ಕಾಯವೇ ಕೈಲಾಸ
ದೇಹಕ್ಕೂ ಮತ್ತು ನನಗೂ ಸಂಬಂಧವೇನು?
ಇಂಥದೊಂದು ಪ್ರಶ್ನೆ ಯಾರಾದರೂ ಕೇಳಿದರೆ ತಲೆ ಸರಿ ಇದೆಯೇ? ಎಂಬ ಮರುಪ್ರಶ್ನೆ ಬಾಣದಂತೆ ತೂರಿ ಬರುವುದು ನಿಶ್ಚಿತ. ಆದರೆ ಆಧ್ಯಾತ್ಮ ಲೋಕದಲ್ಲಿ ಇದೊಂದು ಬಹು ಮುಖ್ಯ ಪ್ರಶ್ನೆ. ಆತ್ಮದ ಹುಡುಕಾಟ ಆರಂಭವಾಗುವುದೇ ಈ ರೀತಿಯ ಜಿಜ್ಞಾಸೆಗಳಿಂದ. ದೇಹವೇ ನಾನು ಎಂಬುದು ಲೋಕದ ಉತ್ತರವಾದರೆ, ದೇಹವಿಲ್ಲದೇ ನಾನಿಲ್ಲ ಎಂಬುದು ಪಾರಮಾರ್ಥ ದರ್ಶನ. ನಮ್ಮಲ್ಲಿ ಪ್ರಾಚೀನ ಕಾಲದಿಂದಲೂ ಈ ಕುರಿತು ಸಾಕಷ್ಟು ಚರ್ಚೆಗಳು ನಡೆದಿವೆ. ಪಾಶ್ಚಿಮಾತ್ಯ ದೇಶಗಳಲ್ಲಿಯೂ ಅರಿಸ್ಟಾಟಲ್ ನಿಂದ ಹಿಡಿದು ಅನೇಕ ಜ್ಞಾನಿಗಳು ದೇಹದ ಕುರಿತು, ಜೀವ ಮತ್ತು ದೇಹ ಸಂಬಂಧದ ಕುರಿತು ಚಿಂತನೆಗಳನ್ನು ನಡೆಸಿದ್ದಾರೆ. ಒಂದು ಕಡೆ ಭೌತಿಕ ಪ್ರಪಂಚದಲ್ಲಿ ದೇಹವೇ ಸರ್ವಸ್ವ ಎನ್ನುವ ಗಾಢ ಭಾವನೆ, ಮತ್ತೊಂದು ಕಡೆ ಆತ್ಮವಾದಿಗಳ ಲೋಕದಲ್ಲಿ ದೇಹ ಪಾಪದ ಕೂಪ ಎನ್ನುವ ತಾತ್ಸಾರ.
ದೇಹ ಮತ್ತು ಆತ್ಮಗಳನ್ನು ಬದ್ಧವೈರಿಯಂತೆ ಬಿಂಬಿಸುವ ವಿಚಾರಗಳು ಧಾರ್ಮಿಕ ವಲಯದಲ್ಲಿ ಹೇರಳವಾಗಿವೆ. ಅಶಾಶ್ವತವಾದ ದೇಹವೇ ಮಾಯೆ. ಮೂಳೆ, ಮಾಂಸದ ತಡಿಕೆ. ಒಡೆದು ಹೋಗುವ ಮಡಿಕೆ. ಇದರ ಬಗ್ಗೆ ಯಾವ ಮೋಹವನ್ನೂ ಇಟ್ಟುಕೊಳ್ಳದಿರುವುದೇ ಆಧ್ಯಾತ್ಮ ಎಂಬ ಭಾವನೆಗಳು ತುಂಬಿವೆ. ವಿರೂಪವಾಗುವ, ಮುಪ್ಪಾಗುವ, ರೋಗಕ್ಕೀಡಾಗುವ, ಮುಂದೊಂದು ದಿನ ಸತ್ತೇ ಹೋಗುವ ದೇಹ ನಿಕೃಷ್ಟವಾದದ್ದು. ಎಲ್ಲಾ ದುಃಖಗಳಿಗೆ ದೇಹವೇ ಕಾರಣ. ಪಾಪ ಕಾರ್ಯಗಳಿಗೆ ಮುಂದಾಗುವ ಶರೀರವನ್ನು ಸ್ವಯಂ ಶಿಕ್ಷೆಯ ಮೂಲಕವೇ ನಿಗ್ರಹಿಸಬೇಕು, ಮನಸ್ಸನ್ನು ನಿಯಂತ್ರಿಸಲು ದೇಹ ದಂಡನೆಯ ಮಾರ್ಗವೇ ಸೂಕ್ತ ಎನ್ನುವುದು ಅನೇಕ ಧಾರ್ಮಿಕ ಸಿದ್ಧಾಂತಗಳ ಪ್ರಬಲ ನಂಬಿಕೆ.
ಈ ಮಾರ್ಗವನ್ನು ಶರಣರು ಸುತರಾಂ ಸಮ್ಮತಿಸುವುದಿಲ್ಲ. “ಜ್ಞಾನವನರಿದೆನೆಂದು ಕಾಯವ ದಂಡಿಸಲೇಕೆ?” ಎಂದು ಪ್ರಶ್ನಿಸುತ್ತಾರೆ ಮೋಳಿಗೆ ಮಾರಯ್ಯನವರು. ದೇಹ ಮತ್ತು ಆತ್ಮಗಳು ಪರಸ್ಪರ ಪೂರಕವಾದವು. “ಪ್ರಾಣಲಿಂಗಕ್ಕೆ ಕಾಯವೇ ಸಜ್ಜೆ” ಎಂದು ದೇಹದ ಮಹತ್ವವನ್ನು ಎತ್ತಿ ತೋರಿಸಿದ್ದಾರೆ ಅಲ್ಲಮಪ್ರಭುದೇವರು. ಚೈತನ್ಯದ ನಿಜವಾದ ನಿವಾಸ ದೇಹ. ದೇಹವಿಲ್ಲದೆ ಪ್ರಾಣಕ್ಕೆ ಆಶ್ರಯವಿಲ್ಲ. ಆದ್ದರಿಂದ ಇದನ್ನು ನಿರ್ಲಕ್ಷಿಸಲಾಗದು. ಹೀಗಾಗಿ ದೇಹವನ್ನು ದೇವಾಲಯವೆಂದರು ಶರಣರು.
ಸತ್ತ ಮೇಲೆ ಸಿಗುವ ಮೋಕ್ಷ ಸಂಪಾದನೆಗೆ ಶರಣರು ಗಮನ ಕೊಡಲಿಲ್ಲ. ಈ ದೇಹ ಇರುವಾಗಲೇ ಜೀವವು ದೇವನೊಂದಿಗೆ ಐಕ್ಯವನ್ನು ಅನುಭವಿಸಬೇಕು, ಅಂದರೆ ಸಮಷ್ಟಿಯ ರೂಪವೇ ತಾನೆಂಬುದನ್ನು ಅನುಭವಿಸಬೇಕು, ಆನಂದಿಸಬೇಕು. ಅಂಗ ಮತ್ತು ಲಿಂಗದಲ್ಲಿ ಅಥವಾ ದೇಹ ಮತ್ತು ದೇವನಲ್ಲಿ ಅಥವಾ ಪಿಂಡಾಂಡ ಮತ್ತು ಬ್ರಹ್ಮಾಂಡಗಳಲ್ಲಿ ಐಕ್ಯತೆಯನ್ನು ಸಾಧಿಸಿದ ಶರಣರ ಮಾರ್ಗ ವಿನೂತನವಾದದ್ದು. ಅವರದು ಲಿಂಗಾಂಗ ಯೋಗ. ಲಿಂಗ ಮತ್ತು ಅಂಗಗಳ ಸಮನ್ವಯ, ಸಾಮರಸ್ಯ. ಆದ್ದರಿಂದ ದೇಹವನ್ನು ಸರ್ವಾಂಗ ಲಿಂಗವಾಗಿಸುವ ಹಾದಿ ತೋರಿಸಿಕೊಟ್ಟರು. ಪ್ರತಿ ಅಂಗಗಳಲ್ಲಿ ಲಿಂಗ ಪ್ರತಿಷ್ಟಾಪನೆಯ ಸೂತ್ರ ನೀಡಿದರು.
ಭೌತಿಕದತ್ತಲೇ ಸದಾ ವಾಲುವ ದೇಹವನ್ನು ಅಕ್ಷರಶಃ ದೇಗುಲವಾಗಿಸಿಕೊಳ್ಳುವುದು ಸಾಧ್ಯವೇ? ಏಕೆಂದರೆ ಜಗತ್ತು ದೇಹದ ಸುತ್ತಲೇ ಗಿರಕಿ ಹೊಡೆಯುತ್ತಿದೆ. ಶರೀರದ ಬೇಕು ಬೇಡಗಳನ್ನು ಪೂರೈಸುವುದರಲ್ಲೇ ಅದು ಮಗ್ನ. ದೈಹಿಕ ಆಕರ್ಷಣೆಗೇ ಇಲ್ಲಿ ಮನ್ನಣೆ. ದೇಹಕ್ಕೆ ತನ್ನ ಸುಖ- ಸಮೃದ್ಧಿಯ ಕಡೆಗೇ ವಿಶೇಷ ಆಸಕ್ತಿ. ಅದರ ಆಸೆ-ಚಪಲಗಳು ಅನಂತ. ಅದರೊಳಗಿನ ಜಂಜಾಟಗಳು, ಹೊಯ್ದಾಟಗಳು, ತಾಪತ್ರಯಗಳು, ಆಸೆಯ ಜಾಲಗಳು ಅಗಣಿತ. ಹೀಗೆ ದೇಹ ಪ್ರಕೃತಿಯು ಜೀವಕ್ಕೆ ಒಡ್ಡುವ ಪರೀಕ್ಷೆಗಳು, ಸವಾಲುಗಳು ಒಂದೆರಡಲ್ಲ. ಕದಳಿಯ ಕಾಡಿನಂತೆ. ಸಹಜವಾದ ದೈಹಿಕ ಪ್ರಕೃತಿ ಗುಣಗಳನ್ನು ಗೆಲ್ಲುವುದೆಂದರೆ ಸಾಮಾನ್ಯವೇ? ಕಾಯವೆಂಬ ಕದಳಿ… ಎನ್ನುವ ವಚನದಲ್ಲಿ ದೇಹದಲ್ಲಿ ನಡೆಯುವ ಸಕಲ ವಿದ್ಯಮಾನಗಳನ್ನು ಪ್ರಖರವಾಗಿ ತೋರಿಸುತ್ತಾರೆ ಅಲ್ಲಮರು. ಪಂಚೇಂದ್ರಿಯಗಳೆಂಬ ವಿಷಯದ ಬಿರು ಮಳೆಯನ್ನು, ಅಷ್ಟಮದಂಗಳೆಂಬ ಮದಗಜಗಳನ್ನು ಎದುರಿಸಿ ಕಾದಾಡಿ ಗೆಲ್ಲುವುದು ಜೀವಕ್ಕೆ ಸುಲಭದ ಮಾತಲ್ಲ. ಕನಕ, ಕೀರ್ತಿ ಮತ್ತು ಕಾಮನೆಗಳ ಜಾಲದಲ್ಲಿ ಬಂಧಿಯಾದ ದೇಹ ಅದರಾಚೆಗೆ ಚಿಂತಿಸಲಾರದು. ಕರಣಂಗಳಲ್ಲಿ ಲಾಲಸೆ, ಭೋಗ- ವೈಭೋಗಗಳ ವ್ಯಾಮೋಹ ತುಂಬಿಕೊಂಡರೆ ಆತ್ಮ ಜ್ಞಾನ, ಸ್ವಯಂ ಜ್ಞಾನ ಸಿದ್ಧಿಸಿ ದೇಹ ದೇವಾಲಯವಾಗುವುದು ಹೇಗೆ?
ಶರೀರ ಎಷ್ಟು ಉಪದ್ರವಕಾರಿಯೋ ಅದಕ್ಕಿಂತ ಮಿಗಿಲಾಗಿ ಅದೊಂದು ಅಸಾಮಾನ್ಯ ಸಾಧನ. ಪ್ರಕೃತಿಯ ರೂಪಾಂತರ ಗುಣದ ಒಂದು ಅದ್ಭುತ ಸಂಯೋಜನೆ. ಪ್ರಚಂಡ ಬುದ್ಧಿವಂತಿಕೆಯ ಜೊತೆಗೆ ನಾಡಿ, ಚಕ್ರಗಳ ಶಕ್ತಿಗಳು ಇಲ್ಲಿ ಗೌಪ್ಯವಾಗಿವೆ. ಅಖಂಡ ವಿಶ್ವಕ್ಕೆ ಕಾರಣವಾದ ತತ್ವಗಳು ಈ ದೇಹಕ್ಕೂ ಕಾರಣವಾಗಿವೆ. ವಿಶ್ವಕ್ಕೆ ಅನ್ವಯಿಸುವುದೆಲ್ಲವೂ ಸೂಕ್ಷ್ಮಾತಿ ಸೂಕ್ಷ್ಮದ ರೂಪದಲ್ಲಿ ದೇಹಕ್ಕೂ ಅನ್ವಯಿಸಬೇಕು. ಅದಕ್ಕೆ ಶರಣರು ದೇಹಕ್ಕೆ ಬಹಳ ಪ್ರಾಮುಖ್ಯತೆ ಕೊಡುತ್ತಾರೆ. ದೇಹವನ್ನು ಪವಿತ್ರವೆಂದು ಭಾವಿಸುತ್ತಾರೆ. ಆತ್ಮವನ್ನರಿಯಲು ಹೊರಡುವವರು ದೇಹವನ್ನು ನಿರ್ಲಕ್ಷಿಸಲಾಗದು. ದೇಹದ ಮೂಲಕವೇ ಆತ್ಮವನ್ನರಿಯಬೇಕು. ಶರೀರ ರಚನಾ ವೈಖರಿಯನ್ನೂ, ಇದರ ಮೂಲಭೂತ ಕಾರ್ಯ ಸ್ವರೂಪವನ್ನು ಅವಶ್ಯವಾಗಿ ತಿಳಿಯಲೇ ಬೇಕು. ಅಂಗ ಸಹಕರಿಸದೆ ಆತ್ಮ ಸಾಧನೆ ಸಾಧ್ಯವಿಲ್ಲ. ಆದ್ದರಿಂದ ಶರೀರ ವಿಜ್ಞಾನದ ಕುರಿತು ಮಹತ್ತರವಾದ ಕೈಪಿಡಿಯಾಗಿ ‘ಕರಣ ಹಸಿಗೆ’ಯನ್ನು ಬರೆಯುತ್ತಾರೆ ಚೆನ್ನಬಸವಣ್ಣನವರು. ಆಧ್ಯಾತ್ಮಿಕ ಪರಿಕಲ್ಪನೆಯಲ್ಲಿ ದೇಹ ವಿಜ್ಞಾನದ ರಹಸ್ಯವನ್ನು ಇಲ್ಲಿ ಎಳೆಎಳೆಯಾಗಿ ವಿವರಿಸಿದ್ದಾರೆ.
ಜೀವವು ತನ್ನ ಸ್ವರೂಪ ಜ್ಞಾನ ಪಡೆಯಲು ದೇಹದ ಮಿತಿಗಳನ್ನು ದಾಟಿ ಮುನ್ನಡೆಯಬೇಕು. ಇಲ್ಲವಾದರೆ ಕರಣೇಂದ್ರಿಯಗಳ ಸುಖವನ್ನೇ ಸರ್ವಸ್ವವೆಂಬ ಭ್ರಮೆಗೆ ಸಿಲುಕಿಕೊಳ್ಳುತ್ತದೆ. ಬಾಹ್ಯ ಸುಖಗಳಲ್ಲೇ ಬದುಕು ಸವೆಸಿಬಿಡುತ್ತದೆ. ದೇಹಭಾವವುಳ್ಳವರ ಆದ್ಯತೆಗಳೇ ಬೇರೆ. ಅಂಥವರು ಶೃಂಗಾರದಲ್ಲೇ ಮುಳುಗಿ ಹೋಗಿರುತ್ತಾರೆ. ಅಂಗದ ಮಾಟದಲ್ಲೇ ಸಮಯ ಕಳೆಯುತ್ತಾರೆ. ಅವರ ಎಲ್ಲ ಕ್ರಿಯೆಗಳ ಕೇಂದ್ರ ದೇಹ ಸುಖವೇ ಆಗಿರುತ್ತದೆ. ಇಂಥ ವ್ಯಾಮೋಹಿಗಳನ್ನು ‘ಅಂಗಜೀವಿಗಳು’ ಎಂದು ಸಂಬೋಧಿಸುತ್ತಾರೆ ಪ್ರಭುದೇವರು. ಕಾಯದ ಬಗ್ಗೆ ತೀವ್ರ ಮಮಕಾರವುಳ್ಳ ಇವರು ಉದರಪೋಷಕರು. ಅಹಂ, ಅಭಿಮಾನಗಳನ್ನು ರೋಮ ರೋಮದಲ್ಲೂ ತುಂಬಿಕೊಂಡವರು. ಆಸೆ ಆಕಾಂಕ್ಷೆಗಳ ದಾಸರು. ದೈಹಿಕ ಭೋಗೋಪಭೋಗಗಳೇ ಇವರ ಸರ್ವಸ್ವ. ವೈರಾಗ್ಯದ ಉನ್ನತ ಮನಸ್ಥಿತಿಯಲ್ಲಿ ಅಕ್ಕಮಹಾದೇವಿ ದೇಹವನ್ನು “ಅಮೇಧ್ಯದ ಮಡಿಕೆ, ಮೂತ್ರದ ಕುಡಿಕೆ, ಎಲುವಿನ ತಡಿಕೆ…” ಎಂದಿರುವುದು ಕಾಯವನ್ನೇ ನಚ್ಚಿದವರ ಕಣ್ಣು ತೆರೆಸಲು. ಇಂಥವರಿಗೆ “ಕಾಯವಿಡಿದು ಲಿಂಗವ ಮುಟ್ಟಿಹೆ” ಎನ್ನುವುದು ಶುದ್ಧ ಭ್ರಮೆ ಎಂಬುದು ಅಲ್ಲಮರ ಎಚ್ಚರಿಕೆ. ಆದ್ದರಿಂದ ದೇಹ ಪ್ರಜ್ಞೆಯಿಂದ ಮೊದಲು ಬಿಡಿಸಿಕೊಳ್ಳಬೇಕು. ಆಗ ಜೀವದ ಆಂತರಿಕ ಪಯಣ ಆರಂಭ.
ದೇಹ ಭಾವ ಅಳಿಯುವುದೆಂದರೆ ಭಾವನೆಗಳನ್ನೆಲ್ಲ ಕಳೆದುಕೊಂಡು ನಿಸ್ಸತ್ವವಾಗುವುದೆಂದಲ್ಲ. ಇಂದ್ರಿಯಗಳ ಉಪಟಳವನ್ನು ನಿಗ್ರಹಿಸುವುದು ಕೂಡ ಪರಿಹಾರವಲ್ಲ. ನಿಗ್ರಹ ಮಾಡುವುದರಿಂದ ಸಮಸ್ಯೆಗಳು ಮತ್ತಷ್ಟು ಬೆಳೆಯುತ್ತವೆ. ಕರಣಂಗಳಿಗೆ ಅಂಟಿದ ವಿಷಯಾದಿಗಳ ಕಮಟನ್ನು ಬಿಡಿಸಿಕೊಳ್ಳಬೇಕು. ಆಗ ದೇಹದಲ್ಲಿ ಭಕ್ತಿಯ ತೇಜ, ಜ್ಞಾನದ ಹೊಳಪು ತುಂಬಿಕೊಳ್ಳುತ್ತವೆ. ದೇಹದ ಅಭಿಮಾನ ಮತ್ತು ವ್ಯಾಮೋಹಗಳನ್ನು ಕಳೆದುಕೊಳ್ಳದೆ ಭಕ್ತಿಯ ಮಾಡಲು ಸಾಧ್ಯವಿಲ್ಲ. ಅಗತ್ಯಗಳು ಬೇರೆ, ಆಸೆಗಳು ಬೇರೆ. ಸಂಯಮಕ್ಕೂ ಸ್ವೇಚ್ಛೆಗೂ ನೆಲ ಮುಗಿಲಿನ ಅಂತರ. ವಿಷಯ ವಿರಾಗ ಅಳವಡದೆ ಅಂತರ್ ನಿರೀಕ್ಷಣೆ ಅಸಾಧ್ಯ. ವೈರಾಗ್ಯ ಮತ್ತು ವಿಷಯಾಸಕ್ತಿ ಎರಡೂ ಅತಿರೇಕಗಳೇ. ಇವೆರಡಕ್ಕಿಂತಲೂ ಭಿನ್ನ ಶರಣರ ದೃಷ್ಟಿಕೋನ. ಅವರ ಕಾಯ ಸಿದ್ಧಾಂತದ ಒಂದು ಚಿತ್ರಣ ಇಲ್ಲಿದೆ:
ಒಲ್ಲೆನೆಂಬುದು ವೈರಾಗ್ಯ, ಒಲಿವೆನೆಂಬುದು ಕಾಯಗುಣ.
ಆವ ಪದಾರ್ಥವಾದಡೇನು ತಾನಿದ್ದೆಡೆಗೆ ಬಂದುದ
ಲಿಂಗಾರ್ಪಿತವ ಮಾಡಿ ಭೋಗಿಸುವುದೆ ಆಚಾರ.
ಕೂಡಲಸಂಗಮದೇವರನೊಲಿಸ ಬಂದ
ಪ್ರಸಾದಕಾಯವ ಕೆಡಿಸಲಾಗದು.
ಅನೈತಿಕ ಹಿನ್ನೆಲೆಯಿಂದ ಬಂದದ್ದು ಪ್ರಸಾದಕ್ಕೆ ಯೋಗ್ಯವಾಗುವುದಿಲ್ಲ. ಹೀಗಾಗಿ ನೈತಿಕ ಹಿನ್ನೆಲೆಯಲ್ಲಿ ಯಾವುದೇ ಪದಾರ್ಥ ನಾವು ಬಯಸದೇ ನಮ್ಮಲ್ಲಿಗೆ ಬಂದರೆ, ಅದನ್ನು ದೇವನ ಅನುಗ್ರಹವೆಂದು ಸ್ವೀಕರಿಸಬೇಕು. ಅದೇ ನಿಜವಾದ ನಡೆ. ಈ ದೇಹವು ದೇವನನ್ನು ಒಲಿಸಲು ಬಂದ ಪ್ರಸಾದಕಾಯ ಎನ್ನುತ್ತಾರೆ ಬಸವಣ್ಣನವರು. ಇದರ ಬಗ್ಗೆ ತಾತ್ಸಾರವಾಗಲಿ, ವಿಪರೀತ ವ್ಯಾಮೋಹವಾಗಲಿ ಎರಡೂ ಸರಿಯಲ್ಲ. ದೈಹಿಕ ಸುಖವನ್ನು ಪ್ರಸಾದದ ದೃಷ್ಟಿಯಿಂದ ನೋಡಲು ಕಲಿಯಬೇಕು.
ದೇಹ ಪ್ರಸಾದಕಾಯವಾಗುವುದು ಹೇಗೆ? ಜೀವಕ್ಕೆ ಇದೊಂದು ಸವಾಲಿನ ಪ್ರಕ್ರಿಯೆ.
ಮೊದಲ ಹಂತದಲ್ಲಿ ದೇಹವನ್ನು ಮೆತ್ತಿಕೊಂಡ ವಿಷಯಾಸಕ್ತಿಗಳ ಎಲ್ಲ ಆವರಣಗಳಿಂದ ಬಿಡುಗಡೆ ಪಡೆಯಬೇಕು. ಅಂದರೆ ಇಂದ್ರಿಯಗಳ ಆಸಕ್ತಿಗಳನ್ನು ಸರಿಯಾದ ಹಾದಿಯಲ್ಲಿರಿಸಬೇಕು. ಚಿಂತೆ, ಭ್ರಾಂತಿ, ವ್ಯಸನ, ದುಃಖಗಳನ್ನು ಮೆತ್ತಿಕೊಂಡ ದೇಹ ತನ್ನ ನಿಜವಾದ ಅಸ್ತಿತ್ವವನ್ನೇ ಮರೆತು ಬಿಟ್ಟಿದೆ. ಇದಕ್ಕೆ ‘ಕಾಯದ ದಂದುಗ’ ಎನ್ನುವರು. ದೇಹ ವ್ಯಾಮೋಹವನ್ನು ಬಿಡಿಸಿಕೊಂಡಾಗ ಜೀವದ ಹೊಯ್ದಾಟಗಳು ಸ್ತಬ್ಧವಾಗಿ ಬಿಡುತ್ತವೆ. ಪ್ರಾಪಂಚಿಕ ಕಷ್ಟನಷ್ಟಗಳು ಗಣನೆಗೇ ಬರುವುದಿಲ್ಲ. ಇಂಥ ಸ್ಥಿತಿಗೆ ‘ಕಾಯ ಪಲ್ಲಟ’ ಎನ್ನುವ ಶಬ್ದವನ್ನು ಶರಣರು ಬಳಸುತ್ತಾರೆ. ಸ್ಥಿತಪ್ರಜ್ಞ ಮನಸ್ಥಿತಿಯಲ್ಲಿ ಸಾವು ನೋವುಗಳ ವೇದನೆಯನ್ನು ಜೀವ ಮೀರಿ ಬಿಡುತ್ತದೆ. ಅದೊಂದು ಯಾವ ವಿಕಲ್ಪಗಳಿಗೂ ಒಳಗಾಗದ ಸ್ಥಿತಿ, ನಿರ್ವಿಕಲ್ಪ ಸ್ಥಿತಿ. ಕಾಯಗುಣ ನಾಸ್ತಿಯಾದಾತನೇ ಭಕ್ತ.
ಮುಂದಿನ ಹಂತದಲ್ಲಿ ದೇಹವನ್ನು, ದೇಹದ ಭಾವವನ್ನು ಲಿಂಗಕ್ಕೆ ಸಮರ್ಪಿಸುವುದು. ಅಂದರೆ ಸಮಷ್ಟಿಯ ಹಿತಕ್ಕಾಗಿ ಜೀವನವನ್ನು ಸವೆಸಬೇಕು. ಆಗಲೇ ಅಂಗವು ಲಿಂಗವಾಗುವುದು. ಅದಕ್ಕೆ ಒಕ್ಕಪ್ರಸಾದ ಎನ್ನುವರು. ದೇಹ ಪ್ರಸಾದಮಯವಾಗುವುದೆಂದರೆ ಇದೇ. “ತನುಗುಣಂಗಳ ಕಳೆದು ಪ್ರಸಾದ ಕಾಯವ ಮಾಡಬೇಕಯ್ಯ” ಎನ್ನುತ್ತಾರೆ ಚೆನ್ನಬಸವಣ್ಣ. ಇದನ್ನೇ, “ಲಿಂಗ ಗುಣಗಳ ತಿಳಿದು ಅಂಗ ಗುಣಗಳನತಿಗಳೆದು ಲಿಂಗವಾದುದೇ ಸ್ವರ್ಗ” ಎನ್ನುತ್ತಾರೆ ಸಿದ್ಧರಾಮೇಶ್ವರರು. ಶರಣರು ಬಾಹ್ಯ ಪದಾರ್ಥಗಳ ನೈವೇದ್ಯವನ್ನು ಒಪ್ಪುವುದಿಲ್ಲ. ಸಮಷ್ಟಿಯ ಸೇವೆಗೆ ದೇಹವನ್ನೇ ಸಮರ್ಪಿಸಬೇಕು. ಅದು ನಿಜವಾದ ನೈವೇದ್ಯ. ದೇಹ, ಮನಸ್ಸು ಮತ್ತು ಜೀವ ಭಾವಗಳನ್ನು ಲೋಕಕ್ಕೆ ನಿವೇದಿಸುವುದು. ಆಗ ಪ್ರಾಪಂಚಿಕ ವಿಷಯ, ವ್ಯಾಮೋಹಗಳಿಂದ ಜೀವನು ಮುಕ್ತನಾಗುತ್ತಾನೆ. ಅಂಥ ದೇಹವೇ ದೇವಾಲಯ, ಲಿಂಗದ ನೆಲೆ. ಹೀಗೆ ದೇಹ ದೇವಾಲಯವಾದಾಗ ಜೀವಕ್ಕೆ ತನ್ನ ಸ್ವರೂಪ ಜ್ಞಾನ ಲಭ್ಯವಾಗುತ್ತದೆ
“ಅರಗಿನ ದೇವಾಲಯದಲ್ಲಿ ಒಂದು ಉರಿಯ ಲಿಂಗವ ಕಂಡೆ”- ಎಂಬ ಪ್ರಭುದೇವರ ಮಾತು ಗಮನಿಸಿ. ಇಲ್ಲಿ ದೇಹವನ್ನು ಅವರು ಅರಗಿನ ಮನೆಗೆ ಹೋಲಿಸುತ್ತಾರೆ. ಅಂದರೆ ಶೃಂಗಾರ ಮತ್ತು ಆಧ್ಯಾತ್ಮ ಎರಡರ ಸಾಧ್ಯತೆಗಳೂ ಈ ದೇಹಕ್ಕಿವೆ. ಅರಗಿಗೆ ಉರಿಯನ್ನು ಹಿಡಿಯುವ ಶಕ್ತಿ ಇಲ್ಲ. ಉರಿಯ ಪ್ರಖರತೆಗೆ ಅದು ಕ್ಷಣಾರ್ಧದಲ್ಲೇ ಭಸ್ಮವಾಗುವುದು. ಅದು ಪ್ರಕೃತಿಯ ಧರ್ಮ. ಆದರೆ ಪರಮಾಶ್ಚರ್ಯವೆಂಬಂತೆ ಅರಗಿನ ದೇಹ ಉರಿಯನ್ನು ಒಡಲಲ್ಲಿ ಧರಿಸಿಕೊಂಡಿದೆ. ಅದು ದೇಹದ ಶಕ್ತಿಯೋ? ಉರಿಯ ಉದಾರತೆಯೋ?…
ಕಾಯ ಮತ್ತು ಆತ್ಮದ ಸಂಬಂಧವನ್ನು ಕುರಿತು ಶರಣ ಉಪ್ಪರಗುಡಿಯ ಸೋವಿದೇವಯ್ಯನವರ ವಚನ ಮಾರ್ಮಿಕವಾಗಿದೆ.
ಕಾಯದ ಸಂಗದಿಂದ ಆತ್ಮನು ಭವಕ್ಕೆ ಬಪ್ಪುದೊ ?
ಆತ್ಮನ ಸಂಗದಿಂದ ಕಾಯ ಲಯಕ್ಕೊಳಗಪ್ಪುದೊ ?
ಕಾಯ ಜೀವದಿಂದಳಿವೊ ? ಜೀವ ಕಾಯದಿಂದಳಿವೋ ?
ಅಲ್ಲ, ಉಭಯವೂ ಏಕಸ್ಥದಿಂದ ಪ್ರಳಯವೋ ?
ಎಂಬುದ ಅಂತಸ್ಥದಿಂದ ತಿಳಿದು,
ಕಾಯಕ್ಕೂ ಜೀವಕ್ಕೂ ಭೇದವುಂಟೆಂದಡೆ,
ಒಂದ ಬಿಟ್ಟೊಂದು ಇರದು.
ಇಲ್ಲಾ ಎಂದೆಡೆ ಆತ್ಮ ವಾಯುಸ್ವರೂಪ, ಘಟ ಸಾಕಾರಸ್ವರೂಪ,
ಗುಣ-ಗಂಧ, ಕುಸುಮ-ಗಂಧ, ತಿಲ-ಸಾರದ ಸಂಗದಂತೆ.
ಇಂತೀ ಉಭಯಭಾವದ ಭೇದವನರಿದ ಪರಮ[ಸುಖ]
ಗಾರುಡೇಶ್ವರಲಿಂಗವನರಿದವಂಗಲ್ಲದೆ ಸಾಧ್ಯವಲ್ಲ.
ಕಾಯ ಇರುವ ತನಕ ಕರ್ಮದ ಸಾಂಗತ್ಯ ತಪ್ಪಿದ್ದಲ್ಲ. ಅದು ಪ್ರಕೃತಿಯ ನಿಯಮ. ಹೀಗಾಗಿ ಆತ್ಮ ಮತ್ತೆ ಜೀವ ಧರಿಸಲೇ ಬೇಕಾಗುವುದೇ? ಆತ್ಮದ ಸಂಗದಿಂದ ದೇಹ ತನ್ನತನವನ್ನು ಕಳೆದುಕೊಳ್ಳುವುದೇ? ಜೀವ ಹೋಗಿ ದೇಹ ನಿಷ್ಕ್ರಿಯವಾಗುವುದೋ? ದೇಹ ಕುಸಿದು ಪ್ರಾಣ ಹೋಗುವುದೋ? ಅಥವಾ ಇವೆರಡರ ಲಯಕ್ಕೆ ‘ಏಕಮೇವ ಶಕ್ತಿ’ಯೊಂದು ಕಾರಣವೋ? ಎಂದು ತಾರ್ಕಿಕ ಪ್ರಶ್ನೆಗಳನ್ನು ಹಾಕುತ್ತಾ ಇವೆಲ್ಲಕೂ ಉತ್ತರ ಅಂತರಾಳದಲ್ಲಿ ಶೋಧಿಸಬೇಕು… ವಾಯು ಸ್ವರೂಪದ ಆತ್ಮಕ್ಕೂ, ಸಾಕಾರ ರೂಪಿಯಾದ ದೇಹಕ್ಕೂ ಇರುವ ಸಂಬಂಧವನ್ನು ಅನುಭವಿಸಿಯೇ ಅರಿಯಬೇಕು. ತುರುಗಾಹಿ ರಾಮಣ್ಣ ಹೇಳುತ್ತಾರೆ: “ಆತ್ಮಂಗೆ ಕಾಯವೇ ರೂಪು, ಆ ಕಾಯಕ್ಕೆ ಆತ್ಮನೆ ಹಾಹೆ.”
ಕರ್ಮದಿಂದಾದ ಕಾಯವನ್ನು ಸವೆಸುವ ಒಂದು ವಿಶಿಷ್ಟ ಬಗೆಯನ್ನು ಬಸವಣ್ಣನವರು ತೋರಿಸಿಕೊಟ್ಟರು. ಅದೇ ಕಾಯಕ ಮತ್ತು ದಾಸೋಹ. ಸಂಸಾರಕ್ಕಾಗಿ ದುಡಿದು, ಗಳಿಸಿ, ಎಲ್ಲವನ್ನೂ ನಾವಷ್ಟೇ ಅನುಭವಿಸುವುದಲ್ಲ. ನಾನು ಮಾಡುವ ಕಾಯಕದ ಫಲ ನನ್ನೊಬ್ಬನದು ಮಾತ್ರವಲ್ಲ, ಗುರು ಲಿಂಗ ಜಂಗಮಕ್ಕೆ ಅದರಲ್ಲಿ ಪಾಲಿದೆ ಎಂಬ ಉದಾತ್ತ ಮನೋಭಾವನೆವುಳ್ಳದ್ದು ಶರಣರ ಕರ್ಮಯೋಗ. ಶರೀರ ಶ್ರಮವು ದೈಹಿಕ ಆರೋಗ್ಯಕ್ಕೂ, ಮಾನ��ಿಕ ವಿಕಾಸಕ್ಕೂ ಅವಶ್ಯಕ. “ತನು, ಮನ ಬಳಲಿಸಿ ತಂದು ದಾಸೋಹವ ಮಾಡುವ ಸದ್ಭಕ್ತನ ತೋರಯ್ಯ” ಎನ್ನುತ್ತಾರೆ ಬಸವಣ್ಣನವರು. ಆದರೆ ಮಾಡಿದೆನೆಂಬುದು ಮನದಲ್ಲಿ ಮೂಡಬಾರದು. ಅದು ಅಹಂಕಾರಕ್ಕೆ ದಾರಿ ಮಾಡಿ ಕೊಡಬಾರದು, ಆಸೆಯ ಮೂಲವಾಗಬಾರದು. ಸ್ವಾರ್ಥಕ್ಕೆ ಮುನ್ನುಡಿ ಬರೆಯಬಾರದು. ಅಲ್ಲಿಗೆ ಜೀವವು ಅಂಗಗುಣಗಳನ್ನು ಸಂಪೂರ್ಣ ಕಳೆದುಕೊಂಡಂತೆ.
ಘನ (ಮ್ಯಾಟರ್) ಮತ್ತು ಚೈತನ್ಯ (ಎನರ್ಜಿ)ದ ಸವಿಸ್ತಾರವೇ ಈ ವಿಶ್ವ. ಕ್ವಾಂಟಮ್ ಭೌತಶಾಸ್ತ್ರದ ಪ್ರಕಾರ, ವಿಶ್ವದಲ್ಲೆಲ್ಲ ತುಂಬಿರುವುದು ಚೈತನ್ಯವೇ. ಘನವೂ ಚೈತನ್ಯದ ಮತ್ತೊಂದು ರೂಪ. ಅನುಭಾವಿಗಳ ದರ್ಶನವೂ ಹೀಗೇ ಇದೆ. ಭಿನ್ನವಾಗಿ ತೋರಿದರೂ ಘನ- ಚೈತನ್ಯಗಳ ನಡುವೆ ವ್ಯತ್ಯಾಸವೇ ಇಲ್ಲ. “ಅಂಗವೆಂದಡೆ ಲಿಂಗದೊಳಡಗಿತ್ತು; ಲಿಂಗವೆಂದಡೆ ಅಂಗದೊಳಡಗಿತ್ತು”- ಎನ್ನುತ್ತಾರೆ ಮಹಾ ಅನುಭಾವಿ ಹಡಪದಪ್ಪಣ್ಣಗಳ ಪತ್ನಿ ಲಿಂಗಮ್ಮ. ಆಗ ಅಂಗ-ಲಿಂಗಗಳು ಅಭಿನ್ನ. ಅಂಗದ ಒಳ ಇರುವಿಕೆ ಲಿಂಗವಾದರೆ, ಲಿಂಗದ ಹೊರ ತೋರಿಕೆಯೇ ಅಂಗ. ಪ್ರಾಣಲಿಂಗದೊಡನೆ ಸಾಮರಸ್ಯ ಪಡೆದ ಬಳಿಕ ಕಾಯ ಕಾಯವಾಗಿ ಉಳಿಯುವುದಿಲ್ಲ. “ನೆನೆ ನೆನೆ ಎಂದಡೆ ಏನ ನೆನೆವೆನಯ್ಯ, ಎನ್ನ ಕಾಯವೇ ಕೈಲಾಸವಾಯಿತ್ತು” ಎಂಬ ಸಂತೃಪ್ತಿ ಬಸವಣ್ಣನವರದು. ನಡೆ-ನುಡಿಗಳನ್ನು ಒಂದಾಗಿಸಿಕೊಂಡು, ಕಾಯಕ- ದಾಸೋಹಗಳ ಮಾರ್ಗದಲ್ಲಿ ಸಾಗಿಬಂದ ಶರಣನ ಕಾಯವೇ ಕೈಲಾಸ. ಏಕೆಂದರೆ ಆತ ನಡೆದುದೆಲ್ಲಾ ಪೂಜೆ, ನುಡಿದುದೆಲ್ಲಾ ಮಂತ್ರ. “ತನು ನಿಮ್ಮನಪ್ಪಿ ಮಹಾತನುವಾದ ಬಳಿಕ ತನುವೆಂಬುದು ಮತ್ತೆಲ್ಲಿಯದೋ” ಎಂಬ ಬಸವಣ್ಣನವರ ಮಾತನ್ನು ಗಮನಿಸಿದರೆ ಇದು ವೇದ್ಯವಾಗುತ್ತದೆ.
ಜೀವವು ಸಮಷ್ಟಿಯನ್ನು ಅಪ್ಪಲು ನೆರವಾಗುವ ಚಿಮ್ಮುಹಲಗೆಯೇ ದೇಹ. ತನ್ನ ಸೀಮಿತ ಪರಿಧಿಯಲ್ಲಿ ಸೀಮಾತೀತ ಸ್ವಾತಂತ್ರ್ಯವನ್ನು ಅನುಭವಿಸುವ ವಿಶಿಷ್ಟತೆ ದೇಹಕ್ಕಿದೆ. ಕಾಯವಂಚನೆಯನ್ನು ಕಟುವಾಗಿ ನಿರಾಕರಿಸುವ ಶರಣರು ಬದುಕನ್ನು, ಸಮಾಜವನ್ನು ಆಪ್ಯಾಯಮಾನವಾಗಿ ಪ್ರೀತಿಸಿದರು. ಅವರೆಂದೂ ಸನ್ಯಾಸವನ್ನು ಬೋಧಿಸಲಿಲ್ಲ. ವೈರಾಗ್ಯವನ್ನು ಪ್ರತಿಪಾದಿಸಲಿಲ್ಲ. ಕಾಯವನ್ನು ದಂಡಿಸದೇ ಅತಿರೇಕಗಳಿಂದ ಅದನ್ನು ಮುಕ್ತಗೊಳಿಸಿದರು. ಆರೋಗ್ಯಯುತ ಸಮಾಜಕ್ಕೆ ನಾಂದಿ ಹಾಡಿದರು. “ಎನ್ನ ಕಾಯಕ್ಕೆ ಬಪ್ಪ ಸುಖ ನಿಮಗರ್ಪಿತ” ಎನ್ನುವ ಪ್ರಸಾದ ಭಾವದಿಂದ ಬದುಕಿದರು. ಕಾಯ ಹಿಡಿದೂ ಮಾಯದ ಬಲೆಗೆ ಬೀಳದೆ ಅಮರರಾದರು.
Comments 1
padmalaya nagraj
May 4, 2019dharmika sankara beekara kaggattalu . anyaru namma nettiya melitta bhara. edannu hottukondu hudukidare bayalu sigalaradu