ಹುಡುಕಿಕೊಡು ಗುರುವೇ…
ದೇಹದಲ್ಲೋ ಭಾವದಲ್ಲೋ
ಎದೆಯ ಒಳಗೋ ತಲೆಯ ಒಳಗೋ
ಕಳೆದುಹೋಗಿದ್ದೇನೆ ನಾನು
ಕಳೆದುಹೋಗಿದ್ದೇನೆ…
ಕುಲದಲ್ಲೋ ಛಲದಲ್ಲೋ
ಹಠದಲ್ಲೋ ಅಹಮಿನಲ್ಲೋ
ಸೇರಿಹೋಗಿದ್ದೇನೆ ನಾನು
ಸೇರಿಹೋಗಿದ್ದೇನೆ…
ಸಂಗದಲ್ಲೋ ಸಂಸಾರದಲ್ಲೋ
ಸ್ನೇಹದಲ್ಲೋ ಪ್ರೇಮದಲ್ಲೋ
ಮುಳುಗಿಹೋಗಿದ್ದೇನೆ ನಾನು
ಮುಳುಗಿಹೋಗಿದ್ದೇನೆ…
ನೆನಪಿನಲ್ಲೋ ಕನಸಿನಲ್ಲೋ
ಮಾತಿನಲ್ಲೋ ಮೌನದಲ್ಲೋ
ಕರಗಿ ಹೋಗಿದ್ದೇನೆ ನಾನು
ಕರಗಿ ಹೋಗಿದ್ದೇನೆ…
ಬರೆಯುತಿರುವ ಅಕ್ಷರಗಳಲ್ಲೋ
ಕಲೆ ಹಾಕಿದ ಮಾಹಿತಿಯೊಳಗೋ
ಮಸುಕಾಗಿದ್ದೇನೆ
ಕಳೆದು ಹೋದ ಕಾಲದಲ್ಲೋ
ನಾಳೆ ಬರುವ ದಿನಗಳಲ್ಲೋ
ಜಾರಿಹೋಗಿದ್ದೇನೆ…
ಮತಿಗೆಟ್ಟು ಧೃತಿಗೆಟ್ಟು
ಮುಂದ ತಿಳಿಯದೇ, ಗೊತ್ತನರಿಯದೇ
ನಡೆವ ದಾರಿಯಲ್ಲಿ ದಿಕ್ಕುತಪ್ಪಿದ್ದೇನೆ
ಹುಡುಕಿಕೊಡು ಗುರುವೆ
ನನ್ನ ನನಗೆ ಹುಡುಕಿಕೊಡು.
Comments 3
Manohara acharya
Jul 5, 2022ನಮಸ್ತೆ ಮಂಗಳ.ಹುಡುಕಿ ಕೊಡಿ ಗುರುವೇ ಮತ್ತು ನನ್ನ ನಿನ್ನ ನಡುವೆ ಬಹಳ ಸೊಗಸಾಗಿದೆ. ಇನ್ನು ಹೆಚ್ಚು ಹೆಚ್ಚು ಹೊರಬರಲಿ ಎಂದು ಆಶಿಸುತ್ತೇನೆ.ಪ್ರೀತಿ ಇರಲಿ
H V Jaya
Jul 6, 2022ಕವನ ಬಹಳ ಅರ್ಥಗರ್ಭಿತವಾಗಿದೆ… ನಾನೂ ಅಜ್ಞಾನದ ಕತ್ತಲೆಯೊಳಗೆ ಕಳದುಹೋಗಿದ್ದೇನೆ. ಸುಜ್ಞಾನವನ್ನು ನೀಡಿ ಹುಡುಕಿ ಕೊಡಿ ಗುರುವೆ…
ಪೆರೂರು ಜಾರು, ಉಡುಪಿ
Jul 7, 2022ಕಳೆದುಕೊಂಡವರನ್ನು ಹುಡುಕಿಕೊಡುವ ಗುರುಗಳು ಇಂದೂ ಇದ್ದಾರೆಯೆ? ಪೋಲೀಸರಂತೂ ಕಳೆದುಕೊಂಡವರಿಂದ ತಮಗೇನು ಲಾಭ ಎಂದು ತಿಳಿದ ಬಳಿಕ ಹುಡುಕುತ್ತಾರೆ.