ಬೆಳಕ ಬೆಂಬತ್ತಿ…
ಸಾಲು ಸಾಲು ಹಣತೆಗಳ ಹಚ್ಚಿ
ನೋಡುತ್ತಲೇ ಇದೆ
ಆಸೆಯಿಂದ ಈ ಮನ
ಬೆಳಕ ಗೋರಲು… ಒಳಗ ಬೆಳಗಲು…
ಕತ್ತಲೆಯ ಭಯವೋ, ಬೆಳಕಿನ ಮೋಹವೋ..
ಒಳಗೆ ಇಳಿದಷ್ಟೂ, ಹೆಜ್ಜೆ ಇಟ್ಟಷ್ಟೂ
ಅನಾದಿ ಕಾಲದ ಅಜ್ಞಾನದ ಕಮಟು
ಆ ದೂಳು, ಆ ಗದ್ದಲ
ಸಾವಿರ ಸಾವಿರ ಇರುಳು
ಬಸಿದು ಕುಳಿತಂತೆ ನನ್ನೊಳಗೆ
ದಟ್ಟಗತ್ತಲು, ಕಾರ್ಗತ್ತಲು, ಕಡುಗತ್ತಲು
ಭವದ ಈ ಗವಗತ್ತಲನಟ್ಟಲು
ಸಾವಿರ ಸೂರ್ಯರೂ ಸಾಲಲಿಕ್ಕಿಲ್ಲ!
ಅಷ್ಟಿಷ್ಟು ಬತ್ತಿಗೆ, ಇಷ್ಟಿಷ್ಟು ಎಣ್ಣೆ
ಉರಿಯು ದಾಟುತಲಿರುವ
ಮರ್ಮವ ಕಾಣಬಲ್ಲೆಯಾ?
ಕಾಯ- ಜೀವದ ಬೆಸುಗೆಯಲಿ
ಅನೂಹ್ಯ ಪ್ರಕೃತಿಯೊಳಿರುವ
ಜೀವಚೈತನ್ಯವ ನೋಡಬಲ್ಲೆಯಾ?
-ಗುರು ಹಚ್ಚಿದ ಕಿಡಿಯಲ್ಲಿ
ಕಪ್ಪಾದ ಕಣ್ಣಾಲೆಯೊಳಗೊಂದು ಮಿಂಚು!
ಕಂದೀಲು ಹಿಡಿದು
ಬೆಳಕ ಹುಡುಕಲು ಹೊರಟ
ಮನ ನಾಚಿತ್ತು… ನಾಚಿತ್ತು…