ಧರ್ಮದ ನೆಲೆಯಲ್ಲಿ ಬದುಕು
ಭಾರತ ಧರ್ಮದ ನಾಡು. ಭಾರತೀಯರು ಧರ್ಮದಲ್ಲಿ ಶ್ರದ್ಧೆಯುಳ್ಳವರು. ಹಾಗಿದ್ದರೆ ನಿಜವಾದ ಧರ್ಮವೆಂದರೆ ಏನು? ಇದರ ಬಗ್ಗೆ ಗಂಭೀರವಾಗಿ ಚಿಂತನೆ ಮಾಡುವವರು ವಿರಳ. ಧರ್ಮದ ವ್ಯಾಖ್ಯೆ ಹೇಳಿ ಎಂದರೆ ಒಬ್ಬೊಬ್ಬರು ಒಂದೊಂದು ರೀತಿ ಹೇಳುವರು. ಭಿಕ್ಷುಕನಿಗೆ ಕೈ ಎತ್ತಿ ಏನನ್ನೋ ನೀಡುವುದು, ಪ್ರಾಣಿ-ಪಕ್ಷಿಗಳಿಗೆ ಆಹಾರ ಕೊಡುವುದು, ಗಿಡಗಳನ್ನು ಬೆಳೆಸುವುದು ಇಂಥವುಗಳನ್ನು ಸಹ ಧರ್ಮ ಎನ್ನುವುದುಂಟು. ಅಂದರೆ ಸತ್ಕಾರ್ಯಗಳನ್ನು ಮಾಡುವಂತಹುದೇ ಧರ್ಮ ಎನ್ನುವ ಮನೋಭಾವ ಹಲವರದು. ಬಸವಣ್ಣನವರು ಧರ್ಮಕ್ಕೆ ವಿಶೇಷವಾದ ಅರ್ಥ ಕೊಡುವರು.
ದಯವಿಲ್ಲದ ಧರ್ಮವದೇವುದಯ್ಯಾ
ದಯವೇ ಬೇಕು ಸರ್ವಪ್ರಾಣಿಗಳೆಲ್ಲರಲ್ಲಿ.
ದಯವೇ ಧರ್ಮದ ಮೂಲವಯ್ಯಾ,
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ.
ಬಸವಣ್ಣನವರ ಚಿಂತನೆಯಂತೆ ದಯೆ ಧರ್ಮದ ಮೂಲ. ಇವತ್ತಿನ ಧಾರ್ಮಿಕ ಆಚರಣೆಗಳನ್ನು ನೋಡಿದರೆ ದಯೆಯ ಸ್ಥಾನದಲ್ಲಿ ಭಯ ಆವರಿಸಿದೆ. ಭಯವೇ ಧರ್ಮ ಎನ್ನುವ ಭಾವನೆಯನ್ನು ಪೂಜಾರಿ ಪುರೋಹಿತರು ಸಮಾಜದಲ್ಲಿ ಬೆಳೆಸುತ್ತಿದ್ದಾರೆ. ಒಬ್ಬ ತಿಳಿದೊ ತಿಳಿಯದೆಯೋ ತಪ್ಪು ಮಾಡಿದ್ದರೆ ಅದಕ್ಕೆ ಪುರೋಹಿತರು ಮತ್ತೇನನ್ನೋ ದಾನ ಮಾಡಿ ತಪ್ಪನ್ನು ತಿದ್ದಿಕೊಳ್ಳಬಹುದು ಎನ್ನುವರು. ನಾವು ಆಗಾಗ ನೆನಪಿಸಿಕೊಳ್ಳುವ ಒಂದು ದೃಷ್ಟಾಂತ: ಒಬ್ಬ ತಾಯಿ ಮನೆಯಲ್ಲಿ ಬೆಕ್ಕನ್ನು ಸಾಕಿರ್ತಾಳೆ. ಅದು ಯಾವಾಗಲೂ ಅವಳ ಸುತ್ತಲೇ ಸುತ್ತುವದು. ಆ ತಾಯಿಯ ಬಗ್ಗೆ ಬೆಕ್ಕಿಗೆ ಅಷ್ಟೊಂದು ಪ್ರೀತಿ ಮತ್ತು ಬೆಕ್ಕಿನ ಬಗ್ಗೆ ಆ ತಾಯಿಗೆ ಎಲ್ಲಿಲ್ಲದ ಮೋಹ. ಮನೆಗೆ ನೆಂಟರು ಬಂದಾಗ ಅವರಿಗೆ ಶುಚಿ ರುಚಿಯಾದ ಆಹಾರ ತಯಾರಿಸಿ ಆತಿಥ್ಯ ಮಾಡುವ ಬಯಕೆ ಅವಳದು. ಅಂಥ ಸಂದರ್ಭದಲ್ಲೂ ಬೆಕ್ಕು ಅವಳ ಸುತ್ತಲೇ ತಿರುಗುತ್ತ ಕೆಲಸಕ್ಕೆ ಅಡ್ಡಿ ಮಾಡುವುದು. ಉಸ್ ಎಂದರೂ ಹೋಗುವುದಿಲ್ಲ. ಒಮ್ಮೆ ಅವಳಿಗೆ ಸಿಟ್ಟು ಬಂದು ಕೋಲಿನಿಂದ ಅದರ ತಲೆಗೆ ಪಟ್ ಎಂದು ಒಂದು ಏಟು ಕೊಡುವಳು. ಮೃದುವಾದ ಭಾಗಕ್ಕೆ ಪೆಟ್ಟು ಬಿದ್ದ ಕಾರಣ ಬೆಕ್ಕು ಅಲ್ಲೇ ಸತ್ತುಬೀಳುವುದು. ಅಯ್ಯೋ ಎಂಥ ಅನಾಹುತವಾಯಿತಲ್ಲ ಎಂದು ಕೊರಗುವಳು. ಬೆಕ್ಕನ್ನು ಸಾಯಿಸಿದ್ದು ಮಹಾಅಪರಾಧ ಎನ್ನುವ ಭಾವ ಅವಳ ಮನಸ್ಸನ್ನಾವರಿಸಿದೆ. ಅದೇ ಸಂದರ್ಭಕ್ಕೆ ಬಂದ ಪುರೋಹಿತನೊಬ್ಬ ಬೆಕ್ಕು ಸಾಯಿಸಿದ್ದು ಬಹುದೊಡ್ಡ ದೋಷ. ಈ ದೋಷದಿಂದ ಪರಿಹಾರ ಪಡೆಯಲು ಒಂದು ಚಿನ್ನದ ಬೆಕ್ಕನ್ನು ದಾನ ಕೊಡಬೇಕು, ಇಲ್ಲದಿದ್ದರೆ ನಿಮಗೆ, ನಿಮ್ಮ ಮನೆತನಕ್ಕೆ ಅಪಾಯ ತಪ್ಪಿದ್ದಲ್ಲ ಎಂದು ಹೆದರಿಸುವನು. ನಮ್ಮ ಜನರು ವಾಸ್ತವ ಸತ್ಯ ಕುರಿತು ಯೋಚನೆ ಮಾಡುವುದಿಲ್ಲ. ಶಾಸ್ತ್ರಕಾರರು, ಪುರೋಹಿತರು ಹೇಳುವುದೆಲ್ಲ ವೇದವಾಕ್ಯ ಎಂದು ನಂಬುವರು. ಹಾಗಾಗಿ ಬಡತನವಿದ್ದರೂ ದೋಷಮುಕ್ತವಾಗಲು ಆ ತಾಯಿ ಕಷ್ಟಪಟ್ಟು ಒಂದು ಚಿನ್ನದ ಬೆಕ್ಕನ್ನು ಮಾಡಿಸಿ ಆ ಪುರೋಹಿತನಿಗೆ ದಾನ ಕೊಡುವಳು. ಚಿನ್ನದ ಬೆಕ್ಕನ್ನು ದಾನ ಮಾಡಿದಾಕ್ಷಣ ಮಾಡಿದ ಪಾಪಗಳು ನಿವಾರಣೆಯಾಗಲು ಸಾಧ್ಯವೇ? ಖಂಡಿತ ಸಾಧ್ಯವಿಲ್ಲ. ಹಾಗಾಗಿ ಬಸವಣ್ಣನವರು ಈ ವಿಚಾರದಲ್ಲಿ ಹೇಳಿರುವ ವಚನ ಚಿಂತನಾರ್ಹವಾಗಿದೆ.
ಎಲವೋ, ಎಲವೋ ಪಾಪಕರ್ಮವ ಮಾಡಿದವನೇ,
ಎಲವೋ ಎಲವೋ ಬ್ರಹ್ಮೇತಿಯ ಮಾಡಿದವನೇ,
ಒಮ್ಮೆ ಶರಣೆನ್ನೆಲವೋ.
ಒಮ್ಮೆ ಶರಣೆಂದಡೆ ಪಾಪಕರ್ಮ ಓಡುವವು.
ಸರ್ವಪ್ರಾಯಶ್ಚಿತ್ತಕ್ಕೆ ಹೊನ್ನ ಪರ್ವತಂಗಳೈದವು.
ಒಬ್ಬಗೆ ಶರಣೆನ್ನು, ನಮ್ಮ ಕೂಡಲಸಂಗಮದೇವಂಗೆ.
ಮನುಷ್ಯ ಏನೇ ಪಾಪ ಮಾಡಿದ್ದರೂ ಅದರ ಪರಿಹಾರಕ್ಕಾಗಿ ಮತ್ತೇನನ್ನೋ ದಾನ ಮಾಡುವುದಲ್ಲ. ಬದಲಾಗಿ ಮನದಲ್ಲೇ ಪಶ್ಚಾತ್ತಾಪದ ಉರಿಯಲ್ಲಿ ಬೇಯಬೇಕು. ನಮ್ಮಲ್ಲಿ ಪಾಪದಿಂದ ಮುಕ್ತವಾಗಲು ಎರಡು ಮಾರ್ಗಗಳನ್ನು ಹೇಳಿದ್ದಾರೆ: 1. ಪ್ರಾಯಶ್ಚಿತ್ತ ಮಾರ್ಗ. 2. ಪಶ್ಚಾತ್ತಾಪ ಮಾರ್ಗ. ಒಬ್ಬ ತಾನು ಮಾಡಿದ ಪಾಪಗಳನ್ನು ಕಳೆದುಕೊಳ್ಳಲು ಪುರೋಹಿತರು ಹೇಳಿದಂತೆ ದಾನ ಮಾಡುವುದು ಪ್ರಾಯಶ್ಚಿತ್ತ ಮಾರ್ಗ. ಇದನ್ನು ಶರಣರು ಒಪ್ಪುವುದಿಲ್ಲ. ಏಕೆಂದರೆ ಇವತ್ತು ಮಾಡಿದ ಪಾಪಗಳನ್ನು ದಾನ ಮಾಡಿ ಕಳೆದುಕೊಳ್ಳುವುದಾದರೆ ಮತ್ತೆ ಮತ್ತೆ ಪಾಪದ ಕಾರ್ಯಗಳನ್ನು ಮಾಡಿ ಅದಕ್ಕೂ ಪರಿಹಾರ ಕಂಡುಕೊಳ್ಳಬಹುದಲ್ಲ! ಹೀಗೆ ಪಾಪದ ಕಾರ್ಯಗಳನ್ನು ಮಾಡುತ್ತಿದ್ದರೆ ಅವನು ಹೊನ್ನಿನ ಪರ್ವತವನ್ನೇ ದಾನವಿತ್ತರೂ ಅವನ ಪಾಪಗಳೇನೂ ಕಡಿಮೆ ಆಗುವುದಿಲ್ಲ. ಅದಕ್ಕೆ ಶರಣರು ಪ್ರಾಯಶ್ಚಿತ್ತ ಮಾರ್ಗ ಹೇಳದೆ ಮಾಡಿದ ಪಾಪಕೃತ್ಯಗಳಿಗಾಗಿ ಮನದಲ್ಲೇ ನೊಂದು, ಪಶ್ಚಾತ್ತಾಪದ ಉರಿಯಲ್ಲಿ ಬೆಂದು ಬೂದಿಯಾಗಬೇಕು. ದೇವರಿಗೆ ಶರಣಾಗಬೇಕು ಎನ್ನುವರು. ಆಗ ಮನುಷ್ಯ ಇನ್ನೆಂದೂ ಇಂಥ ಪಾಪದ ಕಾರ್ಯಗಳಿಗೆ ಕೈ ಹಾಕಬಾರದು ಎನ್ನುವ ಸಂಕಲ್ಪ ಮಾಡುವನು. ಸಿಟ್ಟಿನ ಕೈಯಲ್ಲಿ ಬುದ್ಧಿ ಕೊಟ್ಟದ್ದರಿಂದ ಬೆಕ್ಕು ಸತ್ತಿತು. ಸಿಟ್ಟಿನ ಬದಲು ತಾಳ್ಮೆ, ಶಾಂತಿಯನ್ನು ಮೈಗೂಡಿಸಿಕೊಂಡಿದ್ದರೆ ಬೆಕ್ಕು ಸಾಯುತ್ತಿರಲಿಲ್ಲ. ಈ ರೀತಿ ಚಿಂತನೆ ಮಾಡುತ್ತಿದ್ದರೆ ಮುಂದೆಂದೂ ಸಿಟ್ಟಿನ ಕೈಯಲ್ಲಿ ಬುದ್ಧಿ ಕೊಡದಂತೆ ಎಚ್ಚರದಿಂದಿರಲು ಸಾಧ್ಯ. ಇದೇ ಪಶ್ಚಾತ್ತಾಪದ ಮಾರ್ಗ. ಇದನ್ನು ಬಿಟ್ಟು ಪ್ರಾಯಶ್ಚಿತ್ತದ ಮಾರ್ಗಕ್ಕೆ ಅಂಟಿಕೊಂಡರೆ ಇವತ್ತಿನ ಪಾಪವೇನೋ ಕಳೆಯುವುದು. ಪಾಪ ಕಳೆಯಿತಲ್ಲ ಎಂದು ನಾಳೆ ಮತ್ತೊಂದು ಪಾಪ ಮಾಡಿ ಅದನ್ನೂ ಕಳೆದುಕೊಳ್ಳಬಹುದು ಎಂದು ಆಲೋಚನೆ ಮಾಡುವರು. ಪುರೋಹಿತ ವರ್ಗದವರು ಸಹ ಜನರಿಗೆ ಈ ಎರಡೂ ಮಾರ್ಗಗಳ ಅರಿವು ಮಾಡಿಕೊಡುವುದಿಲ್ಲ. ಬಹುಷಃ ಅವುಗಳ ಜ್ಞಾನವೂ ಅವರಿಗೆ ಇರಲಾರದು. ಮಾಡಿದ ಪಾಪ ಕಳೆದುಕೊಳ್ಳಲು ಇಂಥ ಪರಿಹಾರ ಇದ್ದೇ ಇದೆ ಎಂದು ಮುಗ್ಧ ಜನರನ್ನು ನಂಬಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವುದು ಮಾತ್ರ ಅವರ ಬುದ್ಧಿವಂತಿಕೆ. ಅದಕ್ಕಾಗಿ ಇಂಥ ಪೂಜೆ ಮಾಡು, ಈ ಮರ ಸುತ್ತು, ಆ ದೇವರಿಗೆ ನಡೆದುಕೊ, ರುದ್ರಾಭಿಷೇಕ ಮಾಡು, ದಾನ ಕೊಡು ಎಂದು ಬಾಹ್ಯ ಕರ್ಮಗಳನ್ನು ಹೇಳುವರೇ ಹೊರತು ನಿಜವಾದ ಧರ್ಮವನ್ನು ಹೇಳುವುದಿಲ್ಲ.
ಬಸವಾದಿ ಶಿವಶರಣರು ಬಾಹ್ಯ ಕರ್ಮಗಳನ್ನು ಹೇಳದೆ ನಿಜವಾದ ಧರ್ಮವನ್ನು ಹೇಳಿದರು. ಧರ್ಮ ಕರ್ಮದಿಂದ ದೂರ ಇರುವಂತಹುದು. ಕರ್ಮದಲ್ಲಿ ಆಚರಣೆಗಳು ಪ್ರಧಾನವಾದರೆ ಧರ್ಮದಲ್ಲಿ ಆದರ್ಶ ನಡಾವಳಿಕೆಗಳು ಪ್ರಧಾನವಾಗುವವು. ನಮಗೆ ದಿಕ್ಕುತಪ್ಪಿಸುವ, ತರ್ಕಕ್ಕೆ ನಿಲುಕದ ಕರ್ಮಾಚರಣೆಗಳು ಮುಖ್ಯವೋ ಅಥವಾ ಆದರ್ಶಗಳು ಮುಖ್ಯವೋ? ಆದರ್ಶ ಎಂದರೆ ಸತ್ಯವನ್ನು ನುಡಿಯುವುದು, ಎಲ್ಲರನ್ನೂ ಪ್ರೀತಿಸುವುದು, ಯಾರನ್ನೂ ದ್ವೇಷಿಸದಿರುವುದು, ಸಕಲ ಜೀವಾತ್ಮರಿಗೆ ಒಳಿತು ಬಯಸುವುದು ಇಂಥವುಗಳು ಧರ್ಮದ ದಾರಿಗಳು. ಧರ್ಮ ಹೇಳುವುದು ದಯಾ ಮಾರ್ಗವನ್ನು. ಕರ್ಮ ಹೇಳುವುದು ಭಯದ ಮಾರ್ಗವನ್ನು. ಮಾನವ ಇಂದು ಭಯದ ಮಾರ್ಗದಲ್ಲಿ ಸಾಗುತ್ತಿದ್ದಾನೆಯೇ ಹೊರತು ದಯೆಯ ಮಾರ್ಗದಲ್ಲಿ ಸಾಗುತ್ತಿಲ್ಲ. ಪ್ರಪಂಚದಲ್ಲಿರುವ ಎಲ್ಲ ಜೀವಜಂತುಗಳು ಒಂದರ್ಥದಲ್ಲಿ ಆಸೆಯಿಂದ ಮುಕ್ತವಾಗಿವೆ. ಮನುಷ್ಯ ಮಾತ್ರ ಆಸೆಯ ದಾಸನಾಗಿ ಆಶಾಗೋಪುರಗಳನ್ನು ಕಟ್ಟುತ್ತಲೇ ಇರುವನು. ಇವನ ಆಸೆಗೆ ಮಿತಿಯೇ ಇಲ್ಲ. ಇದೇ ವಿಚಾರದಲ್ಲಿ ಅಂಬಿಗರ ಚೌಡಯ್ಯನವರು ಹೇಳುವುದು:
ಬಡತನಕ್ಕೆ ಉಂಬುವ ಚಿಂತೆ, ಉಣಲಾದರೆ ಉಡುವ ಚಿಂತೆ,
ಉಡಲಾದರೆ ಇಡುವ ಚಿಂತೆ, ಇಡಲಾದರೆ ಹೆಂಡಿರ ಚಿಂತೆ,
ಹೆಂಡಿರಾದರೆ ಮಕ್ಕಳ ಚಿಂತೆ, ಮಕ್ಕಳಾದರೆ ಬದುಕಿನ ಚಿಂತೆ,
ಬದುಕಾದರೆ ಕೇಡಿನ ಚಿಂತೆ, ಕೇಡಾದರೆ ಮರಣದ ಚಿಂತೆ,
ಇಂತೀ ಹಲವು ಚಿಂತೆಯಲ್ಲಿ ಇಪ್ಪವರ ಕಂಡೆನು.
ಶಿವನ ಚಿಂತೆಯಲ್ಲಿದ್ದವರೊಬ್ಬರನೂ ಕಾಣೆನೆಂದಾತ ನಮ್ಮ ಅಂಬಿಗರ ಚೌಡಯ್ಯ
[ನಿಜ]ಶರಣನು.
ಈ ವಚನದ ಆಶಯವನ್ನು ಗಮನಿಸಬೇಕು. ಇದರಲ್ಲಿ ಧರ್ಮ ಮತ್ತು ಕರ್ಮಗಳೆರಡೂ ಇವೆ. ನಾವು ಸಾಗಬೇಕಾದ್ದು ಧರ್ಮದ ದಾರಿಯಲ್ಲೋ, ಕರ್ಮದ ದಾರಿಯಲ್ಲೋ? ಚೌಡಯ್ಯನವರು ವಚನದ ಕೊನೆಗೆ ಹೇಳುವುದು ಶಿವಚಿಂತೆ ಮುಖ್ಯವಾಗಬೇಕು ಎಂದು. ಈ ಲೋಕಕ್ಕೆ ಬಂದವರೆಲ್ಲ ಬಯಸುವುದೇನು? ದೇವರೇ ಒಂದು ತುತ್ತು ಅನ್ನ ಸಿಕ್ಕರೆ ಸಾಕು; ನೆಮ್ಮದಿಯಿಂದ ಬದುಕುವೆ ಎನ್ನುವರು. ಪರಿಶ್ರಮದಿಂದಲೋ, ದೈವಕೃಪೆಯಿಂದಲೋ ಅನ್ನ ಸಿಕ್ಕಾಕ್ಕಣ ತೃಪ್ತರಾಗುತ್ತಾರೆಯೇ? ಇಲ್ಲ. ಆಗ ಯೋಚಿಸುವುದು ಹೊಟ್ಟೆಗೆ ಅನ್ನವೇನೋ ಆಯ್ತು, ಮೈಗೆ ಬಟ್ಟೆ ಇಲ್ಲದಿದ್ದರೆ ಹೇಗೆ? ಮಾನ ಮುಚ್ಚಿಕೊಳ್ಳಲಾರದರೂ ಬಟ್ಟೆ ಬೇಕಲ್ಲ? ಬಟ್ಟೆನೂ ಸಿಗುತ್ತಲೇ ಮತ್ತೆ ಯೋಚಿಸುವುದು ಇರುವುದಕ್ಕೆ ಒಂದು ಮನೆ ಬೇಕಲ್ಲ ಎಂದು. ಮನೆಯೂ ಆಯ್ತು. ಮುಂದೆ? ನನ್ನ ಜೊತೆ ಇದ್ದವರೆಲ್ಲ ಮದುವೆ ಆಗಿದ್ದಾರೆ, ನನಗಿನ್ನೂ ಮದುವೆಯೇ ಆಗಿಲ್ಲವಲ್ಲ ಎನ್ನುವ ಚಿಂತೆ. ಮದುವೆಯಾದಮೇಲೆ ನನ್ನ ಜೊತೆಯಲ್ಲೇ ಮದುವೆ ಆದವರಿಗೆ ಆಗಲೇ ಎರಡು ಮಕ್ಕಳಾಗಿವೆ, ನನಗೆ ಮಕ್ಕಳೇ ಆಗಿಲ್ಲವಲ್ಲ ಎನ್ನುವ ಚಿಂತೆ. ಮಕ್ಕಳೂ ಆದವೆಂದು ಭಾವಿಸಿ. ಮುಂದೆ? ಹೀಗೆ ಚಿಂತೆಯ ಸರಮಾಲೆ ಮುಂದುವರಿಯುತ್ತಲೇ ಇರುವುದು. ಕೊನೆಗೆ ಆತ ಆಲೋಚಿಸುವುದು ನಾನು ಎಲ್ಲರಿಗಿಂತ ಶ್ರೀಮಂತ ಆಗಬೇಕು ಎಂದು. ಹೀಗೆ ಯೋಚಿಸದೆ ನಾನು ಆದರ್ಶಗಳನ್ನು ಅಳವಡಿಸಿಕೊಂಡು ಧರ್ಮದ ದಾರಿಯಲ್ಲಿ ನಡೆಯುವುದು ಹೇಗೆ ಎಂದು ಯೋಚಿಸಬೇಕಾಗಿತ್ತು. ಹಾಗೆ ಯೋಚಿಸದ ಕಾರಣ ಆತ ಆಸೆಯ ದಾಸನಾಗುವನು. ಅದರಿಂದಾಗಿಯೇ ಧರ್ಮದಿಂದ ದೂರವಾಗುವನು. ಆಸೆಯನ್ನು ಬಿಟ್ಟಾಗಲೇ ಆತ ಈಶನಾಗುವುದು ಮತ್ತು ಧರ್ಮದ ದಾರಿಯಲ್ಲಿ ಸಾಗುವುದು.
ಆಸೆಗೆ ಸಂಬಂಧಿಸಿದಂತೆ ಒಂದು ದೃಷ್ಟಾಂತ ನೆನಪಾಗುವುದು. ಇಬ್ಬರು ವ್ಯಕ್ತಿಗಳು. ಇಬ್ಬರಿಗೂ ಶ್ರೀಮಂತರಾಗುವ ಕನಸು. ಆದರೆ ದುಡಿದು ಶ್ರೀಮಂತರಾಗಲು ಸಾಧ್ಯವಿಲ್ಲ ಎನ್ನಿಸಿ ಇಬ್ಬರೂ ದೇವರನ್ನು ಕುರಿತು ತಪಸ್ಸು ಮಾಡಲಾರಂಭಿಸಿದರು. ದೇವರು ಬೋಳೆಶಂಕರ. ಅವನು ಭಕ್ತರಿಗೆ ಬೇಗ ಮೆಚ್ಚುತ್ತಾನಂತೆ. ಅವರ ಭಕ್ತಿಗೆ ಮೆಚ್ಚಿದ ದೇವರು ಒಬ್ಬನ ಬಳಿ ಬಂದು ನಿನಗೇನು ಬೇಕು ಎಂದು ಕೇಳಿದ. ಅದಕ್ಕಾತ ಅಲ್ಲಿ ನಿನ್ನ ಇನ್ನೊಬ್ಬ ಭಕ್ತ ತಪಸ್ಸು ಮಾಡುತ್ತಿದ್ದಾನೆ. ಮೊದಲು ಅವನ ಬಳಿ ಹೋಗು. ಅವನಿಗೆ ಏನು ವರ ಕೊಡುವೆಯೋ ಅದರ ಎರಡು ಪಟ್ಟು ವರವನ್ನು ನನಗೆ ಕೊಡಬೇಕು ಎಂದು ಶರತ್ತು ಹಾಕಿದ. ದೇವರು ಮತ್ತೊಬ್ಬ ಭಕ್ತನ ಬಳಿ ಹೋಗುತ್ತಲೇ ನೀನು ನಿನ್ನ ಮೊದಲ ಭಕ್ತನಿಗೆ ಏನು ಕೊಟ್ಟಿರುವೆ ಹೇಳು ಎಂದ. ನಿನಗೆ ಏನು ಕೊಡುವೆನೋ ಅದರ ಎರಡು ಪಟ್ಟು ವರವನ್ನು ಕರುಣಿಸಬೇಕೆಂದು ಆತ ಬೇಡಿಕೆ ಇಟ್ಟಿದ್ದಾನೆ ಎಂದ ದೇವರು. ಆಗ ಈ ಭಕ್ತ ಯೋಚಿಸಿದ್ದು ನಾನು ಏನೇ ಕೇಳಿದರೂ ಅದರ ಎರಡುಪಟ್ಟು ಅವನಿಗೆ ಸಿಗುತ್ತದೆ. ಈಗ ನಾನೇನು ಕೇಳಲಿ ಎಂದು ಯೋಚನೆ ಮಾಡಿ ನನ್ನ ಒಂದು ಕಣ್ಣನ್ನು ತೆಗೆ ಎಂದ. ತಥಾಸ್ತು ಎಂದ ದೇವರು. ಅಲ್ಲಿಂದ ಮೊದಲ ಭಕ್ತನ ಬಳಿ ಬರುತ್ತಲೇ ಅವನಿಗೆ ಕೊಟ್ಟ ಎರಡು ಪಟ್ಟು ನನಗೆ ಕೊಡಬೇಕು. ಸ್ವಲ್ಪವೂ ಕಡಿಮೆ ಆಗಬಾರದು ಎಂದ. ಮುಂದೇನಾಯ್ತು? ಅವನ ಒಂದು ಕಣ್ಣಿಗೆ ಬದಲು ಇವನ ಎರಡೂ ಕಣ್ಣುಗಳು ಹೋದವು. ಹೀಗೆ ಮನುಷ್ಯ ಸ್ವಾರ್ಥಕ್ಕೆ ಬಲಿಯಾದಾಗ, ಇನ್ನೂ ಬೇಕು ಬೇಕು ಎನ್ನುವ ಬಯಕೆಗೆ ತುತ್ತಾದಾಗ ತನ್ನ ಬದುಕನ್ನೇ ನಾಶ ಮಾಡಿಕೊಳ್ಳುವನು. ಹಾಗಾಗಿ ಮನುಷ್ಯನಿಗೆ ದುರಾಸೆಗೆ ಬದಲು ಧರ್ಮ, ದಯೆ, ಕರುಣೆ, ಶಾಂತಿ ಬೇಕು. ಇಂಥ ಗುಣಗಳನ್ನು ಬೆಳೆಸಿಕೊಂಡರೆ ವ್ಯಕ್ತಿ ತಾನೂ ಬೆಳೆಯಲು, ಇನ್ನೊಬ್ಬರನ್ನೂ ಬೆಳೆಸಲು ಸಾಧ್ಯ. ಬದಲಾಗಿ ದುರಾಸೆಗೆ ಬಲಿಯಾದರೆ ಆತನ ಬದುಕೇ ನರಕವಾಗುವುದು.
ಬುದ್ಧನ ಶಿಷ್ಯನ ಕತೆಯೊಂದು ನೆನಪಾಗುವುದು. ಆತನ ಶಿಷ್ಯನೊಬ್ಬ ಬುದ್ಧನ ಮಣ್ಣಿನ ಪ್ರತಿಮೆಯನ್ನು ನಿತ್ಯವೂ ಪೂಜಿಸುತ್ತಿದ್ದ. ಬುದ್ಧದೇವನೇ ನನ್ನ ಕಣ್ಣೆದುರು ಇದ್ದಾನೆ, ನನಗೆ ಉಪದೇಶ ಮಾಡುತ್ತಿದ್ದಾನೆಂಬ ನಂಬಿಕೆಯಿಂದ ಆ ಮಣ್ಣಿನ ಪ್ರತಿಮೆ ಪೂಜೆ ಮಾಡಿ ತನ್ನ ಕಾಯಕದಲ್ಲಿ ನಿರತನಾಗುತ್ತಿದ್ದ. ಅದರಿಂದ ಅವನಿಗೆ ಶಾಂತಿ, ನೆಮ್ಮದಿ, ಸಂತೃಪ್ತಿ. ಶ್ರೀಮಂತನೊಬ್ಬ ಇವನು ಮಣ್ಣಿನ ಪ್ರತಿಮೆ ಪೂಜೆ ಮಾಡುವುದನ್ನು ಕಂಡಿದ್ದ. ಮಣ್ಣಿನ ಮೂರ್ತಿಯ ಬದಲು ಈ ಚಿನ್ನದ ಮೂರ್ತಿಯ ಪೂಜೆ ಮಾಡು ಎಂದು ಬುದ್ಧನ ಚಿನ್ನದ ಪ್ರತಿಮೆಯನ್ನು ಕೊಟ್ಟ. ಆತ ಬುದ್ಧನ ಚಿನ್ನದ ಪ್ರತಿಮೆಯನ್ನು ಮನೆಗೆ ತಂದು ಮಣ್ಣಿ ಮೂರ್ತಿಯ ಸ್ಥಾನದಲ್ಲಿಟ್ಟು ಪೂಜಿಸಲಾರಂಭಿಸಿದ. ಚಿನ್ನದ ಪ್ರತಿಮೆ ನೋಡಲು ಜನರು ಸಾಲಿಡಲಾರಂಭಿಸಿದರು. ಇವನ ಕೀರ್ತಿ ಸುತ್ತೆಲ್ಲ ಪಸರಿಸಿ ಅಲ್ಲಿಗೆ ಬರುವವರ ಸಂಖ್ಯೆ ಹೆಚ್ಚುತ್ತಲೇ ಈ ಭಕ್ತನಿಗೆ ಕೀರ್ತಿಯ ಹುಚ್ಚು ಹೆಚ್ಚಾಯ್ತು. ನಾನೇ ಬುದ್ಧನಿಗಿಂತ ದೊಡ್ಡವ, ಏಕೆಂದರೆ ನನ್ನ ಬಳಿ ಬುದ್ಧನ ಚಿನ್ನದ ವಿಗ್ರಹ ಇದೆ ಎನ್ನುವ ಅಹಂಕಾರ ಆವರಿಸಲಾರಂಭಿಸಿತು. ಯಾರಾದರೂ ಈ ಮೂರ್ತಿಯನ್ನು ಕದ್ದರೆ ಎನ್ನುವ ಚಿಂತೆಯೂ ಕಾಡಲಾರಂಭಿಸಿ ಹಗಲು, ರಾತ್ರಿ ಅದರ ಸಂರಕ್ಷಣೆಯಲ್ಲೇ ತನ್ನ ಮಾನಸಿಕ ನೆಮ್ಮದಿಯನ್ನೇ ಕಳೆದುಕೊಂಡ. ಚಿಂತೆಯ ಸಂತೆಯಲ್ಲಿ ಬುದ್ಧನ ಆದರ್ಶಗಳನ್ನೇ ಮರೆತ. ಕ್ರಮೇಣ ಬುದ್ಧ ಮತ್ತು ಆತನ ಆದರ್ಶಗಳು ಮರೆಯಾಗಿ ಚಿನ್ನದ ಮೋಹ ಹೆಚ್ಚಾಯ್ತು. ಜೊತೆಗೆ ಮಾನಸಿಕ ನೆಮ್ಮದಿ ನೆಲ ಕಚ್ಚಿತು. ಆಗ ಅವನಿಗೆ ಜ್ಞಾನೋದಯವಾಗಿ ಚಿನ್ನದ ಮೂರ್ತಿಯಿಂದಲೇ ಇಷ್ಟೆಲ್ಲ ಅಶಾಂತ, ಅಹಂಕಾರ ಬೆಳೆದದ್ದು ಎಂದು ಅದನ್ನು ಆ ಶ್ರೀಮಂತನಿಗೆ ಒಪ್ಪಿಸಲು ಹೋದ. ನನಗೆ ಚಿನ್ನದ ಪ್ರತಿಮೆಗಿಂತ ಮಣ್ಣಿನ ಮೂರ್ತಿಯೇ ಸಂತೋಷ, ನೆಮ್ಮದಿ ನೀಡುತ್ತಿತ್ತು. ಇದು ಬಂದಮೇಲೆ ನನ್ನ ನೆಮ್ಮದಿಯೆಲ್ಲ ಹಾಳಾಗಿದೆ ಎಂದ. ಅದಕ್ಕೆ ಆ ಶ್ರೀಮಂತ ಹೇಳಿದ್ದು: ಹಾಗೆಲ್ಲ ಅದನ್ನು ಇಟ್ಟ ಸ್ಥಳದಿಂದ ಕದಲಿಸಬಾರದು. ಬೇಕಾದರೆ ನೀನೇ ಆ ಸ್ಥಳ ಬಿಟ್ಟು ಹೋಗು ಎಂದು. ಇಲ್ಲಿ ಗಮನಿಸಬೇಕಾದ್ದು ಮನುಷ್ಯ ಚಿನ್ನಕ್ಕೆ ಮಹತ್ವ ಕೊಡುತ್ತಿದ್ದರೆ ಆದರ್ಶಗಳಿಂದ ಕಳಚಿಕೊಳ್ಳುವನು. ಇವತ್ತು ಜಗತ್ತಿನಲ್ಲಿ ಯಾರನ್ನೇ ನೋಡಿ; ಏನೂ ಇಲ್ಲದಿದ್ದಾಗ ಅವರು ಆದರ್ಶ ಜೀವಿಗಳು. ಆದರ್ಶದ ಜೀವನವನ್ನೇ ನಡೆಸುತ್ತಿರುತ್ತಾರೆ. ಸಂಪತ್ತು ಮತ್ತಿತರ ದುರಾಸೆಗೆ ಬಲಿಯಾಗುತ್ತಲೇ ಒಂದೊಂದಾಗಿ ಆದರ್ಶಗಳನ್ನು ಕಳಚಿಕೊಳ್ಳುತ್ತ ಸಾಗುವರು. ಈ ನೆಲೆಯಲ್ಲಿ ನಮ್ಮ ಸ್ವಾಮಿಗಳು, ರಾಜಕಾರಣಿಗಳು, ಸಾಹಿತಿಗಳು, ಅಧಿಕಾರಿಗಳು ಹೀಗೆ ಬೇರೆ ಬೇರೆಯವರನ್ನು ಗಮನಿಸಿ. ಆರಂಭದಲ್ಲಿ ಅವರೆಲ್ಲರೂ ಆದರ್ಶದ ದಾರಿಯಲ್ಲೇ ನಡೆದವರು. ಹೀಗೇ ಬದುಕಬೇಕೆಂದು ಗೆರೆ ಹಾಕಿಕೊಂಡವರು. ಒಮ್ಮೆ ಅವರು ಸಂಪತ್ತಿನ ಮೋಹ, ಅಧಿಕಾರದ ದಾಹಕ್ಕೆ ಬಲಿಯಾಗುತ್ತಲೇ ಆದರ್ಶಗಳನ್ನು ಗಾಳಿಗೆ ತೂರುವರು. ಸಂಪಾದನೆಗೆ ಒತ್ತು ಕೊಡುವರು. ಸಂಪಾದನೆಯ ಹಪಾಹಪಿ ಹೆಚ್ಚಿ ಶಾಂತಿ, ಗೌರವ, ಸಂತೋಷ, ನೆಮ್ಮದಿಯನ್ನು ಕಳೆದುಕೊಳ್ಳುವರು. ಈ ದೃಷ್ಟಿಯಿಂದ ಮನುಷ್ಯ ಯಾವಾಗಲೂ ಧರ್ಮದ ದಾರಿಯಲ್ಲಿ ಸಾಗಬೇಕು. ಧರ್ಮವನ್ನು ಬಿಟ್ಟರೆ ಅವನಿಗೆ ಎಂದೂ ಸುಖ, ಶಾಂತಿ, ನೆಮ್ಮದಿ ಇಲ್ಲ.
ಯಾವ ವ್ಯಕ್ತಿಯನ್ನೇ ನೋಡಿ; ಯಾರು ಸುಖಿ, ಯಾರು ಸಮೃದ್ಧಿಯ ಜೀವನ ಸಾಗಿಸುತ್ತಾನೆ? ದೊಡ್ಡ ಮನೆ ಕಟ್ಟಿದವನಲ್ಲ. ದೊಡ್ಡ ವಾಹನ ಇಟ್ಟವನಲ್ಲ. ಸರಳವಾದ ಜೀವನ ಸಾಗಿಸುತ್ತ ಧರ್ಮದ ದಾರಿಯಲ್ಲಿ ನಡೆಯುವವರು ಮಾತ್ರ ಸುಖದ, ಸಮೃದ್ಧಿಯ ಬಾಳನ್ನು ನಡೆಸುವರು. ಧರ್ಮ, ದಯೆ, ಪ್ರೀತಿ, ನೀತಿ, ಸತ್ಯ, ಸಹಬಾಳುವೆ ಇಂಥ ಗುಣಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡವರು ಮಾತ್ರ ಪರಮಸುಖಿಗಳಾಗಲು ಸಾಧ್ಯ. ಇವತ್ತು ನಮಗೆ ಅಂಥ ಪರಮಸುಖ ಬೇಕೆಂದರೆ ಸರಳ ಜೀವನ ನಡೆಸಬೇಕು. ಸರಳತೆ ಬಿಟ್ಟು ಆಡಂಬರಕ್ಕೆ ಅಂಟಿಕೊಂಡರೆ ಸಂಗ್ರಹ ಬುದ್ಧಿ ಜಾಸ್ತಿಯಾಗುವುದು. ನಮ್ಮಲ್ಲಿರುವುದನ್ನು ಇನ್ನೊಬ್ಬರಿಗೆ ಕೊಡಬೇಕೆಂಬ ಮನಸ್ಥಿತಿಯೂ ಬರುವುದಿಲ್ಲ. ನಾವು ಊಟ ಮಾಡುವಾಗ ಹಸಿದವನೊಬ್ಬ ಬಂದು ಅನ್ನ ಬೇಡುವನು. ಅವನಿಗೆ ತುತ್ತು ಅನ್ನ ಕೊಟ್ಟರೆ ನಮಗೇನೂ ಕಡಿಮೆ ಆಗುವುದಿಲ್ಲ. ಆದರೆ ಅವನಿಗೆ ಕೊಡಬೇಕೆಂಬ ಮನಸ್ಸು ಬರುವುದಿಲ್ಲ. ಅದಕ್ಕಾಗಿ ಬಸವಣ್ಣನವರು ಕಾಗೆ, ಕೋಳಿಗಳ ಉದಾಹರಣೆ ಕೊಡುತ್ತಾರೆ.
ಕಾಗೆ ಒಂದಗುಳ ಕಂಡಡೆ ಕರೆಯದೆ ತನ್ನ ಬಳಗವನು
ಕೋಳಿ ಒಂದು ಕುಟುಕ ಕಂಡಡೆ ಕೂಗಿ ಕರೆಯದೆ ತನ್ನ ಕುಲವನೆಲ್ಲವ
ಶಿವಭಕ್ತನಾಗಿ ಭಕ್ತಿಪಕ್ಷವಿಲ್ಲದಿದ್ದಡೆ ಕಾಗೆ ಕೋಳಿಗಿಂತ ಕರಕಷ್ಟ
ಕೂಡಲಸಂಗಮದೇವಾ.
ಎಲ್ಲಾದರೂ ಆಹಾರ ಕಂಡ ಕಾಗೆ ತಾನೊಂದೇ ತಿನ್ನುವುದಿಲ್ಲ. ಕಾ ಕಾ ಎಂದು ಕೂಗಿ ತನ್ನ ಸಮೂಹವನ್ನು ಕರೆದು ಹಂಚಿಕೊಂಡು ತಿನ್ನುವುದು. ಕೋಳಿಯೂ ಅಷ್ಟೇ. ಆದರೆ ಮನುಷ್ಯ? ಎದುರಿಗೆ ಬಿದ್ದಿರುವ ಹತ್ತು ರೂಪಾಯಿ ತಮ್ಮದಲ್ಲ ಎಂದು ಗೊತ್ತು. ಆದರೂ ಉಪಾಯವಾಗಿ ಅದನ್ನು ಎತ್ತಿಕೊಂಡು ಜೇಬಿಗಿಳಿಸಿಕೊಳ್ಳುವರು. ದುರಾಸೆ ಮನುಷ್ಯನನ್ನು ವಿನಾಶದೆಡೆ ತಳ್ಳುವುದೇ ಹೊರತು ವಿಕಾಸದ ಮಾರ್ಗ ತೋರಿಸುವುದಿಲ್ಲ. ಕಾಗೆ, ಕೋಳಿಗಳು ಸಹ `ಸಹನಾವವತು, ಸಹನೌ ಭುನಕ್ತು, ಸಹವೀರ್ಯಮ್ ಕರವಾವ ಹೈ, ತೇಜಸ್ವಿ ನಾವಧೀತಮಸ್ತು, ಮಾ ವಿದ್ವಿಷಾವ ಹೈ’ ಎನ್ನುವ ತತ್ವವನ್ನು ಪಾಲಿಸುವವು. ಅಂದರೆ ಕೂಡಿ ಊಟ ಮಾಡೋಣ. ಕೂಡಿ ಜೀವನ ಮಾಡೋಣ, ಕೂಡಿ ಬಾಳೋಣ ಎನ್ನುವ ತತ್ವವನ್ನು ಮೈಗೂಡಿಸಿಕೊಂಡಾಗ ನಾವು ಶಾಂತಿ, ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯ. ಅದೇ ನಿಜವಾದ ಧರ್ಮ. ಕೋಳಿಯೊಂದು ತಿಪ್ಪೆಯನ್ನು ಕೆದರುತ್ತಾ ಕಾಳಿಗಾಗಿ ಹುಡುಕುವುದು. ಆಕಸ್ಮಿಕವಾಗಿ ಅದಕ್ಕೆ ಒಂದು ಮುತ್ತು ಸಿಗುವುದು. ಅದನ್ನು ಜೋಳದ ಕಾಳೆಂದು ಕುಕ್ಕುವುದು. ಅದು ಕಾಳಲ್ಲವೆಂದು ತಿಳಿದಾಗ ಅದನ್ನು ಮೂತಿಯಿಂದ ದೂರ ತಳ್ಳಿ ಕಾಳಿಗಾಗಿ ಹುಡುಕಾಟ ನಡೆಸುವುದು. ಅದೇ ಮುತ್ತು ಮನುಷ್ಯನಿಗೆ ಸಿಕ್ಕಿದ್ದರೆ? ಆಗ ಅವನಿಗೆ ಹೊಟ್ಟೆ ಹಸಿದಿದ್ದರೂ ಆಹಾರ ಬೇಕಾಗುವುದಿಲ್ಲ. ಮುತ್ತು ರತ್ನಗಳು ಸಿಕ್ಕವೆಂದು ಖುಷಿಪಡುವನು. ಮನುಷ್ಯನ ಜೀವನಕ್ಕೂ, ಕೋಳಿಯ ಜೀವನಕ್ಕೂ ಇರುವ ಅಂತರವನ್ನು ಗಮನಿಸಬೇಕು. ಕೋಳಿಗೆ ಆಹಾರ ಸಿಕ್ಕಾಗ ಮಾತ್ರ ಸಂತೋಷ; ಮುತ್ತು ರತ್ನಗಳು ಸಿಕ್ಕಾಗ ಅಲ್ಲ. ಆದರೆ ಮನುಷ್ಯ ಆಹಾರಕ್ಕಿಂತ ಮುತ್ತು ರತ್ನಗಳನ್ನು ಸಂಪಾದನೆ ಮಾಡುವಲ್ಲೇ ಹೆಚ್ಚು ಶ್ರಮ ಹಾಕುವನು. ಇದರಿಂದ ಅವನು ತನ್ನ ಸುಖವನ್ನೂ ಕಳೆದುಕೊಂಡು ಧರ್ಮದಿಂದ ದೂರವಾಗಿ ಅಧರ್ಮದ ಮಾರ್ಗದಲ್ಲಿ ಸಾಗುವನು. ಹೀಗೆ ಮನುಷ್ಯ ನಡೆಯಬಾರದು ಎನ್ನುವುದೇ ಎಲ್ಲ ಶರಣರ ಅಭಿಲಾಷೆ. ಮನುಷ್ಯ ಸಂಪತ್ತಿನ ಸಂಪಾದನೆಯ ಹುಚ್ಚಿನಲ್ಲಿ ಮತ್ತೊಬ್ಬರನ್ನು ಪ್ರೀತಿಸುವ ಹೃದಯವಂತಿಕೆಯನ್ನೇ ಕಳೆದುಕೊಳ್ಳುವನು. ಜನರಿಂದ ದೂರವಾಗಿ ಒಂಟಿಯಾಗುವನು. ಈ ನೆಲೆಯಲ್ಲಿ ಬಸವಣ್ಣನವರ ಪ್ರಾರ್ಥನೆ:
ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ.
ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ.
ಕೂಡಲಸಂಗಮದೇವಾ
ನಿಮ್ಮ ಮನೆಯ ಮಗನೆಂದೆನಿಸಯ್ಯಾ.
ಶರಣರ ಪ್ರಾರ್ಥನೆಗೂ, ಸಾಮಾನ್ಯರ ಪ್ರಾರ್ಥನೆಗೂ ತುಂಬಾ ಅಂತರವಿದೆ. ಶರಣರು ಪ್ರಾರ್ಥಿಸುವುದು ದೇವರೆ ನನ್ನನ್ನು ನಿಮ್ಮ ಮನೆಯ ಮಗನೆಂದು ಸಲಹು. ಜನರಿಂದ ಇವನಾರು, ಇವನಾರು ಎಂದು ದೂರ ಮಾಡಬೇಡ. ಜಾತಿಯಿಂದ ಯಾರೂ ನನ್ನನ್ನು ನೋಡದೆ ನಾನು ಶಿವನ ಮಗ ಎನ್ನುವಂತಾಗಬೇಕು. ಈ ಭಾವ ಬಲಗೊಂಡಾಗ ವ್ಯಕ್ತಿ ಶಕ್ತಿಯನ್ನು ಪಡೆದುಕೊಳ್ಳಲು ಸಾಧ್ಯ. ಇಲ್ಲವಾದರೆ ಸುಖದ ಭ್ರಮೆಯಲ್ಲಿ ದುಃಖದ ದಳ್ಳುರಿಯಲ್ಲಿ ನೋವನ್ನುನುಭವಿಸುವ ಸ್ಥಿತಿ ಬರುವುದು. ಅದಕ್ಕಾಗಿ ಪ್ರಭುದೇವರು `ಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ ನೋಡಾ’ ಎನ್ನುವರು. ಸುಖ ಸಾಸುವೆ ಕಾಳಿನಷ್ಟು. ದುಃಖ! ಸಾಗರದಷ್ಟು. ಸಾಗರದಷ್ಟು ದುಃಖಕ್ಕೆ ಕಾರಣ ಬೇರೆಯವರಲ್ಲ; ನಾವೇ. ದುಃಖಕ್ಕೆ ಕಾರಣ ಆಸೆ. ಅದನ್ನೇ ಬುದ್ಧ `ಆಸೆಯೇ ದುಃಖದ ಮೂಲ’ ಎಂದು ಹೇಳಿದ್ದು. ಅದನ್ನು ಸ್ವಲ್ಪ ಪರಿಷ್ಕಾರ ಮಾಡುವುದಾದರೆ; ಮನುಷ್ಯನಿಗೆ ಆಸೆ ಬೇಕೇ ಬೇಕು. ಆಸೆಯೇ ಬದುಕಿನ ಬಂಡವಾಳ. ಆಸೆ ಇಲ್ಲದಿದ್ದರೆ ಬದುಕಲು ಸಾಧ್ಯವಿಲ್ಲ. ಆದರೆ ಅದು ದುರಾಸೆಯಾಗದಂತೆ ಎಚ್ಚರವಹಿಸಬೇಕು. ದುರಾಸೆ ದುಃಖಕ್ಕೆ ಕಾರಣವಾಗುವುದು. ಆದುದರಿಂದ ಮನುಷ್ಯ ದುರಾಸೆಯಿಂದ ಮುಕ್ತನಾಗಿ ಇದ್ದುದರಲ್ಲೇ ತೃಪ್ತಿಪಡುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಆಗ ಅವನ ಬದುಕು ಧರ್ಮದ ದಾರಿಯಲ್ಲಿ ಸಾಗಿದಂತೆ. ಧರ್ಮವನ್ನು ಬಿಟ್ಟರೆ ಆತ ಕೆಟ್ಟನೆಂದೇ ಅರ್ಥ. ಇವತ್ತು ಬಹುತೇಕ ಜನರು ಧರ್ಮ ಯಾಕೆ ಬೇಕು? ದೇವರು ಯಾಕೆ ಬೇಕು? ಗುರುಗಳು ಯಾಕೆ ಬೇಕು ಎಂದು ಪ್ರಶ್ನೆ ಮಾಡುವರು. ಅಂಥವರು ತಾವು ಬಂಡಾಯದವರು, ವಿಚಾರವಂತರು, ಎಡಪಂಥೀಯರು, ಹೋರಾಟಗಾರರು ಎಂದೆಲ್ಲ ಕರೆದುಕೊಳ್ಳುವರು. ಬಂಡಾಯ, ವಿಚಾರ, ಹೋರಾಟ ಇವೆಲ್ಲ ಬೇಕು. ಇವುಗಳ ಜೊತೆಗೆ ಆಚಾರವೂ ಬೇಕು. ವಿಚಾರವಿಲ್ಲದ ಆಚಾರ, ಆಚಾರವಿಲ್ಲದ ವಿಚಾರ ಕುರುಡ, ಕುಂಟರ ಸಂಬಂಧವಿದ್ದಂತೆ. ಅವೆರಡರ ಸಂಗಮ ಆಗಬೇಕು. ಇಂದು ಅಂಥ ಸಂಗಮ ಕಾಣುತ್ತಿಲ್ಲ. ಒಂದೆಡೆ ಪ್ರಖರ ವಿಚಾರವಂತರಾಗಿ ಅದನ್ನೇ ಸಮಾಜಕ್ಕೆ ಬೋಧನೆ ಮಾಡುವರು. ಅಂಥವರಲ್ಲಿ ಹಲವರ ವ್ಯಕ್ತಿಗತ ಬದುಕನ್ನು ಗಮನಿಸಿದರೆ ಅಲ್ಲಿ ಸತ್ಯ, ನ್ಯಾಯ, ನೀತಿ ಯಾವುದೂ ಇರುವುದಿಲ್ಲ. ಹಲವಾರು ದುರಭ್ಯಾಸಗಳ ದಾಸರಾಗಿರುತ್ತಾರೆ. ಇದರ ಬದಲು ಆಚಾರ ವಿಚಾರಗಳ ಸಂಗಮವಾದಾಗ ಮಾತ್ರ ವ್ಯಕ್ತಿ ಧರ್ಮದ ಮಾರ್ಗದಲ್ಲಿ ಸಾಗಲು ಸಾಧ್ಯ. ಆಚಾರವೇ ಒಂದು, ವಿಚಾರವೇ ಮತ್ತೊಂದು ಆದಾಗ ಅವನೆಂದೂ ಧರ್ಮದ ದಾರಿಯಲ್ಲಿ ಸಾಗಲು ಸಾಧ್ಯವಿಲ್ಲ. ನಮ್ಮ ಸುತ್ತ ಇರುವ ಪರಿಸರ ನೋಡಿ. ಅಲ್ಲಿ ಆಚಾರಕ್ಕೆ ಮಹತ್ವವೇ ಹೊರತು ವಿಚಾರಕ್ಕಲ್ಲ. ಹಾಗಾಗಿ ಪರಿಸರ ಕೂಡ ಧರ್ಮವನ್ನು ಹೇಳಿಕೊಡುವುದು. ಮನುಷ್ಯನು ಪರಿಸರದಿಂದ ಧರ್ಮವನ್ನು ಅರ್ಥ ಮಾಡಿಕೊಂಡು ತನ್ನ ಬದುಕನ್ನು ಪ್ರಾಮಾಣಿಕವಾಗಿ ನಡೆಸಿ ಎತ್ತರಕ್ಕೇರುವ ಕೆಲಸವನ್ನು ಮಾಡಬೇಕಾಗಿದೆ.
Comments 13
Karibasappa hanchinamani
Sep 7, 2019ಧರ್ಮದ ಅಗತ್ಯವನ್ನು ಸರಳ ಮಾತುಗಳಲ್ಲಿ ತಿಳಿಸಿಕೊಟ್ಟ ಸ್ವಾಮಿಗಳ ಪಾದಗಳಲ್ಲಿ ಶರಣು. ಬಸವಣ್ಣನವರು ಪಶ್ಚಾತ್ತಾಪದ ಮಾರ್ಗ ಸೂಚಿಸಿದ್ದು, ಅದನ್ನು ನಾವಿಂದು ಅನುಸರಿಸಬೇಕಾಗಿದೆ.
shobhadevi
Sep 7, 2019ಧರ್ಮದ ನೆಲೆಯಲ್ಲಿನ ಬದುಕು ಸುಂದರವಾಗಿರುತ್ತದೆ. ಲೇಖನ ಚೆ್ನ್ನಾಗಿದೆ.
gangadhara Navale
Sep 8, 2019ಪಶ್ಚಾತ್ತಾಪ ಮತ್ತು ಪ್ರಾಯಶ್ಚಿತ್ತದ ವ್ಯತ್ಯಾಸಗಳನ್ನು ತುಂಬಾ ಜನರು ಕನಫ್ಯೂಸ್ ಮಾಡಿಕೊಂಡಿದ್ದಾರೆ. ಅವರುಗಳ ಅಂತರವನ್ನು ಬಿಡಿಸಿ ತೋರಿಸಿದ ಪೂಜ್ಯರಿಗೆ ಶರಣುಗಳು.
girijaprasad
Sep 9, 2019ಶರಣರ ಪ್ರಾರ್ಥನೆ ನಿಸ್ವಾರ್ಥದಿಂದ ಕೂಡಿದ್ದರೆ, ಸಾಮಾನ್ಯರ ಪ್ರಾರ್ಥನೆ ಬೇಡಿಕೆಗಳ ಲಿಸ್ಟ್ ನಿಂದ ಕೂಡಿರುತ್ತದೆ. ಉತ್ತಮ ಲೇಖನ.
ಗುರುಬಸಪ್ಪ ಕಾರಟಗಿ
Sep 10, 2019ಎಡಪಂಥೀಯರನ್ನು ಕೇವಲ ಬಂಡಾಯಗಾರರೆನ್ನುವುದು ಅಷ್ಟು ಸರಿಯಲ್ಲ. ಅವರಿಗೆ ಸಮಾಜದ ಮೇಲೆ ನಿಜವಾದ ಕಳಕಳಿ ಇರುತ್ತದೆ. ಬಲಪಂಥೀಯರ ಮತೀಯ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಇವರಿಂದಲೇ ಸಾಧ್ಯ. ಜೊತೆಗೆ ಇವರದು ಮಾನವೀಯ ಹೋರಾಟ.
Vijayashree S
Sep 12, 2019ದಿಕ್ಕು ತಪ್ಪಿಸುವ ಕರ್ಮಾಚರಣೆಗಳನ್ನು ಶರಣರು ತಿರಸ್ಕರಿಸಿದರು ಎಂಬ ನಿಮ್ಮ ವಾಕ್ಯ ಅಕ್ಷರಶ ಸತ್ಯ. ಆದರೆ ಲಿಂಗಾಯತರೂ ಎಲ್ಲ ಬಗೆಯ ಕರ್ಮಾಚರಣೆಗಳನ್ನು ಮಾಡುತ್ತಾರೆ. ಜಾತಿ ಭೇದ ತೋರಿಸುತ್ತಾರೆ. ಎಂತೆಂಥ ಶ್ರೀಮಂತರ ಮನೆಯಲ್ಲಿ ಸತ್ಯನಾರಾಯಣ ವ್ರತಗಳನ್ನು ಮಾಡುವುದನ್ನ ನೋಡಿದ್ದೇನೆ. ಈ ಧರ್ಮದಲ್ಲಿ ಯಾಕೆ ಮೂಲ ಪಾಟಗಳನ್ನ ಜನ ಮರೆತುಬಿಟ್ಟಿದ್ದಾರೆ?
Kiran Varad
Sep 12, 2019ಗುರುಗಳೆ, ಮತ್ತೆ ಕಲ್ಯಾಣ ಚಳುವಳಿ ತನ್ನ ಗುರಿಯನ್ನು ಸಾಧಿಸಿತೆ? ಕಾರ್ಯಕ್ರಮದಲ್ಲಿ ತಾವು ಕಂಡುಕೊಂಡ ಅನುಭವ ಹೇಗಿತ್ತು? ಸಾಧ್ಯವಾದರೆ ಆ ಕುರಿತು ಬರೆಯಿರಿ. ಸಮಾಜ ಎಲ್ಲಿದೆ. ಶರಣರ ಗುರಿಗಳು ಎಲ್ಲಿವೆ- ಎಂದಾದರೂ ಇವೆಲ್ಲಾ ಒಂದಾಗಲು ಸಾಧ್ಯವೆ?
Satish J.P
Sep 15, 2019ಧರ್ಮ ಕರ್ಮಗಳು ಒಂದಾಗಿ ಹೋಗಿರುವುದರಿಂದ ಧರ್ಮದಲ್ಲಿ ದಯೆ ಮಾಯವಾಗಿ ಭಯ ತುಂಬಿಹೋಗಿದೆ. ಸಮಾಜ ಧರ್ಮದ ಹೆಸರಿನಲ್ಲಿ ಅಶಾಂತಿಗೆ ಒಳಗಾಗಿದೆ. ಈಗಲೂ ನಮಗೆ ಧರ್ಮ ಬೇಕಾ? ನನ್ನದು ಮೇಲು ನಿನ್ನದಕ್ಕಿಂತ ನನ್ನದು ಶ್ರೇಷ್ಠ ಎನ್ನುವ ಧರ್ಮಗಳು ಬೇಕಾ?
Shabkarappa Bannuru
Sep 16, 2019ಪೂಜ್ಯರಿಗೆ ಶರಣುಗಳು. ತಮ್ಮ ಲೇಖನಗಳು ಸಹಜ ಮಾತುಗಳಂತೆ ನೇರವಾಗಿ ಇರುತ್ತವೆ. ನಮ್ಮ ಅನೇಕ ಸಂಶಯಗಳಿಗೆ ಅಲ್ಲಿ ಪರಿಹಾರಗಳು ಕಾಣುತ್ತವೆ. ನಿಮ್ಮ ಮಾರ್ಗದರ್ಶನ ಮುಖ್ಯವಾಗಿ ಯುವಜನರಿಗೆ ಅವಶ್ಯವಾಗಿದೆ.
ಬಸನಗೌಡ ಧಾರವಾಡ
Sep 18, 2019ಧರ್ಮ, ದಯೆ, ಪ್ರೀತಿ, ನೀತಿ, ಸತ್ಯ, ಸಹಬಾಳುವೆ ಇಂಥ ಗುಣಗಳನ್ನು ಬೆಳೆಸುವ ಧರ್ಮ ನಮಗೆ ಬೇಕು. ಆದರೆ ವಾಸ್ತವದಲ್ಲಿ ಇವು ಸಾಧ್ಯವಾಗುವಂತಹ ಕನಸುಗಳೇ? ಸಮಸ್ಯೆ ನಮ್ಮಲ್ಲಿಯೇ ಇದೆ, ಧರ್ಮದಲ್ಲಿ ಅಲ್ಲ. ನೀತಿಗಳ ಆಧಾರಿತ ಧರ್ಮದ ಅಗತ್ಯದ ಬಗ್ಗೆ ಸುಂದರವಾದ ಲೇಖನ.
Jahnavi Naik
Sep 22, 2019ಆಚಾರ, ವಿಚಾರಗಳು ಜೊತೆಯಾಗುವುದೇ ಧರ್ಮದ ದಾರಿ ಎನ್ನುವ ಸ್ವಾಮಿಗಳ ಮಾತು ಸತ್ಯ.
nagegowda
Sep 25, 2019ಮತ್ತೆ ಕಲ್ಯಾಣದ ಯಶಸ್ವಿ ಕಾರ್ಯಕ್ರಮವನ್ನು ಕೊಟ್ಟ ಶ್ರೀಗಳವರಲ್ಲಿ ಶರಣುಗಳು. ನಿಮ್ಮ ಲೇಖನಗಳು ಬದುಕಿನ ದಾರಿ ತೋರಿಸುತ್ತವೆ
vishwanatha.G.M
Sep 28, 2019ಆಸೆಯನ್ನು ಬಿಟ್ಟವನು ಈಶ. ಆಸೆಗಳನ್ನು ಬಿಡುವುದು ಹೇಗೆ? ಎಲ್ಲಾ ಧರ್ಮಗಳಲ್ಲಿಯೂ ನೀತಿಬೋಧೆಗಳಿವೆ. ಆದರೆ ಅವುಗಳ ಆಚರಣೆಯ ತೊಡಕುಗಳ ಕುರಿತು, ವಾಸ್ತವದಲ್ಲಿ ಅವುಗಳ ಆಚರಣೆಯ ಸಮಸ್ಯೆಗಳ ಕುರಿತು ಬರೆದಿದ್ದರೆ ಚನ್ನಾಗಿತ್ತು.