Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ರಾಜಸತ್ತೆಯ ವಿರುದ್ಧದ ಪ್ರಜಾಸತ್ತೆ
Share:
Articles October 13, 2026 ಡಾ. ಬಸವರಾಜ ಸಾದರ

ರಾಜಸತ್ತೆಯ ವಿರುದ್ಧದ ಪ್ರಜಾಸತ್ತೆ

ಬಸವಣ್ಣನವರ ರಾಜಬೀದಿ, ರಾಜತೇಜ ಮತ್ತು ಭಕ್ತಿಪಕ್ಷ: (ಪ್ರಜಾಪ್ರಭುತ್ವದ ಮೂಲ ಸಿದ್ಧಾಂತಗಳು)

ಚಾಲುಕ್ಯ ದೊರೆ ಬಿಜ್ಜಳನ ಮಂತ್ರಿ ಹಾಗೂ ಪ್ರಧಾನಿಯಾಗಿದ್ದವರು ಶರಣಕ್ರಾಂತಿಯ ಮೂಲಪುರುಷ ಬಸವಣ್ಣನವರು. ಪ್ರಭುತ್ವದ ಪ್ರಮುಖ ಭಾಗವಾಗಿದ್ದುಕೊಂಡೇ, ಅಂದಿನ ರಾಜಸತ್ತೆಯ ಜನವಿರೋಧಿ ಮತ್ತು ಸಮಾಜವಿರೋಧಿ ನಡೆಗಳನ್ನು ನೇರ ಮತ್ತು ನಿರ್ಭಿಡೆಯಿಂದ ಬಯಲಿಗೆಳೆದು ತೋರಿಸಿ, ತತ್ವಬದ್ಧ ಮತ್ತು ನೀತಿಬದ್ಧ ಪ್ರಜಾಸತ್ತೆಯೊಂದು ಹೇಗಿರ ಬೇಕೆಂಬುದನ್ನು ಸಾಕ್ಷಿಭೂತವಾಗಿ ತೋರಿಸಿದ ಅವರು ಸಮಾಜವಾದಿ ಸಿದ್ಧಾಂತಗಳಿಂದ ಒಡಗೂಡಿದ ಅಪ್ಪಟ ಪ್ರಜಾಪ್ರಭುತ್ವದ ಮಾರ್ಗವನ್ನು ತೋರಿಸಿದ್ದು ಮಾತ್ರವಲ್ಲ; ಆ ಮಾರ್ಗದಲ್ಲಿ ತಾವೇ ಮೊದಲು ನಡೆದು, ಆ ಮೂಲಕ ಎಲ್ಲ ಕಾಲ ಮತ್ತು ದೇಶಗಳ ಆಡಳಿತಕ್ಕೆ ಒಂದು ಸಮರ್ಥ ಹಾಗೂ ಸುವ್ಯವಸ್ಥಿತ ಪ್ರಜಾಪಥ ತೋರಿಸಿದರು. ಈ ಮಾತನ್ನು ಪುಷ್ಠೀಕರಿಸುವ ಸಾಕ್ಷಿಸತ್ಯಗಳು ಅವರ ಮತ್ತು ಇತರ ಶರಣ-ಶರಣೆಯರ ಅನೇಕ ವಚನಗಳಲ್ಲೇ ಖಚಿತವಾಗಿ ದೊರೆಯುತ್ತವೆ.

ಕ್ರಾಂತಿಯೊಂದರ ಸಹೋತ್ಪನ್ನಗಳಾಗಿ ರೂಪು ಪಡೆದಿರುವ ವಚನಗಳು ಪ್ರಜಾಸತ್ತೆಯ ಸೂಕ್ತ ನಿರ್ವಹಣೆಗೆ ಅಗತ್ಯವಿರುವ ಮೌಲಿಕ ಸಿದ್ಧಾಂತಗಳೂ ಆಗಿರುವುದು ಅವುಗಳ ಅನನ್ಯತೆ. ಈ ವಚನಗಳಲ್ಲಿ ಪ್ರತಿಪಾದಿತವಾಗಿರುವ ಪ್ರಜಾಪ್ರಭುತ್ವದ ತತ್ವಗಳು ನಮ್ಮ ಸಂವಿಧಾನದ ವಿವಿಧ ಪರಿಚ್ಛೇದಗಳಲ್ಲಿ ದಾಖಲಾಗಿರುವ ವಿಧಿ-ನಿಷೇಧಗಳು ಮತ್ತು ಕಾನೂನುಗಳಿಗೆ ಸಂವಾದಿಯಾಗಿರುವುದು ಅಚ್ಚರಿಯ ಸಂಗತಿ. ಮ್ಯಾಗ್ನಾಕಾರ್ಟಾ, ಮಾನವ ಹಕ್ಕುಗಳು ಮತ್ತು ಆಧುನಿಕ ಸಂವಿಧಾನಗಳು ಅಸ್ತಿತ್ವಕ್ಕೆ ಬರುವುದಕ್ಕಿಂತ ಹಲವು ಶತಮಾನಗಳಷ್ಟು ಮೊದಲೇ ಇಂಥ ವಿನೂತನ ಮಾರ್ಗವನ್ನು ಆವಿಷ್ಕಾರ ಮಾಡಿಕೊಂಡು ಅಂತೆಯೇ ನಡೆದದ್ದು ಇತಿಹಾಸದಲ್ಲಿ ಒಂದು ಅಪೂರ್ವ ಘಟ್ಟ, ಘಟನೆ ಮತ್ತು ಸಾಧನೆ. ‘ಹನ್ನೆರಡನೆಯ ಶತಮಾನದ ಕನ್ನಡ ಶರಣರು ಇಡೀ ವಿಶ್ವಕ್ಕೇ ಮೊಟ್ಟಮೊದಲ ಸಮಾಜವಾದಿ ಸಂವಿಧಾನ ಮತ್ತು ಮುಕ್ತ ಸಂಸತ್ತನ್ನು ಕೊಟ್ಟವರು’ ಎಂದು ಜಗತ್ತಿನ ಎಲ್ಲ ಪ್ರಗತಿಪರ ಚಿಂತಕರು ಹೇಳುವುದು ಈ ಕಾರಣಕ್ಕಾಗಿಯೆ. ಅದು ಭಾವನಾತ್ಮಕ ಹೇಳಿಕೆಯಲ್ಲ; ವಸ್ತುಸತ್ಯ.

ವರ್ತಮಾನದ ರಾಜಕೀಯದ ಸ್ವರೂಪ:

ರಾಜಕೀಯ ಎಂಬ ಶಬ್ದ ಕಿವಿಗೆ ಬಿದ್ದೊಡನೆ ನಮ್ಮೆದುರು ಬಂದು ನಿಲ್ಲುವ ಚಿತ್ರ ಭ್ರಷ್ಟ, ದುಷ್ಟ, ಸ್ವಾರ್ಥಿ ರಾಜಕಾರಣಿಗಳದು ಮತ್ತು ಅಂಥವರು ನಡೆಸುವ ಕೆಟ್ಟ ಹಾಗೂ ಕುತಂತ್ರದ ರಾಜಕಾರಣದ್ದು. ಇತ್ತೀಚೆಗಂತೂ ಆ ಶಬ್ದಕ್ಕೆ ಇನ್ನೂ ಹಲವು ವಿನೂತನ ಮತ್ತು ವಿಶೇಷ ಅಡ್ಡಮಾರ್ಗಗಳು ಬಂದು ಕೂಡುತ್ತಿವೆ. ಭ್ರಷ್ಟ ಮಾರ್ಗಗಳಲ್ಲಿ ಚುನಾವಣೆಯಲ್ಲಿ ಗೆಲ್ಲುವ, ಏನೆಲ್ಲ ಕುಕೃತ್ಯಗಳನ್ನು ಎಸಗಿದರೂ, ಏನೂ ಆಗಿಲ್ಲವೆಂಬಂತೆ ಅಧಿಕಾರದಲ್ಲಿ ಕುಳಿತುಕೊಳ್ಳುವ, ಅನ್ಯಾಯದ ಮಾರ್ಗಗಳಲ್ಲಿ ನಡೆಯುವ ಕಾರಣಕ್ಕೆ ಜೇಲು ಸೇರುವ, ಜೇಲಿನಿಂದ ಬೇಲ್ ಮೇಲೆ ಹೊರಗೆ ಬರುವಾಗ ದೊಡ್ಡ ಸಾಹಸ ಮಾಡಿ ಗೆದ್ದು ಬಂದವರಂತೆ ಮೆರವಣಿಗೆ ಮಾಡಿಸಿಕೊಳ್ಳುವ, ನೀತಿ-ನಿಯತ್ತುಗಳನ್ನು ಗಾಳಿಗೆ ತೂರುವ, ನಾಲಿಗೆಗೆ ಕಡಿವಾಣವೇ ಇಲ್ಲದೆ ಬಾಯಿಗೆ ಬಂದಂತೆ ಮಾತನಾಡುವ ಹಾಗೂ ಬೇರೆ ಯಾರೊಬ್ಬರಿಗೂ ಅಧಿಕಾರ ಬಿಟ್ಟುಕೊಡದೇ ತಮ್ಮ ವಂಶದವರನ್ನೇ ಖುರ್ಚಿಯಲ್ಲಿ ಕೂರಿಸಿ ಮೆರೆಸುವ- ಹೀಗೆ ಅದರ ದುರ್ಮುಖಗಳ ಸಂಖ್ಯೆ ದೊಡ್ಡದಾಗುತ್ತಲೇ ಹೋಗುತ್ತಿದೆ. ಇವುಗಳ ಜೊತೆಗೆ ಮುಂದೆ ಇನ್ನೂ ಹೊಸ ಹೊಸ ಕು-ಲಕ್ಷಣಗಳು ಬಂದು ಸೇರಲೂಬಹುದು. ವಸ್ತುಸ್ಥಿತಿ ಹೀಗಿರುವಾಗ, ದೇಶ ಹಾಗೂ ಜನತೆಯ ಪ್ರಗತಿಯನ್ನೇ ಮುಖ್ಯ ಉದ್ದೇಶವಾಗಿಟ್ಟುಕೊಳ್ಳುವ, ಸತ್ಯ ಶುದ್ಧ, ಪ್ರಾಮಾಣಿಕ ಜನಸ್ನೇಹಿ ರಾಜಕಾರಣಿಗಳನ್ನು ಹುಡುಕುವುದು ಕಷ್ಟ. ಇನ್ನು ಮುಂದೆ ಒಂದು ಪ್ರಾಮಾಣಿಕ ರಾಜಕೀಯ ವ್ಯವಸ್ಥೆ ಬರಲು ಸಾಧ್ಯವೇ ಇಲ್ಲವೇನೋ ಎಂಬಂಥ ಅನುಮಾನ ಯಾರಿಗಾದರೂ ಬರುವುದು ಸಹಜ. ಯಾಕೆಂದರೆ ಇಂದಿನ ವಾತಾವರಣ ಸುಧಾರಣೆಯನ್ನೇ ಕಾಣಲಾಗದ ಮಟ್ಟ ಮುಟ್ಟಿಬಿಟ್ಟಿದೆ.

ರಾಜಕೀಯ ಕ್ಷೇತ್ರದ ಬಗ್ಗೆ ಈ ರೀತಿ ಬರೀ ವಿರೋಧದ ಹಾಗೂ ವಿಕಾರಾತ್ಮಕ ಮಾತುಗಳನ್ನೇ ಹೇಳುವ ಸ್ಥಿತಿ ಬಂದಿರುವುದು ವರ್ತಮಾನದ ದೊಡ್ಡ ದುರಂತ. ಇದು ನಮ್ಮ ದೇಶಕ್ಕೆ ಮಾತ್ರ ಸೀಮಿತವಾಗಿಲ್ಲ; ಇಡೀ ವಿಶ್ವದ ರಾಜಕೀಯ ವಿದ್ಯಮಾನವೇ ಹಾಗಾಗಿದೆ. ನೊಬೆಲ್ ಶಾಂತಿ ಪಾರಿತೋಷಕ ಹೊಡೆದುಕೊಳ್ಳಲು, ವಿಶ್ವದಲ್ಲೆಲ್ಲ ನಾನಾ ಬಗೆಯ ಆಶಾಂತಿ ಹುಟ್ಟಿಸುವಂಥ ವಿದ್ಯಮಾನಗಳು ನಡೆದಿರುವುದನ್ನು ನೋಡಿದರೆ ನಮ್ಮ ವ್ಯವಸ್ಥೆ ಎಷ್ಟು ಕುಲಗೆಟ್ಟಿದೆ ಎಂಬುದು ಖಚಿತವಾಗುತ್ತದೆ. ಅನೇಕ ದೇಶಗಳು ಯುದ್ಧದಲ್ಲಿ ತೊಡಗುತ್ತಿರುವುದರ ಹಿಂದೆ ಕ್ಷುಲ್ಲಕ ಬುದ್ಧಿ, ರಾಜಕೀಯ ದ್ವೇಷ, ಸ್ವಾರ್ಥ, ಅಸೂಯೆ, ಅಹಂಕಾರ ಅಡಗಿರುವುದು ವಾಸ್ತವ. ಇನ್ನೂ ದುರಂತವೆಂದರೆ ಬಹುತೇಕ ರಾಜಕೀಯ ನಾಯಕರಿಗೆ ಮತ್ತು ಪುಢಾರಿಗಳಿಗೆ ರಾಜನೀತಿಯ (ಪೊಲಿಟಿಕಲ್ ಎಥಿಕ್ಸ್) ಪ್ರಾಥಮಿಕ ಪಾಠಗಳೂ ಗೊತ್ತಿಲ್ಲ. ಹೇಗಾದರೂ ಅಧಿಕಾರಕ್ಕೆ ಬರುವುದು, ಸಿಕ್ಕ ಅಧಿಕಾರವನ್ನು ಅಡ್ಡ ಮಾರ್ಗಗಳಿಂದ ಉಳಿಸಿಕೊಳ್ಳಲು ಹೆಣಗುವುದು, ವಿನಾಕಾರಣ ಸಾಮಾನ್ಯರನ್ನು ಶೋಷಿಸುವುದು, ಜನತೆಯ ಹೆಸರಲ್ಲೇ ದುಡ್ಡು ಮಾಡಿಕೊಳ್ಳುವುದು, ಯಾರು ಸತ್ತರೇನು, ಖುರ್ಚಿ ಭದ್ರವಾಗಿದ್ದರೆ ಸಾಕು ಎಂದು ಅಧಿಕಾರಕ್ಕೆ ಅಮರಿಕೊಳ್ಳುವುದು- ಹೀಗೆ ಅವರ ಆದ್ಯತೆಗಳೇ ಬೇರೆ. ಇವೆಲ್ಲದರ ಪರಿಣಾಮವಾಗಿ ರಾಜಕೀಯ ಕ್ಷೇತ್ರವೇ ಭ್ರಷ್ಟವಾಗಿ, ಪರಿಣಾಮವೆಂಬಂತೆ ಇಡೀ ಸಾಮುದಾಯಿಕ ವ್ಯವಸ್ಥೆ ದುರಂತದತ್ತ ಸಾಗುತ್ತಿದೆ. ಇದು ಈಗ ಢಾಳಾಗಿಯೇ ಕಾಣುತ್ತಿರುವ ವಾಸ್ತವ.

ಈ ದುರಂತಕ್ಕೆ ಅಧಿಕಾರದಾಹಿ ಪ್ರಭುಗಳಷ್ಟೆ ಅಲ್ಲ, ಅವರ ಜೊತೆಗೆ ಅಥವಾ ಅವರಿಗಿಂತ ಒಂದು ತೂಕ ಹೆಚ್ಚಾಗಿ ಪ್ರಜೆಗಳೂ ಕಾರಣರಾಗಿದ್ದಾರೆ. ಅಥವಾ ಇಬ್ಬರೂ ಸಮಾನ ವಾರಸುದಾರರಾಗಿದ್ದಾರೆ. ಮನುಷ್ಯನ ಅಸ್ಮಿತೆಯ ‘ಅರಿವ’ನ್ನೇ ಮಾರಿಕೊಂಡ ನಾಗರಿಕರು ಒಂದೆಡೆಯಿದ್ದರೆ, ಹಣ, ಹೆಂಡ, ಜಾತಿ, ಧರ್ಮ ಮತ್ತಿತರ ಆಮಿಷಗಳನ್ನು ತೋರಿಸಿ ಮತ ಕೊಂಡುಕೊಳ್ಳುವ ಅಧಿಕಾರದಾಹಿ ಅಡ್ಡಕಸುಬಿಗಳು ಇನ್ನೊಂದೆಡೆ ಇದ್ದಾರೆ. ಇಂಥವರು ನಡೆಸುವ ಪ್ರಜಾಪ್ರಭುತ್ವವು ನ್ಯಾಯಯುತ ಹಾಗೂ ಪ್ರಾಮಾಣಿಕ ಆಡಳಿತ ಕೊಡಲು ಖಂಡಿತ ಸಾಧ್ಯವಿಲ್ಲ. ಇಂದು ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವ ಮಾದರಿಯ ಆಡಳಿತ ಇದ್ದರೂ, ಅದರೊಳಗೆ ಲೆಕ್ಕಕ್ಕೆ ಸಿಗದಷ್ಟು ತೂತುಗಳೇ ಇರುವುದರಿಂದ ಆ ಶಬ್ದ ಮತ್ತು ಅದರ ಹಿಂದಿನ ತಾತ್ವಿಕತೆ ಸಂಪೂರ್ಣ ಅರ್ಥಕಳೆದುಕೊಳ್ಳುತ್ತಿದೆ. ಪ್ರಭು ಮತ್ತು ಪ್ರಜೆ ಸಮಾನ ಅಪರಾಧಿಗಳೇ ಆಗಿರುವಾಗ ಪ್ರಾಮಾಣಿಕ ಆಡಳಿತ ನಿರೀಕ್ಷಿಸುವುದು ಅಸಾಧ್ಯ. ಎಲ್ಲ ಹಾಳಾಗಿ ಹೋದರೂ ನನಗೇನು, ನಾನು ಮಾತ್ರ ಸುಖದಿಂದ ಇದ್ದರೆ ಸಾಕೆಂಬ ಸ್ವಾರ್ಥವೇ ಪ್ರಭು ಮತ್ತು ಪ್ರಜೆ-ಇಬ್ಬರಲ್ಲೂ ಬಂದುಬಿಟ್ಟಿರುವುದರಿಂದ ವ್ಯವಸ್ಥೆ ಬದಲಿಸುವುದು ಸಾಧ್ಯವೇ ಇಲ್ಲದಾಗಿದೆ.

ಇಂಥ ಅವ್ಯವಸ್ಥೆಯೇ ಬೇರೊಂದು ಬಗೆಯಲ್ಲಿ ತಾಂಡವವಾಡುತ್ತಿದ್ದ ಸಂದರ್ಭದಲ್ಲಿ ಅದರ ಕೆಟ್ಟ ಪರಿಣಾಮಗಳನ್ನು ಬಿಡಿಸಿ ತೋರಿಸುತ್ತ, ಅದನ್ನು ಆಮೂಲಾಗ್ರವಾಗಿ ಪರಿವರ್ತನೆಗೆ ಒಳಪಡಿಸುವ ಮಾರ್ಗಗಳನ್ನು ಹುಡುಕಿ ಕೊಟ್ಟ ಕನ್ನಡ ಶರಣರು, ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ ಮತ್ತು ಸಾಮಾಜಿಕ ನ್ಯಾಯ ಎಂಬ ನಾಲ್ಕು ಮಹತ್ವದ ಸಿದ್ಧಾಂತಗಳನ್ನಾಧರಿಸಿದ ವಿನೂತನ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಒಂಬೈನೂರು ವರ್ಷಗಳಷ್ಟು ಹಿಂದೆಯೇ ರೂಪಿಸಿದರು. ಇಲ್ಲಿ ಹೇಳಲಾಗಿರುವ ಶಬ್ದಗಳೇ ಅಲ್ಲಿಲ್ಲವೆಂಬುದು ನಿಜ; ಆದರೆ ಆ ಶಬ್ದಗಳ ಒಳಗಿನ ಅರ್ಥದ ಅನುವಿಡಿದ ಆಚರಣೆ ಅಲ್ಲಿ ಖಂಡಿತ ಇತ್ತು. ಇದು ಬಸವಣ್ಣನವರು ಹಾಗೂ ಅವರ ನೇತೃತ್ವದಲ್ಲಿ ನಡೆದ ಕ್ರಾಂತಿಯಲ್ಲಿ ಕ್ರಿಯಾತ್ಮಕವಾಗಿ ಪಾಲ್ಗೊಂಡಿದ್ದ ಅಸಂಖ್ಯ ಶರಣ-ಶರಣೆಯರ ಅನನ್ಯ ಕೊಡುಗೆ. ಪ್ರಯೋಗಶೀಲ ಮತ್ತು ನಡೆಸಾಧ್ಯವಾದ ಪ್ರಜಾಪ್ರಭುತ್ವಕ್ಕೆ ಅವರು ಹಾಕಿಕೊಟ್ಟ ಸಿದ್ಧಾಂತಗಳು ಯಾವ ಕಾಲದ ರಾಜಕೀಯ ಕ್ಷೇತ್ರಕ್ಕೂ ಸಮರ್ಥ ಮಾಗದರ್ಶನ ಒದಗಿಸುವಂತಿರುವುದೇ ಅವುಗಳ ಅನನ್ಯತೆ. ಈ ಕಾರಣಕ್ಕಾಗಿ ಬಸವಾದಿ ಶರಣರ ವಚನಗಳಲ್ಲಿ ಪ್ರತಿಪಾದಿತವಾಗಿರುವ ಅಪ್ಪಟ ಸಮಾಜವಾದಿ ಪ್ರಜಾಸತ್ತೆಯ ಸಿದ್ಧಾಂತಗಳನ್ನು ಅರಿಯುವುದು, ಅರ್ಥೈಸುವುದು ಮತ್ತು ಅನ್ವಯಿಸಿಕೊಳ್ಳುವುದು ಇಂದಿನ ತುರ್ತಾಗಿದೆ.

ಪ್ರಭು ಮತ್ತು ಪ್ರಜೆ ಹೊಣೆಗೇಡಿಗಳಾದಾಗ:

ಆಳುವವರ ಮತ್ತು ಆಳಿಸಿಕೊಳ್ಳುವವರ ನಡುವೆ ಏರ್ಪಡುವ ಸಂಬಂಧವನ್ನು ಆಧರಿಸಿ ರಾಜಕೀಯ ವ್ಯವಸ್ಥೆಯೊಂದರ ಸ್ಥಿತಿ-ಫಲ-ಪರಿಣಾಮಗಳು ನಿರ್ಧರಿತವಾಗುತ್ತವೆ. ‘ಯಥಾ ರಾಜಾ ತಥಾ ಪ್ರಜಾ’ ಎಂಬ ಪುರಾಣ ಪರಂಪರೆಯ ಗಾದೆಮಾತಿನ ಅರ್ಥ ಇಂದು ಅರ್ಧಸತ್ಯಕ್ಕೆ ಇಳಿದಿದ್ದು, ಅದನ್ನು ಈಗ ‘ಯಥಾ ಪ್ರಜಾ ತಥಾ ರಾಜಾ’ ಎಂದೇ ತಿರುಗಿಸಿಕೊಳ್ಳಬೇಕಿದೆ. ಯಾಕೆಂದರೆ ಪ್ರಜಾಪ್ರಭುತ್ವದಲ್ಲಿ ಪ್ರಭುಗಳನ್ನು ಆರಿಸುವವರು ಪ್ರಜೆಗಳೇ ಅಲ್ಲವೆ? ಪ್ರಜೆಗಳು ತಮ್ಮ ಹಕ್ಕುಬಾಧ್ಯತೆಗಳನ್ನು ಮರೆತು, ಅಥವಾ ಮಾರಿಕೊಂಡು, ಮೂರ್ಖತನದಿಂದ ಆರಿಸಿ ಕಳಿಸುವ ನಾಯಕರು ಅವರ ‘ಗುಣ ಮತ್ತು ಕುಲಬಾಂಧವರೇ’ ಆಗುವುದು ಸಹಜ. ಹೀಗಿರುವಾಗ ಅವರು ಕೆಟ್ಟವರು, ಇವರು ಸಾಚಾ ಎಂದು ಹೇಳುವ ಹಾಗೆಯೇ ಇಲ್ಲ. ಇಬ್ಬರೂ ಸಮಾನ ಭಂಡರು, ಭ್ರಷ್ಟರು, ದುರಾಚಾರಿಗಳು, ದೇಶದ್ರೋಹಿಗಳು ಹಾಗೂ ಫಲಾನುಭವಿಗಳು ಕೂಡ. ಸತ್ಯ ಸ್ಥಿತಿ ಹೀಗಿರುವಾಗ ಒಟ್ಟು ವ್ಯವಸ್ಥೆ ಕೆಡಿಸಿದವರು ಅಥವಾ ಹಾಳು ಮಾಡಿದವರು ಯಾರು? ಎಂದು ಪ್ರಶ್ನಿಸಿದರೆ ಎಲ್ಲರೂ ಕುಂಬಳಕಾಯಿ ಕಳ್ಳರೇ ಎಂದು ಹೇಳಬೇಕಾಗುತ್ತದೆ. ಮೊದಲು ಕಾಶ್ಮೀರದ ದೊರೆಯಾಗಿದ್ದು, ಅನಂತರ ಕಲ್ಯಾಣಕ್ಕೆ ಬಂದು ಶರಣರಾದ-ಮೋಳಿಗೆ ಮಾರಯ್ಯ ಇಂಥ ಸ್ಥಿತಿಯನ್ನೆ ತಮ್ಮ ಒಂದು ವಚನದಲ್ಲಿ ಸಮರ್ಥವಾಗಿ ಚಿತ್ರಿಸಿದ್ದಾರೆ. ಮಾತ್ರವಲ್ಲ; ಅಂಥ ಸ್ಥಿತಿ ಎದುರಾದಾಗ ಅದನ್ನು ಸುಸ್ಥಿತಿಗೆ ತರಲು ಅಗತ್ಯವಿರುವ ಮಾರ್ಗವನ್ನೂ ತೋರಿಸುತ್ತಾರೆ. ತುಂಬ ಕುತೂಹಲಕಾರಿಯಾಗಿದೆ ಅವರ ಆ ಚಿಂತನೆ:

ಆಳಿನಪಮಾನ ಆಳ್ದಂಗೆಂದಲ್ಲಿ, ಆಳ್ದನಪಮಾನ ಆಳಿಂಗೆ ಬಂದಲ್ಲಿ,
ಉಭಯದ ನೋವು ಒಂದೆಂದು ತಿಳಿದಲ್ಲಿ,
ಕರ್ತನ ಭೃತ್ಯ ನುಡಿದನೆಂದು ಹೊತ್ತು ಹೋರಲೇತಕ್ಕೆ?
ತನ್ನ ಮನೆ ಬೇವಲ್ಲಿ ಕೆಡಹಿ ಕಿತ್ತಡೆ ಕೇಡೆ?
ನಾನೊಡೆಯ, ತುಡುಗುಣಿ ಸವಿತ,
ಅವನೊಡೆಯನಲ್ಲ, ನಾನಡಿಗನಲ್ಲ,
ನಿಃಕಳಂಕ ಮಲ್ಲಿಕಾರ್ಜುನಾ.

(ಮೋಳಿಗೆ ಮಾರಯ್ಯನವರು ಇಲ್ಲಿ ಪ್ರಸ್ತಾಪಿಸುತ್ತಿರುವುದು ಹೊಂದಾಣಿಕೆ ಇರದ ಮನುಷ್ಯನ ಅಂತರಂಗ ಮತ್ತು ಬಹಿರಂಗದ ರಾಜಕೀಯ ಕಿತ್ತಾಟದ ಬಗ್ಗೆ. ಶರಣರ ವಚನಗಳು ಮನುಷ್ಯನ ಅಂತರಂಗದ ಆನುಭಾವಿಕ ಸ್ಥಿತಿಗತಿಯ ಬಗ್ಗೆ ಮಾತಾಡುತ್ತಲೇ ಲೌಕಿಕ ಜಗತ್ತಿನ ಸಮಸ್ಯೆಗಳನ್ನೂ ಎತ್ತಿ ತೋರಿ, ಪರಿಹಾರ ಸೂಚಿಸುವುದು ಕುತೂಹಲಕಾರಿ ಸತ್ಯ. ಹೀಗೆ ಲೌಕಿಕ ಮತ್ತು ಆನುಭಾವಿಕ ಎರಡನ್ನು ಗಮನದಲ್ಲಿಟ್ಟುಕೊಂಡೇ ವಚನಗಳನ್ನು ರಚಿಸಿರುವುದು ಒಂದು ಅನನ್ಯ ಕ್ರಮ. ವೈಯಕ್ತಿಕ ಹಾಗೂ ಸಾಮಾಜಿಕ ಎರಡೂ ವಲಯಗಳ ಬದುಕು ಏಕಕಾಲಕ್ಕೆ ಪ್ರಗತಿಪಥದಲ್ಲಿ ಸಾಗಬೇಕೆಂಬ ಆಶಯ ಇಲ್ಲಿರುವುದು ಗಮನಾರ್ಹ.)

ಆಡಳಿತದಲ್ಲಿ ಒಂದು ಕೆಡುಕು, ದುರ್ಘಟನೆ, ಅವ್ಯವಹಾರ ಅಥವಾ ನಡೆಯಬಾರದ ಕೆಲಸ ನಡೆದಿದೆ ಎಂದಿಟ್ಟುಕೊಂಡರೆ, ಅದು ಯಾರಿಂದ ಆಗಿದೆ? ಯಾರಿಗೆ ಆಗಿದೆ? ಪ್ರಜೆ ಮಾಡಿದ ತಪ್ಪಿನಿಂದ ಪ್ರಭುವಿಗೆ ಆಗಿದೆಯೋ? ಅಥವಾ ಪ್ರಭು ಮಾಡಿದ ಅಪರಾಧದಿಂದ ಪ್ರಜೆಗಳಿಗೆ ಆಗಿದೆಯೋ? ಎಂಬ ಪ್ರಶ್ನೆಗಳು ಏಳುವುದು ಸಹಜ. ಇಂಥ ಪ್ರಶ್ನೆಗಳಿಗೆ ಉತ್ತರ ಕೊಡುವುದು ಬಹಳ ಕಷ್ಟದ ಕೆಲಸ. ಉತ್ತರ ಏನೇ ಇರಲಿ, ಕೆಡುಕು ಅಥವಾ ಅವ್ಯವಹಾರ ನಡೆದಿರುವುದಂತೂ ನಿಜವೇ ಆಗಿರುವಾಗ, ಅದರ ಹಿನ್ನೆಲೆಯನ್ನು ಮೊದಲು ಅರಿಯಬೇಕು ಎಂಬುದೇ ಮೋಳಿಗೆ ಮಾರಯ್ಯನವರ ಸ್ಪಷ್ಟ ಪ್ರತಿಪಾದನೆ. ಅಂಥ ಸಂದರ್ಭದಲ್ಲಿ ಈ ಬಗೆಯ ಪ್ರಶ್ನೆಗಳೇ ನಿರರ್ಥಕ ಎಂಬಂರ್ಥದಲ್ಲಿ ಅವುಗಳನ್ನು ಸಾರಾಸಗಟಾಗಿ ನಿರಾಕರಿಸುತ್ತಾರೆ. ಅವರ ಅಭಿಪ್ರಾಯದಲ್ಲಿ ಇದು ಇಬ್ಬರೂ ಮಾಡಿದ ಅಪರಾಧದ ಒಟ್ಟು ಮೊತ್ತ. ಯಾಕೆ ಮೋಳಿಗೆ ಮಾರಯ್ಯನವರು ಹಾಗೆ ಹೇಳುತ್ತಾರೆ? ಎಂಬುದು ಕುತೂಹಲಕಾರಿ ಅಂಶ. ವಚನದ ಕೊನೆಯ ಭಾಗದಲ್ಲಿ ಈ ಕುತೂಹಲಕ್ಕೆ ಉತ್ತರವಿದೆ. ಈ ಅಪರಾಧಕ್ಕೆ ನೀನು ಕಾರಣ ಎಂದು ಆಳುವವನಿಗೆ ಹೇಳಿದರೆ, ಅಥವಾ ನೀನು ಕಾರಣ ಎಂದು ಪ್ರಜೆಗೆ ಹೇಳಿದರೆ, ಅದಕ್ಕೆ ಅವರಿಬ್ಬರೂ ಪ್ರತಿಕ್ರಿಯಿಸುವ ಬಗೆ ಜಗಳದ ಸ್ವರೂಪದಲ್ಲೇ ಇರುತ್ತದೆ. ‘ಏ ನಾನು ಒಡೆಯನಿದ್ದೇನೆ, ತುಡುಗು ಮಾಡಿ ಉಣ್ಣುತ್ತೇನೆ ನಿನಗೇನು?’ ಎಂದು ಒಡೆಯ ದರ್ಪ ತೋರಿಸಿದರೆ, ‘ನೀನು ನನ್ನ ಒಡೆಯನಲ್ಲ, ನಾನು ನಿನ್ನ ಅಡಿಯಾಳಲ್ಲ’ ಎಂದು ಪ್ರಜೆ ಪ್ರತಿವಾದಿಸುತ್ತಾನೆ! ಈ ವಾದವು, ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲಿ ಸಾಗಿ ಇನ್ನೂ ಹೆಚ್ಚಿನ ಅನಾಹುತಗಳಿಗೆ ಕಾರಣವಾಗುತ್ತದೆಯೇ ಹೊರತು, ಅದರಿಂದ ಯಾವ ಪ್ರಯೋಜನವೂ ಇಲ್ಲ, ಒಂದು ಪರಿಹಾರಾತ್ಮಕ ತೀರ್ಮಾನವೂ ಸಿಗುವುದಿಲ್ಲ.

ವಸ್ತುಸ್ಥಿತಿ ಹೀಗಿರುವಾಗ ಅದಕ್ಕೆ ಪರಿಹಾರವೇನು? ಎಂಬುದೇ ಇಲ್ಲಿರುವ ಮುಖ್ಯ ಪ್ರಶ್ನೆ. ಇದಕ್ಕೆ ಮೋಳಿಗೆ ಮಾರಯ್ಯನವರು ಕೊಡುವ ಉತ್ತರವೇ ಈ ವಚನದ ಬಹುಮುಖ್ಯ ಭಾಗ. ಅವರು ಹೇಳುತ್ತಾರೆ, ಪರಿಸ್ಥಿತಿ ಹದಗೆಡಲು ಇಬ್ಬರೂ ಕಾರಣರಾಗಿರುವಾಗ, ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುವುದರಲ್ಲಿ ಅರ್ಥವಿಲ್ಲ. ಇದಕ್ಕೆ ಬದಲಾಗಿ, ಇಬ್ಬರ ಕಾರಣದಿಂದಲೂ ಸುಟ್ಟುಹೋಗುತ್ತಿರುವ ಇಡೀ ಮನೆಯನ್ನೇ ಕೆಡವಿಬಿಡುವುದು ಅಥವಾ ಕಿತ್ತೊಗೆದುಬಿಡುವುದು ಸರಿಯಾದ ದಾರಿ ಎಂಬುದು ಅವರ ಸ್ಪಷ್ಟ ಪ್ರತಿಪಾದನೆ. (‘ಉಭಯದ ನೋವು ಒಂದೆಂದು ತಿಳಿದಲ್ಲಿ, ಕರ್ತನ ಭೃತ್ಯ ನುಡಿದನೆಂದು ಹೊತ್ತು ಹೋರಲೇತಕ್ಕೆ? ತನ್ನ ಮನೆ ಬೇವಲ್ಲಿ ಕೆಡಹಿ ಕಿತ್ತಡೆ ಕೇಡೆ?) ಅಂದರೆ, ಒಂದು ವ್ಯವಸ್ಥೆ ಕೆಟ್ಟಾಗ, ಅದನ್ನು ಕೆಡಿಸಿದವರನ್ನು ಹುಡುಕುತ್ತ ಹೋಗುವುದು ಅಥವಾ ಆ ಕೆಡುಕಿನ ಬಗ್ಗೆಯೇ ಯೋಚಿಸುತ್ತ ಕುಳಿತುಕೊಳ್ಳುವುದರಲ್ಲಿ ಅರ್ಥವಿಲ್ಲ, ಹಾಗೆ ಮಾಡಹೊರಡುವುದು ನಿರರ್ಥಕ. ಕೆಟ್ಟ ವ್ಯವಸ್ಥೆಯನ್ನು ಅಲ್ಲಿಗೇ ಬಿಟ್ಟು, ಹೊಸ ವ್ಯವಸ್ಥೆ ಕಟ್ಟುವ ಪ್ರಗತಿಪರ ಆಶಯವೇ ಈ ವಚನದ ಪ್ರಧಾನ ಚಿಂತನೆ! ಆರೋಪ-ಪ್ರತ್ಯಾರೋಪಗಳು ನಡೆಯುವಾಗ ಉಂಟಾಗುವ ಅರಾಜಕ ಸ್ಥಿತಿಯನ್ನು ತೊಡೆದು ಹಾಕಲು ಪ್ರಜೆ ಮತ್ತು ಪ್ರಭು ಇಬ್ಬರೂ ಸನ್ನದ್ಧರಾಗಬೇಕೆಂಬ ಧ್ವನಿಯೇ ಇಲ್ಲಿದೆ. ಪ್ರಜೆಯಿಂದಲೇ ಆಗಲಿ, ಪ್ರಭುವಿನಿಂದಲೇ ಆಗಲಿ, ಹದಗೆಟ್ಟುಹೋದ ವ್ಯವಸ್ಥೆಯನ್ನು ಸುಸ್ಥಿತಿಗೆ ತರುವ ಮಾರ್ಗ ಯಾವುದು ಎಂಬುದನ್ನು ಹೀಗೆ ಸೂಚಿಸುವಲ್ಲಿಯೇ ವಚನಕಾರರ ಸಕಾರಾತ್ಮಕ ಮತ್ತು ಪ್ರಗತಿಪರ ರಾಜಕೀಯ ಚಿಂತನೆ ಸ್ಪಷ್ಟವಾಗುತ್ತದೆ. ಮೊದಲೇ ಹೇಳಿದಂತೆ, ಈ ಕ್ರಮವು ಮನುಷ್ಯನ ವೈಯಕ್ತಿಕ ಪ್ರಗತಿಗೂ ಪೂರಕ, ಆತನ ಒಟ್ಟಾರೆ ಸಾಮುದಾಯಿಕ ಬದುಕಿನ ಸ್ವಾಸ್ಥ್ಯಕ್ಕೂ ಪ್ರೇರಕ.
ಹೀಗೆ ಅತ್ಯಂತ ವಿನೂತನ ಮತ್ತು ಪ್ರಗತಿಪರ ರಾಜಕೀಯ ಸಿದ್ಧಾಂತಗಳನ್ನು ಪ್ರತಿಪಾದಿಸಿದ ಶರಣರು, ಒಂದು ಪರಿಪೂರ್ಣ, ಪರಿಶುದ್ಧ ಪ್ರಜಾಸತ್ತೆಗೆ ಅಗತ್ಯವಿರುವ ಖಚಿತ ಮಾರ್ಗಗಳನ್ನೂ ತೋರಿಸಿದರು. ರಾಜಕೀಯ ರಂಗದ ಮತ್ತು ಆಡಳಿತಾತ್ಮಕ ಬದಲಾವಣೆಯ ವಿಷಯ ಕುರಿತಂತೆ ಅನೇಕ ಮೌಲಿಕ ಆಲೋಚನೆಗಳನ್ನು ಮಂಡಿಸುತ್ತಾರೆ. ಇದರಲ್ಲಿ ಬಸವಣ್ಣನವರ ಕೆಲವು ಚಿಂತನೆಗಳು ವರ್ತಮಾನದ ರಾಜಕೀಯ ಕ್ಷೇತ್ರಕ್ಕೂ, ರಾಜಕಾರಣಿಗಳಿಗೂ ಮತ್ತು ಸಮಾಜವಾದದ ಸೋಗು ಹಾಕಿ ಮೋಸ ಮಾಡುವವರಿಗೂ ಪಾಠದಂತಿದೆ. ಅಷ್ಟೇ ಅಲ್ಲ, ಅವರು ಕಟ್ಟಿಕೊಟ್ಟ ಕೆಲವು ರಾಜಕೀಯ ಪರಿಕಲ್ಪನೆಗಳು ಆರೋಗ್ಯಪೂರ್ಣ ಪ್ರಜಾಸತ್ತೆಯ ಮತ್ತು ಪ್ರಜಾಧರ್ಮದ ಬುನಾದಿಯಂತಿರುವುದೂ ಕುತೂಹಲಕಾರಿ ಸತ್ಯ. ಜಗತ್ತಿನ ಯಾವುದೇ ರಾಷ್ಟ್ರದ ರಾಜಕೀಯ ರಂಗಕ್ಕೂ ಮಾರ್ಗದರ್ಶನ ಮಾಡಬಲ್ಲ ಚಿಂತನೆಗಳು ಅವಾಗಿರುವುದು ಕನ್ನಡದ ಹೆಮ್ಮೆ. ಅಂಥ ಮೂರು ಅಪೂರ್ವ ಮತ್ತು ಅನನ್ಯ ರಾಜಕೀಯ ಪರಿಕಲ್ಪನೆಗಳನ್ನು ಕುರಿತು ಇಲ್ಲಿ ಅವಲೋಕಿಸಬಹುದಾಗಿದೆ.

ರಾಜಬೀದಿ:

ಪ್ರಜಾಪ್ರಭುತ್ವದ ನೈಜ, ನೇರ ಹಾಗೂ ಪರಿಶುದ್ಧ ಮಾರ್ಗವನ್ನು ‘ರಾಜಬೀದಿ’ ಎಂಬ ವಿಶೇಷ ಶಬ್ದದ ಮೂಲಕ ಗುರುತಿಸುವ ಬಸವಣ್ಣನವರು, ಆ ಶಬ್ದದ ಒಳಗೇ ಅದರ ಲಕ್ಷ್ಯ-ಲಕ್ಷಣಗಳನ್ನೂ ಧ್ವನಿಸುತ್ತಾರೆ. ಅದರೊಂದಿಗೆ ಆ ಬಗೆಯ ರಾಜಬೀದಿಯಲ್ಲಿ ನಡೆಯುವವರ ವ್ಯಕ್ತಿತ್ವ ಮತ್ತು ವರ್ತನೆ ಹೇಗಿರಬೇಕೆಂಬುದನ್ನೂ ಸತ್ವಯುತ ಮಾತುಗಳಲ್ಲಿ ಸ್ಪಷ್ಟಪಡಿಸಿದ್ದಾರೆ. ಮಾತ್ರವಲ್ಲ, ಉದಾಹರಣೆಯ ಮೂಲಕವೂ ಸಾಕ್ಷೀಕರಿಸುತ್ತಾರೆ. ಈ ನೆಲೆಯಲ್ಲಿಯೇ ಅವರ ವಚನವೊಂದು ತುಂಬ ಮಹತ್ವದ್ದಾಗುತ್ತದೆ.

ಭೂತಿಕನ ಸೀರೆಯ ಸಾತ್ವಿಕ ನೆರೆ ಉಟ್ಟಡೆ
ಭೂತಿಕ ಸಾತ್ವಿಕನಾದ, ಸಾತ್ವಿಕ ಭೂತಿಕನಾದ:
ಈ ಮಾತು ಬಿದ್ದುದು ನೋಡಾ ರಾಜಬೀದಿಯಲ್ಲಿ.
ಅಯ್ಯಾ ಭೂತ ಕೆಣಕಿದಡಿಲ್ಲ, ಮಾತ ನೂಕಿದಡಿಲ್ಲ
ಓತು ಕೂಡುವ ಅನುವ, ಕೂಡಲಸಂಗಮದೇವ ತಾ ಬಲ್ಲ.

ಒಂದರ್ಥದಲ್ಲಿ ಈ ವಚನ ಪ್ರಜಾಪ್ರಭುತ್ವದ ಪರಿಪೂರ್ಣ ವ್ಯಾಖ್ಯೆಯೇ ಹೌದು. ರಾಜಕೀಯದಲ್ಲಿ ನಡೆಯುವ ಅದಲು-ಬದಲು ಕಂಚೀ ಬದಲಿನ ನಾಟಕಗಳಲ್ಲಿ ಭ್ರಷ್ಟರು, ಭಂಡರು ಮತ್ತು ದುಷ್ಟರು ಮಾಡಬಹುದಾದ ಕುಚೋದ್ಯವನ್ನು ಬಸವಣ್ಣನವರು ಇಲ್ಲಿ ಮೊದಲು ಹುಬೇಹುಬಾಗಿ ಎತ್ತಿ ತೋರಿಸುತ್ತಾರೆ. ಒಳ್ಳೆಯವರ ಪೋಷಾಕನ್ನು ಕೆಟ್ಟವರೂ, ಕೆಟ್ಟವರ ಪೋಷಾಕನ್ನು ಒಳ್ಳೆಯವರೂ ಹಾಕಿಕೊಂಡು, ತಾವು ಸಾಚಾಗಳೆಂದು ಸಾಬೀತುಪಡಿಸಲು ಹೊರಟ ಅಡ್ಡಕಸುಬಿಗಳ ಚಿತ್ರಣ ಇಲ್ಲಿದೆ. ರಾಜಕೀಯದಲ್ಲಿ ಇದು ನಿರಂತರ ನಡೆಯುತ್ತಲೇ ಇರುವ ವಿದ್ಯಮಾನ. ರಾಜಕೀಯ ಲಾಭಗಳಿಗಾಗಿ ನಡೆಸುವ ಪಕ್ಷಾಂತರಿಗಳ ಆಟವೇ ಇದಕ್ಕೆ ಸಾಕ್ಷಿ. ಸೈದ್ಧಾಂತಿಕ ಬದ್ಧತೆ ಇಲ್ಲದ, ಅಲ್ಲಿ ಅವಕಾಶ ಸಿಗದಿದ್ದರೆ ಇಲ್ಲಿಗೆ, ಇಲ್ಲಿ ಅವಕಾಶ ಸಿಗದಿದ್ದರೆ ಅಲ್ಲಿಗೆ-ಜಿಗಿಯುವ ಅವಕಾಶವಾದಿ ರಾಜಕಾರಣಿಗಳ ನಡೆ ಆಡಳಿತಕ್ಕೆ ಬಹುದೊಡ್ಡ ಮಾರಕ. ಮುಖವಾಡ ಬದಲಿಸಿ ಅವಕಾಶಗಳಿಗಾಗಿ ಅಲೆದಾಡುವ ಇಂಥ ವೇಷಧಾರಿಗಳನ್ನು ಕೆಣಕುವ ಬಸವಣ್ಣ, ಇಂಥ ನಿಮ್ಮ ಆಟ ನಿಜವಾದ ‘ರಾಜಬೀದಿ’ಯಲ್ಲಿ, ಅಂದರೆ ಪ್ರಜಾಪ್ರಭುತ್ವದ ಮಾರ್ಗದಲ್ಲಿ ಬಹಳ ಕಾಲ ನಡೆಯುವುದಿಲ್ಲ. ಮಾತ್ರವಲ್ಲ, ನಿಮ್ಮ ಈ ಕೆಟ್ಟ ನಡೆಯನ್ನು ಒಮ್ಮೆ ಕೆಣಕಿಬಿಟ್ಟರೆ ನಿಮ್ಮೊಳಗೆ ಹೊಕ್ಕಿರುವ ದುಷ್ಟತನದ ಭೂತ ತಂತಾನೇ ಹೊರಗೆ ಓಡಿಹೋಗುತ್ತದೆ ಎಂದೂ, ನಿಮ್ಮ ಮಾತುಗಳನ್ನು ಎತ್ತಿ ಬಿಸಾಕಿಬಿಟ್ಟರೆ ಅಲ್ಲಿಗೆ ನಿಮ್ಮ ಕಥೆ ಮುಗಿಯುತ್ತದೆಂದೂ ಎಚ್ಚರಿಸುತ್ತಾರೆ. ಪರಿಪೂರ್ಣ ಪ್ರಜಾಸತ್ತೆಯ ಜಾರಿಗಾಗಿ ಇಂಥ ಎಚ್ಚರಿಕೆ ಕೊಡುವುದು ಅಗತ್ಯವೇ ಆಗುತ್ತದೆ. ಒಂದರ್ಥದಲ್ಲಿ ಇದು ಕಾನೂನಾತ್ಮಕ ಕ್ರಮವೂ ಹೌದು. ಇಂಥ ಭಯ ಅಥವಾ ಹೆದರಿಕೆ ಇಲ್ಲವಾದರೆ ಭೂತ-ಪ್ರೇತಗಳ ಆಟವೇ ನಡೆಯುವುದು ಸಹಜ. ಪ್ರಜಾಪ್ರಭುತ್ವದಲ್ಲಿ ಈ ಥರದ ಎಚ್ಚರಿಕೆ ಬೇಕು.

ಹೀಗೆ ರಾಜಬೀದಿಯ ಲಕ್ಷಣ ಹಾಗೂ ಅದರ ಕ್ರಿಯಾತ್ಮಕ ಸ್ವರೂಪವನ್ನು ಸ್ಪಷ್ಟಪಡಿಸುವ ಬಸವಣ್ಣನವರು, ಮುಂದಿನ ಭಾಗದಲ್ಲಿ ಇದಕ್ಕಿಂತಲೂ ಮುಖ್ಯವಾದ, ಪ್ರಜಾಪ್ರಭುತ್ವಕ್ಕೆ ಅತ್ಯಗತ್ಯವಾಗಿ ಬೇಕಾದ ಸಮನ್ವಯದ ಮಾರ್ಗವನ್ನು ತೋರಿಸುತ್ತಾರೆ. ಸಾತ್ವಿಕರಂತೆ ನಟಿಸುವ ಭೂತಗಳು ತಮ್ಮ ಆ ಎಲ್ಲ ನಾಟಕದಾಟವನ್ನೂ ಬಿಟ್ಟು, ಎಲ್ಲರೂ ಪ್ರೀತಿಯಿಂದ ಅರಿತು, ಅಪ್ಪಿಕೊಂಡು (ಓತು ಕೂಡುವ ಅನುವ) ಬದುಕುವ ಸುಖವನ್ನು ತಿಳಿದರೆ ಅದೇ ನಿಜವಾದ ಪ್ರಜಾಸತ್ತೆಯ ಮಾರ್ಗ. ಅದು ನಾಗರಿಕ ಸಮಾಜ ಅನುಸರಿಸಬೇಕಾದ ಮೌಲ್ಯವೂ ಹೌದು. ಈ ವಚನದ ಪ್ರಧಾನ ಉದ್ದೇಶ ಎಲ್ಲರೂ ತಮ್ಮ ತಮ್ಮ ಕಪಟತನವನ್ನು, ಅಹಂ ಮೂಲದ ದುರ್ನಡತೆಗಳನ್ನು ಹಾಗೂ ಭಿನ್ನಾಭಿಪ್ರಾಯಗಳನ್ನು ದೂರವಿಟ್ಟು ಅನ್ಯೋನ್ಯತೆಯಿಂದ ಬಾಳಬೇಕು. ಅದುವೇ ಪರಿಪೂರ್ಣ ಪ್ರಜಾಪ್ರಭುತ್ವದ ಲಕ್ಷಣ. ಈ ನೆಲೆಯಲ್ಲಿಯೇ ಬಸವಣ್ಣನವರು ಅದನ್ನು ಒಟ್ಟಾಗಿ ‘ರಾಜಬೀದಿ’ ಎಂದು ಕರೆದದ್ದು. ಸರಳವಾಗಿ ಮತ್ತು ಸ್ಪಷ್ಟವಾಗಿ ಹೇಳುವುದಾದರೆ ರಾಜಬೀದಿ ಎಂದರೆ, ಅದೊಂದು ಅಪ್ಪಟ ಪ್ರಜಾಪ್ರಭುತ್ವದ ಮಾರ್ಗ.

ಅಹಂಕಾರ, ದರ್ಪ, ಸೋಗಲಾಡಿತನ, ಮೋಸ, ಮುಖವಾಡಿತನ-ಈ ಮೊದಲಾದವುಗಳೆಲ್ಲವೂ ಪ್ರಜಾಸತ್ತೆಯ ಪರಮ ವೈರಿಗಳೆಂಬ ಅರ್ಥವನ್ನು ಧ್ವನಿಸುವ ಪ್ರಸ್ತುತ ವಚನ, ಅವೆಲ್ಲವನ್ನೂ ದೂರ ಓಡಿಸಿ, ಒಂದಾಗಿ ಬಾಳುವ ದಾರಿ ತೋರಿಸುತ್ತದೆ. ಪ್ರಜಾಪ್ರಭುತ್ವಕ್ಕೆ ನಿಜವಾದ ಗೌರವ ತರುವ ದಾರಿ ಇದು. ಇಂಥ ಶುದ್ಧ ರಾಜಕೀಯ ಪಥವೊಂದನ್ನು ಬಸವಣ್ಣನವರು ತೋರಿಸಿರುವುದನ್ನು ವರ್ತಮಾನದ ರಾಜಕಾರಣಿಗಳು ಮೊದಲು ಅರಿಯಬೇಕಿದೆ, ಮತ್ತು ಅಂಥ ‘ರಾಜಬೀದಿ’ ಯಲ್ಲಿ ನಡೆವ ಪ್ರಾಮಾಣಿಕತೆ ತೋರಬೇಕಿದೆ. ಬಸವಣ್ಣನವರು ತೋರಿಸಿದ ಆ ರಾಜಬೀದಿಯ ಸಿದ್ಧಾಂತಗಳೇ ಇಂದಿನ ಸಂವಿಧಾನದ ಮೂಲ ಆಶಯಗಳೂ ಆಗಿರುವುದು ಗಮನಾರ್ಹ. ಒಂದೇ ವ್ಯತ್ಯಾಸವೆಂದರೆ, ಶರಣರು ತಾವು ಹೇಳಿದ ಆ ತತ್ವಗಳಿಗೆ ಬದ್ಧರಾಗಿ ನಡೆದು, ನಂತರ ನುಡಿದರು; ಆದರೆ, ಈಗಿನ ರಾಜಕಾರಣಿಗಳೋ, ತದ್ವಿರುದ್ಧ! ಮಾತಿನಲ್ಲಿ ಮಹಾಶೂರರು, ನಡೆಯಲ್ಲಿ ‘ಶೂನ್ಯ’ ಸಾಧಕರು. ಇಂದು ಈ ತತ್ವಗಳು ಮುದ್ರಿತ ಪುಸ್ತಕದಲ್ಲಿ ಮಾತ್ರ ಅಚ್ಚಳಿಯದೆ ಇವೆ!

ರಾಜತೇಜ:

‘ರಾಜಬೀದಿ’ಯ ಸ್ವರೂಪ, ಲಕ್ಷಣ ಮತ್ತು ಅದರ ಗುರಿ-ಗಮನಗಳನ್ನು ಸ್ಪಷ್ಟವಾಗಿ ನಿಷ್ಕರ್ಷಿಸಿಕೊಂಡ ನಂತರ, ಅಂಥ ರಾಜಬೀದಿಯಲ್ಲಿ ನಡೆಯುವ, ನಡೆಯಬೇಕಾದ ವ್ಯಕ್ತಿಯ (ನಾಗರಿಕನ) ವ್ಯಕ್ತಿತ್ವ ಮತ್ತು ನಡತೆಗಳು ಹೇಗಿರಬೇಕೆಂಬುದರ ಖಚಿತ ಸೂಚನೆಗಳನ್ನು ಕೊಡುತ್ತಾರೆ. ಈ ಚಿತ್ರಣ ಕೊಡುವಾಗ ಅವರು ಬೇರೆ ಯಾವುದೋ ಎರಡನೆಯ ವ್ಯಕ್ತಿಯ ಸಾಕ್ಷಿ ಕೊಡುವುದಿಲ್ಲ; ಬದಲಾಗಿ, ತಮ್ಮ ವೈಯಕ್ತಿಕ ನಡೆಯ ಮೂಲಕವೇ ಅದನ್ನು ಪ್ರಮಾಣೀಕರಿಸಿ ಸ್ಪಷ್ಟಪಡಿಸುತ್ತಾರೆ. ಬರೀ ಉಪದೇಶ ಕೊಡುವುದಲ್ಲ; ಏನನ್ನಾದರೂ ಹೇಳುವ ಮೊದಲು ತಾನೇ ಮಾಡಿ ತೋರಿಸುವುದು ಪ್ರಜಾಪ್ರಭುತ್ವದ ಮಾರ್ಗ ಎಂಬ ಅರ್ಥವೂ ಇಲ್ಲಿದೆ. ಅದನ್ನೇ ಅವರು ‘ರಾಜತೇಜ’ ಎಂಬ ವಿಶೇಷ ಶಬ್ದದ ಮೂಲಕ ಸ್ಪಷ್ಟಪಡಿಸುತ್ತಾರೆ. ರಾಜತೇಜ ಎಂದರೇನು, ಅದು ಒಬ್ಬ ವ್ಯಕ್ತಿಯಲ್ಲಿ ಹೇಗಿರಬೇಕು ಎಂಬುದಕ್ಕೆ ಅವರ ಈ ಮುಂದಿನ ವಚನದಲ್ಲಿ ಉತ್ತರವಿದೆ-

ನ್ಯಾಯ ನಿಷ್ಠುರಿ, ದಾಕ್ಷಿಣ್ಯಪರ ನಾನಲ್ಲ,
ಲೋಕವಿರೋಧಿ; ಶರಣನಾರಿಗಂಜುವನಲ್ಲ,
ಕೂಡಲಸಂಗಮದೇವರ ರಾಜತೇಜದಲ್ಲಿಪ್ಪೆನಾಗಿ.

ಪ್ರಜಾಪ್ರಭುತ್ವದ ತತ್ವಗಳನ್ನು ಅನುಸರಿಸುವ ನಾಗರಿಕನ ಬಹುಮುಖ್ಯ ಲಕ್ಷಣಗಳೆಂದರೇನೇ ನಿಷ್ಠುರತೆ ಮತ್ತು ದಾಕ್ಷಿಣ್ಯ ರಹಿತ ನಡೆ. ಇವೆರಡು ಇದ್ದರೆ ಪ್ರಜೆ ಮತ್ತು ಪ್ರಜಾಪ್ರಭುತ್ವ ಜೀವಂತ ಇವೆಯೆಂದೇ ಅರ್ಥ. ನೋವಿನ ವಿಷಯವೆಂದರೆ ಇಂದಿನ ಪ್ರಜಾಪ್ರಭುತ್ವದಲ್ಲಿ ಇವೇ ಗೈರಾಗಿರುವುದು! ಬಸವಣ್ಣನವರು ತನ್ನಲ್ಲಿರುವ ಈ ಎರಡೂ ಗುಣಗಳು ಲೋಕವಿರೋಧಿಯೆಂಬಂತೆ ಕಾಣಿಸುತ್ತವೆನ್ನುತ್ತಾರೆ. ಜನ ಲೋಕವಿರೋಧಿ ಎಂದರೂ ಸರಿ, ನಾನು ಯಾರಿಗೂ ಅಂಜುವುದಿಲ್ಲ ಎಂದು ಹೇಳುತ್ತಾರೆ. ಪ್ರಜಾಪ್ರಭುತ್ವದ ‘ರಾಜಬೀದಿ’ಯಲ್ಲಿ ನಡೆಯುವ ವ್ಯಕ್ತಿಗೆ ಇವು ಇರಲೇಬೇಕಾದ ಲಕ್ಷಣಗಳು. ಲೋಕದ ನಡವಳಿಕೆಗಳೇನೇ ಇದ್ದರೂ ಅವಕ್ಕೆ ಎಳ್ಳಷ್ಟೂ ಅಂಜುವುದಿಲ್ಲ ಎಂದು ಹೇಳುವ ಅವರು, ಅದಕ್ಕೆ ಕಾರಣ ನಾನು ಕೂಡಲಸಂಗಮದೇವರ ‘ರಾಜತೇಜ’ದಲ್ಲಿದ್ದೇನೆ ಎನ್ನುತ್ತಾರೆ. ಕೂಡಲಸಂಗಮದೇವರ ‘ರಾಜತೇಜ’ ಎಂದರೆ ಅದು ವ್ಯಕ್ತಿಯ ಅರಿವಿನ ಮತ್ತು ಆತ್ಮಸಾಕ್ಷಿಯ ನಡೆರೂಪ-ನುಡಿರೂಪ. ಅಂಥ ಆತ್ಮಸಾಕ್ಷಿಗೆ ಬದ್ಧವಾಗಿ ನಡೆವ ನಿಷ್ಠುರ ಹಾಗೂ ಗಟ್ಟಿ ವ್ಯಕ್ತಿತ್ವವೇ ‘ರಾಜತೇಜ’. ಅದಕ್ಕೆ ಯಾರ ಅಥವಾ ಯಾವುದರ ಹೆದರಿಕೆಯೂ ಇರಲಾರದು. ಆ ಬಗೆಯ ‘ರಾಜತೇಜ’ಕ್ಕೆ ಬದ್ಧನಾಗಿ ನಡೆಯುವವನೇ ಶರಣ ಎಂಬುದು ಬಸವಣ್ಣನವರ ನಿಲವು. ಒಬ್ಬ ನಿಜವಾದ ಶರಣ, ಒಬ್ಬ ನಿಜವಾದ ಪ್ರಜಾಪ್ರಭುತ್ವವಾದಿಯೇ ಆಗಿರುತ್ತಾನೆ.

ಇಂಥ ‘ರಾಜತೇಜ’ವುಳ್ಳ ಶರಣನ ಅಥವಾ ಪ್ರಜೆಯ ಮನೋಬಲ ಮತ್ತು ತತ್ವನಿಷ್ಠೆ ಹೇಗಿರುತ್ತವೆ ಎಂಬುದನ್ನು ವಚನಗಳ ಮೂಲಕ ಸ್ಪಷ್ಟಪಡಿಸುತ್ತಾರೆ. ಇಲ್ಲಿ ಗಮನಿಸಬೇಕಾದ ಮಾತೆಂದರೆ, ‘ರಾಜತೇಜ’ದ ಕ್ರಿಯಾಪರಿಕಲ್ಪನೆಗೆ ತಮ್ಮ ನಡೆಯನ್ನೇ ಉದಾಹರಣೆ ಕೊಡುವುದು. ಇಂಥ ಆತ್ಮಸಾಕ್ಷಿಪ್ರಜ್ಞೆ ರಾಜಕಾರಣಿಗಳಿಗೆ ಇರಬೇಕಾದುದು ಅಗತ್ಯ. ಅದೊಂದೇ ಇದ್ದರೂ ಏನೆಲ್ಲ ಕ್ರಾಂತಿಯಾಗಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಅವರ ವಚನವನ್ನೇ ಗಮನಿಸಬೇಕು-

ಆರು ಮುನಿದು ನಮ್ಮನೇನ ಮಾಡುವರು?
ಊರು ಮುನಿದು ನಮ್ಮನೆಂತು ಮಾಡುವರು?
ನಮ್ಮ ಕುನ್ನಿಗೆ ಕೂಸ ಕೊಡಬೇಡ
ನಮ್ಮ ಸೊಣಗಂಗೆ ತಳಿಗೆಯಲಿಕ್ಕಬೇಡ.
ಆನೆಯ ಮೇಲೆ ಹೋಹನ ಶ್ವಾನ ಕಚ್ಚಬಲ್ಲುದೆ,
ನಮಗೆ ನಮ್ಮ ಕೂಡಲಸಂಗಯ್ಯನುಳ್ಳನ್ನಕ್ಕ.

ಯಾರ ಸಿಟ್ಟಿಗೂ ಹೆದರದ, ಯಾವುದಕ್ಕೂ ಅಂಜದ, ಅನೈತಿಕ ಸಂಬಂಧ ಬೆಳೆಸುವ ಮೂಲಕ ಸ್ವಾರ್ಥ ಸಾಧಿಸಿಕೊಳ್ಳದ-ಮತ್ತು ಒಟ್ಟಾರೆ ಯಾವ ಮತ್ತು ಯಾರ ಹಂಗಿಗೂ ಒಳಗಾಗದ ಮನೋಬಲವೇ ‘ರಾಜತೇಜ’ದ ಮುಖ್ಯ ಲಕ್ಷಣವೆಂಬುದು ಈ ವಚನದಿಂದ ಸ್ಪಷ್ಟವಾಗುತ್ತದೆ. ಈ ರೀತಿ ಸ್ವತಂತ್ರ, ನಿರ್ಭಿಡೆಯ ಮನೋಭಾವ ಹೊಂದಿದ ವ್ಯಕ್ತಿಯ ನಡೆ ಸೈದ್ಧಾಂತಿಕವಾಗಿ ಅಷ್ಟೇ ಅಲ್ಲ, ಕ್ರಿಯಾತ್ಮಕವಾಗಿಯೂ ಎತ್ತರದ್ದಾಗಿರುತ್ತದೆ. ಅದನ್ನು ಬಸವಣ್ಣನವರು ಆನೆಯ ಮೇಲೆ ಹೋಗುವವನ ನಡೆಗೆ ಹೋಲಿಸುತ್ತಾರೆ. ಎರಡಾಳು ಎತ್ತರದ ಆನೆಯ ಮೇಲೆ ಕುಳಿತು ಹೋಗುವವನನ್ನು, ಎರಡಡಿಗೂ ಕಿರಿದಾದ ನಾಯಿ ಕಚ್ಚಲು ಸಾಧ್ಯವೇ? ಆನೆ ಮತ್ತು ನಾಯಿ ಇಲ್ಲಿ ಪ್ರತಿಮಾತ್ಮಕ ಪ್ರಾಣಿಗಳಾಗಿದ್ದು, ಆನೆಯ ಎತ್ತರಕ್ಕೆ ನಾಯಿ ಏರಲು ಸಾಧ್ಯವಿಲ್ಲ. ಇದೆಲ್ಲವೂ ಒಟ್ಟಾರೆಯಾಗಿ ‘ರಾಜತೇಜ’ ಹೊಂದಿದ ವ್ಯಕ್ತಿಯ ಲಕ್ಷಣ. ಅದು ಅವನ ಆತ್ಮಬಲದ ವ್ಯಕ್ತ ರೂಪ; ಮುಖದಲ್ಲಿ ಅಭಿವ್ಯಕ್ತವಾಗುವ ಕಳೆ. ಇಂಥ ಮನೋಬಲ ಹೊಂದಿದ ನಾಗರಿಕ ಮಾತ್ರ ಪ್ರಜಾಪ್ರಭುತ್ವವನ್ನು ಜೀವಂತ ಇಡಬಲ್ಲ ಸಾಮಥ್ರ್ಯ ಹೊಂದಿರುತ್ತಾನೆ. ಆ ಬಗೆಯ ನೈಷ್ಠಿಕ ಬದ್ಧತೆ ತನ್ನದೆಂದು ಬಸವಣ್ಣನವರು ಹೇಳುವಲ್ಲಿ ಅಹಂಕಾರವಿಲ್ಲ, ಆತ್ಮಸಾಕ್ಷಿ ಪ್ರಜ್ಞೆ ಇದೆ. ಇಂಥ ಆತ್ಮಸಾಕ್ಷಿ ಪ್ರಜ್ಞೆಯೇ ಪ್ರಜಾಪ್ರಭುತ್ವದ ರಕ್ಷಕ ಎಂಬುದನ್ನು ಇಲ್ಲಿ ಮರೆಯದೇ ಹೇಳಬೇಕು.

ಬಸವಣ್ಣನವರ ಮಾತುಗಳು ಬರೀ ಹೇಳಿಕೆಗಳಾಗಿರಲಿಲ್ಲ. ಅವು ‘ರಾಜತೇಜ’ದ ವಿಶೇಷ ಲಕ್ಷಣಗಳನ್ನು ಆಚರಣೆಯಲ್ಲಿ ತಂದು ತೋರಿಸಿದ ನಡೆಯ ಪ್ರತಿರೂಪಗಳಾಗಿದ್ದವು. ಅವರ ವಚನಗಳಲ್ಲಿ ವ್ಯಕ್ತವಾದ ನೇರ ಹಾಗೂ ನಿಷ್ಠುರ ಮಾತುಗಳನ್ನು ಗಮನಿಸಿದರೆ, ಅವರು ಯಾರಿಗೂ, ಯಾವುದಕ್ಕೂ ಹೆದರದೆ ತಮ್ಮ ಮಹಾಮಾರ್ಗವನ್ನು ನಿರ್ಮಿಸಿಕೊಂಡರೆಂಬುದು ಸ್ಪಷ್ಟವಾಗುತ್ತದೆ. ಕಲ್ಯಾಣದಲ್ಲಿ ಅವರು ಮಾಡಿದ ಮಹಾನ್ ಕ್ರಾಂತಿಯ ಪರಿಣಾಮವಾಗಿ, ‘ರಾಜಬೀದಿ’ಯಲ್ಲೇ ನಡೆಯುವ ಮತ್ತು ‘ರಾಜತೇಜ’ವುಳ್ಳ ಶರಣರ ದೊಡ್ಡ ಪಡೆಯೇ ನಿರ್ಮಾಣವಾದದ್ದು ಐತಿಹಾಸಿಕ ಸತ್ಯ. ಪ್ರಧಾನಿಯಾಗಿದ್ದ ಬಸವಣ್ಣನವರು ಈ ಎಲ್ಲ ಶರಣರಿಗಾಗಿ ಬಿಜ್ಜಳನ ಭಂಡಾರವನ್ನೆಲ್ಲ ಕೊಳ್ಳೆ ಹೊಡೆಯುತ್ತಿದ್ದಾರೆ ಎಂಬ ಪುಕಾರು ಹುಟ್ಟಿಕೊಳ್ಳುತ್ತದೆ. ಅದು ಕೊಂಡೆಯ ಜನರ ಮೂಲಕ ಬಿಜ್ಜಳನಿಗೂ ತಲುಪುತ್ತದೆ. ಬಿಜ್ಜಳ ಜನರ ಮಾತು ಕೇಳಿ ಕನಲಿರಲೂಬಹುದು. ಆದರೆ ಸತ್ಯ ಬೇರೆಯೇ ಇತ್ತು. ಶರಣರು ಕಾಯಕ ಜೀವಿಗಳಾಗಿದ್ದರು; ದಾಸೋಹ ತತ್ವದ ಪರಿಪಾಲಕರಾಗಿದ್ದರು. ಸತ್ಯ-ಶುದ್ಧ ಮತ್ತು ಪ್ರಾಮಾಣಿಕ ಶ್ರಮದ ಮೂಲಕ ತಮ್ಮ ಅನ್ನವನ್ನು ತಾವೇ ಸಂಪಾದಿಸಿಕೊಳ್ಳುವವರಾಗಿದ್ದರು. ಸಂಪಾದಿಸಿದ ಅನ್ನವನ್ನು ತಾವು ಉಂಡು, ಮಿಗುತಾಯವನ್ನು ದಾಸೋಹ ಪ್ರಜ್ಞೆಯ ಮೂಲಕ ಸಮಾಜಕ್ಕೆ ವಿನಿಯೋಗಿಸುತ್ತಿದ್ದರು. ಇಂಥ ಶರಣರ ಕ್ರಿಯಾತ್ಮಕ ತತ್ವಬದ್ಧತೆಯನ್ನು ಯಾರೂ ಪ್ರಶ್ನಿಸುವಂತಿರಲಿಲ್ಲ. ಹೀಗಿರುವಾಗಲೂ ಇಲ್ಲದ ಪುಕಾರುಗಳು ಕೇಳಿಬಂದಾಗ, ‘ರಾಜತೇಜ’ದ ಬಸವಣ್ಣನವರು ಸುಮ್ಮನಿರಲು ಸಾಧ್ಯವೆ? ಅಂಥ ಸಂದರ್ಭದಲ್ಲಿ ಅವರು ನೇರವಾಗಿ ರಾಜನಿಗೇ ಹೇಳಿದ್ದು ಹೀಗೆ-

ಊರ ಮುಂದೆ ಹಾಲ ಹಳ್ಳ ಹರಿಯುತಿರಲು
ಒರೆಯಾವಿನ ಬೆನ್ನ ಹರಿಯಲದೇಕಯ್ಯಾ?
ಲಜ್ಜೆಗೆಡಲೇಕೆ? ನಾಣುಗೆಡಲೇಕೆ?
ಕೂಡಲಸಂಗಮದೇವನುಳ್ಳನ್ನಕ್ಕ
ಬಿಜ್ಜಳನ ಭಂಡಾರವೆನಗೇಕಯ್ಯಾ?

ಈ ವಚನದ ಭಾಷೆ ಗಮನಿಸಬೇಕು. ಗುಸುಗುಸು ಮಾತಾಡುವ ಚಾಡಿಕೋರರಿಗೆ, ಚುಚ್ಚು ಮಾತುಗಳೇ ಸತ್ಯವೆಂದು ನಂಬಿ ಪ್ರಶ್ನಿಸಿದ ದೊರೆಗೆ- ಅದು ನೇರವಾದ ಚಾಟಿ ಬೀಸುತ್ತದೆ. ಶರಣರು ಶ್ರಮದ ಮೂಲಕವೇ ಹರಿಯುವ ಹಳ್ಳದಷ್ಟು ಸಮೃದ್ಧವಾದ ಹಾಲನ್ನು (ತಮಗೆ ಅಗತ್ಯವಿರುವುದನ್ನೆಲ್ಲ) ಪಡೆದುಕೊಳ್ಳುತ್ತಿರುವಾಗ, ಹಿಂಡದ ಹಾಗೂ ದುಷ್ಟತನದ ಆಕಳ ಹಾಲಿಗಾಗಿ ಅವರೇಕೆ ಪರದಾಡುತ್ತಾರೆ? (ಒರೆಯಾವು ಶಬ್ದಕ್ಕೆ ಹಲವು ಅರ್ಥಗಳಿವೆ-ಕಡೆಗಂದಿ ಆಕಳು, ದುಷ್ಟ ಆಕಳು, ಕರುವಿದ್ದ ಆಕಳು, ಅಡ್ಡಾದಿಡ್ಡಿ ಓಡಾಡುವ ಆಕಳು-ಹೀಗೆ) ಶ್ರಮಶಕ್ತಿಯ ಮೂಲಕ ನಮ್ಮ ಅನ್ನ ನಾವೇ ಸಂಪಾದಿಸುವಾಗ ಈ ಬಿಜ್ಜಳನ ಭಂಡಾರ ನಮಗೇಕೆ? ಎಂದು ರಾಜನನ್ನೇ ನೇರವಾಗಿ ಕೇಳುವಲ್ಲಿ ಎದ್ದುಕಾಣುತ್ತಿರುವುದು ಬಸವಣ್ಣನವರ ‘ರಾಜತೇಜ’ವೆ. ಅದು ನಡೆಯ ಮೂಲಕ ಒಡಮೂಡಿದ ‘ರಾಜತೇಜ’. ಇಂಥ ‘ರಾಜತೇಜ’ವು ಆತ್ಮಸಾಕ್ಷಿಪ್ರಜ್ಞೆಯಾಗಿರುವ ಹಾಗೆಯೇ, ಅದೊಂದು ಘನತೆ, ಅರ್ಹತೆ. ಅವೆಲ್ಲ ಶರಣರ ವ್ಯಕ್ತಿತ್ವದಲ್ಲಿದ್ದರಿಂದಲೇ ಅವರು ಯಾರಿಗೂ ಹೆದರದೆ ಹೊಸ ವ್ಯವಸ್ಥೆ ನಿರ್ಮಿಸಲು ಸಾಧ್ಯವಾಯ್ತು.

‘ರಾಜತೇಜ’ ಎಲ್ಲ ಶರಣರ ಮಹತ್ವದ ಗುಣ ಮತ್ತು ಲಕ್ಷಣವೇ ಆಗಿತ್ತು. ಅಂತೆಯೇ ಅವರು ಅಂದಿನ ರಾಜನ, ರಾಜಪ್ರಭುತ್ವದ ಐಬುಗಳನ್ನು ಯಾವ ಹೆದರಿಕೆಯೂ ಇಲ್ಲದೆ ನೇರವಾಗಿ (ಹತ್ತನೆಯ ಶತಮಾನದ ಮಹಾಕವಿ ಪಂಪನೂ ಈ ಧೈರ್ಯ ತೋರಿದ್ದು ಕಂಡುಬರುತ್ತದೆ) ಎತ್ತಿ ತೋರಿಸಿ, ನಿಜವಾದ ರಾಜ ಹೇಗಿರುತ್ತಾನೆ ಮತ್ತು ಹೇಗಿರಬೇಕು ಎಂಬುದನ್ನು ಉದಾಹರಣೆ ಸಹಿತ ಸೂಚಿಸುತ್ತಾರೆ. ‘ತಮ್ಮ ನುಡಿಯಿಂದ ಅರಸು ಅರಸನಲ್ಲ, ಆಳುಗಳಿಂದರಸನೆಂಬ ಬಿರುದು ತೋರ್ದಡೂ ತೋರಲಿ’ (ಮಾತುಗಳಿಂದ ಅರಸರಾಗುವುದಿಲ್ಲ, ಪ್ರಜೆಗಳಿಂದ ಅರಸರಾಗುತ್ತಾರೆ). ‘ಅರಸನಾದಡೇನು, ಆಳುವಲ್ಲಿ ಅಧಿಕಾರಿಯಲ್ಲದೆ, ಅಳಿವಲ್ಲಿ ಅಧಿಕಾರಿಯುಂಟೆ ದೇವಾ?’ (ಆಳುವ ಅಧಿಕಾರ ಅರಸನಿಗಿದೆಯೇ ಹೊರತು, ಅಳಿಯುವುದಕ್ಕಲ್ಲ-ಸಿದ್ಧರಾಮೇಶ್ವರ) ‘ನೆಲನಾಳ್ದನ ಹೆಣನೆಂದಡೆ ಒಂದಡಕೆಗೆ ಕೊಂಬರಿಲ್ಲ’ (ರಾಜನ ಹೆಣಕ್ಕೆ ಒಂದು ಅಡಕೆಯ ಹೋಳಿನ ಕಿಮ್ಮತ್ತೂ ಇಲ್ಲ-ಬಸವಣ್ಣ). ‘ಆಸೆಯೆಂಬುದು ಅರಸಂಗಲ್ಲದೆ ಶಿವಣಕ್ತರಿಗುಂಟೆ ಅಯ್ಯಾ?’ (ಅರಸನಿಗೆ ಆಸೆ ಇರುತ್ತದೆಯೇ ಹೊರತು, ಶಿವಭಕ್ತಿರಿಗಿರಲಾರದು-ಬಸವಣ್ಣ). ‘ಅರಸನ ಭಕ್ತಿ ಅಹಂಕಾರದಲ್ಲಿ ಹೋಯಿತ್ತು’ (ಅರಸನ ಭಕ್ತಿಯೆಂದರೆ ಅದು ಅಹಂಕಾರದ್ದು-ಮಡಿವಾಳ ಮಾಚಿದೇವ). ‘ಅರಸನ ಭಕ್ತಿ ಅಹಂಕಾರದಿಂದ ಕೆಟ್ಟಿತ್ತು’. (ಅಹಂಕಾರದಲ್ಲೇ ಅರಸನ ಭಕ್ತಿ ಹಾಳಾಗಿಹೋಗುತ್ತದೆ-ಚೆನ್ನಬಸವಣ್ಣ) ‘ಅರಸು ಭಕ್ತನಾದರೇನಯ್ಯಾ ಅಹಂಕಾರವಳಿಯದನ್ನಕ್ಕ?’ (ಅಹಂಕಾರ ಅಳಿಯದೇ ಅರಸ ಭಕ್ತನಾಗಲಾರ-ಚೆನ್ನಬಸವಣ್ಣ) ‘ಮಾಂಸಕ್ಕೆ ಮೆಚ್ಚಿದ ಅರಸುಗಳು ನಾಯಂಜಲ ತಿಂದು ನರಕಕ್ಕಿಳಿದು ಹೋದರು’ (ಮತ್ತೊಬ್ಬರ ವಸ್ತುವಿಗೆ ಆಸೆ ಪಡುವ ಅರಸ ನರಕಕ್ಕೆ ಹೋಗುತ್ತಾನೆ-ಚೆನ್ನಬಸವಣ್ಣ) ‘ಹುಸಿ ಹಣ್ಣಾಗಿ ತೊಟ್ಟು ಬಿಟ್ಟಿತ್ತು ಅರಸನಲ್ಲಿ’ (ಅರಸರು ಸುಳ್ಳುಗಾರರು – ಚೆನ್ನಬಸವಣ್ಣ). ‘ಆಳಾಗಿ ಹೊಕ್ಕು ಅರಸಾಗಿ ನಡೆದರೆ, ಆಳಿಗೊಂಡಿತ್ತೆನ್ನ ಕೂಡಲಸಂಗನ ಭಕ್ತಿ’ (ಆಳುತನದ ಮೂಲಕವೇ ಅರಸನ ವ್ಯಕ್ತಿತ್ವ ಕಾಣಬೇಕು-ಬಸವಣ್ಣ)-ಇಂಥ ಅನೇಕ ಮಾತುಗಳನ್ನು ಶರಣರು ರಾಜರ ಮುಖದ ಮೇಲೆ ಹೇಳಿರುವಲ್ಲಿ ರಾಜ ಮತ್ತು ರಾಜಪ್ರಭುತ್ವದ ಬಗ್ಗೆ ಅವರಿಗಿದ್ದ ಪ್ರತಿರೋಧವೇ ಎದ್ದು ಕಾಣುತ್ತದೆ. ರಾಜಪ್ರಭುತ್ವದ ಜೊತೆಗಿದ್ದೂ, ಅದನ್ನು ಪ್ರತಿಭಟಿಸಿದ ಶರಣರ ಈ ನಡೆ ಅವರ ತತ್ವನಿಷ್ಠೆಯ ಪ್ರತೀಕವಾಗಿದೆ. ಇದರಿಂದ ಶರಣರ ರಾಜಕೀಯ ಪ್ರಜ್ಞೆ ಅದೆಷ್ಟು ಪ್ರಖರವಾಗಿತ್ತೆಂಬದೂ ಸ್ಪಷ್ಟವಾಗುತ್ತದೆ. ಹಾಗೆಯೇ ಈ ಎಲ್ಲ ಮಾತುಗಳಲ್ಲಿ ಬಸವಣ್ಣನವರ ಪರಿಕಲ್ಪನೆಯ ‘ರಾಜಬೀದಿ’ ಮತ್ತು ‘ರಾಜತೇಜ’ದ ಸ್ವರೂಪ, ಅರ್ಥ ಮತ್ತು ಆಚರಣಾ ವಿಧಾನ ಎಲ್ಲವೂ ನಿಚ್ಚಳವಾಗಿ ಕಾಣುತ್ತವೆ.
(ಮುಂದುವರಿಯುತ್ತದೆ)

Previous post ಕವನಗಳಲ್ಲಿ ಹಳಕಟ್ಟಿಯವರು: ಒಂದೆರಡು ಟಿಪ್ಪಣಿಗಳು
ಕವನಗಳಲ್ಲಿ ಹಳಕಟ್ಟಿಯವರು: ಒಂದೆರಡು ಟಿಪ್ಪಣಿಗಳು
Next post ಸಾಧನಾ ಚತುಷ್ಟಯಗಳು
ಸಾಧನಾ ಚತುಷ್ಟಯಗಳು

Related Posts

ನೂರನೋದಿ ನೂರಕೇಳಿ…
Share:
Articles

ನೂರನೋದಿ ನೂರಕೇಳಿ…

April 29, 2018 ಕೆ.ಆರ್ ಮಂಗಳಾ
“ನ್ಯೂ ಇಯರ್, ನ್ಯೂ ಮಿ”- ಹೊಸ ವರುಷದ ಉತ್ಸಾಹದಲ್ಲಿ ಬಹುತೇಕ ನಾವೆಲ್ಲರು ಮಾಡಿಕೊಳ್ಳುವ ಒಂದು ಸಾರ್ವಕಾಲಿಕ ಸಂಕಲ್ಪ. ಹಾಗೆ ಬದಲಾಗುವೆನೆಂಬ ಸ್ವಪ್ರತಿಜ್ಞೆ ಮಾತ್ರ ಮೊದಲ...
ಕರ್ತಾರನ ಕಮ್ಮಟ- ಭಾಗ 3
Share:
Articles

ಕರ್ತಾರನ ಕಮ್ಮಟ- ಭಾಗ 3

September 5, 2019 ಮಹಾದೇವ ಹಡಪದ
ಆ ಬೆಳಗಿನ ಬೆಳ್ಳಿಚುಕ್ಕಿ ಮೂಡುವ ಹೊತ್ತಿಗೆ ಅಲ್ಲಮ-ಸಿದ್ಧರಾಮರು ಎದ್ದು ಕಲ್ಯಾಣದತ್ತ ಹೊರಟರು. ದಾರಿಯ ದಣಿವಿಗೆ, ಪ್ರಭುಗಳ ಕಾಲ್ನಡಿಗೆಯ ಆಯಾಸಕ್ಕೆ ಆಸರೆ ಆದೀತೆಂದು...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಕವನಗಳಲ್ಲಿ ಹಳಕಟ್ಟಿಯವರು: ಒಂದೆರಡು ಟಿಪ್ಪಣಿಗಳು
ಕವನಗಳಲ್ಲಿ ಹಳಕಟ್ಟಿಯವರು: ಒಂದೆರಡು ಟಿಪ್ಪಣಿಗಳು
October 13, 2026
ವಚನಾಮೃತಂ: ಪುಸ್ತಕ ವಿಮರ್ಶೆ
ವಚನಾಮೃತಂ: ಪುಸ್ತಕ ವಿಮರ್ಶೆ
February 6, 2025
ಅನುಭಾವ ಮತ್ತು ಅನಿರ್ವಚನೀಯತೆ
ಅನುಭಾವ ಮತ್ತು ಅನಿರ್ವಚನೀಯತೆ
March 12, 2022
ಪರಿಪೂರ್ಣತೆಯೆಡೆಗೆ ಪಯಣ
ಪರಿಪೂರ್ಣತೆಯೆಡೆಗೆ ಪಯಣ
April 29, 2018
ಗುರುವಂದನೆ
ಗುರುವಂದನೆ
October 13, 2022
ಗಜಲ್…
ಗಜಲ್…
February 16, 2026
ಬಸವ ಸ್ಮರಣೆ ಇಂದಿಗೂ ಏಕೆ?
ಬಸವ ಸ್ಮರಣೆ ಇಂದಿಗೂ ಏಕೆ?
May 6, 2020
  ಅವಿರಳ ಅನುಭಾವಿ-3
  ಅವಿರಳ ಅನುಭಾವಿ-3
May 6, 2020
ನನ್ನನ್ನು ಕ್ಷಮಿಸು
ನನ್ನನ್ನು ಕ್ಷಮಿಸು
April 5, 2026
ಭಕ್ತನಾಗುವುದೆಂದರೆ…
ಭಕ್ತನಾಗುವುದೆಂದರೆ…
January 10, 2021
Copyright © 2026 Bayalu