Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ವಚನಗಳ ನೆಲೆಯಲ್ಲಿ ವ್ಯಕ್ತಿತ್ವ ವಿಕಸನ
Share:
Articles July 10, 2025 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

ವಚನಗಳ ನೆಲೆಯಲ್ಲಿ ವ್ಯಕ್ತಿತ್ವ ವಿಕಸನ

ಅರಿಯದವರೊಡನೆ ಸಂಗವ ಮಾಡಿದಡೆ
ಕಲ್ಲ ಹೊಯ್ದು ಕಿಡಿಯ ತೆಗೆದುಕೊಂಬಂತೆ
ಬಲ್ಲವರೊಡನೆ ಸಂಗವ ಮಾಡಿದಡೆ
ಮೊಸರ ಹೊಸೆದು ಬೆಣ್ಣೆಯ ತೆಗೆದುಕೊಂಬಂತೆ
ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣರ ಸಂಗವ ಮಾಡಿದಡೆ
ಕರ್ಪೂರದ ಗಿರಿಯನುರಿಕೊಂಬಂತೆ.

ವ್ಯಕ್ತಿ ಎಂಥವರ ಸಂಗ ಮಾಡಬೇಕು, ಯಾರ ಸಂಗದಿಂದ ಏನೇನಾಗುತ್ತದೆ ಎನ್ನುವ ಸ್ಪಷ್ಟ ನಿರ್ದೇಶನ ಮಹಾದೇವಿಯಕ್ಕನವರ ಈ ವಚನದಲ್ಲಿದೆ. ವ್ಯಕ್ತಿಯ ವ್ಯಕ್ತಿತ್ವ ವಿಕಸನವಾಗಬೇಕು ಎಂದರೆ ಜ್ಞಾನಿಗಳ ಮತ್ತು ಶರಣರ ಸಂಗ ಮಾಡಬೇಕು ಎನ್ನುವ ರಾಜಮಾರ್ಗ ತೋರಿಸಿದ್ದಾರೆ. ವಿಕಸನ ಎಂದರೆ ಅಭ್ಯುದಯ, ಅಭಿವೃದ್ಧಿ, ಬೆಳವಣಿಗೆ, ಅರಳುವಿಕೆ. ಮಾನವ ದಾನವನಾಗದೆ ಮಹಾದೇವನಾಗಲು ಅವನ ವ್ಯಕ್ತಿತ್ವದಲ್ಲಿ ಕ್ಷಣಕ್ಷಣಕ್ಕೂ ಸಕಾರಾತ್ಮಕ ಬೆಳವಣಿಗೆ ಆಗಬೇಕು. ಅದೇ ಅಭಿವೃದ್ಧಿಗೆ ಪ್ರೇರಣೆ. ಇಂಥ ಅಭಿವೃದ್ಧಿಗೆ ಬೇಕಾದ ಸೂಳ್ನುಡಿಗಳು ವಚನಸಾಹಿತ್ಯದಲ್ಲಿ ಹೇರಳವಾಗಿವೆ. ಮಾನವನ ಬದುಕು ನಿಂತ ನೀರಲ್ಲ. ಅದು ನಿರಂತರ ಹರಿಯುವ ನೀರಿದ್ದಂತೆ. ಆದರೆ ಎಷ್ಟೋ ಜನ ನಿಂತ ನೀರಿನಂತಾಗಿಬಿಡುವರು. ಆಗ ಪ್ರಗತಿ ಕುಂಠಿತವಾಗುವುದು. ಅವರು ಜನರ ನಿಂದೆ, ಆಪಾದನೆ, ಅವಹೇಳನಕ್ಕೆ ಗುರಿಯಾಗಬಹುದು. ಮನುಷ್ಯ ಸ್ಥಾವರವಾಗದೆ ಸದಾ ಜಂಗಮವಾಗಬೇಕು. ಅದೇ ವ್ಯಕ್ತಿತ್ವ ವಿಕಸನಕ್ಕೆ ಸೋಪಾನ. ಮನುಷ್ಯ ಈ ಲೋಕಕ್ಕೆ ಬಂದಿರುವುದು ಹುಟ್ಟಿ ಸಾಯುವುದಕ್ಕಲ್ಲ. ಕೇವಲ ಉಂಡುಟ್ಟು ಮಜಾಮಾಡಲೂ ಅಲ್ಲ; ಸಾಧನೆ ಮಾಡಲು. ಅವನ ಕಣ್ಮುಂದೆ ಒಂದು ಆದರ್ಶದ ಗುರಿ ಇರಬೇಕು. ಆ ಗುರಿಯನ್ನು ಮುಟ್ಟಲು ಸತತ ಪ್ರಯತ್ನ ಮತ್ತು ಸಾಧನೆ ಮಾಡಬೇಕು. ಆಗಲೇ ವ್ಯಕ್ತಿತ್ವ ಅರಳುವುದು.

ಮನುಷ್ಯ ಯಾವ ಸಾಧನೆಯನ್ನೂ ಮಾಡದೆ ಸತ್ತರೆ ಸಾವಿಗೇ ಅವಮಾನ. ಸಾಧನೆ ಸ್ವಾರ್ಥದಿಂದ ಕೂಡಿರದೆ ಆತ್ಮಕಲ್ಯಾಣ ಮತ್ತು ಲೋಕಕಲ್ಯಾಣಕ್ಕೆ ಪೂರಕವಾಗಿರಬೇಕು. ಇರುವಷ್ಟು ಕಾಲ ನಮ್ಮ ಸುತ್ತಮುತ್ತ ಇರುವವರಿಗಾದರೂ ಬೇಕಾದವರಾಗಿ ಬಾಳಬೇಕು. ಅದೇ ವ್ಯಕ್ತಿತ್ವ ವಿಕಸನದ ಮೊದಲ ಹಂತ. ಅದನ್ನೇ ಬಸವಣ್ಣನವರು ‘ಕೂಡಲಸಂಗನ ಶರಣರ ವಚನದಲ್ಲಿ ಲೇಸೆನಿಸಿಕೊಂಡು ಒಂದು ದಿವಸ ಬದುಕಿದಡೇನೊ!’ ಎಂದಿದ್ದಾರೆ. ಮನುಷ್ಯ ಎಷ್ಟು ವರ್ಷ ಬದುಕಿದ ಎನ್ನುವುದಕ್ಕಿಂತ ಹೇಗೆ ಬದುಕಿದ ಎನ್ನುವುದು ಮುಖ್ಯ. ನಮ್ಮ ಸುತ್ತ ಇರುವ ಜನರಿಂದಲಾದರೂ ಒಳ್ಳೆಯ ವ್ಯಕ್ತಿ ಎನಿಸಿಕೊಂಡು ಕೆಲವೇ ಕಾಲ ಬದುಕಿದರೂ ಅದು ಸಾರ್ಥಕ ಜೀವನ. ಅದರಲ್ಲೂ ಶರಣರ ವಚನದಲ್ಲಿ ಲೇಸೆನಿಸಿಕೊಂಡು ಬದುಕಬೇಕು. ಒಬ್ಬ ವ್ಯಕ್ತಿ ಸತ್ಕಾರ್ಯ ಮಾಡದೆ ನೂರು ವರ್ಷ ಬಾಳಿದರೂ ಅವನು ಸತ್ತಹಾಗೆ. ಮನುಷ್ಯ ತನ್ನ ಅಂತಸ್ಸತ್ವ, ಆತ್ಮವಿಶ್ವಾಸವನ್ನು ಎಂದೂ ಬತ್ತಿಸಿಕೊಳ್ಳಬಾರದು. ಸಕಲ ಜೀವಾತ್ಮರ ಒಳಿತಿಗಾಗಿ ದುಡಿಯಬೇಕು. ನಡೆ, ನುಡಿ ಒಂದಾಗಿಸಿಕೊಂಡು ಮನ ಮತ್ತು ಮನದೊಡೆಯ ಶಿವ ಮೆಚ್ಚುವ ಕಾರ್ಯಗಳನ್ನೇ ಮಾಡಬೇಕು. ಅದೇ ವ್ಯಕ್ತಿತ್ವ ವಿಕಸನಕ್ಕೆ ದಾರಿ. ಈ ನೆಲೆಯಲ್ಲಿ ಬಸವಾದಿ ಶಿವಶರಣರ ವಚನಗಳು ದಿಕ್ಸೂಚಿಯಂತಿವೆ. ವಚನಗಳನ್ನು ಓದಿದರೆ, ಕಂಠಪಾಠ ಮಾಡಿದರೆ, ಉಪನ್ಯಾಸ ಅಥವಾ ಬರವಣಿಗೆಯ ಸರಕಾಗಿಸಿಕೊಂಡರೆ ಸಾಲದು. ಅವುಗಳ ಪಚನವಾಗುವುದು ಮುಖ್ಯ. ಪಚನ ಎಂದರೆ ವಚನಗಳ ಅಂತರಾರ್ಥ ಅರಿತು ಆಚರಣೆಯಲ್ಲಿ ಅಳವಡಿಸಿಕೊಳ್ಳುವುದು. ಆಗಲೇ ವ್ಯಕ್ತಿಯ ವ್ಯಕ್ತಿತ್ವ ವಿಕಸನವಾಗಲು ಸಾಧ್ಯ.

ಬಡತನಕ್ಕೆ ಉಂಬುವ ಚಿಂತೆ, ಉಣಲಾದರೆ ಉಡುವ ಚಿಂತೆ,
ಉಡಲಾದರೆ ಇಡುವ ಚಿಂತೆ, ಇಡಲಾದರೆ ಹೆಂಡಿರ ಚಿಂತೆ,
ಹೆಂಡಿರಾದರೆ ಮಕ್ಕಳ ಚಿಂತೆ, ಮಕ್ಕಳಾದರೆ ಬದುಕಿನ ಚಿಂತೆ,
ಬದುಕಾದರೆ ಕೇಡಿನ ಚಿಂತೆ, ಕೇಡಾದರೆ ಮರಣದ ಚಿಂತೆ,
ಇಂತೀ ಹಲವು ಚಿಂತೆಯಲ್ಲಿ ಇಪ್ಪವರ ಕಂಡೆನು,
ಶಿವನ ಚಿಂತೆಯಲ್ಲಿದ್ದವರೊಬ್ಬರನೂ ಕಾಣೆನೆಂದಾತ
ನಮ್ಮ ಅಂಬಿಗರ ಚೌಡಯ್ಯ ನಿಜಶರಣನು

ಚಿಂತೆ ಮತ್ತು ಚಿತೆಗೆ ಇರುವ ಅಂತರ ಒಂದು ಸೊನ್ನೆ ಮಾತ್ರ. ಚಿಂತೆ ಮನುಷ್ಯ ಜೀವಂತ ಇದ್ದಾಗಲೇ ಸುಟ್ಟರೆ ಚಿತೆ ಸತ್ತ ಮೇಲೆ ಸುಡುವುದು. ವಿವೇಕಿಯಾದವ ಚಿಂತೆಯನ್ನು ಚಿಂತನವನ್ನಾಗಿ ಮಾರ್ಪಡಿಸಿಕೊಳ್ಳುವನು. ಮನುಷ್ಯನಿಗೆ ಒಂದಿಲ್ಲೊಂದು ಚಿಂತೆ ಇದ್ದದ್ದೇ. ಬಡತನ ಇದ್ದಾಗ ಹೊಟ್ಟೆತುಂಬ ಅನ್ನ ಸಿಕ್ಕರೆ ಸಾಕು ಎನ್ನುವ ಚಿಂತೆ. ಅನ್ನ ದೊರೆಯುತ್ತಲೇ ತೊಡಲು ಬಟ್ಟೆ ಬೇಕಲ್ಲ ಎನ್ನುವ ಚಿಂತೆ. ಬಟ್ಟೆ ದೊರೆತಾಗ ಮದುವೆಯ ಚಿಂತೆ. ಮದುವೆ ಆದರೂ ತೃಪ್ತಿಯಿಲ್ಲ. ಮಕ್ಕಳಾಗಲಿಲ್ಲವಲ್ಲ ಎನ್ನುವ ಚಿಂತೆ. ಮಕ್ಕಳಾದರೆ ಅವರ ಬದುಕನ್ನು ಕಟ್ಟುವ ಚಿಂತೆ. ಇನ್ನಾವ ಚಿಂತೆಯೂ ಇಲ್ಲ; ಬದುಕು ಸುಖಮಯವಾಗಿದೆ ಎಂದರೆ ಕೇಡಿನ ಚಿಂತೆ. ತನಗೇ ಕೇಡಾದಾಗ ಇನ್ನು ಬದುಕಿ ಫಲವೇನು? ಸಾವು ಬಂದರೆ ಸಾಕು ಎನ್ನುವ ಚಿಂತೆ. ಇಂಥ ಚಿಂತೆಗಳನ್ನು ಬಿಟ್ಟು ಶಿವ ಚಿಂತನ ಮಾಡುವವರು ವಿರಳ. ಮನುಷ್ಯನಿಗೆ ಇರಬೇಕಾದ ಚಿಂತೆ ಯಾವುದು ಎನ್ನುವುದನ್ನು ಅಂಬಿಗರ ಚೌಡಯ್ಯನವರು ಸ್ಪಷ್ಟಪಡಿಸಿದ್ದಾರೆ. ಶಿವ ಚಿಂತನ ಇದ್ದರೆ ವ್ಯಕ್ತಿತ್ವ ವಿಕಸನ ಸಾಧ್ಯ.

ನಮ್ಮಲ್ಲಿ ಮನೋಮಾಲಿನ್ಯ, ಶಬ್ದಮಾಲಿನ್ಯ, ನೈತಿಕ ಮಾಲಿನ್ಯ, ಪರಿಸರ ಮಾಲಿನ್ಯ, ಬುದ್ಧಿ ಮಾಲಿನ್ಯ ಹೀಗೆ ಏನೆಲ್ಲ ಮಾಲಿನ್ಯಗಳಿವೆ. ಈ ಮಾಲಿನ್ಯ ನಿವಾರಣೆ ಆಗದಿದ್ದರೆ ವ್ಯಕ್ತಿತ್ವ ವಿಕಸನವಾಗಲು ಹೇಗೆ ಸಾಧ್ಯ? ಈ ದಿಕ್ಕಿನಲ್ಲಿ ಶರಣರ ವಚನಗಳು ಸಹಕಾರಿಯಾಗುವವು. ಅಂತೆಯೇ WHO (World Health Organization) ಜೀವನ ಕೌಶಲ್ಯ ಕುರಿತು ಕೆಲವು ವಿಚಾರಗಳನ್ನು ಹೇಳಿದೆ. ಜೀವನ ಕೌಶಲ್ಯಗಳ ಅನುಷ್ಠಾನವೇ ವ್ಯಕಿತ್ವ ವಿಕಸನ.

ಅವಲಂಬನೆಯಿಂದ ಸ್ವಾವಲಂಬನೆಯ ಕಡೆ: ವ್ಯಕ್ತಿತ್ವ ಅರಳಲು ಮನುಷ್ಯ ಪರಾವಲಂಬಿಯಾಗದೆ ಸ್ವಾವಲಂಬಿಯಾಗಿರಬೇಕು. ತಾನೇ ತನ್ನ ಅನ್ನ ಸಂಪಾದಿಸಬೇಕು. ಎಷ್ಟೇ ಶ್ರೀಮಂತನಾಗಿದ್ದರೂ ತನ್ನ ಕಾರ್ಯಗಳಿಗಾಗಿ ಮತ್ತೊಬ್ಬರನ್ನು ಅವಲಂಬಿಸುವುದು ವ್ಯಕ್ತಿತ್ವ ವಿಕಸನಕ್ಕೆ ಬಹುದೊಡ್ಡ ಪೆಟ್ಟು ಕೊಡುವುದು. ಹಾಗಂತ ಇತರರ ಸಹಕಾರ ಬೇಡವೆಂದಲ್ಲ. ಅದು ಅವರನ್ನು ಗುಲಾಮಗಿರಿಗೆ ತಳ್ಳಬಾರದು. ತನ್ನ ಪ್ರಗತಿಯಾಗಬೇಕೆಂದು ಇತರರ ಪ್ರಗತಿಗೆ ಧಕ್ಕೆ ತರುವುದಲ್ಲ. ತಾನೂ ಸುಖವಾಗಿದ್ದು ಇನ್ನೊಬ್ಬರ ಸುಖಕ್ಕೂ ಅವಕಾಶ ಕಲ್ಪಿಸಬೇಕು. ಇಂದು ಉದಾರೀಕರಣ, ಜಾಗತೀಕರಣ, ಖಾಸಗೀಕರಣದಿಂದ ಪ್ರತಿಯೊಬ್ಬರ ಬದುಕು ಯಾಂತ್ರೀಕೃತವಾಗುತ್ತಿದೆ. ಇದರಿಂದ ಹೊರಬರಲು ಅನ್ನ, ಅರಿವೆ, ಆಶ್ರಯ, ಅರಿವು ಮತ್ತು ಔಷಧಿ ಸರ್ವರಿಗೂ ಸಮಾನವಾಗಿ ದೊರೆಯುವಂತಾಗಬೇಕು. ಇದಕ್ಕೆ ಬೇಕಾದದ್ದು ದಯೆ, ಕರುಣೆ, ಪ್ರೀತಿ, ಅನುಕಂಪ. ಇದಕ್ಕೆ ಬಸವಣ್ಣನವರು ಹೇಳುವುದು:

ನಡೆಯಲರಿಯದೆ, ನುಡಿಯಲರಿಯದೆ
ಲಿಂಗವ ಪೂಜಿಸಿ ಫಲವೇನು? ಫಲವೇನು?
ಅವರ ದುಃಖವೆನ್ನ ದುಃಖ, ಅವರ ಸುಖವೆನ್ನ ಸುಖ.
ಕೂಡಲಸಂಗನ ಶರಣರ ಮನನೊಂದಡೆ
ಆನು ಬೆಂದೆನಯ್ಯಾ.

ಮನುಷ್ಯ ಏನೇ ಮಾಡಬೇಕೆಂದರೂ ಆತನ ನಡೆ- ನುಡಿ ಒಂದಾಗಿರಬೇಕು. ಹಾಗಿಲ್ಲದೆ ಲಿಂಗಪೂಜೆ ಮಾಡಿದರೂ ವ್ಯರ್ಥ. ವಾಸ್ತವವಾಗಿ ಲಿಂಗಪೂಜಕ ತನ್ನ ಸುತ್ತ ಇರುವವರ ಸುಖವೇ ತನ್ನ ಸುಖ, ಅವರ ದುಃಖವೇ ತನ್ನ ದುಃಖ ಎಂದು ಪರಿಭಾವಿಸ ಬೇಕು. ಶರಣರು ಅರಿವು-ಆಚಾರವುಳ್ಳವರು. ಅಂಥವರ ಮನಸ್ಸಿಗೆ ನೋವಾಗುವಂತೆ ನಡೆದುಕೊಳ್ಳಬಾರದು ಎನ್ನುವ ಎಚ್ಚರವಿರಬೇಕು. ಇಲ್ಲದಿದ್ದರೆ ನಾನೇ ಬೆಂದುಹೋಗುವೆ ಎನ್ನುವ ಬಸವಣ್ಣನವರ ಭಾವ ವ್ಯಕ್ತಿತ್ವ ವಿಕಸನಕ್ಕೆ ಹಿಡಿದ ಕನ್ನಡಿ.
ಶರಣರು ದೇವಾಲಯಗಳಲ್ಲಿರುವ ಸ್ಥಾವರ ದೇವರುಗಳನ್ನು ನಂಬಿದವರಲ್ಲ. ‘ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ’ ಎಂದು ತಮ್ಮ ದೇಹವನ್ನೇ ದೇವಾಲಯ ಮಾಡಿಕೊಂಡವರು. ಪ್ರಭುದೇವರು ‘ಕಲ್ಲ ಮನೆಯ ಮಾಡಿ, ಕಲ್ಲ ದೇವರ ಮಾಡಿ, ಆ ಕಲ್ಲ ಕಲ್ಲಮೇಲೆ ಕೆಡೆದರೆ ದೇವರೆತ್ತ ಹೋದರೊ’ ಎಂದು ಪ್ರಶ್ನಿಸುವರು. ಮತ್ತೊಂದು ವಚನದಲ್ಲಿ ನಾನೇ ದೇವರು ಎನ್ನತ್ತಾರೆ:

ನಾ ದೇವನಲ್ಲದೆ ನೀ ದೇವನೆ?
ನೀ ದೇವನಾದಡೆ ಎನ್ನನೇಕೆ ಸಲಹೆ?
ಆರೈದು, ಒಂದು ಕುಡಿತೆ ಉದಕವನೆರೆವೆ,
ಹಸಿದಾಗ ಒಂದು ತುತ್ತು ಓಗರವನಿಕ್ಕುವೆ.
ನಾ ದೇವ ಕಾಣಾ ಗುಹೇಶ್ವರಾ!

ಇಂಥ ಭಾವ ಬಲಗೊಂಡಾಗ ವ್ಯಕ್ತಿ ಪೂಜಾರಿ ಪುರೋಹಿತರ ಶೋಷಣೆಯಿಂದ ಮುಕ್ತನಾಗುವನು. ಅವನಲ್ಲಿ ಆತ್ಮವಿಶ್ವಾಸ ಬೆಳೆದು ಸ್ವಾವಲಂಬಿಯಾಗುವನು. ಸ್ವಾವಲಂಬನೆ ವ್ಯಕ್ತಿತ್ವದ ವಿಕಾಸಕ್ಕೂ ಕಾರಣವಾಗುವುದು.

ಅಪಕ್ವತೆಯಿಂದ ಪಕ್ವತೆಯೆಡೆಗೆ: ಹುಟ್ಟುತ್ತಲೇ ಯಾರೂ ಪರಿಪೂರ್ಣರಲ್ಲ. ಹಾಗಂತ ಸಾಧಕ ಪರಿಪೂರ್ಣತ್ವದೆಡೆಗೆ ಸಾಗಬಾರದು, ಸಾಧನೆ ಮಾಡಬಾರದು ಎಂದೇನಲ್ಲ. ಸಾಧಕನಿಗೆ ಬದುಕಿನ ಪ್ರತಿ ಹಂತದಲ್ಲೂ ಅಪಕ್ವತೆಯಿಂದ ಪಕ್ವತೆಯೆಡೆಗೆ ನಡೆಯುತ್ತೇನೆ ಎನ್ನುವ ಛಲ ಮತ್ತು ಮನೋಬಲ ಇರಬೇಕು. ಅದಕ್ಕಾಗಿ ಚೆನ್ನಬಸವಣ್ಣನವರು ತನುವನ್ನು ಗುರುವಿಗೆ, ಮನವನ್ನು ಲಿಂಗಕ್ಕೆ, ಧನವನ್ನು ಜಂಗಮಕ್ಕೆ ಸವೆಸಬೇಕು ಎಂದರು. ಅಲ್ಲಮಪ್ರಭುದೇವರು ಹೊನ್ನು, ಹೆಣ್ಣು, ಮಣ್ಣು ನಿನ್ನವಲ್ಲ, ನಿನ್ನೊಡವೆ ಜ್ಞಾನರತ್ನ ಎಂದಿದ್ದಾರೆ. ಶರಣರ ಆಶಯದಂತೆ ನಡೆದುಕೊಂಡಾಗ ಅಪಕ್ವತೆಯಿಂದ ಪಕ್ವತೆಯೆಡೆಗೆ ಸಾಗಿ ವ್ಯಕ್ತಿತ್ವ ವಿಕಸನ ಹೊಂದಬಹುದು.

ಸುಖದಿಂದ ವಾಸ್ತವಿಕ ತತ್ವದೆಡೆಗೆ: ಮನುಷ್ಯ ಸುಖಾಪೇಕ್ಷಿಯಾಗಿ ಒಮ್ಮೊಮ್ಮೆ ಭ್ರಮಾಲೋಕದಲ್ಲಿ ತೇಲಾಡುತ್ತ ‘ಸಾಸುವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ’ ಅನುಭವಿಸುತ್ತಾನೆ. ಹಾಗೆ ಭ್ರಮಾಲೋಕದಲ್ಲಿ ತೇಲಾಡದೆ ವಾಸ್ತವ ಸ್ಥಿತಿ ಏನೆಂದು ಅರ್ಥಮಾಡಿಕೊಂಡು ಬದುಕನ್ನು ಕಟ್ಟಿಕೊಳ್ಳುವ ಸಂಕಲ್ಪ ಮಾಡಬೇಕು. ನೆಮ್ಮದಿಯ ಬದುಕಿಗೆ ಬೇಕಾದದ್ದು ಅನ್ನ, ಅರಿವೆ, ಆಶ್ರಯ, ಔಷಧಿ ಮತ್ತು ಅರಿವು. ಇವುಗಳನ್ನು ಪಡೆಯುವುದು ಯಾರಿಗೂ ಕಷ್ಟವೇನಲ್ಲ. ಆದರೆ ಮಾನವನ ದುರಾಸೆಗೆ ಮಿತಿಯೇ ಇಲ್ಲವಾಗಿದೆ. ಆತ ಸುಖದ ಕನಸು ಕಾಣುತ್ತ ದುಃಖದ ಮಡುವಿನಲ್ಲೇ ಮುಳುಗೇಳುವ ಪರಿಸ್ಥಿತಿ ತಂದುಕೊಳ್ಳುವನು. ಯಾರಿಗೇ ಆಗಲಿ ವಾಸ್ತವಿಕತೆಯ ಅರಿವು ಇರಬೇಕು. ಗಾಳಿ, ಅನ್ನ, ನೀರು, ಒಳ್ಳೆಯ ಮಾತುಗಳೇ ನಿಜವಾದ ವಜ್ರಗಳು ಎನ್ನುವರು ಬುದ್ಧ. ಶರಣರು ಹೇಳುವುದು ಸಹ ಇಂಥ ವಿಚಾರಗಳನ್ನೇ. ಇವುಗಳನ್ನು ವಜ್ರವೆಂದು ಭಾವಿಸಿ ಅಗತ್ಯಕ್ಕೆ ತಕ್ಕಂತೆ ಸದ್ಬಳಕೆ ಮಾಡಿಕೊಂಡರೆ ವ್ಯಕ್ತಿಯ ವಿಕಾಸ ತನ್ನಷ್ಟಕ್ಕೆ ತಾನೇ ಆಗುವುದು. ಪರಮಸುಖ ಬಾಹ್ಯ ವಸ್ತು-ವಡವೆಗಳಲ್ಲಿ ಇಲ್ಲ. ಅದಿರುವುದು ಆಂತರಿಕ ವ್ಯಕ್ತಿತ್ವದ ವಿಕಾಸ ಮತ್ತು ಆದರ್ಶ ಬದುಕಿನ ವಿಧಾನದಲ್ಲಿ. ಮನುಷ್ಯ ತಾನೊಬ್ಬನೇ ಸುಖವಾಗಿರಬೇಕು ಎಂದುಕೊಂಡರೆ ಸ್ವಾರ್ಥ. ಸ್ವಾರ್ಥ ಎಂದಿಗೂ ಸುಖ ಕೊಡಲು ಸಾಧ್ಯವಿಲ್ಲ. ನಮ್ಮ ಸುತ್ತ ಇರುವವರು ಸುಖವಾಗಿದ್ದರೆ ನಾವೂ ಸುಖವಾಗಿರಲು ಸಾಧ್ಯ. ಇಂಥ ವಾಸ್ತವಿಕತೆಯನ್ನು ಅರ್ಥಮಾಡಿಕೊಳ್ಳಲು ವಿವೇಕ ಬಹುಮುಖ್ಯ. ಅದು ಕಾರಣವೇ ‘ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ’ ಎಂದು ಬಸವಣ್ಣನವರು ಹೇಳಿರುವುದು.

ಸ್ವಾರ್ಥಕೇಂದ್ರಿತದ ಬದಲು ಸಮಷ್ಠಿಕೇಂದ್ರಿತವಾಗುವುದು: ಇವತ್ತು ಮನುಷ್ಯನ ಸ್ವಾರ್ಥ ಮಿತಿಮೀರಿದೆ. ಅದಕ್ಕೆ ಎಲ್ಲೆ ಎನ್ನುವುದೇ ಇಲ್ಲ. ಆತ ಸ್ವಾರ್ಥಿಯಾದರೆ ಸಮಷ್ಠಿಪ್ರಜ್ಞೆ ದೂರವಾಗುವುದು. ಸಮಷ್ಠಿಪ್ರಜ್ಞೆಗೆ ಮಾನವರೆಲ್ಲ ಒಂದು, ನಾನೂ ಅವರಲ್ಲಿ ಒಬ್ಬ ಎನ್ನುವ ಭಾವ ಬಲಗೊಳ್ಳಬೇಕು. ಶರಣರ ಪಂಚಾಚಾರಗಳಲ್ಲಿ ಗಣಾಚಾರವೂ ಒಂದು. ಮನುಷ್ಯ ಎಷ್ಟೇ ಸ್ವಾರ್ಥಿಯಾಗಿ ಏನೇ ಸಂಗ್ರಹಿಸಿಟ್ಟರೂ ಈ ಲೋಕ ಬಿಟ್ಟು ಹೋಗುವಾಗ ಅವುಗಳನ್ನು ತನ್ನೊಂದಿಗೆ ಹೊತ್ತೊಯ್ಯುವುದಿಲ್ಲ. ತಾಯಿಯ ಗರ್ಭದಿಂದ ಬರುವಾಗ ಹೇಗಿದ್ದರೋ ಹಾಗೇ ಭೂತಾಯಿಯ ಗರ್ಭ ಸೇರುವರು. ಇದನ್ನು ಮೋಳಿಗೆ ಮಾರಯ್ಯ ತುಂಬಾ ಪರಿಣಾಮಕಾರಿಯಾಗಿ ಹೇಳಿದ್ದಾರೆ. ‘ಆನೆ ಕುದುರೆ ಭಂಡಾರವಿರ್ದಡೇನೊ? ತಾನುಂಬುದು ಪಡಿಯಕ್ಕಿ, ಒಂದಾವಿನ ಹಾಲು, ಮಲಗುವುದರ್ಧ ಮಂಚ. ಈ ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜಾ’. ಮುಂದುವರಿದು ಸತ್ತಾಗ ದೇಹ ಭೂಮಿಯನ್ನು ಸೇರುವುದು. ಪ್ರಾಣ ಗಾಳಿಯಲ್ಲಿ ಸೇರುವುದು. ಗಳಿಸಿದ ಸಂಪತ್ತು ಏನಾಗುತ್ತದೋ? ‘ಸಾವಿಂಗೆ ಸಂಗಡವಾರೂ ಇಲ್ಲ’ ಎಂದು ಎಚ್ಚರಿಸಿದ್ದಾರೆ. ಮನುಷ್ಯ ಸ್ವಾರ್ಥಿಯಾಗಿ ಕಬಳಿಸುವ ಕಾರ್ಯ ಮಾಡದೆ ತ್ಯಾಗಜೀವಿಯಾಗಿ ಕಾಯಕ, ದಾಸೋಹ ಪ್ರಜ್ಞೆಯುಳ್ಳವನಾಗಿ ಸಕಲ ಜೀವಾತ್ಮರ ಒಳಿತು ಬಯಸಿದರೆ ಆತ ಸತ್ತಮೇಲೂ ಬದುಕುವನು. ಅದೇ ವ್ಯಕ್ತಿತ್ವದ ವಿಕಸನಕ್ಕೆ ಪ್ರೇರಣೆ. ಸಂಗ್ರಹ ಬುದ್ಧಿಯನ್ನು ಬೆಳೆಸಿಕೊಳ್ಳಬಾರದು ಎನ್ನುವ ದಾಸೋಹ ತತ್ವ ಪರಿಪಾಲಿಸಿದವರು ಶರಣರು. ‘ಹೊನ್ನಿನೊಳಗೊಂದೊರೆಯ, ಸೀರೆಯೊಳಗೊಂದೆಳೆಯ ಇಂದಿಂಗೆ ನಾಳಿಂಗೆ ಬೇಕೆಂದೆನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ’ ಎನ್ನುವ ಬಸವಣ್ಣನವರು ಸಂಗ್ರಹ ಭಾವನೆಯನ್ನು ದೂರಿಕರಿಸಿದ್ದಾರೆ. ನಾನು ಎನ್ನುವುದು ಸ್ವಾರ್ಥ. ನಾನು ಎನ್ನುವ ಅಹಂ ಸಲ್ಲದು. ಅದಕ್ಕಾಗಿ `ಮಾಡಿದೆನೆಂಬುದು ಮನದಲ್ಲಿ ಹೊಳೆದಡೆ ಏಡಿಸಿ ಕಾಡಿತ್ತು ಶಿವನ ಡಂಗುರ’ ಎನ್ನುವರು.

ದೌರ್ಬಲ್ಯದಿಂದ ಸಬಲತೆಯೆಡೆಗೆ: ಹುಟ್ಟಿದಾಗ ಪ್ರತಿಯೊಬ್ಬರೂ ದುರ್ಬಲರೆ. ಬೆಳೆಯುತ್ತ ಬೆಳೆಯುತ್ತ ಸಮೂಹ ಜೀವನ ಮುಖ್ಯವಾಗಬೇಕು. ಆಗ ದೌರ್ಬಲ್ಯವನ್ನು ಹೊಡೆದುಹಾಕಿ ಸಬಲತೆ ಹೊಂದಲು ಸಾಧ್ಯ. ಅನಾರೋಗ್ಯ ದೌರ್ಬಲ್ಯದ ಸಂಕೇತವಾದರೆ ಆರೋಗ್ಯ ಸಬಲತೆಯ ದ್ಯೋತಕ. ಎಷ್ಟೇ ಸಮಸ್ಯೆ, ಸವಾಲುಗಳು ಎದುರಾದರೂ ಎದೆಗುಂದದೆ ಅವುಗಳನ್ನು ಮೆಟ್ಟಿನಿಲ್ಲುವ, ಪರಿಹಾರ ಕಂಡುಕೊಳ್ಳುವ ವಿವೇಕ, ಧೀಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಅದನ್ನೇ ಪ್ರಭುದೇವರು ಮಾರ್ಮಿಕವಾಗಿ ಹೇಳಿದ್ದಾರೆ:

ನೋಡೂದ ನೋಡಲರಿಯದೆ, ಕೆಟ್ಟಿತ್ತೀ ಲೋಕವೆಲ್ಲ.
ನೋಡೂದ ನೋಡಬಲ್ಲಡೆ ಕೂಡಲಿಲ್ಲ ಅಗಲಲಿಲ್ಲ.
ನೋಟದ ಕೂಟದ ಅಗಲದ ಸುಖವನು
ಗುಹೇಶ್ವರಾ ನಿಮ್ಮ ಶರಣ ಬಲ್ಲ!

ಮನುಷ್ಯ ಪರಿಸ್ಥಿತಿಯ ದಾಸನಾಗದೆ, ಅರಿಷಡ್ವೈರಿಗಳಿಗೆ ಬಲಿಯಾಗದೆ ಸಬಲತೆಯೆಡೆಗೆ ಹೆಜ್ಜೆ ಹಾಕಬೇಕು. ಸಂಕಲ್ಪ, ಸತತ ಪ್ರಯತ್ನದಿಂದ ದೌರ್ಬಲ್ಯಗಳನ್ನು ಗೆಲ್ಲುತ್ತಿದ್ದರೆ ಸಬಲನಾಗುವನು.

ಅಜ್ಞಾನದಿಂದ ಜ್ಞಾನದೆಡೆಗೆ: ಬಸವಣ್ಣನವರು ‘ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡಯ್ಯಾ’ ಎಂದಿದ್ದಾರೆ. ಇವತ್ತು ವೈಜ್ಞಾನಿಕತೆ, ವೈಚಾರಿಕತೆ, ತಂತ್ರಜ್ಞಾನ ಏನೆಲ್ಲ ಸೌಲಭ್ಯಗಳನ್ನು ತಂದುಕೊಟ್ಟಿದೆ. ಕಾಡಮನುಷ್ಯ ನಾಡಮನುಷ್ಯನಾಗಿ ನಾಗರಿಕತೆಯ ನಾಗಾಲೋಟದಲ್ಲಿ ಸಾಗುತ್ತಲೇ ಇದ್ದಾನೆ. ಆತನ ಪ್ರಗತಿ ಅತ್ಯದ್ಭುತವಾಗಿದೆ. ಮೊಬೈಲ್, ಟಿವಿ, ಇಂಟರ್‍ನೆಟ್, ಈಮೇಲ್, ಯುಟೂಬ್, ಫೇಸ್‍ಬುಕ್ ಹೀಗೆ ಊಹೆಗೆ ಮೀರಿದ ಪ್ರಗತಿಯಾಗಿದೆ. ಇಲ್ಲಿದ್ದೇ ಅಮೆರಿಕೆಯಲ್ಲಿರುವವರ ಜೊತೆ ಮಾತನಾಡುವುದು ಸಾಮಾನ್ಯ ಸಾಧನೆಯೇನಲ್ಲ. ಹಿಂದೆ ಎಮ್ಮೆ, ಕುದುರೆ ಅಥವಾ ಎತ್ತಿನ ಗಾಡಿಯ ಮೇಲೆ ಹೋಗುತ್ತಿದ್ದವ ಇಂದು ಕಾರು, ವಿಮಾನ, ಆಕಾಶಕಾಯಗಳಲ್ಲಿ ಓಡಾಡುತ್ತಿದ್ದಾನೆ. ಎಷ್ಟೆಲ್ಲ ಬಾಹ್ಯಪ್ರಗತಿಯಾಗಿದ್ದರೂ ಆಂತರಿಕವಾಗಿ ಮನುಷ್ಯ ಠೊಳ್ಳಾಗುತ್ತಿದ್ದಾನೆ. ಅಂತರಂಗದಲ್ಲಿ ಸದ್ಭಾವನೆಗಳ ಬದಲು ದ್ವೇಷ, ಅಸೂಯೆ, ಮತ್ಸರ ಹೆಚ್ಚುತ್ತಲೇ ಇವೆ. ಹಿಂದೆ ಕಟ್ಟಿಗೆ, ಕಲ್ಲು, ಕತ್ತಿಯಿಂದ ಹೊಡೆದಾಡುತ್ತಿದ್ದವ ಇಂದು ಎಲ್ಲೋ ಇದ್ದು ಮತ್ತೆಲ್ಲಿಗೋ ಗುರಿಯಿಟ್ಟು ಸರ್ವನಾಶ ಮಾಡುವಂತಹ ಅಣುಬಾಂಬ್ ಮತ್ತಿತರ ಸಾಧನಗಳು ಬಂದಿವೆ. ವೈಜ್ಞಾನಿಕ ಸಾಧನೆ ಎಷ್ಟೇ ಆಗಿದ್ದರೂ ಮಾನವನ ಹೃದಯ ಮಾನವೀಯ ಮೌಲ್ಯಗಳಿಂದ ದೂರ ಸರಿಯುತ್ತಿದೆ. ಇಂತಾದಾಗ ವ್ಯಕ್ತಿತ್ವ ವಿಕಸನ ಮರೀಚಿಕೆಯಾಗುವುದು.

ವಿಶ್ವದ ಪಾಶ್ರ್ವನೋಟದಿಂದ ವಿಶ್ವದ ಸಮಗ್ರನೋಟದೆಡೆಗೆ: ಮನುಷ್ಯ ಕೂಪಮಂಡೂಕದಂತೆ ವರ್ತಿಸುವುದು ಇಂದಿಗೂ ಕಡಿಮೆಯಾಗಿಲ್ಲ. ಪ್ರಪಂಚ ಎಷ್ಟೊಂದು ವಿಶಾಲವಾಗಿದೆ ಎನ್ನುವ ವಿವೇಕ ಜಾಗೃತಗೊಳ್ಳಬೇಕಿದೆ. ಅಹಂಕಾರ ಅಡಗಿ ವಿಶ್ವಕುಟುಂಬಿಗಳಾಗುವ ಹೃದಯ ವೈಶಾಲ್ಯತೆ ಬೆಳೆಸಿಕೊಳ್ಳಬೇಕಾಗಿದೆ. ಸಕಲ ಜೀವಾತ್ಮರಿಗೆ ಒಳಿತು ಬಯಸುವ ಗುಣ ಬೆಳೆಯಬೇಕಾಗಿದೆ. ಸಂಕುಚಿತ ಭಾವನೆಯಿಂದ ಹೊರಬರಬೇಕು. ಮೂಗಿನ ನೇರಕ್ಕೆ ವಿಚಾರ ಮಾಡುವುದನ್ನು ನಿಲ್ಲಿಸಬೇಕು. ಸಕಲ ಜೀವಾತ್ಮರ ಒಳಿತಿನಲ್ಲೇ ನನ್ನ ಒಳಿತೂ ಇದೆ ಎನ್ನುವ ಹೃದಯವಂತಿಕೆ ಮುಖ್ಯವಾಗಬೇಕು. ಸಂಪ್ರದಾಯ, ಕಂದಾಚಾರದ ಬದಲು ವಿಚಾರ, ವಿಜ್ಞಾನ, ವಿವೇಕ ಹೇಳಿದಂತೆ ನಡೆದುಕೊಳ್ಳಬೇಕು. ಸಂಕುಚಿತ ಭಾವನೆಯಿಂದ ಹೊರಬಂದು ಉದಾರ ಚರಿತರಾಗುವ ಮನಸ್ಸು ಬೆಳೆಸಿಕೊಳ್ಳಬೇಕು. ಸದಾಲೋಚನೆ, ಸತ್ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ಆಗ ಸಮಗ್ರ ನೋಟದತ್ತ ಸಾಗಲು, ವ್ಯಕ್ತಿತ್ವವನ್ನು ಅರಳಿಸಿಕೊಳ್ಳಲು ಸಾಧ್ಯವಾಗುವುದು.

ಸಂಪ್ರದಾಯದಿಂದ ಆಧುನಿಕತೆಯೆಡೆಗೆ: ಆದಿಮಾನವನಿಂದ ಆಧುನಿಕ ಮಾನವನವರೆಗೂ ಮೌಢ್ಯಗಳು ವಿಜೃಂಭಿಸುತ್ತಲೇ ಇವೆ. ಜಾತಿ, ಲಿಂಗಭೇದ ಬೇಡವೆಂದು ಶರಣರು ಹೇಳಿ ಅದನ್ನು ಅನುಷ್ಠಾನದಲ್ಲಿ ತಂದಿದ್ದರೂ ಸಂಪ್ರದಾಯದ ಹುದುಲಿನಿಂದ ಜನರು ಇನ್ನೂ ಹೊರಬರಲು ಸಿದ್ಧರಾಗಿಲ್ಲ. ವಚನಕಾರರು ಕಿಚ್ಚು ದೈವವೆಂದು ಹೋಮಾದಿ ಕ್ರಿಯೆಗಳ ಮೂಲಕ ಮಾಡುವ ಎಲ್ಲ ಕರ್ಮಠಗಳನ್ನು ತಿರಸ್ಕರಿಸಿದರು. ಆದರೂ ಜನರು ಕಲ್ಲನಾಗರ ಕಂಡರೆ ಹಾಲೆರೆಯುವರು. ಅದೇ ಜೀವಂತ ನಾಗರ ಕಂಡರೆ ಕೊಲ್ಲುವರು. ಉಂಬ ಜಂಗಮ ಬಂದರೆ ಊಟಕ್ಕಿಡದೆ ಮುಂದೆ ಹೋಗು ಎನ್ನುವರು. ಉಣ್ಣದ ಲಿಂಗಕ್ಕೆ ಎಡೆ ಹಿಡಿಯುವರು. ಇದನ್ನೇ ಬಸವಣ್ಣನವರು ಸಂಪ್ರದಾಯ, ಮೌಢ್ಯ ಎಂದದ್ದು. ಆದರೆ ಅವು ಇಂದು ಇನ್ನಷ್ಟು ವಿಜೃಂಭಿಸುತ್ತಲೇ ಇವೆ. ನೀರನ್ನು ಕಂಡಲ್ಲಿ ಮುಳುಗಿ, ಮರವನ್ನು ಕಂಡಲ್ಲಿ ಸುತ್ತುವ ಸಂಪ್ರದಾಯ ಇಂದಿಗೂ ನಿಂತಿಲ್ಲ. ಜನರು ಅದೆಷ್ಟು ಸ್ಥಾವರ ದೇವರುಗಳ ದಾಸರಾಗಿದ್ದಾರೆ ಎನ್ನುವುದನ್ನು ಶರಣರಷ್ಟು ಕಟುವಾಗಿ ಟೀಕಿಸಿದವರು ಇಂದಿನ ವೈಜ್ಞಾನಿಕ ಕಾಲದಲ್ಲೂ ಇಲ್ಲ.

ಊರೊಳಗೊಬ್ಬ ದೇವ, ಮಡುವಿನಲೊಬ್ಬ ದೇವ,
ಅಡವಿಯಲೊಬ್ಬ ದೇವ, ಮಡಿಲಲೊಬ್ಬ ದೇವ.
ನೀರು ನೀರ ಕೂಡಿ, ಬಯಲು ಬಯಲ ಕೂಡಿ
ನರನೆಂಬ ದೇವ ತಾ ನಿರಾಳವೊ!
ಲಿಂಗವೆಂಬುದೊಂದು ಅನಂತ(ದ) ಹೆಸರು,
ಗುಹೇಶ್ವರನೆಂಬುದದೇನೊ?

ಮನುಷ್ಯ ಕಲ್ಲು, ಮಣ್ಣು, ಕಟ್ಟಿಗೆ, ಲೋಹ ಇತ್ಯಾದಿಗಳಲ್ಲಿ ಮಾಡಿದ ದೇವರುಗಳ ಹುಚ್ಚನ್ನು ಬಿಟ್ಟು ಏಕದೇವ ನಿಷ್ಠೆಯನ್ನು ಬೆಳೆಸಿಕೊಳ್ಳಬೇಕಿದೆ. ಆಗಲೇ ಅವನ ವ್ಯಕ್ತಿತ್ವದ ವಿಕಾಸವಾಗಲು ಸಾಧ್ಯ.

ಅನೈತಿಕತೆಯಿಂದ ನೈತಿಕತೆಯೆಡೆಗೆ: ಇಂದು ಅನೈತಿಕತೆಯೇ ಬಂಡವಾಳವಾಗುತ್ತಿದೆ. ಎಲ್ಲಿ ನೋಡಿದರೂ ಸುಳ್ಳು, ಮೋಸ, ವಂಚನೆ, ಹಿಂಸೆ. ಸ್ವಪ್ರಶಂಸೆ, ಅನ್ಯರ ಅವಹೇಳನ ಇಂಥವುಗಳೇ ವಿಜೃಂಭಿಸುತ್ತಲಿವೆ. ಹೀಗಾದಾಗ ವ್ಯಕ್ತಿತ್ವ ವಿಕಸನ ಒಂದು ಕನಸಾಗುವುದು. ಅದು ನನಸಾಗಬೇಕು ಎಂದರೆ ಬಸವಣ್ಣನವರ ವಚನದ ಆಶಯ ಬದುಕಿನ ಬಂಡವಾಳವಾಗಬೇಕು.

ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,
ಮುನಿಯಬೇಡ, ಅನ್ಯರಿಗೆ ಅಸಹ್ಯಬಡಬೇಡ,
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ,
ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ
ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ.

ಈ ವಚನದಲ್ಲಿ ಬಸವಣ್ಣನವರು ವ್ಯಕ್ತಿತ್ವ ವಿಕಸನಕ್ಕೆ ಬೇಕಾದ ಏಳು ಸೂತ್ರಗಳನ್ನು ತಿಳಿಸಿದ್ದಾರೆ. ಕಳವು, ಕೊಲೆ, ಸುಳ್ಳು, ಕೋಪ ಇವು ವ್ಯಕ್ತಿಯ ಗೌರವವನ್ನೇ ಕಳೆಯುವವು. ಇನ್ನೊಬ್ಬರನ್ನು ಕಂಡು ಅಸಹ್ಯಪಡುವುದು, ತಾನೇ ದೊಡ್ಡವನು ಎಂದು ಸ್ವಪ್ರಶಂಸೆ ಮಾಡಿಕೊಳ್ಳುವುದು, ನಿಂದಿಸುವುದು ಇಂಥ ಕೃತ್ಯಗಳಿಂದ ಯಾವ ವ್ಯಕ್ತಿಯ ವ್ಯಕ್ತಿತ್ವವೂ ವಿಕಾಸವಾಗದು. ಬದಲಾಗಿ ಪ್ರತಿಯೊಬ್ಬರ ನಿಂದೆ, ತಿರಸ್ಕಾರ, ಉದಾಸೀನ, ಅವಹೇಳನಕ್ಕೂ ಗುರಿಯಾಗಬಹುದು. ಹಾಗಾಗಿ ಇಲ್ಲಿನ ಏಳು ಸೂತ್ರಗಳಂತೆ ಬದುಕನ್ನು ಕಟ್ಟಿಕೊಳ್ಳುವುದು ಬಹಳ ಮುಖ್ಯ. ಬಸವಣ್ಣನವರ ಆಶಯದಂತೆ ಬದುಕು ಕಟ್ಟಿಕೊಂಡರೆ ಅಂತರಂಗ ಮತ್ತು ಬಹಿರಂಗ ಶುದ್ಧಿಯಾಗುವುದು. ದೇವರ ಒಲುಮೆಗೆಂದು ಜನರು ಏನೇನೋ ಕರ್ಮಾಚರಣೆಗಳನ್ನು ಮಾಡುವರು. ಅದರಿಂದ ಅವರಿಗೆ ದೇವರು ಒಲಿಯುವನೆಂಬುದು ಒಂದು ಭ್ರಮೆಯಷ್ಟೇ. ದೇವರ ಒಲುಮೆಗೆ ಯಾವುದೇ ಕರ್ಮಾಚರಣೆಗಳು ಬೇಕಾಗಿಲ್ಲ. ಕಂಡ ಕಂಡ ದೇವಾಲಯಗಳನ್ನು ಸುತ್ತಬೇಕಾಗಿಲ್ಲ. ತೀರ್ಥಕ್ಷೇತ್ರಗಳಿಗೆ ಹೋಗಬೇಕಿಲ್ಲ. ಸ್ನಾನ, ಧ್ಯಾನದ ಅಗತ್ಯವೂ ಇಲ್ಲ. ಬದಲಾಗಿ ತನ್ನ ಅಂತರಂಗ ಮತ್ತು ಬಹಿರಂಗವನ್ನು ಶುದ್ಧವಾಗಿಟ್ಟುಕೊಂಡರೆ ಸಾಕು. ಅದೇ ದೇವರನ್ನು ಒಲಿಸುವ ರಾಜಮಾರ್ಗ. ಬಸವಣ್ಣನವರ ಈ ಸಂದೇಶವನ್ನು ವಿದ್ಯಾರ್ಥಿಗಳು, ಅಧ್ಯಾಪಕರು, ಜನಪ್ರತಿನಿಧಿಗಳು, ವ್ಯಾಪಾರಿಗಳು, ಮಠಾಧೀಶರು, ಅಧಿಕಾರಿಗಳು, ಸಾರ್ವಜನಿಕ ಕ್ಷೇತ್ರದಲ್ಲಿರುವವರು ಅರಿತು ಆಚರಣೆಯಲ್ಲಿ ತಂದರೆ ಸಾಕು.

ಅಧರ್ಮದಿಂದ ಧರ್ಮದೆಡೆಗೆ: ಇಂದು ಧರ್ಮ ಬೇಡ ಎನ್ನುವವರು ತುಂಬಾ ವಿರಳ. ಆದರೆ ಅವರು ನಂಬಿರುವ ಧರ್ಮ ವಿಚಾರ, ವಿಜ್ಞಾನ, ತರ್ಕ, ವಾಸ್ತವಿಕತೆಗೆ ಒಗ್ಗುವಂತಹುದಾಗಿಲ್ಲ. ಅವರು ನಂಬಿರುವ ಧರ್ಮದಲ್ಲಿ ಹಿಂಸೆ, ಮೋಸ, ಮೌಢ್ಯ ತುಂಬಿ ತುಳುಕುತ್ತಿವೆ. ನಿಜಧರ್ಮ ಹೇಗಿರಬೇಕು ಎನ್ನುವ ಸಂದೇಶ ಬಸವಣ್ಣನವರ ವಚನದಲ್ಲಿದೆ.

ದಯವಿಲ್ಲದ ಧರ್ಮವದೇವುದಯ್ಯಾ?
ದಯವೇ ಬೇಕು ಸರ್ವಪ್ರಾಣಿಗಳೆಲ್ಲರಲ್ಲಿ.
ದಯವೇ ಧರ್ಮದ ಮೂಲವಯ್ಯಾ,
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ.

ಧರ್ಮದ ಮೂಲ ಭಯ ಎನ್ನುವ ವಾತಾವರಣವನ್ನು ಪೂಜಾರಿ ಪುರೋಹಿತರು ಮತ್ತು ಪಟ್ಟಭದ್ರರು ಜನಸಾಮಾನ್ಯರ ತಲೆಯಲ್ಲಿ ತುಂಬಿದ್ದರು. ಅದನ್ನು ನಿವಾರಿಸಲು ಬಸವಣ್ಣನವರು ಹೇಳಿದ್ದು ಧರ್ಮದ ಮೂಲ ಭಯವಲ್ಲ; ದಯೆ ಎಂದು. ದಯೆ ಕೇವಲ ಮನುಷ್ಯರಿಗಷ್ಟೇ ತೋರುವುದಲ್ಲ; ಸಕಲ ಜೀವರಾಶಿಗಳಿಗೂ ಅನ್ವಯಿಸಬೇಕು. ದಯವಿಲ್ಲದ ಧರ್ಮ ಏನನ್ನು ತಾನೆ ಕೊಡಲು ಸಾಧ್ಯ. ಮೂಢತನ ಬೆಳೆಸುವ, ಭಯವನ್ನು ಹುಟ್ಟಿಸುವ, ಹಿಂಸೆಗೆ ಪ್ರಚೋದಿಸುವ ಧರ್ಮ ಧರ್ಮವೇ ಅಲ್ಲ. ಅದನ್ನು ತಿರಸ್ಕರಿಸುವ ಮನೋಭಾವ ಜನರಲ್ಲಿ ಬರಬೇಕು. ಧರ್ಮಯುದ್ಧ ಎನ್ನುವರು. ಧರ್ಮವಿರುವಲ್ಲಿ ಯುದ್ಧ, ಯುದ್ಧವಿರುವಲ್ಲಿ ಧರ್ಮ ಇರಲು ಖಂಡಿತ ಸಾಧ್ಯವಿಲ್ಲ. ಆದರೆ ಧರ್ಮದ ಹೆಸರಿನಲ್ಲೇ ಯುದ್ಧ ಮಾಡುವ, ಜನರಲ್ಲಿ ಹಿಂಸಾಪ್ರವೃತ್ತಿ ಬೆಳೆಸುವ ಧರ್ಮ ಧರ್ಮವೇ ಅಲ್ಲ ಎನ್ನುವುದು ಶರಣ ಸಿದ್ಧಾಂತ. ನಮಗೆ ದಯಾಮೂಲವಾದ, ಮೌಢ್ಯಗಳಿಂದ ಮುಕ್ತವಾದ, ಶರಣರು ಪ್ರತಿಪಾದಿಸಿದ ಮಾನವೀಯ ಧರ್ಮ ಬೇಕಾಗಿದೆ.

ಭಾವ ಅಸ್ಥಿರತೆಯಿಂದ ಭಾವ ಸ್ಥಿರತೆಯೆಡೆಗೆ: ವ್ಯಕ್ತಿತ್ವ ಅರಳಲು ಸಮಚಿತ್ತ ತುಂಬಾ ಮುಖ್ಯ. ಅಸಮಧಾನ, ಅಸ್ಥಿರತೆ, ಜಗಳ, ಕೊಲೆ, ಸುಲಿಗೆ ಇಂಥವುಗಳೇ ಅಸ್ಥಿರತೆಗೆ ಕಾರಣ. ಇವುಗಳನ್ನು ತೊಡೆದುಹಾಕಬೇಕು. ವ್ಯಕ್ತಿಯಲ್ಲಿ ಅಹಂ, ಭ್ರಮೆ, ದುರಾಸೆ, ದ್ವೇಷ, ಹೊಟ್ಟೆಕಿಚ್ಚು ಇಂಥ ಮಹಾರೋಗಗಳಿವೆ. ಈ ರೋಗಕ್ಕೆ ದಿವ್ಯೌಷಧಿ ಎಂದರೆ ಪ್ರೀತಿ, ಸಮಾನತೆ, ಸಮಚಿತ್ತ, ಏಕತೆ, ಏಕಾಂತ, ಏಕಾಗ್ರತೆ, ವಿವೇಕ ಮುಂತಾದವು. ಅದರಲ್ಲೂ ಮನಸ್ಸು ಮಂಗನಿದ್ದಂತೆ. ಅದು ಹೇಗೆ ವರ್ತಿಸುತ್ತದೆ ಎನ್ನುವುದನ್ನು ಮುಂದಿನ ವಚನದಲ್ಲಿ ಗಮನಿಸಬಹುದು.

ತನ್ನಿಚ್ಚೆಯ ನುಡಿದಡೆ ಮೆಚ್ಚುವುದೀ ಮನವು,
ಇದಿರಿಚ್ಚೆಯ ನುಡಿದಡೆ ಮೆಚ್ಚದೀ ಮನವು.
ಕೂಡಲಸಂಗನ ಶರಣರ
ನಚ್ಚದ ಮಚ್ಚದ ಮನವ ಕಿಚ್ಚಿನೊಳಗಿಕ್ಕು.

ಮನಸ್ಸು ಹೇಳಿದಂತೆ ಕೇಳಿದರೆ ಮೆಚ್ಚುವ ಮನವು ಅದಕ್ಕೆ ವಿರುದ್ಧವಾಗಿ ಹೇಳಿದರೆ ಮೆಚ್ಚುವುದಿಲ್ಲ. ಹಾಗಾಗಿ ನಡೆಯೇ ಒಂದು, ನುಡಿಯೇ ಮತ್ತೊಂದಾಗುವುದು. ನಡೆ, ನುಡಿ ಬೇರೆ ಬೇರೆಯಾದಾಗ ಅಲ್ಲಿ ಶುದ್ಧಿಯಿರಲು ಸಾಧ್ಯವಿಲ್ಲ. ಒಳಗೊಂದು ಹೊರಗೊಂದು ಇದ್ದರೆ ವ್ಯಕ್ತಿತ್ವ ವಿಕಸನ ಸಾಧ್ಯವಿಲ್ಲ. ವ್ಯಕ್ತಿತ್ವ ವಿಕಸನಕ್ಕೆ ಬೇಕಾದದ್ದು ನಡೆ, ನುಡಿ ಒಂದಾಗಿರುವುದು. ಬದುಕಿನಲ್ಲಿ ಬದ್ಧತೆಯನ್ನು ಮೈಗೂಡಿಸಿಕೊಳ್ಳುವುದು. ಸ್ಥಿತಪ್ರಜ್ಞತ್ವ ಕಾಯ್ದುಕೊಳ್ಳುವುದು. ಪ್ರತಿಫಲ ನಿರೀಕ್ಷಿಸದೆ ಕಾಯಕ ಮಾಡಿದಾಗ ಅಸ್ಥಿರತೆ ಹೋಗಿ ಸ್ಥಿರತೆ ನೆಲೆಗೊಳ್ಳುವುದು. ಸ್ಥಿರತೆ ನೆಲೆಗೊಳ್ಳುವುದೇ ಪ್ರಗತಿಯ ದ್ಯೋತಕ.

ಸ್ವಯಂನಿಯಂತ್ರಣಹೀನತೆ: ಪ್ರತಿಯೊಬ್ಬರಿಗೂ ಗೊತ್ತಿರುವಂತೆ ಪಂಚೇಂದ್ರಿಯಗಳ ಉಪಟಳ ಅವರ್ಣನೀಯ. ಅವು ವ್ಯಕ್ತಿಯನ್ನು ವಿನಾಶದ ಅಂಚಿಗೆ ತಳ್ಳುವವು. ಮನುಷ್ಯ ಪಂಚೇಂದ್ರಿಯಗಳ ವಶವಾಗದೆ ಅವುಗಳನ್ನು ಹೇಗೆ ಪರಿವರ್ತಿಸಿಕೊಳ್ಳಬಹುದು ಎನ್ನುವುದಕ್ಕೆ ಬಸವಣ್ಣನವರ ಮುಂದಿನ ವಚನ ಸಾಕ್ಷಿ ನುಡಿಯುವಂತಿದೆ.

ಎನ್ನ ಕಾಯವ ದಂಡಿಗೆಯ ಮಾಡಯ್ಯಾ,
ಎನ್ನ ಶಿರವ ಸೋರೆಯ ಮಾಡಯ್ಯಾ,
ಎನ್ನ ನರವ ತಂತಿಯ ಮಾಡಯ್ಯಾ,
ಎನ್ನ ಬೆರಳ ಕಡ್ಡಿಯ ಮಾಡಯ್ಯಾ,
ಬತ್ತೀಸ ರಾಗವ ಪಾಡಯ್ಯಾ, ಉರದಲೊತ್ತಿ ಬಾರಿಸು,
ಕೂಡಲಸಂಗಮದೇವಾ.

ಪಂಚೇಂದ್ರಿಯಗಳ ನಿಯಂತ್ರಣಕ್ಕೆ ಮನುಷ್ಯನ ಆಹಾರ-ವಿಹಾರ ಕೂಡ ಮುಖ್ಯವಾಗುವುದು. ಮಹಾದೇವಿಯಕ್ಕನವರ ವಚನ ಆಹಾರದ ಮಹತ್ವ ಕುರಿತು ಹೇಳುತ್ತದೆ.

ಆಹಾರವ ಕಿರಿದು ಮಾಡಿರಣ್ಣಾ, ಆಹಾರವ ಕಿರಿದು ಮಾಡಿ.
ಆಹಾರದಿಂದ ವ್ಯಾಧಿ ಹಬ್ಬಿ ಬಲಿವುದಯ್ಯಾ.
ಆಹಾರದಿಂ ನಿದ್ರೆ, ನಿದ್ರೆಯಿಂ ತಾಮಸ ಅಜ್ಞಾನ, ಮೈಮರಹು,
ಅಜ್ಞಾನದಿಂ ಕಾಮವಿಕಾರ ಹೆಚ್ಚಿ,
ಕಾಯವಿಕಾರ, ಮನೋವಿಕಾರ, ಇಂದ್ರಿಯ ವಿಕಾರ,
ಭಾವವಿಕಾರ, ವಾಯುವಿಕಾರವನುಂಟುಮಾಡಿ,
ಸೃಷ್ಟಿಗೆ ತಹುದಾದ ಕಾರಣ ಕಾಯದ ಅತಿ ಪೋಷಣ ಬೇಡ.
ಅತಿ ಪೋಷಣೆ ಮೃತ್ಯುವೆಂದುದು.
ಜಪ ತಪ ಧ್ಯಾನ ಧಾರಣ ಪೂಜೆಗೆ ಸೂಕ್ಷ್ಮದಿಂ ತನುಮಾತ್ರವಿದ್ದರೆ ಸಾಲದೆ?
ತನುವ ಪೋಷಿಸುವ ಆಸೆ ಯತಿತ್ವಕ್ಕೆ ವಿಘ್ನವೆಂದುದು.
ತನು ಪೋಷಣೆಯಿಂದ ತಾಮಸ ಹೆಚ್ಚಿ, ಅಜ್ಞಾನದಿಂ ವಿರಕ್ತಿ ಹಾನಿ,
ಅರಿವು ನಷ್ಟ, ಪರವು ದೂರ, ನಿರಕೆ ನಿಲವಿಲ್ಲದ ಕಾರಣ.
ಚೆನ್ನಮಲ್ಲಿಕಾರ್ಜುನನೊಲಿಸ ಬಂದ ಕಾಯವ
ಕೆಡಿಸದೆ ಉಳಿಸಿಕೊಳ್ಳಿರಯ್ಯಾ.

ಆಹಾರದ ವಿಷಯದಲ್ಲೂ ಸ್ವಯಂ ನಿಯಂತ್ರಣದ ಅಗತ್ಯವಿದೆ. ಏಕೆಂದರೆ ಆಹಾರದಿಂದಲೇ ವ್ಯಾಧಿ, ನಿದ್ರೆ, ಅಜ್ಞಾನ, ಮೈಮರವು, ಕಾಮವಿಕಾರ, ಕಾಯವಿಕಾರ, ಮನೋವಿಕಾರ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುವುದು. ಈ ನೆಲೆಯಲ್ಲಿ ಮಿತ ಆಹಾರ ತುಂಬಾ ಮುಖ್ಯ. ಅದನ್ನೇ ಬಹುರೂಪಿ ಚೌಡಯ್ಯನವರು ಮಿತನಿದ್ರೆ, ಮಿತಭೋಜನ, ಮಿತವಾಕು ಅಗತ್ಯ ಎಂದಿದ್ದಾರೆ. ಮನುಷ್ಯ ಕೇವಲ ವಚನಗಳನ್ನು ಓದಿ, ಹಾಡಿದರೆ ಪ್ರಯೋಜನವಿಲ್ಲ. ಮೊದಲೇ ಹೇಳಿದಂತೆ ಅವು ಪಚನವಾಗಬೇಕು. ಹಾಗಾಗಿ ‘ಹತ್ತು ಸಾವಿರ ಗೀತವ ಹಾಡಿ ಅರ್ಥವಿಟ್ಟಲ್ಲಿ ಫಲವೇನು’ ಎಂದು ಬಸವಣ್ಣನವರು ಕೇಳಿದರೆ ಮಡಿವಾಳ ಮಾಚಿದೇವರು ‘ವಚನ ರಚನೆಯ ನುಡಿವ ಬಯಲುರಂಜಕರೆಲ್ಲ ಭಕ್ತರಪ್ಪರೆ ಅಯ್ಯಾ? ವಚನ ತನ್ನಂತಿರದು, ತಾನು ವಚನದಂತಿರ’ ಎಂದಿದ್ದಾರೆ. ವಚನಗಳಲ್ಲಿ ಇಂದಿನ ಎಷ್ಟೋ ಜ್ವಲಂತ ಸಮಸ್ಯೆಗಳಿಗೆ ಪರಿಹಾರವಿದೆ. ಪರಿಹಾರವಿದೆ ಎಂದು ಅಲ್ಲಿಯ ಆಶಯಗಳನ್ನು ಅನುಷ್ಠಾನದಲ್ಲಿ ತರದಿದ್ದರೆ ಯಾವ ಸಮಸ್ಯೆಗೂ ಪರಿಹಾರ ದೊರೆಯದು. ಪರಿಹಾರ ದೊರೆಯಬೇಕು ಎಂದರೆ ಮನಸ್ಸಿನ ನಿಯಂತ್ರಣ ಬಹುಮುಖ್ಯ. ಬಸವಣ್ಣನವರು ಮನಸ್ಸಿಗೆ ‘ಅಂದಣವನೇರಿದ ಸೊಣಗ’ ಎನ್ನುವರು. ‘ಎನ್ನ ಚಿತ್ತ ಅತ್ತಿಯ ಹಣ್ಣು’ ಎನ್ನುವುದು ಅವರ ಮತ್ತೊಂದು ನುಡಿ. ‘ಲೋಕದ ಚೇಷ್ಠೆಗೆ ರವಿ ಬೀಜವಾದಂತೆ ಕರಣಂಗಳ ಚೇಷ್ಠೆಗೆ ಮನವೇ ಬೀಜ’ ಎನ್ನುವರು ಅಕ್ಕಮಹಾದೇವಿ. ಒಟ್ಟಾರೆ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಇಷ್ಟಲಿಂಗ ನಿಷ್ಠೆ, ಕಾಯಕ ಮತ್ತು ದಾಸೋಹ ಪ್ರಜ್ಞೆಯನ್ನು ಬೆಳೆಸಿಕೊಂಡರೆ ವ್ಯಕ್ತಿತ್ವ ವಿಕಸನ ಅಂಗೈ ನೆಲ್ಲಿಯಾಗುವುದು.

Previous post ಹಾದಿಯ ಹಣತೆ…
ಹಾದಿಯ ಹಣತೆ…
Next post ಕೈಗೆಟುಕಿದ ಭಾವ ಬುತ್ತಿ
ಕೈಗೆಟುಕಿದ ಭಾವ ಬುತ್ತಿ

Related Posts

ಧರ್ಮದ ಹೋರಾಟ ಗುಣಾತ್ಮಕವಾಗಿರಲಿ
Share:
Articles

ಧರ್ಮದ ಹೋರಾಟ ಗುಣಾತ್ಮಕವಾಗಿರಲಿ

April 29, 2018 ಡಾ. ಶಶಿಕಾಂತ ಪಟ್ಟಣ
ಲಿಂಗಾಯತ ಧರ್ಮದ ಮಾನ್ಯತೆಯ ವಿಷಯ ಈಗ ನಿತ್ಯ ದೃಶ್ಯ ಮಾಧ್ಯಮಗಳ ಆಹಾರ. ಅಲ್ಲಿ ನಡೆಯುತ್ತಿರುವ ಜಗಳ, ರಂಪಾಟ, ವಿಭಿನ್ನ ಹೇಳಿಕೆಗಳು ವಿಷಯವನ್ನು ಮತ್ತಷ್ಟು ಗೋಜಲು ಮಾಡುತ್ತಿವೆ....
ಹಿರಿಯರ ಹಾದಿ…
Share:
Articles

ಹಿರಿಯರ ಹಾದಿ…

July 4, 2022 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಮಾತನ್ನು ಯೋಗ ಎನ್ನುವರು. ಅದು ಪ್ರವಚನ ಯೋಗ. ಕೇಳುಗರು ಸಹ ಮನಸ್ಸಿಟ್ಟು ಕೇಳಬೇಕು. ಅದು ಶ್ರವಣ ಯೋಗ. ಅದನ್ನು ಪ್ರಸಾದವಾಣಿ ಎನ್ನುವರು. ಮಠ ಸಾತ್ವಿಕತೆಯ, ಧರ್ಮದ, ಸುಜ್ಞಾನದ...

Comments 11

  1. ದಿಲೀಪ್ ಬಾಗಲಕೋಟೆ
    Jul 14, 2025 Reply

    ಸಮಗ್ರ ವ್ಯಕ್ತಿತ್ವ ವಿಕಾಸನಕ್ಕೆ ಬೇಕಾದ ಎಲ್ಲ ವಿಚಾರಗಳನ್ನು ಕ್ರೋಢೀಕರಿಸಿ ಒಂದೆಡೆ ಕೊಟ್ಟಿದ್ದಾರೆ. ಇದನ್ನು booklet ಮಾಡಿ ಹಂಚಬೇಕಾಗಿದೆ.

  2. ಗವಿಯಪ್ಪ ಹಿರದಾರ
    Jul 15, 2025 Reply

    ಸಮಗ್ರ ವಿಕಾಸಕ್ಕೆ ಮಾರ್ಗದರ್ಶನ ನೀಡುವ ಮುಖ್ಯವಾದ ಲೇಖನ ಓದಿ ಬಹಳ ಸಂತೋಷವಾಯಿತು. ಇಲ್ಲಿ ಬಂದ ಒಂದೊಂದೂ subheading ಗೆ ಒಂದೊಂದು ಕಿರುಹೊತ್ತಿಗೆ ಬರೆಯಬಹುದು🙏

  3. Prof C A Somashekharappa
    Jul 15, 2025 Reply

    Pranamas to Shri Shri Pandithaaradhya Guru ji. A very elaborative and concretised note on personality Development.
    The write up included a very deep and concerted analytical details on the socio-psychological dimensions of human personality as is etched OUT from the vachans WHICH ARE THE CORE SUBSTANCES.
    It is Always pleasure reading Shri Pandithardhya guruji’s writings.
    Somashekharappa

  4. Vijaya Kapparad, Dharawad
    Jul 15, 2025 Reply

    ವಚನಗಳ ನೆಲೆಯಲ್ಲಿ ವ್ಯಕ್ತಿತ್ವ ವಿಕಾಸ ಬರಹ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಆದರೆ ಈಗಿನ ವೈಜ್ಞಾನಿಕ ದಿನಗಳಲ್ಲಿ ಜನರು ಹೆಚ್ಚು ಹೆಚ್ಚಾಗಿ ಮೂಢಚರಣಿಯಲ್ಲಿ ತೊಡಗಿದ್ದಾರೆ ಇಂತಹ ಲೇಖನದಿಂದ ಮೂಡಾಚರಣೆಯಿಂದ ಹೊರ ಬರಬಹುದು🙏🙏

  5. Asha Kiran, Bengaluru
    Jul 16, 2025 Reply

    ಎಲ್ಲಾ ಲೇಖನಗಳು ಉತ್ಕೃಷ್ಟವಾಗಿವೆ. ನನಗೆ ಚಿಕ್ಕವಳಿದ್ದಾಗಿನಿಂದ ವಚನಗಳನ್ನು ಅಭ್ಯಾಸ ಮಾಡಿಸಿದವರು ನನ್ನ ಅಜ್ಜಿ. ವಚನ ಓದಿ ವಿವರಿಸುತ್ತಿದ್ದರು… ಈಗ ಬಯಲು ನನ್ನ favorite reading spot. Thank you🙏🏽

  6. ಪ್ರಸನ್ನಕುಮಾರ್ ತಂಗಡಗಿ
    Jul 22, 2025 Reply

    ಮನುಷ್ಯ ಏನೇ ಮಾಡಬೇಕೆಂದರೂ ಆತನ ನಡೆ- ನುಡಿ ಒಂದಾಗಿರಬೇಕು. ಹಾಗಿಲ್ಲದೆ ಲಿಂಗಪೂಜೆ ಮಾಡಿದರೂ ವ್ಯರ್ಥ. ಶರಣರಲ್ಲಿ ಲಿಂಗ ಪೂಜೆ ಎಂದರೆ ನಡೆ-ನುಡಿಗಳ ಸಂಗಮ🙏

  7. ಬಸವನಗೌಡ ನಾಗಮಂಗಲ
    Jul 22, 2025 Reply

    ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಇಷ್ಟಲಿಂಗ ನಿಷ್ಠೆ, ಕಾಯಕ ಮತ್ತು ದಾಸೋಹ ಪ್ರಜ್ಞೆಯನ್ನು ಬೆಳೆಸಿಕೊಂಡರೆ ವ್ಯಕ್ತಿತ್ವ ವಿಕಸನ ಅಂಗೈ ನೆಲ್ಲಿಯಾಗುವುದು. ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವ ಮಾರ್ಗವನ್ನು ನೀವೇ ಹೀಗೆ ವಿವರವಾಗಿ ಬರೆದು ತಿಳಿಸಬೇಕು ಗುರುಗಳೇ… ಎಲ್ಲ ಗೊತ್ತಿದ್ದೂ ತಪ್ಪು ಹಾದಿಗೆ ಎಳೆದೊಯ್ಯುವ ಮನಸ್ಸಿನ ಚಂಚಲತೆ ತಮಗೆ ತಿಳಿದಿರುವಂತಹುದೇ.

  8. Revathi H
    Jul 24, 2025 Reply

    “ನೋಡೂದ ನೋಡಲರಿಯದೆ, ಕೆಟ್ಟಿತ್ತೀ ಲೋಕವೆಲ್ಲ.
    ನೋಡೂದ ನೋಡಬಲ್ಲಡೆ ಕೂಡಲಿಲ್ಲ ಅಗಲಲಿಲ್ಲ” ವಚನ ಮಾಣಿಕ್ಯಗಳಲ್ಲಿ ಗುರುಗಳು ತೋರಿಸಿದ ರೀತಿಯಲ್ಲಿ ನಮ್ಮ ಬಾಳು ಅರಳಲಿ.

  9. ಗೌರಿಶಂಕರ ಹಡಗಲಿ
    Jul 25, 2025 Reply

    ವ್ಯಕ್ತಿತ್ವ ವಿಕಸನಕ್ಕೆ ಯಾರೂ ಯಾವ ಕೋರ್ಸ್ ಗಳನ್ನೂ ತೆಗೆದುಕೊಳ್ಳಬೇಕಿಲ್ಲ. ವಚನಗಳನ್ನ ಓದಿದರೆ ಸಾಕೆಂದು ನಮ್ಮ ಸ್ವಾಮೀಜಿಯವರು ಸುಂದರವಾಗಿ ಬರೆದಿದ್ದಾರೆ.

  10. ಜಯಾ ಜಗದೀಶ
    Jul 31, 2025 Reply

    ಲೇಖನದಲ್ಲಿ ಪ್ರಸ್ತಾಪವಾಗಿರುವ ಎಲ್ಲಾ ಅಂಶಗಳನ್ನು ಇಟ್ಟುಕೊಂಡು ಯಾಕೆ ತಾವು ಸಾಣೆಹಳ್ಳಿಯಲ್ಲಿ ಮೂರು ತಿಂಗಳಿಗೊಮ್ಮೆ ಶಿಬಿರವನ್ನು ಹಮ್ಮಿಕೊಳ್ಳಬಾರದು?

  11. ಜಯಶ್ರೀ ಕಟಗಿ
    Aug 2, 2025 Reply

    ಸ್ವಾರ್ಥ ಪ್ರಪಂಚದಲ್ಲಿ ನಿಸ್ವಾರ್ಥ ವ್ಯಕ್ತಿತ್ವವನ್ನು ರೂಢಿಸಿಕೊಂಡು ಗೆಲ್ಲುವ ಭರವಸೆ ಕೊಡುವಂತಿದೆ ಲೇಖನ.

Leave a Reply to Vijaya Kapparad, Dharawad Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ವೀರ
ವೀರ
April 29, 2018
ನಾನು ಯಾರು? ಎಂಬ ಆಳ-ನಿರಾಳ-5
ನಾನು ಯಾರು? ಎಂಬ ಆಳ-ನಿರಾಳ-5
August 2, 2020
ಅರಿವು ಕಣ್ತೆರೆಯದವರಲಿ….
ಅರಿವು ಕಣ್ತೆರೆಯದವರಲಿ….
August 5, 2018
ಅಮುಗೆ ರಾಯಮ್ಮ (ಭಾಗ-3)
ಅಮುಗೆ ರಾಯಮ್ಮ (ಭಾಗ-3)
November 10, 2022
ಪ್ರಭುಲಿಂಗಲೀಲೆ…
ಪ್ರಭುಲಿಂಗಲೀಲೆ…
May 10, 2022
ಶರಣ ಸಾಹಿತ್ಯ ಸಂಶೋಧನೆಯಲ್ಲಿ ಬೆಳಕಿಂಡಿ
ಶರಣ ಸಾಹಿತ್ಯ ಸಂಶೋಧನೆಯಲ್ಲಿ ಬೆಳಕಿಂಡಿ
April 29, 2018
ಕೊನೆಯಿರದ ಚಕ್ರದ ಉರುಳು
ಕೊನೆಯಿರದ ಚಕ್ರದ ಉರುಳು
April 11, 2025
ನಿನ್ನೆ-ಇಂದು
ನಿನ್ನೆ-ಇಂದು
May 10, 2022
ಕಾಲ ಕಲ್ಪಿತವೇ?!
ಕಾಲ ಕಲ್ಪಿತವೇ?!
September 14, 2024
ಯುವಮನಗಳೊಂದಿಗೆ ಸಂವಾದ
ಯುವಮನಗಳೊಂದಿಗೆ ಸಂವಾದ
September 13, 2025
Copyright © 2025 Bayalu