
ನನ್ನೊಳಗಣ ಮರೀಚಿಕೆ
ಈ ಊರು
ನದಿದಡೆಯಲ್ಲಿನ
ಪ್ರವಾಹ ಭೀತಿಯ ಅಭದ್ರತೆ…
ಈ ಊರು
ಛಿದ್ರ ವಿಛಿದ್ರಗಳ ಸಂಗಮ ಬಿಂದು…
ಈ ಊರು
ಪ್ರತಿಮಾ ವಿಧಾನದ ಭಾವಸುಧೆ…
ಈ ಊರು
ವಿಷಾದ, ವ್ಯಸನಗಳ ನದೀ ಸುಳಿ…
ಈ ಊರು
ಸುಖದ ಸಂಗ್ರಹಣೆಗಳ ದಗಲ್ಬಾಜಿ…
ಈ ಊರು
ಸ್ನೇಹ ಪ್ರೀತಿಗಳ ತೂಗು ತಕ್ಕಡಿ…
ಈ ಊರು
ವಾಸ್ತವ ಅರಿಯದಾ ದರ್ಶನ…
ಈ ಊರು
ಗತ ಚರಿತೆಗಳ ಅನುಶಾಸನ…
ಈ ಊರು
ಅಗಣಿತ ಕಲೆಗಳ ಅಂಗಳ…
ಈ ಊರು
ನೀತಿಪಾಠಗಳ ತವರೂರು..
ಈ ಊರಿಗೆ
ಅವನೀತಿ ಸೃಜಿಸಲು ಶಾಲೆ ಬೇಕಿಲ್ಲ…
ಈ ಊರು
ತನಗೆ ತನ್ನದೇ ಸೃಜಿಸುತ್ತಿದೆ…
ಈ ಊರು
ತನ್ನನ್ನು ತಾನೇ ಕೊಳ್ಳೆಹೊಡೆಯುತ್ತಿದೆ…
ಈ ಊರು
ತನ್ನೊಳು ತಾನೇ ಕೊಳೆಯುತ್ತಿದೆ…
ಈ ಊರು
ಪರಂಪರಾ ರಚನೆಗಳ ಊಳಿಗ…
ಈ ಊರು
ಕೈಗೆಟುಕದಾ ಕನಸು…
ಈ ಊರು
ಎಂದಾದರೂ ಉರುಳಿ ಹೋಗುವ ಬಡಪಾಯಿ…
ಈ ಊರು
ಸದಾ ಬೆಂಬಿಡದ ಮರೀಚಿಕೆ
ಈ ಊರು
ಕಡುಖಾಲಿಯಾದ ಮಹಮೌನ…
ಈ ಊರು
ಎಂದೂ ಖಾಲಿಯಾಗದಾ ನಶ್ವರ…
ಈ ಊರು
ಯಾರೂ ಯೋಚಿಸದಾ
ಸಮೃದ್ಧ ಬಯಲವನಾ…
ಈ ಊರು
ಏನೂ ಇಲ್ಲದ ನಿರಂತರ…
ಈ ಊರು
ಏನೂ ಅಲ್ಲವೆನಲೂ
ಇಲ್ಲವಾದ ಕಡು ನಿರುತ್ತರಾ.
Comments 2
ಶ್ರೀಶೈಲ, ಗದಗ
Feb 6, 2020ಒಳಗಿರುವ ಮರೀಚಿಕೆ ಯಾವುದು? ಆತ್ಮವೇ? ಮನಸ್ಸೇ? ಮಾಯೆಯೆ?
Lingaraj Patil
Feb 9, 2020ನಾಗರಾಜ ಸರ್, ದಯವಿಟ್ಟು ನೀವು ಲೇಖನಗಳನ್ನು ಬರೆಯಿರಿ, ನಿಮ್ಮ ವಿಚಾರಗಳಲ್ಲಿ ನವ ಮಾರ್ಗದ ಸೂಚನೆಗಳಿವೆ. ಅರ್ಥೈಸಿಕೊಳ್ಳಲು ತುಸು ಬಿಗಿಯೆನಿಸಿದರೂ ನನಗೆ ಅವು ಬಹಳ ಹಿಡಿಸಿವೆ. ಬಹಳ ತಿಂಗಳಾದವು, ನೀವು ಲೇಖನ ಬರೆಯದೆ, ನನ್ನ ಕೋರಿಕೆಯನ್ನು ಮನ್ನಿಸುವಿರೆಂದು ಭಾವಿಸುತ್ತೇನೆ.
ನನ್ನ ಬುದ್ಧ ಕವನ ಸೊಗಸಾಗಿತ್ತು. ನನ್ನ ಊರು, ನನ್ನೊಳಗಿನ ವ್ಯಾಪಾರದಂತಿದೆ.