ಗ್ರಹಣ
ಗ್ರಹಣ ಹಿಡಿದದ್ದು ಯಾರಿಗೆ?
ರವಿಗೋ, ಶಶಿಗೋ, ಮೂರ್ಖನಿಗೋ?
ವಿಶಾಲಾಗಸದಿ ಸುತ್ತುವರು ಭೂರವಿಚಂದ್ರತಾರೆ
ಸೃಷ್ಟಿಯಲಿ ಸನಿಹವಿಲ್ಲ, ಸಂಬಂಧವುಂಟು!
ಸ್ಪರ್ಷ ಮೊದಲಿಲ್ಲ ನುಂಗುವುದೆಲ್ಲಿ, ಬಿಡುವುದೆಲ್ಲಿ?
ಇಷ್ಟದಿಂ ತಾವ್ ಸುತ್ತುವುದ ಬಿಡಲಿಲ್ಲನವರತ!
ಸರಳ ರೇಖೆಯ ಸರಳ ಜ್ಞಾನವ
ಸರಳವಾಗಿ ಅರಿಯಲಿಲ್ಲ ಮಾನವ
ಮರುಳುಗೊಂಡು ಮರುಳಾಗಿ ಸೆರೆಯಾದನಲ್ಲ
ಸೂರ್ಯಚಂದ್ರರ ರಾಹು ನುಂಗಿತೆಂದ ಭ್ರಮೆಯಲಿ!
ವಿಜ್ಞಾನವ ಹಿಂಗಿ ಬೆಳೆದ ಅಜ್ಞಾನ
ಸುಜ್ಞಾನವ ಬಿತ್ತಿ ಬೆಳೆಯಲಿಲ್ಲ ಮನದಿ
ಅಜ್ಞಾನದಿ ಮುಚ್ಚಿ ಮನದ ಕಿಟಕಿ ಬಾಗಿಲು
ಪ್ರಜ್ಞಾಹೀನ ಹುಸಿಯಾಚಾರ ವಿಚಾರ ಸುಳಿಯಿತಲ್ಲ!
ಕತ್ತಲು ಕವಿದು ಚಿತ್ತ ಚಂಚಲಿಸಿ
ಮತ್ತೆ ತೊಳೆದ ದೇಗುಲ, ಮೂರ್ತಿ
ಅತ್ತ ತೊಳೆಯಲಿಲ್ಲ ಮನದ ಮಲಿನ
ನಿತ್ಯಸತ್ಯದ ಸೊಬಗನರಿಯಲಿಲ್ಲ ಮಾನವ!
-ಹವೀಪ




