ನಾನೊಂದು ನೀರ್ಗುಳ್ಳೆ
ಕಾಲದ ಊದುಗೊಳವೆಯಲಿ
ನಿರಂತರವಾಗಿ ಉಕ್ಕುತಿವೆ
ಅನಂತಾನಂತ ನೀರ್ಗುಳ್ಳೆ
ಎಲ್ಲಕೂ ಒಂದೇ ಹುಟ್ಟು
ಒಂದೇ ಬಗೆಯ ಸಂಯೋಜನೆ
ನಾ ಬೇರೆ ನೀ ಬೇರೆ
ಅಂವ ಬೇರೆ ಇಂವ ಬೇರೆ
ನಾ ಮೇಲು ನೀ ಕೆಳಗೆ
ಅಕಿ ಹೆಚ್ಚು ಇಕಿ ಕಡಿಮೆ
ಗುಳ್ಳೆಯ ತೆಳು ಗೆರೆಯ ಆಚೀಚೆ
ಜಗದುದ್ದಗಲಕ್ಕೂ ತಾರತಮ್ಯ
ನೋಡುನೋಡುತ್ತಲೇ
ಇಲ್ಲೇ ಇದ್ದದ್ದು, ಅತ್ತ ಸರಿದದ್ದು
ಈಗ ಚಿಮ್ಮಿದ್ದು, ಮೇಲೆ ಹಾರಿದ್ದು
ಇಲ್ಲವಾಗುವ ನೀರ್ಗುಳ್ಳೆಗಳಲ್ಲಿ
ಯಾವುದಕೆ ಪೈಪೋಟಿ?
ಹಿರಿದಾದರೇನು, ಕಿರಿದಾದರೇನು
ಬಣ್ಣ ಯಾವುದಾದರೇನು
ಅಮರತ್ವವುಂಟೆ ಗುಳ್ಳೆಗೆ?
ಮುಟ್ಟಿದರೆ ಫಟ್ಟೆನುವ ಗುಳ್ಳೆ
ತನ್ನಲ್ಲಿ ತಾನೇ ಊದೆಬ್ಬಿಸುವ
ಮೋಹ, ಮದ, ಮತ್ಸರ
ದ್ವೇಷ, ದುರ್ಗುಣಗಳ
ಒಂದಲ್ಲಾ ಎರಡಲ್ಲಾ
ನೂರಾರು ಬುರುಜುಗಳು
ಗುಳ್ಳೆಯೊಳಗಣ ಗುಳ್ಳೆಗಳ
ಈ ಮೆಳ್ಳಗಣ್ಣಿನ ನೋಟಕೆ
ಕಂಡೀತೇ ಲೋಕ ಸತ್ಯ?
ನಿನ್ನೊಳು ನೀನಿರು ಎನುವ
ಗುರು ಸೂತ್ರವ ಹಿಡಿದು
ಈ ಪರಕಾಯ ಪೊರೆಗಳ
ಹಂಗು ಕಳಚಲೇ ಬೇಕು…
ಕೊರಗಲಿಕೆ, ಬೇಯಲಿಕೆ
ಸಮಯವೆಲ್ಲಿದೆ ಎನುವ
ನಶ್ವರತೆಯ ಸತ್ಯವನು
ಕಣ್ಬಿಟ್ಟು ನೋಡಲೇ ಬೇಕು.
ಇಬ್ಬನಿಯ ಹನಿ ಎನ್ನಿ
ಮಿನುಗಿ ಮರೆಯಾಗೋ ಮಿಂಚೆನ್ನಿ,
ಭ್ರಮೆಯೆನ್ನಿ, ಕನಸೆನ್ನಿ,
ಮೋಡದ ನೆರಳೆನ್ನಿ,
ಅಲೆಯೆನ್ನಿ, ಇಂಚರವೆನ್ನಿ,
ಬೀಸಿ ಹೋಗುವ ಗಾಳಿಯೆನ್ನಿ,
ಹಬೆ ಎನ್ನಿ, ಬಾಷ್ಪವೆನ್ನಿ…
ಏನಾದರೂ ಅನ್ನಿ ಈ ಗುಳ್ಳೆಗೆ
ಅನಂತ ಕಾಲದಲಿ, ಅನಂತ ವಸ್ತುವಿನಲಿ
ಅನಂತ ಜಾಗದಲಿ
ಅನಂತಾನಂತ ಗುಳ್ಳೆಗಳಲಿ
ಕ್ಷಣ ಮಾತ್ರವೇ ಇರುವ,
ಯಾವಾಗ ಬೇಕಾದರೂ ಸಿಡಿವ
ನೀರ ನಿರ್ಮಿತಿ ಮಾತ್ರವೇ
ನಾನೆನುವ ನಿಜವು ಮರೆಯದಿರಲಿ.