ಶಬ್ದದೊಳಗಣ ನಿಶ್ಶಬ್ದ…
ಭಾಷೆ, ಭಾಷೆಯ ಬಳಕೆ ಕುರಿತು ವಚನಕಾರರು ಬಹಳ ಮುಖ್ಯವಾದ ಮಾತುಗಳನ್ನು ಹೇಳಿದ್ದಾರೆ. ಉಲಿ, ಶಬ್ದ, ಮಾತು, ನುಡಿ, ವಚನ, ಭಾಷೆ ಎಂಬ ಪದಗಳನ್ನು ಖಚಿತವಾದ ಅರ್ಥದಲ್ಲಿ ಬಹಳ ಎಚ್ಚರಿಕೆಯಿಂದ ಬಳಸಿದ್ದಾರೆ.
ಉಲಿ ಎಂದರೆ ಯಾವುದೇ ಅರ್ಥವಿರದ, ಅಚ್ಚುಕಟ್ಟಿರದ ಸದ್ದು. ಅದು ಹೆಚ್ಚಾದಾಗ ಗಲಭೆ ಎನಿಸುತ್ತದೆ. ‘ಉಲುಹಿನ ವೃಕ್ಷದ ನೆಳಲಡಿಯಲಿರ್ದು ಗಲಭೆಯನೊಲ್ಲೆನೆಂಬುದೆಂತಯ್ಯಾ’ ಎಂದು ಅಲ್ಲಮಪ್ರಭು ಕೇಳುತ್ತಾರೆ. ಈ ಲೋಕದಲ್ಲಿ ಎಷ್ಟೊಂದು ಸದ್ದುಗಳಿವೆ ಎಂದರೆ ಮನುಷ್ಯರು ಆಡುವ ಮಾತು, ಬರೆವ ಬರಹ ಕೂಡ ಗಲಭೆಯಂತೆಯೇ ಕೇಳಿಸುತ್ತದೆ. ಮರವೊಂದು ಸದ್ದು ಮಾಡುವುದು ಎಷ್ಟು ಸಹಜವೋ ಮಾತು ಬಲ್ಲವರು ಒಂದೇ ಸಮ ಮಾತಾಡುವುದೂ ಅಷ್ಟೇ ಸಹಜ. ಯಾರು ಬೇಡವೆಂದರೂ ಈ ಗಲಭೆ ನಿಲ್ಲಲಾರದು ಅದನ್ನು ನಿಭಾಯಿಸುವ ಕಲೆಯನ್ನು ನಾವು ಒಬ್ಬೊಬ್ಬರೇ ನಮ್ಮಷ್ಟಕ್ಕೇ ಕಲಿಯಬೇಕು. ನಾವು ಉತ್ತಮವೆಂದು, ನಾವು ಮಿಕ್ಕವರಿಗಿಂತ ಮೇಲೆಂದು ತೋರಿಸಿಕೊಳ್ಳಬೇಕು ಎಂಬ ಆಸೆಯೇ ಉಲಿಯ ಗಲಭೆಗೆ ಕಾರಣ. ಮನುಷ್ಯರೆಲ್ಲರೂ ತಮ್ಮ ಹಿರಿಮೆಯನ್ನು ಸಾಬೀತು ಮಾಡಲು ಉಲಿಯ ಗಲಭೆಯನ್ನು ಎಬ್ಬಿಸುತ್ತಲೇ ಇರುತ್ತಾರೆ. ನುಡಿಯುತ್ತೇನೆ ಎಂಬ ಉಲುಹಿನ ಗಲಭೆಯ ತೋಟಿ (ಅಂದರೆ ಹೋರಾಟ, ದ್ವಂದ್ವಯುದ್ಧ) ಬಿಡದು ಎಂದು ಸಿದ್ಧರಾಮೇಶ್ವರರು ಹೇಳುತ್ತಾರೆ. ‘ಗಲಭೆಗೆ ನಿಲ್ಲದ ಮೃಗದಂತಿರಬೇಕು’ ಎಂಬುದು ಹಡಪದ ಅಪ್ಪಣ್ಣನವರ ಮಾತು. ಗಲಭೆಯನ್ನು ಕೇಳಿ ದಿಕ್ಕಾಪಾಲಾಗಿ ಓಡುವ ಅಥವ ದಿಗ್ಭ್ರಾಂತವಾಗಿ ನಿಲ್ಲುವ ಮೃಗ ಬೇಟೆಯ ತುತ್ತಾಗುತ್ತದೆ. ಗಲಭೆಗೆ ಮಾರು ಹೋಗಬೇಡಿ ಎನ್ನುತ್ತಾರೆ ಅಪ್ಪಣ್ಣನವರು.
ಭಾಷೆಯ ಮೂಲಕ ನಮ್ಮ ಸುತ್ತಲೂ ನಡೆಯುವ ಗಲಭೆ, ಗದ್ದಲ ಇದ್ದೇ ಇರುತ್ತದೆ, ಅದಕ್ಕೆ ಗುರಿಯಾಗದಂತಿರುವ ವಿವೇಕವನ್ನು ನಾವು ಬೆಳೆಸಿಕೊಳ್ಳಬೇಕು.
ಶಬ್ದವೆಂದರೆ ಅರ್ಥವಿರುವ ಹಾಗೆ ಜೋಡಿಸಿರುವ ಸದ್ದುಗಳ ಗುಂಪು. ಶಬ್ದಗಳನ್ನು ಯಾವ ಕ್ರಮದಲ್ಲಿ ಜೋಡಿಸಿ ಹೇಳಿದರೆ ಇಂತಿಂಥ ಅರ್ಥವೆಂಬ ತಿಳಿವಳಿಕೆಯೇ ಭಾಷೆಗೆ ಆಧಾರ. ಒಂದು ಭಾಷೆಯಲ್ಲಿ ಅರ್ಥವಿರುವ ಶಬ್ದಕ್ಕೆ ಇನ್ನೊಂದು ಭಾಷೆಯಲ್ಲಿ ಅರ್ಥವೇ ಇರುವುದಿಲ್ಲ. “ಮರ” ಎಂದು ಹೇಳಿದರೆ ಕನ್ನಡ ಮಾತಾಡುವ ಜನಕ್ಕೆ ತಿಳಿಯುತ್ತದೆ, ಇಂಗ್ಲಿಶು, ಚೀನೀ ಭಾಷೆಯ ಜನಕ್ಕೆ ಅದು ಅರ್ಥವಾಗದು, ಅಥವ ನಮಗೆ ಅನಿಸುವುದಕ್ಕಿಂತ ಬೇರೆ ಏನೋ ಅನಿಸುತ್ತದೆ. ಯಾರಿಗೆ ಶಬ್ದಗಳ ಅರ್ಥ ಗೊತ್ತೋ ಅವರು ಮಿಕ್ಕವರನ್ನು ಆಳಲು ಬಯಸುತ್ತಾರೆ. ‘ಶಬ್ದ ಸಂಭ್ರಮದಲ್ಲಿ ಹಿಂದುಗಾಣರು, ಮುಂದುಗಾಣರುʼ ಅರ್ಥಪೂರ್ಣವಾದ ಮಾತಾಡುತಿದ್ದೇವೆ ಅಂದುಕೊಂಡೇ ಜನ ಬದುಕನ್ನು ವ್ಯರ್ಥಮಾಡಿಕೊಳ್ಳುತ್ತಾರೆ ಎಂಬುದು ಅಲ್ಲಮಪ್ರಭುಗಳ ಮಾತು. ಶಬ್ದವಡಗಿದವನೇ ಶರಣ ಎಂದು ಹಲವು ವಚನಕಾರರು ಹೇಳಿದ್ದಾರೆ.
ಶಬ್ದಗಳ ಸಮೂಹವೇ ಮಾತು. ಮಾತಾಡುವುದಕ್ಕೆ ವಿಷಯವಿರಬೇಕು, ವಿಷಯ ತಿಳಿಸುವುದಕ್ಕೆ, ತಿಳಿಯುವುದಕ್ಕೆ ಶಬ್ದಗಳು ಬೇಕು. ಇವು ದೊರೆತರೆ ನಾವು ಅರಿವನ್ನು ಪಡೆದವರು ಅಂದುಕೊಳ್ಳುತ್ತೇವೆ. ಅರಿತವರು ಅಂದುಕೊಂಡ ತಕ್ಷಣ ಅರಿಯದವರನ್ನು ಬೆರಗುಗೊಳಿಸಿ ಗೆಲ್ಲಬೇಕು ಎಂಬ ಆಸೆ ಹುಟ್ಟುತ್ತದೆ. ನಮ್ಮ ಬಹಳಷ್ಟು ವಿದ್ವಾಂಸರು, ಭಾಷಣಕಾರರು, ರಾಜಕೀಯ ಮುಖಂಡರು ಇಂಥವರು. ಈ ವಚನದ ಸಾಲುಗಳನ್ನು ನೋಡಿ:
ಅರಿವಿನ ಬಲದಿಂದ ಕೆಲಬರು
ಅರಿಯದವರ ಗೆಲಬೇಕೆಂದು,
ಬರುಮಾತಿನ ಉಯ್ಯಲೆಯನೇರಿ, ಒದೆದು ಒರಲಿ ಕೆಡೆವ ದರಿದ್ರರು!
ಬೇರೆಯವರನ್ನು ಮಾತಿನಿಂದ ಮರುಳು ಮಾಡಿ, ಎಲ್ಲರನ್ನೂ ಗೆದ್ದು, ತಾವು ಅರಿತವರೆಂದು ತೋರಿಸಿಕೊಳ್ಳಲು, ಸಾಧಿಸಲು ಬಯಸುವವರನ್ನು ಅಲ್ಲಮಪ್ರಭುಗಳು ‘ಮಾತಿನ ಉಯ್ಯಾಲೆಯಲ್ಲಿ ಕೂತು ಚೀರಾಡಿ, ಬಿದ್ದು ಸಾಯುವ ದರಿದ್ರರುʼ ಎಂದು ಟೀಕಿಸುತ್ತಾರೆ. ಹಾಗಾದರೆ ಮಾತು ಹೇಗೆ ಆಡಬೇಕು ಅನ್ನುವುದನ್ನು ಸುಪ್ರಸಿದ್ಧವಾದ ಈ ಬಸವ ವಚನ ಹೇಳುತ್ತದೆ:
ನುಡಿದಡೆ ಮುತ್ತಿನ ಹಾರದಂತಿರಬೇಕು.
ನುಡಿದಡೆ ಮಾಣಿಕ್ಯದ ದೀಪ್ತಿಯಂತಿರಬೇಕು.
ನುಡಿದಡೆ ಸ್ಫಟಿಕದ ಸಲಾಕೆಯಂತಿರಬೇಕು.
ನುಡಿದಡೆ ಲಿಂಗ ಮೆಚ್ಚಿ ಅಹುದಹುದನಬೇಕು.
ನುಡಿಯೊಳಗಾಗಿ ನಡೆಯದಿದ್ದಡೆ,
ಕೂಡಲಸಂಗಮದೇವನೆಂತೊಲಿವನಯ್ಯಾ.
ಮಾತಾಡಬಾರದು, ಆಡಿದರೆ ಕನಿಷ್ಠಪಕ್ಷ ಮುತ್ತಿನ ಹಾರದ ಹಾಗಿರಬೇಕು. ಯಾಕೆಂದರೆ ಮುತ್ತಿನ ಹೊಳಪು ಹೊರಗಿನ ನುಣುಪು, ಬಿಳುಪಿನಲ್ಲಿದೆ, ಅಷ್ಟೇ. ಮಾತಾಡಿದರೆ ಮಾಣಿಕ್ಯದ ಬೆಳಕಿನ ಹಾಗಿರಬೇಕು. ಮುತ್ತಿನಂತಲ್ಲದೆ ಮಾಣಿಕ್ಯದ ಬೆಳಕು ಅದರ ಒಳಗಿನಿಂದಲೇ ಮೂಡುತ್ತದೆ. ಹಾಗಾಗಿ ಅಂಥ ಮಾತು ಉತ್ತಮವಾದದ್ದು. ಅದನ್ನೂ ಮೀರಬೇಕು ಅಂದರೆ ಸ್ಫಟಿಕದ ಶಲಾಕೆಯ ಹಾಗಿರಬೇಕು ಮಾತು. ಅಂದರೆ, ಮುತ್ತಿನ ಹೊಳಪು ಹೊರಗಿನದು, ಮಾಣಿಕ್ಯದ್ದು ಒಳಗಿನದು, ಸ್ಫಟಿಕವು ಒಳಗೆ, ಹೊರಗೆ ಎಂಬ ವಿಂಗಡಣೆ ಇರದೆ ಪಾರದಶರ್ಕವಾಗಿರುತ್ತೆ. ಮಾತು ಏನನ್ನೂ ಬಚ್ಚಿಡಬಾರದು, ಸ್ಫಟಿಕದ ಹಾಗಿರಬೇಕು. ಇದೂ ಸಾಲದು, ಲಿಂಗ ಮೆಚ್ಚಿ ಅಹುದು ಅನಬೇಕು, ಅಂದರೆ-ನಮ್ಮ ಮಾತನ್ನು ಇಡೀ ಸೃಷ್ಟಿಯೇ ಒಪ್ಪಿ ತಲೆತೂಗುವ ಹಾಗಿರಬೇಕು ಅನ್ನುತ್ತಾರೆ ಬಸವಣ್ಣನವರು. ನಮ್ಮ ನಮ್ಮ ವ್ಯಕ್ತಿತ್ವವನ್ನು ಸತತವಾಗಿ ತಿದ್ದಿಕೊಳ್ಳುತ್ತಿದ್ದರೆ ಮಾತ್ರ ಇಂಥ ಶಕ್ತಿ ನಮ್ಮ ಮಾತಿಗೆ ಬಂದೀತು. ಹಾಗೆ ತಿದ್ದಿಕೊಳ್ಳುವುದು ಹೇಗೆ ಎಂಬುದನ್ನೂ ಬಸವಣ್ಣ ಹೇಳಿದ್ದಾರೆ: ʻನುಡಿಯೊಳಗಾಗಿ ನಡೆʼ ಎಂಬುದು ಅವರ ಮಾತು. ನಾವಾಡುವ ನುಡಿ ನಮ್ಮ ನಡೆಯ ಗಡಿ ಸೀಮೆಯಾಗಿ, ನಮ್ಮ ನಡತೆ ನಮ್ಮ ಮಾತನ್ನು ಮುಟ್ಟುವ, ಆದರೆ ಮೀರದ ರೀತಿಯಲ್ಲಿ ಇರಬೇಕು.
ನಮ್ಮ ಮನಸಿನಲ್ಲಿ ಇರುವುದಕ್ಕೂ ನಾವು ಆಡುವ ಮಾತಿಗೂ ಬಹಳ ಸಾರಿ ವ್ಯತ್ಯಾಸವಿರುತ್ತದೆ. ಮನಸಿನೊಳಗೆ ಇರುವುದು ಬೇರೆಯವರಿಗೆ ತಿಳಿಯಬಾರದು ಎಂಬಂತೆ ಮಾತನ್ನು ಮನಸಿಗೆ ಮರೆಯಾಗಿ ಪರದೆಯಂತೆ ಬಳಸುತ್ತೇವೆ. ಹಾಗಾಗಿ ಎಲ್ಲರ ಬಗ್ಗೆ ಸಂಶಯ. ಯಾವ ಮಾತನ್ನು ಒಪ್ಪಬೇಕು, ಹೇಗೆ ಹೇಳಿದರೆ ಜನ ಒಪ್ಪುತ್ತಾರೆ ಅನ್ನುವ ಆತಂಕಕ್ಕೆ ಗುರಿಯಾಗುತ್ತೇವೆ. ಅಂಥ ಆತಂಕ ಬೇಡವೆಂದಾದರೆ ನುಡಿ ಮತ್ತು ನಡೆಯ ನಡುವೆ ಅಂತರವಿರದಂತೆ ನೋಡಿಕೊಳ್ಳಬೇಕು ಎಂಬುದು ಬಸವಣ್ಣನವರ ಉಪದೇಶ.
ವಚನಕಾರರು ಭಾಷೆಯೆಂಬ ಮಾತನ್ನು ವಾಗ್ದಾನವೆಂಬ ಅರ್ಥದಲ್ಲೂ ಬಳಸುತ್ತಾರೆ. ವಚನವೆಂಬುದು ವಾಗ್ರರಚನೆಯಲ್ಲ ಎಂದು ಸಿದ್ಧರಾಮೇಶ್ವರ ಹೇಳುತ್ತಾರೆ. ಹನ್ನೆರಡನೆಯ ಶತಮಾನದ ವಚನಗಳು ಇಂದಿನ ಮಾತು ಎಂಬಂತೆ ಕೇಳಿದರೆ ಆ ವಚನಗಳನ್ನು ಅನುಕರಿಸಿ ಬರೆದ, ಇವತ್ತೂ ಬರೆಯಲಾಗುತ್ತಿರುವ ಸಾವಿರಾರು ವಚನಗಳು ಬರೀ ನಕಲು, ತೋರಿಕೆ ಅನಿಸುತ್ತವೆ. ನನ್ನ ಪ್ರಾಣ ಹೋದರೂ ಸರಿ ಗೆಲ್ಲುತ್ತೇನೆ ಅನ್ನುವ ಭಾಷೆ ಭಕ್ತನದು, ಕೊಲ್ಲುತ್ತೇನೆ ಅನ್ನುವ ಭಾಷೆ ದೇವರದು ಎಂದು ನಂಬಿದ್ದವರು ವಚನಕಾರರು. ನಮ್ಮ ಮನಸಿನ ಮಾತಿಗೆ ಬದ್ಧವಾಗಿ ಜೀವ ಕೊಡುವುದಕ್ಕೂ ಸಿದ್ಧ ಎಂಬ ಸ್ಥೈರ್ಯವಿರುವವರು ಆಡುವ ಮಾತಿನ ಬನಿ, ಸತ್ಯವಂತಿಕೆಯೇ ಬೇರೆ. ‘ಭಾಷೆಯೆಂಬುದು ಪ್ರಾಣಘಾತಕʼ ಎಂದು ಅಲ್ಲಮಪ್ರಭುಗಳು ಒಂದೆಡೆಯಲ್ಲಿ ಹೇಳಿದ್ದಾರೆ. ನಮ್ಮ ಮಾತು ಬೇರೆಯಲ್ಲ ನಮ್ಮ ಪ್ರಾಣ ಬೇರೆಯಲ್ಲ ಎಂಬ ನಿಷ್ಠುರತೆ ಅಗತ್ಯ, ಆದರೆ ಅದಕ್ಕೆ ಬಹಳ ಧೈರ್ಯ ಬೇಕು.
ತುಟಿ, ನಾಲಗೆ, ಅಂಗುಳು ಎಲ್ಲ ಇರುವ ಬಾಯಿ ಎಂಬ ಪೆಟ್ಟಿಗೆ ಹೊರಡಿಸುವ ಸ್ವರವು ಅಂತರಂಗದ ಸಂಜ್ಞೆಯೂ ಆಗಬಲ್ಲುದು. ಹಾಗೇ ಒಳಗೆ ಏನೂ ಇರದೆ ಸುಮ್ಮನೆ ಕಲಿತ ಶಬ್ದಗಳನ್ನು ನುಡಿಯುವುದು, ಜಗಳವಾಡುವುದು, ಹೋರಾಡುವುದು ಟಗರುಗಳ ಗುದ್ದಾಟ ಮಾತ್ರವೇ ಆಗಬಹುದು. ನಮ್ಮ ಮಾತು ಅಂಥ ಲೊಳಲೊಟ್ಟೆಯೋ, ಅಂತರಂಗದ ನುಡಿಯೋ ಯಾವುದಾಗುತ್ತದೆ ಅನ್ನುವುದಕ್ಕೆ ನಾವೇ ಹೊಣೆಗಾರರು ಎಂಬುದು ವಚನಕಾರರ ನಿರ್ಣಯ.
ಶಬ್ದ ಮತ್ತು ನಿಶ್ಶಬ್ದ ಒಂದರಿಂದ ಇನ್ನೊಂದು ಬೇರೆಯಾಗವು. ನಿಶ್ಶಬ್ದ ಇದ್ದರೇ ಶಬ್ದ ಮೂಡಲು ಸಾಧ್ಯ. ಒಂದು ಶಬ್ದ ಮೂಡಿ ಇನ್ನೊಂದು ಶಬ್ದ ಮೂಡುವ ಮೊದಲು ಅವರೆಡರ ನಡುವೆಯೂ ನಿಶ್ಶಬ್ದವೇ ಇರುತ್ತದೆ. ನಿಶ್ಶಬ್ದವನ್ನು ಅರಿಯದೆ ಶಬ್ದವನ್ನು ಅರಿಯಲಾಗದು. ನಾವು ಬದುಕುತ್ತಿರುವ ಈ ಕಾಲಮಾನದಲ್ಲಿ ಶಬ್ದದ ಸಂದಣಿಯಲ್ಲಿ ಕಳೆದು ಹೋಗುವುದೇ ಮುಖ್ಯವೆಂಬ ಭಾವನೆ ಮೂಡಿದೆ. ಒಳಗಿನ ನಿಶ್ಶಬ್ದ ಕಾಪಾಡಿಕೊಂಡರಷ್ಟೇ ಶಬ್ದಕ್ಕೆ ಶಕ್ತಿ. ಆಡುವ ಮಾತು, ಕೇಳುವ ವಚನ ಅರ್ಥವಾಗಬೇಕಾದರೆ ನಾವೂ ಬೆಳೆದು ನಮ್ಮ ಮನಸ್ಸು ವಿಸ್ತಾರವಾಗಿ ಹಿಗ್ಗಬೇಕು. ನಮಗೆ ಆಗುವ ಅನುಭವಗಳನ್ನು ಗಮನಿಸಿ ಅರಿಯಬೇಕು.
ಮಾತಿನ ಮೇಲೆ ನಿಗಾ ಇರದಿದ್ದರೆ ಇಡೀ ಬದುಕೇ ಹಾಳಾಗುತ್ತದೆ. ನಮ್ಮ ಅನೇಕ ರಾಜಕಾರಣಿಗಳು ಸಭ್ಯತೆ, ಸಜ್ಜನಿಕೆಯನ್ನು ಮೀರಿ ದ್ವೇಷದ, ಕೆಡುಕಿನ ಮಾತು ಆಡುತ್ತಾರೆ. ಮಾತು ಕ್ರೂರವಾದಷ್ಟೂ ಮನಸು ಕ್ರೂರವಾಗುತ್ತದೆ. ಸಾಮಾಜಿಕವಾಗಿ ಇಂಥ ಎಚ್ಚರ ಅಗತ್ಯವೆಂದು ಬಸವಣ್ಣ ನುಡಿದಿದ್ದಾರೆ.
ಅಯ್ಯಾ ಎಂದಡೆ ಸ್ವರ್ಗ, ಎಲವೋ ಎಂದಡೆ ನರಕ ಎಂಬ ಮಾತನ್ನೇ ನೋಡಿ. ನಮ್ಮ ರಾಜಕಾರಣಿಗೆಗಳು ಒಬ್ಬೊಬ್ಬರಿಗೂ ತಾವು ಮಾತ್ರ ಬಹಳ ಸಜ್ಜನರು, ಮಿಕ್ಕವರೆಲ್ಲ ದುಷ್ಟರು, ಪಾತಕಿಗಳು ಎಂಬ ಭ್ರಮೆ ಹಿಡಿದು ಜವಾಬ್ದಾರಿ ಇಲ್ಲದೆ ಮಾತಾಡುತ್ತಾರೆ. ಅದರಿಂದ ಒಟ್ಟೂ ಸಮಾಜದ ಆರೋಗ್ಯವೇ ಹಾಳು.
ಇದಿರ ಹಳಿಯದೆ ಬದುಕು, ಹುಸಿಯ ನುಡಿಯದೆ ಬದುಕು ಎಂಬ ಭಾಷೆಗೆ ಸಂಬಂಧಿಸಿದ ಇನ್ನೆರಡು ಸಾಮಾಜಿಕ ಪಾಠಗಳನ್ನೂ ಬಸವಣ್ಣ ನುಡಿದಿದ್ದಾರೆ. ಇದಿರು ಎಂದರೆ ನಮ್ಮ ವಿರೋಧಿ ಇವರು, ನಮ್ಮೆದುರು ಇರುವವರು ನಿಂದನೆಗೆ ಯೋಗ್ಯರು ಎಂಬ ಅರ್ಥಗಳು ಹುಟ್ಟುತ್ತವೆ. ನಾನು ಮತ್ತು ಇತರರು ಎಂಬುದು ಮಾತು, ಭಾಷೆ ಸೃಷ್ಟಿಸುವ ವಿರೋಧಗಳೇ ಹೊರತು ಯಾರೂ ಅನ್ಯರಲ್ಲ, ನಾನು ಮತ್ತು ಈ ಸೃಷ್ಟಿ ಬೇರೆ ಬೇರೆಯಲ್ಲ ಎಂಬ ಅರಿವು ಇದ್ದಾಗ, ಎಲ್ಲರೂ ಇವ ನಮ್ಮವ ಅನಿಸುವಾಗ ದ್ವೇಷದ, ಗೆಲ್ಲುವ, ಕೊಲ್ಲುವ ಮಾತೇ ಬರುವುದಿಲ್ಲ, ಅಲ್ಲವೇ?
ಅಂದರೆ ವಚನಕಾರರು ನಮ್ಮ ವ್ಯಕ್ತಿತ್ವಕ್ಕೂ ಸಮಾಜಕ್ಕೂ ನಾವು ಬಳಸುವ ಭಾಷೆಗೂ ಇರುವ ಸಂಬಂಧವನ್ನು ಬಹಳ ವ್ಯಾಪಕವಾಗಿ ಚರ್ಚೆ ಮಾಡಿದ್ದಾರೆ. ನಾನು ಮತ್ತು ಮಾತು, ನಾವು ಮತ್ತು ಮಾತು, ಸಮಾಜ ಮತ್ತು ಮಾತು, ದೇವರು ಮತ್ತು ಮಾತು ಹೀಗೆ ಅವರ ವಚನಗಳಲ್ಲಿ ನುಡಿ ಚಿಂತನೆ ವ್ಯಕ್ತವಾಗುತ್ತದೆ.
Comments 12
ರಮೇಶ ಕುಮಾರ್, ರಾಮದುರ್ಗ
Jul 25, 2024ಮಾತು ಹದವಾಗುವುದು ಬದುಕು ಮಾಗಿದಾಗಲೇ. ಅಂತಹ ಹದವಾಗಿ ಬಾಳಿ ಹೋದ ಶರಣರ ಮಾತುಗಳ ಮರ್ಮ ತಿಳಿಸುವ ಲೇಖನ ಹಿಡಿಸಿತು.
Anil S.P, Chitradurga
Jul 25, 2024Definitely, what a great blog and revealing posts, I definitely will bookmark your site. Best Regards!
ಸಿ. ಭರತ್, ಗದಗ
Jul 28, 2024‘ಮಾತಿನ ಮೇಲೆ ನಿಗಾ ಇರದಿದ್ದರೆ ಇಡೀ ಬದುಕೇ ಹಾಳಾಗುತ್ತದೆ. ನಮ್ಮ ಅನೇಕ ರಾಜಕಾರಣಿಗಳು ಸಭ್ಯತೆ, ಸಜ್ಜನಿಕೆಯನ್ನು ಮೀರಿ ದ್ವೇಷದ, ಕೆಡುಕಿನ ಮಾತು ಆಡುತ್ತಾರೆ. ಮಾತು ಕ್ರೂರವಾದಷ್ಟೂ ಮನಸು ಕ್ರೂರವಾಗುತ್ತದೆ.’ ಶರಣರ ಈ ಒಂದು ಸಲಹೆ ಪಾಲಿಸಿದರೂ ಸಾಕು, ನಮ್ಮ ಜನ್ಮ ಪಾವನವಾಗುತ್ತದೆ.
Somashekharappa
Jul 29, 2024Prof O L Nagabhushan’s write up on “shabdadolagana nishyabda” is very well conceptualized described and explained. I think it has some core values of Social life very well contained in it.
ಮಾತೆ ಬಸವಾಂಜಲಿ, ಮೈಸೂರು
Jul 29, 2024ಅದ್ಭುತವಾದ ಲೇಖನ 💐💐💐🙏🏻🙏🏻🙏🏻💐💐💐
Ashakiran, Bengaluru
Jul 29, 2024Very good write up. Thank u for sharing
Dr. C.A. Somashekharappa
Jul 30, 2024Thank you for Prof OLN’s nice interpretative article which holds valid in the context in which the subject matter is viewed . I really enjoyed reading it.
Regards
Basavalingappa, Davangere
Jul 30, 2024Very good article.
A.T.Patil, Raichur
Jul 30, 2024“ನಮ್ಮ ನಮ್ಮ ವ್ಯಕ್ತಿತ್ವವನ್ನು ಸತತವಾಗಿ ತಿದ್ದಿಕೊಳ್ಳುತ್ತಿದ್ದರೆ ಮಾತ್ರ ಇಂಥ ಶಕ್ತಿ ನಮ್ಮ ಮಾತಿಗೆ ಬಂದೀತು.” ಅದು ಆಂತರಿಕ ವಿಕಾಸ. ಮಂಗನಿಂದ ಮಾನವನತ್ತ ಮುನ್ನಡೆಯುವ ಪ್ರಜ್ಞಾ ವಿಕಾಸ. ಬಾಲ, ಕೋರೆ ಹಲ್ಲು ಕಳೆದುಕೊಂಡಿದ್ದೇವೆ. ಇದು ಲಕ್ಷಾಂತರ ವರ್ಷಗಳಲ್ಲಿ ಬಾಹ್ಯ ವಿಕಾಸ ಪ್ರಥಮ ಹೆಜ್ಜೆ. Stage of first evolution. Second evolution ಆಂತರಿಕ ವಿಕಾಸ. ಮುಂದಿನ ಹೆಜ್ಜೆಗೆ ನಮ್ಮ ಮನವ ನಾವೇ ಗೆಲ್ಲಬೇಕು. ಅದು ಮಾತಿನ ರೂಪುರೇಷೆಯಿಂದಲೇ ಏಕಾಗಬಾರದು? ಅದೊಂದು ನಮ್ಮ ಮುನ್ನಡೆಗೆ ಮೊದಲ ತರಬೇತಿಯಂತೆ. ಜೊತೆಗೂಡುವವರು ಸೇರಲಿ ಅಥವಾ ಬಿಡಲಿ. ನಮ್ಮನ್ನು ನಾವು ಮುನ್ನಡೆಸೋಣ. ನಮ್ಮ ಒಳಿತನ್ನು ನಾವು ನೋಡದಿದ್ದರೆ ಬೇರೆಯವರು ಹೇಗೆ ನೋಡುತ್ತಾರೆ.
ಶ್ರದ್ಧಾನಂದ ಸ್ವಾಮೀಜಿ, ವಿಜಯಪುರ
Aug 3, 2024ಶಬ್ದ ಮುಗ್ಧರಾಗಿ ನಿಶ್ಯಬ್ದವನ್ನು ಅರಿಯೋಣ…🙏🙏
Anand V
Aug 8, 2024Nice post. I learn something new and challenging on sites I stumbleupon. Special thanks to the writers👌👌
ಜೀವರಾಜ್ ನೆಡೂರು
Aug 11, 2024“ಮಾತಿನ ಮೇಲೆ ನಿಗಾ ಇರದಿದ್ದರೆ ಇಡೀ ಬದುಕೇ ಹಾಳಾಗುತ್ತದೆ. ನಮ್ಮ ಅನೇಕ ರಾಜಕಾರಣಿಗಳು ಸಭ್ಯತೆ, ಸಜ್ಜನಿಕೆಯನ್ನು ಮೀರಿ ದ್ವೇಷದ, ಕೆಡುಕಿನ ಮಾತು ಆಡುತ್ತಾರೆ. ಮಾತು ಕ್ರೂರವಾದಷ್ಟೂ ಮನಸು ಕ್ರೂರವಾಗುತ್ತದೆ.” ಬಸವಣ್ಣ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಕರ್ನಾಟಕ ಸರ್ಕಾರದ ಎಲ್ಲಾ ರಾಜಕಾರಣಿಗಳು ಇದನ್ನು ಅನುಸರಿಸುವಂತಾಗಲಿ.