ಶರಣರ ಮನೆಯ ಲೆಂಗಿಯ ಡಿಂಗರಿಗ ನಾನು: ಬಸವಣ್ಣ
Share:

ಶರಣರ ಮನೆಯ ಲೆಂಗಿಯ ಡಿಂಗರಿಗ ನಾನು: ಬಸವಣ್ಣ

ಬಸವಣ್ಣನವರ ವ್ಯಕ್ತಿತ್ವ ವಿಮರ್ಶಿಸುವ ಅಳತೆಗೋಲು ಬಹುಶಃ ಇದುವರೆಗೆ ಯಾವ ಅಧುನಿಕ ಲೇಖಕ/ವಿಮರ್ಶನಿಗೂ ಲಭ್ಯವಾಗಲಿಕ್ಕಿಲ್ಲ. ಅವರ ಅಸಾಧಾರಣ ವ್ಯಕ್ತಿತ್ವ ಸೀಮಿತ ವಿಮರ್ಶೆಯ ಚೌಕಟ್ಟಿನೊಳಗೆ ಹಿಡಿದಿಟ್ಟಷ್ಟು ವಿಶಾಲವಾಗಿ ವ್ಯಾಪಿಸುವ ವಿಶೇಷ ಗುಣವುಳ್ಳದ್ದು. ಬಸವಣ್ಣನವರನ್ನು ಭಕ್ತಿಮಾರ್ಗದ ಸಂತನಾಗಿ, ಸಾಮ್ರಾಜ್ಯವೊಂದರ ದಕ್ಷ ಆಡಳಿತಗಾರನಾಗಿ, ಸಮಾಜ ಸುಧಾರಕನಾಗಿ, ಸಾಹಿತಿಯಾಗಿ ಹೀಗೆ ಅನೇಕ ರೂಪಗಳಲ್ಲಿ ವಿವಿಧ ಪ್ರಾಜ್ಞರು ಗುರುತಿಸಿದ್ದಾರೆ. ಇವೆಲ್ಲವುಗಳಾಚೆಗೂ ಅವರ ವ್ಯಕ್ಪಿತ್ವ ಗುರುತಿಸುವ ಅವಕಾಶಗಳು ನಿರಂತರ ಹುಟ್ಟಿಕೊಳ್ಳುತ್ತಲೇ ಇವೆ.

ಚಾತುರ್ವರ್ಣಗಳು ಕ್ರಿಯಾಶೀಲವಾಗಿ ಅನುಷ್ಠಾನದಲ್ಲಿದ್ದ ಉಚ್ಛ್ರಾಯ ಕಾಲಘಟ್ಟದಲ್ಲಿ ಸಮಾಜದ ಉಚ್ಛ ಸ್ತರವೆಂದೆನಿಸಿದ ವಿಪ್ರರ ಮನೆಯಲ್ಲಿ ಜನಿಸಿದ ಬಸವಣ್ಣನವರಿಗೆ ಸ್ಥಾಪಿತ ಸಂಪ್ರದಾಯಗಳನುಸಾರ ವಿದ್ಯೆˌಅಂತಸ್ತುˌಗೌರವˌಅಧಿಕಾರಗಳೆಲ್ಲ ಸಹಜವಾಗಿ ದೊರೆತಿದ್ದವು. ಹೀಗಿದ್ದಾಗ್ಯೂ ಶೋಷಿತ ಸಮಾಜದ ಒಳಿತನ್ನು ಮನಸ್ಸಿನಲ್ಲಿಟ್ಟುಕೊಂಡು ವ್ಯವಸ್ಥೆಯ ವಿರುದ್ಧ ಹೋರಾಟಕ್ಕಿಳಿದಿದ್ದರು. ಉನ್ನತ ಅಧಿಕಾರˌಅಂತಸ್ತುಗಳೊಂದಿಗೆ ಅಪಾರ ಜ್ಞಾನ, ಅಪರಿಮಿತ ವಿನಯ, ವಿಧೇಯತೆ, ಸೇವಾಮನೋಭಾವ… ಅವರ ವ್ಯಕ್ತಿತ್ವವನ್ನು ಅಲಂಕರಿಸಿದ್ದವು. ಇಂಥ ವಿಶೇಷ ಗುಣ ಸಂಯೋಗವು ಅವರನ್ನು ವಿಶ್ವದ ಶ್ರೇಷ್ಠ ಚಿಂತಕರ ಸ್ಥಾನದಲ್ಲಿ ನಿಲ್ಲಿಸಿದೆ. “ಎನಗಿಂತ ಕಿರಿಯರಿಲ್ಲˌಶಿವಭಕ್ತರಿಗಿಂತ ಹಿರಿಯರಿಲ್ಲ” ಎನ್ನುವ ಮಾತಿನಲ್ಲಿ ಅವರ ಅಪರೂಪದ ವ್ಯಕ್ತಿತ್ವವನ್ನು ಗ್ರಹಿಸಬಹುದು.

ಒಬ್ಬ ಪ್ರಧಾನಮಂತ್ರಿಯಾಗಿˌಹಾಗೂ ಸಮಾಜಸುಧಾರಕರಾಗಿ ರಾಜಪ್ರಮುಖರೊಂದಿಗೆ ಮತ್ತು ಸಮಾಜದೊಂದಿಗೆ ವರ್ತಿಸುತ್ತಿದ್ದ ರೀತಿಗಿಂತ ಭಿನ್ನವಾಗಿ ಬಸವಣ್ಣನವರು ತಮ್ಮ ಅನುಯಾಯಿಗಳಾಗಿದ್ದ ಸಮಕಾಲಿನ ಶರಣರ ಕುರಿತು ತೋರುತ್ತಿದ್ದ ಕಿಂಕರಭಾವ ಅಚ್ಚರಿ ಮೂಡಿಸುತ್ತದೆ. ಬಹುಶಃ ಜಗತ್ತಿನ ಬೇರಾವುದೇ ಪ್ರವಾದಿˌದಾರ್ಶನಿಕˌಅಥವಾ ಧರ್ಮಗುರುವಿನಲ್ಲೂ ಕಾಣಸಿಗದ ಅನನ್ಯ ಗುಣ ಇದು. ಇಲ್ಲಿ ಗಮನಿಸಬೇಕಾದ ಬಹುಮುಖ್ಯ ಸಂಗತಿ ಎಂದರೆ ಅವರ ಬಹುತೇಕ ಅನುಯಾಯಿಗಳು ತಲತಲಾಂತರಗಳಿಂದ ಅಕ್ಷರ ಸಂಸ್ಕೃತಿಯಿಂದ ವಂಚನೆಗೊಳಗಾದ ತಳಸಮುದಾಯದ ಜನ. ಮೇಲ್ವರ್ಗವನ್ನು ಎದುರು ಹಾಕಿಕೊಂಡು ದಮನಿತರ ಏಳಿಗೆಗೆ ದುಡಿಯುವುದಲ್ಲದೆ ಅವರೊಂದಿಗೆ ವೈಯಕ್ತಿಕವಾಗಿ ಬಸವಣ್ಣನವರು ಹೇಗೆ ನಡೆದುಕೊಳ್ಳುತ್ತಿದ್ದರು ಎನ್ನುವುದೂ ಅಷ್ಟೆ ಮುಖ್ಯವಾದ, ಕುತೂಹಲಕಾರಿಯಾದ ಸಂಗತಿಯಾಗಿದೆ. ದಮನಿತರ ಪರವಾಗಿ ಧ್ವನಿ ಎತ್ತುವ ಮಾರ್ಗದಲ್ಲಿ ತಾವಿರುವ ಸಾಮ್ರಾಜ್ಯದ ಅರಸುವಿನಿಂದ ಮೊದಲ್ಗೊಂಡು ತಾವು ನಂಬಿದ ನಿರಾಕಾರ ದೇವನನ್ನೂ ಅಲಕ್ಷಿಸಿ ನಡೆಯಬೇಕೆಂಬುವ ಪರಿ ಸಮತಾವಾದದಲ್ಲಿ ಅವರಿಗಿದ್ದ ಕಕ್ಕುಲಾತಿಯನ್ನು ಪ್ರತಿಬಿಂಬಿಸುತ್ತದೆ. ಶರಣನೊಬ್ಬ ತಮ್ಮ ಮನೆಯ ಬಾಗಿಲಿಗೆ ಬಂದರೆ ಲಿಂಗ-ಜಂಗಮವಾದರೂ ಮರೆತು ಶರಣರನ್ನು ಆದರಿಸಬೇಕೆಂಬ ಅವರ ಮನದ ಬಯಕೆ ಅನೇಕ ವಚನಗಳಲ್ಲಿ ಪ್ರಕಟಗೊಂಡಿದೆ. ‘ ಶರಣರ ಬರವೆನಗೆ ಪ್ರಾಣ ಜೀವಾಳವಯ್ಯ’ ಎನ್ನುವ ಅವರ ನುಡಿಯಲ್ಲಿ ಒಟ್ಟಾರೆ ಶರಣರ ಬಗೆಗೆ ಅವರಿಗಿದ್ದ ವಿಧೇಯತೆ ಎದ್ದುಕಾಣುತ್ತದೆ.

ತಮ್ಮ ಸರ್ವಾಂಗೀಣ ಚಳುವಳಿಯ ಫಲಶ್ರತಿಯನ್ನು ಪ್ರಾಯೋಗಿಕವಾಗಿ ಸಮಾಜದಲ್ಲಿ ಬಿತ್ತಲು ಅವರು ಕಂಡುಕೊಂಡ ಎರಡು ಬಹುಮುಖ್ಯ ಮಾಧ್ಯಮಗಳೆಂದರೆ ಶರಣರು ಮತ್ತು ವಚನಗಳು. ಶರಣರು ವ್ಯಕ್ತಿರೂಪದ ನೋವುಂಡ ಸಮಾಜವನ್ನು ಪ್ರತಿನಿಧಿಸಿದರೆ, ವಚನಗಳು ಶರಣರ ಮೂಲಕ ಹುಟ್ಟಿಕೊಳ್ಳುವ ವೈಚಾರಿಕ ಪ್ರತಿಮೆಗಳಾಗಿ ಪರಿಗಣಿಸಲ್ಪಡುತ್ತವೆ. ಹಾಗಾಗಿ ಅವರು ಶರಣರನ್ನು ತಮ್ಮ ಚಳುವಳಿಯ ಪ್ರಮುಖ ಕೀಲಿಕೈಯಾಗಿ ಪರಿಗಣಿಸಿದ್ದರು. ಶರಣರ ಸಾಂಗತ್ಯಕ್ಕೆ ಚಡಪಡಿಸಿ ನಿಲ್ಲುವ ಅವರ ಉತ್ಕಟವಾದ ಮನದಿಂಗಿತ ಈ ಕೆಳಗಿನ ವಚನದಲ್ಲಿ ಹೆಪ್ಪುಗಟ್ಟಿ ನಿಂತಿದೆ:

ಹೊಲಬುಗೆಟ್ಟ ಶಿಶು ತನ್ನ ತಾಯನರಸುವಂತೆˌ
ಬಳಿದಪ್ಪಿದ ಪಶು ತನ್ನ ಹಿಂಡನರಸುವಂತೆˌ 
ಬಯಸುತ್ತಿದ್ದೆನಯ್ಯ ನಿಮ್ಮ ಭಕ್ತರ ಬರವನು !
ಬಯಸುತ್ತಿದ್ದೆನಯ್ಯ ನಿಮ್ಮ ಶರಣರ ಬರವನು !
ದಿನಕರನುದಯಕ್ಕೆ ಕಮಳ ವಿಕಸಿತವಾದಂತೆ ಎನಗೆ ನಿಮ್ಮ ಶರಣರ ಬರವು ಕೂಡಲಸಂಗಮದೇವಾ.

ಹೊಲಬುಗೆಟ್ಟು ತಾಯನರಸುವ ಶಿಶು ಮತ್ತು ಹಿಂಡನಗಲಿದ ಪಶುವಿನ ಉಪಮೆಗಳನ್ನು ಬಳಸಿˌಶರಣರ ಸಾಂಗತ್ಯ ಬಯಸುವ ತಮ್ನ ಮನದಾಸೆಯನ್ನು ಮಾರ್ಮಿಕವಾಗಿ ಅಭಿವ್ಯಕ್ತಿಸುತ್ತ ಸೂರ್ಯನ ಉದಯದಿಂದ ಕಮಲ ಅರಳುವಂತೆ ಶರಣರ ಸಾಂಗತ್ಯದಿಂದ ತಾವು ಲವಲವಿಕೆಯಿಂದಿರುವುದಾಗಿ ಹೇಳಿಕೊಳ್ಳುವಲ್ಲಿಗೆ ಶರಣರ ಬಗೆಗಿರುವ ಅವರ ಅದಮ್ಯ ಸೆಳೆತ ವ್ಯಕ್ತವಾಗುತ್ತದೆ.

ಬುದ್ದನಂತೆ ನಾಡು ತೊರೆದು ಕಾಡಿನಲ್ಲಿ ಅಂತಃರ್ಮುಖಿ ಧ್ಯಾನಸ್ಥನಾಗಿ ಉಳಿಯಬಯಸದ ಬಸವಣ್ಣನವರು, ಸಮಾಜದ ಕಟ್ಟಕಡೆಯ ಜನರೊಟ್ಟಿಗೆ ಸೇರಿ ಸಂಘಟಿತ ಸಂಘರ್ಷವನ್ನು ಹುಟ್ಟುಹಾಕುತ್ತಾರೆ. ತಮ್ಮೊಂದಿಗೆ ಹೆಗಲಿಗೆ ಹೆಗಲುಗೂಡಿಸುವ ಶರಣರನ್ನು ತಮ್ಮ ಹಿಂಬಾಲಕರೆಂದು ಆಜ್ಞಾಪಿಸದೆ ತಮ್ಮ ತಲೆಯ ಮೇಲಿಟ್ಟುಕೊಂಡು ಮುನ್ನಡೆಯುವ ಪರಿ ಜಗತ್ತಿನ ಬೇರಾವ ಕ್ರಾಂತಿಕಾರಿಯಲ್ಲೂ ಕಾಣಸಿಗುವುದಿಲ್ಲ. ಶರಣರನ್ನು ಅವರು ತಮ್ಮ ಬದುಕಿನಲ್ಲಿ ಎಲ್ಲಕ್ಕಿಂತ ಹೆಚ್ಚಿನ ಸ್ಥಾನದಲ್ಲಿರಿಸಿದ್ದು ಅವರ ಕೆಳಗಿನ ವಚನದಲ್ಲಿ ಕಾಣಬಹುದು:

ಸಾಸವೆಯ ಮೇಲೆ ಸಾಗರವರಿದಂತಾಯಿತಯ್ಯ ! 
ಆನಂದದಿಂದ ನಲಿನಲಿದಾಡುವೆನುˌ
ಆನಂದದಿಂದ ಕುಣಿಕುಣಿದಾಡುವೆನುˌ
ಕೂಡಲಸಂಗನ ಶರಣರು ಬಂದರೆ 
ಉಬ್ಬಿಕೊಬ್ಬಿ ಹರುಷದಲೋಲಾಡುವೆನು.

ತಮ್ಮನ್ನು ತಾವು ಬಸವಣ್ಣ ಅತಿ ಚಿಕ್ಕ ಸಾಸವೆ ಕಾಳಿಗೆ ಹೋಲಿಸಿಕೊಂಡುˌ ಶರಣರನ್ನು ಅಘಾದವಾದ ಸಾಗರವೆಂದು ಬಗೆಯುವ ಉದಾತ್ ಚಿಂತನೆ ಅವರ ಶರಣರ ಬಗೆಗಿನ ಅದಮ್ಯ ಪ್ರೀತಿ ಮತ್ತು ವಿನಯವನ್ನು ಪ್ರಕಟಗೊಳಿಸುತ್ತದೆ. ಬಸವಣ್ಣನವರು ಈ ರೀತಿಯಾಗಿ ಸ್ಥಾವರ ಪರಿಕಲ್ಪನೆಯ ಜಡತ್ವವನ್ನು ಕೆಲವೊಂದುಕಡೆ ನಯವಾಗಿ ಹಾಗೂ ಮತ್ತೆ ಕೆಲವೆಡೆ ಉಗ್ರವಾಗಿ ಖಂಡಿಸುತ್ತ ಚಲನಶೀಲ ಚಿಂತನೆಗಳಿಗೆ ಜನ್ಮನೀಡುತ್ತಾರೆ. ಚಳುವಳಿಯ ಮುಂದಾಳತ್ವವಸಿದವನು ಮಾಲಿಕನಂತೆ ವರ್ತಿಸದೆ ಸಮರ್ಥ ನಾಯಕನಂತೆ ವರ್ತಿಸಿದರೆ ಮಾತ್ರ ಅನುಯಾಯಿಗಳ ಪ್ರೀತಿಗೆ ಭಾಜನವಾಗಿ ನಿರ್ಧಾರಿತ ಗುರಿ ಯಾವ ಒಡಕ್ಕಿಲ್ಲದೆ ತಲುಪಬಹುದೆಂಬುದು ಬಸವಣ್ಣನವರ ಆಶಯವಾಗಿರುತ್ತದೆ.

ಬಸವಣ್ಣನವರು ಯಾವ ಸಮುದಾಯದ ಜನರಿಗಾಗಿ ಕಲ್ಯಾಣದಲ್ಲಿ ಚಳುವಳಿ ಆರಂಭಿಸಿದ್ದರೊ ಅದೇ ಸಮುದಾಯಗಳ ಜನರನ್ನು ಚಳುವಳಿಯ ಮುಖ್ಯ ಜೀವಾಳವಾಗಿಸಿದ್ದು ವಿಶೇಷ. ಅನುಭವ ಮಂಟಪದ ಅಧ್ಯಕ್ಷತೆಗೆ ಪ್ರಭುದೇವರ ಆಯ್ಕೆಯ ಹಿಂದೆ ಎರಡು ಮಾನದಂಡಗಳು ಕೆಲಸ ಮಾಡಿರಲು ಸಾಧ್ಯ. ಒಂದು ಅವರು ತಳಸಮುದಾಯಕ್ಕೆ ಸೇರಿದವರೆನ್ನುವುದಾದರೆ ಎರಡು ಅವರ ಅಘಾದ ಪ್ರತಿಭೆ. ಪ್ರಭುದೇವರು ಈ ಜಗತ್ತು ಕಂಡ ಅತ್ಯಂತ ಶ್ರೇಷ್ಠ ಅನುಭಾವಿ. ಬಸವಣ್ಣನವರು ಶರಣರನ್ನು ದೇವರಿಗಿಂತಲೂ ಅದಮ್ಯವಾಗಿ ಗೌರವಿಸುತ್ತಿದ್ದರೆನ್ನುವುದು ಈ ವಚನ ಸ್ಪಷ್ಟಪಡಿಸುತ್ತದೆ :

 

 

ಸಮುದ್ರ ಘನವೆಂಬೆನೆ
ಧರೆಯ ಮೇಲಡಗಿತ್ತುˌ
ಧರೆ ಘನವೆಂಬೆನೆ
ನಾಗೇಂದ್ರನ ಫಣಾಮಣಿಯ ಮೇಲಡಗಿತ್ತುˌ
ನಾಗೇಂದ್ರ ಘನವೆಂಬೆನೆ
ಪಾರ್ವತಿಯ ಕಿರುಗುಣಿಕೆಯ ಮುದ್ರಿಕೆಯಾಯಿತ್ತುˌ
ಅಂಥ ಪಾರ್ವತಿ ಘನವೆಂಬೆನೆ
ಪರಮೇಶ್ವರನ ಅರ್ಧಾಂಗಿಯಾದಳುˌ
ಅಂಥ ಪರಮೇಶ್ವರ ಘನವೆಂಬೆನೆˌ
ನಮ್ಮ ಕೂಡಲಸಂಗನ ಶರಣರ
ಮನದ ಕೊನೆಯ ಮೊನೆಯ ಮೇಲಡಗಿದನು.

ಸಮುದ್ರˌಭೂಮಿˌನಾಗˌಪಾರ್ವತಿˌಪರಮೇಶ್ವರರಿಗಿಂತ ಶರಣರು ಅತಿ ಗೌರವಾನ್ವಿತರೆನ್ನುವುದು ಮೇಲಿನ ವಚನದಲ್ಲಿ ಗಾಢ ಭಾವನೆಯೊಂದಿಗೆ ಬಿಂಬಿತವಾಗಿದೆ. ದೇವರು ಕೂಡ ಶರಣರ ಮನದ ಕೊನೆಯ ಮೊನೆಯೊಳಗೆ ಅಡಗುವಷ್ಟು ಚಿಕ್ಕವನೆನ್ನುವ ಮೂಲಕ ಶರಣರು ತಮಗೆ ಅತ್ಯಂತ ಪೂಜ್ಯನೀಯರು ಎನ್ನುವ ಅವರ ಮನದಿಂಗಿತ ಇಲ್ಲಿ ನೇರವಾಗಿ ಪ್ರತಿಪಾದಿಸಲ್ಪಟ್ಟಿದೆ.

ಕಲ್ಯಾಣದ ಚಳುವಳಿಯನ್ನು ಹುಟ್ಟುಹಾಕುವಾಗ ಅಂದಿನ ಸಮಾಜದಲ್ಲಿನ ಪ್ರತಿಯೊಂದು ಕಾಯಕ ಪ್ರಧಾನ ಸಮುದಾಯವನ್ನೊಳಗೊಂಡಂತೆ ಬಸವಣ್ಣನವರು ಮಹಾಮನೆಯೊಂದನ್ನು ಕಟ್ಟುವ ಸಾಹಸಕ್ಕೆ ಕೈಹಾಕುತ್ತಾರೆ. ಆ ಮೂಲಕ ವರ್ಗ, ವರ್ಣ, ಲಿಂಗ ರಹಿತ ಸಮಸಮಾಜದ ಬೀಜವನ್ನು ಬಿತ್ತುವ ಘನ ಕಾರ್ಯ ಆರಂಭಿಸುತ್ತಾರೆ. ಅವರು ತಮ್ಮ ವೈಯಕ್ತಿಕ ಬದುಕನ್ನು ಲೆಕ್ಕಿಸದೆ ನಿರಂತರ ಜನಪರ ಚಿಂತನೆಯಲ್ಲಿ ತೊಡಗಿ ಶರಣರೇ ತನ್ನೆಲ್ಲ ಸರ್ವಸ್ವವೆನ್ನುವ ಹಂತವನ್ನು ತಲುಪಿದ್ದು ಈ ಕೆಳಗಿನ ವಚನದಲ್ಲಿ ವ್ಯಕ್ತವಾಗಿದೆ:

“ಅಡಿಗಡಿಗೆ ಎನ್ನ ಮನವ ಜಡಿದು ನೋಡದಿರಯ್ಯ. ಬಡವನೆಂದೆನ್ನ ಕಾಡದಿರಯ್ಯ ಎನಗೊಡೆಯರುಂಟು ನಮ್ಮ ಕೂಡಲಸಂಗನ ಶರಣರು.”

ಅವರ ಚಳುವಳಿ ಮತ್ತು ಸಾಧನೆಯ ಮಾರ್ಗದಲ್ಲಿ ಬರುವ ಅಡಚಣೆಗಳನ್ನು ಮತ್ತು ಕೆಲವೊಮ್ಮೆ ಕಾಡುವ ಚಿಂತೆಗಳನ್ನು ದೂರಮಾಡಿಕೊಳ್ಳಲು ಶರಣರು ತಮ್ಮ ಜೊತೆಗಿರುವ ತನಕ ಯಾವ ಬಾಧೆಯೂ ಕಾಡದು ಎಂಬ ಬಲವಾದ ನಂಬಿಕೆಯನ್ನು ಇಲ್ಲಿ ವ್ಯಕ್ತಪಡಿಸುತ್ತಾರೆ. ಶರಣರು ತಮ್ಮ ಒಡೆಯರು ಎಂದು ದೇವರನ್ನು ಕುರಿತು ನಿರ್ಭಿಡೆಯಿಂದ ನುಡಿಯುತ್ತಾರೆ. ಶರಣರ ಪಡೆ ತಮ್ಮೊಂದಿಗಿರುವ ತನಕ ಅದೇ ತಮ್ಮ ಚಳುವಳಿಗೆ ಬಹುದೊಡ್ಡ ಶಕ್ತಿ ಎಂದು ತಿಳಿದಿದ್ದ ಬಸವಣ್ಣನವರು ಅವರನ್ನು ತನ್ನ ಒಡೆಯರು ಎಂದು ಸಂಬೋಧಿಸುತ್ತಾರೆ.

ಆರಂಭದಲ್ಲಿ ನಾನು ಹೇಳಿದಂತೆ ಕಲ್ಯಾಣದ ಚಳುವಳಿಯ ಬಹುಮುಖ್ಯ ಭಾಗವಾಗಿದ್ದ ಶರಣರು ವ್ಯಕ್ತಿಯನ್ನು ಪ್ರತಿನಿಧಿಸಿದರೆ ಬಸವಣ್ಣನವರ ಸಮಗ್ರ ಚಳುವಳಿಯ ಬಹುಮುಖ್ಯ ಮಾಧ್ಯಮ ವಚನಗಳು. ಅದಕ್ಕೆ ಕಲ್ಯಾಣದ ಕ್ರಾಂತಿಯನ್ನು ವಚನ ಚಳುವಳಿ ಎಂಬ ಪರ್ಯಾಯ ಹೆಸರಿನಿಂದ ನಮ್ಮ ಸಾರಸ್ವತ ಲೋಕ ಗುರುತಿಸಿದೆ. ವಚನ ಸಾಹಿತ್ಯವು ನಾವೆಲ್ಲ ತಿಳಿದಂತೆ ಅನುವಂಶಿಯವಾಗಿ ಅಕ್ಷರ ಜ್ಞಾನಹೊಂದಿದ್ದ ಪಂಡಿತರು ರಚಿಸಿದ ಸಾಹಿತ್ಯವಲ್ಲ. ಅದು ಕ್ಷೇತ್ರದಲ್ಲಿ ಕಾಯಕನಿರತ ಅನುಭಾವಿಗಳು ಕ್ರಷಿಗೈದ ಶ್ರಮ ಸಂಸ್ಕ್ರತಿಯ ಅದ್ಭುತ ಸಾಹಿತ್ಯ.  ಪಂಡಿತರ ಆಸ್ಥಾನದ ಪಾಂಡಿತ್ಯವು ಸಾಮಾನ್ಯವಾಗಿ ಓದಿನಿಂದ ಬಂದುದಾದರೆ ಅನುಭಾವವು ಕಾಯಕ ನಿರತರ ಅಂತರಂಗದ ಅರಿವಿನಿಂದ ಹುಟ್ಟಿಕೊಂಡ ಸ್ಪುರಣೆ. ಶರಣರು ಅಂತರಂಗ ಶೋಧಕರು ಹಾಗೂ ಬಹಿರಂಗ ಸಾಧಕರೇ ಹೊರತು ಓದಿನಿಂದ ರೂಪುಗೊಂಡ ಟೊಳ್ಳು ಪಂಡಿತರಲ್ಲ. ಹಾಗಾಗಿಯೇ ಶರಣರ ಮಹತ್ವ ಮನಗಂಡ ಬಸವಣ್ಣನವರು ತಮ್ಮ ಚಳುವಳಿಯುದ್ದಕ್ಕೂ ಅವರಿಗೆ ಗೌರವಾನ್ವಿತ ಸ್ಥಾನವನ್ನು ಕಲ್ಪಿಸುತ್ತಾರೆ. ಶರಣರ ಮನೆಯ ಸೇವಕನಾನೆಂಬ ಕಿಂಕರ ಭಾವವು ಅವರ ಅನೇಕ ವಚನಗಳಲ್ಲಿ ಪುನರಾವರ್ತನೆಯಾಗಿದೆ. ಅಂಥದ್ದೇ ಒಂದು ವಚನ ಈ ಕೆಳಗಿದೆ :

ಒಕ್ಕುದ ಮಿಕ್ಕುದಂಡು ಕಿವಿವಿಡಿದಾಡುವೆˌ
ಶರಣರ ಮನೆಯ ಲೆಂಗಿಯ ಡಿಂಗರಿಗ ನಾನುˌ
ಕೂಡಲ ಸಂಗನ ಶರಣರ ಮನೆಯ ಭಕ್ತಿಯ ಮರುಳ ನಾನು.

ಶರಣ ಸಾಂಗತ್ಯವೊಂದಿದ್ದರೆ ತಮಗೆ ಬೇರೆ ಸುಪ್ಪತ್ತಿಗೆ ಬೇಡˌಮನೆಯಲ್ಲಿ ಒಕ್ಕುದ ಮಿಕ್ಕಿದ್ದನ್ನುಂಡು ಆನಂದದಿಂದ ನಲಿದಾಡುವೆ ಎನ್ನುತ್ತಾರೆ. ಶರಣರ ಮನೆಯ ಲೆಂಗಿಯ ಡಿಂಗರಿಗ ತಾವೆಂದು ಶರಣರ ಕುರಿತು ಅವರಿಗಿರುವ  ವಿಧೇಯತೆಯ ಅತ್ಯಂತ ಪರಾಕಾಷ್ಠೆಯನ್ನು ಇಲ್ಲಿ ಸ್ಪಷ್ಟವಾಗಿ ಗುರುತಿಸಬಹುದು.

ಜಗತ್ತಿನಲ್ಲಿಯೇ ಅತಿ ಮಹತ್ವದ ಚಳುವಳಿಯೊಂದರ ನಾಯಕ ತನ್ನ ಅನುಯಾಯಿಗಳಿಗೆ ನೀಡಿದ ಉನ್ನತ ಸ್ಥಾನವನ್ನು ಪರಿಗಣಿಸಿದಾಗ ಬಹುಶಃ ಬಸವಣ್ಣನವರು ಜಾಗತಿಕ ಪ್ರಗತಿಪರ ನಾಯಕತ್ವದ ಮಾದರಿಯಾಗಿಯೂ ಸಮಗ್ರ ಚಳುವಳಿಯೊಂದರ ಆದರ್ಶವಾಗಿಯೂ ನಮ್ಮೆದುರಿಗೆ ಜ್ವಲಂತ ಉದಾಹರಣೆಯಾಗುತ್ತಾರೆ. ನಮ್ಮ ನಾಡಿನ ಸಾಂಸ್ಕೃತಿಕ ನಾಯಕರಾಗಿ ಮತ್ತು ನಮ್ಮೆಲ್ಲರ ಸಾಕ್ಷಿಪ್ರಜ್ಞೆಯಾಗಿ ಮನದಲ್ಲಿ ಶಾಶ್ವತವಾಗಿ ನೆಲೆನಿಲ್ಲುತ್ತಾರೆ.

Comments 8

  1. gangadhara Navale
    Sep 6, 2018 Reply

    ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ- ಎನ್ನುವ ಮಾತುಗಲಲ್ಲೇ ಬಸವಣ್ಣನವರ ಹಿರಿತನ ಇದೆ, ಇಂತಹ ವಿನಯವಂತಿಕೆ ಅವರಿಗೆ ಹೇಗೆ ಸಾಧ್ಯವಾಯಿತು, ಆಶ್ಚರ್ಯವಾಗುತ್ತದೆ…ಅವರನ್ನು ಓದಲು ಪ್ರೇರಣೆ ಕೊಡುತ್ತದೆ. ಸುಂದರ ಲೇಖನ.

  2. sharada A.M
    Sep 6, 2018 Reply

    ಒಕ್ಕುದ ಮಿಕ್ಕುದಂಡು ಕಿವಿವಿಡಿದಾಡುವೆˌ
    ಶರಣರ ಮನೆಯ ಲೆಂಗಿಯ ಡಿಂಗರಿಗ ನಾನುˌ
    ಕೂಡಲ ಸಂಗನ ಶರಣರ ಮನೆಯ ಭಕ್ತಿಯ ಮರುಳ ನಾನು

    ಈ ವಚನ ತುಂಬಾ ತುಂಬಾ ಚೆನ್ನಾಗಿದೆ. ಬಸವಣ್ಣ ಮುಗ್ಧರೇ? ಅಮಾಯಕರೇ?

  3. Karibasappa hanchinamani
    Sep 7, 2018 Reply

    ಎಷ್ಟೋ ವಾಟ್ಸಪ್ ಗುಂಪುಗಳಲ್ಲಿನ ಬರಹಗಳಿಗಿಂತ, ವಾದ-ಜಗಳಗಳಿಗಿಂಥ ಇಂಥ ವಿಚಾರಗಳನ್ನು ಕೊಡುವ ಬ್ಲಾಗ್ ಬರಹಗಳು ಓದಲು, ತಿಳಿದುಕೊಳ್ಳಲು ಚೆನ್ನಾಗಿರುತ್ತವೆ. ಬಸವಣ್ಣನನ್ನು ಶರಣರು ನೋಡಿದ ದಿಕ್ಕಿನಲ್ಲೇ ಗೊತ್ತಾಗುತ್ತದೆ ಬಸವಣ್ಣ ಶರಣರನ್ನು ಹೇಗೆ ನೋಡಿದ್ದರೆಂಬುದು. ಸಾಮೂಹಿಕ ನಾಯಕತ್ವದ ಬಗೆಗೆ ಬಯಲುನಲ್ಲಿ ಬಂದಿದ್ದ ಸೋದರಿ ಮಂಗಳಾ ಅವರ ಲೇಖನ ನೆನಪಾಯಿತು. ಸರ್, ತುಂಬಾ ಸರಿ ನೀವು ಬರೆದದ್ದು. ಜೀಸಸ್, ಬುದ್ಧ ಪ್ರವಾದಿಗಳೂ ಇಂಥ ವಿನೀತ ಭಾವ ಇದ್ದವರು, ಆದರೂ ಬಸವಣ್ಣನದು ಒಂದು ತೂಕ ಹೆಚ್ಚೆ.

  4. ಬಸವರಾಜ ಹಂಡಿ
    Sep 7, 2018 Reply

    ಬಸವಣ್ಣವರನ್ನು ಘನವೆಂಬೆ… ಬಸವಣ್ಣನವರ ವ್ಯಕ್ತಿತ್ವವನ್ನು ಸಮಗ್ರವಾಗಿ ಹಿಡಿದ ಈ ಲೇಖನವನ್ನು ಸಹ ಘನವೆಂಬೆ…. ಇಂತ ಅದ್ಬುತ ಲೇಖನ ಶರಣ ಡಾ ಜಗದೀಶ ಪಾಟೀಲರಿಂದ.
    ಚಲನಚಿತ್ರದ ಕತೆಯ ತರ ಮೊದಲು ಮೂಲ ಮಾಹಿತಿ( basic information ) ದಿಂದ ಲೇಖನ ಪ್ರಾರಂಭವಾಗುತ್ತೆ ನಂತರ ಉಚ್ಛ್ರಾಯ ಸ್ಥಿತಿಗೆ ತಲುಪಿ ಕೊನೆಗೆ ಸಾರಾಂಶ ರೂಪದಲ್ಲಿ ಕೊನೆಗೊಳ್ಳುತ್ತೆ.
    ಬರೆಯುವ ಶೈಲಿ ಬಹಳ ಸುಂದರವಾಗಿದೆ. ಬಸವಣ್ಣನವರ ವ್ಯಕ್ತಿತ್ವ ಎಷ್ಟು ಅಮೋಘವಾಗಿದೆ ಅಷ್ಟೆ ಅಮೋಘವಾಗಿ ಈ ಲೇಖನ ಮೂಡಿ ಬಂದಿದೆ.
    ಈ ಲೇಖನದಿಂದ ಒಂದು ಮಾತ್ರ ಬಹಳ ಸ್ಪಷ್ಟ – ಬಸವಣ್ಣನವರ ತರ ಕ್ರಾಂತಿಕಾರಿ ಪುರಷ, ಪ್ರವಾದಿ ಇನ್ನುವರಗೆ ಹುಟ್ಟಿಲ್ಲ ಮುಂದೆ ಭವಿಷ್ಯದಲ್ಲಿ ಸಹ ಹುಟ್ಟುವದಿಲ್ಲ.
    ಬಸವಣ್ಣನವರ ಕ್ರಾಂತಿಯನ್ನು – ಸಾಮಾಜಿಕ ಕ್ರಾಂತಿ ಅನ್ನಬಹುದು, ಆಧ್ಯಾತ್ಮಿಕ ಕ್ರಾಂತಿ ಅನ್ನಬಹುದು, ಆರ್ಥಿಕ ಕ್ರಾಂತಿ ಅನ್ನಬಹುದು… ಏನು ಎಲ್ಲ ಮಾಡಿದ ಬಸವಣ್ಣ.
    ತಾನು ಒಬ್ಬನೆ ಬೆಳೆಯಲಿಲ್ಲ ತನ್ನ ತರ 770 ಅಮರ ಗಣಂಗಳನ್ನು ಬೆಳೆಸಿದ. ಯಾವದೆ ಶಬ್ದಕ್ಕೆ ಅಥವಾ ಕಲ್ಪನೆ ಗೆ ಸಿಗದ ವ್ಯಕ್ತಿತ್ವ.
    ಈ ಲೇಖನ ಓದಿದ ನಂತರ ನದಿಯಲ್ಲಿ ನದಿ ಬೆರೆಸಿದ ಹಾಗೆ ಅನುಭವ ಆಯತು. ಕೆಲವು ಕ್ಷಣಗಳು ಮೂಖಸ್ತಬದನಾದೆ. ಓದಿದ ತಕ್ಷಣ ಪಾಟೀಲ ಶರಣರಗೆ ಕರೆ ಮಾಡಿ ಧನ್ಯವಾದಗಳನ್ನು ಹೇಳಿದೆ.
    ವಚನಗಳ ಆಯ್ಕೆ ಸಹ ಬಹಳ ಅದ್ಭುತವಾಗಿದೆ.
    ವಿಶಿಷ್ಟವಾದ ಹಾಗೂ ವಿರಳವಾದ ಜ್ಞಾನ ದಾಸೋಹಕ್ಕೆ ನಮ್ಮೆಲ್ಲ ಬಸವ ಅನುಯಾಯಿಗಳಿಂದ ಜಗದೀಶ ಪಾಟೀಲ ಶರಣರಗೆ ಶರಣು ಶರಣಾರ್ಥಿಗಳು ??? ಹಾಗು ಧನ್ಯವಾದಗಳು.

  5. ಡಾ.ಪಂಚಾಕ್ಷರಿ ಹಳೇಬೀಡು
    Sep 8, 2018 Reply

    ಬಸವಣ್ಣನವರು ಎಷ್ಟು ಜ್ಞಾನಿಯಾಗಿದ್ದರೋ ಅಷ್ಟೇ ವಿನಯವಂತರೂ ಆಗಿದ್ದರೆಂದು ಬಹಳ ಸೊಗಸಾಗಿ ನಿರೂಪಿಸಿದ್ದೀರಿ ಶರಣರೆ. ಶರಣಾರ್ಥಿ.

  6. Vinay Kanchikere
    Sep 9, 2018 Reply

    ವಚನಗಳ ಸಹಿತ ಬಸವೇಶ್ವರರ ವ್ಯಕ್ತಿತ್ವವನ್ನು ಕಟೆದು ಕೊಟ್ಟಿದ್ದೀರಿ, ತುಂಬಾ ತುಂಬಾ ಚೆನ್ನಾಗಿದೆ.

  7. Dr. Mallikarjuna
    Sep 16, 2018 Reply

    ನಿಮ್ಮ ಲೇಖನದಲ್ಲಿನ ಈ ಸಾಲು ವಚನ “ಅಡಿಗಡಿಗೆ ಎನ್ನ ಮನವ ಜಡಿದು ನೋಡದಿರಯ್ಯ. ಬಡವನೆಂದೆನ್ನ ಕಾಡದಿರಯ್ಯ ಎನಗೊಡೆಯರುಂಟು ನಮ್ಮ ಕೂಡಲಸಂಗನ ಶರಣರು.”-
    ನಿಬಸವಣ್ಣನ ವಿನಯಕ್ಕೆ ಬಸವಣ್ಣನೇ ಸಾಟಿ ಎಂದು ಎತ್ತಿ ತೋರಿಸುತ್ತದೆ. ಓದುಗರಲ್ಲಿ ಆತ್ಮಾವಲೋಕನಕ್ಕೆ ದಾರಿ ಮಾಡಿಕೊಡುವ ವಿಚಾರಗಳನ್ನು ತಿಳಿಸಿದ್ದೀರಿ.

  8. Jahnavi Naik
    Sep 19, 2018 Reply

    ಶರಣರು ಮತ್ತು ವಚನಗಳು- ಬಸವಣ್ಣನ ಎರಡು ಮಾಧ್ಯಮಗಳು ಎಂಬ ನಿಮ್ಮ ಮಾತು ಸರಿ ಸರ್, ಅದೊಂದೇ ಸಾಲಿನಲ್ಲಿ ಎಲ್ಲವೂ ಇವೆ.

Leave A Comment

Your email address will not be published. Required fields are marked *