Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಅಚಲ ಪರಂಪರಾ ಪ್ರಸ್ಥಾನ
Share:
Articles September 6, 2026 ಪದ್ಮಾಲಯ ನಾಗರಾಜ್

ಅಚಲ ಪರಂಪರಾ ಪ್ರಸ್ಥಾನ

ನಮ್ಮ ಜನ ಸಮುದಾಯಗಳ ನಡುವೆ ಇಂದಿಗೂ ಇರುವ ಪರಂಪರೆ ಅಚಲ. ಸಾಮಾನ್ಯ ಮನುಷ್ಯರಂತಿದ್ದರೂ, ಅಜ್ಞಾತವಾಗಿಯೇ ಇರುವ ಪರಂಪರೆ ಇದು. ಅಚಲರು ಬಹುಮುಖ್ಯವಾಗಿ ಒಂದು ಗುರು ಪರಂಪರೆಯಾಗಿ ಕಾಣುತ್ತಾರೆ. ಅವರು ಹುಣ್ಣಿಮೆಯ ರಾತ್ರಿಗಳಲ್ಲಿ, ಗುರುಪೂಜಾ ಕಾರ್ಯಕ್ರಮಗಳಲ್ಲಿ ತತ್ವಪದಗಳನ್ನು ಹಾಡುವ ಸಂಘಗಳಲ್ಲಿ ಆಗಾಗ ಕಾಣಸಿಗುತ್ತಾರೆ. ಕರ್ನಾಟಕ, ಆಂದ್ರ, ತೆಲಂಗಾಣ ಹಾಗೂ ತಮಿಳುನಾಡಿನಾದ್ಯಂತ ಕಾಣಸಿಗುವ ಈ ಪರಂಪರೆಗೆ ಯಥೇಚ್ಚವಾಗಿ ಮಠಗಳಿವೆ. ಪ್ರತೀ ಮಠವೂ ಆಯಾ ಪ್ರಾದೇಶಿಕ ಸಾಧಕರ ಹೆಸರಿನಲ್ಲಿರುತ್ತದೆ. ಉದಾ: ನಮ್ಮ ಬಯಲು ನಾಡಿನಲ್ಲಿ ಅತ್ಯಪರೂಪಕ್ಕೆ ಕಾಣಸಿಗುವ ಪರದೇಸಿ ಮಠಗಳು ಈ ಪರಂಪರೆಯ ನೆಲಗುರುತುಗಳಾಗಿವೆ. ಬೆಂಗಳೂರಿನಲ್ಲೇ ಹತ್ತಕ್ಕಿಂತ ಹೆಚ್ಚು ಮಠಗಳಿದ್ದೂ, ಪ್ರತಿ ಮಠವೂ ಆ ಪ್ರದೇಶದಲ್ಲಿ ಆಗಿ ಹೋದ ಜನಮನ್ನಣೆ ಪಡೆದ ಗುರುಗಳ ಹೆಸರಿನಲ್ಲಿರುವುದು ವಿಶೇಷವಾದದ್ದು. ಅವುಗಳಲ್ಲಿ ಇಲ್ಲಿ ಕೆಲವು ಮಠಗಳನ್ನು ದಾಖಲಿಸಬಹುದು: 1. ಶ್ರೀ ಗುರು ಅಚಲಾನಂದ ಶ್ರೀನಿವಾಸರೆಡ್ಯಾರ್ಯರು, ಅಚಲಮಠ, ಮುನೇಕೊಳಾಲು, ಎಚ್.ಎ.ಎಲ್, ಬೆಂಗಳೂರು. 2. ಅಚಲಗುರು ಜಯದೇವಾರ್ಯ ಸೇವಾಸಮಾಜ, ಕಂಠೀರವ ನಗರ, ಬೆಂಗಳೂರು. 3. ಶಿವಶಟ್ಯಾರ್ಯರ ಮಠ, ಹಲಸೂರು, ಬೆಂಗಳೂರು. ಇನ್ನಿತರೆ ಚಿತ್ರದುರ್ಗ ತುಮಕೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಬಳ್ಳಾರಿ, ರಾಯಚೂರು, ಗುಲ್ಬರ್ಗಗಳಲ್ಲೂ ಈ ಪರಂಪರೆಯ ಮಠಗಳಿವೆ. ಕರ್ನಾಟಕದಲ್ಲಿ ಅತಿಹೆಚ್ಚು ಮಠಗಳು ರಾಯಚೂರು ಜಿಲ್ಲೆಯಲ್ಲಿವೆ. ಕೋಲಾರ ಜಿಲ್ಲೆಯಲ್ಲಿ ಪ್ರತಿ ಎರಡು ಮೂರು ಹಳ್ಳಿಗಳಿಗೆ ಒಂದು ಮಠ ಇದ್ದೇ ಇರುತ್ತದೆ. ಈ ಜಿಲ್ಲೆಯಲ್ಲಿ ಪೆÇೀಲಾರ್ಯರ ಮಠ ವೇಮಗಲ್, ತಾವರೆಕೆರೆ ರಾಮವದೂತರ ಮಠ ಹೊಸಕೋಟೆ, ಅವದೂತ ದೊಡ್ಡಿ ವೆಂಕಟಗಿರಿಯಪ್ಪನ ಮಠ ದೊಡ್ಡಿ ಮಾಲೂರು ತಾಲ್ಲೂಕು, ಬುರುದೆ ರಾಮಚಂದ್ರಪ್ಪನವರ ಮಠ ಕರ್ನಪಲ್ಲಿ ಬೇರಿಕೆ ರಸ್ತೆ, ಬುಟ್ಟೆಪ್ಪ ಸ್ವಾಮಿ ಮಠ ಬೇರಿಕೆ ಇತ್ಯಾದಿ ಮಠಗಳನ್ನು ಹೆಸರಿಸಬಹುದು.
ಅಚಲ ಎಂಬುದು ಒಂದು ಗುರುಶಿಷ್ಯ ಪರಂಪರೆಯಾಗಿದೆ. ಈ ಪರಂಪರೆಯಲ್ಲಿ ಸೇರಿದವರನ್ನು ಗುರುವಿನಿಂದ “ಗುರುಬೋಧೆ ಪಡೆದವರು” ಎಂದು ಕರೆಯಲಾಗುತ್ತದೆ. ಹೀಗೆ ಗುರುಬೋಧೆ ಪಡೆದವರು ‘ಗುರು ಮಕ್ಕಳು’ ಎನಿಸಿಕೊಳ್ಳುತ್ತಾರೆ. ಗುರು ಮಕ್ಕಳು ನಮ್ಮ ಕರ್ನಾಟಕದ ಎಲ್ಲಾ ಹಳ್ಳಿಗಳಲ್ಲಿ ಯಥೇಚ್ಚವಾಗಿ ಕಾಣಸಿಗುತ್ತಾರೆ. ಗುರು ಮಕ್ಕಳು ಆಗಾಗ ಒಂದೆಡೆ ಸೇರಿ ‘ವೇದಾಂತ ವೈಜ್ಞಾನಿಕ ಸಭೆ’ ಗಳನ್ನು ನಡೆಸಿ ತತ್ವ ನಿಶ್ಕರ್ಷೆ ಮಾಡುತ್ತಾರೆ. ಈ ಸಭೆಗಳನ್ನು ‘ಶುಷ್ಕ ವೇದಾಂತ ನಿರಸನ ಸಭೆ’ ಗಳೆಂತಲೂ ಕರೆಯುತ್ತಾರೆ. ಇಂತಹ ಸಭೆಗಳು ಪ್ರತಿ ವರ್ಷದ ಜನವರಿಯ ಏಕಾದಶಿಯಲ್ಲಿ ಹಾಗೂ ಆಗಸ್ಟ್ ಮಾಹೆಯಲ್ಲಿ ಬರುವ ‘ಗುರುಪೂರ್ಣಿಮೆ’ಯ ದಿನಗಳಲ್ಲಿ ಬಹಳ ವಿಜೃಂಭಣೆಯಿಂದ ನಡೆಯುತ್ತವೆ. ಈ ಕಾರ್ಯಕ್ರಮದ ಧ್ಯೇಯ ಗೀತೆ ಈ ಕೆಳಗಿನಂತೆ ಇರುತ್ತದೆ:

ಎತ್ತು ಬಾ ಝಂಡ ಎತ್ತು ಬಾರ
ವೇದಾಂತ ಸಭೆಯೊಳು ಎತ್ತು ಬಾ ಝಂಡ ಎತ್ತು ಬಾ

ಎತ್ತು ಬಾ ವೇದಾಂತ ಸಭೆಯೊಳು
ವೇದಸಾರಾತೀತವರಿತು
ಸತ್ತುಚಿತ್ತದ ಮಾಯೆ ಬಿಟ್ಟಿಹ
ಸಾಧುವೆಂದಿಗೂ ಹುಟ್ಟರೆನುತ || ಎತ್ತು ಬಾ ಝಂಡ ||

ಮಂತ್ರ ಲಯ ಹಠಯೋಗ
ಮುದ್ರೆ | ಯಂತ್ರ ತಂತ್ರ ಜಪ
ಧ್ಯಾನ ಧಾರಣೆಗಳೆಲ್ಲವೂ ಶೂನ್ಯವೆನುತಾ || ಎತ್ತು ಬಾ ಝಂಡ ||

ಚಿತ್ತವಂತಃ ಕರಣವೆನುತಾ
ಚಿತ್ತವೇ ಸಂಸಾರವಾಯಿತು
ಚಿತ್ತಜ್ಞಾನವೇ ಊಹೆ ಮೂಲವು
ಇರುವುದಿದ್ದಂತೆ ಅರಿತೊಡೆ
ಎಲ್ಲವೂ ಲೊಳಲೊಟ್ಟೆಯಾಯಿತು || ಎತ್ತು ಬಾ ಝಂಡ ||

ನಿರಾವರಣವು ಅಚಲವೆನುತಾ
ಇಲ್ಲದಾ ಪ್ರಣವ ಇಲ್ಲವೇ ಇಲ್ಲೆಂದು
ನುಡಿದು | ಗುರುವಾಕ್ಯ ಮೂರನು
ತಿಳಿದುನೋಡಲು ಎಲ್ಲವೂ ಬರಿ
ಬಯಲೆಂದು ಸಾರುತಾ || ಎತ್ತು ಬಾ ಝಂಡ ||

ಚೊಕ್ಕದಿಂದಲೂ ಶುದ್ದ ಪೂರ್ಣವು
ಚುಕ್ಕಿರಹಿತವು ಲೆಕ್ಕಶೂನ್ಯವು |
ಸತ್ಯದಿ ನಾರಾಯಣಾಕ್ಯನು
ಡಂಗುರ ಬಾರಿಸಿ ನುಡಿದ ಜಗಕೆ || ಎತ್ತು ಬಾ ಝಂಡ ||

ಈ ಧ್ಯೇಯ ಪದದಿಂದ ನಮ್ಮ ಪ್ರಾಥಮಿಕ ತಿಳುವಳಿಕೆಗೆ ಸಿಗುವುದೇನೆಂದರೆ… ಅತ್ಯಂತ ನಿಷ್ಟೂರವಾಗಿ ಮತೀಯವಾದ ಸಂಚರನಾತ್ಮಕ ನಿರ್ಮಾಣಗಳ ನಿರಾಕರಣೆ ಅಥವಾ ನಿರಸನ! ಎಲ್ಲಾ ಧರ್ಮಗಳ ಸಾರವೊಂದೇ! ಅವು ಮಾನವನನ್ನು ದೇವರೆಡೆಗೆ ಕೊಂಡೊಯ್ಯುವಲ್ಲಿ ಆಸ್ತೆ ವಹಿಸುತ್ತವೆ. ಎಲ್ಲಾ ಧರ್ಮಗಳು ತಮ್ಮ ದೇವರೆಡೆಗೆ ಹೋಗಲು ಬೇರೆ ಬೇರೆ ಮಾರ್ಗಗಳನ್ನು ಹೇಳುತ್ತವೆ, (ದ್ವೈತ, ಅದ್ವೈತ, ವಿಶಿಷ್ಟಾದ್ವೈತ, ಶಕ್ತಿ ಅದ್ವೈತ) ಹೀಗೆ ನಮ್ಮ ದೇಶದಲ್ಲಿ ಅಸ್ತಿತ್ವದಲ್ಲಿರುವ ಅರವತ್ತಕ್ಕಿಂತಲೂ ಹೆಚ್ಚು ಮಾರ್ಗೀಯ ಧರ್ಮಗಳನ್ನು ಇಲ್ಲಿ ಉಲ್ಲೇಖಿಸಬಹುದು. ಪ್ರತಿ ಮಾರ್ಗವೂ ತನ್ನದೇ ಆದ ನೀತಿ ನಿಯಮ, ಆಚರಣೆ, ದೈವ, ಚಿಂತನೆ, ಯೋಗ, ಆಧ್ಯಾತ್ಮ ಇತ್ಯಾದಿಗಳನ್ನು ಬೋಧಿಸುತ್ತವೆ. ಅಚಲರು ಈ ತರಹದ ಸಾಂಪ್ರದಾಯಿಕ ಮಾರ್ಗದವರಲ್ಲ! ಅವರು ಎಲ್ಲಾ ಸಾಂಪ್ರದಾಯಿಕ ಹಾಗೂ ಶಾಸ್ತ್ರೀಯ ಧರ್ಮಗಳನ್ನು ಒಂದು ಪ್ರಬಲವಾದ ರಾಜಕಾರಣವನ್ನಾಗಿ ಗ್ರಹಿಸುತ್ತಾರೆ. ಈ ಎಲ್ಲಾ ಮಾರ್ಗಗಳು ಧರ್ಮಗಳುಂಟು ಮಾಡಿರುವ ಜೀವನ ವಿಧಾನ, ಆಹಾರ ವಿಹಾರ, ಆಲೋಚನಾ ವಿಧಾನ, ಭಾಷೆ ಹಾಗೂ ಸಂಸ್ಕೃತಿಗಳಲ್ಲಿ ಕಾಲಾತೀತವಾಗಿ ನೆಲೆಯೂರಿರುವ ಸ್ಥಿರವಾದ ಯಜಮಾನಿಕೆಯನ್ನು ಅಚಲರು ದಿಟ್ಟವಾಗಿ ಪ್ರಶ್ನಿಸುತ್ತಾರೆ. ಅಷ್ಟೇ ನಿಷ್ಟೂರವಾಗಿ ನಿರಾಕರಿಸುತ್ತಾರೆ. ಕಾಯಾ, ವಾಚಾ, ಮನಸಾ ಈ ನಿರಾಕರಣೆ ಅಚಲರ ಪ್ರಾಥಮಿಕ ಪಾಠವಾಗಿದೆ. ಈ ನಿರಾಕರಣೆ ಸಾಧ್ಯವಾಗಿಸಿಕೊಂಡ ಯಾರಾದರೂ ಈ ಪರಂಪರೆಯಲ್ಲಿ ಗುರುವಾಗಬಹುದು.

ಧರ್ಮವನು ಬೋದಿಸುವ ಗುರುವೇಕೆ ನಮಗೆ?
ಕರ್ಮವ ಸ್ಥಾಪಿಸುವ ಗುರುವೇಕೆ ನಮಗೆ?
ಸತ್ಯವನು ಬೋದಿಸುವ ಗುರುವೇಕೆ ನಮಗೆ?
ಜ್ಞಾನವೇ ನೀನೆನ್ನುವ ಗುರುವೇಕೆ ನಮಗೆ?
ಏನೂ ಇಲ್ಲದ ಬೋಧೆಯೋ ಇದು |||

ನಿಜಗುರು ವಾಖ್ಯದೊಳು ಅರಿವು ಬಯಲಾದೊಡೆ ಇನ್ನೇನು?
ಇಲ್ಲವೆಂದು ಒಪ್ಪದಿರು| ಇದೆಯೆಂದು ಹೇಳದಿರು
ವನೂ ಆಗಾದ ಲೋಕದ ಅರಿವಿಗಿನ್ನೂ ಬಾರದಿರು!
ಏನೂ ಇಲ್ಲದ ಬೋದೆಯೋ!!!
ಮಂತ್ರಗಳ ಹೇಳುವ ಗುರುವನು ಛೀ ಬಿಡು!
ಮಹಿಮೆಗಳ ತೋರುವ ಗುರುವನು ಛೀ ಬಿಡು!
ಯಂತ್ರಗಳ ಹೇಳುವ ಗುರುವನು ಛೀ ಬಿಡು
ಯೋಗಗಳ ತಿಳುಹುವ ಗುರುವನು ಛೀ ಬಿಡು!
ಅರಿವೇ ಗುರುವಾದ ಮಾತಿದು, ಇರುವುದೆಲ್ಲಾ ಬಿಟ್ಟೊಡೆ!
ಅರಿವೇ ಬಯಲಾದೊಡೆ ಶಂಕೆ ಇನ್ಯಾಕೆ?
ದೊರಕಿತಿನ್ನು ಅರಿವೇ ಗುರುವಾದ ಮಾತಿದೋ!
ಜ್ಞಾನವನು ಬೋದಿಸುವ ಗುರುವನು ಛೀ ಬಿಡು!
ಭಕ್ತಿ ಬೋದಿಸುವ ಗುರುವನು ಛೀ ಬಿಡು!
ವೈರಾಗ್ಯವನು ಬೋದಿಸುವ ಗುರುವನು ಛೀ ಬಿಡು!
ದೇವತಾಭ್ರಾಂತಿ ಬೋದಿಸುವ ಗುರುವನು ಛೀ ಬಿಡು!
ಶ್ರವಣವ ಮಾಡಿಸುವ ಗುರುವನು ಛೀ ಬಿಡು!
ಜಪ ತಪಗಳ ಮಾಡಿಸುವ ಗುರುವನು ಛೀ ಬಿಡು!
ಧ್ಯಾನವ ಮಾಡಿಸುವ ಗುರುವನು ಛೀ ಬಿಡು!

ಬಿಡುವುದಿನ್ನೇನು ಹೇಳೈ? ಬಿಡದೇ ಹಿಡಿಯದೇ
ಚಿಂತಿಸದೇ ಏನೂ ಆಗದೇ ಕೆಡಬೇಡ
ಅರಿವಿನ ಬ್ರಾಂತಿಯೊಳು ಬೀಳದಿರು
ಇರುವುದನ್ನು ಇರುವಂತೆ ತಿಳಿಸುವ
ಗುರುವನು ಕಾಣೈ!!!

ತತ್ವವನು ಬೋದಿಸುವ ಗುರುವನು ಛೀ ಬಿಡು!
ತಾ ಪರಬ್ರಹ್ಮನಾಗುವ ಗುರುವನು ಛೀ ಬಿಡು!
ಹಂಸೋಹಂ ಎನ್ನುವ ಗುರುವನು ಛೀ ಬಿಡು!
ಬಿಡುವುದಿನ್ನೇನು ಹೇಳೈ? ಬಿಡದೇ ಕಳೆಯದೆ
ನುಡಿಯದೇ ಏನೂ ಆಗದೆ ಕೆಡಬೇಡ
ಅರಿವೆಂಬ ಜೋಲಿಯೊಳಗೆ ಬೀಳದಿರು
ಬಿಡುವುದಿನ್ನೇನು ಹೇಳೈ!!!

(-ಮಹಾಲಯಂ ಪು.ಸಂ :32)

ಅಚಲರು ಮತೀಯತೆಯನ್ನು ಒಂದು ಮಾನವ ಸ್ವಭಾವವನ್ನಾಗಿ ನೋಡುತ್ತಾರೆ. ಆ ಸ್ವಭಾವದಲ್ಲೇ ಲೋಕದ ಕುರಿತ ಅಸಂಬದ್ಧ ವಿಷಯಗಳು ಅಡಗಿವೆ. ಅವುಗಳಲ್ಲಿ ಊಹೆಗೂ ನಿಲುಕದಷ್ಟು ಅಸಮಾನತೆಗಳು, ಕ್ರೌರ್ಯಗಳು, ಅಸಹನೆಗಳು, ಕೃತಕ ಸ್ವರೂಪದ ಅಧಿಕಾರ ಗದ್ದುಗೆಗಳು, ಹಿಂಸೆಗಳು, ವಿಷಯ ಲೋಲುಪತೆಗಳು ಅಸ್ತಿತ್ವಕ್ಕೆ ಬರುತ್ತವೆ. ಅಚಲ ಪರಂಪರಾ ಅರಿವು ಮತೀಯತೆಯನ್ನು ಮಾನವ ಅಹಂಕಾರದ ಮೂಲವೆನ್ನುತ್ತದೆ. ಅಹಂಕಾರವು ಅಸ್ತಿತ್ವ ಭ್ರಮೆಯ ತಾಯಿಬೇರು. ಈ ಭೌತಿಕ ಜಗತ್ತಿನಲ್ಲಿ ಯಾವುದೇ ಒಂದು ವಸ್ತು ಅಥವಾ ಮೂಲ ಧಾತುವಿಗೆ ಸ್ಥಿರವಾದ ಅಸ್ತಿತ್ವವಿರುವುದಿಲ್ಲ. ಅಸ್ತಿತ್ವದ ಭ್ರಮೆ ಮಾನವ ತಲ್ಲಣಗಳ ತಾಯಿಬೇರು. ಮಾನವನ ಅಂತರಾಳದಲ್ಲಿರುವ ಭ್ರಮಾತ್ಮಕವಾದ ತಾಯಿಬೇರನ್ನು ಸಮೂಲವಾಗಿ ತೆಗೆದುಹಾಕದ ಹೊರತು ಮಾನವ ಮೈತ್ರಿ ಮತ್ತು ಜೀವ ಪ್ರೀತಿಯನ್ನು ಹುಟ್ಟಿಸಲಾಗದೆಂಬುದನ್ನು ಅಚಲರು ದೃಢವಾಗಿ ನಂಬುತ್ತಾರೆ. ಒಟ್ಟಿನಲ್ಲಿ ಭ್ರಮಾತ್ಮಕವಾಗಿರುವ ವ್ಯಕ್ತಿಯ ಮನಸ್ಸನ್ನು ಬದಲಿಸದ ಹೊರತು ಒಂದು ಸಾಮಾಜಿಕ ಬದಲಾವಣೆ ಅಸಾಧ್ಯವಾದ್ದರಿಂದ ವ್ಯಕ್ತಿಯ ಮನಸ್ಸನ್ನು ಬದಲಾಯಿಸಿ ನಿಸರ್ಗಪರವಾದ ವರ್ತಮಾನದ ವಸ್ತು ಸ್ಥಿತಿಗೂ ಕಣ್ತೆರೆಸುವುದು ಅಚಲರ ಬಹುಮುಖ್ಯವಾದ ಗಮ್ಯವಾಗಿದೆ.

ಅಚಲ ಪದದ ವಿವರಣೆ

ಅಚಲವೆನ್ನುವ ಪದಕ್ಕೆ ನಿಶ್ಚಲವಾದುದು ಎಂಬ ವಿವರಣೆ ಚಾಲ್ತಿಯಲ್ಲಿದೆ. ಇದರೊಂದಿಗೆ ಬೆಟ್ಟ, ಸ್ಥಿರವಾದುದು, ವಿಚಲಿತವಾಗದಿರುವುದು ಮುಂತಾದ ವಿವರಣೆಗಳು ಇವೆ. ಅಚಲ ಪದವು ಈ ನೆಲದಲ್ಲಿ ಇಂದಿಗೂ ಜೀವಂತವಾಗಿ ಬಾಳುತ್ತಿರುವ ಒಂದು ಗುರು ಪರಂಪರೆಯ ಜೀವನ ವಿಧಾನವನ್ನು ಸೂಚಿಸುವ ಪದ. ಅಚಲ ಎನ್ನುವುದು ನಿಸರ್ಗದ ವಸ್ತು ಸ್ಥಿತಿಯ ವಿವೇಕದಲ್ಲಿ ಬಾಳುವ ಒಂದು ಸಾಧನಾ ಕ್ರಮ. ಅಚಲ ನೈಸರ್ಗಿಕವಾಗಿ ಜಗತ್ತು ಹೇಗಿದೆಯೋ ಹಾಗೆ ಅದನ್ನು ನಿರ್ವಚಿಸಿ ಬಾಳುವ ಕ್ರಮ. ಪರಂಪರಾನುಗತವಾಗಿ ಬಂದಿರುವ ಪೂರ್ವಸಂಚಿತ ಮನೋಸಂರಚನೆಗಳ ಎದುರಿಗೆ ವಿಚಲಿತನಾಗದಿರುವುದು ಅಚಲ ಎಂದಾಗುತ್ತದೆ.

ಮತ್ತೊಂದು ರೀತಿಯಲ್ಲಿ ಈ ಪರಂಪರೆಯ ಸಾಧನಾ ಕ್ರಮವನ್ನು ದೇಹದೇವಾಲಯ ಪ್ರೋಕ್ತ ವಿದೇಹ ಮುಕ್ತಿ ಎಂತಲೂ ಹೇಳಲಾಗುತ್ತದೆ. ಅವರು ಮಾನವನ ಭೌತಿಕ ಶರೀರವನ್ನು ಹಾಗೂ ಸುತ್ತಲಿನ ಭೌತಿಕ ಲೋಕವನ್ನು ದೇವಾಲಯವೆಂದು ಭಾವಿಸುತ್ತಾರೆ. ಹಾಗೆಯೇ ಇದರ ಹೊರತಾಗಿ ನಮ್ಮೊಳಗೆ ಒಂದು ಮನೋ ಜಗತ್ತೂ ಇರುತ್ತದೆ. ಈ ಮನೋ ಜಗತ್ತಿನಲ್ಲಿ ಅಡಕವಾಗಿರುವ ಮನೋ ಸಂರಚನೆಗಳನ್ನು ವಿದೇಹಗಳೆನ್ನುತ್ತಾರೆ. ವಿದೇಹ ಎಂದರೆ ಪದವಿದ್ದು ಪದಾರ್ಥವಿಲ್ಲದೇ ಇರುವ ಕಾಲ್ಪನಿಕ ಪದ ಸಂರಚನೆಗಳು ಎಂದಾಗುತ್ತದೆ. ಇವನ್ನು ಆಗಮ, ಸಂಚಿತ, ಪ್ರಾರಬ್ದವೆಂತಲೂ ಭಾವಿಸುತ್ತಾರೆ. ಉದಾ : ದೇವರು, ಆತ್ಮ, ಜಾತಿ, ಕುಲ ಇತ್ಯಾದಿ ತಾರತಮ್ಯ, ದ್ವೇಷ, ಅಸೂಯೆ, ಸ್ವಹಿತ, ಇತ್ಯಾದಿ ಮನೋ ಕ್ಲೇಶಗಳು.

ಈ ಬಗೆಯ ಮಾನಸಿಕ ಅವಸ್ಥೆಗಳು ಮೊದಲು ಮಾನವನ ಅಂತರಂಗದಲ್ಲಿ ಕಲ್ಪಿತಗೊಳ್ಳುತ್ತವೆ. ಮನಸ್ಸಿಗೆ ಅಗಾಧವಾದ ಶಕ್ತಿಯಿರುವುದರಿಂದಾಗಿ ಮನಸ್ಸು ಕಲ್ಪನೆಗಳನ್ನು ಸಂಕಲ್ಪಗಳನ್ನಾಗಿ ಬದಲಿಸಿಕೊಳ್ಳುತ್ತದೆ. ಸಂಕಲ್ಪಗಳು ಕರ್ಮಗಳಾಗಿ ತನ್ನೊಳಗೆ ಬದಲಾಗುವುದನ್ನು ಯಾರಿಂದಲೂ ತಡೆಯಲಾಗದು. ಕಲ್ಪನೆ (ಭ್ರಮೆ) → ಸಂಕಲ್ಪ → ಕರ್ಮ ಈ ಮೂರರ ಕ್ರಿಯಾತ್ಮಕ ಸರಣಿಯು ಭವದ ಸರಣಿಯಾಗಿದೆ. ಬುದ್ಧಗುರು ಸಹ ಇದನ್ನೇ ಹೇಳಿರುವುದನ್ನು ನೋಡಬಹುದು. ಅವಿದ್ಯೆಯ ಮೂಲ ಕಲ್ಪನೆ ಮತ್ತು ಸಂಕಲ್ಪ! ಇವೆರಡನ್ನೂ ಆತ ವಿಜ್ಞಾನವೆಂದ! ವಿಜ್ಞಾನ ಎಂದರೆ ಅರಿವು, ಮನಸ್ ಅಥವಾ ಮಿಥ್ಯಾದೃಷ್ಠಿ. ವಿಜ್ಞಾನದಿಂದಾಗಿ ಸಂಖಾರಗಳು ಸೃಷ್ಟಿಸಲ್ಪಡುತ್ತವೆ. ಸಂಖಾರ ಎಂದರೆ ಕಮ್ಮ! ಇವು ಮಾನವನು ಸತ್ತರೂ ಮಾನವ ಪರಂಪರೆಯೊಳಗೆ ಮತ್ತೊಬ್ಬರ ಮೂಲಕ ಜನ್ಮ ಪಡೆಯುತ್ತವೆ. ಈ ಮೂರರ ಅನುಸರಣೆಯ ಸಂಬಂಧ ಭಂಗಗೊಳಿಸುವ ಸಾಧನೆ ಅಚಲರಲ್ಲಿ ಬಹು ಮಹತ್ವದ ಸಾಧನೆ. ಈ ಸನ್ನಿವೇಶಕ್ಕೆ ಪೂರಕವಾದ ನೂರಾರು ತತ್ವಪದಗಳ ಸಾಲುಗಳನ್ನಿಲ್ಲಿ ಉಲ್ಲೇಖಿಸಬಹುದು. ಕೈವಾರ ನಾರೇಯಣಪ್ಪನವರು ಒಂದು ಕಡೆ ‘‘ದೊಡ್ಡಹುಲಿಗಳ ಮೂರು ಕೊಲ್ಲದೆ ಮುಕ್ತನಾಗುವುದೆಂತು ಮಗನೇ!’’ ಎನ್ನುತ್ತಾರೆ.

ಮತ್ತೊಂದು ರೀತಿಯಲ್ಲಿ ಅಚಲ ಪದಕ್ಕೆ ವಿಚಲಿತನಾಗದಿರುವವನು ಎಂಬ ವಿವರಣೆಯೂ ಇದೆ. ಮಾನಸಿಕ ಅವಸ್ಥೆಯಲ್ಲಿ ಮರು ಜನ್ಮಪಡೆಯುವ ಕಲ್ಪನೆ ಮತ್ತು ಸಂಕಲ್ಪಗಳನ್ನು ಕರ್ಮಗಳನ್ನಾಗಿಸುವ ಚಲನಶೀಲ ಮಾಯೆಯ ಚಲನೆಯನ್ನು ತನ್ನ ಮನೋ ಶಕ್ತಿಯಿಂದ ಅಚಲಗೊಳಿಸುವವನು ಅಚಲನಾಗುತ್ತಾನೆ. ಅಚಲ ಸಾಧಕನು ಪದವಿದ್ದೂ ಪದಾರ್ಥವಿಲ್ಲದ ವಿಷಯಗಳು ಎದುರಾದಾಗ ವಿಚಲಿತನಾಗುವುದಿಲ್ಲ.

ನುಡಿದಂತೆ ನಡೆದುಕೊಳ್ಳುವುದು ಮತ್ತು ತಾವು ನಡೆದ ನಡೆಯ ಘನತೆಯನ್ನು ಲೋಕದೆದುರಿಗೆ ಮಂಡಿಸುವುದು ಅಚಲರ ಮುಖ್ಯ ಸಾಧನಾ ಪ್ರಸ್ಥಾನವಾಗಿದೆ. ಗುರುಬೋಧೆಯನ್ನು ಪಡೆದುಕೊಂಡ ಗುರುಮಕ್ಕಳು ತಮ್ಮ ಹಿಂದಿನ ಜಾತಿ, ಧರ್ಮ, ಕುಟುಂಬದ ಇತರೆ ಆವರಣಗಳನ್ನು ದಾಟಿಕೊಳ್ಳಲೇ ಬೇಕು. ಯಾರಾದರೂ ಒಬ್ಬ ಗುರು ಪುತ್ರ ಅಥವಾ ಗುರು ಪುತ್ರಿಣಿ ತೀರಿಕೊಂಡಾಗ ಆತ / ಆಕೆಯ ಶವ ಸಂಸ್ಕಾರದ ಹಕ್ಕು ಅವರ ಕುಟುಂಬಕ್ಕೆ ಇರುವುದಿಲ್ಲ. ಆದ್ದರಿಂದ ಅಂತಹ ಸಂಸ್ಕಾರ ವಿಧಿಗಳಲ್ಲಿ ಎಲ್ಲಾ ಗುರು ಮಕ್ಕಳು ಅಲ್ಲಿ ಸೇರುತ್ತಾರೆ. ಆ ದಿನದ ಊಟ ಹಾಗೂ ಶವ ಸಂಸ್ಕಾರದ ಖರ್ಚು ವೆಚ್ಚಗಳೆಲ್ಲಾ ಗುರು ಸಂಘವೇ ಹಂಚಿಕೊಳ್ಳುತ್ತದೆ. ತೀರಿಕೊಂಡವರು ಯಾವುದೇ ಜಾತಿ ಅಥವಾ ಕುಟುಂಬಕ್ಕೆ ಸೇರಿದ್ದರೂ ಎಲ್ಲಾ ಗುರು ಮಕ್ಕಳೂ ಆತನ / ಆಕೆಯ ಶವವನ್ನು ಮುಟ್ಟಿ ಪದ್ಮಾಸನದಲ್ಲಿ ಕೂರಿಸಿ ಖಾವಿ ವಸ್ತ್ರಗಳಿಂದ ಸಿಂಗರಿಸಿ ಆತನ/ ಆಕೆಯ ಕಳೇಬರವನ್ನು ಚಟ್ಟದಲ್ಲಿರಿಸಿ ಎಲ್ಲಾ ಗುರು ಮಕ್ಕಳು ಚಟ್ಟಕ್ಕೆ ಭುಜ ಕೊಟ್ಟು ಹೊರುತ್ತಾರೆ. ಜಾತಿ ಆಧಾರಿತ ಈ ಸಮಾಜದಲ್ಲಿ ಒಬ್ಬ ಚಾಂಡಾಲನನ್ನೂ ಬ್ರಾಹ್ಮಣ ಭುಜ ಕೊಟ್ಟು ಹೊರುವ ಈ ಪ್ರಸಂಗ ನಮ್ಮಲ್ಲಿ ಅತ್ಯಪರೂಪದ್ದು ಎನ್ನಲೇಬೇಕು. ಬೀದಿ ಬೀದಿಗಳಲ್ಲಿ ಹೊರಡುವ ಈ ಮೆರವಣಿಗೆಗೆ ಯಾವುದೇ ಬಾಜ ಭಜಂತ್ರಿಗಳಿರುವುದಿಲ್ಲ, ಪಿಂಡ ಹೊರುವ ಪದ್ದತಿಗಳಿಲ್ಲ. ಎಲ್ಲರೂ ಕೂಡಿ ಭಜನೆ ಹಾಡುತ್ತಾ ಹೊರಡುತ್ತಾರೆ. ಅಲ್ಲಿ ಎಲ್ಲಾ ಮಾನವರು ಒಂದೇ ಎಂಬ ಏಕೋ ಭಾವನೆ ವಿಶಿಷ್ಟವಾದದ್ದು.

ಗುರು ಕಾರ್ಯಕ್ರಮಗಳಲ್ಲೂ ಅಷ್ಟೇ, ಎಲ್ಲರೂ ಜಾತಿ / ಲಿಂಗ ಇತ್ಯಾದಿ ಭೇದಗಳನ್ನು ಮರೆತು ಒಟ್ಟಿಗೆ ಊಟ ಮಾಡುತ್ತಾರೆ. ಒಬ್ಬ ಬಡವನ ಮನೆಯ ಗುರುಪೂಜೆಯಲ್ಲಿನ ಗಂಜಿಯನ್ನು ಸಹ ಒಬ್ಬ ಧನಿಕ ಪ್ರೀತಿಯಿಂದ ಉಣ್ಣುವುದನ್ನು ಇಲ್ಲಿ ನೋಡಬಹುದು.

ಪರಂಪರೆಯ ಸಾಧನಾ ಚತುಷ್ಟಯಗಳು

ಅಚಲರಲ್ಲಿ ಸಾಂಖ್ಯ, ತಾರಕ, ಅಮನಸ್ಕ, ಪರಿಪೂರ್ಣಬಯಲು ಎಂಬ ನಾಲ್ಕು ವಿಧದ ಸಾಧನಾ ಪರಿಕರಗಳಿವೆ. ಸಾಧಕ ವರ್ಗದಲ್ಲಿಯೂ ನಾಲ್ಕು ಬಗೆಯ ಸಾಧಕರಿರುತ್ತಾರೆ, ಇಲ್ಲವೇ ಕೆಲವೊಮ್ಮೆ ಈ ನಾಲ್ಕನ್ನೂ ಸಾಧಿಸಿಕೊಂಡಿರುವ ಅಥವಾ ಸರಿಯಾಗಿ ಗ್ರಹಿಸಿಕೊಂಡಿರುವ ಸಾಧಕರೂ ಇರುತ್ತಾರೆ. ಅಚಲ ಸಾಹಿತ್ಯದಲ್ಲಿ ಈ ನಾಲ್ಕೂ ವಿಭಾಗಗಳಿಗೆ ಸಂಬಂಧಿಸಿದ ಬೇರೆ ಬೇರೆ ಸಾಹಿತ್ಯವಿದೆ. ಎಲ್ಲಾ ಅಚಲ ತತ್ವ ಪದಗಳನ್ನೂ ಒಂದೇ ಪಟ್ಟಿಗೆ ಸೇರಿಸಲಾಗುವುದಿಲ್ಲ. ಬದಲಾಗಿ ನಾಲ್ಕು ವಿಭಾಗಗಳಾಗಿ ವಿಂಗಡಿಸಿಕೊಂಡು ನೋಡುವುದು ಸರಿಯಾದ ಕ್ರಮವಾಗಿದೆ. ನಮ್ಮ ಕನ್ನಡದ ಶರಣರ ವಚನಗಳನ್ನು ಈ ಕ್ರಮದಲ್ಲಿ ಜೋಡಿಸಿ ಓದಿಕೊಂಡರೆ ಶರಣ ಮಾರ್ಗದ ಹೊಸದೊಂದು ಕ್ರಮ ನಮ್ಮನ್ನು ಅಚ್ಚರಿಗೊಳಿಸಬಲ್ಲದು.

ಸಾಂಖ್ಯ, ತಾರಕ, ಅಮನಸ್ಕ ಈ ಮೂರೂ ಸಾಧನಗಳು ಪರಿಪೂರ್ಣ ಬಯಲೆಡೆಗೆ ಕೊಂಡೊಯ್ಯುವ ಯೌಗಿಕವಲ್ಲದ ಸಾಧನಗಳಾಗಿದ್ದು, ವಿಚಾರಣಾಧೀನ ತತ್ವಗಳೆನಿಸುತ್ತವೆ ಎಂದು ಪರಂಪರಾ ಸಾಧಕರು ಹೇಳುತ್ತಾರೆ.

ಒಂದು ಸಾಮಾನ್ಯ ತಿಳುವಳಿಕೆಗೆ ದಕ್ಕುವಂತೆ ಹೇಳುವುದಾದರೆ ಮನುಷ್ಯನಾಳದಲ್ಲಿ ಮಡುಗಟ್ಟಿರುವ ನಂಬಿಕೆ, ವಿಶ್ವಾಸ ಮತ್ತವನ ಭ್ರಮೆಗಳನ್ನು ಅವನ ಭಾವನೆ ಮತ್ತು ವರ್ತನೆಗಳು ಅನುಸರಿಸುತ್ತವೆ. ಇದೊಂದು ಸಂರಚನಾತ್ಮಕ ಮಾನಸಿಕ ವಿನ್ಯಾಸ. ಮಾನವನಿಗೆ ನಂಬಿಕೆ, ವಿಶ್ವಾಸ ಮತ್ತು ಭ್ರಮೆಗಳ ಸ್ವಭಾವ ಇದ್ದಕ್ಕಿದ್ದಂತೆ ಬಂದಂತಹವುಗಳಾಗಿರುವುದಿಲ್ಲ. ಅವು ಕಾಲಾಂತರ ಸಾಮಾಜಿಕ ಪರಿಸರಗಳು ಪರಂಪರೆಯಿಂದ ಪರಂಪರೆಗೆ ಪ್ರಸರಣಗೊಂಡು ಗಟ್ಟಿಯಾಗಿ ನೆಲೆಯೂರಿರುತ್ತವೆ. ಮನುಷ್ಯನ ವರ್ತನೆಗಳು ಮತ್ತು ಭಾವನೆಗಳನ್ನು ನಿರ್ದೇಶಿಸುವ ವಿಶ್ವಾಸ ಮತ್ತು ಭ್ರಮೆಗಳನ್ನು ಸ್ವಯಂ ಆತ್ಮವಿಮರ್ಶೆ ಮಾಡಿಕೊಳ್ಳಲು ಸಹಾಯಕ ತಂತ್ರಗಳಾಗಿ ಅಚಲರಲ್ಲಿ ಸಾಂಖ್ಯ, ತಾರಕ, ಅಮನಸ್ಕ ಪರಿಭಾಷೆಗಳು ಅತ್ಯಂತ ಪ್ರಭಾವಶಾಲಿಯಾಗಿವೆ. ಆದ್ದರಿಂದ ಈ ಪರಿಭಾಷೆಗಳು ಮಾನವನನ್ನು ಕಲ್ಪಿತ ಭ್ರಮೆಗಳಿಂದ ದಾಟಿಸುವ ತಂತ್ರಗಳೆಂದು ಗುರು ಪರಂಪರೆ ಹೇಳುತ್ತದೆ. ಸಾಂಖ್ಯ, ತಾರಕ, ಅಮನಸ್ಕ ಈ ಮೂರೂ ಸಾಧನಗಳು ಪರಿಪೂರ್ಣ ಬಯಲನ್ನು ಅನುಸಂಧಿಸುವ ಸಾಧನಾ ಪರಿಕರಗಳಾಗಿವೆ. ಸಾಂಖ್ಯ, ತಾರಕ, ಅಮನಸ್ಕವನ್ನು ಮೂರು ನದಿಗಳೆಂದು ಕರೆಯುತ್ತಾರೆ, ಈ ಮೂರೂ ನದಿಗಳು ಪರಿಪೂರ್ಣ ಬಯಲು ಎಂಬ ಮಹಾಸಾಗರವನ್ನೇ ಸೇರುತ್ತವೆ. ಅಚಲರಲ್ಲಿ ಈ ಮೂರು ಸಾಧನಗಳು ಕೇವಲ ಸಿದ್ಧಾಂತಗಳಲ್ಲ. ಗುರುಶಿಷ್ಯರಿಬ್ಬರೂ ಒಬ್ಬರನ್ನೊಬ್ಬರು ಆತುಕೊಂಡು ಪ್ರಜ್ಞಾಪೂರ್ವಕವಾಗಿ ದಾಟಿಕೊಳ್ಳುವ ಮಾರ್ಗಗಳು! ಈ ನಾಲ್ಕೂ ಪರಿಭಾಷೆಗಳು ಸಾಧಕ ಗುರು ಸಮ್ಮುಖದಲ್ಲಿದ್ದಾಗ ಸುಲಭವೆನ್ನುತ್ತಾರೆ. ಶಾಸ್ತ್ರಗಳನ್ನಾಧರಿಸಿದ ಓದಿನ ಮೂಲಕ ಹೊರಟರೆ ಇವು ಜಾರುಬಂಡೆಗಳಾಗುತ್ತವೆ ಎನ್ನುತ್ತಾರೆ. ಏಕೆಂದರೆ ಸುದೀರ್ಘವಾದಂತಹ ಶಾಸ್ತ್ರೀಯ ಓದಿನ ಅರ್ಥಕೋಶಗಳು ಅರ್ಥಗಳೊಂದಿಗೆ ವಿಪರೀತಾರ್ಥಗಳನ್ನು ತುಂಬಿಸಿರುವುದರಿಂದ ಸಾಧನೆ ಪುಸ್ತಕ ಬದನೆಯಾಗುತ್ತದೆ. ಆದರೆ ಅನುಭವವೇದ್ಯವೇ ಇಲ್ಲಿ ಪ್ರಮುಖ!.

ಸಾಂಖ್ಯ, ತಾರಕ, ಅಮನಸ್ಕ, ಪರಿಪೂರ್ಣ ಬಯಲು ಈ ನಾಲ್ಕು ಪರಿಭಾಷೆಗಳಿಗೆ ನಮ್ಮ ಭಾರತದ ಸಾಂಸ್ಕೃತಿಕ ಚರಿತ್ರೆಯಲ್ಲಿ ಪ್ರಾಚೀನವಾದ ಮಹತ್ವ ಇರುವುದನ್ನು ಕಾಣಬಹುದು. ಈ ಪದಗಳು ಅತ್ಯಂತ ಪ್ರಾಚೀನವೆಂಬುದರಲ್ಲಿ ಸಂಶಯವಿಲ್ಲ.
ವೈದಿಕ ಸಾಹಿತ್ಯದ ಯೋಗ ಸೂತ್ರಗಳು, ಉಪನಿಷತ್ತು, ಪತಂಜಲಿ ಯೋಗ ಸೂತ್ರಗಳಲ್ಲೂ ಈ ಪರಿಭಾಷೆಗಳಿವೆ. ಇವು ಮುಖ್ಯವಾಗಿ ಅದ್ವಯ ತತ್ವವನ್ನು ಸೈದ್ಧಾಂತೀಕರಿಸಿದರೆ ಮತ್ತೊಂದೆಡೆ ಅದ್ವೈತ ತತ್ವವನ್ನು ಕಟ್ಟಲು ಇವನ್ನು ಬಳಸಿಕೊಂಡಿರುವುದು ಸ್ಪಷ್ಟ! ಮಹಾಯಾನ ಬೌದ್ಧ ಪ್ರಜ್ಞಾ ಪಾರಮಿತ ಸೂತ್ರಗಳಲ್ಲೂ ಈ ಪರಿಭಾಷೆಗಳಿವೆ. ಶೈವ ತಂತ್ರ ಹಾಗೂ ಬೌದ್ಧ ತಂತ್ರಗಳಲ್ಲಿ ಈ ನಾಲ್ಕೂ ಪರಿಭಾಷೆಗಳು ಅತ್ಯಂತ ರಹಸ್ಯ ತಂತ್ರಗಳೆನಿಸಿಕೊಂಡಿವೆ. ಇಲ್ಲಿ ಸಿದ್ದ ಸಾಹಿತ್ಯದ ಚರ್ಯಾಗೀತೆ ಅಥವಾ ಚರ್ಯಾ ಪದಗಳು ಉಲ್ಲೇಖಾರ್ಹವಾದವುಗಳು. ಚರ್ಯ ಎಂದರೆ ನಡೆ, ಆಚಾರ ಅಥವಾ ಜೀವನ ವಿಧಾನ ಎಂಬರ್ಥಗಳಿವೆ. ಪದ ಎಂದರೆ ಮಾರ್ಗ! ಚರ್ಯ ಪದಗಳ ವಾಚ್ಯಾರ್ಥ ಒಂದಿದ್ದರೆ ಲಕ್ಷ್ಯಾರ್ಥ ಬೇರೆಯದೇ ಇರುತ್ತದೆ. ಇಲ್ಲಿ ವಾಚಕರು ರೂಪಕಕ್ಕಷ್ಟೇ ಸೀಮಿತ! ಲಕ್ಷ್ಯವೂ ಸಹಜ ಜೀವನ ಸಂಜ್ಞೆಯಾಗಿರುತ್ತದೆ.

ವೈದಿಕ ಸಾಹಿತ್ಯದಲ್ಲಿರುವ ಈ ನಾಲ್ಕೂ ಪರಿಭಾಷೆಗಳಿಗೆ ನಿರ್ದಿಷ್ಟವಾದ ಅರ್ಥಗಳುಂಟು, ಹಾಗೆಯೇ ನಿರ್ದಿಷ್ಟ ಸಿದ್ದಾಂತವು ಉಂಟು. ವೈದಿಕ ಸಾಹಿತ್ಯದಲ್ಲಿರುವಂತೆ ಈ ಪರಿಭಾಷೆಗಳು ಶಾಸ್ತ್ರೀಯವಾದ ನಂಬಿಕೆಗಳನ್ನು ಅವಲಂಬಿಸಿವೆ. ಬೌದ್ಧರ ಸಾಹಿತ್ಯದಲ್ಲಿರುವ ಇದೇ ಪರಿಭಾಷೆಗಳು ಪರಿಶುದ್ಧ ನಡೆ ಮತ್ತು ನೈಸರ್ಗಿಕವಾಗಿ ಬದುಕಗೊಳ್ಳುವುದರ ಮೇಲೆ ಆಧಾರಪಟ್ಟಿವೆ. ವೈದಿಕ ಮತ್ತು ಬೌದ್ಧ ಇವೆರಡಕ್ಕೂ ಅಸಂಬದ್ದವೆನಿಸುವಷ್ಟು ವಿರೋಧಾಭಾಸಗಳಂತೂ ಇವೆ. ಇವೆರಡನ್ನೂ ಭಾರತದ ಸಾಂಸ್ಕೃತಿಕ ಚರಿತ್ರೆಯಲ್ಲಿ ಆಗಿಹೋದ ಕ್ರಾಂತಿ – ಪ್ರತಿಕ್ರಾಂತಿ ನೆಲೆಯ ಹಿನ್ನೆಲೆಯಲ್ಲಿ ನೋಡಿದಾಗ ಇವೆರಡರ ಉದ್ದೇಶ ಅತ್ಯಂತ ಸುಸ್ಪಷ್ಟವಾಗತೊಡಗುತ್ತದೆ. ಒಂದು ನಂಬಿಸಲು ತಹತಹಿಸುತ್ತದೆ. ಮತ್ತೊಂದು ಬದುಕಲು ಉತ್ತೇಜಿಸುತ್ತದೆ. ಒಂದು ಭ್ರಮೆಗಳೇ ಅಂತಿಮಸತ್ಯವೆಂದು ಹೇಳುತ್ತದೆ, ಮತ್ತೊಂದು ಲೋಕದ ವಸ್ತು ಸ್ಥಿತಿಗೆ ಮಾನವನನ್ನು ತಂದು ನಿಲ್ಲಿಸಲು ಹೇಳುತ್ತದೆ.

ಅಚಲಧಾರೆಯ ಸಾಂಖ್ಯ, ತಾರಕ, ಅಮನಸ್ಕ, ಪರಿಪೂರ್ಣ ಇವು ಮಾನವನ ಮನಸ್ಸನ್ನು ಲೋಕದೆದುರಿಗಿಟ್ಟು ಪರಿಶುದ್ಧಗೊಳಿಸುವ ಕೈ ಮರಗಳು. ಭ್ರಮೆಗಳಿಂದ ಲೋಕದ ವಸ್ತು ಸ್ಥಿತಿಗೆ ಕಣ್ದೆರೆಸುವ ಬೆಳಕಿನ ಕಿರಣಗಳು, ಮುಂದೆ ಇವುಗಳನ್ನು ಒಂದೊಂದಾಗಿ ತತ್ವ ಪದಗಳ ಅರಿವಿನಲ್ಲಿ ವಿವರಿಸಿಕೊಳ್ಳಬಹುದು.
(ಮುಂದುವರಿಯುವುದು)

Previous post ಕಣ್ಣ ಮುಂದಿನ ಬೆಳಕು
ಕಣ್ಣ ಮುಂದಿನ ಬೆಳಕು
Next post ಬಿಸಿಲಿಗೆ ಗಡಿಗಳುಂಟೆ?…
ಬಿಸಿಲಿಗೆ ಗಡಿಗಳುಂಟೆ?…

Related Posts

ಅಬದ್ಧ ಆರ್ಥಿಕತೆ
Share:
Articles

ಅಬದ್ಧ ಆರ್ಥಿಕತೆ

March 5, 2019 ಡಾ. ಪಂಚಾಕ್ಷರಿ ಹಳೇಬೀಡು
ಅರ್ಥವ್ಯವಸ್ಥೆ ಎಂದರೆ ಸಾಮನ್ಯ ಅರ್ಥದಲ್ಲಿ ಹಣಕಾಸು ನಿರ್ವಹಣೆ. ಒಬ್ಬ ವ್ಯಕ್ತಿಯಿಂದ ಹಿಡಿದು ಗೃಹ, ಗ್ರಾಮ, ರಾಜ್ಯ, ರಾಷ್ಟ್ರಗಳ ನಿರ್ವಹಣೆಯ ತನಕ ಅರ್ಥವ್ಯವಸ್ಥೆಯ ಜಾಡು ಹಬ್ಬಿ...
ಆಫ್ರಿಕಾದ ಸೂರ್ಯ
Share:
Articles

ಆಫ್ರಿಕಾದ ಸೂರ್ಯ

December 13, 2024 ಕೆ.ಆರ್ ಮಂಗಳಾ
“ದೇವರು ನಮಗೆ ನೀಡಿದ ಉತ್ಕೃಷ್ಟ ಕೊಡುಗೆ ನೆಲ್ಸನ್ ಮಂಡೇಲಾ. ಅವರು ನನಗೆ ಹೃದಯ ವೈಶಾಲ್ಯತೆಯ ಆದರ್ಶ. ಇಂಥ ಹಿರಿಯ ಬದುಕನ್ನು ಪ್ರಭಾವಿಸಿದ ಶ್ರೇಯ ಮಹಾತ್ಮ ಗಾಂಧೀಜಿಗೆ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಶಾಂತಿ
ಶಾಂತಿ
April 11, 2025
ಸುಂದರ, ಸೂಕ್ಷ್ಮ ದ್ವೀಪ ಜಪಾನ್
ಸುಂದರ, ಸೂಕ್ಷ್ಮ ದ್ವೀಪ ಜಪಾನ್
September 14, 2024
ಅನುಪಮ ಯೋಗಿ ಅನಿಮಿಷ
ಅನುಪಮ ಯೋಗಿ ಅನಿಮಿಷ
May 6, 2020
ಬೌದ್ಧ ಮೀಮಾಂಸೆ ಹಾಗೂ ವರ್ತಮಾನದ ಸವಾಲುಗಳು
ಬೌದ್ಧ ಮೀಮಾಂಸೆ ಹಾಗೂ ವರ್ತಮಾನದ ಸವಾಲುಗಳು
December 9, 2025
ಕನ್ನಡ ಕವಿ ಸಂತರಲ್ಲಿ ಧರ್ಮ…
ಕನ್ನಡ ಕವಿ ಸಂತರಲ್ಲಿ ಧರ್ಮ…
May 10, 2022
ಚೋರಚಿಕ್ಕ ಶರಣ ಚಿಕ್ಕಯ್ಯನಾದ ಕತೆ
ಚೋರಚಿಕ್ಕ ಶರಣ ಚಿಕ್ಕಯ್ಯನಾದ ಕತೆ
January 7, 2019
ಗಾಳಿ ಬುರುಡೆ
ಗಾಳಿ ಬುರುಡೆ
June 17, 2020
ಶರಣನಾಗುವುದು…
ಶರಣನಾಗುವುದು…
February 10, 2023
ತುದಿಗಳೆರಡು ಇಲ್ಲವಾದಾಗ…
ತುದಿಗಳೆರಡು ಇಲ್ಲವಾದಾಗ…
March 9, 2023
ಈ ಕ್ಷಣದ ಸತ್ಯ
ಈ ಕ್ಷಣದ ಸತ್ಯ
March 12, 2022
Copyright © 2026 Bayalu