ಬದುಕಲು ಇನ್ನೆಷ್ಟು ಬೇಕು?
ನಾನು ಸಾಯುತ್ತೇನೆ
ನೀನೂ, ಎಲ್ಲರೂ ಸಹ
ಇಂದಿಲ್ಲದಿದ್ದರೆ ನಾಳೆ
ಸಾವು ಮಾತ್ರ ಶತ:ಸಿದ್ಧ
ಮತ್ತು ಅಷ್ಟೇ ಸಹಜ
ಒಳಿತು ಕೆಡುಕಾಗುವುದು
ಕೆಡುಕು ಕಾಣದಾಗುವುದು
ಕಣ್ಣಿದ್ದು ಕುರುಡು
ಕಿವಿ ಇದ್ದು ಕಿವುಡು
ಮುಂಜಾನೆ ಅರಳಿದ ಹೂ
ಸಂಜೆಗೆ ಬಾಡುವುದು
ಇಷ್ಟೇ ಬದುಕು
ಕಟ್ಟಿಸಿದ ಆ ಮನೆ
ಹೊತ್ತು ತಿರುಗುವ ಈ ದೇಹ
ಬೆಳೆದು ನಿಂತ ಮರ
ಎಲ್ಲವೂ ಒಂದೇ
ಬಿದ್ದುಹೋಗುವವು
ಇರುವಂತೆಯೆ…
ಕೂಡಿಟ್ಟ ಕಾಸು
ಬಚ್ಚಿಟ್ಟ ಒಡವೆ
ಬಯಕೆಗಳ ಕಾವು
ಉದರದ ಹಸಿವು
ಸಂತಸ, ನೋವು
ಎಲ್ಲಾ ಇಲ್ಲವಾಗುವುದು
ಸೋಲುವ ಕಾಲು
ಸವೆಯದ ದಾರಿ
ಸಾಗಬೇಕಿದೆ ಸುಮ್ಮನೆ
ಗಮ್ಯವ ಹುಡುಕುತಲಿ
ಕಾಣದ ನಂಬುಗೆಯ
ಭರವಸೆಯ ಬೆರಳ್ಹಿಡಿದು
ಬೆಳಗುವ ಅರಿವಿನ ದೀಪ
ನಿನ್ನೊಳಗಿನ ಜ್ಞಾನದ ಸ್ವರೂಪ
ಮೊದಲು ಹೊತ್ತಿಸು ಅದನು
ಕವಿದ ಕತ್ತಲು ನಿನ್ನ
ಪೂರ್ಣ ಆವರಿಸುವ ಮುನ್ನ
ಪಡೆದದ್ದಲ್ಲಿ ಕಳೆದದ್ದೆ ಕಡಿಮೆ
ಬದುಕಿನ ಪರಿಪಾಠದಿ
ಅನುಭವದ ಮಹಿಮೆ
ಬೇಕು ಅನ್ನುವುದೆಲ್ಲಾ ಇನ್ನೂ ಸಾಕು
ಬಯಕೆಗಳಿಗೆ ಬೇಲಿ ಹಾಕು
ಬದುಕಲು ಇನ್ನೆಷ್ಟು ಬೇಕು
ಇನ್ನೆಷ್ಟು ಬೇಕು?




