ಲಿಂಗಾಯತ ಧರ್ಮದ ತಾತ್ವಿಕ ಚಿಂತನಾ ಗೋಷ್ಠಿ
ಹನ್ನೆರಡನೆಯ ಶತಮಾನ ವಿಶ್ವದ ಇತಿಹಾಸದಲ್ಲೇ ಸುವರ್ಣಾಕ್ಷರಗಳಿಂದ ದಾಖಲಿಸುವಂತಹುದು. ಇದಕ್ಕೆ ಕಾರಣರಾದವರು ಬಸವಾದಿ ಶರಣರು. ಅವರ ಪೂರ್ವದ ಮತ್ತು ಸಮಕಾಲೀನ ಸಮಾಜ ಇಂದಿಗಿಂತ ಹೆಚ್ಚು ಹದಗೆಟ್ಟಿತ್ತು. ಅದು ಒಂದು ಕ್ಷೇತ್ರದಲ್ಲಿ ಅಲ್ಲ; ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಹದಗೆಟ್ಟು ಕೊಳೆತು ನಾರುವ ಸ್ಥಿತಿಯಲ್ಲಿತ್ತು. ಧರ್ಮ, ದೇವರ ಹೆಸರಿನಲ್ಲಿ ಅವಿಚಾರ, ಅನಾಚಾರಗಳು ನಡೆಯುತ್ತಿದ್ದವು. ಪಟ್ಟಭದ್ರ ಹಿತಾಸಕ್ತರು, ಪುರೋಹಿತ ಪರಂಪರೆಯವರು ಸಮಾಜವನ್ನು ದಿಕ್ಕುತಪ್ಪಿಸುವಲ್ಲಿ ತಮ್ಮದೇ ಆದ ತಂತ್ರ-ಕುತಂತ್ರಗಳನ್ನು ಮಾಡುತ್ತಿದ್ದರು. ಅಂಥವರ ವಿರುದ್ಧ ಮೊಟ್ಟಮೊದಲು ಪ್ರತಿಭಟನೆ ಮಾಡುವ ಎದೆಗಾರಿಕೆ ಬಂದದ್ದು ಅನುಭವ ಮಂಟಪದ ಶರಣ ಶರಣೆಯರಿಗೆ. ಅವರು ವೇದ, ಪುರಾಣ, ಶಾಸ್ತ್ರ, ಆಗಮಗಳ ವಿರುದ್ಧ ತಿರುಗಿಬಿದ್ದರು. ಅದರಲ್ಲೂ ಬಸವಣ್ಣನಂಥವರು ವೇದ, ಪುರಾಣ, ಶಾಸ್ತ್ರ, ಆಗಮಗಳ ಆಳವಾದ ಅಧ್ಯಯನ ಮಾಡಿದ್ದರಿಂದಲೇ ಅವುಗಳ ಹೂರಣವನ್ನು ಬಯಲುಗೊಳಿಸಿದ್ದಾರೆ. ಈ ನಿಟ್ಟಿನಲ್ಲಿ ಬಸವಣ್ಣನವರ ವಚನವನ್ನು ನೋಡಿ:
ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ,
ತರ್ಕದ ಬೆನ್ನ ಬಾರನೆತ್ತುವೆ, ಆಗಮದ ಮೂಗ ಕೊಯಿವೆ, ನೋಡಯ್ಯಾ.
ಮಹಾದಾನಿ ಕೂಡಲಸಂಗಮದೇವಾ,
ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯಾ.
ಪ್ರಭುದೇವರು ಇನ್ನೂ ಒಂದು ಹೆಜ್ಜೆ ಮುಂದೆ ಸಾಗಿ ಹೇಳುವುದು:
ವೇದವೆಂಬುದು ಓದಿನ ಮಾತು, ಶಾಸ್ತ್ರವೆಂಬುದು ಸಂತೆಯ ಸುದ್ದಿ.
ಪುರಾಣವೆಂಬುದು ಪುಂಡರ ಗೋಷ್ಠಿ, ತರ್ಕವೆಂಬುದು ತಗರ ಹೋರಟೆ.
ಭಕ್ತಿ ಎಂಬುದು ತೋರಿ ಉಂಬ ಲಾಭ.
ಗುಹೇಶ್ವರನೆಂಬುದು ಮೀರಿದ ಘನವು.
ಹೀಗೆ ಹೇಳುವಲ್ಲಿ ಎದೆಗಾರಿಕೆ ಬೇಕು. ಅಂಥ ಎದೆಗಾರಿಕೆ ತಂದುಕೊಟ್ಟದ್ದು ಅನುಭವ ಮಂಟಪ. ದೇವರು ಎಷ್ಟು ಜನ? ಒಂದಲ್ಲ, ಎರಡಲ್ಲ, ಮೂರಲ್ಲ; ಲೆಕ್ಕವಿಲ್ಲದಷ್ಟು. ಬಸವಣ್ಣನವರು ಹೇಳಿದ್ದು `ದೇವನೊಬ್ಬ, ನಾಮ ಹಲವು’ ಎಂದು. ಆದರೆ ಅಂದು ಮತ್ತು ಇಂದು ಇರುವ ದೇವರೂ ಹಲವು, ನಾಮಗಳೂ ಹಲವು. ಮನೆಯ ದೇವರು ಬೇರೆ, ಮನದ ದೇವರು ಬೇರೆ, ಊರ ದೇವರು ಬೇರೆ, ಮಠದ ದೇವರು ಬೇರೆ. ಎಲ್ಲೆಡೆ ಜಾತಿ, ಕುಲ, ಊರು, ಕೇರಿಗೊಂದೊಂದು ದೇವರು. ಅದನ್ನು ಕಂಡೇ ಬಸವಣ್ಣನವರು ಹೇಳಿದ್ದು: “ಮಡಕೆ ದೈವ, ಮೊರ ದೈವ, ಬೀದಿಯ ಕಲ್ಲು ದೈವ, ಹಣಿಗೆ ದೈವ, ಬಿಲ್ಲುನಾರಿ ದೈವ, ಕಾಣಿರೊ! ಕೊಳಗ ದೈವ, ಗಿಣ್ಣಿಲು ದೈವ, ಕಾಣಿರೊ! ದೈವ ದೈವವೆಂದು ಕಾಲಿಡಲಿಂಬಿಲ್ಲ…” ಜನರು ಪೂಜಿಸುವ ಯಾವ ದೇವರೂ ಜಂಗಮ ಸ್ಥಿತಿ ಹೊಂದಿದವುಗಳಲ್ಲ. ಅವು ಸ್ಥಾವರ. ಅಂಥ ಸ್ಥಾವರ ದೇವರ ಮೂರ್ತಿಗಳನ್ನು ಪೂಜಿಸಿಕೊಂಡು ಪೂಜಾರಿ ಪುರೋಹಿತರು ಜನರ ಮುಗ್ಧಭಾವನೆಗಳಿಗೆ ಬೆಂಕಿ ಇಡುವ, ಸುಲಿಗೆ ಮಾಡುವ ಕೆಲಸವನ್ನು ಜಾಣ್ಮೆಯಿಂದಲೇ ಮಾಡುತ್ತಿದ್ದರು. ಆಗ ಬಸವಣ್ಣನವರು ಹೇಳಿದ್ದು `ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ’ ಎಂದು. ಹಣವುಳ್ಳ ಶ್ರೀಮಂತರು ದೊಡ್ಡ ದೊಡ್ಡ ದೇವಾಲಯ ಕಟ್ಟಿಸುವರು. ನಾನು ಬಡವ. ಅವರಂತೆ ಹೇಗೆ ದೇವಸ್ಥಾನ ಕಟ್ಟಿಸಲು ಸಾಧ್ಯ ಎನ್ನುವರು. ಹಾಗಂತ ಬಸವಣ್ಣನವರು ಬಡವರೇ? ಕಲ್ಯಾಣ ನಾಡಿನ ಪ್ರಧಾನಿಯಾಗಿದ್ದ ಅವರು ಮನಸ್ಸು ಮಾಡಿದ್ದರೆ ಬೇಕಾದಷ್ಟು ಭವ್ಯ, ದಿವ್ಯ ದೇವಾಲಯಗಳನ್ನು ಕಟ್ಟಿಸಲು ಸಾಧ್ಯವಿತ್ತು. ಆದರೆ ಜನರ ಸುಲಿಗೆಗೆ ಕಾರಣವಾಗುವ, ಪೂಜಾರಿ ಪುರೋಹಿತರ ಬೊಜ್ಜು ಬೆಳೆಸುವ, ಪಟ್ಟಭದ್ರ ಹಿತಾಸಕ್ತರ ಕಪಿಮುಷ್ಠಿಗೆ ಸಿಲುಕುವ ಸ್ಥಾವರ ದೇವರುಗಳು ಅವರಿಗೆ ಬೇಕಾಗಲಿಲ್ಲ. ಹಾಗಂತ ಅವರು ದೇವರನ್ನು ನಿರಾಕರಿಸಲಿಲ್ಲ; ನಿರಾಕರಿಸಿದ್ದು ದೇವಾಲಯಗಳ ಸ್ಥಾವರ ಮೂರ್ತಿಗಳನ್ನು. ಅವರು ನಂಬಿದ ದೇವರು ಅವರ ಅಂತರಂಗದಲ್ಲೇ ಇತ್ತು. ಅದಕ್ಕಾಗಿ ತಮ್ಮ ದೇಹವನ್ನೇ ದೇವಾಲಯ ಮಾಡಿಕೊಂಡರು. ಆ ದೇವಾಲಯಕ್ಕೆ ಅವರ ಕಾಲುಗಳೇ ಕಂಬಗಳು, ತಲೆಯೇ ಬಂಗಾರದ ಕಳಸ. ಜೀವಾತ್ಮನೇ ಪರಮಾತ್ಮ. ಈ ದೇವಾಲಯಕ್ಕೆ ಅಳಿವಿಲ್ಲ. ಬಾಹ್ಯ ದೇವಾಲಯಕ್ಕೆ ಅಳಿವಿದೆ. ಹೀಗೆ ಹೇಳಿ ಜೀವಾತ್ಮನ ಸಂಕೇತವಾಗಿ ಇಷ್ಟಲಿಂಗವನ್ನು ಕರುಣಿಸಿದರು.
ಬಸವಣ್ಣನವರು ಕರುಣಿಸಿದ ದೇವರು ಜಗದಗಲ, ಮುಗಿಲಗಲ, ಮಿಗೆಯಗಲ. ಎತ್ತತ್ತ ನೋಡಿದರೂ ಅತ್ತತ್ತ ದೇವರು ಇದ್ದಾನೆಂದು ಭಕ್ತನ ದೇಹವನ್ನೇ ದೇವಾಲಯವಾಗಿಸಿ ಗುರುವಿನ ಮೂಲಕ ಅಂಗಕ್ಕೆ ಇಷ್ಟಲಿಂಗ ಸಂಬಂಧವನ್ನು ಕಲ್ಪಿಸಿದರು. ಇಷ್ಟಲಿಂಗ ಧರಿಸಿದವರು ಜಾತಿ ಭೇದ, ಲಿಂಗ ಭೇದ, ವರ್ಗ ಭೇದ, ವರ್ಣ ಭೇದ ಮಾಡದೆ ಎಲ್ಲ ಮಾನವರೂ ದೇವರ ಮಕ್ಕಳು, ಎಲ್ಲರೂ ಸಮಾನರು ಎನ್ನುವ ಭಾವನೆ ಬೆಳೆಸಿಕೊಳ್ಳಬೇಕು ಎಂದರು. ಲಿಂಗಪೂಜಕ ಸೋಮಾರಿಯಾಗದೆ ಕಾಯಕಶೀಲನಾಗಿರಬೇಕು. ಕಾಯಕದಲ್ಲಿ ಮೇಲು-ಕೀಳು ಇರಬಾರದು. ಎಲ್ಲ ಕಾಯಕಗಳೂ ಸಮಾನವೆಂದು ಹೇಳಿದರು. ಕಾಯಕ ಪ್ರಜ್ಞೆಯೊಂದಿಗೆ ಅವರು ಒತ್ತಿ ಹೇಳಿದ್ದು ದಾಸೋಹ ತತ್ವವನ್ನು. ಕಾಯಕ ಮಾಡಲು ಅನೇಕರ ಸಲಹೆ, ಸಹಕಾರ ಇರುತ್ತದೆ. ಹಾಗಾಗಿ ಕಾಯಕದಿಂದ ಬಂದ ಸಂಪಾದನೆ ತನ್ನೊಬ್ಬನದೇ ಎನ್ನದೆ ಅದರ ಕೆಲವು ಭಾಗವನ್ನು ಸಮಾಜದ ಸತ್ಕಾರ್ಯಗಳಿಗೆ ಕೊಡಬೇಕು. ಅದೊಂದು ರೀತಿಯಲ್ಲಿ ಶಿವನಿಧಿ. ಅದು ಸಮಾಜಕ್ಕೆ ವಿನಿಯೋಗವಾಗಬೇಕು. ಹೀಗೆ ಕಾಯಕ, ದಾಸೋಹ, ಇಷ್ಟಲಿಂಗ ನಿಷ್ಠೆಯನ್ನು ಜಾರಿಯಲ್ಲಿ ತಂದಾಗ ವ್ಯಕ್ತಿಯ ಕಲ್ಯಾಣದೊಂದಿಗೆ ಸಮಾಜದ ಕಲ್ಯಾಣವೂ ಆಗುವುದು. ಆತ್ಮಕಲ್ಯಾಣದ ಜೊತೆಗೆ ಲೋಕಕಲ್ಯಾಣವೂ ಆಗುವುದು. ಇದನ್ನು ಅರಿತು ಆಚರಣೆಯಲ್ಲಿ ತರದಿದ್ದರೆ ಲಿಂಗ ಧರಿಸಿದರೂ ಪ್ರಯೋಜನವಿಲ್ಲ. ಲಿಂಗಪೂಜಕನ ಬದುಕು ಹೇಗಿರಬೇಕೆಂಬುದನ್ನು ನೋಡಿ:
ನಡೆಯಲರಿಯದೆ, ನುಡಿಯಲರಿಯದೆ
ಲಿಂಗವ ಪೂಜಿಸಿ ಫಲವೇನು? ಫಲವೇನು?
ಅವರ ದುಃಖವೆನ್ನ ದುಃಖ, ಅವರ ಸುಖವೆನ್ನ ಸುಖ.
ಕೂಡಲಸಂಗನ ಶರಣರ ಮನನೊಂದಡೆ
ಆನು ಬೆಂದೆನಯ್ಯಾ.
ಶರಣರು ನಡೆದಂತೆ ನುಡಿದವರು, ನುಡಿದಂತೆ ನಡೆದವರು. ನಡೆ ಮತ್ತು ನುಡಿ ಒಂದಾಗದೆ ಎಷ್ಟು ಹೊತ್ತು ಪೂಜೆ ಮಾಡಿದರೂ ಅದರಿಂದ ಯಾವ ಫಲವೂ ಲಭಿಸುವುದಿಲ್ಲ. ನಡೆ ನುಡಿ ಒಂದಾಗುವುದು ಎಂದರೆ ಸಮಾಜದ ಜನರ ನೋವೇ ತಮ್ಮ ನೋವೆಂದು ಭಾವಿಸುವುದು. ಜೊತೆಗೆ ಅವರ ಸಂತೋಷವೇ ತಮ್ಮ ಸಂತೋಷ ಎಂದು ತಿಳಿಯುವುದು. ಅಷ್ಟಕ್ಕೇ ತೃಪ್ತಿಯಿಲ್ಲ. ಸಾತ್ವಿಕರ, ಸಜ್ಜನರ, ಪ್ರಾಮಾಣಿಕರ, ಶರಣರ ಮನಸ್ಸಿಗೆ ನೋವುಂಟಾದರೆ ನಾನೇ ಬೆಂದುಹೋಗುವೆ ಎನ್ನುವರು. ಈ ರೀತಿಯ ಎಚ್ಚರ ಕೊನೆಯಪಕ್ಷ ಲಿಂಗವಂತರಲ್ಲಾದರೂ ಮೂಡಿದ್ದರೆ ಸಮಾಜದಲ್ಲಿ ಸಾಕಷ್ಟು ಬದಲಾವಣೆ ಕಾಣಲು ಸಾಧ್ಯವಿತ್ತು. ಆಗ ಮನೆ ದೇವರು, ಮನದ ದೇವರು, ಊರಿನ ದೇವರು, ಬೆಟ್ಟದ ದೇವರು ಎನ್ನುವ ಪ್ರಶ್ನೆಯೇ ಉದ್ಭವಿಸುತ್ತಿರಲಿಲ್ಲ. ಇವತ್ತು ಧರ್ಮ, ದೇವರ ಹೆಸರಿನಲ್ಲಿ ಹೊಡೆದಾಟ, ಬಡಿದಾಟ ಕಿತ್ತಾಟ ನಡೆದೇ ಇದೆ. ಇದಕ್ಕೆ ಕಾರಣ ಶರಣರ ವಿಚಾರ, ಆಚಾರಗಳನ್ನು ಸರಿಯಾಗಿ ಅರಿತು ಆಚರಣೆಯಲ್ಲಿ ತಾರದಿರುವುದು. ಶರಣರ ಆಚಾರ, ವಿಚಾರಗಳನ್ನು ಯಥಾವತ್ತಾಗಿ ಜಾರಿಯಲ್ಲಿ ತಂದಿದ್ದರೆ ಲಿಂಗಾಯತ ಧರ್ಮದ ತಾತ್ವಿಕ ಚಿಂತನಾ ಗೋಷ್ಠಿಯ ಅಗತ್ಯವೇ ಇರುತ್ತಿರಲಿಲ್ಲ. ಇಂಥ ಗೋಷ್ಠಿಗಳ ಉದ್ದೇಶ ಲಿಂಗಾಯತ ಧರ್ಮದ ನೈಜ ತತ್ವಗಳನ್ನು ಸರಳವಾಗಿ ಪರಿಚಯ ಮಾಡಿಕೊಡುವುದು. ಇದರ ಹಿಂದೆ ಯಾವ ರಾಜಕೀಯ ದುರುದ್ದೇಶವೂ ಇಲ್ಲ. ಬದಲಾಗಿ ಜನರನ್ನು ಜಾಗೃತಗೊಳಿಸುವ ಸದಾಶಯವಿರುತ್ತದೆ. ಲಿಂಗಾಯತರು ಮೊದಲು ಲಿಂಗಾಯತ ಧರ್ಮದ ತತ್ವಗಳನ್ನು ಅರಿಯಬೇಕು. ಅರಿತನಂತರ ಆಚರಣೆಯಲ್ಲಿ ತರುವ ಸಂಕಲ್ಪ ಮಾಡಬೇಕು. ಈ ಹಿನ್ನೆಲೆಯಲ್ಲಿ ಸಾಣೇಹಳ್ಳಿಯಲ್ಲಿ ಕಳೆದ ತಿಂಗಳು 26ನೇ ತಾರೀಖು, ಭಾನುವಾರದಂದು ಎರಡು ಅಪರೂಪದ ಗೋಷ್ಠಿಗಳು ನಡೆದವು. ಲಿಂಗಾಯತ ಸ್ವತಂತ್ರ ಧರ್ಮ ಕುರಿತಂತೆ ಡಾ. ಎಸ್ ಎಂ ಜಾಮದಾರ್ ಅವರು ವರದಿ ನೀಡಿದರು. ವಚನಗಳ ಗ್ರಹಿಕೆ ಕುರಿತಂತೆ ಶ್ರೀ ಎಸ್ ಜಿ ಸಿದ್ಧರಾಮಯ್ಯನವರು ತಮ್ಮ ಆಲೋಚನೆಗಳನ್ನು ಹಂಚಿಕೊಂಡರು. `ನಡೆ-ನುಡಿ ಸಿದ್ಧಾಂತ’ ಎನ್ನುವ ವಿಚಾರದ ಬಗ್ಗೆ ಶ್ರೀ ರಂಜಾನ್ ದರ್ಗಾ ಅವರು ಅಭಿಪ್ರಾಯ ಮಂಡಿಸಿದರು. ಶ್ರೀ ವಿಶ್ವಾರಾಧ್ಯ ಸತ್ಯಂಪೇಟೆ ಅವರು `ಮನೆ-ಮಠ-ಧರ್ಮ’ ಕುರಿತಂತೆ ಚಿಂತನೆ ನಡೆಸಿದರು.
ಇವತ್ತು ನಡೆ-ನುಡಿಗಳ ನಡುವೆ ಹೊಂದಾಣಿಕೆ ಕಂಡುಬರುತ್ತಿಲ್ಲ. ಮನೆಯಲ್ಲೂ ಲಿಂಗಾಯತ ಧರ್ಮದ ಅನುಷ್ಠಾನದ ಕೊರತೆ ಇದೆ, ಮಠದಲ್ಲೂ ಆ ಕೊರತೆ ಕಂಡುಬರುತ್ತಿದೆ. ಈ ನಿಟ್ಟಿನಲ್ಲಿ ಚಿಂತಕರು ತಮ್ಮ ಮಾತುಗಳ ಮೂಲಕ ಬೆಳಕು ಚೆಲ್ಲಿದರು. ನಮ್ಮ ಗುರುಗಳಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಬದುಕು ಬಸವಮಯವಾಗಿತ್ತು. ಅವರ ಉಸಿರಾಟ ಬಸವತತ್ವದಿಂದ ಕೂಡಿತ್ತು. ಅವರು ಯಾವುದೇ ಸಮಾರಂಭಗಳಿಗೆ ದಯಮಾಡಿಸಿದರೂ ಅಲ್ಲಿ ವಚನ ಸಂಗೀತ, ಬಸವಾದಿ ಶರಣರ ವಿಚಾರಗಳ ಚಿಂತನ ಮಂಥನ ನಡೆಯುತ್ತಿತ್ತು. ವಚನಗಳಿಗೆ, ಶರಣರ ಬದುಕಿಗೆ ಪೂರಕವಾಗಿ ನಾಟಕಗಳನ್ನು ಆಡಿಸುತ್ತಿದ್ದರು. ಸಾಮೂಹಿಕ ಇಷ್ಟಲಿಂಗ ದೀಕ್ಷೆಯನ್ನು ಕರುಣಿಸುತ್ತಿದ್ದರು. ಸರ್ವಸಮ್ಮೇಳನ ಎನ್ನುವ ಪದ್ಧತಿಯನ್ನು ಜಾರಿಯಲ್ಲಿ ತಂದರು. ಅದೇ ಪರಂಪರೆಯನ್ನು ಕಳೆದ 45 ವರ್ಷಗಳಿಂದ ನಾವೂ ನಡೆಸಿಕೊಂಡು ಬಂದಿದ್ದೇವೆ. ಸಾಣೇಹಳ್ಳಿಯಲ್ಲಿ ವರ್ಷದುದ್ದಕ್ಕೂ ಹಲವಾರು ಸಭೆ ಸಮಾರಂಭಗಳು ನಡೆಯುತ್ತ ಬಂದಿದ್ದರೂ ಅಲ್ಲಿ `ಲಿಂಗಾಯತ’ ಧರ್ಮ ಎನ್ನುವ ಪದದ ನೇರ ಬಳಕೆ ಆಗಿರಲಿಲ್ಲ. ಆದರೆ ಆ ಸಭೆಗಳಲ್ಲಿ ಚಿಂತನೆ ನಡೆಯುತ್ತಿದ್ದುದು ಲಿಂಗಾಯತ ಧರ್ಮವನ್ನು ಕುರಿತೇ. ಆದರೆ ಜನರಲ್ಲಿ ಜಾಗೃತಿ ನಿರೀಕ್ಷಿತ ಮಟ್ಟದಲ್ಲಿ ಆಗದ್ದರಿಂದ `ಲಿಂಗಾಯತ ಧರ್ಮದ ತಾತ್ವಿಕ ಚಿಂತನಾಗೋಷ್ಠಿ’ಯನ್ನು ನಡೆಸಬೇಕಾಯ್ತು. ಇದರ ಹಿಂದೆ ಒಂದು ಸದಾಶಯವೂ ಇತ್ತು. ಭಾರತದಲ್ಲಿ ಸಿಖ್, ಜೈನ, ಬೌದ್ಧ, ಕ್ರಿಶ್ಚಿಯನ್ ಮುಂತಾದ ಧರ್ಮಗಳಿವೆ. ಇಂಥ ಧರ್ಮಗಳಿಗೆ ಅಲ್ಪಸಂಖ್ಯಾತ ಎನ್ನುವ ಮನ್ನಣೆ ದೊರೆತಿದೆ. ಲಿಂಗಾಯತ ಧರ್ಮಕ್ಕೆ ಆ ಮಾನ್ಯತೆ ದೊರೆತಿಲ್ಲ ಎನ್ನುವ ಆತಂಕ ಅನೇಕರಲ್ಲಿದೆ. ಎಲ್ಲರೂ ಬಲ್ಲಂತೆ ಹನ್ನೆರಡನೆಯ ಶತಮಾನದಲ್ಲೇ ಇದು ಸ್ವತಂತ್ರ ಮತ್ತು ಅಲ್ಪಸಂಖ್ಯಾತ ಧರ್ಮವಾಗಿತ್ತು. ಹಾಗಾಗಿ ಇಂದು ಸರ್ಕಾರ ಅನುಮತಿ ಕೊಡಲಿ, ಕೊಡದಿರಲಿ ಅದು ಸ್ವತಂತ್ರ ಮತ್ತು ಅಲ್ಪಸಂಖ್ಯಾತ ಧರ್ಮ ಎನ್ನುವುದರಲ್ಲಿ ಅನುಮಾನ ಬೇಡ.
ಲಿಂಗಾಯತ ಸ್ವತಂತ್ರ ಮತ್ತು ಅಲ್ಪಸಂಖ್ಯಾತರ ಧರ್ಮವಾಗಬೇಕೆಂದರೆ ಲಿಂಗಾಯತರ ನಡೆ-ನುಡಿಗಳಲ್ಲೂ ಸುಧಾರಣೆ ಆಗಬೇಕಾದ್ದು ಅಪೇಕ್ಷಣೀಯ. ಅಂದರೆ ಆ ಧರ್ಮದ ತತ್ವಸಿದ್ಧಾಂತಗಳ ಅರಿವು ಆಚರಣೆಯಲ್ಲಿ ಬರಬೇಕು. ಹಾಗಾಗದೆ ನಮ್ಮದು ಸ್ವತಂತ್ರ ಮತ್ತು ಅಲ್ಪಸಂಖ್ಯಾತ ಧರ್ಮ ಎಂದುಕೊಂಡರೆ ಬಂದ ಭಾಗ್ಯವೇನು? ಲಿಂಗಾಯತರ ನಡಾವಳಿಕೆಯನ್ನು ನೋಡಿಯೇ ಬೇರೆಯವರು ಇವರು ಲಿಂಗಾಯತ ಧರ್ಮೀಯರು ಎಂದು ಭಾವಿಸಬೇಕು. ಲಿಂಗಾಯತ ಒಂದು ಜಾತಿಯಲ್ಲ. ಅದೊಂದು ತತ್ವ, ಸಿದ್ಧಾಂತ, ಧರ್ಮ. ಎಷ್ಟೋ ಜನರಿಗೆ ಜಾತಿ ಮತ್ತು ಧರ್ಮದ ನಡುವೆ ಇರುವ ಅಂತರವೇ ಗೊತ್ತಿಲ್ಲ. ಹಾಗಾಗಿ ನಿಮ್ಮ ಜಾತಿ ಯಾವುದು, ನಿಮ್ಮ ಧರ್ಮ ಯಾವುದು ಎಂದರೆ ಎರಡಕ್ಕೂ ಅವರದು ಒಂದೇ ಉತ್ತರ: ಲಿಂಗಾಯತ ಎನ್ನುವುದು. ಧರ್ಮ ಸೂಜಿಯ ಕೆಲಸ ಮಾಡಿದರೆ, ಜಾತಿ ಕತ್ತರಿಯ ಕೆಲಸ ಮಾಡುವುದು. ಜಾತಿ ಮನುಷ್ಯ ಮನುಷ್ಯರ ಸಂಬಂಧವನ್ನು ಕತ್ತರಿಸುವುದು. ಸೂಜಿ ಪರಸ್ಪರ ಸಂಬಂಧವನ್ನು ಬೆಸೆಯುವುದು. ಧರ್ಮ ಮನುಕುಲವನ್ನು ಒಂದು ಮಾಡುವ ಕೆಲಸ ಮಾಡುವುದು. ಮನುಕುಲದ ನಡುವೆ ಅಂತರ ಕಲ್ಪಿಸುವುದು ಜಾತಿ. ಈ ಹಿನ್ನೆಲೆಯಲ್ಲಿ ಸಾಣೇಹಳ್ಳಿಯಲ್ಲಿ ಅರ್ಥಪೂರ್ಣ ಚಿಂತನ ಮಂಥನ ನಡೆಯಿತು. ಅವು ಅಂತರಂಗದ ಅವಲೋಕನಕ್ಕೆ ಸಾಕ್ಷಿಯಾಗಿದ್ದವು. ಕಾಮಾದಿ ದುರ್ಗುಣಗಳನ್ನು ದೂರ ತಳ್ಳಿ ಸತ್ಯ, ಪ್ರೀತಿ, ತ್ಯಾಗ, ಅಹಿಂಸೆ ಇಂಥ ಮೌಲ್ಯಗಳನ್ನು ಬದುಕಿನಲ್ಲಿ ಸಾಕಾರಗೊಳಿಸಿಕೊಳ್ಳಲು ಸ್ಪೂರ್ತಿಯನ್ನು ನೀಡುವಂತಿದ್ದವು. ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಅವರು ಸಂವಿಧಾನದಲ್ಲಿ ಬಸವತತ್ವದ ಸತ್ವ ಇದೆ. ವಚನಗಳಲ್ಲಿ ಆಧ್ಯಾತ್ಮಿಕತೆ, ನೈತಿಕತೆ, ಆರ್ಥಿಕತೆ ಇದೆ. ಸಂವಿಧಾನ ಓದಿಕೊಂಡರೆ ವಚನಗಳನ್ನು ಓದಿಕೊಂಡಂತೆ ಎಂದರು. `ಲಿಂಗಾಯತ ಧರ್ಮದ ನಿಜತತ್ವಗಳು ಮೊದಲು ಮಠಾಧೀಶರಿಗೆ ಅರ್ಥವಾಗಬೇಕಾಗಿದೆ. ಬಸವಪರಂಪರೆಯ ಅನೇಕ ಮಠಾಧೀಶರಿಗೆ ಮೌಢ್ಯ ಸಂಪ್ರದಾಯಗಳೇ ಆದಾಯದ ಮೂಲವಾಗಿರುವುದು ದುರದೃಷ್ಟಕರ’ ಎಂದು ಶ್ರೀ ನಿಜಗುಣಾನಂದ ತೋಂಟದಾರ್ಯ ಸ್ವಾಮೀಜಿ ಹೇಳಿದರು. ಮಾತೆ ಗಂಗಾದೇವಿ ಅವರು `ಲಿಂಗಾಯತ ಸ್ವತಂತ್ರಮತ್ತು ಪರಿಪೂರ್ಣ ಧರ್ಮ. ಇದಕ್ಕೆ ಮಾನ್ಯತೆ ಪಡೆಯುವ ಹಕ್ಕು ನಮ್ಮೆಲ್ಲರದ್ದೂ ಆಗಿದೆ. ಜಾಗತಿಕ ಧರ್ಮಗಳ ಸಾಲಿನಲ್ಲಿ ಲಿಂಗಾಯತ ಧರ್ಮ ಸೇರಬೇಕು. ಅಲ್ಲಿಯವರೆಗೆ ನಮ್ಮ ಹೋರಾಟವನ್ನು ಮುಂದುವರಿಸುವೆವು’ ಎಂದರು. ಬೆಳಗ್ಗೆ 6-30ಕ್ಕೆ ಇಷ್ಟಲಿಂಗದೀಕ್ಷೆ ಮತ್ತು ಸಾಮೂಹಿಕ ಲಿಂಗಪೂಜೆ ನಡೆಯಿತು. 8-30ಕ್ಕೆ ಶಿವಧ್ವಜಾರೋಹಣ ನೆರವೇರಿತು. ಶಿವಸಂಚಾರದ ಕಲಾವಿದರು ವಚನಗೀತೆಗಳನ್ನು ಹಾಡಿದರೆ, ವಿದ್ಯಾರ್ಥಿಗಳು ನಾಲ್ಕು ತಂಡದಲ್ಲಿ ವಚನನೃತ್ಯ ನೀಡಿದ್ದು ಗಮನ ಸೆಳೆಯಿತು. ಎಲ್ಲ ಕಾರ್ಯಕ್ರಮಗಳು ನಿಗದಿತ ಅವಧಿಯಂತೆ ನಡೆದದ್ದು ಕಾರ್ಯಕ್ರಮದ ವೈಶಿಷ್ಠ್ಯವಾಗಿತ್ತು.
Comments 11
SIDDHESH GAJENDRAGAD
Mar 12, 2023ಪ್ರತಿ ಮಠಗಳಲ್ಲೂ ಈ ಬಗೆಯ ತಾತ್ವಿಕ ಚಿಂತನಾಗೋಷ್ಠಿಗಳು ನಡೆಯಬೇಕು. ಲಿಂಗಾಯತ ಧರ್ಮ ಸ್ವತಂತ್ರವಾದುದು ಎನ್ನುವ ತಿಳುವಳಿಕೆಯನ್ನು ಪ್ರತಿಯೊಬ್ಬ ಲಿಂಗಾಯತರಲ್ಲೂ ಮೂಡಿಸಲು ಮಠಗಳ ಮತ್ತು ಸ್ವಾಮಿಗಳ ಪ್ರಯತ್ನ ಬಹಳ ಮುಖ್ಯವಾದುದಾಗಿದೆ.
ವಿನಾಯಕ ಗಳವಿ
Mar 12, 2023ಸಾಣೆಹಳ್ಳಿಯಲ್ಲಿ ತಮ್ಮ ಮಾರ್ಗದರ್ಶನದಲ್ಲಿ ನಡೆದ ಗೋಷ್ಠಿಗಳ ವರದಿ ಓದಿ ಸಂತೋಷವಾಯಿತು ಗುರುಗಳೇ.
Ravikumar A
Mar 12, 2023It is an extremely beautiful site, Thank you Bayalu team.
Sharath Bhadravathi
Mar 13, 2023ಬೀದರಿನಲ್ಲಿ ನಡೆದ ಪ್ರಥಮ ಜಾಗತಿಕ ಲಿಂಗಾಯತ ಮಹಾ ಅಧಿವೇಶನಕ್ಕೆ ನಾವು ಕೆಲವು ಆಸಕ್ತರು ಬಂದಿದ್ದೆವು. ಐದು ವರ್ಷಗಳ ಹಿಂದೆ ಶುರುವಾದ ಹೋರಾಟದ ಆರಂಭದಲ್ಲಿ ನನಗೆ ನಾವು ಹಿಂದೂ ಅಲ್ಲ ಅನ್ನುವುದೇ ಸಿಟ್ಟು ತರಿಸುತ್ತಿತ್ತು. ಈಗ ನಾವು ಹಿಂದೂ ಅಲ್ಲವೇ ಅಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದೇನೆ, ಆದರೆ ಮನೆಯವರೆಲ್ಲಾ ಗುಡಿ ಗುಂಡಾರಗಳನ್ನು ಬಿಡಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಅಂಟಿಕೊಂಡಿದ್ದಾರೆ, ಏನು ಮಾಡುವುದು ಸ್ವಾಮಿಗಳೇ, ನೀವೇ ದಾರಿ ತೋರಬೇಕು.
ರೇವಣಸಿದ್ದಪ್ಪ ಕಲಾದಗಿ
Mar 14, 2023ಸ್ವತಂತ್ರ ಧರ್ಮ ಹೋರಾಟಕ್ಕಾಗಿ ತಮ್ಮ ಹಾಗೆ ಪ್ರತಿಯೊಬ್ಬ ಗುರುಗಳು ಟೊಂಕಕಟ್ಟಿ ನಿಂತರೆ ವರ್ಷ ತುಂಬುವುದರಲ್ಲೇ ನಾವು ಗೆಲ್ಲಬಹುದೆಂಬ ನಂಬಿಕೆ ನನಗಿದೆ.
Anil Deshmukh
Mar 19, 2023ಹಿಂದೂಗಳ ಆಚರಣೆಗಳಿಂದ ಹೊರಬರದ ಹೊರತು ಲಿಂಗಾಯತ ಸ್ವತಂತ್ರ ಧರ್ಮವಾಗುವುದು ಸಾಧ್ಯವಿಲ್ಲದ ಮಾತು. ಕೇವಲ ಇಷ್ಟಲಿಂಗ ಹಿಡಿದುಕೊಂಡು ನಾವು ಭಿನ್ನ ಎಂದು ಬೊಗಳೆ ಬಿಟ್ಟರೆ ಪ್ರಯೋಜನವೇ ಇಲ್ಲ.
ಮೃತ್ಯುಂಜಯ ಹೊಸಮನಿ
Mar 19, 2023ಭಾಲ್ಕಿ ಮಠಕ್ಕೆ ಇತ್ತೀಚೆಗೆ ಅಮಿತ್ ಷಾ ಭೇಟಿಯಾದ ವಿಷಯವನ್ನು ಪತ್ರಿಕೆಯಲ್ಲಿ ಓದಿದೆ. ಆಗ ಅಲ್ಲಿನ ಸ್ವಾಮೀಜಿಯವರು ಸ್ವಾತಂತ್ರ ಧರ್ಮದ ಮನವಿ ಮಾಡಿಕೊಳ್ಳಲಿಲ್ಲವೇಕೆ ಎನ್ನುವುದು ನಿಜಕ್ಕೂ ಆಶ್ಚರ್ಯಕರ. ಬಿಜೆಪಿ ಮುಖಂಡರು ಎಲ್ಲಿ ಹೋದಲ್ಲಿ, ಬಂದಲ್ಲಿ ಸ್ವತಂತ್ರ ಧರ್ಮದ ಮನವಿಗಳ ಮೂಲಕ ಒತ್ತಡ ತಂದಿದ್ದರೆ ಹೋರಾಟಗಾರರ ಚಳುವಳಿ ಗುರು ಮುಟ್ಟುತ್ತಿತ್ತು.
ವಿಶ್ವನಾಥ ಪಾಟೀಲ್
Mar 19, 2023ಅಲ್ಲಲ್ಲಿ ಬಸವ ಧರ್ಮೀಯರು ತಮ್ಮ ಅಸ್ಮಿತೆಗಾಗಿ ಇನ್ನಿಲ್ಲದಂತೆ ಪರಿತಪಿಸುತ್ತಿರುವುದು ನಿಜ, ಆದರೆ ವಚನಗಳನ್ನು ಓದಿಕೊಂಡು ಅವೇ ನಮ್ಮ ಧರ್ಮದ ಸಂವಿಧಾನ ಎಂದು ಕಣ್ಣಿಗೊತ್ತಿಕೊಂಡು ಬದುಕುತ್ತಿರುವವರು ತೀರಾ ವಿರಳ. ಇನ್ನು ಬಹಳಷ್ಟು ಲಿಂಗಾಯತರಿಗೆ ಅವರ ಧರ್ಮದ ಬಗ್ಗೆ ಏನೇನೂ ತಿಳುವಳಿಕೆಯಿಲ್ಲ. ನಿಜಕ್ಕೂ ನಾವು ಸ್ವತಂತ್ರಧರ್ಮೀಯರೇ?
Parashivappa B
Mar 22, 2023ಬಸವ ತತ್ವಗಳನ್ನು ಪಾಲಿಸಬೇಕಾದರೆ ಪ್ರಾಮಾಣಿಕತೆ ಮತ್ತು ಧೈರ್ಯ ಎರಡೂ ಬೇಕಾಗುತ್ತವೆ. ಶರಣರ ದಾರಿಯನ್ನು ತುಳಿಯುವುದು ಸುಲಭವಲ್ಲಾ. ವೀರಶೈವರು ಎಲ್ಲದಕ್ಕೂ ಸೈ. ಅವರನ್ನು ಮಡಿಲಲ್ಲಿ ಕಟ್ಟಿಕೊಂಡು ಈ ಹೋರಾಟದ ಸಾಗರವನ್ನು ದಾಟುವುದು ದುಃಸಾಧ್ಯವೆನ್ನುವುದು ನನ್ನ ಅಭಿಪ್ರಾಯ.
ಸೌಭಾಗ್ಯಾ ಹಿರೂರು
Mar 22, 2023ಸಾಣೆಹಳ್ಳಿಯಲ್ಲಿ ನಡೆದ ತತ್ವಚಿಂತನ ಗೋಷ್ಠಿಯಲ್ಲಿ ಯಾಕೆ ಕರ್ನಾಟಕ ಸರಕಾರ ಕೇಂದ್ರಸರ್ಕಾರಕ್ಕೆ ಕಳಿಸಿದ್ದ ಪ್ರಪೋಸಲ್ ಹಿಂದಿರುಗಿ ಬಂದಿತೆಂಬುದನ್ನು ಯಾರಾದರೂ ಮಾತನಾಡಿದರೇ? ಆ ಹೋರಾಟದಲ್ಲಿ ಭಾಗವಹಿಸಿದ್ದ ನಮಗೆ ಇದುವರೆಗೆ ಐದು ವರ್ಷಗಳಾದರೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲಾ.
Shivu H
Apr 6, 2023I was suggested this web site by my cousin, you are amazing! Thanks!!!