ರೆಕ್ಕೆ ಬಿಚ್ಚಿ…
‘ವರ್ಚ್ಯುವಲ್ ವರ್ಲ್ಡ್’ ಎನುವುದು
ಕಂಪ್ಯೂಟರ್ ಯುಗದ ಕೂಸಲ್ಲ ಸ್ವಾಮಿ…
ಅದರದು ಅನಾದಿ ಇತಿಹಾಸ
ಸರ್ವವ್ಯಾಪಿ, ಸರ್ವಶಕ್ತ ಸ್ವರೂಪಿ
ಸೂರ್ಯನ ಸುತ್ತ ಭೂಮಿ ಸುತ್ತಿದರೆ
ಇದರ ಕಿರುಬೆರಳಲ್ಲೇ
ಜಗ ಗಿರಕಿ ಹೊಡೆಯುತಿದೆ
ಹೇಗೆನ್ನುವಿರಾ?
ಗಮನವಿಟ್ಟು ಆಲಿಸಿ-
ಹುಟ್ಟಿ ಕಣ್ಣುಬಿಡುವ ಜೀವಕೆ
ನೆಲದ ನಂಟೇ ಸಿಗದಂತೆ
ಸುತ್ತುವವು ಜೋಡಿ ಸರಗಂಟು
ಹೆಸರು- ಮನೆತನ, ಗಂಡು- ಹೆಣ್ಣು,
ಗಳಿಗೆ- ನಕ್ಷತ್ರ, ಜಾತಿ- ವಿಜಾತಿ,
ನಮ್ಮವರು- ತಮ್ಮವರು, ಸರಿ- ತಪ್ಪು,
ಗೌರವ- ಅಭಿಮಾನಗಳ ಸ್ಥಾನಮಾನ
ಗೆಲುವು- ಸೋಲುಗಳ ಜಿದ್ದಾಜಿದ್ದಿ…
ಬೆಳೆಯುತ್ತಾ ಹೋದಂತೆ ಕಾಲಿಗೂ,ಕೈಗೂ,
ಇನ್ನಷ್ಟು ಸರಪಳಿಗಳ ಸರಮಾಲೆ
ಸುಖ-ಸವಲತ್ತುಗಳ ಹಂಬಲ,
ಕೂಡಿಗುಡ್ಡೆ ಹಾಕುವ ತೆವಲು
ಹಂಚಿಕೊಳ್ಳಲೊಪ್ಪದ ಜಿಗುಟು
ಜ್ಞಾನಿ ಎನಿಸಿಕೊಳುವ ಬಯಕೆ
ನಾಮುಂದು ತಾಮುಂದು ಎನುವ
ಮದ-ಮತ್ಸರಗಳ ಬಡಿವಾರ…
ಈ ನಡುವೆ ದೈವ ಭಕ್ತಿಯ ಸೋಗು
ಅರ್ಚನೆ- ಪೂಜೆ- ಆರಾಧನೆಗಳು
ವ್ರತ- ನೇಮ- ಉಪವಾಸಗಳು
ತೀರ್ಥಕ್ಷೇತ್ರ ಪುಣ್ಯಸ್ನಾನಗಳು
ಜಪ- ತಪ, ಯೋಗ- ಧ್ಯಾನಗಳು
ಕುಂಡಲಿನಿ ಜಾಗೃತಿಯ ಸರ್ಕಸ್ಸುಗಳು
ಚಕ್ರಗಳು, ಮಂಡಲಗಳು
ಶಾಸ್ತ್ರ ಪುರಾಣಗಳ ತಾಕೀತುಗಳು
ಧರ್ಮ– ಸಂಸ್ಕೃತಿಯ ಹೇರಿಕೆಗಳು
ಸಂಪ್ರದಾಯದ ಕಟ್ಟುಪಾಡುಗಳು…
ಸತ್ತವರಿಂದ, ಹೆತ್ತವರಿಂದ,
ನೆಂಟರಿಂದ, ನೆರೆಯವರಿಂದ,
ಶಾಲೆಯಿಂದ, ಓಣಿಗಳಿಂದ,
ಊರವರಿಂದ, ನಾಡವರಿಂದ,
ನೆನಪುಗಳಿಂದ, ನಂಬಿಕೆಗಳಿಂದ,
ತಲೆ ತಲೆಗೂ ಸಾಗಿಬಂದ
ಪಿತ್ರಾರ್ಜಿತ ಬಳುವಳಿಗಳಿವು…
ಈ ಅನಂತ ಆವರಣಗಳ
ಬಂಧವೇ ‘ವರ್ಚ್ಯುವಲ್ ರಿಯಾಲಿಟಿ’
ಇರುವಂತೇ ತೋರುತಿರುವ
ನಿಜವೆಂದೇ ನಂಬಿಸಿರುವ
ನಾವಪ್ಪಿ ಜೀವಿಸುವ ಮನೋಲೋಕ,
ಕಣ್ಣಿಗೆ ಕಾಣದ, ಮುಟ್ಟಲು ಸಿಗದ
‘ವರ್ಚ್ಯುವಲ್ ರಿಯಾಲಿಟಿ’
ವಸ್ತುಜಗತ್ತಿನ ನೆಲೆಯರಿಯದ
ಈ ಭ್ರಮೆಗಳಿಗೆಲ್ಲ ಜೀತಕಿದ್ದು
ದಿನರಾತ್ರಿ ಸೆಣಸಾಡಿ, ತೆವಳಿದ್ದೇ ಬಂತು
ರೆಕ್ಕೆಗಳು ಇರುವುದೇ ಮರೆತು ಹೋಗಿತ್ತು
ಜೊತೆಯಲೇ ಪ್ರಾಣಾಧಾರವಾಗಿದ್ದ
‘ರಿಯಲ್ ವರ್ಲ್ಡ್’ ಕಾಣದಾಗಿತ್ತು…
ಸಂತರು ತೋರಿದ, ಶರಣರು ಬದುಕಿದ
ಮಹಂತರು ಕಂಡ ನಿಜದ ನೆಲೆಯಲ್ಲಿ
ನಿರೀಕ್ಷೆಗಳಿಲ್ಲ, ನೋವುಗಳಿಲ್ಲ
ಬೇಕು-ಬೇಡಗಳ ಸುಳಿಗಳಿಲ್ಲ
ಸಂದೇಹಗಳಿಲ್ಲ, ಸಂಕುಚಿತತೆಯಿಲ್ಲ
ಪೂರ್ವಾಗ್ರಹಗಳಿಲ್ಲ, ಪರನಿಂದೆಗಳಿಲ್ಲ
ನಾನೀನೆಂಬ ಬೇಧಗಳಿಲ್ಲ
ನಿನ್ನೆಯ ಹಳಹಳಿಕೆಗಳಿಲ್ಲ
ನಾಳೆಯ ಹಳವಂಡಗಳಿಲ್ಲ
ಅದು ನಿರಾಳದಾಗಸದ ಪ್ರಶಾಂತತಾಣ
ಹಾರಲರಿಯದ ನಮ್ಮ ರೆಕ್ಕೆಗಳಿಗೆ
ಬಲವೂ ಬೇಕು, ಛಲವೂ ಬೇಕು
ಸುಳ್ಳಿನಾವರಣಗಳಿಂದ
ಬಿಡಿಸಿಕೊಳುವ ಶ್ರದ್ಧೆ ಬೇಕು
‘ನಿನ್ನ ಸ್ವಾತಂತ್ರ್ಯದಿ ನೀನಿರು ಮಗು’
ಎನುವ ಗುರು ವಾಕ್ಯದ ಸೂಚನೆಯಲಿ
ಬಿಡುಗಡೆಯ ದಾರಿ ಕಾಣಬೇಕು
ರೆಕ್ಕೆಗಳ ಬಿಚ್ಚಿ ಚಿಮ್ಮಬೇಕು.
Comments 2
ಶ್ರದ್ಧಾನಂದ ಸ್ವಾಮೀಜಿ, ವಿಜಯಪುರ
May 9, 2024ರೆಕ್ಕೆ ಬಿಚ್ಚಿ ಕವನ ಓದುವುದರಲ್ಲಿ ಅನಂತ ಆಗಸದಿ ಹೊಸ ಬೆಳಕಿನ ಅರಿವಿನ ರವಿಯ ಕಂಡಂತೆ ಆಯಿತು.
Padmalaya
May 16, 2024ಭಾಷೆ ಇನ್ನೂ ಸ್ವಲ್ಪ ಬದಲಾದರೆ ಚೆಂದ.ನಿರೂಪಣೆ ಮಾಡುವಾಗ ಎಚ್ಚರವಾಗಿರಬೇಕಕಮ್ಮ