ವಚನಗಳಲ್ಲಿ ಶಿವ
ಪುರಾಣಗಳಲ್ಲಿ ಶಿವನನ್ನು ಒಬ್ಬ ವ್ಯಕ್ತಿಯಾಗಿ ಬಿಂಬಿಸಲಾಗಿದೆ. ಆತನಿಗೆ ಪಾರ್ವತಿ ಮತ್ತು ದಾಕ್ಷಾಯಣಿ ಎಂಬ ಹೆಂಡತಿಯರೂ ಗಣೇಶ ಕಾರ್ತಿಕೇಯ ಎಂಬ ಇಬ್ಬರು ಮಕ್ಕಳೂ ಇದ್ದರೆಂದು ಪ್ರಸ್ತಾಪಿಸಲಾಗಿದೆ. ಶಿವನು ನಾಟ್ಯದಲ್ಲಿ ಪ್ರವೀಣನೂ, ಶ್ರೇಷ್ಠವೈದ್ಯನೂ ಆಗಿದ್ದನೆಂದು ಪುರಾಣಗಳಲ್ಲಿ ವರ್ಣಿಸಲಾಗಿದೆ. ಆದರೆ ಆ ಶಿವನೂ ತಪಸ್ಸಿಗೆ ಕುಳಿತಾಗ ‘ಓಂ ನಮಃ ಶಿವಾಯ’ ಎಂಬ ಷಡಕ್ಷರಿ ಮಂತ್ರವನ್ನು ಜಪಿಸುತ್ತಿದ್ದನೆಂದು ಪುರಾಣಗಳಲ್ಲಿ ಕೇಳಿದ್ದೇವೆ. ಹಾಗಾದರೆ ಶಿವನು ಓಂ ನಮಃ ಶಿವಾಯ ಎಂದು ಯಾರನ್ನು ಕುರಿತು ತಪಸ್ಸನ್ನಾಚರಿಸುತ್ತಿದ್ದ? ಸಹಜವಾಗಿಯೇ ಏಳುವ ಪ್ರಶ್ನೆ ಇದು. ಇದಕ್ಕೆ ಶರಣರ ವಚನಗಳಲ್ಲಿ ಸ್ಪಷ್ಟ ಉತ್ತರ ಸಿಗುತ್ತದೆ.
ಒಟ್ಟು ೧೩೯ ವಚನಕಾರರು ತಮ್ಮ ೪೩೯೧ ವಚನಗಳಲ್ಲಿ ೮೫೮೫ ಬಾರಿ ಶಿವ ಎಂಬ ಪದವನ್ನು ಬಳಸಿದ್ದಾರೆ. ವಚನಗಳಲ್ಲಿ ಬಳಕೆಯಾಗಿರುವ ’ಶಿವ’ ಪದದ ಅರ್ಥವೇನು? ಹಿಂದೂ ಪುರಾಣಗಳಲ್ಲಿ ಉಲ್ಲೇಖವಾಗಿರುವ ‘ಶಿವ’ ಪದಕ್ಕೂ ಶರಣರ ವಚನಗಳಲ್ಲಿ ಬಳಕೆಯಾಗಿರುವ ‘ಶಿವ’ ಪದಕ್ಕೂ ಸಂಬಂಧವಿದೆಯೇ? ಈ ಗೊಂದಲದಿಂದ ಬಿಡುಗಡೆಯಾಗಲು ವಚನಗಳೇ ದಾರಿ ತೋರಿಸುತ್ತವೆ.
ಅಲ್ಲಮಪ್ರಭುದೇವರು ಹೇಳುತ್ತಾರೆ ಶಂಕರ, ಶಶಿಧರ, ರುದ್ರ, ನೀಲಕಂಠ ಇವೆಲ್ಲಾ ಶಿವನ ಬೇರೆ ಬೇರೆ ಹೆಸರುಗಳಲ್ಲ ಬದಲಿಗೆ ಅವುಗಳು ಬೇರೆ ಬೇರೆ ಶಿವಭಕ್ತರ ಹೆಸರುಗಳು ಎಂದು. ಈ ವಚನ ಗಮನಿಸಿ:
“ರುದ್ರನೆಂಬಾತನೊಬ್ಬ ಗಣೇಶ್ವರನು, ಭದ್ರನೆಂಬಾತನೊಬ್ಬ ಗಣೇಶ್ವರನು. ಶಂಕರನೆಂಬಾತನೊಬ್ಬ ಗಣೇಶ್ವರನು, ಶಶಿಧರನೆಂಬಾತನೊಬ್ಬ ಗಣೇಶ್ವರನು. ಪೃಥ್ವಿಯೆ ಪೀಠ ಆಕಾಶವೆ ಲಿಂಗ_ಅಂತಹ ಆತನೊಬ್ಬ ಗಣೇಶ್ವರನು. ಬಲ್ಲಾಳನ ವಧುವ ಬೇಡಿದಾತನೊಬ್ಬ ಗಣೇಶ್ವರನು. ಸಿರಿಯಾಳನ ಮಗನ ಭಿಕ್ಷವ ಬೇಡಿದಾತನೊಬ್ಬ ಗಣೇಶ್ವರನು. ಬ್ರಹ್ಮಕಪಾಲ ವಿಷ್ಣುಕಂಕಾಳವನಿಕ್ಕಿ ಆಡುವಲ್ಲಿ ನೀಲಕಂಠನೆಂಬಾತನೊಬ್ಬ ಗಣೇಶ್ವರನು. ಇವರೆಲ್ಲರು ನಮ್ಮ ಗುಹೇಶ್ವರಲಿಂಗದೊಳಡಗಿಪ್ಪರು.”
ಈ ಹಿನ್ನೆಲೆಯಲ್ಲಿ ನೋಡಿದಾಗ ಶಿವನ ಪತ್ನಿಯರೆಂದು ಕರೆಯಲಾಗುವ ಗಂಗೆ, ಗೌರಿ, ಪಾರ್ವತಿ, ಉಮೆ, ದಾಕ್ಷಾಯಣಿ ಇವರು ಬೇರೆ ಬೇರೆ ಗಣೇಶ್ವರರ ಪತ್ನಿಯರೇನೋ ಎನ್ನುವ ಅನುಮಾನ ಕಾಡುವುದು. ನಾವು ಇವರೆಲ್ಲರನ್ನೂ ಶಿವನೆಂದೇ ಭಾವಿಸಿದ್ದೇವೆ. ಆದರೆ ಅಲ್ಲಮ ಪ್ರಭುದೇವರು ಇವರೆಲ್ಲರೂ ಶಿವನ ಭಕ್ತರೇ ಹೊರತು ಅವರೇ ಶಿವನಲ್ಲ ಎಂದು ಈ ವಚನದಲ್ಲಿ ನಿರೂಪಿಸಿದ್ದಾರೆ. ಹಾಗಾದರೆ ಶರಣರು ತಮ್ಮ ವಚನಗಳಲ್ಲಿ ಯಾವ ಶಿವನನ್ನು ಕುರಿತು ಹೇಳಿದ್ದಾರೆ?
ಸಿದ್ಧರಾಮೇಶ್ವರರು ದೇವರನ್ನು ನಿಮ್ಮ ಹೆಸರೇನೆಂದು ಕೇಳುವ ಪರಿ ಅವರ ಅರಿವಿನ ಹರವನ್ನು ತೆರೆದಿಡುತ್ತದೆ: “ಸರ್ಪನ ಮೇಲೆ ಪೃಥ್ವಿ ರಚಿಸದಂದು, ಸಮುದ್ರಂಗಳೇಳು ಹಾಸದಂದು, ಅಷ್ಟದಿಗುದಂತಿಗಳು ಹುಟ್ಟದಂದು, ಶಂಖು ಶಲಾಕೆಯಿಲ್ಲದಂದು, ಗಂಗೆ ಗೌರೀವಲ್ಲಭರಿಲ್ಲದಂದು, ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ಈ ಐವರೂ ಹುಟ್ಟದಂದು, ಈ ಐವರ ತಾಯಿತಂದೆ ಇಲ್ಲದಂದು ನಿಜಗುರು ಕಪಿಲಸಿದ್ಧಮಲ್ಲೇಶ್ವರಾ, ನಿಮ್ಮ ಹೆಸರೇನಯ್ಯಾ?”
ಬ್ರಹ್ಮ ವಿಷ್ಣು ಮಹೇಶ್ವರರು ತ್ರಿಮೂರ್ತಿಗಳು. ಇವರೇ ಈ ಜಗದ ಉತ್ಪತ್ತಿ ಸ್ಥಿತಿ ಲಯಗಳಿಗೆ ಕಾರಣರು ಎಂದು ನಾವೆಲ್ಲ ಭಾವಿಸಿದ್ದೆವು, ಅವರನ್ನೇ ದೇವರೆಂದು ನಂಬಿದ್ದೆವು. ಆದರೆ ಯೋಗಿ ಸಿದ್ಧರಾಮೇಶ್ವರರು ಎಷ್ಟು ಸ್ಪಷ್ಟವಾಗಿ ಹೇಳಿದ್ದಾರೆ ನೋಡಿ! ದೇವರೆಂಬ ಚೈತನ್ಯವು ರುದ್ರ, ಈಶ್ವರ, ಗಂಗೆ-ಗೌರಿಯ ಪತಿ, ಸದಾಶಿವ, ಇವರೆಲ್ಲರೂ ಭೂಮಿಯಲ್ಲಿ ಹುಟ್ಟಿ ಬೆಳೆದು ಕಾಲನ ಗರ್ಭದಲ್ಲಿ ಸೇರಿಹೋಗಿದ್ದಾರೆ. ಆದರೆ ದೇವರೆಂಬ ಪರವಸ್ತು ಹುಟ್ಟದೆಯೇ, ಸಾಯದೆಯೇ ಅಖಂಡ ಚೈತನ್ಯವಾಗಿ ಎಂದೆಂದೂ ಎಲ್ಲೆಡೆಯೂ ವ್ಯಾಪಿಸಿ ಸಮಸ್ತ ಸೃಷ್ಟಿಗೆ ಕಾರಣೀಭೂತವಾಗಿ ಇರುವ ಪರಮ ಚೈತನ್ಯ. ಆ ಪರಮ ಚೈತನ್ಯವನ್ನೇ ಶರಣರು ಶಿವ ಎಂದು ಕರೆದಿದ್ದಾರೆ.
ಮೇಲೆ ಹೇಳಲಾಗಿರುವ ಅನೇಕ ಗಣೇಶ್ವರರೂ ಆ ಪರಮ ಶಿವತತ್ವವನ್ನೇ ಓಂನಮಃಶಿವಾಯ ಎಂಬ ಷಡಕ್ಷರಿ ಮಂತ್ರದ ಮುಖೇನ ಪ್ರಾರ್ಥಿಸುತ್ತಿದ್ದರು. ಶಿವ ಎಂಬುದೊಂದು ತತ್ವ. ಆ ತತ್ವವನ್ನು ಅರಿತು ಅದರಲ್ಲಿ ಬೆರೆತ ಗಣೇಶ್ವರರನ್ನು ಶಿವ ಎಂದೇ ಕರೆಯಲಾಗುತ್ತಿತ್ತು. ಅದನ್ನೇ ಪ್ರಭುದೇವರು ಮೇಲಿನ ವಚನದಲ್ಲಿ ಬೇರೆ ಬೇರೆ ಕಾಲಘಟ್ಟದಲ್ಲಿ ಆಗಿಹೋದ ಶಿವಭಕ್ತರನ್ನು ಗಣೇಶ್ವರರೆಂದು ಕರೆದಿದ್ದಾರೆ. ಅವರಲ್ಲಿ ಶಂಕರನೆಂಬಾತನೊಬ್ಬ ಗಣೇಶ್ವರ, ಶಶಿಧರನೆಂಬಾತನೊಬ್ಬ ಗಣೇಶ್ವರ ಎಂದು ಸ್ಪಷ್ಟೀಕರಣ ಕೊಟ್ಟಿದ್ದಾರೆ. ಅದನ್ನು ಪುಷ್ಟೀಕರಿಸುವಂತೆ ಸಿದ್ಧರಾಮೇಶ್ವರು ಕೂಡ ತಮ್ಮ ವಚನದಲ್ಲಿ ಶಿವನೆಂಬ ತತ್ವ ಅನಾದಿ, ಈ ಗಣೇಶ್ವರರೆಲ್ಲರಿಗಿಂತ ಮೊದಲೇ ಇದ್ದ ತತ್ವ ಎಂದು ಪ್ರತಿಪಾದಿಸಿದ್ದಾರೆ.
ಶಿವ ಎಂದರೆ ಅಖಂಡ ಸೃಷ್ಟಿಗೆ ಕಾರಣೀಭೂತವಾದ ಚೈತನ್ಯ, ಅದೇ ಚೈತನ್ಯದಲ್ಲಿ ಇಡೀ ಸೃಷ್ಟಿ ಪುನಃ ಅಡಗುವುದು. ಶಿವನ ಈ ಕ್ರಿಯೆ ಮಾನವನ ಸೀಮಿತ ಅರಿವಿಗೆ ನಿಲುಕುವುದಿಲ್ಲ. ಪ್ರತಿ ಕ್ಷಣವೂ ಹೊಸದರ ಉತ್ಪತ್ತಿ ನಿರಂತರವಾಗಿ ನಡೆದೇ ಇರುವುದು. ಹಾಗೆಯೇ ಪ್ರತಿಕ್ಷಣವೂ ಹಳೆಯದರ ಅಳಿವು, ನಿತ್ಯ ನಿರಂತರ ನಡೆದೇ ಇದೆ. ಇಂಥಾ ಮಹಾಘನ ಚೈತನ್ಯದೊಳಗೆ ನರರು ಸುರರು ಎಲ್ಲರೂ ಬಂದುಹೋಗುವರು, ಇವೆಲ್ಲವೂ ಸೃಷ್ಟಿಯ ಅಖಂಡತೆಯಲ್ಲಿ ಕಿಂಚಿತ್ ಮಾತ್ರ ಎಂದು ಈ ವಚನದಲ್ಲಿ ಚನ್ನಬಸವಣ್ಣನವರು ತಿಳಿಸಿದ್ದಾರೆ:
“ನರಸುರಾದಿಗಳೆಲ್ಲರು ನಿಮ್ಮ ಹೊರೆಯೊಳಗಿದ್ದರು, ಮನು ಮುನಿ ಯತಿ ವ್ರತಿಗಳೆಲ್ಲರು ನಿಮ್ಮ ತೋಹಿನೊಳಗಿದ್ದರು. ಗಂಗೆವಾಳುಕರೆಲ್ಲರು ನಿಮ್ಮ ಮಡಿಯೊಳಗಿದ್ದರು. ಗಂಗೆ ಗೌರೀವಲ್ಲಭರೆಲ್ಲರು, ಚತುರ್ಮುಖ, ಪಂಚಮುಖ, ಷಣ್ಮಖ, ದಶಮುಖರೆಲ್ಲರು ನಿಮ್ಮ ಮಡಿಯ ಗಳಿಗೆಯೊಳಗಿದ್ದರು. ಲೋಕಾದಿ ಲೋಕವೆಲ್ಲವು ನಿಮ್ಮ ಕುಕ್ಷಿಯೊಳಗು. ಕೂಡಲಚೆನ್ನಸಂಗಮದೇವರು ಸಾಕ್ಷಿಯಾಗಿ, ನಿಮ್ಮ ನಿರಾಳದ ಪ್ರಸಾದದಿಂದ ನಿರವಯಲ ಹಾದಿಯ ಕಂಡೆನಲ್ಲದೆ, ನಿಮ್ಮಿಂದಲಾನು ಘನವೆ ಮಡಿವಾಳ ಮಾಚಯ್ಯಾ?”
ಅಲ್ಲಮಪ್ರಭುದೇವರು ಹೇಳುತ್ತಾರೆ: “ಪಾರ್ವತಿಯು ಪರಶಿವನ ಸತಿಯೆಂಬ ಶಿವದ್ರೋಹಿಗಳು ನೀವು ಕೇಳಿರೆ. ಬೆನಕನು ಪರಶಿವನ ಮಗನೆಂಬ ಪಾತಕ ದುಃಖಿಗಳು ನೀವು ಕೇಳಿರೆ. ಸ್ವಾಮಿ ಕಾರ್ತಿಕೇಯನು ನಮ್ಮ ಹರಲಿಂಗನ ಮಗನೆಂಬ ಲಿಂಗದ್ರೋಹಿಗಳು ನೀವು ಕೇಳಿರೆ. ಭೈರವನು ಭಯಂಕರಹರನ ಮಗನೆಂಬ ಭವಹರಗುರುದ್ರೋಹಿಗಳು ನೀವು ಕೇಳಿರೆ. ಅಜಾತನ ಚರಿತ್ರ ಪವಿತ್ರ. ನಮ್ಮ ಗುಹೇಶ್ವರಲಿಂಗಕ್ಕೆ ಪ್ರಸಾದವ ಸಲಿಸಿದಾತ ಪೂರ್ವಾಚಾರಿ ಸಂಗನಬಸವಣ್ಣನ ಮಗನಾಗಿ, ಆದಿಯ ಲಿಂಗ ಅನಾದಿಯ ಶರಣ ಗುರುವಿನ ಗುರು ಪರಮಗುರುವರನ ತೋರಿದನಯ್ಯಾ ಸಿದ್ಧರಾಮಯ್ಯ ಚೆನ್ನಬಸವಣ್ಣನು”.
ಈ ವಚನವು ಶರಣರು ಅರಿತು ಅನುಭವಿಸಿದ ಶಿವನನ್ನು ಅರಿಯಲು ಬಹಳ ಮಹತ್ವದ್ದಾಗಿದೆ. ನಾವು ಸಾಮಾನ್ಯವಾಗಿ ಪರಶಿವನ ಸತಿ ಪಾರ್ವತಿ ಎಂದು ಓದಿದ್ದೇವೆ ಕೇಳಿದ್ದೇವೆ. ಪ್ರಭುದೇವರು ಹೇಳುತ್ತಾರೆ ಪರಶಿವ ಎಂಬುದು ಸೃಷ್ಟಿಕಾರಣ ತತ್ವ. ಆ ತತ್ವಕ್ಕೆ ಹುಟ್ಟೂ ಇಲ್ಲ ಸಾವೂ ಇಲ್ಲ. ಸತಿ ಸುತರೂ ಇಲ್ಲ ಅಂದ ಮೇಲೆ ಪಾರ್ವತಿ ಪರಶಿವನ ಸತಿಯಾಗಲು ಹೇಗೆ ಸಾಧ್ಯ? ಬೆನಕ, ಕಾರ್ತಿಕೇಯ ಇವರುಗಳು ಪರಶಿವನ ಮಕ್ಕಳಾಗಲು ಹೇಗೆ ಸಾಧ್ಯ? ಸತಿ ಸುತರನ್ನು ಹೊಂದಲು ಅವರೊಡನೆ ಜೀವಿಸಲು ನಿರಾಕಾರ ಪರಶಿವ ತತ್ವಕ್ಕೆ ಸಾಧ್ಯವಿಲ್ಲ. ಅದು ಹುಟ್ಟಿದ ಜೀವಿಗಷ್ಟೇ ಸಾಧ್ಯ! ಹಾಗಾಗಿ ತಾನು ಹುಟ್ಟದೇ ಹೊಂದದೇ ಜಗತ್ತಿನ ಹುಟ್ಟು ಹೊಂದುವಿಕೆಗೆ ಕಾರಣವಾದ ಚೈತನ್ಯವೇ ಪರಶಿವ ತತ್ವ.
ಇಂಥಾ ಪರಶಿವ ತತ್ವವು ಅಖಂಡ ಸೃಷ್ಟಿಯಲ್ಲಿ ಓತಪ್ರೋತವಾಗಿ ಅಖಂಡವಾಗಿ ನಿರಾಕಾರವಾಗಿ ತುಂಬಿತುಳುಕುತ್ತಿದೆ. ಆ ನಿರಾಕಾರ ಪರಶಿವ ತತ್ವವು ಪ್ರತಿಯೊಂದು ಜೀವಿಯ ಅಂತರಾಳದಲ್ಲೂ ಅಣುಅಣುವಿನಲ್ಲೂ ಅಖಂಡವಾಗಿ ನೆಲೆಸಿದೆ. ಯಾವಾಗ ಪರಶಿವ ತತ್ವವು ಜೀವಾತ್ಮನ ಸಂಪರ್ಕಕ್ಕೆ ಬರುತ್ತದೋ ಆಗ ಅದು ಶಿವತತ್ವವಾಗುತ್ತದೆ. ನಮ್ಮೊಳಗೇ ಬೆರೆತಿರುವ ಅಖಂಡ ಶಿವತತ್ವವನ್ನು ನಾವು ಅರಿತು ಅನುಭವಿಸಬೇಕು, ಅದೇ ಮುಕ್ತಿ ಎಂದು ಪ್ರಭುದೇವರು ಸೂಚಿಸಿದ್ದಾರೆ. “ಸಾರೆ ಚೆಲ್ಯಾದೆ ಮುಕುತಿ, ಗುರು ತೋರಿಸಿದಲ್ಲದೆ ಕಾಣಿಸದಲ್ಲಾ” ತನ್ನೊಳಗೇ ಅಂತರ್ಗತವಾಗಿರುವ ಶಿವತತ್ವವನ್ನು ಅರಿತು ಅನುಭವಿಸಿ ನಿತ್ಯತೃಪ್ತನಾಗುವುದೇ ಜೀವನದ ಗುರಿ ಎಂಬ ಪ್ರಭುದೇವರ ನುಡಿಗಳು ಎಷ್ಟು ಅರ್ಥಪೂರ್ಣವಲ್ಲವೇ!
ಮಹಾ ಯೋಗಿಣಿ ಅಕ್ಕಮಹಾದೇವಿ ಶಿವನ ಸ್ವರೂಪವನ್ನು ವಿವರಿಸುತ್ತಾ “ಶಿವ ಶಿವಾ, ಆದಿ ಅನಾದಿಗಳೆಂಬೆರಡಿಲ್ಲದ ನಿರವಯ ಶಿವ, ನಿಮ್ಮ ನಿಜವನಾರಯ್ಯಾ ಬಲ್ಲವರು ವೇದಂಗಳಿಗಭೇದ್ಯನು ಶಾಸ್ತ್ರಂಗಳಿಗಸಾಧ್ಯನು ಪುರಾಣಕ್ಕೆ ಆಗಮ್ಯನು ಆಗಮಕ್ಕೆ ಅಗೋಚರನು; ತರ್ಕಕ್ಕೆ ಅತರ್ಕ್ಯನು ವಾಙ್ಮನಾತೀತವಾಗಿಪ್ಪ ಪರಶಿವಲಿಂಗವನು ಕೆಲಂಬರು ಸಕಲನೆಂಬರು; ಕೆಲಂಬರು ನಿಃಕಲನೆಂಬರು, ಕೆಲಂಬರು ಸೂಕ್ಷ್ಮನೆಂಬರು; ಕೆಲಂಬರು ಸ್ಥೂಲನೆಂಬರು ಈ ಬಗೆಯ ಭಾವದಿಂದ, ಹರಿ, ಬ್ರಹ್ಮ, ಇಂದ್ರ, ಚಂದ್ರ, ರವಿ, ಕಾಲ, ಕಾಮ, ದಕ್ಷ, ದೇವ, ದಾನವ, ಮಾನವರೆಲ್ಲರೂ ಕಾಣಲರಿಯದೆ ಅಜ್ಞಾನದಿಂದ ಭವಭಾರಿಗಳಾದರು…” ಎಂದಿದ್ದಾರೆ. ಶಿವನಿಗೆ ಆದಿ ಮತ್ತು ಅನಾದಿಗಳೆರಡೂ ಇಲ್ಲ ಅವೆಲ್ಲಕ್ಕೂ ಅತೀತವಾದ ಚೈತನ್ಯಶಕ್ತಿ. ಆ ಶಿವ ತತ್ವವು ವೇದ ಶಾಸ್ತ್ರ ಪುರಾಣಗಳಿಗೆ ಎಟುಕದ ವಸ್ತು. ಅಂಥಾ ನಿರಾಕಾರ ಪರವಸ್ತುವನ್ನು ಕೆಲವರು ಸಕಲ (ತೋರುವ ಜಗದ ಒಳಗು) ಎಂದರೆ ಇನ್ನೂ ಕೆಲವರು ನಿಃಕಲ (ತೋರುವ ಜಗತ್ತಿನಿಂದ ಹೊರಗಾದವ) ಎನ್ನುವರು, ಮತ್ತೂ ಕೆಲವರು ಸ್ಥೂಲನೆಂದೂ ಇನ್ನೂ ಕೆಲವರು ಸೂಕ್ಷ್ಮವೆಂದೂ ತಮತಮಗೆ ತಿಳಿದ ಹಾಗೆ ನುಡಿವರು. ಆದರೆ ಆ ಪರಶಿವ ತತ್ವವು ಈ ಎಲ್ಲಾ ದ್ವಂದ್ವಗಳಿಗೆ ನಿಲುಕದ್ದಾಗಿದೆ. ಪರಶಿವ ತತ್ವವು ಸಕಲವೂ ಹೌದು ಹಾಗೇ ನಿಃಕಲವೂ ಹೌದು. ಅವೆರಡಕ್ಕೂ ಅತೀತವೂ ಹೌದು. ಪರಶಿವ ತತ್ವವು ಸ್ಥೂಲವೂ ಆಗಿದೆ ಸೂಕ್ಷ್ಮವೂ ಆಗಿದೆ ಹಾಗೂ ಅವೆರಡಕ್ಕೂ ಅತೀತವಾಗಿದೆ ಎಂದು ಅಕ್ಕಮಹಾದೇವಿ ತಮ್ಮ ಅನುಭಾವದಿಂದ ಅರುಹಿದ್ದಾರೆ.
“ಅಷ್ಟತನುಮೂರ್ತಿ ಶಿವನೆಂಬ ಕಷ್ಟಜೀವಿಗಳನೇನೆಂಬೆನಯ್ಯಾ? ಯುಗಜುಗಂಗಳು ಪ್ರಳಯವಹಲ್ಲಿ ಧರೆ ಜಲದಲ್ಲಿ ಅಡಗಿತ್ತು, ಜಲ ಅಗ್ನಿಯಲ್ಲಿ ಅಡಗಿತ್ತು, ಅಗ್ನಿ ವಾಯುವಿನಲ್ಲಿ ಅಡಗಿತ್ತು, ವಾಯು ಆಕಾಶದಲ್ಲಿ ಅಡಗಿತ್ತು, ಆಕಾಶ ಅತೀತನಲ್ಲಿ ಅಡಗಿತ್ತು, ಅತೀತ ಆದಿಯೊಳಗಡಗಿತ್ತು, ಆದಿ ಅನಾದಿಯೊಳಡಗಿತ್ತು, ಅನಾದಿ ನಿಜದೊಳಡಗಿತ್ತು. ಇಂತೀ ಅಷ್ಟತನು ಒಂದರೊಳಗೊಂದಳಿವಲ್ಲಿ, ಒಂದರೊಳಗೊಂದು ಹುಟ್ಟುವಲ್ಲಿ, ಎಂದಳಿದನೆಂದು, ಹುಟ್ಟಿದನೆಂದು ಬಲ್ಲವರುಂಟೆ? ಹುಟ್ಟಿದನಳಿದವನೆಂಬ ಶಬ್ದವ ನುಡಿಯಲಾಗದು. ಇದು ಕಾರಣ, ನಮ್ಮ ಮಹಾಘನ ಸೋಮೇಶ್ವರನು ಮಾಡಿದಡಾದವು, ಬೇಡಾ ಎಂದಡೆ ಮಾದವು.” ಶಿವನು ಅಷ್ಟತನು ಮೂರ್ತಿ ಎಂದು ಪುರಾಣಕಾರರು ಹೇಳುತ್ತಾರೆ. ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶ, ಅತೀತ, ಆದಿ ಮತ್ತು ಅನಾದಿ ಇವು ಅಷ್ಟತನುಗಳು. ಶಿವನು ಈ ಅಷ್ಟತನುಗಳಿಂದಾದ ಮೂರ್ತಿ ಎಂದು ಪುರಾಣಗಳು ಹೇಳುತ್ತವೆ, ಆದರೆ ಇಡೀ ಜಗತ್ತು ಪ್ರಳಯಕ್ಕೆ ಒಳಗಾದಾಗ ಅಷ್ಟತನುಗಳು ಅಳಿಯುತ್ತವೆ ಅಂದಮೇಲೆ ಅಷ್ಟತನುಗಳಿಗೂ ಮಿಗಿಲಾದ ಒಂದು ಶಕ್ತಿ ಚೈತನ್ಯ ಇವೆಲ್ಲಕ್ಕೂ ಕಾರಣವಾಗಿರಬೇಕಲ್ಲವೇ? ಆ ಚೈತನ್ಯವೇ ಶಿವ ಎಂದು ಅಜಗಣ್ಣ ಶರಣರು ಪ್ರತಿಪಾದಿಸಿದ್ದಾರೆ.
ಅಲ್ಲಮಪ್ರಭುದೇವರು ಶಿವನ ಕುರಿತಾಗಿ ಬಹಳ ಸೊಗಸಾದ ವಿವರಣೆಯನ್ನು ಕೊಡುತ್ತಾರೆ: “ಶಿವ, ಗುರುವೆಂದು ಬಲ್ಲಾತನೆ ಗುರು. ಶಿವ, ಲಿಂಗವೆಂದು ಬಲ್ಲಾತನೆ ಗುರು. ಶಿವ, ಜಂಗಮವೆಂದು ಬಲ್ಲಾತನೆ ಗುರು. ಶಿವ, ಪ್ರಸಾದವೆಂದು ಬಲ್ಲಾತನೆ ಗುರು. ಶಿವ, ಆಚಾರವೆಂದು ಬಲ್ಲಾತನೆ ಗುರು. ಇಂತೀ ಪಂಚವಿಧವೆ ಪಂಚಬ್ರಹ್ಮವೆಂದರಿದ ಮಹಾಮಹಿಮ ಸಂಗನಬಸವಣ್ಣನು ಎನಗೆಯೂ ಗುರು, ನಿನಗೆಯೂ ಗುರು, ಜಗವೆಲ್ಲಕ್ಕೆಯೂ ಗುರು ಕಾಣಾ ಗುಹೇಶ್ವರಾ.” ಶರಣರ ಪ್ರಕಾರ ಶಿವ ಎಂದರೆ ಅಂತರಂಗದ ಅರಿವಿನ ಪ್ರಜ್ಞೆ, ಸೃಷ್ಟಿಯ ಸ್ಥೂಲರೂಪವೂ ಶಿವ, ಸೂಕ್ಷ್ಮರೂಪವೂ ಶಿವ, ಅವೆರಡರ ಅನುಭಾವವೂ ಶಿವ, ಅನುಭಾವದ ತೃಪ್ತಿ ಎಂಬ ಪ್ರಸಾದವೂ ಶಿವ, ಆಚಾರವೂ ಶಿವ.
ಶರಣರು ಅರಿತು ಅನುಭವಿಸಿದ ಶಿವ ಪುರಾಣದ ಕಲ್ಪಿತ ಶಿವನಾಗಿರದೇ ಅಕಲ್ಪಿತ ಶುದ್ಧ ತತ್ವರೂಪಾಗಿರುವುದು. ‘ಓಂ ನಮಃ ಶಿವಾಯ’ ಎಂಬ ಷಡಕ್ಷರ ಮಂತ್ರವೇ ಸಕಲ ಕ್ಲೇಶ ಪರಿಹಾರಕ ಮೂಲಮಂತ್ರ ಎಂದು ಎಚ್ಚರಿಕೆ ಕಾಯಕದ ಮುಕ್ತನಾಥಯ್ಯ ಶರಣರು ವಚನದ ಮೂಲಕ ದಾರಿದೀವಿಗೆಯನ್ನಿತ್ತಿದ್ದಾರೆ. “ದುಃಸ್ವಪ್ನವ ಕಾಣದಿರಿ, ದುರ್ವಿಕಾರದಲ್ಲಿ ಕೂಡದಿರಿ, ಮನೋವಿಕಾರದಲ್ಲಿ ಹರಿದಾಡದಿರಿ, ಪಂಚಾಕ್ಷರಿಯ ಜಪಿಸಿ, ಷಡಕ್ಷರಿಯ ಸಂಬಂಧಿಸಿಕೊಳ್ಳಿ, ಮೂಲಮಂತ್ರವನಾತ್ಮಂಗೆ ವೇಧಿಸಿಕೊಳ್ಳಿ. ಮರೆಯದಿರಿ ಗುರುವಾಜ್ಞೆಯ, ತೊರೆಯದಿರಿ ಶಿವಪೂಜೆಯ, ಅರಿದು ಮರೆಯದಿರಿ ಚರಸೇವೆಯ. ಇಂತೀ ತ್ರಿಗುಣವ ನೆರೆ ನಂಬಿ, ಶುದ್ಧಸಿದ್ಧಪ್ರಸಿದ್ಧಪ್ರಸನ್ನ ಕುರುಂಗೇಶ್ವರಲಿಂಗವ ಕೂಡಬಲ್ಲಡೆ.”
ಯೋಗದ ಸರಳ ಮಾರ್ಗವನ್ನು ಶರಣರು ಮಾರ್ಮಿಕವಾಗಿ ಅರುಹಿದ್ದಾರೆ. ದುರಾಚಾರಗಳನ್ನು ತ್ಯಜಿಸಿ, ಜೀವನದಲ್ಲಿ ಸದ್ಗುಣಗಳನ್ನು ಅಳವಡಿಸಿಕೊಳ್ಳಿ, ‘ನಮಃ ಶಿವಾಯ’ ಎಂಬ ಪಂಚಾಕ್ಷರಿ ಮಂತ್ರವನ್ನು ಜಪಿಸಿ, ಓಂನಮಃಶಿವಾಯ ಎಂಬ ಷಡಕ್ಷರಿ ಮಂತ್ರವನ್ನು ಪ್ರಾಣಕ್ಕೆ ಅಳವಡಿಸಿಕೊಳ್ಳಿ, ಸೃಷ್ಟಿಗೆ ಕಾರಣವಾದ ಓಂ ಎಂಬ ಮೂಲ ಪ್ರಣವವನ್ನು ಆತ್ಮಂಗೆ ವೇಧಿಸಿಕೊಂಡು ನಿತ್ಯಮುಕ್ತರಾಗಿ ಎಂದು ಸರಳವಾಗಿ, ಅರ್ಥಗರ್ಭಿತವಾಗಿ ತಿಳಿಸಿದ್ದಾರೆ.
Comments 15
paramesappa t.N
Sep 6, 2018ಟಿವಿಯ ಚರ್ಚೆಗಳಲ್ಲಿ ಶಿವ, ಆ ಶಿವ, ಈ ಶಿವ ಎಂದು ವಾದ ವಿವಾದ ಕೇಳಿ ಬೇಸತ್ತು ಹೋಗಿದ್ದೆವೆ. ಶರಣರಲ್ಲೇ ಗೊಂದಲಗಳಿವೆ ಎಂದು ಅಂದುಕೊಂಡಿದ್ದೆ, ಆದರೂ ಕೆಲವು ವಚನಗಳು ಪುರಾಣದ ಶಿವನನ್ನೇ ವರ್ಣಿಸುತ್ತವೆ ಎನ್ನುತ್ತಾರೆ ನನ್ನ ವೀರಶೈವ ಮಿತ್ರರು. Anyway I liked your Argument Anna.
Karibasappa hanchinamani
Sep 6, 2018ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬ್ರಹ್ಮ, ವಿಷ್ಣು ಮತ್ತು ಶಿವ ಎನ್ನುವ ಉದ್ದನೆಯ ಪ್ರಬಂಧ ಬರೆದಿದ್ದು ಅದರಲ್ಲಿ ಈ ಮೂವರನ್ನೂ ಐತಿಹಾಸಿಕ ಪುರುಷರೆಂದು ಹೇಳುತ್ತಾರೆ, ಶರಣರ ಶಿವ ನಮ್ಮೊಳಗೆ ಇದ್ದಾನೆ ಎನ್ನುವ ನಿಮ್ಮ ಮಾತು really interesting
Panchaksharihv
Sep 7, 2018ಬ್ರಹ್ಮ ವಿಷ್ಣು ಮತ್ತು ಮಹೇಶ್ವರ ಇವೂ ಕೂಡ ತತ್ವಗಳೇ ಹೊರತು ವ್ಯಕ್ತಿಗಳಲ್ಲ.
Karibasappa hanchinamani
Sep 7, 2018ಬ್ರಹ್ಮ, ವಿಷ್ಣು, ರುದ್ರ ಇವರು ಐತಿಹಾಸಿಕ ಪುರುಷರೆಂದು ಅಂಬೇಡ್ಕರ್ ಮಾತ್ರವೇ ಅಲ್ಲ, ಇನ್ನೂ ಅನೇಕರು ಅಭಿಪ್ರಾಯಪಡುತ್ತಾರೆ. ವಾಸ್ತವದಲ್ಲಿ ಅದು ನಿಜವಿರಬಹುದೆಂದು ನನಗೆ ಅನಿಸುತ್ತದೆ, ಕಾಲ ಕ್ರಮೇಣ ತತ್ವಗಳೂ ಆಗಿರಬಹುದು. ನೀವೊಮ್ಮೆ ದಯವಿಟ್ಟು ಆ ಲೇಖನ ಓದಿ ಸರ್, ತಪ್ಪು ತಿಳಿಯಬೇಡಿ, ಇದು ನಮ್ಮ ಪರಂಪರೆಯ ಕುತೂಹಲದ ಭಾಗ.
Vinay Kanchikere
Sep 9, 2018ಅಲ್ಲಮಪ್ರಭುದೇವರ, “ಪಾರ್ವತಿಯು ಪರಶಿವನ ಸತಿಯೆಂಬ ಶಿವದ್ರೋಹಿಗಳು ನೀವು ಕೇಳಿರೆ. ಬೆನಕನು ಪರಶಿವನ ಮಗನೆಂಬ ಪಾತಕ ದುಃಖಿಗಳು ನೀವು ಕೇಳಿರೆ. ಸ್ವಾಮಿ ಕಾರ್ತಿಕೇಯನು ನಮ್ಮ ಹರಲಿಂಗನ ಮಗನೆಂಬ ಲಿಂಗದ್ರೋಹಿಗಳು ನೀವು ಕೇಳಿರೆ…” ವಚನವನ್ನು ನೋಡಿ ದಿಗ್ಭ್ರಮೆಯಾಯಿತು. ಶಿವ ಶಿವಾ…….. ಎಂದುಕೊಂಡೆ. ಲಿಂಗಾಯತರು ವಚನಗಳನ್ನು ಓದೋದು ಯಾವಾಗ?
madapathi.v.v
Feb 22, 2019ಹೌದು ಶರಣರೆ, ಲಿಂಗಾಯತರು ನಿಜ ಲಿಂಗಾಯತರಾದ ಬೇಕಾದರೆ ವಚನ ಸಾಹಿತ್ಯದ ಸವಿಯನ್ನು ಸವಿಸಿರದೇ ಸಾಧ್ಯವಾಗದು.
ಶರಣು ಶರಣಾರ್ಥಿ ಅಣ್ಣಾ.
mahantesh kalaburgi
Nov 7, 2022ಸಾರ್. ಲಿಂಗಾಯತರು ವಚನಗಳು ಬಿಟ್ಟು ವೇದ ಓದುವವರ ಮುಂಡಿ ಊರಿದ್ದಾರೆ
Jagannatha Patil
Sep 19, 2018ಶಂಕರ, ಶಶಿಧರ, ರುದ್ರ, ನೀಲಕಂಠ, ಇತ್ಯಾದಿ ಶಿವನ ಹೆಸರುಗಳು… ಬಹುಶಃ ಇವರೆಲ್ಲಾ ಬೇರೆ ಬೇರೆ ಗಣಾಧೀಶರಿರಬೇಕು. ಶಿವನು ಯೋಗಿ ಎನ್ನುವ ಮಾಹಿತಿ ಯಾವ ವಚನಗಳಲ್ಲಿವೇ… ಅದರ ಬಗ್ಗೆ ಲೇಖನ ಬರೆಯಿರಿ ಸರ.
Mariswamy Gowdar
Sep 19, 2018ಪರಶಿವ ತತ್ವ ಪ್ರತಿಯೊಬ್ಬ ಜೀವಿಯಲ್ಲೂ ಇದೆ ಎಂದು ಬರೆದಿ್ರುವಿರಿ, ಹಾಗಾದರೆ ಮನುಷ್ಯ ಯಾಕಿಷ್ಟು ಸ್ವಾರ್ಥಿ, ಕ್ರೂರಿಯಾಗಿದ್ದಾನೆ. ಇದೊಂದು ಅಪ್ಪಟ ಸುಳ್ಳು, ಜಗತ್ತಿನ ವಿದ್ಯಮಾನಗಳನ್ನು ಗಮನಿಸಿದರೆ ಇಂಥ ತತ್ವಸಿದ್ದಾಂತಗಳೆಲ್ಲವೂ ಸುಳ್ಳೆನಿಸುತ್ತದೆ ನನಗೆ.
sharada A.M
Sep 22, 2018ಅಕ್ಕಮಹಾದೇವಿಯ ಚನ್ನಮಲ್ಲಿಕಾರ್ಜುನಾ ಯೋಗಿ ಶಿವನಂತೆ, ಪುರಾಣದ ಶಿವನಂತೆ ಮತ್ತು ನೀವು ಹೇಳಿದ ಪರಾತ್ಪರ ಶಿವನಂತೆ ಕಾಣುತ್ತಾನೆ. ಮೂರೂ ಬಗೆಯ ವಚನಗಳೂ ಅಕ್ಕ ಬರೆದಿದ್ದಾಳೆ.
madapathi.v.v
Feb 22, 2019ಹೌದು ಅಕ್ಕಾ ಅವರೆ ಖಂಡಿತ ನಿಜ..
ಈ ಆರ್ಟಿಕಲ್ ಓದಿದನಂತರ ಅಕ್ಕಮಹಾದೇವಿ ಅವರ ವಚನದ ಅರ್ಧವೂ ಅಗಮ್ಯ ಅಗೋಚರವಾದ ವಿವರಣೆ ನೀಡುವುದು ಖಂಡಿತ ಅಕ್ಕಾ..
ಶರಣು ಶರಣಾರ್ಥಿ.
pro shivaranjini
Sep 25, 2018good article, elaboration with vachanas is interesting
madapathi.v.v
Feb 22, 2019ನನ್ನ ಆತ್ಮೀಯ ಗುರುವರ್ಯ ಪಂಚಾಕ್ಷರಿ (ಓಂ ನಮ:ಶಿವಾಯ) ಅಣ್ಣಾ ಶರಣರಿಗೆ ಶರಣು ಶರಣಾರ್ಥಿ..
ಅಣ್ಣಾ “ವಚನಗಳಲ್ಲಿ ಶಿವ” ಅದ್ಭುತವಾದ ಸಂಕಲನ ವಿವರಣೆ.. ನಾನು ಓದಿ ತನ್ಮಯನಾದೆ. ಪರಶಿವ ಎಂದರೆ ಒಂದು ತತ್ವವೆಂಬುದು ವಚನ ಸಾಹಿತ್ಯ ಓದಿದಾಗ ಸುಮ್ಮನೆ ತಿಳಿದಿತ್ತು.. ಆದರೇ, ನೀವು ಬರೆದ ಆರ್ಟಿಕಲ್ ಓದಿದನಂತರ ದಿಗ್-ಬ್ರಾಂತ ನಾದೆ.. ಇಂಥಾ ಸುಂದರವಾದ ಅಸಾಧ್ಯದ ಸಾಧ್ಯೆತೆಯ ವಿವರಣೆಯನ್ನು ನಿಮ್ಮಿಂದಸಾಧ್ಯ ಅಣ್ಣಾ..!!!
“ವಚನಗಳಲ್ಲಿ ಶಿವ” – ವಚನಗಳ ಸೇಕರಣೆ ಸ್ಪಷ್ಟ ಮತ್ತು ಖಚ್ಚಿತ..
ಶರಣು ಶರಣಾರ್ಥಿ ಅಣ್ಣಾ..
MADAPATHI.V.V
Feb 22, 2019ಅಣ್ಣಾ ಅವರೆ, ಒಂದು ಮಾತು ಹೇಳೋದು ಮರೆತುಹೋದೆ.
ಈ ವಾರ ನಾನು ನಮ್ಮೂರಲ್ಲಿ ಈ “ವಚನಗಳಲ್ಲಿ ಶಿವ” ಎಂಬ ವಿಶೇತೆಯನ್ನು ರವಿವಾರ ಪ್ರಾರ್ಥನೆ ನಂತರ ನಾನು ಎಲ್ಲರಿಗೆ *ವಚನಾನುಭಾವ ಕಾರ್ಯಕ್ರಮದಲ್ಲಿ* ಹೇಳಿ,
ಈ ಆರ್ಟಿಕಲ್ನ ಸುಮಾರು ೧೦೦ ಜಿರಾಕ್ಸ ಕಾಪಿ ಯನ್ನು ನಮ್ಮೂರ ಅನುಭವ ಮಂಟಪದಲ್ಲಿ ಹಂಚಬೇಕೆಂದು ಸಂಕಲ್ಪನೆ ಮಾಡಿದ್ದೆನೆ ಅಣ್ಣಾ…
ಶರಣು ಶರಣಾರ್ಥಿ ಅಣ್ಣಾ..
Shreekant.
May 13, 2021Sir.shivanau.nirakar.saguna.dayamadi.tilisi