ಹೆಸರಿಲ್ಲದಾ ಊರಿನ ಹಾಡು
ಚಿಂತೆಯೊಳಗೇ ಹಾವೊಂದೈತೆ/ ಡೊಂಕು ಹಾದಿಯ ತೊರೆಯಿರೋ
ನಾನು ಎಂಬುದು ಕಳಚಿ ಹೋದರೆ/ ಇಹುದು ಸುಖವೆಂದರಿಯಿರೋ //ಪ//
ಮೂರ್ಖತನದ ಕತ್ತಲೊಳಗೆ/ ಭ್ರಮೆಯ ಗಿಳಿಯೊಂದಾಡಿತೋ
ಶೋಕಿ ದಾರಿಯು ತಾನೇ ಆಗುತಾ/ ಮಾಯೆಯೊಳಗೇ ಹಬ್ಬತೋ //ಅ.ಪ//
ಮೂರು ದಾರಿ ಸೇರೋ ಜಾಗದಿ ಗೂಡು ಕಟ್ಟಿ ಕುಣಿಯಿತೋ
ಗಂಡೂ ಅಲ್ಲಾ ಹೆಣ್ಣು ಅಲ್ಲದು/ ಆಟತಿಳಿದು ನಡೆಯಿರೋ //ಚಿಂತೆ//
ಹರಿವು ನದಿದಡಲಿ ಬೆಳೆದಾ/ ದಿಕ್ಕುಗಾಣದ ಮರವಿದೋ
ತಾಯಿ ತಂದೆ ಇದಕಾರಿಲ್ಲ/ ಹುಚ್ಚು ಕುದುರೆ ಪಯಣವೋ //ಚಿಂತೆ//
ರಂಕುಮುಂಡೆಯ ಮಡಿಲಲಿ ಚಿಂತೆ/ ಇಲ್ಲದೇ ತಾ ತೋರಿತೋ
ದಾಟ ಹೋಗಿ ಇದನೂ ಗೆದ್ದರು/ ಕೋಟಿಗೊಬ್ಬರು ನಿಜವಹುದೋ //ಚಿಂತೆ//
ಹೆಸರಾ ಇಲ್ಲದಾ ಊರಿನೊಳಗೆ/ ಹುಲ್ಲುಗುಡಿಸಲು ಇದ್ದಿತೋ
ಮೂರನಾಗಿಸಿ ಕೊಂದೇ ಹಾಕಿತ/ ಇದರ ನಿಜವನು ಅರಿಯಿರೋ.
-ಪದ್ಮಾಲಯ ನಾಗರಾಜ್
Comments 3
Jyothilingappa
May 7, 2020ಪದ್ಮಾಲಯ ರ ಕವನ ಸರಳ ಅರ್ಥಗರ್ಭಿತ.. ಹಾಡುವ ದಾಟಿ..ರಚನೆ.. ಸುಂದರ.
Gangadhar navale
May 14, 2020ಮನಸ್ಸಿನಲ್ಲಿರುವ ಚಿಂತೆಯೇ ಹಾವೆಂದುಕೊಂಡಿದ್ದೆ, ಚಿಂತೆಯೊಳಗೆ ಇರೋ ಹಾವು ಯಾವುದು? ಚಿಂತೆಯಲ್ಲಿರುವ ಹಾವು ಭ್ರಮೆಯೇ ಇರಬಹುದೆಂದುಕೊಂಡೆ.
Chandru pujar
Aug 25, 2020Dhanyvad Sar Tumba chennagide