ಮನಸ್ಸು
ಏನ ಹೇಳಲಿ ಗುರುವೇ ಮನಸಿನ ಬಗೆಗೆ?
ಹಿಂದಕ್ಕೆ ಜಾರುತ್ತಾ
ಮುಂದಕ್ಕೆ ತುಯ್ಯುತ್ತಾ
ಜೋಕಾಲಿಯಾಟದಲಿ ಮೈಮರೆಸಿಬಿಟ್ಟಿದೆ
ಇದಾವ ಮರದ ಕೊಂಬೆಗೆ
ನೇತು ಹಾಕಿಕೊಂಡಿದೆ…
ಎಂದು ಕಟ್ಟಿದೆನೋ
ಅದ್ಹೇಗೆ ಏರಿ ಕೊಂಡೆನೋ
ಹಿಗ್ಗುತ್ತಾ ಹತ್ತಿ ಕೂತವಳನು
ತೂಗಿದ ಮೊದಲ ಕೈ ಅದಾವುದೋ?
ಪರಂಪರೆಯ ಉದ್ದಕ್ಕೂ
ಮೂಲ ಹುಡುಕುವುದೆಲ್ಲಿ…
ಜೀಕುವ ಆಟಕ್ಕೆ ಜೋತು ಬಿದ್ದಾಗಿದೆ
ಇಷ್ಟಾನಿಷ್ಟಗಳ ಖಯಾಲಿ
ಗಾಳಿಯಲಿ ತೇಲುವ ಸುಖ
ನೆಲಕೆ ಕಾಲಿಡಲೊಲ್ಲದ ಮರೆವು
ತೂಗಿಸಿದ ಹಗ್ಗ ಬಂಧನದ ಪಾಶವಾದದ್ದು
ತಿಳಿಯಲೇ ಇಲ್ಲ ಈ ಜೀಕಾಟದಲ್ಲಿ!
ಅತ್ತಿಂದಿತ್ತ ಇತ್ತಿಂದತ್ತ
ಕಾಲ ಸವೆಸುವ ಆಟ
ಹುಟ್ಟುತ್ತಾ- ಹೊಂದುತ್ತಾ,
ಜೀವವನೊತ್ತೆ ಇಟ್ಟು
ಜೀಕಿಕೊಳ್ಳುತ್ತಲೇ ಇದ್ದೇನೆ
ಹಿಂದಕ್ಕೆ ಮುಂದಕ್ಕೆ ಮತ್ತೆ ಮತ್ತೆ…
Comments 1
Ganesh A.P
Sep 13, 2020ಕವನದ ಜೋಲಿಯಲ್ಲಿ ನಾನೂ ತೂಗುತ್ತಿದ್ದೇನೆ. ಅರ್ಥಗರ್ಭಿತ ಕವನ.