ದೇವರು: ಶರಣರು ಕಂಡಂತೆ
ದೇವರು ಎಂಬ ಶಬ್ದ ಅನೇಕರಲ್ಲಿ ಅನೇಕ ರೀತಿಯ ಭಾವನೆಗಳನ್ನು ಮೂಡಿಸುವುದು. ಕೆಲವರಿಗೆ ದೇವರೆಂದರೆ ಭಯ, ಕೆಲವರಿಗೆ ಪ್ರೀತಿ, ಕೆಲವರಿಗೆ ಭಕ್ತಿ. ಆಸ್ತಿಕರ ಪ್ರಕಾರ ದೇವರೆಂದರೆ ಈ ಜಗತ್ತನ್ನು ಸೃಷ್ಟಿಮಾಡಿ, ಅದನ್ನು ನಿಯಾಮಕವಾಗಿ ನಡೆಸಿ ಕೊನೆಯಲ್ಲಿ ಲಯ ಮಾಡುವ ದಿವ್ಯಶಕ್ತಿ. ಮನುಷ್ಯನಲ್ಲಿ ದೇವರ ಬಗ್ಗೆ ಭಯ, ಭಕ್ತಿ ಮತ್ತು ಪ್ರೀತಿಗಳು ಹುಟ್ಟಲು ಹಲವು ವಿಚಾರಗಳು ಕಾರಣೀಭೂತವಾಗುವವು. ಬೇಡಿದ್ದನ್ನು ನೀಡುವ ಅಭಯದಾತ ಎಂಬ ಕಲ್ಪನೆ ಹಲವರದ್ದಾದರೆ, ಇನ್ನೂ ಕೆಲವರದ್ದು ದೇವರನ್ನು ಪೂಜಿಸದಿದ್ದರೆ ಕೋಪಗೊಂಡು ಕೆಡುಕು ಮಾಡುವಾತ. ಒಟ್ಟಿನಲ್ಲಿ ಎಲ್ಲರೂ ದೇವರನ್ನು ಬೇಡುವವರೇ!
ಕೆಲವರು ದೇವರನ್ನು ಪ್ರಕೃತಿಯ ವಿವಿಧ ರೂಪಗಳಾದ ನದಿ, ಅರಣ್ಯ, ಪಶು, ಪಕ್ಷಿ, ಮತ್ಸ್ಯ, ಮಾನವ, ವಾಯು, ಭೂಮಿ, ಅಗ್ನಿ, ಆಕಾಶ ಇತ್ಯಾದಿ ರೂಪಗಳಲ್ಲಿ ತಮತಮಗೆ ತಿಳಿದ ಮಾರ್ಗಗಳಲ್ಲಿ ಪೂಜಿಸಿದರೆ ಇನ್ನೂ ಕೆಲವರು ಅನೇಕ ಅವಾಸ್ತವ ರೂಪಗಳನ್ನು ತಮ್ಮ ಬುದ್ಧಿಯ ಮಿತಿಗೆ ನಿಲುಕುವ ರೀತಿ ಸೃಷ್ಟಿಸಿಕೊಂಡು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ನಿರಂತರವಾಗಿ ಆರಾಧಿಸಿಕೊಂಡು ಬರುತ್ತಿದ್ದಾರೆ.
ಸೃಷ್ಟಿಯ ಮುಕುಟ ಮಾನವ. ಯಾವ ಜೀವಿಗಳಲ್ಲೂ ಇರದ ಚಿಂತನಾ ಶಕ್ತಿ ಅವನ(ಳ)ಲ್ಲಿದೆ. ಅದಕ್ಕೆ ತಕ್ಕಂತೆ ಕ್ರಿಯಾಶೀಲತೆಯೂ ಇದೆ. ಅದ್ಭುತ ಚಿಂತನಾ ಶಕ್ತಿ ಮತ್ತು ಕ್ರಿಯಾಶೀಲತೆಗಳನ್ನು ಮಾನವ ಸರ್ವಜೀವಿಗಳ ಏಳ್ಗೆಗಾಗಿ ಬಳಸಬಹುದಾಗಿತ್ತು. ಆದರೆ ಮಾನವ ಹೆಚ್ಚು ಸ್ವಾರ್ಥಿಯಾಗಿ ಎಲ್ಲವನ್ನೂ ಕಬಳಿಸಿ ತಾನೊಬ್ಬನೇ ಬದುಕಬೇಕೆಂಬ ಕೆಟ್ಟ ಆಲೋಚನೆ ಹೊಂದಿ ಇಡೀ ಜಗತ್ತನ್ನು ಸರ್ವನಾಶ ಮಾಡುವತ್ತ ಹೆಜ್ಜೆ ಹಾಕುತ್ತಿದ್ದಾನೆ. ಇದಕ್ಕಾಗಿ ದೇವರೆಂಬ ಭಾವವನ್ನೂ ತನ್ನ ಪ್ರಲೋಭನೆಗಳನ್ನು ಪೂರೈಸುವ ಶಕ್ತಿಯಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ವಿವೇಕಿಯಾಗಿ ಬದುಕಬೇಕಾಗಿದ್ದ ಮಾನವ ಅವಿವೇಕಿಯಾಗಿ ಕಲ್ಪಿತ ದೇವರುಗಳ ಬೆನ್ನುಬಿದ್ದು ಅನೇಕ ಜಂಜಡಗಳ ಸುಳಿಯೊಳಗೆ ಸಿಲುಕಿದ್ದಾನೆ. ತಾನೇ ಸೃಷ್ಟಿಸಿದ ದೇವತೆಗಳಿಗೆ ಕಾಣಿಕೆ ರೂಪದಲ್ಲಿ ಲಂಚ ಕೊಟ್ಟು ತನ್ನ ಕೆಲಸಮಾಡಿಸಿಕೊಳ್ಳಬಲ್ಲೆ ಎಂದು ಬಗೆದಿದ್ದಾನೆ!
ದೇವರೆಂಬುದು ಸುಳ್ಳೇ? ದೇವರ ಅಸ್ತಿತ್ವವೇ ಇಲ್ಲವೇ? ಇದ್ದರೆ ಯಾವ ರೂಪದಲ್ಲಿದೆ? ದೇವರಿಗೆ ನಮ್ಮ ಪೂಜೆ ಬೇಕೆ? ದೇವರನ್ನು ಪೂಜಿಸುವುದು, ಆರಾಧಿಸುವುದಾದರೆ ಹೇಗೆ? ಬೇಡುವುದಾದರೆ ಏನನ್ನು? ಮುಂತಾದ ಪ್ರಶ್ನೆಗಳು ಧುತ್ತನೆ ನಮ್ಮೆದುರು ನಿಲ್ಲುವುವು. ಇವೆಲ್ಲಕ್ಕೂ ಉತ್ತರ ಅರಸುತ್ತ ಹೊರಟರೆ ನಮ್ಮ ಪುರಾತರ, ಶರಣರ ವಚನಗಳಲ್ಲಿ ನಿಖರ ಉತ್ತರ ಸಿಗುವುದರಲ್ಲಿ ಅನುಮಾನವಿಲ್ಲ.
ಬಸವ ಪೂರ್ವದವರೆಗೂ ದೇವರ ಕುರಿತು ಒಂದು ಸ್ಪಷ್ಟತೆ ಇರಲಿಲ್ಲ. ಅಂದಿನ ಮೇಲ್ವರ್ಗದ ಜನ ಗಂಗೆ-ಗೌರಿ ಸಮೇತನಾದ ಶಿವ, ಲಕ್ಷ್ಮಿ-ವಿಷ್ಣು, ಸೀತಾ-ರಾಮ, ರಾಧಾ-ಕೃಷ್ಣ ಮುಂತಾದ ಪೌರಾಣಿಕ ವ್ಯಕ್ತಿಗಳನ್ನು ದೇವರೆಂದು ಪೂಜಿಸಿದರೆ, ನಿಮ್ನ ವರ್ಗದವರು ಕಾಳಿ, ಬೀರ, ಕರಿಯಮ್ಮ, ಮಾರಮ್ಮ ಎಂಬಿತ್ಯಾದಿ ಕಲ್ಪಿತಗಳನ್ನು ಆರಾಧಿಸುತ್ತಿದ್ದರು. ಅಷ್ಟೇ ಅಲ್ಲ, ಅಂದು ಉಚ್ಛವರ್ಗದ ಸ್ತ್ರೀಯರನ್ನೂ ಶೂದ್ರರೆಂದು ಬಗೆದು ಅವರು ಪರಮಾತ್ಮ ಪೂಜೆಗಾಗಲೀ ಮೋಕ್ಷಕ್ಕಾಗಲೀ ಅರ್ಹರಲ್ಲವೆಂದು ತುಳಿಯಲಾಗಿತ್ತು. ಯಜ್ಞ ಯಾಗಾದಿಗಳಲ್ಲಿ, ದೇವಗುಡಿಗಳಲ್ಲಿ ಪ್ರಾಣಿಬಲಿ ಸಾಮಾನ್ಯವಾಗಿತ್ತು. ಇಂಥ ಅನಾಚಾರಗಳಿಗೆ, ಮೌಢ್ಯಗಳಿಗೆ ಬಸವಣ್ಣನವರು ಸೂಕ್ತ ಉತ್ತರ ನೀಡಿದ್ದಾರೆ.
ಹಾಳು ಮೊರಡಿಗಳಲ್ಲಿ ಊರ ದಾರಿಗಳಲ್ಲಿ ಕೆರೆ ಬಾವಿ ಹೂಗಿಡು ಮರಂಗಳಲ್ಲಿ ಗ್ರಾಮಮಧ್ಯಂಗಳಲ್���ಿ ಜಲಪಥ ಪಟ್ಟಣಪ್ರವೇಶದಲ್ಲಿ ಹಿರಿಯಾಲದ ಮರದಲ್ಲಿ ಮನೆಯ ಮಾಡಿ, ಕರೆವೆಮ್ಮೆಯ ಹಸುಗೂಸು ಬಸುರಿ ಬಾಣಂತಿ ಕುಮಾರಿ ಕೊಡಗೂಸು ಎಂಬವರ ಹಿಡಿದುಂಬ ತಿರಿದುಂಬ ಮಾರಯ್ಯ ಬೀರಯ್ಯ ಕೇಚರಗಾವಿಲ ಅಂತರಬೆಂತರ ಕಾಳಯ್ಯ ಮಾರಯ್ಯ ಮಾಳಯ್ಯ ಕೇತಯ್ಯಗಳೆಂಬ ನೂರು ಮಡಕೆಗೆ ನಮ್ಮ ಕೂಡಲಸಂಗಮದೇವ ಶರಣೆಂಬುದೊಂದೆ ದಡಿ ಸಾಲದೆ– ಎಂದು ಕಪೋಲ ಕಲ್ಪಿತ ದೇವತೆಗಳನ್ನು ತಿರಸ್ಕರಿಸಿ ಇವಾವೂ ದೇವರಲ್ಲ, ಅವು ದೇವರೆನಿಸಿಕೊಳ್ಳಲು ಅರ್ಹವಲ್ಲ. ಏಕೆಂದರೆ ಭಕ್ತರಿಂದ ತಿರಿದು ಉಣ್ಣುವ ದೇವತೆಗಳು ಮಾನವನಿಗೇನು ಕೊಡಬಲ್ಲವು ಎಂದು ಸಾರಾಸಗಟಾಗಿ ಅವುಗಳನ್ನೆಲ್ಲ ಸಮಾಜದಿಂದ ಗುಡಿಸಿ ಹೊರಹಾಕುತ್ತಾರೆ.
ದೇವರ ವ್ಯಾಪ್ತಿ ಅನೂಹ್ಯ, ವಿಸ್ತೀರ್ಣ ಅನುಪಮ, ಅದರ ಇರುವಿಕೆಯನ್ನು ಗ್ರಹಿಸುವುದು ನಮ್ಮ ಬುದ್ಧಿಶಕ್ತಿಗೆ ನಿಲುಕದ್ದು ಹಾಗೂ ಅದನ್ನು ಯಾವುದೇ ರೀತಿಯಲ್ಲೂ ಒಂದು ಪ್ರತಿಮೆಯನ್ನಾಗಿ ರೂಪಿಸಲು ಸಾಧ್ಯವಿಲ್ಲ. ಒಂದು ವೇಳೆ ದೇವರಿಗೊಂದು ರೂಪ ಕೊಡಲು ಪ್ರಯತ್ನಿಸಿದ್ದೇ ಆದರೆ ಅದು ಅದರ ಅಖಂಡತೆಗೆ ಭಂಗ ತರಲು ಯತ್ನಿಸಿದಂತೆಯೇ ಸರಿ, ದೇವರು ಪ್ರತಿಮಾಡಲಾಗದ ಅಪ್ರತಿಮ ಎಂದು ಬಸವಣ್ಣನವರು ದೇವರ ಸ್ವರೂಪವನ್ನು ಸೂಕ್ಷ್ಮವಾಗಿ ತಿಳಿಸುತ್ತಾರೆ: ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ, ಪಾತಾಳದಿಂದತ್ತತ್ತ ನಿಮ್ಮ ಶ್ರೀಚರಣ, ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮಕುಟ, ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ, ಕೂಡಲಸಂಗಮದೇವಯ್ಯಾ, ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ.
ಮಾನವ ನಿರ್ಮಿತ ಕೃತಕ ದೇವತೆಗಳನ್ನು ಮತ್ತು ಮನುಷ್ಯ ಅವುಗಳನ್ನು ಆರಾಧಿಸುವ ಅಜ್ಞಾನದ ಪರಮಾವಧಿಯನ್ನು ಕಂಡ ಗಣಾಚಾರಿ ಮಾಚಿದೇವರು ಹೇಳುತ್ತಾರೆ: ದೇವನೊಬ್ಬನೆ ಜಗವ ಕಾವಾತ, ಕೊಲುವಾತ. ದೇವರು ಮುನಿದಡೆ ಮರಳಿ ಕಾವರುಂಟೆ? ಈ ಸಾವಿಗೊಳಗಾಗಿ ಹೋಹ ಸಮಸ್ತ ದೈವಂಗಳು, ಮಹಾದೇವನ ಸರಿಯೆಂದು ಆರಾಧಿಸಿ, ಅಚಲಿತ ಪದವಿಯ ಬೇಡುವ ಈರೇಳು ಜಾತಿಗಳಿಗೆ, ಆವಾವ ಕಾಲದಲ್ಲಿ ನರಕ ತಪ್ಪದೆಂದ, ಕಲಿದೇವಯ್ಯ. ಮಾನವನು ತಪ್ಪು ಗ್ರಹಿಕೆಯಿಂದ ಇಲ್ಲದ ದೇವತೆಗಳನ್ನು ಉಂಟೆಂದು ಭ್ರಮಿಸಿ ಅನೇಕ ಕಲ್ಪಿತ ದೇವತೆಗಳ ವಿಗ್ರಹಗಳನ್ನು ನಿರ್ಮಿಸಿ, ಸತ್ತು ಹೋದವರನ್ನು ಮೂರ್ತಿ ಮಾಡಿ ಅವರನ್ನು ದೇವರೆಂದು ಕಥೆ ಕಟ್ಟಿ, ಪೂಜಾರಿಯ ಮಧ್ಯಸ್ಥಿಕೆಯಲ್ಲಿ ಆರಾಧಿಸಿ ತನ್ನ ಇಷ್ಟಾರ್ಥಗಳನ್ನು ಪಡೆಯಲು ಹವಣಿಸುತ್ತಾನೆ. ಶರಣರು ಈ ರೀತಿಯ ಮೂಢ ಆರಾಧನೆಗಳನ್ನು, ಆಚರಣೆಗಳನ್ನು ಖಂಡಿಸುತ್ತಾರೆ ಹಾಗೂ ಅಂಥವರ ಬಗ್ಗೆ ಕನಿಕರ ವ್ಯಕ್ತಪಡಿಸುತ್ತಾರೆ. ಇವಾವುವೂ ದೇವರಲ್ಲ, ನೀವು ದೇವರೆಂದು ನಂಬಿರುವ ಕಲ್ಪಿತ ಮೂರ್ತಿಗಳು ನಿಮಗೆ ಏನನ್ನೂ ಕೊಡಲು ಅಸಮರ್ಥ. ಇವುಗಳ ಪೂಜೆಯಿಂದ ಯಾವುದೇ ಲಾಭ ಇಲ್ಲ, ಬದಲಿಗೆ ನಷ್ಟವೇ ಹೆಚ್ಚು ಎಂದು ತಿಳಿ ಹೇಳುತ್ತಾರೆ. ಇಂಥಾ ಕಲ್ಪಿತ ದೇವತೆಗಳು ನಿರಾಕಾರ ನಿರಂಜನ ನಿರ್ಗುಣ ನಿರ್ಲೇಪ ನಿರವಯನಾದ ಸೃಷ್ಟಿಕರ್ತನಿಗೆ ಸಮವೆಂದು ನುಡಿಯುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಬಾಲಸಂಗಯ್ಯ ಶರಣರು, ದೇವರೆಂದರೆ ಏನು ಎಂದು ಸ್ಪಷ್ಟವಾಗಿ ತಿಳಿಸುತ್ತಾರೆ: ಕಲ್ಲದೇವರು ದೇವರಲ್ಲ, ಮಣ್ಣದೇವರು ದೇವರಲ್ಲ, ಮರದೇವರು ದೇವರಲ್ಲ, ಪಂಚಲೋಹದಲ್ಲಿ ಮಾಡಿದ ದೇವರು ದೇವರಲ್ಲ, ಸೇತುರಾಮೇಶ್ವರ, ಗೋಕರ್ಣ, ಕಾಶಿ, ಕೇದಾರ ಮೊದಲಾಗಿ ಅಷ್ಟಾಷಷ್ಠಿಕೋಟಿ ಪುಣ್ಯಕ್ಷೇತ್ರಂಗಳಲ್ಲಿಹ ದೇವರು ದೇವರಲ್ಲ. ತನ್ನ ತಾನರಿದು ತಾನಾರೆಂದು ತಿಳಿದಡೆ ತಾನೇ ದೇವ ನೋಡಾ, ಅಪ್ರಮಾಣಕೂಡಲಸಂಗಮದೇವ. ಶರಣರು ತೀರ್ಥಕ್ಷೇತ್ರಗಳನ್ನು ಮತ್ತು ಅಲ್ಲಿಯ ಪಾವಿತ್ರ್ಯತೆಯನ್ನು ಕುರಿತೂ ತೀವ್ರವಾಗಿ ಟೀಕಿಸಿದ್ದಾರೆ. ದೇವರೆಂಬ ವಸ್ತು ಬಹಿರಂಗದ ದೇಗುಲಗಳಲ್ಲಿ ಇಲ್ಲ, ಅದು ಪ್ರತಿಯೊಂದು ಜೀವಿಯ ಅಂತರಂಗದಲ್ಲಿ ಹಾಗೂ ಅಖಂಡ ಸೃಷ್ಟಿಯಲ್ಲಿ ಹಾಸುಹೊಕ್ಕಾಗಿ ನೆಲೆಸಿದೆ. ಅದರ ಇರವನ್ನು ನಾವು ನಮ್ಮೊಳಗೇ ಅನುಭವಿಸಬೇಕೆಂಬುದು ಶರಣರ ಅನುಭಾವದ ಅಭಿಮತ.
ಬಸವಾದಿ ಶರಣರು ದೇವರನ್ನು ಕಂಡ ಪರಿ ಅತೀ ವಿಶಿಷ್ಟ ಹಾಗೂ ವಿಭಿನ್ನ. ಲೋಕದ ಎಲ್ಲಾ ಮಾನವರೂ ದೇವರಲ್ಲಿ ಸಂಪತ್ತು, ವಿದ್ಯೆ, ಆಯುಷ್ಯ, ಆರೋಗ್ಯ ಮತ್ತು ಮುಕ್ತಿಗಳನ್ನು ಬೇಡಿದರೆ ಶರಣರು ಇದಕ್ಕೆ ತದ್ವಿರುದ್ಧವಾಗಿ ತಮ್ಮನ್ನು ದೇವರ ಎತ್ತರಕ್ಕೆ ಏರಿಸಿಕೊಂಡು ಅದರೊಳಗೆ ಸಮರಸವಾಗುತ್ತಾರೆ. ಲಿಂಗವ ಪೂಜಿಸಿ ಫಲವೇನಯ್ಯಾ, ಸಮರತಿ ಸಮಕಳೆ ಸಮಸುಖವನರಿಯದನ್ನಕ್ಕ ಲಿಂಗವ ಪೂಜಿಸಿ ಫಲವೇನಯ್ಯಾ, ಕೂಡಲಸಂಗಮದೇವರ ಪೂಜಿಸಿ ನದಿಯೊಳಗೆ ನದಿ ಬೆರಸಿದಂತಾಗದನ್ನಕ್ಕ.
ನಾವು ಲಿಂಗಪೂಜೆ ಯಾಕಾಗಿ ಮಾಡಬೇಕು? ಧನ, ಕನಕ ಸಿರಿ ಸಂಪತ್ತು ಏನನ್ನಾದರೂ ಬೇಡಲೆಂದೋ? ಖಂಡಿತಾ ಅಲ್ಲ! ಲಿಂಗಪೂಜೆ ಮಾಡುವುದು ದೇವನೊಡನೆ ಪ್ರೀತಿಯಿಂದ ಸಮಭಾವದೊಂದಿಗೆ ದೇವ-ಭಕ್ತ ಎಂಬ ಭೇದವಿಲ್ಲದೆ ಅಭಿನ್ನ ನೆಲೆಯಲ್ಲಿ ಸುಖಿಸುವ ಮೂಲಕ. ಎರಡು ನದಿಗಳ ಸಂಗಮವಾದಾಗ ಎರಡರ ನೀರನ್ನು ಹೇಗೆ ಬೇರ್ಪಡಿಸಲಾಗುವುದಿಲ್ಲವೋ ಹಾಗೆ ಆತ್ಮ-ಪರಮಾತ್ಮರ ಸಂಗಮವೇ ಲಿಂಗಪೂಜಾ ಫಲ, ಹೀಗಲ್ಲದೆ ಮಾಡುವ ಯಾವುದೇ ಪೂಜೆ ವ್ಯರ್ಥ ಹಾಗೂ ಅರ್ಥಹೀನ. ಶರಣರ ದೃಷ್ಟಿಯಲ್ಲಿ ಭಕ್ತನು ದೇವನಲ್ಲಿ ಪ್ರಾಪಂಚಿಕವಾದ ಏನನ್ನೂ ಬೇಡಬಾರದು. ಕೇವಲ ಪಾರಮಾರ್ಥ ಗಳಿಕೆಯೇ ಪೂಜೆಯ ಗುರಿ ಎಂಬುದು ಶರಣರ ಸ್ಪಷ್ಟನಿಲುವು.
ದೇವರು ನಿರಾಕಾರ, ಹಾಗಾದರೆ ನಾವು ಪೂಜಿಸುವ ಅಂಗೈಯೊಳಗಣ ಇಷ್ಟಲಿಂಗವು ಒಂದು ರೂಪವಲ್ಲವೇ ಎಂದು ಪ್ರಶ್ನೆ ಹುಟ್ಟುತ್ತದೆ. ಹೌದು, ಅದು ನಿರಾಕಾರ ದೇವನ ಸಾಕಾರ ರೂಪ. ನಿರಾಕಾರವನ್ನು ನಿರಾಕಾರವಾಗಿ ಅರಿಯಲು ಬಹು ಕಠಿಣ. ನಿರಾಕಾರವನ್ನು ಗ್ರಹಿಸಲು ಸಾಕಾರದ ನೆಲೆ ಅವಶ್ಯ. ಪುಸ್ತಕವು ಸಾಕಾರ ಅದಲ್ಲಿರುವ ಜ್ಞಾನ ನಿರಾಕಾರ, ಅಕ್ಕಿ ಸಾಕಾರ ಅದರಲ್ಲಿರುವ ಶಕ್ತಿ ನಿರಾಕಾರ. ಹೀಗೆ ಸಾಕಾರಕ್ಕೆ ನಿರಾಕಾರವೂ, ನಿರಾಕಾರಕ್ಕೆ ಸಾಕಾರವೂ ಪರಸ್ಪರ ಪೂರಕವಾಗಿ ನಿಲ್ಲುವವು. ನಿರಾಕಾರವಿಲ್ಲದೆ ಸಾಕಾರವಿಲ್ಲ ಸಾಕಾರವಿಲ್ಲದೆ ನಿರಾಕಾರಕ್ಕೆ ನೆಲೆ ಇಲ್ಲ. ಆದ್ದರಿಂದ ನಿರಾಕಾರ ದೇವನಿಗೆ ಪ್ರಾಣಿ, ಮನುಷ್ಯ, ಇತ್ಯಾದಿ ಮಾನವಕಲ್ಪಿತ ರೂಪ ಕೊಡದೆ, ಈ ಅಖಂಡ ಸೃಷ್ಟಿಯು ಗೋಳಾಕಾರದಲ್ಲಿ ಕಾಣುವುದರಿಂದ ದೇವನ ಚಿತ್ಸ್ವರೂಪವಾದ ಇಷ್ಟಲಿಂಗವನ್ನು ಗೋಳಾಕಾರದಲ್ಲಿ ರೂಪಿಸಲಾಗಿದೆ. ಇಷ್ಟಲಿಂಗವು ಶರಣನ ಅಂತರಂಗದ ಚಿತ್ಕಳೆಯ ಆತ್ಮಸ್ವರೂಪ, ಈ ಆತ್ಮ ಸ್ವರೂಪದ ಜಾಗೃತಿಯ ಮುಖೇನ ಬ್ರಹ್ಮಂಡವ್ಯಾಪಿ ಪರಶಿವನ ದರ್ಶನಾನುಭಾವ, ಆತ್ಮ ಮತ್ತು ಪರಮಾತ್ಮ ಎರಡರ ಸಮರಸ ಸಂಬಂಧವೇ ಲಿಂಗಾಂಗ ಸಾಮರಸ್ಯ, ಇದನ್ನು ಶರಣನು ತನ್ನ ಅಂತರಂಗದಲ್ಲಿ ಪ್ರತಿಕ್ಷಣವೂ ಅವಿರಳವಾಗಿ ಆನಂದಿಸುವನು.
ಇಷ್ಟಲಿಂಗ: ಅನೇಕ ದಾರ್ಶನಿಕರು ಈ ಜಗತ್ತು ಮಾಯೆ, ಜೀವನವೆಂಬುದು ಭ್ರಮೆ, ಇದು ಒಂದು ಶಾಪ, ಇದರಿಂದ ವಿಮೋಚನೆ ಪಡೆಯಲು, ಜಗತ್ತಿಗೆ ಹಾಗೂ ಸ್ವಾಭಾವಿಕ ಜೀವನಕ್ಕೆ ವಿಮುಖನಾಗಿ ಬದುಕಬೇಕು ಎಂದು ಸಾರಿದರು, ಆದರೆ ಜಗತ್ತು ಹಾಗೂ ಜೀವನ ಶರಣರ ದೃಷ್ಟಿಯಲ್ಲಿ ತ್ಯಾಜ್ಯವಲ್ಲ, ಬದಲಿಗೆ ಇವುಗಳನ್ನು ಪೂಜ್ಯವೆಂದು, ದೇವನಿತ್ತ ಪ್ರಸಾದವೆಂದು ಭಾವಿಸಿದರು. ಹಾಗಾಗಿ ದೇವನ ಅಖಂಡ ಚೈತನ್ಯಭರಿತ ಜಗತ್ತು ಮತ್ತು ಜೀವನ ಶರಣರಿಗೆ ಬಹು ಇಷ್ಟವಾಯಿತು. ಜಗದಗಲನಾದ ಪರಶಿವ ಸ್ವರೂಪವನ್ನು ಚುಳುಕಾಗಿಸಿ, ಅದನ್ನು ಇಷ್ಟಲಿಂಗವೆಂದು ಕರೆದರು, ಇಷ್ಟಲಿಂಗದಲ್ಲಿ ಎರಡು ಭಾಗಗಳಿವೆ, ೧) ಹೊರಗಣ ಗೋಳಾಕಾರದ ಕಪ್ಪು ಕಂಥೆ ಇದು ಆಖಂಡ ಸೃಷ್ಟಿಯ ಚೈತನ್ಯವಾದ ಪರಶಿವ ತತ್ವವನ್ನು ಸಂಕೇತಿಸುವುದು. ೨) ಗೋಲದೊಳಗಿರುವ ಜೀವಾತ್ಮನನ್ನು ಸಂಕೇತಿಸುವ ಶಾಂಭವೀಮುದ್ರೆಯ ಲಿಂಗ, ಇವೆರಡೂ ಕೂಡಿದಾಗ ಕಾಣುವುದೇ ಇಷ್ಟಲಿಂಗ. ಹೊರಗಣ ರೂಪವನ್ನು ಗೋಲಾಕಾರವಾಗಿ ಚಿತ್ರಿಸಿರುವ ಕಾರಣವೇನೆಂದರೆ: ಈ ಸೃಷ್ಟಿಯಲ್ಲಿ ನಮ್ಮ ಕಣ್ಣಿಗೆ ಕಾಣುವ ನಿಸರ್ಗ ನಿರ್ಮಿತ ವಸ್ತುಗಳು ಗೋಳಾಕಾರವಾಗಿವೆ, ನೀರಿನ ಬಿಂದು, ಶಬ್ದ ತರಂಗಗಳು, ವಾಯುವಿನ ಚಲನೆ, ಗಿಡಮರಗಳ ಆಕಾರ, ಸೂರ್ಯ, ಚಂದ್ರ, ನಕ್ಷತ್ರ, ಇತ್ಯಾದಿ, ಈ ಎಲ್ಲಾ ಚಿಕ್ಕಚಿಕ್ಕ ಗೋಳಗಳನ್ನು ಒಟ್ಟಿಗೇ ಸೇರಿಸಿದರೆ ಒಂದು ಬೃಹತ್ ಗೋಳವಾಗುವುದು (ಗಣಿತದಲ್ಲಿ ಇದನ್ನು ಇಂಟೆಗ್ರೇಷನ್ ಎನ್ನುತ್ತಾರೆ). ಆ ಬೃಹತ್ ಗೋಳವೇ ಪರಮಾತ್ಮನ ವಾಸಸ್ಥಾನವಾದ್ದರಿಂದ ಈ ಅಖಂಡ ಸೃಷ್ಟಿಯಲ್ಲಿ ಎಲ್ಲೆಲ್ಲೂ ಅವನ ಇರವನ್ನು ಕಾಣಲು ಸಾಧ್ಯ. ಹಾಗಾಗಿ ಪರಮಾತ್ಮನ ರೂಪನ್ನು ಬಸವಣ್ಣನವರು ಗೋಳಾಕಾರ ರೂಪದಲ್ಲಿ ಪರಿಭಾವಿಸಿದರು.
ಇಂಥಾ ಲಿಂಗದ ವ್ಯಾಪ್ತಿ ಅನಂತ, ಅನೂಹ್ಯ, ಅನುಪಮ. ಇಷ್ಟಲಿಂಗದ ಸ್ವರೂಪವನ್ನು ಕುರಿತು ಬಸವಣ್ಣನವರು ಹೀಗೆ ಹೇಳಿದ್ದಾರೆ: ವೇದ ವೇದಾಂತಗಳಿಗೆ ಅಸಾಧ್ಯವಾದ ಅನುಪಮಲಿಂಗವ ತಂದುಕೊಟ್ಟನಯ್ಯಾ, ಸದ್ಗುರು ಎನ್ನ ಕರಸ್ಥಲಕ್ಕೆ. ನಾದಬಿಂದು ಕಳೆಗೆ ಅಭೇದ್ಯವಾದ ಅಚಲಿತ ಲಿಂಗವ ತಂದುಕೊಟ್ಟನಯ್ಯಾ, ಸದ್ಗುರು ಎನ್ನ ಕರಸ್ಥಲಕ್ಕೆ. ವಾಙ್ಮನಕ್ಕಗೋಚರವಾದ ಅಖಂಡಿತ ಲಿಂಗವ ತಂದುಕೊಟ್ಟನಯ್ಯಾ, ಸದ್ಗುರು ಎನ್ನ ಕರಸ್ಥಲಕ್ಕೆ, ಇನ್ನು ನಾನು ಬದುಕಿದೆನು, ನಾ ಬಯಸುವ ಬಯಕೆ ಕೈಸಾರಿತ್ತಿಂದು ಕೂಡಲಸಂಗಮದೇವಾ. ಇಲ್ಲಿ ‘ಸದ್ಗುರು’ ಎಂದರೆ ಅಂತರಂಗದ ಅರಿವು ಎಂದು ಅರ್ಥ ಮಾಡಿಕೊಳ್ಳಬೇಕು. ಹೊಸ ದೃಷ್ಟಿಕೋನದ, ಹೊಸಬಗೆಯ, ಹೊಸರೂಪದ ಚಿತ್ಕಳಾ ಸ್ವರೂಪವಾದ ಇಷ್ಟಲಿಂಗವು ಮನದಲ್ಲಿ ದೇದೀಪ್ಯಮಾನವಾಗಿ ಬೆಳಗಿದ ತಕ್ಷಣ ಬಸವಣ್ಣನವರು ಅಖಂಡಿತ ಲಿಂಗವು ಚುಳುಕಾಗಿ ಇಂದೆನಗೆ ಸಾಧ್ಯವಾಯಿತ್ತು, ತಾವು ತೊಡಗಿಸಿಕೊಂಡ ದೇವಸ್ವರೂಪದ ಸಂಶೋಧನೆ ಇಂದು ಫಲ ನೀಡಿತು ಎಂದು ತಮಗಾದ ಅನುಭೂತಿಯನ್ನು ಈ ವಚನದಲ್ಲಿ ಬಹಳ ಸೊಗಸಾಗಿ ‘ನಾ ಬಯಸುವ ಬಯಕೆ ಕೈಸಾರಿತ್ತಿಂದು’ ಎಂದು ಚಿತ್ರಿಸಿದ್ದಾರೆ.
ಅನುಪಮ ಲಿಂಗದ ಕುರುಹಾದ ಇಷ್ಟಲಿಂಗವನ್ನು ಶರಣನು ತನ್ನ ಅಂಗದ ಮೇಲೆ ಸದಾ ಧರಿಸಿ ತನ್ಮೂಲಕ ಅಂಗದ ಅವಗುಣಗಳನ್ನು ಕಳೆದುಕೊಂಡು ಮಂಗಳಮಯವಾದ ಶಿವಗುಣಗಳನ್ನು ಸಂಪ��ದಿಸಿ ಪರಶಿವ ಸ್ವರೂಪವೇ ತಾನಾಗುವ ವಿಷಿಷ್ಟ ತತ್ವವೇ ಇಷ್ಟಲಿಂಗ. ಇಷ್ಟಲಿಂಗವೆಂಬ ಸಾಧನವು ಜಗದ ಅನೇಕ ಕ್ಲೇಷಗಳನ್ನು ತೊಡೆದುಹಾಕುವಲ್ಲಿ ಮಹತ್ತರ ಪಾತ್ರವಹಿಸುವುದು. ಇದರ ಪ್ರಮುಖ ಲಕ್ಷಣಗಳೆಂದರೆ- ೧. ಇಷ್ಟಲಿಂಗವ ನಿರಾಕಾರ ದೇವರ ಸಾಕಾರ ಸ್ವರೂಪ, ೨. ಆಯಸ್ಕಾಂತದ ಸಂಪರ್ಕದಲ್ಲಿರುವ ಕಬ್ಬಿಣ ಕಾಂತೀಯ ಗುಣ ಹೊಂದುವಂತೆ ಇಷ್ಟಲಿಂಗ ಧರಿಸಿದವನ ಅಂಗವೂ ಇಷ್ಟಲಿಂಗವೇ ಆಗುವುದು, ಆದ್ದರಿಂದಲೇ ಸದಾ ಇಷ್ಟಲಿಂಗವನ್ನು ಧನ್ಯತಾಭಾವದಿಂದ ಧರಿಸಿರಬೇಕು, ೩. ಜಾತಿಯ ಅಸಮಾನತೆಯನ್ನು ಕಿತ್ತೆಸೆಯುವುದು, ೪. ಹೆಣ್ಣು ಕನಿಷ್ಠ ಗಂಡು ಶ್ರೇಷ್ಠ ಎಂಬ ಅಸಮಾನತೆಯನ್ನು ತೊಡೆದುಹಾಕುವುದು.
ಅತ್ತತ್ತಲಾದ ಅನುಪಮಲಿಂಗ ತನ್ನ ವಿನೋದಕ್ಕೆ ತಾನೇ ಶರಣನಾಗಿ ಜಂಗಮವಾಗಿ ಭಕ್ತನಾಗಿ ಲಿಂಗವಾಗಿ ಶಿಷ್ಯನಾಗಿ ಗುರುವಾಗಿ ಕ್ರಿಯಾಜ್ಞಾನ ಭಾವಾಚಾರವಿಡಿದು, ಪರಿಪೂರ್ಣಾಚಾರದೊಳು ನಿಂದು ವರ್ತಿಸುವ ಪರಮಾನಂದಸುಖಭೋಕ್ತನೆಂಬ ಭೇದವನರಿಯದೆ, ಭಿನ್ನವಿಟ್ಟು ನುಡಿವ ಮರುಳು ಕುನ್ನಿ ಮಾನವರ ಎನ್ನ ಗತಿಮತಿಯತ್ತ ತಾರದಿರಾ, ಗುರುನಿರಂಜನ ಚನ್ನಬಸವಲಿಂಗಾ, ನಿಮ್ಮ ಧರ್ಮ ನಿಮ್ಮ ಧರ್ಮ. ಪರಮ ಪರಾತ್ಪರ ಪರಮಾತ್ಮನು ಸಕಲ ಜೀವರಾಶಿಯಲ್ಲಿಯೂ ನೆಲೆಸಿರುವುದರಿಂದ, ಆ ಪರಮಾತ್ಮನ ಅಸ್ತಿತ್ವವನ್ನು ಬೇರೆಲ್ಲೋ ಹುಡುಕದೆ ಸಮಾಜದ ಜೀವ ಚೈತನ್ಯಗಳಲ್ಲಿ ಕಾಣಬೇಕೆಂದು ಶರಣ ದೇಶಿಕೇಂದ್ರ ಸಂಗನಬಸವಯ್ಯನವರು ತಿಳಿಸಿರುವರು. ಅಷ್ಟೇ ಅಲ್ಲ, ದೇವರನ್ನು ಕೇವಲ ಹೊರಗಣ ಸಮಾಜದಲ್ಲಿ ಕಂಡೆನೆಂದು ಭ್ರಮೆಗೊಳಗಾಗಬಾರದು. ಅದು ನಮ್ಮೊಳಗೂ ಇದೆ, ಅದನ್ನು ನಮ್ಮಲ್ಲಿಯೇ ಕಾಣಬೇಕು ಎಂದು ಶರಣ ಮೋಳಿಗೆ ಮಾರಯ್ಯನವರು ಈ ರೀತಿ ಹೇಳಿದ್ದಾರೆ: “ಗುರುವೆಂದಡೆ ತನು, ಲಿಂಗವೆಂದಡೆ ಆತ್ಮ, ಜಂಗಮವೆಂದಡೆ ಆತ್ಮನರಿವು. ತ್ರಿವಿಧದ ವ್ಯಾಪ್ತಿಯ ಕಳೆದುಳಿದ ಸಂಬಂಧವದು ನೀನೆ, ಅನುಪಮಲಿಂಗ, ನಿರವಯ, ನಿಃಕಳಂಕ ಮಲ್ಲಿಕಾರ್ಜುನಾ”. ಅದಕ್ಕೆ ಪೂರಕವಾಗಿ ಜಕ್ಕಣಯ್ಯ ಶರಣರು, “ತನುವಿನೊಳಗಿಪ್ಪ ಅನುಪಮ ಲಿಂಗವನು ಘನದಿಂದ ಲಿಂಗಾರ್ಚನೆಯಂ ಮಾಡಿ, ಚಿದ್ರೂಪ ಚಿನ್ಮಯನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ” ಎಂದು ಚಿದ್ರೂಪ ಚಿನ್ಮಯ ಲಿಂಗವೇ ನಾವಾಗಬೇಕೆಂದು ತಿಳಿಸಿದ್ದಾರೆ. ದೇವರಿಗೂ ಭಕ್ತನಿಗೂ ಇರಬೇಕಾದ ಸಂಬಂಧವನ್ನು ಚೆನ್ನಬಸವಣ್ಣನವರು, ತಾನೆ ಜಗ, ಜಗವೆಲ್ಲ ತಾನೆಂದರಿದ ಘನವೇದ್ಯನಭೇದರೂಪನಾಗಿ, ಅನ್ಯವಿಲ್ಲದನ್ಯವನರಿಯಲೆಲ್ಲಿಯದೊ? ನಿರಂಜನ ನಿಜ ಚಿದ್ರೂಪು ತಾನಾಗಿ ಅರಿವು ತಾನೆಂಬ ಮಾತಿಗೆಡೆಯಲ್ಲಿಯದೊ? ಅನ್ಯವೆನ್ನದ ತಾನೆನ್ನದಳಿದುಳಿಮೆಯನುಪಮಿಸ ಬಹುದೆ? ಅನಪಮಸುಖಸಾರಾಯ, ಕೂಡಲಚೆನ್ನಸಂಗಾ ನಿಮ್ಮ ಶರಣ ಎಂದು ತಿಳಿಸಿದ್ದಾರೆ.
ವಿಶ್ವವೆಲ್ಲಾ ವ್ಯಾಪಿಸಿರುವ ಪರಮಾತ್ಮ ತತ್ವ ನನ್ನೊಳಗೂ ಇದೆ. ನಾನೆಂಬ ಆತ್ಮತತ್ವ ಪರಮಾತ್ಮ ತತ್ವದೊಳಕೊಂಡಿದೆ. ಹೀಗೆ ಆತ್ಮ-ಪರಮಾತ್ಮ ಸಂಬಂಧ ಸದಾ ನಿಕಟವರ್ತಿಯಾಗಿರುವವು. ಆತ್ಮನು ಪರಮಾತ್ಮನಿಂದ ಬೇರಿಲ್ಲ ಎಂಬ ಭಾವ ನೆಲೆಗೊಂಡೊಡನೆ ಅರಸಲು ಇನ್ನೇನು ಉಳಿದಿದೆ. ತಾನೇ ಪರಮಾತ್ಮನ ಚಿದ್ರೂಪು ಎಂಬ ಅರಿವು ಮೂಡಲೊಡನೆ ಹೊಂದಿದ್ದ ಭಾವ ಭ್ರಮೆಗಳೆಲ್ಲಾ ನಶಿಸಿ ದೇವನಲ್ಲಿ ಸಮರಸವಾದ ಪರಿಯನ್ನು ಹೇಗೆ ಉಪಮಿಸಲು ಸಾಧ್ಯ? ಅದು ಅವರ್ಣನೀಯ. ಹೀಗೆ ತನ್ನಂತರಂಗದಲ್ಲಿ ದೇವನನ್ನು ಕಂಡ ಶರಣನು ಈ ಅಖಂಡ ಸೃಷ್ಟಿಯಲ್ಲಿ ಓತಪ್ರೋತವಾಗಿ, ಜಗದ ಎಲ್ಲಾ ಚಟುವಟಿಕೆಗಳಿಗೂ ಕಾರಣೀಭೂತವಾಗಿ ಹಾಸು-ಹೊಕ್ಕಾಗಿರುವ ಪರಮಾತ್ಮ ತತ್ವವನ್ನು ಸೃಷ್ಟಿಯ ಎಲ್ಲೆಡೆಯೂ ಕಂಡು ಸದಾ ಸಂತೃಪ್ತ ಹಾಗೂ ನಿರ್ಲಿಪ್ತ ಭಾವದಿಂದೊಡಗೂಡಿ ಸಕಲ ಚರಾಚರದಲ್ಲೂ ಒಂದೇ ಪರಮಾತ್ಮ ತತ್ವವನ್ನು ಪರಿಣಾಮಿಸಬೇಕು, ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ, ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ. ಕೂಡಲಸಂಗಮದೇವಾ ನಿಮ್ಮ ಮನೆಯ ಮಗನೆಂದೆನಿಸಯ್ಯಾ- ಎಲ್ಲರೂ ಪರಮಾತ್ಮನ ಮಕ್ಕಳು, ನಮ್ಮಲ್ಲಿ ಯಾವುದೇ ಭೇದ ಭಾವ ಸಲ್ಲದೆಂದು ವಿಶ್ವ ಭ್ರಾತೃತ್ವ ಮೆರೆಯುವನು ಶರಣ. ಅಂತರಂಗದ ಅರಿವು ಮತ್ತು ಬಹಿರಂಗದ ಆಚರಣೆಗಳು ಸ್ಫಟಿಕದಂತೆ ಒಂದೇ ಆದ ಶರಣನು ಸ್ವಯಂಲಿಂಗವೇ ಆಗುವನು. ಇದೇ ಬಸವಣ್ಣನವರು ಕೊಟ್ಟ ಲಿಂಗಾಯತ ಧರ್ಮದ ಮೂಲ ಆಶಯ.
ದೇವರನ್ನು ಹೊರಗಣ ಗುಡಿಗಳಲ್ಲಿ ಹುಡುಕದೆ, ಸಮಾಜದ ಹಿತದಲ್ಲೇ ತನ್ನ ಹಿತ ಅಡಗಿದೆ ಎಂಬುದನ್ನು ಅರಿತು, ಅದಕ್ಕೆ ಪೂರಕವಾಗಿ ನಡೆನುಡಿ ಹೊಂದಿ ಎಲ್ಲರೊಳಗೊಂದಾಗಿ, ಯಾರನ್ನೂ ದ್ವೇಷಿಸದೆ, ಎಲ್ಲರನ್ನೂ ಆತ್ಮೀಯವಾಗಿ ಕಂಡು ಉಪಚರಿಸಿ, ತನ್ನೊಳು ದೈವೀ ಪ್ರಭೆಯನ್ನು ಬೆಳಗಿಸಿಕೊಂಡು ಆ ಪ್ರಭೆಯಿಂದ ಜಗತ್ತಿಗೆ ಬೆಳಕಾಗಬೇಕೆಂಬುದೇ ಬಸವಧರ್ಮದ ತಿರುಳು.
Comments 2
Madapathi.V.V
Jul 8, 2018ಶರಣು ಶರಣಾರ್ಥಿಗಳು ಅಣ್ಣಾ..
ಶರಣರು ಕಂಡಂತೆ ದೇವರ ಸ್ವರೂಪ ಒಂದು ಅದ್ಭುತವಾದ ವಿವರಣೆ ನೀಡಿರುವಿರಿ. ಇಷ್ಟಲಿಂಗ ಪರಿಕಲ್ಪನೆ ಶರಣರ ದೃಷ್ಟಿಯಲ್ಲಿ ಇಷ್ಟಲಿಂಗ, ದೇವರುಗಳನ್ನು ಮಹೊನ್ನತ್ತರವಾದ ವಚನಗಳ ಮೂಲಕ ವಿವರಣೆ ಮನಮುಟ್ಟುವಂತಿದೆ.
ಮತ್ತೂಂದು ವಚನದಲ್ಲಿ ಅಲ್ಲಮಪ್ರಭುದೇವರು ದೇವರಬಗ್ಗೆ ಮೈ ರೊಮಾಂಚನೆ ಆಗುವ ಪ್ರಸ್ಥಾವನೆ ನೀಡಿದ್ದಾರೆ.
“ನಾ ದೇವನಲ್ಲದೆ ನೀ ದೇವನೆ ?
ನೀ ದೇವನಾದಡೆ ಎನ್ನನೇಕೆ ಸಲಹೆ ?
ಆರೈದು, ಒಂದು ಕುಡಿತೆ ಉದಕವನೆರೆವೆ,
ಹಸಿದಾಗ ಒಂದು ತುತ್ತು ಓಗರವನಿಕ್ಕುವೆ._
ನಾ ದೇವ ಕಾಣಾ ಗುಹೇಶ್ವರಾ !”
ಸಮಗ್ರ ವಚನ ಸಂಪುಟ: 2
ವಚನದ ಸಂಖ್ಯೆ: 558
ಅದ್ಭುತವಾದ ಲೇಖನೆಗಳು ನಿಮ್ಮಿಂದ ಇನ್ನೂ ಹೂರಹೊಮ್ಮಲೆಂದು ಮನಸಾರೆ ಪ್ರಾರ್ಥಿಸುತ್ತೇನೆ..
ಶರಣು ಶರಣಾರ್ಥಿ ಅಣ್ಣಾ..
ಚೇತನ
Nov 9, 2018ಅದ್ಭುತ ಸಾಲುಗಳು….