
ವೀರದಾಸಮ್ಮನ ಸಹಜಾಮನಸ್ಕ ಯೋಗ
ಬೆಂಗಳೂರು – ಚೆನ್ನೈನ ಓಲ್ಡ್ ಮದ್ರಾಸು ಹೆದ್ದಾರಿಯಲ್ಲಿ ಹೊಸಕೋಟೆ ಮತ್ತು ಕೋಲಾರದ ಮಧ್ಯೆ ತಾವರೆಕೆರೆ ಎಂಬ ಹಳ್ಳಿ ಇದೆ. ಆ ಹಳ್ಳಿಯ ಮೂಲಕ ಹಾದು ಹೋಗುವ ಹೆದ್ದಾರಿಯ ಪಕ್ಕದಲ್ಲಿಯೇ ರಾಮಾವಧೂತರ ಆಶ್ರಮವಿದೆ. ಈಗಲೂ ಈ ಆಶ್ರಮದಲ್ಲಿ ರಾಮಾವಧೂತರ ಪರಂಪರೆಯ ಸಾಧಕರು ಹುಣ್ಣಿಮೆಯ ದಿನಗಳಲ್ಲಿ ಗುರುಪೂಜೆಗಳು, ತತ್ವಪದ ಗಾಯನ ಮತ್ತು ಗುರು ಆರಾಧನೆಗಳನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಈ ಆಶ್ರಮ ರಾಮಾವಧೂತರು ಮತ್ತು ವೀರದಾಸಮ್ಮನವರು ಜೀವಿಸಿದ್ದಾಗ, ಇವರಿಬ್ಬರಿಗೂ ಆಶ್ರಯತಾಣ.
ಕೋಲಾರದ ಮಣ್ಣಲ್ಲಿ ಕೈವಾರ ನಾರೇಯಣಪ್ಪ, ತಾವರೆಕೆರೆ ರಾಮಾವಧೂತರು, ವೀರದಾಸಮ್ಮ ಮತ್ತು ಘಟ್ಟಹಳ್ಳಿ ಆಂಜಿನಪ್ಪನವರ ತತ್ವಪದಗಳನ್ನು ಕೇಳದವರು ಯಾರು ಇರಲಾರರು. ಈ ಜಿಲ್ಲೆಯ ಆಚೆಗೂ ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಧರ್ಮಪುರಿ ಹಾಗೂ ತೆಲುಗನ್ನಡ ಭಾಷೆ ಚಾಲ್ತಿಯಲ್ಲಿರುವ ಬಯಲು ಸೀಮೆಯಲ್ಲಿಯೂ ಇವರ ತತ್ವಪದಗಳು ಚಿರಪರಿಚಿತ. ಕೈವಾರ ನಾರೇಯಣಪ್ಪನವರ ತತ್ವಪದಗಳಿಗಿದ್ದಷ್ಟೇ ಜನಾದರಣೆ ತಾವರೆಕೆರೆ ರಾಮಾಧೂತರು ಹಾಗೂ ವೀರದಾಸಮ್ಮನವರ ತತ್ವಪದಗಳಿಗಿದೆ. ಬಯಲುಸೀಮೆಯಲ್ಲಿ ತತ್ವಪದಗಳನ್ನು ಹಾಡುವ ಕೂಟಗಳಲ್ಲಿ ಸೂಕ್ಷ್ಮವಾಗಿ ಗಮನಿಸಿದರೆ ನಾರೇಯಣಪ್ಪನವರ ತತ್ವಪದಗಳಷ್ಟೇ ಸಂಖ್ಯೆಯ ರಾಮಾವಧೂತರ ಮತ್ತು ವೀರದಾಸಮ್ಮನವರ ತತ್ವಪದಗಳು ಹಾಡಲ್ಪಡುತ್ತಿರುತ್ತವೆ. ಅಚಲ ಗುರುಪರಂಪರೆಯ ಸಾಧಕರಲ್ಲಿ ರಾಮಾವಧೂತರು ಮತ್ತು ವೀರ ದಾಸಮ್ಮನವರ ಜೀವನ ದರ್ಶನದ ಪ್ರಭಾವ ಇಂದಿಗೂ ಹಚ್ಚ ಹಸಿರಾಗಿದೆ.
ಕೈವಾರ ನಾರೇಯಣಪ್ಪನವರ ತತ್ವಪದ ಸಾಹಿತ್ಯದ ಪುಸ್ತಕಗಳು ಸುಮಾರು 50 ವರ್ಷಗಳಿಂದ ಹಲವಾರು ಮುದ್ರಣಗಳನ್ನು ಕಂಡಿವೆ. ಈಗಲೂ ಇವರ ಪುಸ್ತಕಗಳು ದಿನಂಪ್ರತಿ ಮಾರಾಟವಾಗುತ್ತಲೇ ಇವೆ. ಕೈವಾರ ಕ್ಷೇತ್ರ ಒಂದು ಪ್ರಮುಖ ಯಾತ್ರಾ ಸ್ಥಳದೋಪಾದಿಯಲ್ಲಿ ಬೆಳೆದು ನಿಂತಿದೆ. ಆದರೆ ವೀರದಾಸಮ್ಮ ಹಾಗೂ ತಾವರೆಕೆರೆ ರಾಮಾವಧೂತರಿಗೆ ಈ ಬಗೆಯ ಯಾವ ಪ್ರಚಾರಗಳು ಇಲ್ಲ. ರಾಮಾವಧೂತರು ರಚಿಸಿದ ‘ಮುಕ್ತಿ ದರ್ಪಣ’ 1965 ರಲ್ಲಿ ಒಂದು ಸಲ ಮಾತ್ರ ಮುದ್ರಣ ಕಂಡಿದೆ. ಈ ಗ್ರಂಥದಲ್ಲಿ ರಾಮಾವಧೂತರು ಮತ್ತು ವೀರದಾಸಮ್ಮನವರು ಸ್ವತಃ ರಚಿಸಿದ 250ಕ್ಕಿಂತಲೂ ಹೆಚ್ಚು ತತ್ವಪದಗಳಿವೆ. ಕೋಲಾರದ ತೆಲುಗು ಮತ್ತು ಕನ್ನಡ ಭಾಷೆಯಲ್ಲಿರುವುದು ಈ ತತ್ವಪದಗಳ ವಿಶೇಷ. ಇಬ್ಬರ ಸಾಧಕ ಜೀವನದ ಕೆಲವು ಘಟನೆಗಳು ಸಹ ಈ ಪುಸ್ತಕದಲ್ಲಿ ದಾಖಲಾಗಿವೆ. ವೀರದಾಸಮ್ಮ ರಾಮಾವಧೂತರನ್ನು ಗುರುವಾಗಿಸಿಕೊಂಡು ಬದುಕಿದ ಸನ್ನಿವೇಶಗಳ ಪ್ರಸ್ತಾಪವೂ ಈ ಪುಸ್ತಕದಲ್ಲಿದೆ. ಮಾಲೂರು ಸೊಣ್ಣಪ್ಪನವರು ಈ ಪುಸ್ತಕದ ಮುದ್ರಣವನ್ನು ತಮ್ಮ ಸ್ವಂತ ಖರ್ಚಿನಿಂದಲೇ ಮಾಡಿಸಿದ್ದರು. ಗುರು ಪರಂಪರೆಯ ಸಾಧಕ ಜೀವಿಗಳು ಈ ಪುಸ್ತಕವನ್ನು ಇಂದಿಗೂ ತಮ್ಮಲ್ಲಿ ಜೋಪಾನವಾಗಿ ಇಟ್ಟುಕೊಂಡಿದ್ದಾರೆ. ಯಾವುದೇ ರೀತಿಯ ಪ್ರಚಾರ ಮತ್ತು ಮುದ್ರಣದ ಭಾಗ್ಯವಿಲ್ಲದಿದ್ದಾಗ್ಯೂ ಸುಮಾರು ಎರಡು ನೂರು ವರ್ಷಗಳಷ್ಟು ಹಳೆಯದಾದ ಈ ತತ್ವಪದಗಳು ಹರಿದಾಡುತ್ತಾ ಉಳಿದಿರುವುದು ಆಶ್ಚರ್ಯಕರ. ಈ ಬಗೆಯ ಶಕ್ತಿಯು ಸಾಧಕ ಪರಂಪರೆಗಳಿಗೆ ಮಾತ್ರ ಸಾಧ್ಯವಿರುತ್ತದೆ. ಇವು ಇಂತಹ ಕಾಲದಲ್ಲೂ ಉಳಿಯಲು ಮುಖ್ಯ ಕಾರಣ, ನಮ್ಮ ಕರ್ನಾಟಕದ ಉದ್ದಗಲಕ್ಕೂ ಈಗಲೂ ಕಾಣಸಿಗುವ ದೇಸಿ ಸಾಧು ಮಠಗಳು ಮತ್ತು ಅಚಲ ಸಾಧಕರು.
ರಾಮಾವಧೂತರು ಮತ್ತು ವೀರದಾಸಮ್ಮನವರ ಕಾಲ ಕ್ರಿ.ಶ 1735 ರಿಂದ 1820. ಕೈವಾರ ನಾರೇಯಣಪ್ಪನವರದೂ ಇದೇ ಕಾಲ ಎನ್ನಬಹುದು. ಕೈವಾರ ನಾರೇಯಣಪ್ಪನವರಿಗೆ ರಾಮಾವಧೂತರು ಆತ್ಮೀಯ ಸ್ನೇಹಿತರಾಗಿದ್ದರು. ನಾರೇಯಣಪ್ಪನವರ ತತ್ವಪದ ಸಾಹಿತ್ಯವಾದಂತಹ ಸುಜ್ಞಾನ ತತ್ವಗಳು, ಅಮರನಾರೇಯಣಶತಕ ಹಾಗೂ ಕಾಲಜ್ಞಾನ ತತ್ವಗಳನ್ನು ತಿದ್ದಿ ತೀಡಿ ಸರಿಪಡಿಸಿದ ಕೀರ್ತಿ ರಾಮಾವಧೂತರದು. ಆದ್ದರಿಂದ ಅವಿಭಜಿತ ಕೋಲಾರ ಜಿಲ್ಲೆಯ ತತ್ವಪದ ಸಾಹಿತ್ಯದ ಮೂಲ ಕರ್ತೃಗಳು ಈ ಮೂವರು ಎನ್ನಬಹುದು. ನಂತರ ಬಂದ ಇತರ ತತ್ವಪದಕಾರರೆಂದರೆ ಘಟ್ಟಹಳ್ಳಿ ಆಂಜನಪ್ಪ, ನಾಗಾರ್ಯ, ಮಲ್ಲಾರ್ಯರು!
ವೀರದಾಸಮ್ಮನವರ ಜೀವನ ವೃತ್ತಾಂತಗಳನ್ನು, ಮತ್ತು ಅವರ ತತ್ವಪದ ಸಾಹಿತ್ಯ ಹಾಗೂ ಯೋಗ ಪ್ರಸ್ತಾಪಗಳನ್ನು ಈ ಲೇಖನದಲ್ಲಿ ಸಂಕ್ಷಿಪ್ತವಾಗಿ ದಾಖಲಿಸಲಾಗಿದೆ. ಆಕೆ ಶ್ರೀಮಂತ ಕುಟುಂಬದ ಹೆಣ್ಣುಮಗಳು. ತನ್ನ ಅಂತರಂಗಕ್ಕನುಗುಣವಾದ ಸ್ವಾತಂತ್ರ್ಯ ಮತ್ತು ಸಮಾನತೆಯ ಸಂವೇದನೆಗಳ ಮಿತಿಗಳಲ್ಲಿ ಬದುಕನ್ನು ಗ್ರಹಿಸಿಕೊಂಡಿದ್ದವಳು. ಈ ವ್ಯವಸ್ಥೆಯ ಕಟ್ಟುಪಾಡುಗಳು, ಸಂಬಂಧಗಳು ಏನೆಂಬುದನ್ನು ತಿಳಿಯದಾ ಮುನ್ನವೇ ಅಪ್ಪ ಅಮ್ಮನ ಒತ್ತಾಯದಂತೆ ಮದುವೆ ಮಾಡಿಕೊಂಡು ಗಂಡನ ಮನೆ ಸೇರುವುದು ಆಕೆಗೆ ಅನಿವಾರ್ಯವಾಗಿತ್ತು. ಬಾಲ್ಯದಲ್ಲಿ ತನಗಿದ್ದ ಸ್ವಾತಂತ್ರ್ಯ ಮತ್ತು ಸಂವೇದನೆಗಳನ್ನು ಕಳೆದುಕೊಂಡು ಗಂಡನ ಅಧೀನದಲ್ಲಿ ಬಾಳಬೇಕಾದದ್ದು ಆಕೆಗೆ ತುಂಬಾ ಹತಾಶೆಯನ್ನುಂಟು ಮಾಡಿತ್ತು. ಹೇಗೋ ಏಳೆಂಟು ವರ್ಷ ಕಳೆದ ನಂತರ ಆಕೆಗೆ ‘ಬಂಜೆ’ಯ ಹಣೆಪಟ್ಟಿ ಕಟ್ಟಿ, ಆಕೆಯ ಗಂಡ ಮತ್ತೊಂದು ಮದುವೆಯಾದ. ಯಾರದೋ ಹಿತಗಳಿಗೆ ತನ್ನ ಬದುಕಿನ ಸುಖವನ್ನು ಬಲಿಗೊಡುವುದು ಅಸಾಧ್ಯವೆನಿಸಿದಾಗ ಆಕೆ ತನ್ನ ತವರೂರಿಗೆ ವಾಪಸ್ಸು ಬರುತ್ತಾಳೆ. ಅಲ್ಲಿಯೂ ಅದೇ! ಪುರುಷಾಧಿಪತ್ಯ! ಗಂಡನಿಲ್ಲದ ಹೆಣ್ಣನ್ನು ತನ್ನ ಮನೆಯಲ್ಲಿರಿಸಿಕೊಂಡು ಈ ಸಮಾಜದ ಅಪಮಾನ ಮತ್ತು ಲೋಕ ಕಂಟಕಗಳನ್ನು ಮೈಮೇಲೆ ಹಾಕಿಕೊಳ್ಳಲು ಸಿದ್ಧನಿಲ್ಲದ ಅಪ್ಪನ ಅಭಿಪ್ರಾಯ ತಿಳಿದ ವೀರದಾಸಮ್ಮ, ಎಲೆ, ಅಡಿಕೆ, ಕಡ್ಡಿಪುಡಿ, ಮಕ್ಕಳಿಗೆ ಬೇಕಾಗುವ ಸಣ್ಣಪುಟ್ಟ ತಿಂಡಿ ಇಟ್ಟುಕೊಂಡು ಊರೂರು ಸುತ್ತಿ ವ್ಯಾಪಾರ ಮಾಡುತ್ತಾ… ಕತ್ತಲಾದ ನಂತರ ಯಾವುದಾದರೂ ಅನುಕೂಲಸ್ಥ ಮನೆಯ ಹೆಂಗಸಿನ ಆಶ್ರಯವನ್ನು ಪಡೆದು… ಬೆಳಗಾಗುತ್ತಲೇ ಮತ್ತೊಂದು ಊರಿಗೆ ಪಯಣಿಸುತ್ತಾ, ಅಲೆಮಾರಿ ಜೀವನ ನಡೆಸುತ್ತಾ ಊರೂರಿನ ಬಂಧುವಾಗುತ್ತಾಳೆ.
ವೀರದಾಸಮ್ಮನ ಪ್ರಮುಖ ಬದುಕಿನ ಘಟ್ಟಗಳನ್ನು ವಿವರಿಸುವ ಈ ಪ್ರಸಂಗದಿಂದ ನಮಗೆ ತಿಳಿಯುವುದೇನೆಂದರೆ, ಪುರುಷಾಧೀನ ವ್ಯವಸ್ಥೆಯ ರಾಜಕಾರಣದ ಯಜಮಾನಿಕೆ, ಶೋಷಣೆ, ದಬ್ಬಾಳಿಕೆ, ಅವಮಾನಗಳ ವಸ್ತುಸ್ಥಿತಿಗೆ ಆಕೆ ತೀವ್ರವಾಗಿ ಮುಖಾಮುಖಿಯಾದವಳು. ಇಂತಹ ಸ್ಥಿತಿಯಲ್ಲಿಯೂ ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿಯಾದರೂ ಪುರುಷಾಧೀನ ವ್ಯವಸ್ಥೆಯ ಮೇಲೆ ಆಕೆ ಬಂಡುಕೋರ ನೀತಿಯನ್ನು ತಳೆಯುತ್ತಾಳೆ. ಆ ಕಾಲದ ಮಿತಿಗಳಲ್ಲಿಯೂ ಒಂದು ಸ್ವತಂತ್ರವಾದ ಬದುಕನ್ನು ರೂಪಿಸಿಕೊಂಡ ಆಕೆಯ ಎದೆಗಾರಿಕೆಯನ್ನು ಊಹಿಸಿಕೊಂಡರೂ ಎದೆ ನಡುಗುತ್ತದೆ. ವೀರದಾಸಮ್ಮನ ಕಾಲಘಟ್ಟದಲ್ಲಿ ಆಕೆ ಎದುರುಗೊಂಡ ಪುರುಷಾಧೀನ ರಾಜಕಾರಣ, ಆಕೆ ಪುನರೂಪಿಸಿಕೊಂಡ ಸ್ವಾತಂತ್ರ್ಯ, ಹುಡುಕಿಕೊಂಡ ಲಿಂಗ ತಾರತಮ್ಯ ರಹಿತವಾದ ಗುರುಮಾರ್ಗ ಇವೆಲ್ಲವೂ ಇಂದಿನ ಆಧುನಿಕ ಯುಗಕ್ಕೆ ಅನ್ವಯವಾಗುವಂತೆ ಆಧುನಿಕ ಪರಿಭಾಷೆಯಲ್ಲಿ ಮರು ವ್ಯಾಖ್ಯಾನಿಸಿಕೊಳ್ಳುವ ನೆಲೆಯಿಂದ ವೀರದಾಸಮ್ಮನ ಜೀವನ ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ.
ಸ್ತ್ರೀಪರ ಚಿಂತನೆಗಳು ಪುರುಷಾಧೀನ ರಾಜಕೀಯ ವ್ಯವಸ್ಥೆಯಲ್ಲಿ ಪರಿವರ್ತನೆ ತರಲು ಹೋರಾಡುವ ಬದಲಿಗೆ, ಪುರುಷ ಸಮಾಜವನ್ನು ತನ್ನ ವಿರೋಧಿ ಎಂದು ಭಾವಿಸಿದರೆ ಪ್ರತಿಕೂಲ ಪರಿಸ್ಥಿತಿಗಳು ಉಂಟಾಗುತ್ತವೆ. ಗಂಡು ಹೆಣ್ಣಿನ ಮಧ್ಯ ಇರಬೇಕಾದ ಸಾಮರಸ್ಯ ಮತ್ತು ಸಮಾನತೆಯ ಕೊಂಡಿ ಕಳಚಿ ಹೋಗುತ್ತದೆ. ಏಕೆಂದರೆ ಪುರುಷಾಧೀನ ರಾಜಕೀಯ ವ್ಯವಸ್ಥೆಯ ಗ್ರಹಿಕೆಗಳನ್ನು ಪುರುಷರಿಗೆ ಮಾತ್ರ ಆರೋಪಿಸಲಾಗದು. ಪುರುಷಾಧೀನತೆ ಪುರುಷ ಮತ್ತು ಸ್ತ್ರೀ ಇಬ್ಬರಲ್ಲೂ ತಲೆತಲಾಂತರಗಳಿಂದ ಒಪ್ಪಿಸಲ್ಪಟ್ಟು ಪೋಷಿಸಿಕೊಂಡು ಬಂದಿರುವ ಸ್ವಭಾವ. ಈ ಸ್ವಭಾವಗಳಲ್ಲಿ ಸ್ತ್ರೀ ಪುರುಷ ಪ್ರತ್ಯೇಕತೆಯ ತಪ್ಪು ಗ್ರಹಿಕೆಗಳಿರುತ್ತವೆ.
ಸುಮಾರು ಮೂವತ್ತು ವರ್ಷಗಳ ಅಲೆಮಾರಿ ಜೀವನವನ್ನು ನಡೆಸಿದ ವೀರದಾಸಮ್ಮನವರಿಗೆ ಪ್ರತಿದಿನ ತಾನು ಬೇರೊಬ್ಬ ಮನೆಯ ಹೆಣ್ಣುಮಕ್ಕಳಿಗೆ ಭಾರವಾಗುವುದು ಅಸಹನೀಯವೆನಿಸತೊಡಗಿತು. ಎಲ್ಲರಿಗೂ ಅವರವರ ಬದುಕಿನ ಭಾರ ಇರುವಾಗ ಅಂತಹ ಭಾರದಲ್ಲಿ ತನ್ನ ಭಾರವೊಂದನ್ನು ಇನ್ನೊಬ್ಬರ ತಲೆಯ ಮೇಲೆ ಹಾಕುವುದು ಸಾಕೆನಿಸಿತ್ತು. ಈ ವ್ಯಾಪಾರವೂ ಸಾಕು, ಈ ಅಲೆದಾಟವೂ ಸಾಕೆನಿಸಿ, ತಾವರೆಕೇರೆಯ ರಾಮಾವಧೂತರ ಆಶ್ರಮದ ಹಾದಿಯಲ್ಲಿ ಬಂದಾಗಲೆಲ್ಲಾ ತನ್ನ ಬದುಕಿನ ಕಷ್ಟಗಳನ್ನೆಲ್ಲಾ ಹೇಳಿಕೊಳ್ಳುತ್ತಾ ತಾನು ಆಶ್ರಮದಲ್ಲಿ ಇರುತ್ತೇನೆಂದು ಗೋಗರೆಯುತ್ತಿದ್ದರು. ರಾಮಾವಧೂತರು ಮಾತ್ರ ನಿರಾಕರಿಸುತ್ತಲೇ ಇದ್ದರು. ಅನೇಕ ದಿನಗಳ ತರುವಾಯ ವೀರದಾಸಮ್ಮ, ರಾಮಾವಧೂತರಲ್ಲಿ ತನ್ನ ಕೊನೆಯ ಆಸೆಯೆಂಬಂತೆ ಪಟ್ಟುಹಿಡಿದು ಕೂತರು: “ ಅಲೆಮಾರಿ ಬದುಕಿಗೆ ಗೊತ್ತುಗುರಿಯಿಲ್ಲ. ಗಾಳಿಗೆ ತೂರಿಹೋಗುವ ತರಗಲೆಯ ಮೇಲೆ ಒಂದು ಕಲ್ಲಿಡಲು ನಿಮ್ಮಿಂದ ಆಗುವುದಿಲ್ಲವೇ? ಮಠದಲ್ಲಿದ್ದರೆ ನಾನು ಮೋಕ್ಷದ ಚಿಂತೆ ಮಾಡಬಹುದು. ನನ್ನವರು, ನನ್ನ ಕುಟುಂಬ, ಬಂಧುಬಳಗವಿಲ್ಲದ ನನ್ನಂತಹವರಿಗೆ ಇರೋದು ಇದೊಂದೇ ದಾರಿ. ನಿಮ್ಮ ಸನ್ನಿದಿ ನನಗೆ ಬಹಳ ಅಗತ್ಯವಿದೆ. ದಯವಿಟ್ಟು ನಿರಾಕರಿಸದಿರಿ” ಎಂದು ಪರಿಪರಿಯಾಗಿ ಭಿನ್ನವಿಸಿಕೊಂಡಾಗ ರಾಮಾವಧೂತರ ಮನಸ್ಸು ಕರಗಿ, “ಆಯ್ತು, ಬಂದು ಇರಮ್ಮಾ!” ಎಂದು ಅಪ್ಪಣೆ ಕೊಟ್ಟರು. ಹಾಗೆ ಬಂದು ಗುರುಪಾದ ಸೇರಿಕೊಂಡವರು ವೀರದಾಸಮ್ಮ.
ರಾಮಾವಧೂತರು ಅಮನಸ್ಕ ಯೋಗಿಗಳಾಗಿದ್ದರು. ಅವರ ಸಾಹಚರ್ಯದಲ್ಲಿ ವೀರದಾಸಮ್ಮ ಬಲುಬೇಗ ಈ ಪಥಕ್ಕೆ ಹೆಜ್ಜೆ ಹಾಕಿದರು. ಪರಂಪರಾನುಗತವಾಗಿ ಪೋಷಿಸಿಕೊಂಡು ಬಂದಿರುವ ಸ್ವಭಾವಜನ್ಯ ಮನೋಸಂರಚನೆಗಳನ್ನು ವೀರದಾಸಮ್ಮ ಭ್ರಮೆ, ಭ್ರಾಂತಿ, ಮೂರ್ಖತನ, ನಾಮರೂಪ, ವಿಕಲ್ಪ ಮನಸ್ಸಿನೊಳಗಿನ ವಿಷಯದ ವಿಷ ಎಂದು ಜರಿಯುತ್ತಾರೆ. ಆಕೆಯಲ್ಲಿ ಲಿಂಗ ಸಮಾನತೆಗೂ ಮಾನವರಲ್ಲಿ ಇರಬೇಕಾದ ಸಮತಾಭಾವಕ್ಕೂ ಯಾವುದೇ ವ್ಯತ್ಯಾಸ ಕಾಣುವುದಿಲ್ಲ. ಮನೋಸಂರಚನೆಗಳನ್ನು ಪ್ರಜ್ಞಾಪೂರ್ವಕವಾಗಿ ನಿರ್ಲಕ್ಷಿಸಿ, ಅವನ್ನು ದಾಟಿಕೊಳ್ಳುವುದು ಆಕೆಯಲ್ಲಿ ಉತ್ಕೃಷ್ಟವಾದ ಬಿಡುಗಡೆ ಎನಿಸಿದೆ.
ಈ ಮನಸ್ಸಿನೊಳಗಿರ್ಪ ವಿಷವಳಿಯಬೇಕು
ಶ್ರೀ ಮಹಾಪರತತ್ವ ಸ್ಥಿತಿಯಾಗಬೇಕು ||ಪ||
ಸುಖ ದುಃಖದಾಬ್ಧಿಯಲ್ಲಿ ಶೂರಳಾಗಿರಬೇಕು
ಸಖೀ ಜನರ ಮೋಹದುರಿ ಸಾಯಬೇಕು
ಅಕಳಂಕ ಹೃತ್ಕಮಲದಾನಂದವಿರಬೇಕು
ಸಕಲಾತ್ಮರಲ್ಲಿ ಬುದ್ಧಿ ಸಮನಾಗಬೇಕು ||1||
ತರ್ಕ ಶಾಸ್ತ್ರವ ಬಿಟ್ಟು ತತ್ವದಲ್ಲಿರಬೇಕು
ಮೂರ್ಖರಿಗೆ ಉಪಕಾರ ಮುಗಿದಿರಬೇಕು
ತರ್ಕ ಜನರಿಹ ಸ್ಥಳವೇ ತಪ್ಪಿ ಹೋಗಿರಬೇಕು
ಅರ್ಕ ಚಂದ್ರಾಂಗನಳಿದುಳಿಯಬೇಕು ||2||
ಕಾಮಾದಿ ರಾಜಸವಾ ಕೊಂದು ಹಾಕಿರಬೇಕು
ತಾಮಸದ ಕುರಿಮರಿ ತಲೆ ಕಡೆಯಬೇಕು
ನಾಮರೂಪಗಳ ನಾನತ್ವ ಬಿಡಬೇಕು
ಚಾಪಲ್ಯ ಬುದ್ಧಿಯನ್ನು ಚಂಡಾಡಬೇಕು ||3||
ತಾವರೆಕೆರೆ ಎಂಬ ತಾವು ಬಿಟ್ಟಿರಬೇಕು
ದೇವದೇವನು ತಾನೆಂದು ತೋರಬೇಕು
ನಿರ್ವಾಣ ಭಾವದೊಳು ಭ್ರಮೆಗಳ ಬಿಡಬೇಕು
ಭ್ರಮೆಗಳೆಲ್ಲವು ಬೆಂದು ಬೈಯಲಾಗಬೇಕು ||4||
ಸಮತೆಯೇ ವೀರದಾಸಮ್ಮನವರಲ್ಲಿ ಬಹುದೊಡ್ಡ ಸದಮಲ ಜ್ಞಾನವೆನಿಸಿಕೊಂಡಿದೆ. ಸಮತೆಯು ಕ್ರಿಯೆ ಪ್ರತಿಕ್ರಿಯಾ ಗ್ರಹಿಕೆಗಳಿಂದಾದ ಅಭಿವ್ಯಕ್ತಿ ಮಾತ್ರವಲ್ಲ, ನಿಸರ್ಗ ಸತ್ಯದಲ್ಲಿ ಬಾಳುವ ಒಳನೋಟ. ಸ್ತ್ರೀವಾದಿ ಚಿಂತನೆಗಳಿಗೂ ಮತ್ತು ಪುರುಷಾಧೀನ ರಾಜಕೀಯ ವ್ಯವಸ್ಥೆಗೂ ಒಂದು ಒಳನೋಟದ ಆತ್ಮವಿಮರ್ಶೆ ಸಾಧ್ಯವಿಲ್ಲದಿದ್ದರೆ, ಸಮಾಜದಲ್ಲಿ ಪರಿವರ್ತನೆ ಸಾಧ್ಯವಿಲ್ಲವೆಂದು ಹೇಳುವ ತತ್ವಪದಗಳು ಆಧುನಿಕತೆಯ ಈ ಕಾಲದಲ್ಲಿಯೂ ಅಧ್ಯಯನಯೋಗ್ಯವಾಗಿವೆ. ತಾನು ಮತ್ತು ಇದಿರಿನಲ್ಲಿರಬೇಕಾದ ನೈತಿಕತೆ, ಸರಳತೆಯ ಜೀವಂತಿಕೆ ಮತ್ತು ಜೀವನಪ್ರೀತಿಗಳನ್ನು ಎತ್ತಿಹಿಡಿಯುವ ವೀರದಾಸಮ್ಮನವರ ತತ್ವಪದ ಸಾಹಿತ್ಯವು ಬಹುಮುಖ್ಯವಾಗಿ ನಿಸರ್ಗ ತತ್ವದ ಒಳನೋಟಕ್ಕೆ ಬದ್ಧವಾದ ಅನುಭಾವಿಕತೆಯನ್ನು ಮಾನವ ಘನತೆಯಾಗಿ ಲೋಕದೆದುರಿಗೆ ಇಡುತ್ತದೆ.
ಸಹಜಾಮನಸ್ಕದ ತಾಯಿಬೇರು:
ಈ ನೆಲದಲ್ಲಿ ದೀರ್ಘಕಾಲೀನವಾಗಿ ಸುಮಾರು ಸಾವಿರಾರು ವರ್ಷಗಳ ಕಾಲಾಂತರದಲ್ಲಿ ನಡೆದ ವೈದಿಕ, ಅವೈದಿಕ ಸಂಸ್ಕೃತಿಗಳ ಸಂಘರ್ಷದ ಸಂಕಥನಗಳಲ್ಲಿ ನಮ್ಮ ಬಹುತ್ವ ಭಾರತೀಯ ಸಾಂಸ್ಕೃತಿಕ ಚರಿತ್ರೆ ಅಡಗಿದೆ. ಕ್ರಿ.ಶ 700ರಿಂದ ಈಚೆಗೆ ಹುಟ್ಟಿಕೊಂಡ ಪಂಥೀಯ ಸುಧಾರಣಾ ವಾದಗಳು ಈ ಮಣ್ಣಿನ ಶ್ರಮಿಕರ ಅವೈದಿಕ ಪರಂಪರೆಯ ತಿಳುವಳಿಕೆಗಳನ್ನು ಅಮಾನ್ಯಗೊಳಿಸುತ್ತಾ ಬಂದವು. ಈ ಸುಧಾರಣಾವಾದಗಳು ಉಂಟು ಮಾಡಿದ ಸಾಂಸ್ಕೃತಿಕ ವಿಸ್ಮೃತಿ ಈ ಮಣ್ಣಿನ ಬಹು ದೊಡ್ಡ ದುರಂತ. ಇಲ್ಲಿ ಸಂಸ್ಕೃತ ಸಾಹಿತ್ಯದಿಂದ ಬಂದಿರುವ ಸಾಹಿತ್ಯವೇ ಸನಾತನವಾದುದೆಂದೂ ಮತ್ತು ಸರ್ವಶ್ರೇಷ್ಠವಾದುದೆಂದೂ ಬಹುಶಃ ನಂಬಿಸಲಾಯಿತು.
ವೈದಿಕ ಧೋರಣೆಗಳ ಎದುರಿಗೆ ಅವೈದಿಕರು ಹುಟ್ಟುಹಾಕಿದ ತತ್ವದರ್ಶನಗಳ ವಿಸ್ತಾರ ಬಲುದೊಡ್ಡದು. ವೈದಿಕ ಮತ್ತು ಅವೈದಿಕ ಇವೆರಡಕ್ಕೂ ಇರುವ ಒಂದು ಸಾಮಾನ್ಯ ಲಕ್ಷಣವೇನೆಂದರೆ ವೈದಿಕ ಪರಿಭಾಷೆ ಕಾಲ್ಪನಿಕತೆಯನ್ನೇ ಮಹಾಜ್ಞಾನವೆನ್ನುತ್ತದೆ. ಅವೈದಿಕರು ಅವರ ಕಾಲ್ಪನಿಕತೆಯನ್ನು ಬಯಲಿಗೆಳೆದು ನಿಸರ್ಗದ ವಸ್ತುಸ್ಥಿತಿಯ ವಿವೇಕದಲ್ಲಿ ಬಾಳುವಿಕೆಗೆ ಹೆಚ್ಚು ಪ್ರಾಶಸ್ತ್ಯ ನೀಡಿದರು.
ಅವೈದಿಕ ಧಾರೆಗಳಾದ ಬೌದ್ಧ, ಜೈನ, ಚಾರ್ವಾಕ, ಸಾಂಖ್ಯ, ಶೈವತಂತ್ರ, ಕಾಳಾಮುಖ, ನಾಥ, ಸಿದ್ಧ ಮತ್ತು ಹನ್ನೆರಡನೇ ಶತಮಾನದ ನಮ್ಮ ಕನ್ನಡದ ವಚನ ಚಳುವಳಿ ಹಾಗೂ ಶಾಕ್ತ, ಅವಧೂತ, ಅಚಲ ಇತ್ಯಾದಿ ದಾರ್ಶನಿಕ ನಿಲುವುಗಳಿಗೆ ಎಲ್ಲಾ ಕಾಲದಲ್ಲೂ ವೈದಿಕತೆಯ ಬಣ್ಣ ಬಳಿದು ಅಪಾರ್ಥಕ್ಕೀಡುಮಾಡಿ ವಿರೂಪಗೊಳಿಸುವ ಸಂಚು ಇಂದಿಗೂ ನಡೆಯುತ್ತಲೇ ಇದೆ. ಇವೆಲ್ಲಾ ಸಾಂಸ್ಕೃತಿಕ ರಾಜಕಾರಣಗಳ ವಿವಕ್ಷೆಗಳಾಚೆಗೂ ಆರೂಢ, ಶಾಕ್ತ, ಅವಧೂತ, ಅಚಲ, ಸೂಫಿ, ಇತ್ಯಾದಿ ತತ್ವಪದ ಪರಂಪರೆಗಳು ಬುದ್ಧಗುರುವಿನ ಬೆಳಕಿನಲ್ಲಿ ಉಸಿರಾಡಿಕೊಂಡು ಜೀವಿಸಿವೆ.
ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಭಾಗಗಳಲ್ಲಿ ಇಂದಿಗೂ ಇರುವ ‘ಅಚಲ ತತ್ವಪದ’ ಸಾಧಕ ಪರಂಪರೆಯಲ್ಲಿ ತಾರಕ, ಅಮನಸ್ಕ, ಸಾಂಖ್ಯ, ಪರಿಪೂರ್ಣ ಎಂಬ ನಾಲ್ಕು ಬಗೆಯ ಸಾಧಕರು ನಮಗೆ ಕಾಣಸಿಗುತ್ತಾರೆ.
ಬುದ್ಧಗುರುವಿಗೆ ‘ಅನಿಕೇತನ’ ಎಂಬ ಮತ್ತೊಂದು ಹೆಸರಿದೆ. ಅನಿಕೇತನ ಎಂದರೆ ಸ್ಥಿರವಾದ ನೆಲೆ ಇಲ್ಲದವರು ಎಂದಾಗುತ್ತದೆ. ಅಂದರೆ ಮನುಷ್ಯ ನಿರ್ಮಿತವಾದ ಕುಟುಂಬ, ಅಧಿಕಾರ, ಕುಲ, ದೇಶ, ಭಾಷೆ, ಮತಗಳ ಹಂಗಿಲ್ಲದೇ ವಿಶ್ವವನ್ನೇ ತನ್ನ ಕುಟುಂಬವಾಗಿಸಿಕೊಂಡು, ಸಕಲ ಜೀವಿಗಳ ಶ್ರೇಯಸ್ಸಿಗಾಗಿ ಸಂಪೂರ್ಣ ಬದುಕನ್ನು ಮುಡುಪಾಗಿಟ್ಟವರಿಗೆ ಈ ಹೆಸರು ಸಲ್ಲುತ್ತದೆ. ವೀರದಾಸಮ್ಮನವರ ಅಲೆಮಾರಿತನ ಮತ್ತು ಭಿಕ್ಷಾಟನೆಯ ಬದುಕು, ಆಕೆಯ ಯೌಗಿಕ ಜೀವನದ ಚಿತ್ರಣ ಬುದ್ಧಗುರುವಿನ ಬೆಳಕಿನಿಂದ ಎದ್ದುಬಂದಂತೆ ಕಾಣುತ್ತದೆ.
ವೀರದಾಸಮ್ಮನವರ ಸಹಜಾಮನಸ್ಕ ಯೋಗದ ಮೂಲವು ಬುದ್ಧಗುರುವಿನ ‘ಪ್ರತೀತ್ಯಾ ಸಮುತ್ಪಾದ’ದಲ್ಲಿ ಸಿಗುತ್ತದೆ. ಪ್ರತೀತ್ಯಾ ಸಮುತ್ಪಾದವು ಲೋಕಜೀವಿಗಳ ಹುಟ್ಟು, ವೃದ್ಧಾಪ್ಯ ಮತ್ತು ಸಾವಿನ ದುಃಖಚಕ್ರವನ್ನು ವಿವರಿಸುವ ಸೂತ್ರ. ಹನ್ನೆರಡು ಪರಸ್ಪರಾವಲಂಬಿತ ಕೊಂಡಿಗಳ ಭವಚಕ್ರವನ್ನು ಈ ಸೂತ್ರವು ಪ್ರತಿನಿಧಿಸುತ್ತದೆ ಮತ್ತು ವಿವರಿಸುತ್ತದೆ. ಇದರಲ್ಲಿ ಹನ್ನೆರಡು ಪರಸ್ಪರಾವಲಂಬಿ ಕೊಂಡಿಗಳಿವೆ. ಬೌದ್ಧ ಧರ್ಮದ ಕೇಂದ್ರ ತತ್ವವೂ ಇದೇ ಆಗಿದೆ. ಹುಟ್ಟು, ಸಾವು ಮತ್ತು ದುಃಖ ಇತ್ಯಾದಿ ಪ್ರತಿಕ್ರಿಯೆಗಳ ಮೇಲೆ ಪ್ರತೀತ್ಯಾ ಸಮುತ್ಪಾದವು ಬುದ್ಧಗುರುವಿನ ಬೋಧನೆಗೆ ಮುಖ್ಯ ಆಧಾರವಾಗಿದೆ. ಇಲ್ಲಿ ಹೇಳಲ್ಪಡುವ ಯಾವುದೇ ಒಂದು ವಿದ್ಯಮಾನಕ್ಕೆ ಸ್ವತಂತ್ರ ಅಸ್ತಿತ್ವವಿಲ್ಲ. “ಒಂದು ಸ್ವಭಾವಜನ್ಯ ವಿದ್ಯಮಾನವು ಮತ್ತೊಂದು ಸ್ವಭಾವಜನ್ಯ ವಿದ್ಯಮಾನಕ್ಕೆ ಕಾರಣವಾಗುತ್ತದೆ. ಇದು ಅಸ್ತಿತ್ವದಲ್ಲಿದ್ದರೆ, ಅದು ಅಸ್ತಿತ್ವದಲ್ಲಿರುತ್ತದೆ. ಇದು ಅಸ್ತಿತ್ವದಲ್ಲಿ ಇಲ್ಲದಿದ್ದರೆ ಅದು ಅಸ್ತಿತ್ವದಲ್ಲಿಲ್ಲ.” ಆದ್ದರಿಂದ ಒಂದು ವಿದ್ಯಮಾನವು ಅನೇಕ ವಿದ್ಯಮಾನಗಳ ಮೇಲೆ ಅವಲಂಬಿಸಿ ಉದ್ಭವವಾಗುತ್ತದೆ.
1. ಅವಿದ್ಯಾ : (ಅಥವಾ ಅಜ್ಞಾನ! ಲೋಕದ ವಸ್ತುಸ್ಥಿತಿಯ ನೈಜ ಸ್ವರೂಪವನ್ನು ತಪ್ಪಾಗಿ ಗ್ರಹಿಸುವಿಕೆ)
2. ಸಂಖಾರ : (ಮನೋಸಂಕಲ್ಪಗಳು ಕರ್ಮಗಳಾಗಿ ಬದಲಾಗುವ ವಿದ್ಯಮಾನ)
3. ವಿಜ್ಞಾಣ : (ಪ್ರಜ್ಞೆ ಅಥವಾ ಗ್ರಹಿಕೆ)
4. ನಾಮರೂಪ : (ದೇಹ ಮತ್ತು ಮನಸ್ಸು)
5. ಷಡಾಯತನ : (ದೃಷ್ಟಿ, ಶ್ರವಣ, ವಾಸನೆ, ರುಚಿ, ಸ್ಪರ್ಶಗಳಿಂದ ಮನಸ್ಸುಂಟಾಗುವಿಕೆ)
6. ಸ್ಪರ್ಶ : (ಬಾಹ್ಯ ಜಗತ್ತಿನೊಂದಿಗೆ ಇಂದ್ರಿಯ ಸಂಪರ್ಕ)
7. ವೇದನೆ : (ಸುಖ-ದುಃಖಾದಿಗಳಿಂದ ಉದ್ರೇಕಗೊಂಡ ಭಾವ)
8. ತೃಷ್ಣೆ : (ಬಯಕೆಗಳೊಂದಿಗೆ ಬಾಂಧವ್ಯ)
9. ಉಪಾದಾನ : (ಆಸೆಗಳು ಮತ್ತು ಭ್ರಾಂತಿಗಳಿಗೆ ಅಂಟಿಕೊಳ್ಳುವುದು)
10. ಭವ : (ಪುನರ್ಜನ್ಮ)
11. ಜಾತಿ : (ದೈಹಿಕ ಜನನ)
12. ಜರಾಮರಣ ದುಃಖ:(ಮುದಿತನ ಮತ್ತು ಸಾವು ದುಃಖ)
ಲೋಕದ ವಸ್ತುಸ್ಥಿತಿಯ ನೈಜಸ್ವರೂಪವನ್ನು ತಪ್ಪಾಗಿ ಗ್ರಹಿಸುವುದರಿಂದ ಸಂಖಾರಗಳುಂಟಾಗುತ್ತವೆ; ಸಂಖಾರಗಳಿಂದ ವಿಜ್ಞಾಣ ಉಂಟಾಗುತ್ತದೆ; ವಿಜ್ಞಾಣದಿಂದ ನಾಮರೂಪ ಅಸ್ತಿತ್ವಕ್ಕೆ ಬರುತ್ತದೆ; ನಾಮರೂಪಗಳಿಂದ ಷಡಾಯತನ ಉಂಟಾಗುತ್ತದೆ; ಷಡಾಯತನದಿಂದ ಸ್ಪರ್ಶ ಉಂಟಾಗುತ್ತದೆ; ಸ್ಪರ್ಶದಿಂದ ವೇದನೆಗಳು ಅಸ್ತಿತ್ವಕ್ಕೆ ಬರುತ್ತವೆ; ವೇದನೆಗಳು ತೃಷ್ಣೆಗಳಿಗೆ ಜನ್ಮ ನೀಡುತ್ತವೆ; ತೃಷ್ಣೆಯಿಂದ ಉಪಾದಾನ; ಉಪಾದಾನದಿಂದ ಭವ; ಭವದಿಂದ ಹುಟ್ಟು; ಹುಟ್ಟಿನಿಂದ ಜಾತಿ, ಜರಾಮರಣ ದುಃಖವುಂಟಾಗುತ್ತದೆ ಎಂಬುದನ್ನು ಈ ಸೂತ್ರದ ಮೂಲಕ ಬುದ್ಧ ಲೋಕಕ್ಕೆ ತೋರಿದ.
ಈ ಹನ್ನೆರಡು ಪರಸ್ಪರಾವಲಂಬನೆಯ ಕೊಂಡಿಗಳ ವಿವರಣೆಯು ಮಾನವ ಮನಸ್ಸಿನಲ್ಲಿ ತುಂಬಿರುವ ಹೊಲಸನ್ನು ಎತ್ತಿ ತೋರುತ್ತವೆ. ಈ ಎಲ್ಲಾ ಕೊಳಕಿನ ಮೂಲ ಅವಿದ್ಯೆ ಅಥವಾ ಅಜ್ಞಾನ! ಅಜ್ಞಾನವೆಂದರೆ ಈ ಪದಾರ್ಥ ಜಗತ್ತಿನ ವಸ್ತುಸ್ಥಿತಿಯನ್ನು ಅದು ಹೇಗಿದೆಯೋ ಹಾಗೆ ನೋಡುವ ಸ್ಪೃಹೆಯನ್ನು ಕಳೆದುಕೊಂಡು, ಸಂಚಯಗೊಂಡ ಭ್ರಮೆ ಅಥವಾ ಭ್ರಾಂತಿಯ ಮೂಲಕ ಲೋಕವನ್ನು ಗ್ರಹಿಸುವುದು ಎಂದಾಗುತ್ತದೆ. ಅಜ್ಞಾನದ ಕುರಿತ ಪೂರ್ಣ ವಿವರಣೆಯನ್ನೂ ಬೌದ್ಧ ಸಾಹಿತ್ಯ ವಿವರಿಸಿಕೊಡುತ್ತದೆ. ಮಹಾಸತಿ ಪಠ್ಠಾನ ಸುತ್ತದಲ್ಲಿ ಅವಿದ್ಯೆಯ ಐದು ಸಹ ಉತ್ಪನ್ನಗಳನ್ನು ವಿವರಿಸಲಾಗಿದೆ. ಇವುಗಳನ್ನು ಅಂತರೇಂದ್ರಿಯಗಳೆಂತಲೂ ಕರೆಯುತ್ತಾರೆ. ಏಕೆಂದರೆ ಈ ಅಂತರೇಂದ್ರಿಯಗಳ ಗ್ರಹಿಕೆಗಳಿಗೆ ಅನುಗುಣವಾಗಿ ಮನುಷ್ಯ ಎದುರಿನ ಲೋಕವನ್ನು ಗ್ರಹಿಸುತ್ತಿರುತ್ತಾನೆ.
1. ಕಾಮಚಂದ : (ಇಂದ್ರಿಯ ಬಯಕೆ ಅಥವಾ ಸುಖಾಪೇಕ್ಷೆ)
2. ವ್ಯಾಪಾದ : (ದ್ರೋಹಚಿಂತನೆಯ ಚಿತ್ತ)
3. ತೀನ-ಮಿದ್ದ : (ಆಲಸ್ಯತನ ಮತ್ತು ನಿರುತ್ಸಾಹ)
4. ಉದ್ದಚ್ಚ – ಗುಗ್ಗುಚ್ಚ : (ಚಂಚಲತೆ, ಅತೃಪ್ತಿ)
5. ವಿಕಿಕಿಚ್ಚ : (ಸಂದೇಹ, ಅನುಮಾನ)
1. ಕಾಮಚಂದ : ‘ನಾನು’ ಎಂಬ ಅಸ್ತಿತ್ವದ ಭ್ರಮೆ! ಎದುರಿನದೆಲ್ಲವನ್ನೂ ನಾನು ಅನುಭವಿಸಬಹುದೆಂಬ ಕಾಲ್ಪನಿಕ ನಂಬುಗೆ. ಈ ಅನುಚಿತ ನಂಬುಗೆಯಿಂದ ವಸ್ತು ಸಂಬಂಧಗಳಿಂದಾದ ಜಗತ್ತನ್ನು ತನ್ನೊಂದಿಗೆ ಅನ್ಯವಾಗಿಸಿಕೊಂಡು ತನ್ನನ್ನು ಬೇರೆ ಎಂದೇ ನೋಡುತ್ತದೆ.
2. ವ್ಯಾಪಾದ : ದ್ವೇಷಕ್ಕೆ ದ್ವೇಷ, ಹಿಂಸೆಗೆ ಹಿಂಸೆಯ ಪ್ರತಿಕ್ರಿಯೆಗಳನ್ನು ನೀಡುತ್ತಾ, ಕೆರಳುವಿಕೆಯಲ್ಲಿರುವ ಆತ್ಮದ್ರೋಹದ ಚಿತ್ತ.
3. ತೀನ-ಮಿದ್ದ : ಮೇಲಿನ ಸುಖಾಪೇಕ್ಷೆಯ ಚಿತ್ತ ಮತ್ತು ಆತ್ಮದ್ರೋಹದ ಚಿತ್ತಗಳನ್ನು ಪರಿಷ್ಕರಿಸಿಕೊಳ್ಳಲು ತನ್ನೊಳಗೆ ಅಗಾಧ ಶಕ್ತಿಯಿದ್ದರೂ ಅದನ್ನು ಬಳಸಿಕೊಳ್ಳದಾ ಸೋಮಾರಿತನ ಅಥವಾ ಜಡತೆ.
4. ಉದ್ದಚ್ಚ-ಗುಗ್ಗುಚ್ಚ : ಸದಾ ಸುಖಾಪೇಕ್ಷೆಗಳ ಕರ್ಮಗಳಲ್ಲಿಯೇ ಬಿದ್ದು ಎಂದೂ ತೃಪ್ತಿಯಾಗದಾ ಚಂಚಲತೆಯುಂಟಾಗಿ ಮತ್ತದೇ ಸುಖಾಪೇಕ್ಷೆಗಳಿಗೆ ತುಡಿಯುತ್ತಿರುವ ಚಿತ್ತ.
5. ವಿಕಿಕಿಚ್ಚ : ಮೇಲಿನ ನಾಲ್ಕು ಚಿತ್ತಗಳ ಫಲದಿಂದ ನಿತ್ಯವಾವುದೋ, ಸತ್ಯವಾವುದೋ ಎಂದು ತಿಳಿಯಲಾಗದೇ ಅನುಮಾನಗ್ರಸ್ತರಾಗುವುದು.
ಈ ಐದು ಚಿತ್ತಗಳಿಂದ ಕೂಡಿದ ಮನಸ್ಸನ್ನು ಬೌದ್ಧರು ‘ಮಾರ’ ಎನ್ನುತ್ತಾರೆ. ಮಾರ ಎಂದರೆ ಮನೋಕ್ಲೇಷಗಳಿಂದ ತುಳಿದುಹಾಕುವ ‘ಪಾಪ’! ಬುದ್ಧಗುರು ತನ್ನ ಜ್ಞಾನೋದಯಕ್ಕೆ ಮುನ್ನ ಮಾರನನ್ನು ಜಯಿಸಿದ್ದ ಎಂದು ಪ್ರತೀತಿ. ದುಃಖ ಮತ್ತು ಹುಟ್ಟಿಗೆ ಕಾರಣವಾಗುವ ಈ ಅವಿದ್ಯೆ ಅಥವಾ ಅಜ್ಞಾನದ ಬೇರುಗಳನ್ನು ಕತ್ತರಿಸುವ ಮೂಲಕ ಭವಸಂಸಾರದ ಬಂಧನದಿಂದ ತಪ್ಪಿಸಿಕೊಳ್ಳಬಹುದು. ಇದು ನಿರ್ವಾಣಕ್ಕಿರುವ ಏಕಮೇವ ಹಾದಿಯೆಂದು ಬೌದ್ಧ ಸಾಹಿತ್ಯವು ಹೇಳುತ್ತದೆ. ಸತ್ಯ ಮತ್ತು ಸದ್ಗತಿಗೆ ಹಲವು ದಾರಿಗಳಿಲ್ಲ. ಅದು ಒಂದೇ! ಮನೋಸಂಚಿತ ಪ್ರಾರಬ್ಧಗಳಿಂದ ಕೂಡಿದ ಅಜ್ಞಾನವನ್ನು ಹೋಗಲಾಡಿಸಿಕೊಳ್ಳದೇ ಬೇರೆ ಹಾದಿಯಿಲ್ಲ. ಬುದ್ಧಗುರುವಿಗೂ ವೀರದಾಸಮ್ಮನವರಿಗೂ ಎರಡು ಸಾವಿರದ ಐನೂರು ವರ್ಷಗಳಷ್ಟು ದೀರ್ಘಕಾಲದ ಅಂತರವಿದ್ದಾಗಲೂ ಈ ಮನೊಕ್ಲೇಷಗಳಿಂದ ಮುಕ್ತಳಾಗಬೇಕೆಂಬ ಆಕೆಯ ದೃಢವಾದ ಹಂಬಲ ಸಹಜಾಮನಸ್ಕ ಯೋಗಕ್ಕೆ ಸಾಕ್ಷಿಯಂತಿದೆ.
ಯಾರ ನಂಬುವುದೇನು | ಎಲೆ ಹುಚ್ಚು ಮನವೇ
ಯಾರಿಂದ ಪಡೆದ | ಸುಖವೇನಿಹುದು ತನುವೇ || ಪ ||
ಯಾರು ಬರುವರು ಹಿಂದೆ | ಯಾರು ಬರುವರು ಮುಂದೆ
ಯಾರಿಗಾರಾಗುವರು | ತೋರುಯನಗೇ
ನೀರ ಮೇಲಣ ಗುಳ್ಳೆ ಪಾರಿ ಹೋಗುವ ಪರಿ
ತೋರಡಗುವುದು ಕಾಯ ಭೂಮಿ ಗರ್ಭದಲಿ || ಯಾರ ||
ನೋಡಿ ನೋಡಿ ಯಾತಕೆ, ಬಂಧನದಿ ಬೀಳುತಿಹೆ
ಆಡಿದಾಟವೇ ನಿನಗೆ ಹಾಳು ಮನವೇ
ಬೇಡಿಕೊಂಡರೂ ನಿನ್ನ | ಮೂಢಬುದ್ಧಿಯ ಬಿಡದೆ
ಚಲಿಸುವುದು ನ್ಯಾಯವೇ ನಿನಗೆ || ಯಾರ ||
ಸಾಯುವುದು ಹುಟ್ಟುವುದು| ನೋಯುವುದು
ಬೇಯುವುದು ಮಾಯಾಲೋಕದ| ಮಹಿಮೆ
ಬಾಯಿಮಾತಿಗೆ ತಗುಲೀ| ಪೇಚಾಡಿ ಪೇಚಾಡಿ
ಮಾಯೆಯೊಳು ಮುಳುಗುವುದು ನ್ಯಾಯವೇ ನಿನಗೆ || ಯಾರ ||
ಯಿಂದ್ರಜಾಲದ ವಿದ್ಯೆ| ಮಹಿಮೆಯಲಿ ತೋರುವವು
ಎಂದಿಗಿಲ್ಲದಾ ಲೋಕ ಶೋಕಂಗಳು| ತಂದು ಹಾಕಿತು
ಭ್ರಾಂತಿ! ಬಂಧಿಸಿತು ಇದು ನಿನ್ನಾ ಮಂದಾವಗತಿ
ಯೊಳಗೆ ಮುಳುಗುವುದು ಮನವೇ || ಯಾರ ||
ಧರಣಿ ಭ್ರಮೆಗಳ ಮುಗಿಸಿ| ಪರಮಪದವಿಯ ಸ್ಮರಿಸಿ
ವರವೆಂಕಟಾರ್ಯನೊಳು ಮನವ ನಿಲಿಸಿ| ಪರಿಪರಿಯ
ವಿಧವಾದ ಪರಿಚಾರಗಳ ಸಲಿಸಿ
ಮರಳಿ ಹುಟ್ಟದ ಮುಕ್ತಿ ವರವಾ ಸಾಧಿಸದೇ || ಯಾರ ||
ಸಹಜಾಮನಸ್ಕ ಯೋಗದ ತತ್ವಪದಗಳನ್ನು ನಾನು ಓದಿಕೊಂಡಿರುವ ಮಟ್ಟಿಗೆ, ಆ ಯೋಗದ ಲೋಕಗ್ರಹಿಕೆಗಳು ಬುದ್ಧಗುರುವಿನ ಲೋಕಗ್ರಹಿಕೆಯೊಂದಿಗೆ ತೀರಾ ಹತ್ತಿರದಲ್ಲಿರುವುದು ಆಶ್ಚರ್ಯಕರ.
* ಈ ಅಖಂಡ ಅನಂತ ವಿಶ್ವದಲ್ಲಿ ಯಾವುದೇ ವಸ್ತುವನ್ನಾಗಲಿ, ಜೀವಿಯನ್ನಾಗಲಿ ಈ ಅಖಂಡತೆಯಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಎಲ್ಲವೂ ಈ ಅಖಂಡತೆಯ ಆಗುವಿಕೆಗೆ ಒಳಪಟ್ಟ ಅಧೀನಾಂಶಗಳಾಗಿವೆ. ಆದರೆ ಮತ, ಜಾತಿ, ನಾನು, ನೀನು ಎಂಬ ಮನೋಧೋರಣೆಗಳು ಈ ಲೋಕವನ್ನು ಬೇರೆಬೇರೆಯನ್ನಾಗಿಸಿ ಪ್ರತ್ಯೇಕಿಸುತ್ತವೆ. ಈ ಅನ್ಯಕಾರಿ ಮನಸ್ಸನ್ನು ಮೋಸವೆಂದು ಕಂಡುಹಿಡಿಯಲು ಸಾಧ್ಯವಿದೆ.
* ನಿಜವಾದ ಧರ್ಮವು ಧರ್ಮಶೂನ್ಯವಾಗಿದೆ. ಆದ್ದರಿಂದ ಲೋಕದಾ ಒಳಿತಿಗಾಗಿ ನೈತಿಕತೆಯನ್ನು ಆದರ್ಶ ಧರ್ಮವಾಗಿ ಇಟ್ಟುಕೊಳ್ಳದಿದ್ದರೆ ಜ್ಞಾನವೆಂಬುದು ಲೋಕ ಕಂಟಕವಾಗುತ್ತದೆ.
* ಮನುಷ್ಯ ನಿರ್ಮಿಸಲ್ಪಟ್ಟ ಯಾವುದೇ ಮತೀಯ ಆಚರಣೆಗಳು, ಶಾಸ್ತ್ರ ಸಂಪ್ರದಾಯಗಳು, ನಂಬುಗೆಗಳು ಇತ್ಯಾದಿಗಳಿಂದ ನೈಜ ಬಿಡುಗಡೆ ಸಾಧ್ಯವಿಲ್ಲ. ನಿರ್ಮಿಸಲ್ಪಟ್ಟ ಎಲ್ಲಾ ಧರ್ಮಗಳು ‘ನಾನು’ ಎಂಬ ಭಾವವನ್ನು ಮತ್ತಷ್ಟು ಕೆರಳಿಸುತ್ತಲೇ ಇರುತ್ತವೆ. ಈ ಬಗೆಯ ಕೆರಳುವಿಕೆಯಲ್ಲಿ ಲೋಕಸತ್ಯ ಅರಿವಾಗುವ ಸಂಭವವಿಲ್ಲ.
* ಮನಸ್ಸೆಂಬುವುದು ಮಾನವನ ಶರತ್ತುಬದ್ಧ ಅಂತಃಪ್ರವಾಹ… ಈ ಶರತ್ತುಬದ್ಧ ಮನಸ್ಸಿನಲ್ಲಿ ಮನುಷ್ಯ ಪರಂಪರೆಯು ಹೊತ್ತುಕೊಳ್ಳಲಾಗದಷ್ಟು ಭಾರಗಳಿವೆ. ಲೋಕವೆಲ್ಲಾ ಅದರ ಕೈದಿಗಳೇ, ಎಲ್ಲರೂ ಅದರ ನಿರ್ಮಾತೃಗಳೇ, ಎಲ್ಲರೂ ಅದರ ಕರ್ಮಕ್ಕೆ ಹೊಣೆಗಾರರೇ. ಆದರೆ ಇಲ್ಲಿಂದಲೇ ಹೊಸದೊಂದು ಬಿಡುಗಡೆಯ ಹಾದಿಯಿದೆ.
* ಕಲ್ಪನಾರಹಿತವಾಗಿ ಬದುಕಿನಲ್ಲಿ ಏನು ಲಭ್ಯವೋ ಅದರಲ್ಲಿ ಸಹಜವಾಗಿ ಜೀವಿಸುವವ ಸಿದ್ಧಪುರುಷ. ಕಲ್ಪನಾರಹಿತತೆಯು ಮನುಷ್ಯರನ್ನು ಎಲ್ಲಾ ಲೋಕಸಂಕಟಗಳಿಂದ ಪಾರುಮಾಡುತ್ತದೆ.
* ಪ್ರಜ್ಞೆ ಅಥವಾ ವಿವೇಕವು ಅನಂತವಾದದ್ದು, ಅಪ್ರಮೇಯವಾದದ್ದು, ಕಾಲಾತೀತವಾದದ್ದು. ಬಹಿರಂತರ್ಗತವಾದ ಪ್ರಜ್ಞೆ ವರ್ತಮಾನದಲ್ಲಿದ್ದು, ಕ್ಷಣ ಕ್ಷಣ ಬದಲಾವಣೆಯಲ್ಲಿರುತ್ತದೆ. ಆದ್ದರಿಂದ ಯಾವುದೂ ನಿತ್ಯವಲ್ಲ.
ಅಚಲ ಪರಿಪೂರ್ಣ ಸಹಜಾಮನಸ್ಕಯೋಗದ ಬಹುಮುಖ್ಯ ಗುರುಗಳಾದ ಶಿವರಾಮ ದೀಕ್ಷಿತರು ತಮ್ಮ ‘ಬೃಹದ್ವಾದಿಷ್ಟ’ ಗ್ರಂಥದಲ್ಲಿ ಆ ಯೋಗದ ಸಾಧಕರನ್ನು ಕುರಿತು ಹೀಗೆ ಹೇಳುತ್ತಾರೆ: “ಅಮನಸ್ಕರು ಸದಾ ಅರಿಮೆಯಾಚೆಗಿನ ಬೆರಗಿನಲ್ಲಿರುವವರು ಎನ್ನುತ್ತೇವೆ. ಲೌಕಿಕವಾದ ಎಲ್ಲಾ ಭ್ರಮೆ ಮತ್ತು ಭ್ರಾಂತಿಗಳಿಂದ ಅವರು ನಿವೃತ್ತರಾಗಿರುತ್ತಾರೆ. ಆದ್ದರಿಂದ ಅವರಲ್ಲಿ ಶೂನ್ಯತೆ ಶೇಷವಾಗಿರುತ್ತದೆ. ಶೂನ್ಯವೆಂದರೆ ಏನೂ ಇಲ್ಲವಾದದ್ದಲ್ಲ. ಹಿಂದಿನ ಅಜ್ಞಾನ ಮತ್ತು ಸ್ವಾರ್ಥರೂಪ ಪ್ರಪಂಚದ ಕಂಟಕಗಳು ಅವರಲ್ಲಿ ಶೂನ್ಯವಾಗಿರುತ್ತವೆ. ಕಾರುಣ್ಯ, ಜೀವಪ್ರೀತಿ, ಸಮತೆ, ಸಾಮರಸ್ಯದ ಬೆಡಗು ಅವರಲ್ಲಿ ಹೊಸ ಬೆಳಕಿನದ್ದಾಗಿರುತ್ತವೆ. ಬಯಲು ಅವರಿಗೆ ಈ ನಿಸರ್ಗದ ವಸ್ತುಸ್ಥಿತಿಯ ವಾಸ್ತವತೆ. ಹಿಂದಿನಿಂದ ಏನನ್ನೂ ತಾರದೇ, ಏನನ್ನೂ ಉಳಿಸಿಹೋಗದೇ ಬಯಲಿಗೆ ಬಯಲಾಗುವ ಬೆಡಗು ಅವರಿಗೆ ವಿಚಲಿತರಾಗದ ಮನಃಶಕ್ತಿಯನ್ನು ಪ್ರಸಾದಿಸಿರುತ್ತದೆ. ಇಂತಹವರು ಮನುಷ್ಯಲೋಕದ ಕನಸುಗಳಿಂದ ಎಚ್ಚೆತ್ತವರು. ಎಚ್ಚೆತ್ತ ಸ್ಥಿತಿಯಿಂದ ಅವರು ಬೋಧಿಸುವ ಉಪದೇಶದ ಸಾರವು ಮನುಷ್ಯ ಲೋಕವನ್ನು ಪುನರ್ ನಿರ್ಮಿಸಿಕೊಳ್ಳುವೆಡೆಗೆ ಕೊಂಡೊಯ್ಯುತ್ತದೆ.”
ಹೀಗೆ ನೋಡಿದಾಗ ವೈದಿಕ ಸಾಹಿತ್ಯದಲ್ಲಿಯೂ ಅಮನಸ್ಕಯೋಗದ ಪ್ರಸ್ತಾಪಗಳು ಇರುವುದನ್ನು ಕಾಣುತ್ತೇವೆ. ಬುದ್ಧಗುರುವಿನ ನಂತರ ಕ್ರಿ.ಪೂ.ಒಂದನೇ ಶತಮಾನದಲ್ಲಿ ರಚಿತಗೊಂಡ ಪತಂಜಲಿ ಯೋಗಶಾಸ್ತ್ರವು ಅಷ್ಟಾಂಗಯೋಗವನ್ನು ಅಮನಸ್ಕದ ಒಂದು ಬಹುಮುಖ್ಯ ತಂತ್ರವನ್ನಾಗಿ ಬಳಸಿಕೊಂಡಿದೆ. ಇದರಲ್ಲಿ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ ಇವು ಸೇರಿ ಅಷ್ಟಾಂಗ ಯೋಗವೆನಿಸಿಕೊಂಡಿದೆ.
ಕ್ರಿ.ಶ 15ನೇ ಶತಮಾನದಲ್ಲಿ ಸ್ವಾತ್ಮರಾಮ ಎಂಬುವವರು ತಮ್ಮ ಹಠಯೋಗ ಪ್ರದೀಪಿಕೆ ಗ್ರಂಥದಲ್ಲಿ ಅಮನಸ್ಕ ಯೋಗಕ್ಕೆ ಮುದ್ರೆಗಳನ್ನು ಹೇಳುತ್ತಾರೆ. ಅಂತಹ ಮುದ್ರೆಗಳಲ್ಲಿ ಶಾಂಭವೀ ಮುದ್ರೆ ಮುಖ್ಯವಾದದ್ದು. ಶಾಂಭವೀ ಮುದ್ರೆ ವೈದಿಕರ ಅಮನಸ್ಕ ಯೋಗದ ಬಹುಮುಖ್ಯವಾದ ತಂತ್ರವೆನ್ನಬಹುದು.
ಇವುಗಳ ಜೊತೆಗೆ ವಿವಿಧ ರೀತಿಯ ಯೋಗ, ಹಠಯೋಗ, ಮಂತ್ರಯೋಗ ಮತ್ತು ಲಯಯೋಗಗಳನ್ನು ಹೇಳುವ ಅನೇಕ ಪಠ್ಯಗಳನ್ನು ವೈದಿಕ ಸಾಹಿತ್ಯದಲ್ಲಿ ಕಾಣಬಹುದು. ವೈದಿಕ ಸಾಹಿತ್ಯದ ಎಲ್ಲಾ ಬಗೆಯ ಯೋಗಗಳ ಮುಖ್ಯ ಲಕ್ಷಣವೇನೆಂದರೆ, ಜೈಮಿನಿ ಪೂರ್ವಮೀಮಾಂಸೆಯ ಕರ್ಮಯೋಗಕ್ಕೂ, ಬಾದರಾಯಣ ಬ್ರಹ್ಮಸೂತ್ರಗಳ ಜ್ಞಾನಯೋಗಕ್ಕೂ ಹೊಸ ಸುಧಾರಣಾ ನೀತಿಗಳನ್ನ ತಂದಂತೆ ಭಾಸವಾಗುತ್ತದೆ. ಇಲ್ಲಿನ ಯೋಗಗಳ ಉದ್ದೇಶವೇನೆಂದರೆ, ಕರ್ಮವೆಂದರೆ, ಧಾರ್ಮಿಕ ವಿಧಿಗಳಾದ ಯಜ್ಞ, ಹೋಮ, ಹವಿಸ್ಸು, ಇತ್ಯಾದಿ ಕರ್ಮಾಚರಣೆಗಳು. ಜ್ಞಾನವೆಂದರೆ ಉಪನಿಷತ್ತುಗಳಲ್ಲಿದ್ದಂತೆ ಕೈವಲ್ಯ ಪುರುಷ ಅಥವಾ ಅಹೇತುಕ ಪರಬ್ರಹ್ಮ ಕುರಿತ ಉಪನಿಷತ್ತಿನ ಜ್ಞಾನ! ಮುಕ್ತಿಗಾಗಿ ಇವೆರಡೂ ಶ್ರೇಷ್ಠ ಮಾರ್ಗಗಳೆಂಬುದನ್ನು ಇನ್ನಷ್ಟು ಗಟ್ಟಿಯಾಗಿ ವೈದಿಕ ಯೋಗಿಗಳು ವಿಷದೀಕರಿಸುತ್ತಾರೆ. ಪತಂಜಲಿ ತಮ್ಮ ಅಷ್ಟಾಂಗಯೋಗದಲ್ಲಿ ಧ್ಯಾನ ಧಾರಣೆಗಳನ್ನು ವಿವರಿಸುವಾಗ ಜೈಮಿನಿ ಮತ್ತು ಬಾದರಾಯಣರ ಮಾರ್ಗವನ್ನೇ ಅನುಸರಿಸಿರುವುದು ತಿಳಿಯುವುದು ಕಷ್ಟವೇನೂ ಅಲ್ಲ. ಹಠಯೋಗ ಪ್ರದೀಪಿಕೆ ಕೂಡ ಇದನ್ನೇ ಅನುಸರಿಸಿದೆ. ಶಾಂಭವೀ ಮುದ್ರೆ ಅಮನಸ್ಕ ಯೋಗದ ಬಹುಮುಖ್ಯ ತಂತ್ರವೆಂದು ಹೇಳಲಾಗಿದೆ. ಆಲೋಚನಾ ರಚನೆಗಳು ಅಥವಾ ಮನಸ್ಸಿನ ಅನಿಸಿಕೆಗಳಿಂದ ಮನಸ್ಸು ಸಂಪೂರ್ಣವಾಗಿ ನಶಿಸಿಹೋಗುವ ಸ್ಥಿತಿಯನ್ನು ತಲುಪುವುದು ಎಲ್ಲಾ ವೈದಿಕ ಯೋಗತಂತ್ರಗಳ ಗುರಿಯಾಗಿದೆ. ಇದು ಅಮನಸ್ಕಯೋಗದ ಯೌಗಿಕ ಆನಂದದ ಅತ್ಯುನ್ನತ ಸ್ಥಿತಿ. ಸರಳವಾಗಿ ಹೇಳಬೇಕಾದರೆ ಇದೊಂದು ಪ್ರಜ್ಞಾರಹಿತವಾದ ಸ್ಥಿತಿ!!! “ಉಸಿರಾಟವು ದೇಹದಲ್ಲಿ ಏರುಪೇರಾಗಿರುತ್ತದೆ. ಅಥವಾ ಮನಸ್ಸು ಅತ್ತಿತ್ತ ಹರಿದಾಡುತ್ತಿರುತ್ತದೆ. ಇಲ್ಲಿ ಮನಸ್ಸನ್ನು ತಡೆಯುವ ಯಾವ ಪ್ರಯತ್ನವನ್ನೂ ಮಾಡಬಾರದು. ಉಸಿರಾಟವನ್ನು ಅಭ್ಯಾಸದಿಂದ ನಿಯಂತ್ರಣಕ್ಕೆ ತರಲು ಸಾಧ್ಯವಾಗುವುದಾದರೆ ಮನಸ್ಸು ಇಲ್ಲವಾಗುತ್ತದೆ.” ಜೀವಂತ ಗುರುವಿನ ಮಾರ್ಗದಲ್ಲಿ ನಿಯಮಿತ ಅಭ್ಯಾಸದೊಂದಿಗೆ ಯೋಗಿಯು ಸಂಕಲ್ಪ ಮತ್ತು ಕ್ರಿಯೆಯಿಂದ ಮುಕ್ತ ಸ್ಥಿತಿಯನ್ನು ತಲುಪುತ್ತಾನೆ. ಕೈವಲ್ಯ ಪುರುಷ ವಿಮೋಚನೆ ಸಾಕ್ಷಿಪ್ರಜ್ಞೆಯಾದ ಪ್ರಕೃತಿಯಿಂದ ಭಿನ್ನವಾಗಿದೆ. ಪ್ರಕೃತಿಯ ಗೊಂದಲಮಯ ಕಲ್ಮಶಗಳಿಂದ ಪುರುಷನನ್ನು ಬೇರ್ಪಡಿಸುವುದು ಇಲ್ಲಿ ಸ್ಪಷ್ಟವಾಗಿದೆ. ಅಂದರೆ ಪ್ರಕೃತಿ ಮಾಯೆಯಾಗಿರುವುದರಿಂದ ಪ್ರಕೃತಿಯಿಂದ ಮನೋಸಂಯುಕ್ತ ದೇಹವನ್ನು ಬೇರ್ಪಡಿಸಿಕೊಳ್ಳುವುದು ಎಂದರ್ಥ.
ದೇಸಿ ತತ್ವಪದಕಾರರ ಅಮನಸ್ಕಯೋಗಕ್ಕೂ ಅಷ್ಟಾಂಗಯೋಗ ಮತ್ತು ಹಠಯೋಗ ಪ್ರದೀಪಿಕೆ ಹೇಳುವ ಅಮನಸ್ಕ ಯೋಗಕ್ಕೂ ತೀರಾ ಭಿನ್ನತೆಯಿದೆ. ಅಷ್ಟಾಂಗಯೋಗ ಮತ್ತು ಹಠಯೋಗ ಪ್ರದೀಪಿಕೆಗಳು ಮನೋನಾಶವನ್ನು ಅಮನಸ್ಕ ಎನ್ನುತ್ತವೆ. ವೇದಾಂತ ವಾರ್ತಿಕಗಳೂ ಮನೋನಾಶವನ್ನೇ ಅಮನಸ್ಕ ಎಂದೇ ಹೇಳುತ್ತವೆ.
ದೇಸಿ ತತ್ವಪದ ಯೋಗಿಗಳಲ್ಲಿ ಅಮನಸ್ಕವೆಂದರೆ ಮನೋನಾಶವಲ್ಲ; ದುಃಖಕಾರಣವನ್ನು ಪೂರ್ತಿಯಾಗಿ ತನ್ನ ಸ್ವಶಕ್ತಿಯಿಂದ ನಂದಿಸಿ ಯೋಗಿಯು ದೇಹ ಮತ್ತು ಮನಸ್ಸಿನಲ್ಲಿ ಎಚ್ಚರದಲ್ಲಿರುತ್ತಾನೆ. ಆದ್ದರಿಂದ ಸಹಜಾ ಮನಸ್ಕ ಯೋಗಿಯಲ್ಲಿ ಸರಿಯಾದ ಅಥವಾ ಸ್ವಾಸ್ಥ್ಯವಾದ ಮನಸ್ಸು ಇರುತ್ತದೆ.
ವೈದಿಕ ಅಮನಸ್ಕಯೋಗಕ್ಕೂ ಮತ್ತು ದೇಸಿ ಸಹಜಾ ಮನಸ್ಕಯೋಗಕ್ಕೂ ಇರುವ ಬಹುಮುಖ್ಯ ವ್ಯತ್ಯಾಸವೆಂದರೆ ದೇಸಿ ಸಹಜಾ ಮನಸ್ಕರು ದೇಹವನ್ನು ದಂಡಿಸುವ ಯೋಗಕ್ರಿಯೆಗಳಲ್ಲಿ ತೊಡಗುವುದಿಲ್ಲ. ಏಕೆಂದರೆ ದೇಹವೇ ಅವರಿಗೆ ಬಹುಮುಖ್ಯ ದೇವಾಲಯ. ಅದೇ ವೈದಿಕ ಅಮನಸ್ಕವು ಈ ದೇಹವನ್ನು ಮಾಯೆ ಎಂದು ಹೇಳಿ ಇಂದ್ರಿಯಗೋಚರವಾಗದ ಬ್ರಹ್ಮಾನುಸಂಧಾನದಲ್ಲಿ ಮುಕ್ತತೆಯನ್ನು ಅರಸುತ್ತದೆ.
ದೇಹದಂಡನೆಯನ್ನು ಪ್ರತಿಪಾದಿಸುವ, ತಪಶ್ಚರ್ಯ, ಹಠಯೋಗ, ಆಸನ ಪ್ರಾಣಾಯಾಮ ಪ್ರತ್ಯಾಹಾರ ಇತ್ಯಾದಿ ಹಠಯೋಗಗಳನ್ನು ಮತ್ತು ಉಪನಿಷತ್ತಿನ ಜ್ಞಾನವನ್ನು ದೇಸಿ ಅಮನಸ್ಕಯೋಗಿಗಳ ತತ್ವಪದಗಳು ತೀವ್ರವಾಗಿ ಖಂಡಿಸುತ್ತವೆ.
ಇರುವುದು ಗುರುವೆಂಬುದು|
ನಾ ಕಂಡಿದ್ದೆಲ್ಲವೂ ಇರುವುದು
ಇರುವುದೇನೋ ಇರುವುದು|
ನಾನೆಂಬುದೇ ಇಲ್ಲಾದುದು ||ಪ||
ಜಪತಪಗಳು ಅಲ್ಲದು|
ಬೋಗಭಾಗ್ಯಗಳಿಲ್ಲದು
ಜನ್ಮರಹಿತವಾಗಿರ್ಪುದು| ಚಪಲರಾಗಿ
ತಿರುಗುವವರಿಗೆ ಹೇಳ ಶಕ್ಯವಾಗದು ||1||
ಯೋಗಯೋಗಗಳಲ್ಲದು|
ಬೋಧೆ ರೂಪದಿ ಇರುವುದು
ಮೋದವೆನಿಸಿದ ಸಮಾಧಿಗಳಿಂದ|
ಸಾಧ್ಯವೆಂದಿಗೂ ಆಗದು ||2||
ಮುದ್ರೆಗಳೈದು ಅಲ್ಲದು|
ಅದು ಮುದಿತನವೆಂದಿಗೂ ಇಲ್ಲದು
ಚಿತ್ ರೂಪವು ಅಲ್ಲದು|
ಅದು ಭದ್ರವಾಗಿ ತಾನಿರ್ವುದು ||3||
ವೇದಶಾಸ್ತ್ರಗಳಲ್ಲದು|
ಘನರಿಗೆ ಸಾಧ್ಯವಾಗಿರ್ಪುದು
ಸ್ವಾನುಭವಾತೀತರಿಗೆ|
ಸರ್ವಸಮರಸವಾದುದು ||4||
ಮಂತ್ರ ಮಹಿಮೆಗಳಲ್ಲದು|
ತಂತ್ರವೇನೂ ಅಲ್ಲದು
ಯಂತ್ರ ತಂತ್ರಗಳಾಚೆಯೊಳು|
ಸ್ವತಂತ್ರ ರಹಿತವೆನಿಪುದು ||5||
ದ್ವೈತವೆಂಬುದು ಅಲ್ಲದು|
ಅದ್ವೈತವೇನೂ ಇಲ್ಲದು
ದ್ವೈತಾದ್ವೈತ ಮೀರಿ|
ದೋಷರಹಿತವಾದುದು ||6||
ಈಶ್ವರನೆಂದೊಡೆ ಆಗದು|
ವಿಶ್ವರೂಪವಲ್ಲದು
ಧಾತ್ರಿಯೊಳು ಈ ಸೂತ್ರ ಅರಿತೊಡೆ|
ಧಾತರಿಗೆ ವಶವಾದುದು ||7||
ಧರೆಯೊಳು ಶಿವರಾಮ
ದೀಕ್ಷಿತನರಸಿದ ಬಯಲದು
ಕುರುಹುಪಡೆದಾ
ಕೃಷ್ಣದೇಸಿಕ ಗುರುವಿನರಿವದು ||8||
Comments 17
ಜಿ.ಎಚ್.ಜ್ಯೋತಿಲಿಂಗಪ್ಪ ಶಿವನಕೆರೆ
Oct 22, 2024ತಾವರೆಕೆರೆ ಯು ವೀರದಾಸಮ್ಮ ಎಂಬ
ಕಣ್ಣು ಮರೆಯ ಹಣ್ಣುಗಳು ಅದೆಷ್ಟೋ…ಉದುರಿ ಮದುವೆಯಾಗಿರುವುದನ್ನ ನಮ್ಮ ಪದ್ಮಾಲಯರು ಮತ್ತೆ ಕಣ್ಣ ಎದುರಿಗೆ ಚೆಂದವಾಗಿ ಇರಿಸಿ,ಸಹಜಾಮನಸ್ಕ.. ಅಕ್ಕನನ್ನು ನೆನಪಿಸಿರುವರಲ್ಲದೆ..ವೀರದಾಸಮ್ಮನವರ ಕಾಠಿಣ್ಯ ಬದುಕನ್ನೂ ತೆರೆದು ವಿಸ್ಮಯಗೊಳಿಸಿದ.,ಪದ್ಮಾಲಯರಿಗೆ ನನ್ನಿಗಳು.
Padmalaya
Oct 22, 2024ಅಮೇರಿಕಾದಿಂದ ಅಕ್ಕರೆಯಿಂದ ಓದಿದ ತಮಗೆ ಶರಣು
ವಿಶ್ವನಾಥ ಜಮಖಂಡಿ
Oct 24, 2024ಸಹಜಾ ಮನಸ್ಕ ಯೋಗದ ಮಾಹಿತಿಯೇ ನನಗಿರಲಿಲ್ಲ. ಕುತೂಹಲದಿಂದ ಓದಿದೆ. ಬಹಳ ಅಪರೂಪದ, ವಿಶಿಷ್ಟವಾದ ಯೋಗ ಇದೆಂದು ತಿಳಿದು ಆಶ್ಚರ್ಯವಾಯಿತು. ವೀರದಾಸಮ್ಮನ ಸಾಧಕ ಜೀವನವನ್ನು ತೋರಿಸಿದ ಲೇಖಕರಿಗೆ ವಂದನೆಗಳು🙏🏻🙏🏻
ಶೋಭಾದೇವಿ ಅಮರಶೆಟ್ಟಿ, ಧಾರವಾಡ
Oct 27, 2024ಆತ್ನವಿಮರ್ಶೆ ಸಾಧ್ಯವಿಲ್ಲದಿದ್ದರೆ, ಸಮಾಜದಲ್ಲಿ ಪರಿವರ್ತನೆಯೂ ಸಾಧ್ಯವಿಲ್ಲ , ತತ್ವಪದಕಾರರಾದ ವೀರದಾಸಮ್ಮನವರ ಚಿಂತನೆ ಅಧ್ಬುತ!!!👌👌👍👍🙏🙏
Naveeena h a
Oct 27, 2024ಓದ ಓದುತ್ತಲೇ ಇಷ್ಟು ಬೇಗ ಮುಗಿದು ಬಿಟ್ಟಿತಲ್ಲ ಎನಿಸುತ್ತಿದೆ ಸರ್ ಅಮನಸ್ಕ ಯೋಗದ ಕುರಿತಾದ ಭದ್ರತಾಳಪಾಯವನ್ನು ಹಾಕಿದ್ದೀರಿ. ಇದೆಲ್ಲಾ ಮುಂದುವರಿಸಿ ಮತ್ತೊಂದು ಲೇಖನವನ್ನು ಕೊಡಿ ಸರ್
ಶ್ರದ್ಧಾನಂದ ಸ್ವಾಮೀಜಿ, ವಿಜಯಪುರ
Oct 27, 2024ನಾಗರಾಜ್ ಅವರಿಗೆ ಧನ್ಯವಾದಗಳು. ವೀರದಾಸಮ್ಮಳ ಸಹಜ ಅಮನಸ್ಕ ಯೋಗ ತುಂಬಾ ಹಿಡಿಸಿತು.
ರುದ್ರಮುನಿ ಪಿ
Oct 30, 2024ತತ್ವಪದಗಳಲ್ಲಿ ಜೀವನದ ಗಹನ ಸಂಗತಿಗಳು ಅಡಗಿರುತ್ತವೆ. ದುಡಿಯುವ ಜನರ ಪದಗಳಾದ ಇವುಗಳಲ್ಲಿ ಬದುಕಿನ ಏರುಪೇರುಗಳು, ಸಂಕಷ್ಟಗಳು ಮಡುಗಟ್ಟಿರುತ್ತವೆ. ವೀರದಾಸಮ್ಮ ತಾಯಿಯ ಜೀವನ ಹೋರಾಟಕ್ಕೆ ಶರಣು, ಶರಣು👏🏾
ಶ್ರೀನಾಥ್ ಬಡಗಿ
Nov 1, 2024ಕೋಲಾರದ ಮಣ್ಣಿಗೆ ಏನೋ ಒಂದು ವಿಶೇಷ ಗುಣವಿದೆ. ಬಹುಶಃ ಅಲ್ಲಿಯ ಕಷ್ಟಗಳೇ ಅಲ್ಲಿ ಅಮೃತ ಸಮಾನರಾದ ವ್ಯಕ್ತಿಗಳನ್ನು ಸೃಷ್ಟಿಸಿರಬಹುದು. ಹಲವಾರು ತತ್ವಪದಕಾರರ ರಚನೆಗಳನ್ನು ಓದಿದ್ದೇನೆ, ಕೇಳಿದ್ದೇನೆ. ಆದರೆ ವೀರದಾಸಮ್ಮನವರ ಹೆಸರನ್ನೇ ನಾನು ಈವರೆಗೆ ಕೇಳಿರಲಿಲ್ಲ. ಆ ತಾಯಿಯ ಬದುಕು, ಬವಣೆ, ಹೋರಾಟ, ಸಾಧನೆ ನಂಬಲಸಾಧ್ಯವಾಗಿದೆ! ಆ ತಾಯಿಗೂ, ಆಕೆಯನ್ನು ಪರಿಚಯಿಸಿದ ಪದ್ಮಾಲಯ ನಾಗರಾಜ್ ಶರಣರಿಗೂ ವಂದನೆಗಳು.
Shivananda Beluru
Nov 1, 2024ವೈದಿಕ- ಅವೈದಿಕ ವಿಚಾರಗಳು ಬಿಡಿಸಲಾಗದಷ್ಟು ಬೆರೆತು ಹೋಗಿರುವ ಜನನುಡಿಯಲ್ಲಿ, ಗ್ರಂಥಗಳಲ್ಲಿ ಮೂಲ ಆಶಯಗಳನ್ನು ಗುರುತಿಸುವುದೇ ಅತ್ಯಂತ ಕಠಿಣ. ಅದು ನೀರಿನಲ್ಲಿ ಹಾಲು ಹುಡುಕಿದಂತೆ. ಸಹಜಾಮನಸ್ಕ ಯೋಗದ ನಿಲುವುಗಳನ್ನು ಲೇಖಕರು ಪಟ್ಟಿ ಮಾಡಿ ಕೊಟ್ಟಿದ್ದು ಕಲಸುಮೇಲೋಗರ ಗೊಂದಲದಲ್ಲಿರುವ ನಮಗೆ ಬಹಳ ಪ್ರಯೋಜನಕಾರಿಯಾಗಿದೆ. ಸಂಕ್ಷಿಪ್ತವಾಗಿಯಾದರೂ ದೇಸಿ ಮಾರ್ಗವನ್ನು ವೈದಿಕ ಯೋಗಾಯೋಗಗಳ ಕಗ್ಗಂಟಿನಿಂದ ಬಿಡಿಸಿಕೊಳ್ಳಲು ನೆರವಾಗುತ್ತದೆ. ಬಹುಮುಖ್ಯವಾದ ತಿಳುವಳಿಕೆಯನ್ನು ಇಲ್ಲಿ ನಾಗರಾಜ್ ಅವರು ನೀಡಿದ್ದಾರೆ.
Malinga Harihara
Nov 2, 20241.ಈ ಮನಸ್ಸಿನೊಳಗಿರ್ಪ ವಿಷವಳಿಯಬೇಕು
ಶ್ರೀ ಮಹಾಪರತತ್ವ ಸ್ಥಿತಿಯಾಗಬೇಕು. 2.ಯಾರ ನಂಬುವುದೇನು | ಎಲೆ ಹುಚ್ಚು ಮನವೇ
ಯಾರಿಂದ ಪಡೆದ | ಸುಖವೇನಿಹುದು ತನುವೇ 3. ಇರುವುದು ಗುರುವೆಂಬುದು|
ನಾ ಕಂಡಿದ್ದೆಲ್ಲವೂ ಇರುವುದು
ಇರುವುದೇನೋ ಇರುವುದು|
ನಾನೆಂಬುದೇ ಇಲ್ಲಾದುದು |
-ಲೇಖನದಲ್ಲಿ ಉಲ್ಲೇಖವಾದ ಈ ಪದಗಳು ತಾತ್ವಿಕ ಮೌಲ್ಯದಿಂದ ಬಹಳ ಅರ್ಥಪೂರ್ಣವಾಗಿವೆ. ಇವುಗಳನ್ನು ಒಂದೆಡೆ ಬರೆದುಕೊಂಡು ಮತ್ತೆ ಮತ್ತೆ ಹಾಕಿಕೊಂಡಿದ್ದೇನೆ.🙏🏽
Renuka Tapashetty
Nov 5, 2024ನಮ್ಮ ಯೋಗ ಪರಂಪರೆಯ ಮೂಲವೇ ವೇದವೇದಾಂತಗಳೆಂದು, ಅದರಿಂದಲೇ ಬೇರೆ ಬೇರೆಯ ವಿಚಾರ, ಚಿಂತನಗಳು ಕವಲೊಡೆದವೆಂದು ಈ ತನಕದ ನನ್ನ ಓದು, ತಿಳಿವಳಿಕೆಯಾಗಿತ್ತು. ಈಗ ನೋಡಿದರೆ ವೈದಿಕ ಮತ್ತು ನೆಲ ಮೂಲದ ಅವೈದಿಕ ಪರಂಪರೆಗಳೆಂದು ಎರಡು ಸ್ಪಷ್ಟ parallel ವಿಚಾರಗಳು ಇಲ್ಲಿ ಸಂಭವಿಸಿವೆ ಎನ್ನುವ ಮಹತ್ವದ ಐತಿಹಾಸಿಕ ವಿಷಯವನ್ನು ಬಯಲು ಲೇಖನಗಳಿಂದ ಹಾಗೂ ಕೆಲವು ಚಿಂತಕರ ಮಾತುಗಳಿಂದ ಗೊತ್ತಾಗುತ್ತಿದೆ. ವೀರದಾಸಮ್ಮನ ಜೀವನ ಓದುತ್ತಾ, ಮಹಾ ಸಂತಳೊಬ್ಬಳ ಕತೆ ಕೇಳಿದ ಆನಂದವಾಯಿತು. ಧನ್ಯವಾದಗಳು 💥🙏
ಫಕೀರಪ್ಪ ವಿಜಯಪುರ
Nov 5, 2024ಬುದ್ಧನ ‘ಪ್ರತೀತ್ಯಾ ಸಮುತ್ಪಾದ’ದ ಬಗೆಗೆ ಸಂಪೂರ್ಣ ಮಾಹಿತಿಯಿರುವ ಯಾವುದಾದರೂ ಕನ್ನಡದಲ್ಲಿ ಬರೆದ ಪುಸ್ತಕ ಇದ್ದರೆ ತಿಳಿಸಿ. ಅಥವಾ ಯಾವುದಾದರೂ ವಿಡಿಯೋ ಲಿಂಕುಗಳಿದ್ದರೆ ದಯಮಾಡಿ ಶೇರ್ ಮಾಡಿ. ಲೇಖನ ಬಹಳ ಆಳವಾಗಿದೆ. ತುಂಬಾ ತುಂಬಾ ಥ್ಯಾಂಕ್ಸ್ ಸರ್.
Padmalaya
Nov 6, 2024ಲೋಕಾಯುಕ್ತ ದರ್ಶನ _ಕನ್ನಡಕ್ಕೆ ಜಿ.ರಾಮಕ್ರಿಷ್ಣ
ಫಕೀರಪ್ಪ ವಿಜಯಪುರ
Nov 11, 2024ಥ್ಯಾಂಕ್ಯೂ ಸರ್. ಪುಸ್ತಕ ಕೊಳ್ಳಲು ಇವತ್ತೇ ಪ್ರಯತ್ನಿಸುತ್ತೇನೆ. ವೀರದಾಸಮ್ಮನವರ ಜೀವನ ಕುರಿತಾಗಿ ನೀವು ಪುಸ್ತಕ ಬರೆದಿರುವಿರೆಂದು ಅಕ್ಕಾ ಹೇಳಿದರು. ನನಗೆ ಆ ಪುಸ್ತಕ ಬೇಕೆಂದು ಹೇಳಿದ್ದೇನೆ. ನಿಮ್ಮ ಎಲ್ಲಾ ಪುಸ್ತಕಗಳ ಬಗ್ಗೆ ಮಾಹಿತಿ ಪಡೆದಿದ್ದೇನೆ. ಬಯಲು ಬಳಗಕ್ಕೂ, ತಮಗೂ 🙏🙏
ಸವಿತಾ ಹುಲಿಗೆಪ್ಪ ಕುಂದಗೋಳ
Nov 11, 2024ಆಳ ಅಧ್ಯಯನದಿಂದ ಕೂಡಿದ ಲೇಖನ. ಪದೇ ಪದೇ ಓದಿಸಿಕೊಂಡ ಲೇಖನದಲ್ಲಿ ನನಗೆ ಸ್ಪಷ್ಟವಾಗಿ ಗ್ರಹಿಕೆಯಾಗದ ಸಂಗತಿಗಳು-
1. ಮನೋಸಂರಚನೆಗಳೆಂದರೆ ಯಾವುವು?
2. ಸಹಜಾಮನಸ್ಕ ಯೋಗ ಎಂದರೆ?
3. ಸದಮಲ ಜ್ಞಾನ ಎಂದರೆ?
4. ನಿಜವಾದ ಧರ್ಮವು ಧರ್ಮ ಶೂನ್ಯವಾಗಿದೆ ಎಂದರೆ?
ನಾಗಲಿಂಗಯ್ಯ ಬಿ.
Nov 12, 2024ಶರಣರು ಪಾಲಿಸಿದ ಶಿವಯೋಗಕ್ಕೂ, ಅಮನಸ್ಕ ಯೋಗಕ್ಕೂ ನಿಕಟ ಸಂಬಂಧವಿದೆ. ಇಷ್ಟಲಿಂಗದ ಪ್ರಸ್ತಾಪ ಬಿಟ್ಟರೆ, ವೀರದಾಸಮ್ಮನವರೂ ಮಹಾ ಶಿವಯೋಗಿನಿಯಂತೆಯೇ ಭಾಸವಾದರು. ಶರಣರಂತೆ ಅವರೂ ವಿಶ್ವ ಕುಟುಂಬಿ🙏
ಬಸವರಾಜ ಹಂಡಿ
Nov 15, 2024ವೀರದಾಸಮ್ಮನ ಸಹಜಾಮನಸ್ಕ ಯೋಗ
ತತ್ವಪದಕಾರ ಶ್ರೀ ಪದ್ಮಾಲಯ ನಾಗರಾಜ ಗುರುಗಳ ಬರೆದ ಈ ಲೇಖನ ಬಹಳ ಅರ್ಥಪೂರ್ಣವಾಗಿ ಮತ್ತು ಪರಿಣಾಮಕಾರಿಯಾಗಿ ಮೂಡಿ ಬಂದಿದೆ.
ಒಬ್ಬ ತತ್ವಪದಕಾರ ಇನ್ನೊಬ್ಬ ತತ್ವಪದಕಾರ ಬಗ್ಗೆ ಅನುಭವ ಆಧಾರಿತವಾಗಿ ಬರೆಯಬಲ್ಲರು.
ವೀರದಾಸಮ್ಮ ತತ್ವಪದಕಾರ ಬಗ್ಗೆ ಓದಿ ಬಹಳ ರೋಮಾಂಚನ ಆಯ್ತು. 17ನೆಯ ಶತಮಾನದ ಪುರುಷ ಪ್ರಧಾನವಾದ ಸಮಾಜವನ್ನು ಎದುರಿಸಿ ಸ್ವಾತಂತ್ರ್ಯಕ್ಕಾಗಿ ಮಾಡಿದ ಹೋರಾಟ ಬಹಳ ಅದ್ಭುತವಾದದ್ದು.
ಒಬ್ಬ ಸಾಧನೆಯ ಹಾದಿಯಲ್ಲಿ ನಡೆಯುವನಿಗೆ ಅವರು ಇದ್ದ ಪರಿಸ್ಥಿತಿ ಸಾದನೆ ಮಾಡಲು ಬಹಳ ಪೂರಕವಾಗಿ ಕೆಲಸ ಮಾಡುತ್ತದೆ ಎಂಬುದನ್ನು ಈ ಲೇಖನ ಓದಿದ ನಂತರ ಗಮನಕ್ಕೆ ಬರುತ್ತದೆ.
ವೀರ ದಾಸಮ್ಮನವರ ಪ್ರತಿಯೊಂದು ತತ್ವಪದ ಆಂತ್ರಿಕ ಸ್ವಾತಂತ್ರ್ಯವನ್ನು ಹೇಗೆ ಸಾಧಿಸಬೇಕು ಎಂಬುದನ್ನು ಗೊತ್ತು ಆಗುತ್ತದೆ.
ಪದ್ಮಾಲಯ ನಾಗರಾಜ್ ಗುರುಗಳು ವೀರದಾಸಮ್ಮನವರ ಸಹಜ ಯೋಗವನ್ನು ಬುದ್ಧ ಬೋಧಿಸಿದ ಪ್ರತಿತ್ಯಾ ಸಮತ್ಪಾದನೊಂದಿಗೆ ಜೋಡಿಸಿದ್ದು ಬಹಳ ಸರಿಯಾಗಿ ಇದೆ. ಇದು ಪದ್ಮಾಲಯ ನಾಗರಾಜ್ ಗುರುಗಳ ಅನುಭವ ಮತ್ತು ಜ್ಞಾನವನ್ನು ತೋರಿಸಿ ಕೊಡುತ್ತದೆ.
ನಾವು ಈ ಲೇಖನವನ್ನು ಸುಮ್ಮನೆ ಹೋದದೆ ಇದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನ ಮಾಡಬೇಕು. ಪ್ರತಿಯೊಂದು ಅಂಶವನ್ನು ಈ ಲೇಖನದಲ್ಲಿ ಬರೆದಿದ್ದಾರೆ. ನಾವು ಇದರ ಬಗ್ಗೆ ಚಿಂತನೆ ಮತ್ತು ಚರ್ಚೆ ಮಾಡಬೇಕು.
ಇದನ್ನು ತಿಳಿದ ನಂತರ ನಾವು ವೈದಿಕ ಸಾಹಿತ್ಯವನ್ನು ಪೂರ್ತಿಯಾಗಿ ನಿರಾಕರಿಸಬೇಕು. ವೈದಿಕ ಸಾಹಿತ್ಯ ಬಹಳ ಮೋಸದಿಂದ ಕೂಡಿದೆ ಮತ್ತು ಕಲ್ಪನೆಗಳಿಂದ ಕೂಡಿದ್ದು. ಇದು ಹೇಗೆ ಅಂದರೆ ಗಾಳಿಯ ಜೊತೆ ಗುದ್ದಾಡಿ ಮೈ ನೋವು ಮಾಡಿಕೊಂಡಾಗೆ.
ಶ್ರೀ ಪದ್ಮಾಲಯ ನಾಗರಾಜ್ ಗುರುಗಳ ಈ ಅತಿ ವಿರಳವಾದ ಜ್ಞಾನದಾಸೋಕೆ ಧನ್ಯವಾದಗಳು ಮತ್ತು ಶರಣು ಶರಣಾರ್ಥಿಗಳು.
ಇದನ್ನು ಪ್ರಕಟಿಸಿದ ಬಯಲು ತಂಡಕ್ಕೆ ಧನ್ಯವಾದಗಳು.