ನಾನೆಂಬ ನಿನಾದ…
ನಾ ಹುಟ್ಟುವ ಮುನ್ನ
ಹೇಗಿದ್ದೆ ನೆನಪಿಲ್ಲಾ
ಹುಟ್ಟಿನೊಡನೆ
ಬಂದ ಬಳುವಳಿಯೇ
ನಾನೆಂಬ ಎಳೆ
ಈ ಅಹಮಿಕೆಗೆ
ಪ್ರಾಣ ಒತ್ತೆಯಿಟ್ಟು
ಎಷ್ಟು ಯುಗಗಳಾದವು?
ಒಂದೆಳೆ ಇದ್ದುದು
ಒತ್ತೊತ್ತಾಗಿ ಸೇರುತ್ತಾ
ಬುಟ್ಟಿಯಾಗಿ, ಬಟ್ಟೆಯಾಗಿ
ಬಲೆಯಾಗಿ ನನ್ನ
ತನ್ನೊಳು ಬಂಧಿಸಿದ್ದ
ತಿಳಿಸಲು ನೀನೇ
ಬರಬೇಕಾಯಿತು ಗುರುವೇ.
ತಾ ಬೀಗಲು
ಒಂದೊಂದ ಹೆಸರಿಟ್ಟು
ರೂಪ ಕೊಟ್ಟು,
ಬಣ್ಣ ತುಂಬಿ
ನಂಟನಂತೆ, ನಲ್ಲನಂತೆ
ಚಂದದ ಮಾತುಗಳಲ್ಲಿ
ನಿಜವ ಮರೆಸುತ್ತಾ
ಕಾವಲುಗಾರನಂತೆ
ತನ್ನ ಹಿತವನೇ ಕಾವುದು
ತನ್ನಿರುವಿನ
ಸುಳುಹು ಸಿಗದಂತೆ
ನಾಜೂಕಾಗಿ
ಕಾರ್ಯಸಾಧಿಸುವ
ಅದರ ಪಟ್ಟುಗಳನರಿತು
ಕೋಡ ಹಿಡಿದು
ನೆಲಕ್ಕೆ ಚಚ್ಚಿ
ಕಂಡಲ್ಲಿ ಗುಂಡು ಸಿಡಿಸಿ
ಕೊಂದೇ ಬಿಟ್ಟೆನೆಂದು
ಅಂದುಕೊಳ್ಳುವಾಗಲೇ
ಇನ್ನೆಲ್ಲೋ ಚಿಗಿತು
ಮತ್ತೆಲ್ಲೋ
ಹೂ-ಕಾಯಿ ಬಿಟ್ಟು
ಕನ್ನಡಿಯ ಬಿಂಬದಂತೆ
ಅಣಕಿಸುತ್ತದೆ…
ಮುಪ್ಪಿಲ್ಲದುದಕೆ
ಸಾವುಂಟೆ?
ನನಗೂ- ನಿನಗೂ
ನಡುವೆ ನಿಂತಿದೆ
ಉಸಿರುಗಟ್ಟಿಸುವ
ಗಟ್ಟಿಗಾಜಿನ ಪರದೆ.
ಸಿಟ್ಟು- ಸೆಡವುಗಳ
ನೋವು ಕ್ಲೇಷಗಳ
ಭವದ ಬೇರು
ಎಲ್ಲಿದೆ ಎನುವುದ
ನಾನೀಗ ಬಲ್ಲೆ
ಒಳಗೂ-ಹೊರಗೂ
ತನಗಾಗಿಯೇ
ತಡಬಡಿಸುತ್ತದೆ
ಚೂರು ಧಕ್ಕೆಯಾದರೂ
ಸಿಡಿಲು ಬಡಿದಂತೆ
ಚಡಪಡಿಸುತ್ತದೆ
ಒತ್ತುತ್ತದೆ
ಎದೆ ಮೇಲೆ ಕುಳಿತು
ಮಣಭಾರದಂತೆ
ತೊಲಗಿಸು ತಂದೆ
ನಾನೆಂಬ ಹೊರೆಯ.
ಅರಿವಿನ ರೆಪ್ಪೆ
ತೆರೆಯದ ಕೂಸಿಗೆ
ಬಯಲ ಅನಾವರಣ!
ಮಾಗಿ ಕಾಲದಲಿ
ವಸಂತದ ವರ್ಣನೆಯೇ?
ನಮ್ಮಿಬ್ಬರ ನಡುವೆ
ನೆಲ-ಮುಗಿಲಿನಂತರ
ಕರುಣೆ ಇರಲಿ ಗುರುವೆ.
ಗುರು:
ನೆರಳಲಿ ನಿಂತು
ಕತ್ತಲು ಎನುವರೆ?
ಉಸಿರೇ ಇಲ್ಲದ
ನೆಲೆಯೇ ಕಾಣದ
ತೃಣಕಣ ಹಮ್ಮಿಗೆ
ಹೆದರುವುದೇ?
ಕೂಗಿ ಕರೆದರೂ
ಕಿವಿಗೊಡದಿರು
ಹತ್ತಿರ ಬಂದರೂ
ಗಮನಿಸದಿರು
ಎದುರೇ ನಿಂತರೂ
ಉತ್ತರಿಸದಿರು
ಮಾತಿನ ಕೂಟಕೆ
ಮರುಳಾಗದಿರು
ಮೌನದೊಳಗೂ
ಪಿಸುನುಡಿಯದಿದ್ದೊಡೆ
ಕೇಳದು ಎಂದಿಗೂ
ನಾನೆಂಬ ನಿನಾದ.
ಅರಿವಿಗೂ- ನಿನಗೂ
ಕೂದಲೆಳೆಯಂತರ
ಕೊರಗುವುದೇಕೆ ಕಂದಾ?
ಬೀಗುವ ಹಮ್ಮೇ
ಆಗುವ ಹಂಬಲ
ಎರಡೂ ಬೇಡ ಕೂಸೇ
ನೀ ನೀನಾಗಿದ್ದರೆ
ಅದುವೆ ಚೆನ್ನ
ಈ ಮರ್ಮವ ನೀನರಿಯೇ
ನಿನ್ನೆ-ನಾಳೆಗಳ
ನಂಟನು ಬಿಟ್ಟರೆ
ನಾನೆಂಬುದರ
ಸೊಂಟವೇ ಮುರಿವುದು
ನಿನ್ನ ಕಣ್ಣಲೇ
ನಿನ್ನನು ಕಂಡರೆ
ಹಮ್ಮಿನ ಭಾವವೇ
ಕರಗುವುದು.
ಈ ಕ್ಷಣದಲಿ
‘ಆ ಇಗೋ’ ಎಲ್ಲಿದೆ?
ಅದು ಕಾಲದ ಬಾಗಿಲ
ಕಾಯುವ ಕಾವಲು.
ಬಯಲ ಪ್ರೀತಿಯ
ಅನಂತದ ಶಿಶುವಿಗೆ
ಕಾಲದ ಸೂತಕ
ಕಾಡುವುದೇ?




Comments 1
Dr.Basavaraj Sabarad
Jan 17, 2026ಮಂಗಳಾ ಅವರ ಕವಿತೆಗಳು ತುಂಬಾ ಅರ್ಥಪೂರ್ಣವಾಗಿವೆ.ಅಭಿನಂದನೆಗಳು.