Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಕಣ್ಣ ಮುಂದಿನ ಬೆಳಕು
Share:
Articles September 6, 2026 ಪ್ರೊ. ಓ. ಎಲ್. ನಾಗಭೂಷಣ ಸ್ವಾಮಿ

ಕಣ್ಣ ಮುಂದಿನ ಬೆಳಕು

ಜಾಣತನ ಮತ್ತು ಅರಿವು

ಓದಿ ಬೋಧಿಸಿ ಇದಿರಿಗೆ ಹೇಳುವನ್ನಬರ ಚದುರತೆಯಲ್ಲವೆ
ತನ್ನ ತಾನರಿದಲ್ಲಿ ಆ ಅರಿಕೆ
ಇದಿರಿಗೆ ತೋರದಲ್ಲಿ ಅದೆ ದೇವತ್ವವೆಂದನಂಬಿಗ ಚವುಡಯ್ಯ.

[ಇದಿರಿಗೆ-ಎದುರಿನವರಿಗೆ, ಇತರರಿಗೆ; ಹೇಳುವನ್ನಬರ-ಹೇಳುವವರೆಗೆ; ಚದುರತೆ-ಚಾತುರ್ಯ, ಜಾಣತನ; ಅಱಿಕೆ-ಅರಿವು, ತಿಳಿವಳಿಕೆ, ಹಂಬಲ]

ಇದು ಅಂಬಿಗ ಚೌಡಯ್ಯನವರ ವಚನ.
ಓದುವುದು, ಪಾಠ ಹೇಳುವುದು ಇಂಥ ಉದ್ದೇಶಗಳಿಗಾಗಿ ತಿಳಿದಿರುವುದನ್ನು ಹೇಳುವುದು ಲೋಕಕ್ಕೆ ತೋರಿಸಿಕೊಳ್ಳುವುದು ಜಾಣತನ, ಚಾತುರ್ಯ. ಆದರೆ ತನ್ನನ್ನು ತಾನು ಅರಿತರೆ ಆ ಅರಿವನ್ನು ಹೊರಗೆ ತೋರ್ಪಡಿಸದೆ ಇರುವುದಕ್ಕೆ ಸಾಧ್ಯವಾದರೆ ಅದೇ ದೇವತ್ವ.

ಈ ವಚನವು ಜಾಣತನ ಮತ್ತು ಅರಿವಿನ ನಡುವೆ ಇರುವ ಸೂಕ್ಷ್ಮ ವ್ಯತ್ಯಾಸದತ್ತ ಗಮನ ಸೆಳೆಯುತ್ತದೆ. ಚಾತುರ್ಯ ಲೋಕದಲ್ಲಿ ಬದುಕಲು ಬೇಕಾದದ್ದು ಜಾಣತನ. ಅದು ವ್ಯಕ್ತವಾಗಬೇಕಾದದ್ದು, ಬಳಕೆಯಾಗಬೇಕಾದದ್ದು ಅನಿವಾರ್ಯ. ಆದರೆ ತನ್ನನ್ನು ತಾನು ಅರಿಯುವುದು, ಅಥವಾ ತನ್ನನ್ನು ದೊಡ್ಡ ಆದರ್ಶಕ್ಕೋ ಶಕ್ತಿಗೋ ಅರ್ಪಿಸಿಕೊಳ್ಳುವುದು ಇತರರಿಗೆ ತೋರ್ಪಡಿಸಿಕೊಳ್ಳುವುದು ಅಗತ್ಯವಿಲ್ಲದ ಸಂಗತಿಗಳು. ಹಾಗೆ ತನ್ನರಿವನ್ನು ತೋರಿಸದೆ ಇರುವುದೇ ದೈವತ್ವ ಎನ್ನುತ್ತಾರೆ ಚೌಡಯ್ಯನವರು.

ಈ ವಚನವು ವ್ಯಕ್ತಿ ತನ್ನೊಳಗೇ ಆಗುವ ಅರಿವಿನ ವಿಸ್ತಾರವನ್ನು ತನ್ನೊಳಗೇ ಅನುಭವಿಸಬೇಕು, ತೋರ್ಪಡಿಸಬಾರದು ಅನ್ನುವ ಮಾತು ವ್ಯಕ್ತಿನಿಷ್ಠವಾದ ಐಡಿಯಲಿಸಂನಿಂದ ಮೂಡಿದ್ದು ಎಂದು ತೋರುತ್ತದೆ. ಅಥವಾ ತಾವು ಪಡೆದ ʻಅರಿʼವನ್ನು ತಮ್ಮ ಬದುಕಿನ ಮೂಲಕ ನಿದರ್ಶನವಾಗಿಸಬೇಕೇ ಹೊರತು ತೋರಿಸಿಕೊಂಡು ಹಿಗ್ಗುವ, ಮನ್ನಣೆ ಪಡೆಯುವ ಚಾತುರ್ಯವಾಗಬಾರದು ಎಂಬ ನಿಲುವೂ ಇದ್ದೀತು. ಪಡೆದಿರುವ ಅರಿವು ಲೋಕಕ್ಕೆ ʻತಿಳಿಯಬೇಕುʼ ತಾನೇ ʻತೋರಿಸಿಕೊಳ್ಳಬಾರದುʼ ಎಂಬ ನಿಲುವಿನಿಂದಲೇ ಸಮಾಜ ವಿಮರ್ಶೆ ಸಾಧ್ಯವಾಗುತ್ತದೆಯೇ ಎಂದು ಪರಿಶೀಲಿಸುವಂತೆ ಈ ವಚನ ಒತ್ತಾಯಿಸುತ್ತದೆ.

ಕ್ರಿಯೆ ಮತ್ತು ಜ್ಞಾನ

ಅಗ್ನಿ ಸುಡಲಲ್ಲದೆ ಸುಳಿಯಲರಿಯದು
ವಾಯು ಸುಳಿವುದಲ್ಲದೆ ಸುಡಲರಿಯದು
ಆ ಆಗ್ನಿ ವಾಯುವ ಕೂಡಿದಲ್ಲದೆ ಅಡಿಯಿಡಲರಿಯದು
ಈ ಪರಿಯಂತೆ ನರರರಿವರೆ ಕ್ರಿಯಾಜ್ಞಾನಭೇದವ ರಾಮನಾಥ.

[ಅಗ್ನಿ-ಬೆಂಕಿ; ವಾಯು-ಗಾಳಿ; ಅಡಿಯಿಡಲರಿಯದು-ಹೆಜ್ಜೆ ಇಡಲು ತಿಳಿಯದು]

ಇದು ಜೇಡರ ದಾಸಿಮಯ್ಯನವರ ವಚನ.
ಬೆಂಕಿಗೆ ಸುಡುವ ಅರಿವು, ಸಾಮರ್ಥ್ಯ ಇದೆಯೇ ಹೊರತು ತಾನಾಗಿಯೇ ಎಲ್ಲೆಂದರಲ್ಲಿ ಚಲಿಸುವ ಸಾಮರ್ಥ್ಯವಿಲ್ಲ. ಗಾಳಿಗೆ ಎಲ್ಲಿ ಬೇಕಾದರಲ್ಲಿ ಸುಳಿಯುವ ಅರಿವು, ಸಾಮರ್ಥ್ಯ ಇದೆಯೇ ಹೊರತು ಏನನ್ನೂ ಸುಡಲಾರದು. ಬೆಂಕಿಯು ಗಾಳಿಯೊಡನೆ ಸೇರದಿದ್ದರೆ ಒಂದು ಹೆಜ್ಜೆಯನ್ನೂ ಅತ್ತಿತ್ತ ಎತ್ತಿ ಇಡಲಾರದು. ಕ್ರಿಯೆ ಮತ್ತು ಜ್ಞಾನದ ಸಂಬಂಧ ಹೀಗಿರುತ್ತದೆ ಎಂದು ಮನುಷ್ಯರು ಅರಿಯಬಲ್ಲರೇ?

ಅರಿವು ಒಂದು ಶಕ್ತಿ. ಅದು ಕೇವಲ ವ್ಯಕ್ತಿಗತವಾಗಿ ಇರಬಲ್ಲುದು. ಅದು ಕ್ರಿಯೆಯಾಗಿ ಬದಲಾಗಲು ಇನ್ನೊಂದು ಶಕ್ತಿಯ ಒಡನಾಟ ಬೇಕೇ ಬೇಕು. ಬೆಂಕಿ ಹರಡಲು ಗಾಳಿಯ ನೆರವು ಇಲ್ಲದೆ ಸಾಧ್ಯವಿಲ್ಲವಲ್ಲ, ಹಾಗೆ. ಬೆಂಕಿಯ ಉದಾಹರಣೆ ಗಮನ ಸೆಳೆಯುತ್ತದೆ. ಅರಿವು ಹಾಗೆ ನೋಡಿದರೆ ಬೇಡದ ಸಂಗತಿಗಳನ್ನೆಲ್ಲ ಸುಡುವ ಬೆಂಕಿಯೇ ಅಲ್ಲವೇ? ವ್ಯಕ್ತಿಯಲ್ಲಿರುವ ಅರಿವಿನ ಬೆಂಕಿ ಸುತ್ತಲಿನ ಸಮಾಜದಲ್ಲಿರುವ ಬೇಡದ ಸಂಗತಿಗಳನ್ನು ಸುಟ್ಟು ಹೊಸ ಹುಟ್ಟಿಗೆ ಕಾರಣವಾಗಬೇಕಾದರೆ ಗಾಳಿಯಂಥ ಇನ್ನೊಂದು ಶಕ್ತಿಯೊಡನೆ ಕೂಡಲೇಬೇಕು.

ಈ ಮಾತನ್ನು ಇಬ್ಬರು ವ್ಯಕ್ತಿಗಳ ನಡುವಿನ ಪ್ರೀತಿಯ ಸಂಬಂಧದಿಂದ ಹಿಡಿದು ಗುರು ಮತ್ತು ಶಿಷ್ಯ ಸಮೂಹ, ಅರಿವಿನ ನಾಯಕತ್ವ ಮತ್ತು ಜನಸಮೂಹದ ಚಲನಶೀಲತೆಯ ಶಕ್ತಿಯ ಕೂಡಲಸಂಗಮದವರೆಗೂ ವಿಸ್ತರಿಸಿಕೊಳ್ಳಬಹುದು. ಅರಿವು ಕ್ರಿಯೆಯಾಗಲು ವ್ಯಕ್ತಿ ಮತ್ತು ಸಮಾಜದ ಕೂಟ ಬೇಕೇ ಬೇಕು ಎಂದು ಜೇಡರ ದಾಸಿಮಯ್ಯ ಹೇಳುತ್ತಿರುವಂತಿದೆ.

ಸಮತೆ

ಆರೇನೆಂದರೂ ಓರಂತಿಪ್ಪುದೆ ಸಮತೆ
ಆರು ಜರಿದವರೆನ್ನ ಮನದ ಕಾಳಿಕೆಯ ಕಳೆದರೆಂಬುದೆ ಸಮತೆ
ಆರು ಸೌತ್ಯವ ಮಾಡಿಹರೆನ್ನ ಜನ್ಮಜನ್ಮದ ಹಗೆಗಳೆಂಬುದೆ ಸಮತೆ
ಇಂತು ಗುರುಕಾರುಣ್ಯ ಮನವಚನಕಾಯದಲ್ಲಿ ಅವಿತಥವಿಲ್ಲರ್ದಡೆ
ಕಪಿಲಸಿದ್ಧಮಲ್ಲಿಕಾರ್ಜುನ ನಿನ್ನವರ ನೀನೆಂಬುದೆ ಸಮತೆ.

[ಆರೇನೆಂದರೂ-ಯಾರು ಏನೆಂದರೂ; ಓರಂತು-ಅಚ್ಚುಕಟ್ಟಾಗಿ, ಹರಿವು ಕಡಿಯದಂತೆ, ವ್ಯವಸ್ಥಿತವಾಗಿ, ಮತ್ತೊಂದರಂತೆ; ಸಮತೆ-ಶಾಂತವಾಗಿರುವುದು, ಸಮಸ್ಥಿತಿಯನ್ನು ಕಾಪಾಡಿಕೊಳ್ಳುವ ಗುಣ, ಸೂಕ್ತತೆ; ಜರಿದವರು-ನಿಂದಿಸಿದವರು; ಕಾಳಿಕೆ-ಕಲ್ಮಶ; ಸೌತ್ಯ-ಸೂತತನ, ಸೇವಕತನ [?] ಹಗೆ-ಶತ್ರು; ಅವಿತಥ-ಕೃತಕತೆ, ಕಪಟ, ಮೋಸ ಇಲ್ಲದಿರುವುದು]

ಇದು ಸಿದ್ಧರಾಮರು ರಚಿಸಿರುವ ವಚನ.
ಯಾರು ಏನಂದರೂ ಮನಸಿನ ಸಮತೋಲ ತಪ್ಪದೆ ಇರುವುದು; ಯಾರು ನಿಂದಿಸುತ್ತಾರೋ ಅವರು ಮನಸಿನ ಕೊಳೆಯನ್ನು ತೊಳೆಯುತ್ತಾರೆ ಅನ್ನುವುದು; ಯಾರು ನಮ್ಮ ಸೇವೆ ಮಾಡಲು ಬರುತ್ತಾರೊ ಅವರು ಜನ್ಮಾಂತರದ ಹಗೆಗಳು ಅನ್ನುವುದು ಸಮತೆ; ಗುರುವಿನ ಕರುಣೆಯನ್ನು ಪಡೆದು, ದೇಹ, ಮನಸು, ಮಾತಿನಲ್ಲಿ ಕಪಟವಿಲ್ಲದ ಎಲ್ಲರನ್ನೂ ಕಪಿಲಸಿದ್ಧಮಲ್ಲಿಕಾರ್ಜುನ ಎಂದು ತಿಳಿಯುವುದೇ ಸಮತೆ.

ಮನಸಿನ ಹದ ಹೇಗಿರಬೇಕು ಎಂದು ಈ ವಚನ ಹೇಳುತ್ತದೆ. ಮೇಲುನೋಟಕ್ಕೆ ಇದು ಸ್ಥಿತಪ್ರಜ್ಞನ ವರ್ಣನೆಯಂತೆ ಕಂಡರೂ ಸ್ತುತಿ, ಸೇವೆಗಳನ್ನು ನಿರಾಕರಿಸುವ, ನಿಂದನೆಯನ್ನು ಸ್ವೀಕರಿಸುವ, ಕಪಟವಿರದ ಸತ್ಯ ಮನ, ಸತ್ಯ ವಾಕ್, ಸತ್ಯ ಕಾಯ ಇರುವವರನ್ನು ಗುರುತಿಸಿ ಗೌರವಿಸುವ ಶಕ್ತಿ ಇರುವುದು ಕೂಡ ಸಮತೆಗೆ ಅಗತ್ಯವೆನ್ನುವುದು ಗಮನಿಸಬೇಕಾದ ಸಂಗತಿ. ವಚನಗಳು ಮನಸಿನ, ವ್ಯಕ್ತಿತ್ವದ ಸಮತೆಗೆ ಕೊಡುವಷ್ಟು ಪ್ರಾಮುಖ್ಯವನ್ನು ಸಮಾನತೆಗೆ ನೀಡುವುದಿಲ್ಲವೇನೋ ಎಂಬ ಪ್ರಶ್ನೆಯೂ ಕೆಲವೊಮ್ಮೆ ಹುಟ್ಟುತ್ತದೆ. ಮನಸಿನ ಸಮತೆಗೂ ಸಾಮಾಜಿಕವಾದ ಸಮಾನತೆಗೂ ಇರುವ ಸಂಬಂಧ ಮತ್ತು ವ್ಯತ್ಯಾಸಗಳನ್ನು ಕುರಿತು ಚಿಂತನೆ ಮಾಡುವ ಅಗತ್ಯವನ್ನೂ ಸೂಚಿಸುತ್ತದೆ.

ಚಿಂತೆಯೆಂಬ ಹೂವಿನ ಗಿಡ

ಚಿಂತೆಯೆಂಬ ಹೂವಿನ ಗಿಡುವನು ನೋಡಿರೆ
ಹೊಲಗೇರಿಯಲ್ಲಿ ಬಿತ್ತುವನೆ ನೋಡಿರೆ
ಜಲಶೇಖರನ ಉದಕವನೆರದಡೆ
ಆಸೆಯೆಂಬ ಹೂವ ಕೊಯ್ದು ಕಾಮಂಗೇರಿಸುವೆನು
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ.

[ಜಲಶೇಖರ-ಮೋಡ; ಉದಕ-ನೀರು/ಮನಸ್ಸು]

ಈ ವಚನ ಘಟ್ಟಿವಾಳಯ್ಯನವರದು.
ಚಿಂತೆ ಎಂಬ ಹೂವಿನ ಗಿಡವನ್ನು ನೋಡಿರೇ. ಅದರ ಬೀಜ ಇರುವುದು ಹೊಲಗೇರಿಯಲ್ಲಿ. ಮೋಡದ/ ಮನಸಿನ ನೀರು ಎರೆದಾಗ ಆಸೆ ಅನ್ನುವ ಹೂವು ಬಿಟ್ಟಿತ್ತು… ಅದನ್ನು ಕೊಯ್ದು ಕಾಮನಿಗೆ ಏರಿಸುತ್ತೇನೆ.

ಚಿಂತೆಯನ್ನು ಯಾವ ಯಾವದಕ್ಕೋ ಹೋಲಿಸುವುದು ನೋಡಿದ್ದೇವೆ. ಆದರೆ ಇಲ್ಲಿ ಚಿಂತೆ ಅನ್ನುವುದು ಹೂವಿನಗಿಡವಾಗಿದೆ. ಅದೇ ಒಂದು ಆಶ್ಚರ್ಯವಲ್ಲವೇ. ಅದರ ಬಿತ್ತ ಹೊಲಗೇರಿಯಲ್ಲಿ ಅನ್ನುವಾಗ ವಿಕಾರಗೊಂಡ ಮನಸ್ಸೇ ಹೊಲೆಯ ಎಂದು ಹೇಳುವ ಅನೇಕ ವಚನಕಾರರ ಮಾತು ನೆನೆದುಕೊಳ್ಳೋಣ. ಚಿಂತೆಯೆಂಬ ಹೂವಿನ ಗಿಡದ ಬೀಜ ಇರುವುದು ವಿಕಾರಗೊಂಡ ಮನಸ್ಸು ಎಂಬ ಹೊಲಗೇರಿಯಲ್ಲಿ. ಜಲಶೇಖರನು (ನೀರು ಎಂದರೆ ಮನಸ್ಸು ಅನ್ನುವ ಅರ್ಥವೂ ವಚನಗಳಲ್ಲಿರುವುದರಿಂದ ಜಲಶೇಖರವು ಮೋಡ, ಮನಸ್ಸು ಅಥವಾ ದೇವರ ತೀರ್ಥವೂ ಆಗಬಹುದು) ನೀರು ಎರೆದರೆ ಆಸೆ ಎಂಬ ಹೂ ಬಿಟ್ಟಿತ್ತು. ಚಿಂತೆ ಅನ್ನುವ ಹೂವಿನ ಗಿಡದಲ್ಲಿ ಬಿಡುವ ಹೂವಿನ ಹೆಸರು ಆಸೆ! ಆ ಹೂವನ್ನು ನಾನು ಕಾಮನಿಗೆ ಅರ್ಪಿಸಿದೆ ಅನ್ನುತ್ತಾರೆ.
ವಿಕಾರವೂ ಚಿಂತೆಯೂ ಆಸೆಯೂ ಕಾಮದ ಅಲಂಕಾರಗಳು. ಇಲ್ಲೆಲ್ಲ ದೇವರಿಗೆ ಏನೂ ಕೆಲಸವಿದ್ದಂತಿಲ್ಲ. ರೂಪಕಗಳ ಮುಖಾಂತರ ಘಟ್ಟಿವಾಳಯ್ಯನವರು ದೊಡ್ಡ ಮನೋವೈಜ್ಞಾನಿಕ ಸತ್ಯವನ್ನೂ ಹೇಳುತ್ತಿರುವಂತಿದೆ.

ಕೊಟ್ಟ ಕುದುರೆ

ಕೊಟ್ಟ ಕುದುರೆಯನೇರಲರಿಯದೆ
ಮತ್ತೊಂದು ಕುದುರೆಯ ಬಯಸುವರು
ವೀರರೂ ಅಲ್ಲ ಧೀರರೂ ಅಲ್ಲ
ಇದು ಕಾರಣ ನೆರೆ ಮೂರುಲೋಕವೆಲ್ಲವು
ಹಲ್ಲಣವ ಹೊತ್ತುಕೊಂಡು ಬಳಲುತ್ತೈದಾರೆ
ಗುಹೇಶ್ವರನೆಂಬ ಲಿಂಗವನವರೆತ್ತಬಲ್ಲರೋ.

[ಹಲ್ಲಣ-ಜೀನು, ಕುದುರೆಯ ಮೇಲೆ ಕೂತುಕೊಳ್ಳಲು ಇರುವ ಚರ್ಮದ ಹಾಸು; ಬಳಲುತ್ತೈದಾರೆ-ಬಳಲುತ್ತಿದ್ದಾರೆ]

ಇದು ಅಲ್ಲಮಪ್ರಭುದೇವರ ವಚನ.
ಕೊಟ್ಟ ಕುದುರೆಯನ್ನು ಏರಲು ಅರಿಯದೆ ಬೇರೆಯ ಕುದುರೆಯನ್ನು ಬಯಸುವವರು ವೀರರೂ ಅಲ್ಲ, ಧೀರರೂ ಅಲ್ಲ. ಇದೇ ಕಾರಣಕ್ಕೆ ಇಡೀ ಮೂರು ಲೋಕವೂ ಜೀನನ್ನು ಹೊತ್ತು ಬೇರೆಯ ಕುದುರೆ ಬಯಸುತ್ತಾ ಬಳಲುತ್ತಿದ್ದಾರೆ.

ನಮ್ಮ ಹುಟ್ಟಿಗೆ ಕಾರಣರಾದ ಅಪ್ಪ, ಅಮ್ಮ; ನಮ್ಮ ಮೈ, ಮನಸ್ಸು, ಭಾಷೆ; ನಾವು ಹುಟ್ಟುವ ಊರು ಇಂಥ ಕೆಲವು ಸಂಗತಿಗಳು ನಮಗೆ ದತ್ತವಾಗಿ ಬರುತ್ತವೆ, ಅವನ್ನು ಆಯ್ಕೆಮಾಡಿಕೊಳ್ಳುವ ಅವಕಾಶ ಇರುವುದಿಲ್ಲ. ಕೊಟ್ಟ ಕುದುರೆ ಎಂದರೆ ಆಯ್ಕೆಗೆ ಅವಕಾಶವಿರದ ದತ್ತವಾದ ಸಂಗತಿಗಳಲ್ಲದೆ ಬೇರೇನೂ ಅಲ್ಲ. ನಮಗೆ ಬೇರೆ ಥರದ ಮೈ, ಮನಸ್ಸು, ತಂದೆ ತಾಯಿ, ಪರಿಸರ, ಭಾಷೆ ದೊರೆತಿದ್ದರೆ ಏನೋ ಮಾಡಬಹುದಿತ್ತು ಅನ್ನುವುದು ವೀರತೆ, ಧೀರತೆ ಅಲ್ಲ. ಇರುವ ವಾಸ್ತವವನ್ನು ಪಳಗಿಸಿ ಮುಂದೆ ಸಾಗುವುದು ಮುಖ್ಯ. ಬದಲಿಸಲಾಗದ ವಾಸ್ತವದ ಕುದುರೆಯನ್ನು ಪಳಗಿಸಲು ಅರಿಯದೆ ಬೇರೆ ಕುದುರೆ ಹುಡುಕುತ್ತಾ ಬದುಕು ಮುಗಿಸುವುದೇ ಬಹಳಷ್ಟು ಜನರ ರೀತಿಯಾಗಿದೆ ಎಂದು ಈ ವಚನ ನಗೆಬೀರುವಂತೆ ತೋರುತ್ತದೆ. ವಾಸ್ತವಕ್ಕೆ ಮುಖಮಾಡಿ ಎದುರಿಸುವುದೊಂದೇ ಮನುಷ್ಯರಿಗೆ ಇರುವ ದಾರಿ ಎಂದು ಹೇಳುವಂತಿದೆ.

ಸೂತಕವಿರದ ಬದುಕು

ಅಂತರಂಗದ ಅರಿವು ಬಹಿರಂಗದ ಕ್ರಿಯೆ
ಈ ಉಭಯಸಂಪುಟ ಒಂದಾದ ಶರಣಂಗೆ
ಹಿಂಗಿತ್ತು ತನುಸೂತಕ ಹಿಂಗಿತ್ತು ಮನಸೂತಕ
ಕೂಡಲಚೆನ್ನಸಂಗಯ್ಯನಲ್ಲಿ ಸಂಗವಾದುದು ಸರ್ವೆಂದ್ರಿಯ.

[ಉಭಯಸಂಪುಟ-ಎರಡು ಪೆಟ್ಟಿಗೆಗಳು; ತನುಸೂತಕ-ದೇಹದ ಮೈಲಿಗೆ; ಮನಸೂತಕ-ಮನಸಿನ ಸೂತಕ; ಸರ್ವೇಂದ್ರಿಯ-ಎಲ್ಲ ಇಂದ್ರಿಯಗಳು]

ಇದು ಚೆನ್ನಬಸವಣ್ಣನವರ ವಚನ.
ಒಳಗಿನದು ಎಂಬ ಅಂತರಂಗದಲ್ಲಿ ಅರಿವು, ಹೊರಗಿನದು ಎಂಬ ಬಹಿರಂಗದಲ್ಲಿ ಕ್ರಿಯೆ ಇವನ್ನು ಎರಡು ಪತ್ಯೇಕವಾದ ಸಂಪುಟ/ಪೆಟ್ಟಿಗೆಗಳಾಗಿ ವಿಂಗಡಿಸಿಕೊಂಡು ಬದುಕು ಸಾಗಿಸುವುದು ಮೈಲಿಗೆಗೆ ಕಾರಣವಾಗುತ್ತದೆ. ದೇಹದ ಮೈಲಿಗೆ, ಮನಸಿನ ಮೈಲಿಗೆ ಎರಡೂ ಹುಟ್ಟುವುದಕ್ಕೆ ಅಂತರಂಗ ಮತ್ತು ಬಹಿರಂಗಗಳು ಎರಡು ಪ್ರತ್ಯೇಕ ಪೆಟ್ಟಿಗೆಗಳೆಂಬಂತೆ ಭಾವಿಸಿ ಬದುಕುತ್ತಿರುವುದೇ ಕಾರಣ. ಅಂತರಂಗವೆಂಬ ಶಬ್ದಕ್ಕೆ ಬಹಿರಂಗ ಮುಂದುಗೊಂಡಿಪ್ಪುದು.

ಬಹಿರಂಗವೆಂಬ ಶಬ್ದಕ್ಕೆ ಅಂತರಂಗ ಮುಂದುಗೊಂಡಿಪ್ಪುದು ಎಂದು ಅಲ್ಲಮವಚನವೊಂದರ ಮಾತು [ಸಂ.೨, ವಚನ ೯೫೪] ಅಂತರಂಗ ಶುದ್ಧಿ, ಬಹಿರಂಗ ಶುದ್ಧಿಯ ಕ್ರಮ ಬೇರೆ ಬೇರೆಯಲ್ಲ, ಒಂದೇ ಎಂದು ಹೇಳುವ ಬಸವವಚನ [ಸಂ.೧.೨೩೫] ಮತ್ತು ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮ ಹೇಗೆ ಒಲಿಯುತ್ತಾನೆ ಎಂಬ ಬಸವ ಪ್ರಶ್ನೆಯನ್ನೂ ನೋಡಿ [ಸಂ.೧. ೮೦೩]

ನುಡಿ ಮತ್ತು ಕ್ರಿಯೆಗಳ ನಡುವೆ, ಆಡುವ ಮಾತು ಮತ್ತು ಮಾಡುವ ಕೆಲಸಗಳ ನಡುವೆ, ಅಂತರಂಗ ಬಹಿರಂಗಗಳ ನಡುವೆ ವಿಂಗಡಣೆ ಇರದ ಹಾಗೆ ಅಖಂಡವಾಗಿ, ಅಂದರೆ ತುಂಡು ತುಂಡಾಗದೆ ಬದುಕುವುದೇ ಶುದ್ಧವಾದ ಬದುಕು ಎಂದು ವಚನಕಾರರು ಹೇಳುವಂತಿದೆ. ಅರಿವು ಖಾಸಗಿ, ಕ್ರಿಯೆ ಸಾರ್ವಜನಿಕ ಎಂಬ ವಿಂಗಡಣೆಯನ್ನು ಚೆನ್ನಬಸವಣ್ಣನವರ ಈ ವಚನ ಒಪ್ಪುವುದಿಲ್ಲ.

ಎಲ್ಲವೂ ಎಲ್ಲರಿಗೂ ಸೇರಿದ ದಾನ

ಇಳೆ ನಿಮ್ಮ ದಾನ ಬೆಳೆ ನಿಮ್ಮ ದಾನ
ಸುಳಿದು ಬೀಸುವ ಗಾಳಿ ನಿಮ್ಮ ದಾನ
ನಿಮ್ಮ ದಾನವನುಂಡು ಅನ್ಯರ ಹೊಗಳುವ ಕುನ್ನಿಗಳನೇನೆಂಬೆ ರಾಮನಾಥ.

[ಇಳೆ-ಭೂಮಿ]

ಇದು ಜೇಡರ ದಾಸಿಮಯ್ಯನವರ ವಚನ.
ಈ ಭೂಮಿ, ಭೂಮಿಯಲ್ಲಿ ಬೆಳೆಯುವ ಈ ಬೆಳೆ, ಸುಳಿದು ಬೀಸುವ ಈ ಗಾಳಿ ಎಲ್ಲವೂ ದೇವ ರಾಮನಾಥನ ದಾನ. ನಿಮ್ಮ ದಾನವನ್ನು ಉಂಡು ಬೇರೆಯ ಮನುಷ್ಯರನ್ನು ಹೊಗಳುವ ಕುನ್ನಿಗಳನ್ನು ಏನೆಂದು ಕರೆಯಲಿ?

ಉಸಿರಾಡುವ ಗಾಳಿ, ಉಣ್ಣುವ ಆಹಾರ, ನಡೆದಾಡುವ, ನಾವು ವಾಸಿಸುವ ಭೂಮಿ ಇವು ಎಲ್ಲರಿಗೂ ಮಾತ್ರವಲ್ಲ ಸಕಲ ಜೀವರಾಶಿಗಳಿಗೂ ಸೃಷ್ಟಿ ಶಕ್ತಿಯು ಕೊಡಮಾಡಿರುವ ದಾನ. ನಾವೆಲ್ಲರೂ ಬದುಕಿರುವುದು ನಿಸರ್ಗದ ಕರುಣೆಯಿಂದಲೋ ಆಶೀರ್ವಾದದಿಂದಲೋ ಅಲ್ಲವೇ! ಹೀಗಿರುವಾಗ ಯಾರೋ ನಾಯಕನನ್ನು, ಯಾವುದೋ ಪಕ್ಷವನ್ನು ಅಥವಾ ಯಾರೋ ಅಧಿಕಾರಿಯ ಕರುಣೆಯಿಂದ ಬದುಕು ಸಾಗುತಿದೆ ಎಂದು ಅವರಿವರನ್ನು ಹೊಗಳುವುದು ಅಗತ್ಯವೇ ಇಲ್ಲ. ಹಾಗೆ ಹೊಗಳುವವರನ್ನು ಈ ವಚನ ಕುನ್ನಿಗಳು ಎಂದು ಕರೆಯುತ್ತದೆ.

ನಿಜ ಅಧ್ಯಾತ್ಮವು ಸೃಷ್ಟಿಯ ಜೀವಿಗಳನ್ನೆಲ್ಲ ಸಮಾನವಾಗಿ ಕಾಣುವ, ಸೃಷ್ಟಿ ಎಲ್ಲರಿಗೂ ಸೇರಿದ್ದು ಎಂಬ ನಿಲುವಿನದು ಎಂಬುದನ್ನು ಈ ವಚನ ಸ್ಪಷ್ಟಪಡಿಸುವಂತಿದೆ.

ಇಲ್ಲೇಕೆ ಬಂದೆ ಶಿವಾ?

ಇತ್ತಲೇಕಯ್ಯಾ ಕಾಯದ ತಿತ್ತಿಯ ಹೊತ್ತಾಡುವನ ಮುಂದೆ
ನಿನ್ನ ಭಕ್ತರ ಠಾವಿನಲ್ಲಿಗೆ ಹೋಗಿ ಮುಕ್ತಿಯ ಮಾಡು
ನೀ ಹೊತ್ತ ಬಹುರೂಪ
ತಪ್ಪದೆ ರಜತಬೆಟ್ಟದ ಮೇಲಕ್ಕೆ ಹೋಗು
ನಿನ್ನ ಭಕ್ತರ ಮುಕ್ತಿಯ ಮಾಡು ಕಾಮಧೂಮ ಧೂಳೇಶ್ವರನ ಕರುಣದಿಂದ
ನೀನೆ ಬದುಕು.

[ತಿತ್ತಿ-ಚರ್ಮದ ಚೀಲ; ಠಾವು-ಸ್ಥಳ; ರಜತಬೆಟ್ಟ-ಬೆಳ್ಳಿಯ ಬೆಟ್ಟ, ಹಿಮಾಲಯ]

ಇದು ಮಾದಾರ ಧೂಳಯ್ಯನವರ ವಚನ.
ʻಅಟ್ಟೆಯ ಚುಚ್ಚುವ ಉಳಿಯ ಮೊನೆಯಲ್ಲಿ ಪತ್ಯಕ್ಷವಾದ ಪರಮೇಶ್ವರನ ಕಂಡುʼ ಮಾದಾರ ಧೂಳಯ್ಯ ಹೀಗೆ ಹೇಳಿದರೆಂದು ಶೂನ್ಯಸಂಪಾದನೆ ವರ್ಣಿಸುತ್ತದೆ. ಅಟ್ಟೆ ಎಂದರೆ ಚಪ್ಪಲಿಯ ತಳಭಾಗ. ಚಪ್ಪಲಿಯನ್ನು ಹೊಲಿಯುತ್ತ ಕುಳಿತಿದ್ದ ಧೂಳಯ್ಯನ ಕೈಯ ಉಳಿಯ ಮೊನೆಯಲ್ಲಿ ಶಿವ ಪ್ರತ್ಯಕ್ಷನಾದಾಗ ʻಶಿವನೇ ನೀನೇಕೆ ಇಲ್ಲಿಗೆ ಬಂದೆ? ಚರ್ಮದ ಚೀಲವನ್ನು ಹೊತ್ತು ಬದುಕು ಸಾಗಿಸುವ ನನ್ನ ಕೈಯ ಉಳಿಯ ಮುಂದೆ ಕಾಣಿಸಿಕೊಂಡೆ? ಭಕ್ತರು ಇರುವಲ್ಲಿಗೆ ಹೋಗು, ಅವರಿಗೆ ಮುಕ್ತಿಯನ್ನು ಕೊಡು. ಬಗೆಬಗೆಯ ವೇಷ ಹೊತ್ತು ನಟಿಸುವ ನೀನು ಈ ವೇಷ ಹೊತ್ತು ಹಿಮಾಲಯಕ್ಕೆ ಹೋಗು. ಅಲ್ಲಿದ್ದು ಭಕ್ತರಿಗೆ ಮುಕ್ತಿಯನ್ನು ದಯಪಾಲಿಸು. ನನ್ನ ಇಷ್ಟದೈವ ಕಾಮಧೂಮ ಧೂಳೇಶ್ವರನ ಕರುಣೆಯನ್ನು ಸಂಪಾದಿಸಿಕೊಂಡು ಬದುಕಿಕೋ ಹೋಗುʼ ಎಂದು ನುಡಿದ ಎನ್ನುವ ವಿವರವಿದೆ.

ಪುರಾಣಗಳಲ್ಲಿ ಬರುವ ಶಿವನ ಕಲ್ಪನೆಯನ್ನು ವಚನಕಾರರು ಒಪ್ಪಿರಲಿಲ್ಲ. ಅವರವರ ಇಷ್ಟದೈವವೇ ಅವರಿಗೆ ಮುಖ್ಯವಾಗಿತ್ತು. ಶಿವನನ್ನು ಅವನ ಭಕ್ತರು ಇರುವಲ್ಲಿಗೆ ಹೋಗು, ಅವರಿಗೆ ಮುಕ್ತಿ ಕೊಡು ಇಲ್ಲೇಕೆ ಬಂದೆ ಎಂದು ಕೇಳುವುದರಲ್ಲಿ ಪುರಾಣದ ನಿರಾಕರಣೆ ಇದೆ. ಹಾಗೆಯೇ ದುಡಿದು ಬದುಕುವ ನನಗೆ ಮುಕ್ತಿಯ ಅಗತ್ಯವಿಲ್ಲ ಎಂಬ ಗಟ್ಟಿತನವೂ ಇದೆ.

Previous post ಮಾನವರ ವಿಘಟನೆಗೆ ಕಾರಣರಾರು?
ಮಾನವರ ವಿಘಟನೆಗೆ ಕಾರಣರಾರು?
Next post ಅಚಲ ಪರಂಪರಾ ಪ್ರಸ್ಥಾನ
ಅಚಲ ಪರಂಪರಾ ಪ್ರಸ್ಥಾನ

Related Posts

ತನ್ನ ಪರಿ ಬೇರೆ…
Share:
Articles

ತನ್ನ ಪರಿ ಬೇರೆ…

February 5, 2020 ಪ್ರೊ. ಎನ್ ರೇವಣಸಿದ್ದಪ್ಪ
ಈಳೆ ನಿಂಬೆ ಮಾವು ಮಾದಲಕೆ ಹುಳಿನೀರನೆರೆದವರಾರಯ್ಯಾ? ಕಬ್ಬು ಬಾಳೆ ಹಲಸು ನಾರಿವಾಳಕ್ಕೆ ಸಿಹಿನೀರನೆರೆದವರಾರಯ್ಯಾ? ಕಳವೆ ರಾಜಾನ್ನ ಶಾಲ್ಯನ್ನಕ್ಕೆ ಓಗರದ ಉದಕವನೆರೆದವರಾರಯ್ಯಾ?...
ಬಸವ ಸ್ಮರಣೆ ಇಂದಿಗೂ ಏಕೆ?
Share:
Articles

ಬಸವ ಸ್ಮರಣೆ ಇಂದಿಗೂ ಏಕೆ?

May 6, 2020 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
`ಕಲ್ಲು ಎಷ್ಟೇ ಕಾಲ ನೀರಲ್ಲಿದ್ದರೂ ನೆನದು ಮೃದುವಾಗದು’. ಈ ನುಡಿಗಟ್ಟು ಬಸವಣ್ಣನವರದು. ಕಲ್ಲನ್ನು ಬೇಕಾದರೆ ಮೃದುಗೊಳಿಸಬಹುದು. ಆದರೆ ಕಾಡುಗಲ್ಲಿನಂತಿರುವ ಮನುಷ್ಯರನ್ನು...

Comments 5

  1. ಮಂಗಳಾ ಪ್ರಿಯದರ್ಶಿನಿ, ಅಮೆರಿಕ
    Sep 9, 2026 Reply

    ಇದೀಗ ತಾನೇ ‘ ಬಯಲ ‘ ಎಲ್ಲ ಲೇಖನಗಳನ್ನೂ ಓದಿ ಮುಗಿಸಿದೆ .
    ಎಂದಿನಂತೆ ಓಎಲ್ ಎನ್, ಪದ್ಮಾಲಯ ಅವರ ಲೇಖನಗಳು ನಮ್ಮ ಓದಿನ ಪರಿಧಿಯನ್ನು ವಿಸ್ತರಿಸುತ್ತವೆ .
    ಪತ್ರಿಕೆ ತುಂಬ ಪ್ರಬುದ್ಧವಾಗಿದ್ದು , ಚಿಂತನಾತ್ಮಕ ನೆಲೆಯಲ್ಲಿ ನಿಲ್ಲುತ್ತದೆ.🌸

  2. ಎ. ಸುಭಾಷ್
    Sep 11, 2026 Reply

    ವಚನಗಳು ನಿಜಕ್ಕೂ ನಮ್ಮ ಕಣ್ಣಮುಂದಿನ ಬೆಳಕು, ಆ ಬೆಳಕು ನಮಗೆ ದಾರಿ ತೋರುವಂತೆ ಅರ್ಥವ್ಯಾಖ್ಯಾನ ನೀಡಿರುವಿರಿ. ವಂದನೆಗಳು.

  3. ಟಿ. ರವಿಕಿರಣ್
    Sep 14, 2026 Reply

    “ಪುರಾಣಗಳಲ್ಲಿ ಬರುವ ಶಿವನ ಕಲ್ಪನೆಯನ್ನು ವಚನಕಾರರು ಒಪ್ಪಿರಲಿಲ್ಲ. ಅವರವರ ಇಷ್ಟದೈವವೇ ಅವರಿಗೆ ಮುಖ್ಯವಾಗಿತ್ತು. ಶಿವನನ್ನು ಅವನ ಭಕ್ತರು ಇರುವಲ್ಲಿಗೆ ಹೋಗು, ಅವರಿಗೆ ಮುಕ್ತಿ ಕೊಡು ಇಲ್ಲೇಕೆ ಬಂದೆ ಎಂದು ಕೇಳುವುದರಲ್ಲಿ ಪುರಾಣದ ನಿರಾಕರಣೆ ಇದೆ..” ಎಂದು ಬರೆದಿರುವಿರಿ, ಅದು ದೇವರ ನಿರಾಕರಣೆಯೇ ಏಕಾಗಿರಬಾರದು?

  4. ಮಹಾಲಿಂಗ ಟಿ
    Sep 23, 2026 Reply

    ಅಂಬಿಗರ ಚೌಡಯ್ಯನವರ ಮೂರೇ ಸಾಲಿನ ವಚನದಲ್ಲಿ ಹುದುಗಿರುವ ತಿಳುವಳಿಕೆಯನ್ನು ಸುಲಭವಾಗಿ ಬಿಚ್ಚಿ ತೋರಿಸಿದ್ದಾರೆ… “ಓದುವುದು, ಪಾಠ ಹೇಳುವುದು ಇಂಥ ಉದ್ದೇಶಗಳಿಗಾಗಿ ತಿಳಿದಿರುವುದನ್ನು ಹೇಳುವುದು ಲೋಕಕ್ಕೆ ತೋರಿಸಿಕೊಳ್ಳುವುದು ಜಾಣತನ, ಚಾತುರ್ಯ. ಆದರೆ ತನ್ನನ್ನು ತಾನು ಅರಿತರೆ ಆ ಅರಿವನ್ನು ಹೊರಗೆ ತೋರ್ಪಡಿಸದೆ ಇರುವುದಕ್ಕೆ ಸಾಧ್ಯವಾದರೆ ಅದೇ ದೇವತ್ವ.”
    ಶರಣು ಸರ್.

  5. ಅನಿಲ್ ಹೊಸಮನಿ
    Sep 25, 2026 Reply

    ದೇವರನ್ನೇ ದೂರಕ್ಕಟ್ಟುವ ಛಾತಿ ತೋರಿದ ಶರಣ ಮಾದಾರ ಧೂಳಯ್ಯ. ಮತ್ತೆಮತ್ತೆ ಓದಿಸಿಕೊಳ್ಳುವ ಸುಂದರ ವಚನ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅಪ್ಪನಿಲ್ಲದ ಮನೆ
ಅಪ್ಪನಿಲ್ಲದ ಮನೆ
January 10, 2021
ಯೋಗಿಯಾದರೆ ಸಿದ್ಧರಾಮನಂತಾಗಬೇಕು
ಯೋಗಿಯಾದರೆ ಸಿದ್ಧರಾಮನಂತಾಗಬೇಕು
April 29, 2018
ಲಿಂಗಾಯತರು ಮತ್ತು ಬಸವತತ್ವ
ಲಿಂಗಾಯತರು ಮತ್ತು ಬಸವತತ್ವ
May 10, 2023
ಬಯಲಾದ ದೇವರು
ಬಯಲಾದ ದೇವರು
January 15, 2026
ಅರಿವು-ಮರೆವಿನಾಟ
ಅರಿವು-ಮರೆವಿನಾಟ
August 8, 2021
ಸನ್ಯಾಸ ದೀಕ್ಷೆ
ಸನ್ಯಾಸ ದೀಕ್ಷೆ
June 12, 2025
ಬಿಂಬ-ಪ್ರತಿಬಿಂಬ
ಬಿಂಬ-ಪ್ರತಿಬಿಂಬ
February 5, 2020
ವೀರದಾಸಮ್ಮನ ಸಹಜಾಮನಸ್ಕ ಯೋಗ
ವೀರದಾಸಮ್ಮನ ಸಹಜಾಮನಸ್ಕ ಯೋಗ
October 21, 2024
ಬೆಳಕಿನೆಡೆಗೆ…
ಬೆಳಕಿನೆಡೆಗೆ…
June 10, 2023
ಪಾದಪೂಜೆಯ ಪ್ರಸ್ತುತತೆ…
ಪಾದಪೂಜೆಯ ಪ್ರಸ್ತುತತೆ…
October 13, 2026
Copyright © 2026 Bayalu