Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಕಾಲ ಕಲ್ಪಿತವೇ?!
Share:
Poems September 14, 2024 ಕೆ.ಆರ್ ಮಂಗಳಾ

ಕಾಲ ಕಲ್ಪಿತವೇ?!

ಬೊಗಸೆಯ ಬೆರಳ ಸಂದಿಯಲಿ
ಸೋರಿ ಹೋಗುವ ನೀರಂತೆ…
ಕಣ್ಮುಂದೆ, ಕಾಲಡಿಯೇ
ಕ್ಷಣಕ್ಷಣವೂ ನೀ ಹರಿದು ಹೋಗುತಿರುವೆ
ಕಾಲಬುಡದಲ್ಲೇ ಇರುವೆ
ಕಣ್ಣಳತೆಯಲ್ಲೇ ಸರಿಯುತ್ತಿರುವೆ
ಅದೇಕೆ ದೃಷ್ಟಿಗೆ ಬಾರೇ?
ನಿನ್ನ ವಶದಲ್ಲಿ ಎಲ್ಲವೂ, ಎಲ್ಲರೂ
ತೋರಿ ಅಡಗುವ ಅಲೆಗಳೆನುವುದು… ಅರೆ, ಗೊತ್ತಾಗಲೇ ಇಲ್ಲ!

ನಿನ್ನೆ ಮೊನ್ನೆ ಅವ್ವನ ಕೈ ತುತ್ತಿಗೆ
ಬಾಯಿ ತೆರೆಯುತ್ತಿದ್ದವಳು
ಅಮ್ಮನ ಕೈಹಿಡಿದು ಸಿನಿಮಾ-ಪುರಾಣಗಳಿಗೆ
ಹಿಗ್ಗಿನಿಂದ ಅಲೆಯುತ್ತಿದ್ದವಳು
ಅಜ್ಜನ ಸುತ್ತಲೇ ಸುಳಿದಾಡುತ್ತಿದ್ದವಳು
ಅಪ್ಪನ ಸೈಕಲ್ಲೇರಿ ಶಾಲೆಗೆ ಹೋಗುತ್ತಿದ್ದವಳು
ತಮ್ಮ-ತಂಗಿಯರ ಸೊಂಟಕ್ಕೇರಿಸಿ
ಕುಂಟಾಬಿಲ್ಲೆ ಆಡುತ್ತಿದ್ದವಳು…
ಬಾಲ್ಯ ಸರಿದದ್ದು, ಓದು ಮುಗಿದದ್ದು
ಮದುವೆಯಾದದ್ದು, ಮಕ್ಕಳಾದದ್ದು
ಹರಯ ದಾಟಿದ್ದು… ಅರೆ, ಗೊತ್ತಾಗಲೇ ಇಲ್ಲ!

ಅಗಲಲಾರೆವೆಂದ ಸ್ನೇಹಗಳು,
ಅಕ್ಕರೆ ಸುರಿಸಿದ ಜೀವಗಳು,
ಸಹೋದ್ಯೋಗಿಗಳು, ಪರಿಚಿತ ಮುಖಗಳು…
ನಿನ್ನೆ ಮೊನ್ನೆ ಇದ್ದವರು
ಕಣ್ಣೆದುರೇ ಮಣ್ಣಾಗಿ ಬೂದಿಯಾದವರು
ಹುಟ್ಟೂರು ಬೆಳೆದೂರು ಇರುವ ಊರು
ಹೀಗೆ ಬಂದು ಹಾಗೆ ಸರಿದು
ಈಗ ನೆನಪಲ್ಲೂ ಇಲ್ಲವಾದದ್ದು… ಅರೆ, ಗೊತ್ತಾಗಲೇ ಇಲ್ಲ!

ಗಡಿಯಾರದ ಟಿಕ್ ಟಿಕ್ ನಲ್ಲೇ
ಕಾಲದ ಮನೆಯಿರುವ ಕತೆ ಓದಿದ್ದೆ
ಕಾಯಬೇಕು ಕಾಲ ಓಡದಂತೆ
ಎಂದು ಕಣ್ಣ ಕಾವಲಿಟ್ಟಿದ್ದೆ
ಹಗಲು ರಾತ್ರಿಯಾಗಿ
ಚಂದ್ರ ಹೋಗಿ ಸೂರ್ಯ ಬಂದು
ಮಳೆಯ ಆಗಸಕೆ –ಚಳಿ ಸೇರಿ
ಹಿಮ ಹಿಂಗಿ ಬಿಸಿಲು ಸುರಿವಾಗ
ಎಲ್ಲ ಎಲ್ಲವೂ ಯಾವಾಗ ಬದಲಾದವು… ಅರೆ, ಗೊತ್ತಾಗಲೇ ಇಲ್ಲ!

ಓಡುತ್ತಿರುವ ಕಾಲ ಈಗೀಗ
ಹಾರುತ್ತಿರುವಂತೆ ಭಾಸವಾಗುತ್ತದೆ
ಏನೇ ಇರಲಿ, ಪೈಲಟ್ ನಾವೇ ಅಲ್ಲವೇ?
ದಿನ ಹೇಗೆ ಕಳೆವೆವೋ
ಅಂತೆಯೇ ಜೀವನ…
ಕಾಲಮಿತಿಯ ಲೇಬಲ್
ಅಂಟಿಸಿಕೊಂಡೇ ಇದ್ದರೂ
ಯಾವುದಕ್ಕೋ, ಯಾರದಕ್ಕೋ
ಪೋಲಾಗಿರುತ್ತೇವೆ.
ಕಂಡ ಕನಸಂತೆ ನಿನ್ನೆಗಳು
ಉರುಳುತ್ತಾ…
ದಿನಗಳರಿಯದ ನಿಜವ
ವರ್ಷಗಳು ಕಲಿಸುತ್ತವೆನುವ ಸತ್ಯ… ಅರೆ, ಗೊತ್ತಾಗಲೇ ಇಲ್ಲ!

ರವಿ ಚಂದ್ರರಿರುವ ಆಗಸಕೂ
ಕಾಲಕೂ ಆದಿಮ ನಂಟು
ಕಾಲ ಗೋಚರವೋ ಅಗೋಚರವೋ?
ಕಾಲದ ಗಮ್ಯ ಯಾವುದು?
ಒಂದೇ ಎರಡೇ ತಲೆಹೊಕ್ಕ ಪ್ರಶ್ನೆಗಳು…

ಕಾಲುಚಾಚಿ ಮಲಗುವ ಮಂಚವಲ್ಲ ಕಾಲ
ನಾವದಕೆ ಆಹಾರವೋ
ಅದು ನಮ್ಮ ಸ್ವಾಹವೋ…
ಎಂಬೆಲ್ಲ ತಿಣುಕಾಟವೇಕೆ?
ಕಾಲ ಕಲ್ಪಿತವೆಂದ ಶರಣರು
ಕಾಲಾತೀತರಾದ ಗುಟ್ಟ ಹೇಳುವೆ
ಸಾಧ್ಯವಾದರೆ ನೋಡಿಕೊ ಎಂದ ಗುರು
ಕೊಟ್ಟನೆನಗೆ ವರ್ತಮಾನದ ದೀಕ್ಷೆ!

ಹಿಂದು-ಮುಂದಿನ ಹಂಗ ಹರಿಯದೆ
ಗೊತ್ತಾದೀತೇ ಗುರುಮಾತಿನ ಹಿರಿಮೆ?

Previous post ಹಣತೆ ಸಾಕು
ಹಣತೆ ಸಾಕು
Next post ಪ್ರಭುವಿನ ಗುರು ಅನಿಮಿಷ -3
ಪ್ರಭುವಿನ ಗುರು ಅನಿಮಿಷ -3

Related Posts

ಚಿತ್ತ ಸತ್ಯ…
Share:
Poems

ಚಿತ್ತ ಸತ್ಯ…

June 14, 2024 ಕೆ.ಆರ್ ಮಂಗಳಾ
ಚಿತ್ತದೊಳಿವೆ ಎರಡು ಕವಲು ಒಂದು ರಂಗುರಂಗಿನ ದಾರಿ ಅದು ಮಹಾ ಹೆದ್ದಾರಿ ಪ್ರಪಂಚದರಿವು ಬಂದಾಗಿನಿಂದ ಅತ್ತಲೇ ನಡೆದು ರೂಢಿ ಅನಾದಿ ಕಾಲದ ದಾಸ್ತಾನುಗಳೆಲ್ಲ ಅಲ್ಲಿ...
ನಾನೊಂದು ನೀರ್ಗುಳ್ಳೆ
Share:
Poems

ನಾನೊಂದು ನೀರ್ಗುಳ್ಳೆ

September 6, 2023 ಕೆ.ಆರ್ ಮಂಗಳಾ
ಕಾಲದ ಊದುಗೊಳವೆಯಲಿ ನಿರಂತರವಾಗಿ ಉಕ್ಕುತಿವೆ ಅನಂತಾನಂತ ನೀರ್ಗುಳ್ಳೆ ಎಲ್ಲಕೂ ಒಂದೇ ಹುಟ್ಟು ಒಂದೇ ಬಗೆಯ ಸಂಯೋಜನೆ ನಾ ಬೇರೆ ನೀ ಬೇರೆ ಅಂವ ಬೇರೆ ಇಂವ ಬೇರೆ ನಾ ಮೇಲು ನೀ ಕೆಳಗೆ...

Comments 3

  1. ಕೆ ಎಸ್ ಮಲ್ಲೇಶ್
    Sep 20, 2024 Reply

    ಆಯಾ ವಯಸ್ಸಿಗೆ ಸಹಜವಾಗಿಯೋ ಅರಿವಿಲ್ಲದೆಯೋ ಸ್ಪಂದಿಸುತ್ತಲೇ space ನ ಒಂದಿನಿತು ಹರವಿನಲ್ಲಿ ಅನುಭವಿಸಿದ್ದನ್ನು Time ಲೆಕ್ಕವಿಟ್ಟುಕೊಂಡು ನಮ್ಮ ನಮ್ಮ ಮನಸ್ಸಿನಲ್ಲಿ ನೆನಪಾಗುಳಿಸಿತು. ಆ ಚಿತ್ತಾರಗಳ ಅನಾವರಣವನ್ನು ನಿಮ್ಮ ಕವನ ಚೆಂದಾಗಿ ಮೂಡಿಸಿದೆ. ಬದುಕಿನ ಏಳು ಬೀಳುಗಳ ಘಟನೆಗಳ ಸರಮಾಲೆಯೇ ಕಾಲವನ್ನೆಣೆಯಿತೋ ಏನೋ ಎಂಬ ತಾತ್ವಿಕ ಚಿಂತನೆಯನ್ನು ಮಡಿಲಲ್ಲಿಟ್ಟು ಗುರುವಿನ ವರ್ತಮಾನ ದೀಕ್ಷೆಗೊಡ್ಡಿಕೊಂಡ ಯಾನ ಕಾವ್ಯದ ದನಿಯಾಗಿದೆ.
    ತಂದೆ ತಾಯಿ ಬಂಧುಗಳೇ ಹಿಂದಣ
    ಮಕ್ಕಳು ಮೊಮ್ಮಕ್ಕಳೇ ಮುಂದಣ
    ಅವರೊಡನೆ ಸಂಗದಲ್ಲಿದ್ದೂ ಹಂಗ ಹರಿಯಬೇಕು ಎಂದೂ ಕವನ ನನ್ನನ್ನು ಎಚ್ಚರಿಸಿತು. ಮಂಗಳಾ ಅವರೆ, ನಮ್ಮಲ್ಲೂ ಮೂಡಬೇಕಾಗಿದ್ದ ಭಾವನೆಗಳಿಗೆ ಅಕ್ಷರರೂಪಕೊಟ್ಟು ಉತ್ತಮ ಕವನ ನೀಡಿದ್ದೀರಿ. ನಿಮಗೆ ನನ್ನ ನಮನಗಳು

  2. ವಿದ್ಯಾ patil
    Sep 20, 2024 Reply

    ಮಂಗಳ ಅಕ್ಕನವರ ಕವನ ಅದ್ಭುತವಾಗಿದೆ. ಶರಣರು ಕಾಲವನ್ನು ಕಲ್ಪಿತ ವೆಂದರು ಎನ್ನುತ್ತಾ ಗುರುವು ಶರಣರು ಕಾಲಾತೀತರಾದ ಬಗೆಯನ್ನು ಅರುಹಲು ವರ್ತಮಾನದ ದೀಕ್ಷೆ ಕೊಟ್ಟರು ಎಂಬುದು ಗುರುವಿನ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ. ಅವರಿಗೆ ಧನ್ಯವಾದ.

  3. Padmalaya
    Oct 2, 2024 Reply

    ಪದಾರ್ಥ ಪರಿಣಾಮ ಹೊಂದದೇಇದ್ದರೆ ಕಾಲವಿಲ್ಲ,,ಪರಿಣಾಮವೇ ಜಗದ ನಿಯಮ ವೆಂದು ಅರಿವಿಗೆ ಬಂದಾಗ ಕಾಲವೂಇಲ್ಲ ಪರಿಣಾಮವೂ ಇಲ್ಲ

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಮರೆಯಲಾಗದ ಜನಪರ ಹೋರಾಟಗಾರ
ಮರೆಯಲಾಗದ ಜನಪರ ಹೋರಾಟಗಾರ
May 10, 2023
ಬೌದ್ಧ ಕಾವ್ಯದೃಷ್ಟಿ
ಬೌದ್ಧ ಕಾವ್ಯದೃಷ್ಟಿ
May 8, 2024
ಅದ್ವಿತೀಯ ಶರಣರು
ಅದ್ವಿತೀಯ ಶರಣರು
February 6, 2025
ಲಿಂಗಪೂಜೆ – ಜಂಗಮಸೇವೆ
ಲಿಂಗಪೂಜೆ – ಜಂಗಮಸೇವೆ
March 12, 2022
ಮಿಥ್ಯಾದೃಷ್ಟಿ ರಹಿತ ಬಯಲ ದರ್ಶನ
ಮಿಥ್ಯಾದೃಷ್ಟಿ ರಹಿತ ಬಯಲ ದರ್ಶನ
February 7, 2021
ಶಿವನ ಕುದುರೆ – 2
ಶಿವನ ಕುದುರೆ – 2
June 3, 2019
ಕನ್ನಡ ಕವಿ ಸಂತರಲ್ಲಿ ಧರ್ಮ…
ಕನ್ನಡ ಕವಿ ಸಂತರಲ್ಲಿ ಧರ್ಮ…
May 10, 2022
ನೆಲದ ನಿಧಾನ
ನೆಲದ ನಿಧಾನ
April 29, 2018
ಸುಂದರ, ಸೂಕ್ಷ್ಮ ದ್ವೀಪ ಜಪಾನ್
ಸುಂದರ, ಸೂಕ್ಷ್ಮ ದ್ವೀಪ ಜಪಾನ್
September 14, 2024
ಬೆಳಕಲಿ ದೀಪ
ಬೆಳಕಲಿ ದೀಪ
December 8, 2021
Copyright © 2025 Bayalu