
ಮೊಟ್ಟೆ- ಗೂಡು
ಮರೆವೆಯ ಗೂಡಲಿ
ಒಂದು ಮರಿ ಆಸೆಯ ಮೊಟ್ಟೆ
ಗೂಡು ಸಣ್ಣದು ಮೊಟ್ಟೆ ದೊಡ್ಡದು
ಮೊಟ್ಟೆ ಬಿರಿದರೆ ಗೂಡು ಸಾಯುವುದು
ಗೂಡು ಸಾಯದಿರೆ ಮೊಟ್ಟೆ ಸಾಯುವುದು
ಏನು ಮರೆವೆಯೋ ಸೀಸೆಯು ಒಡೆಯದೆ
ಹಕ್ಕಿ ಉಸಿರುಗಟ್ಟಿದೆ
ಅಳಿಯಲುಂಟೇ ಮರೆವೆಯೊಳಗಣ ಹಿಂದಣ ಹೆಜ್ಜೆ
ತೋರುವುದೆಲ್ಲವೂ ಸುಳ್ಳು
ಕಂಡುದೆಲ್ಲವೂ ಸುಳ್ಳು
ನಿಜವೇನು ಅರಿವೆಯೇ ಮರೆವೆಯೇ
ಬರಿದೆ ಬಯಲಾಗಲಾಗದು.
*** *** ***
ಈ
ಜ್ಞಾನಕ್ಕೆ ಏನು ಕೇಡೋ
ಮಣಿಯದು ಮಣಿಸದು
ಅಂಗೈಯಲ್ಲಿ ಉರಿಯದ ದೀಪ
ದಾರಿ ತೋರುವುದೇ…
ಖಾಲೀ
ಕುಂಭ ಬಯಲು ತುಂಬಲಹುದು
ಬಯಲು ತುಂಬಿಹ ಕುಂಭಕೆ
ಜಲವ ತುಂಬಿ ಬಯಲು ಬರಿದು
ಸುಳ್ಳು ನಿಜ
ಸತ್ಯ ಅಸತ್ಯ
ಆಚಾರ ಅನಾಚಾರ
ಇವೆಲ್ಲವೂ ಏನು ಏನು
ಗೊಂಬೆಗೊಂದು ಕನ್ನಡಿ ಹಿಡಿದು
ಗೊಂಬೆಯ ನಗಿಸಲಾಗದು
ನೀರ ನೆಳಲುಗಳು
ಅಯ್ಯೋ
ಕತ್ತಲೆಯನ್ನೆಲ್ಲಾ ಬೆಳಕು
ಮಾಡುವ ಕೇಡು ಈ ಬುದ್ಧಿಗೆ..
ಏನಯ್ಯಾ ನಿನ ಮೊಂಡಾಟ
ನಿರಹಂಕಾರ ಸಾಲದೇ.,
ಕೇಡೆಲ್ಲವೂ ನನದು
ಈ
ಸಾವಿಗೇನು
ಬಾಲ್ಯ ತಾರುಣ್ಯ ವೃದ್ಧಾಪ್ಯ ಉಂಟೇ…
ಆಸೆ ಕೊಲ್ಲುವ ಸಾವಿಗೆ
ಹೇಸಿ ಕೊಂಡರೆ ಸೈ…
Comments 1
Rajendra
Apr 13, 2025Nice