Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನಾನೆಂಬ ನಿನಾದ…
Share:
Poems January 15, 2026 ಕೆ.ಆರ್ ಮಂಗಳಾ

ನಾನೆಂಬ ನಿನಾದ…

ನಾ ಹುಟ್ಟುವ ಮುನ್ನ
ಹೇಗಿದ್ದೆ ನೆನಪಿಲ್ಲಾ
ಹುಟ್ಟಿನೊಡನೆ
ಬಂದ ಬಳುವಳಿಯೇ
ನಾನೆಂಬ ಎಳೆ
ಈ ಅಹಮಿಕೆಗೆ
ಪ್ರಾಣ ಒತ್ತೆಯಿಟ್ಟು
ಎಷ್ಟು ಯುಗಗಳಾದವು?

ಒಂದೆಳೆ ಇದ್ದುದು
ಒತ್ತೊತ್ತಾಗಿ ಸೇರುತ್ತಾ
ಬುಟ್ಟಿಯಾಗಿ, ಬಟ್ಟೆಯಾಗಿ
ಬಲೆಯಾಗಿ ನನ್ನ
ತನ್ನೊಳು ಬಂಧಿಸಿದ್ದ
ತಿಳಿಸಲು ನೀನೇ
ಬರಬೇಕಾಯಿತು ಗುರುವೇ.

ತಾ ಬೀಗಲು
ಒಂದೊಂದ ಹೆಸರಿಟ್ಟು
ರೂಪ ಕೊಟ್ಟು,
ಬಣ್ಣ ತುಂಬಿ
ನಂಟನಂತೆ, ನಲ್ಲನಂತೆ
ಚಂದದ ಮಾತುಗಳಲ್ಲಿ
ನಿಜವ ಮರೆಸುತ್ತಾ
ಕಾವಲುಗಾರನಂತೆ
ತನ್ನ ಹಿತವನೇ ಕಾವುದು

ತನ್ನಿರುವಿನ
ಸುಳುಹು ಸಿಗದಂತೆ
ನಾಜೂಕಾಗಿ
ಕಾರ್ಯಸಾಧಿಸುವ
ಅದರ ಪಟ್ಟುಗಳನರಿತು
ಕೋಡ ಹಿಡಿದು
ನೆಲಕ್ಕೆ ಚಚ್ಚಿ
ಕಂಡಲ್ಲಿ ಗುಂಡು ಸಿಡಿಸಿ
ಕೊಂದೇ ಬಿಟ್ಟೆನೆಂದು
ಅಂದುಕೊಳ್ಳುವಾಗಲೇ
ಇನ್ನೆಲ್ಲೋ ಚಿಗಿತು
ಮತ್ತೆಲ್ಲೋ
ಹೂ-ಕಾಯಿ ಬಿಟ್ಟು
ಕನ್ನಡಿಯ ಬಿಂಬದಂತೆ
ಅಣಕಿಸುತ್ತದೆ…
ಮುಪ್ಪಿಲ್ಲದುದಕೆ
ಸಾವುಂಟೆ?
ನನಗೂ- ನಿನಗೂ
ನಡುವೆ ನಿಂತಿದೆ
ಉಸಿರುಗಟ್ಟಿಸುವ
ಗಟ್ಟಿಗಾಜಿನ ಪರದೆ.

ಸಿಟ್ಟು- ಸೆಡವುಗಳ
ನೋವು ಕ್ಲೇಷಗಳ
ಭವದ ಬೇರು
ಎಲ್ಲಿದೆ ಎನುವುದ
ನಾನೀಗ ಬಲ್ಲೆ
ಒಳಗೂ-ಹೊರಗೂ
ತನಗಾಗಿಯೇ
ತಡಬಡಿಸುತ್ತದೆ
ಚೂರು ಧಕ್ಕೆಯಾದರೂ
ಸಿಡಿಲು ಬಡಿದಂತೆ
ಚಡಪಡಿಸುತ್ತದೆ
ಒತ್ತುತ್ತದೆ
ಎದೆ ಮೇಲೆ ಕುಳಿತು
ಮಣಭಾರದಂತೆ
ತೊಲಗಿಸು ತಂದೆ
ನಾನೆಂಬ ಹೊರೆಯ.

ಅರಿವಿನ ರೆಪ್ಪೆ
ತೆರೆಯದ ಕೂಸಿಗೆ
ಬಯಲ ಅನಾವರಣ!
ಮಾಗಿ ಕಾಲದಲಿ
ವಸಂತದ ವರ್ಣನೆಯೇ?
ನಮ್ಮಿಬ್ಬರ ನಡುವೆ
ನೆಲ-ಮುಗಿಲಿನಂತರ
ಕರುಣೆ ಇರಲಿ ಗುರುವೆ.

ಗುರು:
ನೆರಳಲಿ ನಿಂತು
ಕತ್ತಲು ಎನುವರೆ?
ಉಸಿರೇ ಇಲ್ಲದ
ನೆಲೆಯೇ ಕಾಣದ
ತೃಣಕಣ ಹಮ್ಮಿಗೆ
ಹೆದರುವುದೇ?

ಕೂಗಿ ಕರೆದರೂ
ಕಿವಿಗೊಡದಿರು
ಹತ್ತಿರ ಬಂದರೂ
ಗಮನಿಸದಿರು
ಎದುರೇ ನಿಂತರೂ
ಉತ್ತರಿಸದಿರು
ಮಾತಿನ ಕೂಟಕೆ
ಮರುಳಾಗದಿರು
ಮೌನದೊಳಗೂ
ಪಿಸುನುಡಿಯದಿದ್ದೊಡೆ
ಕೇಳದು ಎಂದಿಗೂ
ನಾನೆಂಬ ನಿನಾದ.

ಅರಿವಿಗೂ- ನಿನಗೂ
ಕೂದಲೆಳೆಯಂತರ
ಕೊರಗುವುದೇಕೆ ಕಂದಾ?
ಬೀಗುವ ಹಮ್ಮೇ
ಆಗುವ ಹಂಬಲ
ಎರಡೂ ಬೇಡ ಕೂಸೇ
ನೀ ನೀನಾಗಿದ್ದರೆ
ಅದುವೆ ಚೆನ್ನ
ಈ ಮರ್ಮವ ನೀನರಿಯೇ

ನಿನ್ನೆ-ನಾಳೆಗಳ
ನಂಟನು ಬಿಟ್ಟರೆ
ನಾನೆಂಬುದರ
ಸೊಂಟವೇ ಮುರಿವುದು
ನಿನ್ನ ಕಣ್ಣಲೇ
ನಿನ್ನನು ಕಂಡರೆ
ಹಮ್ಮಿನ ಭಾವವೇ
ಕರಗುವುದು.

ಈ ಕ್ಷಣದಲಿ
‘ಆ ಇಗೋ’ ಎಲ್ಲಿದೆ?
ಅದು ಕಾಲದ ಬಾಗಿಲ
ಕಾಯುವ ಕಾವಲು.
ಬಯಲ ಪ್ರೀತಿಯ
ಅನಂತದ ಶಿಶುವಿಗೆ
ಕಾಲದ ಸೂತಕ
ಕಾಡುವುದೇ?

Previous post ಬಯಲಾದ ದೇವರು
ಬಯಲಾದ ದೇವರು
Next post ಸರ್ವ ಧರ್ಮ ಸಮನ್ವಯ
ಸರ್ವ ಧರ್ಮ ಸಮನ್ವಯ

Related Posts

ಭವ ರಾಟಾಳ
Share:
Poems

ಭವ ರಾಟಾಳ

September 10, 2022 ಕೆ.ಆರ್ ಮಂಗಳಾ
ಇಗೋ ಹರಾಜಾಗುತ್ತಿದೆ ಈ ದೇಹ ಪ್ರತಿ ದಿನ, ಪ್ರತಿ ಗಳಿಗೆ ಕಾಣದ ಖದೀಮನ ಕೈಗೆ ಸಿಕ್ಕು ತನ್ನದಲ್ಲದ ಕಾಯವನು ಹರಾಜು ಹಾಕುತ್ತಲೇ ಇರುತ್ತಾನೆ ಕ್ಷಣಾರ್ಧದ ಬಿಡುವೂ ಕೊಡದೆ...
ನನ್ನ ಶರಣರು…
Share:
Poems

ನನ್ನ ಶರಣರು…

April 9, 2021 ಕೆ.ಆರ್ ಮಂಗಳಾ
ನನ್ನ ಶರಣರು ಅವರು- ಬೇರಿಳಿಸಿ, ಬೆವರಿಳಿಸಿ ಭೂಮಿ ಉತ್ತವರು ಕಕ್ಕುಲತೆಯಿಂದ ಬದುಕ ಕಟ್ಟಿದವರು ಹಸಿದ ಹೊಟ್ಟೆಗಳಿಗೆ ಅನ್ನ ಕೊಟ್ಟವರು ಎದೆಯಿಂದ ಎದೆಗೆ ಪ್ರೀತಿ ಹರಿಸಿದವರು. ನನ್ನ...

Comments 2

  1. Dr.Basavaraj Sabarad
    Jan 17, 2026 Reply

    ಮಂಗಳಾ ಅವರ ಕವಿತೆಗಳು ತುಂಬಾ ಅರ್ಥಪೂರ್ಣವಾಗಿವೆ.ಅಭಿನಂದನೆಗಳು.

  2. Dr. Shraddhananda swamiji, Vijayapura
    Feb 5, 2026 Reply

    The poem is really good.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಸನ್ಯಾಸ ದೀಕ್ಷೆ
ಸನ್ಯಾಸ ದೀಕ್ಷೆ
June 12, 2025
ಆಕಾರ-ನಿರಾಕಾರ
ಆಕಾರ-ನಿರಾಕಾರ
January 7, 2022
ನೀರಿನ ಬರ ನೀಗುವುದು ಹೇಗೆ?
ನೀರಿನ ಬರ ನೀಗುವುದು ಹೇಗೆ?
May 1, 2019
ಭಾವದಲ್ಲಿ ಭ್ರಮಿತರಾದವರ…
ಭಾವದಲ್ಲಿ ಭ್ರಮಿತರಾದವರ…
July 4, 2022
ಸ್ವಾಮಿಗಳು ಮತ್ತು ಭಕ್ತ ಹಿತಚಿಂತನೆ
ಸ್ವಾಮಿಗಳು ಮತ್ತು ಭಕ್ತ ಹಿತಚಿಂತನೆ
March 17, 2021
ಒಳಗೆ ತೊಳೆಯಲರಿಯದೆ…
ಒಳಗೆ ತೊಳೆಯಲರಿಯದೆ…
May 10, 2022
ನಾನು ಯಾರು? ಎಂಬ ಆಳ-ನಿರಾಳ-5
ನಾನು ಯಾರು? ಎಂಬ ಆಳ-ನಿರಾಳ-5
August 2, 2020
ಭವಸಾಗರ ದಾಂಟಿಪ ಹಡಗು-ಬಸವಣ್ಣ
ಭವಸಾಗರ ದಾಂಟಿಪ ಹಡಗು-ಬಸವಣ್ಣ
May 1, 2018
ಕೊಂಡಗುಳಿ ಕೇಶಿರಾಜ ಮತ್ತು…
ಕೊಂಡಗುಳಿ ಕೇಶಿರಾಜ ಮತ್ತು…
April 6, 2020
ಕುರುಹಿಲ್ಲದಾತಂಗೆ ಹೆಸರಾವುದು?
ಕುರುಹಿಲ್ಲದಾತಂಗೆ ಹೆಸರಾವುದು?
February 6, 2019
Copyright © 2026 Bayalu