಣರು ಮಾನವ ಜನಾಂಗಕ್ಕೆ ಕಟ್ಟಿಕೊಡುವ ಮೂಲಕ ಬದುಕನ್ನು ಅರ್ಥಪೂರ್ಣವಾಗಿಸಿದ್ದಾರೆ. ಅತ್ಯಂತ ಸರಳನುಡಿಗಳಲ್ಲಿರುವ ಈ ವಚನಗಳು ಕನ್ನಡ ಭಾಷೆಯ ಮೂಲಕ ವಿಶ್ವಸಾಹಿತ್ಯಕ್ಕೆ ಸಿಕ್ಕ ಅಮೂಲ್ಯ ಜ್ಞಾನಭಂಡಾರ. ಅಂಥಾ ಕೆಲವು ವಚನಗಳೊಂದಿಗೆ ಈ ಚಿಂತನೆಯನ್ನು ಮುಂದುವರೆಸೋಣ:
ಸಗಣಿಯ ಬೆನಕಂಗೆ ಸಂಪಗೆಯರಳಲ್ಲಿ ಪೂಜಿಸಿದಡೆ
ರಂಜನೆಯಹುದಲ್ಲದೆ ಅದರ ಗಂಜಳ ಬಿಡದಣ್ಣಾ,
ಮಣ್ಣ ಪುತ್ಥಳಿಯ ಮಾಣದೆ ಜಲದಲ್ಲಿ ತೊಳೆದಡೆ
ನಿಚ್ಚ ಕೆಸರಹುದಲ್ಲದೆ ಅದರಚ್ಚಿಗ ಬಿಡದಣ್ಣಾ.
ಲೋಕದ ಮಾನವಂಗೆ ಶಿವದೀಕ್ಷೆಯ ಕೊಟ್ಟಡೆ
ಕೆಟ್ಟವನೇಕೆ ಸದ್ಭಕ್ತನಹನು ಕೂಡಲಸಂಗಮದೇವಾ? – ವಿಶ್ವಗುರು ಬಸವಣ್ಣನವರು
ಸಗಣಿ ಮಣ್ಣು ಮುಂತಾದ ವಸ್ತುಗಳಿಂದ ಮಾಡಿದ ಮೂರ್ತಿಗಳನ್ನು ದೇವರೆಂದು ಭಾವಿಸಿ ಅವುಗಳನ್ನು ನಿತ್ಯ ನೀರಿನಿಂದ ತೊಳೆದು ಪೂಜಿಸಹೋದರೆ ಅದರಿಂದ ಕೆಸರು, ಸಗಣಿಯ ವಾಸನೆ ಬರುವುದಲ್ಲದೆ ಇನ್ನೇನಾಗಲು ಸಾಧ್ಯ? ಹಾಗೇ ಸತ್ಯದ ಅರಿವನ್ನು ಅರಿಯಬಯಸದ ಲೌಕಿಕ ಮಾನವನಿಗೆ ಶಿವ ದೀಕ್ಷೆಯನ್ನು ಕೊಟ್ಟರೆ ಅವನು ಉತ್ತಮ ವ್ಯಕ್ತಿಯಾಗಲು ಸಾಧ್ಯವೇ ಎಂದು ಗುರು ಬಸವಣ್ಣನವರು ಪ್ರಶ್ನಿಸುತ್ತಾರೆ.
ಪಾರ್ವತಿಯು ಪರಶಿವನ ಸತಿಯೆಂಬ ಶಿವದ್ರೋಹಿಗಳು ನೀವು ಕೇಳಿರೆ.
ಬೆನಕನು ಪರಶಿವನ ಮಗನೆಂಬ ಪಾತಕ ದುಃಖಿಗಳು ನೀವು ಕೇಳಿರೆ.
ಸ್ವಾಮಿ ಕಾರ್ತಿಕೇಯನು ನಮ್ಮ ಹರಲಿಂಗನ ಮಗನೆಂಬ ಲಿಂಗದ್ರೋಹಿಗಳು ನೀವು ಕೇಳಿರೆ.
ಭೈರವನು ಭಯಂಕರ ಹರನ ಮಗನೆಂಬ ಭವಹರ ಗುರುದ್ರೋಹಿಗಳು ನೀವು ಕೇಳಿರೆ.
ಅಜಾತನಚರಿತ್ರ ಪವಿತ್ರ ನಮ್ಮ ಗುಹೇಶ್ವರಲಿಂಗಕ್ಕೆ ಪ್ರಸಾದವ ಸಲಿಸಿದಾತ
ಸರ್ವಾಚಾರಿ ಸಂಗನಬಸವಣ್ಣನ ಮಗನಾಗಿ,
ಆದಿಯ ಲಿಂಗ ಅನಾದಿಯ ಶರಣ ಗುರುವಿನ ಗುರು ಪರಮಗುರುವರನ
ತೋರಿದನಯ್ಯಾ ಸಿದ್ಧರಾಮಯ್ಯ ಚೆನ್ನಬಸವಣ್ಣನು. – ಅಲ್ಲಮಪ್ರಭುದೇವರು
ಶರಣರ ಪ್ರಕಾರ ಪರಶಿವ ಎಂದರೆ ತಾನು ಎಲ್ಲಾ ಸೃಷ್ಟಿಗೂ ಕಾರಣವಾಗಿ ತನ್ನ ಸೃಷ್ಟಿಗೆ ಯಾವುದೇ ಕಾರಣವಿಲ್ಲದೆ, ಎಲ್ಲಕ್ಕೂ ತಾನು ಆಧಾರವಾಗಿ ತನಗೆ ಯಾವ ಆಧಾರವೂ ಇಲ್ಲದೆ, ಹುಟ್ಟುಸಾವುಗಳಿಲ್ಲದೆ ನಿತ್ಯ ನಿರಂತರವಾಗಿ ಇರುವಂಥದು. ಒಳಹೊರಗು ವ್ಯಾಪಿಸಿರುವ ಪ್ರಾಣಚೈತನ್ಯವನ್ನು ಲಿಂಗವೆಂದು ಕರೆದಿರುವುದನ್ನು ವಚನಸಾಹಿತ್ಯದಲ್ಲಿ ಕಾಣಬಹುದು. ಅದನ್ನೇ ವಚನಾಂಕಿತಗಳಲ್ಲಿ ತಮಗಿಷ್ಟಬಂದ ಹೆಸರನ್ನು ಬಳಸಿ ತಮ್ಮ ಭಾವನಿವೇದನೆಯನ್ನೂ, ಅನುಭಾವದ ಸ್ಫುರಣಪುಷ್ಪಗಳನ್ನು ಹೊರಚೆಲ್ಲಿರುವುದನ್ನು ಗಮನಿಸಬಹುದು. ಈ ವಚನಾಂಕಿತಗಳು ಸ್ಥಾವರಗುಡಿಯಲ್ಲಿರುವ ಲಿಂಗ, ದೇವತಾಮೂರ್ತಿಯ ಸಂಕೇತವಾಗಿರದೆ ಬಯಲಿನ ವಿರಾಟ್ ಸ್ವರೂಪವಾಗಿದೆ ಎಂದು ವಚನ ಓದುಗರು ಅರಿತಿರಬೇಕು. ಇಲ್ಲವಾದಲ್ಲಿ ವಚನಗಳಿಗೆ ತಪ್ಪು ವ್ಯಾಖ್ಯಾನ ಮಾಡುವ ಎಲ್ಲ ಸಾಧ್ಯತೆಗಳಿರುವುದನ್ನು ಈಗಾಗಲೇ ಈ ನಾಡು ಕಂಡಿದೆ.
ಶಿವಪುರಾಣಗಳಲ್ಲಿ ಬರುವ ಪಾರ್ವತಿ ದೇವಿ ಐತಿಹಾಸಿಕ ವ್ಯಕ್ತಿ, ಹಾಗೇ ಪುರಾಣಗಳಲ್ಲಿ ಬರುವ ಶಿವ (ಹರ)ನೂ ಕೂಡ. ಇವರ ಮಕ್ಕಳಾದ ಗಣೇಶ ಷಣ್ಮುಖರೂ ಕೂಡ ಐತಿಹಾಸಿಕವೇ. ಇವರೆಲ್ಲಾ ಒಂದು ಕಾಲಘಟ್ಟದಲ್ಲಿ ಇದ್ದಂತಹವರು. ಆದರೆ ಬಯಲು ಹಾಗಲ್ಲಾ. ಅದು ನಿರಂತರತೆ, ಅದಕ್ಕೆ ಗಂಡ ಹೆಂಡತಿ ಮಕ್ಕಳು ಪರಿವಾರ ಯಾವುದೂ ಇರಲು ಸಾಧ್ಯವಿಲ್ಲ. ಪಾರ್ವತಿದೇವಿಯು ಆ ಅನಂತತೆಗೆ ಸತಿಯಾಗಿ ಗಣೇಶ ಷಣ್ಮುಖರೆಂಬ ಮಕ್ಕಳನ್ನು ಹೆರಲು ಸಾಧ್ಯವಿಲ್ಲ ಎಂಬುದು ಅಲ್ಲಮಪ್ರಭುದೇವರ ಸ್ಪಷ್ಟ ನಿಲುವು. ಹುಟ್ಟು ಸಾವುಗಳಿಗೆ ಅತೀತವಾದ ಬಯಲಿನ ವಿರಾಟ್ ಸ್ವರೂಪವನ್ನು ಜಗತ್ತಿಗೆ ಅರುಹಿಸಿ ಕೊಟ್ಟವರು ಗುರುಬಸವಣ್ಣನವರು ಎಂಬುದಾಗಿ ಅಲ್ಲಮಪ್ರಭುದೇವರು ತಿಳಿಸಿದ್ದಾರೆ.
ಭವಿಯ ತಂದು ಪೂವಾಶ್ರಯವ ಕಳೆದು ಭಕ್ತನ ಮಾಡಿದ ಬಳಿಕ,
ಪೂರ್ವವವನ್ನೆತ್ತಿ ನುಡಿವ ಶಿವದ್ರೋಹಿಯ ಮಾತ ಕೇಳಲಾಗದು.
ಲಿಂಗವೆ ಗುರು, ಗುರುವೇ ಲಿಂಗವೆಂದು, ಹೆಸರಿಟ್ಟು ಕರೆವ ಗುರುದ್ರೋಹಿಯ ಮಾತ ಕೇಳಲಾಗದು.
ಹೆಸರಿಲ್ಲದ ಅಪ್ರಮಾಣ ಮಹಿಮನನು ಹೆಸರಿಟ್ಟು ಕರೆವ ಲಿಂಗದ್ರೋಹಿಯ ಮಾತ ಕೇಳಲಾಗದು.
ಪೂರ್ವವಿಲ್ಲದ ಶಿಷ್ಯ, ನೇಮವಿಲ್ಲದ ಗುರು, ಹೆಸರಿಲ್ಲದ ಲಿಂಗ
ಈ ತ್ರಿವಿಧವನರಿಯದೆ ಕೆಟ್ಟು ಹೋದರು, ಕೂಡಲಚೆನ್ನಸಂಗಯ್ಯಾ.- ಚನ್ನಬಸವಣ್ಣ
ಈ ವಚನದಲ್ಲಿ ಚನ್ನಬಸವಣ್ಣನವರು ಆ ಅನಂತತೆಯನ್ನು ‘ಹೆಸರಿಲ್ಲದ ಅಪ್ರಮಾಣ ಮಹಿಮ’ ಎಂದು ಕರೆದಿದ್ದಾರೆ. ಅದಕ್ಕೆ ದೇವರೆಂದು ಹೆಸರಿಸುವುದು, ಸೀಮಿತ ಶಕ್ತಿಯಾಗಿ, ಮಾನವ, ಪಶು ಪಕ್ಷಿ ಗಿಡಮರಗಳ ರೂಪದಲ್ಲಿ ಭಾವಿಸುವುದು ತಪ್ಪು, ಅದು ಲಿಂಗದ್ರೋಹ ಎನ್ನುತ್ತಾರೆ. ಗುರು, ಲಿಂಗ, ಜಂಗಮ- ತ್ರಿವಿಧದ ತಾತ್ವಿಕ ತಳಹದಿ ತಿಳಿಯದೆ ಅವುಗಳ ವಿಶಾಲ ಅರ್ಥವ್ಯಾಪ್ತಿಯನ್ನರಿಯದೆ ಮೂಗಿನ ನೇರಕ್ಕೆ ಏನನ್ನೋ ಕಲ್ಪಿಸಿಕೊಂಡು ಸಂಕುಚಿತಗೊಳಿಸಬಾರದು ಎಂಬುದು ವಚನದ ಆಶಯ.
ಹೆಸರಿಡಬಾರದ ಘನತರ ಲಿಂಗವ ಹೆಸರಿಟ್ಟು,
ವಾಙ್ಮನಕ್ಕಗೋಚರವಪ್ಪ ಲಿಂಗವ ವಾಕ್ಯಕ್ಕೆ ತಂದು,
`ಅತ್ಯತಿಷ್ಠದ್ದಶಾಂಗುಲಂ’ ಎಂಬ ಲಿಂಗವ ಚಿತ್ತಕ್ಕೆ ತಂದು,
ಸುತ್ತಿರ್ದ ಮಾಯಾಪ್ರಪಂಚವ ಬಿಡಿಸಿದ ಬಸವಣ್ಣ; ಚಿತ್ತಶುದ್ಧನ ಮಾಡಿದ ಬಸವಣ್ಣ.
ಮಲತ್ರಯಂಗಳ ಹರಿದು, ಶುದ್ಧ ತಾತ್ಪರ್ಯವರುಹಿ ಮುಕ್ತನ ಮಾಡಿದ ಗುರು ಬಸವಣ್ಣ.
ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆನ್ನ ಕಾರಣ ಧರೆಗೆ ಬಂದ. – ಸಿದ್ಧರಾಮೇಶ್ವರ
ಹೆಸರಿಡಬಾರದ ಘನತರ ಲಿಂಗಕ್ಕೆ ಹೆಸರಿಡಲು ಮನುಷ್ಯರಿಗೆ ಹೇಗೆ ತಾನೇ ಸಾಧ್ಯ? ಹೆಸರಿಡಲು ಬಾರದಂಥಾ ಅಗಮ್ಯ ಅಗೋಚರವನ್ನು ಗುರುಬಸವಣ್ಣನವರು ಹೆಸರಿಟ್ಟು ಕರೆದರೆಂದು ಸಿದ್ದರಾಮೇಶ್ವರ ಶರಣರು ತಿಳಿಸುತ್ತಾರೆ. ಬಸವಣ್ಣನವರು ಹೆಸರಿಡಬಾರದ ಲಿಂಗಕ್ಕೆ ಹೆಸರಿಟ್ಟ ಪರಿ ಬಹಳ ವಿಶೇಷ. ಅನಂತತೆಯ ವೈಶಾಲ್ಯಕ್ಕೆ ಎಲ್ಲಿಯೂ ಚ್ಯುತಿಬಾರದಂತೆ, ಲಿಂಗಕ್ಕೆ ಯಾವುದೇ ಪಶು ಪಕ್ಷಿ ಮಾನವರ ರೂಪಕ್ಕೆ ತಾರದೆ ಇಷ್ಟಲಿಂಗ ರೂಪಕ್ಕೆ ತರುತ್ತಾರೆ. ಅದು ಗೋಳಾಕಾರ, ಇಡೀ ಸೃಷ್ಟಿ ಗೋಳಾಕಾರವಾಗಿ ಕಾಣುವುದರಿಂದ ಅದೇ ರೂಪದಲ್ಲಿ ಮೂರ್ತೀಕರಿಸುತ್ತಾರೆ. ಈ ಇಷ್ಟಲಿಂಗವನ್ನು ಅನಂತದ ಮೂಲಸ್ವರೂಪಕ್ಕೆ ಯಾವುದೇ ರೀತಿಯಲ್ಲೂ ಧಕ್ಕೆ ಬಾರದಂತೆ ರೂಪಿಸಲಾಗಿದೆ. ಇಷ್ಟಲಿಂಗ ಧಾರಣೆ ಮಾಡಿ, ಅದರ ಹಿಂದಿನ ಆಶಯವನ್ನು ಸತತವಾಗಿ ಅನುಸಂಧಾನ ಮಾಡುವ ಮೂಲಕ ಅಜ್ಞಾನದಲ್ಲಿ, ಮರೆವಿನಲ್ಲಿ ಮುಳುಗಿದ ಮಾನವನು ಅರಿವಿನ ಶರಣನಾಗಲು ಸಾಧ್ಯವಿದೆ. ಅವರು ತಮ್ಮ ಇಷ್ಟಲಿಂಗಕ್ಕೆ ಇಟ್ಟ ಹೆಸರು ‘ಕೂಡಲಸಂಗಮದೇವ’. ಈ ಕೂಡಲಸಂಗಮದೇವ, ಕೂಡಲಸಂಗಮದಲ್ಲಿರುವ ಶಿವಲಿಂಗವಲ್ಲ. ಅರಿವು ಆಚಾರ ಅನುಭಾವಗಳ ತ್ರಿಕೂಟ. ಎಲ್ಲಾ ಶರಣರ ಅಂಕಿತಗಳೂ ಯಾವುದೇ ಸ್ಥಾವರ ಗುಡಿಯ ದೇವ/ದೇವತೆಯನ್ನು ಪ್ರತಿನಿಧಿಸುವುದಿಲ್ಲ ಬದಲಿಗೆ ಅವರ ಪ್ರಜ್ಞೆಯ ಪ್ರತೀಕವಾಗಿವೆ ಎಂಬ ಅರಿವು ನಮಗುಂಟಾದಲ್ಲಿ ಮಾತ್ರವೇ ವಚನಗಳನ್ನು ನಾವು ಸರಿಯಾಗಿ ಗ್ರಹಿಸಲು ಸಾಧ್ಯ!
ಎಲ್ಲ ಪುರಾಣಕ್ಕೆ ಹೆಸರುಂಟು, ನಮ್ಮ ಪುರಾಣಕ್ಕೆ ಹೆಸರಿಲ್ಲ ನೋಡಯ್ಯಾ.
ಲಿಂಗದ ಮಹತ್ವವ ಹೇಳಿದಲ್ಲಿ ಲಿಂಗಪುರಾಣವೆನಿಸಿತ್ತು.
ಷಣ್ಮುಖನ ಮಾಹಾತ್ಮ್ಯವ ಹೇಳಿದಲ್ಲಿ ಸ್ಕಂದಪುರಾಣವೆನಿಸಿತ್ತು.
ವೀರಭದ್ರನ ಮಾಹಾತ್ಮ್ಯವ ಹೇಳಿದಲ್ಲಿ ದಕ್ಷಖಂಡವೆನಿಸಿತ್ತು.
ಶಿವನ ಮಹಿಮೆ, ಕಾಶೀಮಹಿಮೆಯ ಹೇಳಿದಲ್ಲಿ ಶಿವಪುರಾಣ ಕಾಶೀಖಂಡವೆನಿಸಿತ್ತು.
ಪಾರ್ವತಿಯ ಮಾಹಾತ್ಮ್ಯವ ಹೇಳಿದಲ್ಲಿ ಕಾಳೀಪುರಾಣವೆನಿಸಿತ್ತು.
ನಮ್ಮ ಪುರಾಣ ಹೆಸರಿಡಬೇಕೆಂದಡೆ ನಿಶ್ಶಬ್ದ ನಿರವಯಲ ಪುರಾಣ ತಾನೆಯಾಯಿತ್ತು ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ. – ಸಿದ್ಧರಾಮೇಶ್ವರ
ಭ್ರಾಂತಿರಹಿತ, ಭಕ್ತಿಸಹಿತ, ಜ್ಞಾನ-ವಿಜ್ಞಾನಗಳ ಆಧಾರದ ಮೇಲೆ ಗುರುಬಸವಣ್ಣನವರು ಎಲ್ಲರಿಗೂ ಕೈಗೆಟುಕುವಂತಹ ಕೊಟ್ಟ ಲಿಂಗಾಯತ ಧರ್ಮವನ್ನು, ಧರ್ಮಗುರುವಿನ ಹೆಸರನ್ನು ಸೇರಿಸಿಕೊಂಡು ಬಸವಧರ್ಮವೆಂದೂ ಕರೆಯಬಹುದು. ಇಲ್ಲಿ ಯಾವುದೇ ಕಟ್ಟುಕಥೆಗಳಿಲ್ಲ. ಕಾಯಕ, ಸಂಪತ್ತು, ಹುಟ್ಟಿನ ಆಧಾರದ ಮೇಲೆ ಮಾನವರ ವಿಭಜನೆ ಇಲ್ಲ. ಎಲ್ಲಾ ಮಾನವರ ಮೂಲ ಒಂದೇ ಶಿವ ತತ್ವ ಆಗಿರುವ ಕಾರಣ ವಿಚಾರಭ್ರಷ್ಟತೆ ಇಲ್ಲ, ಎಲ್ಲ ಮಾನವರೂ, ಸಕಲ ಸೃಷ್ಟಿಯೂ ಶಿವಸ್ವರೂಪಿಗಳೇ ಎಂಬ ಭಾವ. ಇಲ್ಲಿ ಶಬ್ದಾಡಂಬರದ ಗೊಂದಲಗಳಿಲ್ಲ. ಅತ್ಯಂತ ಸಹಜ ಮತ್ತು ನೇರ ವಿಚಾರ ಮತ್ತು ಆಚಾರಗಳು. ಅದನ್ನೇ ಸಿದ್ದರಾಮೇಶ್ವರರು ‘ನಿಶ್ಯಬ್ದ ನಿರವಯಲ ಪುರಾಣ’ ಎಂದು ಕರೆದಿದ್ದಾರೆ.
ತಂದೆಯಿಲ್ಲದ, ತಾಯಿಯಿಲ್ಲದ,
ಹೆಸರಿಲ್ಲದ, ಕುಲವಿಲ್ಲದ,
ಹುಟ್ಟಿಲ್ಲದ, ಹೊಂದಿಲ್ಲದ,
ಅಯೋನಿಸಂಭವ ನೀನಾದಕಾರಣ
ನಿನ್ನ ನಾನು ನಿಃಕಲಲಿಂಗವೆಂದೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ. – ತೋಂಟದ ಸಿದ್ಧಲಿಂಗ ಶಿವಯೋಗಿಗಳು
ತೋಂಟದ ಸಿದ್ಧಲಿಂಗ ಶಿವಯೋಗಿಗಳು ಅತ್ಯಂತ ಸಹಜ ಸುಂದರ ಮತ್ತು ಸರಳವಾಗಿ ನಿಃಕಲಲಿಂಗವನ್ನು ತಿಳಿಸಿದ್ದಾರೆ. ಅದಕ್ಕೆ ತಂದೆ ತಾಯಿಗಳಿಲ್ಲ, ತಂದೆತಾಯಿಗಳಿಂದ ಹುಟ್ಟದ ಕಾರಣ ಅದಕ್ಕೆ ನಾಮ, ಸೀಮೆ, ಕುಲ, ಗೋತ್ರ ಯಾವುದೂ ಇಲ್ಲ. ಈ ಜಗತ್ತಿನ ಯಾವ ಮಾಲಿನ್ಯವೂ ಅದಕ್ಕೆ ಅಂಟದ ಕಾರಣ ಅದು ನಿಷ್ಕಲ.
ಇಂತಪ್ಪ ನಿರ್ಣಯವನರಿಯದೆ ಪೃಥ್ವಿಯ ಮೇಲಣ ಕಣಿಯ ತಂದು ಕಲ್ಲಕುಟಿಗನಿಂದ ಕಟಿಸಿ,
ಲಿಂಗವೆಂದು ಹೆಸರಿಟ್ಟು, ಹಳ್ಳ ನದಿ ಕೊಳ್ಳ ಕೆರೆ ಬಾವಿ ಮೊದಲಾದ ಉದಕವ ತಂದು,
ಮಜ್ಜನಕ್ಕೆರೆದು ಪಂಚಾಭಿಷೇಕದಿಂದ ಅಭಿಷೇಕವ ಮಾಡಿಸಿ,
ಬಿಲ್ವಪತ್ರಿ ಮೊದಲಾದ ನಾನಾ ಜೀನಸದ ಕಾಡಪತ್ರಿಯ ತಂದು ಆ ಲಿಂಗಕ್ಕೇರಿಸಲು,
ಅಂತಪ್ಪ ಜಡಪಾಷಾಣ ಲಿಂಗವ ಭಕ್ತನ ಅಂಗದ ಮೇಲೆ,
ಸ್ವಾಯತವ ಮಾಡುವಾತ ಗುರುವಲ್ಲ, ಆತ ಭಕ್ತನಲ್ಲ, ಅದು ಲಿಂಗವಲ್ಲ. – ಶರಣ ಕಾಡಸಿದ್ಧೇಶ್ವರ
ನಿರಂತರತೆಯ ನಿರ್ಣಯವನರಿಯದೆ, ಭ್ರಾಂತಿ ಮುಖದಲ್ಲಿ ಕಂಡು ಅದಕ್ಕೆ ಲಿಂಗವೆಂದು ಹೆಸರಿಟ್ಟು, ನಾನಾ ವಿಧದಲ್ಲಿ ಪೂಜಿಸಿ ಭಕ್ತನ ದೇಹದ ಮೇಲೆ ಧಾರಣೆ ಮಾಡಿದರೆ ಅದು ಲಿಂಗವಲ್ಲ, ಕೊಟ್ಟಾತ ಗುರುವಲ್ಲ, ಪಡೆದಾತ ಭಕ್ತನಲ್ಲ ಎಂದು ಕಾಡಸಿದ್ದೇಶ್ವರ ಶರಣರು ತಿಳಿಸುತ್ತಾರೆ.
ಇಂದ್ರ ನೋಡುವಡೆ ಭಗದೇಹಿ; ಚಂದ್ರ ನೋಡುವಡೆ ಗುರುಪತ್ನೀಗಮನಿ;
ಉಪೇಂದ್ರ ನೋಡುವಡೆ ಬಾರದ ಭವದಲ್ಲಿ ಬಂದ ಅವತಾರಿ;
ಬ್ರಹ್ಮ ನೋಡುವಡೆ ಸುಪುತ್ರೀಪತಿ, ಮುನಿಗಣ ನೋಡುವಡೆ ಕುಲಹೀನರು;
ಗಣಪತಿ ನೋಡುವಡೆ ಗಜಾನನ; ವೀರಭದ್ರ ನೋಡುವಡೆ ಮಹತ್ಪ್ರಳಯಾಗ್ನಿ ಸಮಕ್ರೋದ್ಥಿ;
ಷಣ್ಮುಖ ನೋಡುವಡೆ ತಾರಕಧ್ವಂಸಿ. ಇವರೆಲ್ಲರು ಎಮ್ಮ ಪೂಜೆಗೆ ಬಾರರು.
ನೀ ನೋಡುವಡೆ ಶ್ಮಶಾನವಾಸಿ, ರುಂಡಮಾಲಾದ್ಯಲಂಕಾರ;
ನಿನ್ನ ವಾಹನ ಚಿದಂಗ ಆದಿವೃಷಭ. ನಿರೂಪಿಸಾ, ಕಪಿಲಸಿದ್ಧಮಲ್ಲಿಕಾರ್ಜುನ. – ಸಿದ್ಧರಾಮೇಶ್ವರ
ಪುರಾಣಗಳ ಅನೇಕ ಕಥೆಗಳನ್ನು ಉಲ್ಲೇಖಿಸುವ ಮುಖಾಂತರ ಗುರು ಸಿದ್ದರಾಮೇಶ್ವರರು ಪುರಾಣದ ದೇವರುಗಳ ಠೊಳ್ಳುತನವನ್ನು ಅತ್ಯಂತ ಸ್ಪಷ್ಟವಾಗಿ ತಿಳಿಸುತ್ತಿದ್ದಾರೆ. ಇಂದ್ರ ದೇವರೆನ್ನುವುದಾದರೆ ಆತನಿಗೆ ಮೈಯೆಲ್ಲಾ ಯೋನಿಮಂಡಲ, ಚಂದ್ರ ದೇವರೆನ್ನುವುದಾದರೆ ತನ್ನ ಗುರುವಿನ ಹೆಂಡತಿಯನ್ನೇ ಅಪಹರಿಸಿದವನು, ಬ್ರಹ್ಮ ತನ್ನ ಪುತ್ರಿಯನ್ನೇ ವರಿಸಿದನು, ಗಣಪತಿ ಆನೆಯ ಮುಖವನ್ನು ಹೊತ್ತವನು, ವೀರಭದ್ರ ಭಯಂಕರ ಕೋಪಿ, ಹೀಗಾಗಿ ಇವರಾರೂ ಅನಂತದ ಸ್ವರೂಪರಲ್ಲ. ಆದ್ದರಿಂದ ಪೂಜೆಗೆ ಸಲ್ಲುವವರಲ್ಲಾ. ಇವರೆಲ್ಲರೂ ಒಂದೋ ಕಾಲ್ಪನಿಕ ಪಾತ್ರಗಳು ಅಥವಾ ಎಲ್ಲ ಮಾನವರಂತೆ ಇವರೂ ಕೂಡ ತಂದೆ-ತಾಯಿಯರಿಂದ ಜನಿಸಿ ಮರಣಿಸಿದವರು. ಜನನ ಮರಣಕ್ಕೊಳಗಾದ ಕಾರಣ ಇವರಾರೂ ನಿರಂತರಲ್ಲಾ. ಅನಂತ, ಅದ್ವಯವಾದ ಬಯಲು ಮನುಷ್ಯ-ಮನುಷ್ಯರ ನಡುವೆ ಬೇಲಿಯನ್ನು ನಿರ್ಮಿಸಿ, ಸಮಾಜವನ್ನು ವಿಘಟಿಸುವುದಿಲ್ಲ, ಮನುಷ್ಯರಿಂದ ಏನನ್ನೂ ಬಯಸುವುದಿಲ್ಲ, ಹಾಗೂ ಮನುಷ್ಯರಿಗೆ ಯಾವ ರೀತಿಯಲ್ಲೂ ಕೆಡುಕನ್ನುಂಟು ಮಾಡುವುದಿಲ್ಲ.
ಇಂದು ಮಾನವ ಸಮಾಜ ಅತಿಯಾಗಿ ಘಾಸಿಗೊಂಡಿದೆ. ಸಮಾಜ ದೇವರು ಧರ್ಮಗಳ ಹೆಸರಲ್ಲಿ ಒಡೆದು ಚೂರಾಗಿದೆ. ಒಂದಲ್ಲಾ ಒಂದು ರೀತಿಯಲ್ಲಿ ದೇವರು, ಸಾಂಸ್ಥೀಕರಣಗೊಂಡ ಧರ್ಮ ಮತ್ತು ಅದರ ಆಚರಣೆಗಳು ಮುಂತಾದವುಗಳೇ ಸಮಾಜದ ಜನರಲ್ಲಿನ ಬಾಂಧವ್ಯಕ್ಕೆ ಕೊಡಲಿಪೆಟ್ಟು ಕೊಟ್ಟಿರುವುದು ಗಮನಾರ್ಹ. ಬೇಲಿಯೇ ಎದ್ದು ಹೊಲ ಮೇದಂತೆ ಇಡೀ ಮಾನವ ಸಮಾಜವನ್ನು ಒಟ್ಟಾಗಿ ಬಾಳಲು ಅನುವು ಮಾಡಿಕೊಡಬೇಕಾಗಿದ್ದ ಈ ವಿಚಾರಗಳೇ ಮಾನವರ ನಡುವೆ ಕಂದಕ ಸೃಷ್ಟಿಸಿರುವುದು ಅತ್ಯಂತ ನೋವಿನ ಸಂಗತಿ. ಸಮಯ ಕಳೆದಂತೆ ಪ್ರಜ್ಞಾವಂತ ಮಾನವ ಸಮಾಜವು ಬಸವಾದಿ ಶರಣರ ಪ್ರಗತಿಪರ ಚಿಂತನೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಇಂದಿನ ಅವೈಚಾರಿಕ ಮತ್ತು ಅವಾಸ್ತವಿಕ ಸಾಮಾಜಿಕ ಮತ್ತು ಧಾರ್ಮಿಕ ಅವ್ಯವಸ್ಥೆಗೆ ಇತಿಶ್ರೀ ಹಾಡಿ, ಭಾವೈಕ್ಯಗೊಂಡ, ಸುಮಧುರ ಬಾಂಧವ್ಯಗಳುಳ್ಳ ಸುಂದರ ಸಮಾಜವನ್ನು ನಿರ್ಮಿಸುವರೆಂಬ ಭರವಸೆಯೊಂದಿಗೆ ಈ ಲೇಖನಕ್ಕೆ ವಿರಾಮವಿಡುತ್ತೇನೆ.




