ಭವ ರಾಟಾಳ
ಇಗೋ ಹರಾಜಾಗುತ್ತಿದೆ ಈ ದೇಹ
ಪ್ರತಿ ದಿನ, ಪ್ರತಿ ಗಳಿಗೆ
ಕಾಣದ ಖದೀಮನ ಕೈಗೆ ಸಿಕ್ಕು
ತನ್ನದಲ್ಲದ ಕಾಯವನು
ಹರಾಜು ಹಾಕುತ್ತಲೇ ಇರುತ್ತಾನೆ
ಕ್ಷಣಾರ್ಧದ ಬಿಡುವೂ ಕೊಡದೆ
ಕೊಳ್ಳುವವರಿಗಿಲ್ಲಿ ಬರವಿಲ್ಲ
ಬಿಡ್ ಮಾಡುತ್ತಲೇ ಇರುತ್ತವೆ
ಲಕ್ಷೋಪಲಕ್ಷ ಭಾವಗಳು
ಕೊನೆಯಿಲ್ಲದ ಬೇಡಿಕೆಗಳು
ತಬ್ಬಿಕೊಂಡು ಅಮರಿಕೊಳುವ
ನಂಬುಗೆಗಳು, ಚಿತ್ರವಿಚಿತ್ರ ಸೆಳೆತಗಳು
ಅನಂತ ಮುಖವಾಡಗಳ ಹೊತ್ತ
ಅಹಮಿನ ಅವತಾರಗಳು
ನಾ ಮುಂದು ತಾ ಮುಂದು ಎನ್ನುವ
ನಿರಂತರ ಪೈಪೋಟಿ…
ಒಡಲ ಸೇರುತ್ತಲೇ ಜೀವ ಪಡೆವ
ಈ ವಿದೇಹಗಳಿಗೆಲ್ಲಾ
ಯಾವ ಕರಾರುಗಳಿಲ್ಲದೆ
ಜೀತ ಮಾಡುತ್ತಿರುವ
ಕಾಯವು ಅಮಾಯಕವೋ?
ಮೋಸವನರಿಯದ ಮೊದ್ದೋ?
ತೀರದಾಸೆಯ ದಾಹಿಯೋ…
ವಿಷಯಂಗಳ ಕೈ ಬದಲಾದ
ಗಳಿಗೆ-ಗಳಿಗೆಗೂ ಇದಕೆ
ಹುಟ್ಟು-ಸಾವಿನ ಚಕ್ರ
ಮತ್ತದೇ ಭವದ ರಾಟಾಳ
ತಾನಾರೆನ್ನುವ ಪ್ರಜ್ಞೆ
ಮಾಸಿ ಈ ಅಂಗಕ್ಕೆ
ಯುಗಯುಗಗಳೇ ಕಳೆದಿವೆ…
ಗುರು ಅರಿವು ಸಿಕ್ಕಾಗಲೇ
ಹರಾಜಿನ ಸದ್ದು ಅಡಗೀತು
ಸುಖ-ದುಃಖಗಳ ಬವಣೆ ತಪ್ಪೀತು
ಜನನ-ಮರಣಗಳ ಆಟ ನಿಂದೀತು
ಕಾಯಕ್ಕೆ ಬಿಡುಗಡೆ ದಕ್ಕೀತು.
Comments 3
Ramesh. M.Y
Sep 18, 2022ರಾಟಾಳ ಎಂದರೆ ಚಕ್ರ ಅಥವಾ ಚರಕ ಎಂದು ಗೊತ್ತಾಯಿತು. ಕವನ ಚೆನ್ನಾಗಿದೆ.
Gangadhar Mudaliar
Sep 18, 2022ಭವದ ರಾಟಾಳ ಓದಿದೆ, ‘ಹರಾಜಿನ ಸದ್ದನ್ನು’ ನೀವೇ ಅಡಗಿಸಬೇಕು.
ಪೆರೂರು ಜಾರು, ಉಡುಪಿ
Sep 18, 2022ಹರಾಜಾದ ಗುರುಗಳು ಭವದ ರಾಟೆಯ ಭಾಗ
ಹರಾಜು ತಡೆಯಲು ಇನ್ನೆಲ್ಲಿದೆ ಜಾಗ
ತನ್ನರಿವು ತನ ತಲೆಗೆ ತನ್ನ ಕಯ್ಯೊಂದೆ ಈಗ