ಎರವಲು ಮನೆ…
ಬೆಂಕಿ ಬಿದ್ದಿತ್ತು ಥಳುಕಿನ ಮಹಲಿಗೆ
ಉರಿದುರಿದು ಬೂದಿಯಾಗಿತ್ತು
ಪೇರಿಸಿ ಇಟ್ಟ ಸಿರಿ-ಸಂಪತ್ತು
ಆರಿಸ ಹೋದರೆ ಕೈ ಸುಟ್ಟಿತ್ತು
ಹಲುಬಿಹೆನೆಂದರೆ ದನಿ ಅಡಗಿತ್ತು
ಕೂಗಲು ಹೋದರೆ ಕಂಠ ಒಡೆದಿತ್ತು
ಹೊತ್ತಿ ಉರಿದಿತ್ತು ತಲೆ ಮೇಲಿನ ಸೂರು
ಕರಕಲಾದವು ಐದು ತೊಲೆಗಳು
ವಿಷಯಗಳಾಸರೆ ಕುಸಿಯತೊಡಗಿತ್ತು
ನಿಂತ ನೆಲವೇ ಜಾರುತಲಿತ್ತು
ಓಡಿಹೆನೆಂದರೆ ಬೀದಿಗಳಿಲ್ಲ
ಅವಿತುಕೊಳ್ಳಲು ಒಂದೂ ಗಲ್ಲಿಗಳಿಲ್ಲ
ಎತ್ತಲೋ ಓಡಿತು ಕಿಚ್ಚಿಗೆ ಅಂಜಿ
ದೂಳೆಬ್ಬಿಸಿ ಕಾಲ್ಕೆದರುತಲಿದ್ದ
ನನ್ನೊಳಗಿನ ಮದವೇರಿದ ಗೂಳಿ
ದೂಳುಕಟ್ಟಿದ ನೋಟಗಳಿಲ್ಲ
ಚಿತ್ತ ಭ್ರಾಂತಿಯ ರೂಪಗಳಿಲ್ಲ
ದಿಟ್ಟಿಸಲಿಕ್ಕೆ ಎದುರೆಂಬುದೇ ಇಲ್ಲ
ಭಸ್ಮವಾಗಲು ಮನೆ ಕಣ್ಣೆದುರಲ್ಲೇ
ಮೂಕವಾಯಿತು ಮನ ಒಳಗಲ್ಲೇ
ಕೂಡಿಹೆನೆಂದರೆ ಆತ್ಮ ಬೇರಿಲ್ಲ
ಹಿಡಿದಿಡಲು ದೇಹ ಉಳಿಯುವುದಿಲ್ಲ
ವೇದಿಕೆ ಏರಲು ವೇಷಗಳಿಲ್ಲ
ಬಣ್ಣ ಹಚ್ಚಲು ಮುಖವೇ ಇಲ್ಲ!
ಗುಪ್ತ ನಿಧಿಯ ಸಂಚಯ ಕೆಡಿಸಿ,
ತೋರುವ ಜಗದ ಸಂಚನು ತಿಳಿಸಿ
ನಂಬಿದ ಗುರುವೇ ಕಿಚ್ಚನ್ನಿಟ್ಟ
ಬಯಲ ಬಾಳಿಗೆ ಮುನ್ನುಡಿ ಬರೆದ
ಭಾವಗಳಿಲ್ಲ, ಜಾಲಗಳಿಲ್ಲ
ನೋಟಗಳಿಲ್ಲ, ಕೂಟಗಳಿಲ್ಲ…
ಎರವಲು ಮನೆಯ ಋಣ ಹರಿದಿತ್ತು
ಜಗದ ಜಗುಲಿಯಲಿ ಬೆಳಕೊಂದಿತ್ತು.
Comments 1
ಪೆರೂರು ಜಾರು, ಉಡುಪಿ
Aug 16, 2023ಬಯಲು ಎರವಲೊಳಗೊ
ಎರವಲು ಗುರುವೊಳಗೊ
ಬಯಲು ಗುರುವೆರಡು ಎರವಲ
ಬೂದಿ ಮುಚ್ಚಿದ ಕಿಚ್ಚಿನೊಳಗೊ