ಬಯಲಾದ ಬಸವಯೋಗಿಗಳು
“ಅವರು ಗುಣಮುಖರಾಗೋದು ಯಾವಾಗ?”
ಮಾತಾಜಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರನ್ನು ಕೇಳುವಾಗ ಮನಸ್ಸಿನ ಮೂಲೆಯಲ್ಲೆಲ್ಲೋ ಒಂದು ಸಣ್ಣ ಭರವಸೆ. ನನ್ನ ನೇರ ಪ್ರಶ್ನೆಗೆ ನಿಖರ ಉತ್ತರ ಸಿಗಲಿಲ್ಲ. ವೈದ್ಯರು ಹೇಳಿದ ಮಾತುಗಳು ಗಾಳಿಯಲ್ಲಿ ಕೈಯಾಡಿಸಿ ಇಂದ್ರಜಾಲ ತೋರಿಸುವಂತಿದ್ದವು. ಮಣಿಪಾಲ್ ಆಸ್ಪತ್ರೆಯ ಐಸಿಯೂನಲ್ಲಿದ್ದ ಮಾತಾಜಿಯ ಗಂಭೀರ ಸ್ಥಿತಿ ಕಣ್ಮುಂದೆ ಬಂದಂತೆಲ್ಲ ದುಗುಡ ಹೆಚ್ಚುತ್ತಿತ್ತು. ಕಸಿವಿಸಿ, ಕಳವಳ, ಹೇಳಲಾಗದ ತಳಮಳ. ಎಂಥದೋ ವೇದನೆ. ಕಣ್ಣಲ್ಲಿ ನೀರು ಹೆಪ್ಪುಗಟ್ಟುತ್ತಿತ್ತು…
ಆ ದಿನ ಮಾರ್ಚ್ 14.
ಆಗಾಗ ಕೈಕೊಡುತ್ತಿದ್ದ ಆರೋಗ್ಯವನ್ನು ಲೆಕ್ಕಿಸದೆ ಸದಾ ಕ್ರಿಯಾಶೀಲರಾಗಿರುತ್ತಿದ್ದ ಮಾತಾಜಿ ಅವತ್ತು ತಮ್ಮ ಮಾತು ಮುಗಿಯಿತೆಂದು ಅಧಿಕೃತವಾಗಿ ಘೋಷಿಸಿ ಹೊರಟುಬಿಟ್ಟರು. ಎಂತೆಂಥ ಭೀಕರ ಅಪಘಾತಗಳನ್ನು ದಾಟಿ ಬಂದಿದ್ದ ಅವರು, ತಮ್ಮ ಶರೀರದೊಳಗೆ ನುಗ್ಗಿದ ಹತ್ತಾರು ಕಾಯಿಲೆಗಳೊಡನೆ ಸೆಣಸಾಡುತ್ತಲೇ ನಿರ್ಗಮಿಸಿದ್ದರು. ಆ ವಿದ್ವತ್ತು, ಆ ಗಟ್ಟಿತನ, ಆ ಹಠ, ಆ ಧೈರ್ಯ, ಆ ಉತ್ಸಾಹ… ಎಲ್ಲವೂ ಬಸಿದು ಹೋದಂತೆ… ಹೈರಾಣು ಮಾಡಿದ ದೇಹವನ್ನು ದಾಟಿ ಮುನ್ನಡೆದಿದ್ದರು. ಅಪ್ಪಾಜಿ ಬೆಳೆಸಿದ ಆಲದ ಮರವೊಂದು ಇದ್ದಕ್ಕಿದ್ದಂತೆ ನೆಲಕ್ಕೊರಗಿ ಮೌನವಾದಂತೆ, ಎಲ್ಲ ಖಾಲಿ, ಖಾಲಿ ಎನಿಸಿತ್ತು. “ಯೋಗ-ವಾಕ್ ನಿತ್ಯವೂ ಮಾಡಬೇಕು ಎಂಬುದನ್ನು ಬಿಟ್ಟು ಮಾತಾಜಿ ಬಹುತೇಕ ನನ್ನ ಎಲ್ಲ ಮಾತುಗಳನ್ನು ಪಾಲಿಸಿದರು” ಎಂದು ಪದೇ ಪದೇ ಹೇಳುತ್ತಿದ್ದ ಅಪ್ಪಾಜಿ ಮಾತು ತಲೆಯಲ್ಲಿ ಸುಳಿದಾಡುತ್ತಿತ್ತು…
ನನ್ನಂಥ ಅನೇಕಾನೇಕರ ಮನಸ್ಸುಗಳಲ್ಲಿ ಬಸವಾದಿ ಶರಣರನ್ನು ಪರಿಚಯಿಸಿದವರು ಪೂಜ್ಯರಾದ ಅಪ್ಪಾಜಿ ಮತ್ತು ಮಾತಾಜಿ. ಕರ್ನಾಟಕದ ಮೂಲೆ ಮೂಲೆಗೂ ಸಂಚರಿಸಿ ಪ್ರವಚನಗಳ ಮೂಲಕ ಬಸವಣ್ಣನವರನ್ನು ಮುಟ್ಟಿಸಿದ ಅವರ ಕಾರ್ಯತತ್ಪರತೆಗೆ ಅವರೇ ಸಾಟಿ. ಅವರು ಕಾವಿ ಹಾಕಿದ ಸಂದರ್ಭ ಹೇಗಿತ್ತು, ಅವರು ಬಸವಣ್ಣ ವಿಶ್ವಗುರು ಎಂದು ಹೇಳಿದ ಕಾಲಮಾನ ಯಾವುದಿತ್ತು, ಲಿಂಗಾಯತ ವಿಶ್ವಧರ್ಮ ಎಂದು ಕಂಡುಕೊಂಡ ದಿನಗಳು ಹೇಗಿದ್ದವು… ಎಲ್ಲ ನೆನಪಾದರೆ ಮೈ ಜುಂ ಎನ್ನುತ್ತದೆ. ಸಮಾಜದಲ್ಲಿ ಬೇರು ಬಿಟ್ಟ ಪಟ್ಟಭದ್ರ ಹಿತಾಸಕ್ತಿಗಳನ್ನು ಅವರು ನೇರವಾಗಿಯೇ ಕೆಣಕಿದ್ದರು, ಸಂಪ್ರದಾಯವಾದಿಗಳ ಬೂಟಾಟಿಕೆಯನ್ನು ಮುಲಾಜಿಲ್ಲದೆ ಬಯಲಿಗೆಳೆದಿದ್ದರು. ಅದಕ್ಕಾಗಿ ಅವರು ಎದುರಿಸಿದ ಕಿರುಕುಳಗಳು ಒಂದೆರಡಲ್ಲ. ಪ್ರಾಣಬೆದರಿಕೆಗಳಿಂದ ಹಿಡಿದು ಚಾರಿತ್ರ್ಯ ಜಾಲಾಡುವ ಎಲ್ಲ ಬಗೆಯ ವಿರೋಧಗಳನ್ನೂ ಅವರು ಎದುರಿಸಬೇಕಾಯಿತು. ಯಾವುದೇ ವಿವಾದಗಳಿಗೂ ಅವರು ಸೊಪ್ಪು ಹಾಕಲಿಲ್ಲ. ಅಪಪ್ರಚಾರಗಳಿಗೆ ಹಿಮ್ಮೆಟ್ಟಲಿಲ್ಲ. ಕಷ್ಟಗಳಿಗೆ ಕುಗ್ಗಲಿಲ್ಲ. ಅಂಥ ಪ್ರಚಂಡ ಧೈರ್ಯ, ಗಟ್ಟಿತನವನ್ನು ನಾನು ಇದುವರೆಗೆ ಯಾರಲ್ಲಿಯೂ ಕಾಣಲಿಲ್ಲ. ಎದೆಯಲ್ಲಿದ್ದ ಅವರೀರ್ವರ ನೆನಪುಗಳು ಸುರುಳಿ ಸುರುಳಿಯಾಗಿ ಬಿಚ್ಚಿಕೊಳ್ಳತೊಡಗಿದವು…
ವ್ಯಕ್ತಿಯೊಬ್ಬನ ಬೆಳವಣಿಗೆಯಲ್ಲಿ ಹಲವರ ಪ್ರಭಾವ ಬೇರೆ ಬೇರೆ ಹಂತದಲ್ಲಿ ಆಗುತ್ತಿರುತ್ತದೆ. ಎಳೆಯ ವಯಸ್ಸಿನಲ್ಲೇ ಹಾಗೆ ನನ್ನ ಮೇಲೆ ವಿಶೇಷವಾಗಿ ಪ್ರಭಾವ ಬೀರಿದವರು ಮಾತಾಜಿ. ಮೊದಲ ಸಲ ಡಾವಣಗೆರೆಯಲ್ಲಿ ಮಾತಾಜಿ ಪ್ರವಚನ ಕೇಳಿದಾಗ ನಾನಿನ್ನೂ ಹೈಸ್ಕೂಲ್ ಮೆಟ್ಟಿಲನ್ನೂ ಏರಿರಲಿಲ್ಲ. ಆಗಲೇ ಹೆಪ್ಪಿಟ್ಟಹಾಲು, ತರಂಗಿಣಿ ನನ್ನ ಕೈಯಲ್ಲಿದ್ದವು. ಮೊದಲಿನಿಂದ ಅಜ್ಜಿಯ ಜೊತೆ ಪುರಾಣ-ಪಾರಾಯಣಗಳನ್ನು ಕೇಳುತ್ತಾ ಬೆಳೆದಿದ್ದ ನನಗೆ ಮಾತಾಜಿಯ ಪ್ರವಚನ ಅಗಸಿ ಬಾಗಿಲು ತೆಗೆದಂತೆ ಭಾಸವಾಗಿತ್ತು. ಬಸವಣ್ಣ, ಅಕ್ಕಮಹಾದೇವಿ, ಶರಣರು, ಧರ್ಮ, ದೇವರು… ಹೀಗೆ ಹಲವಾರು ವಿಚಾರಗಳು ನಮ್ಮ ಎಳೆಮನಸ್ಸನ್ನು ಮುತ್ತಿಗೆ ಹಾಕಿದವು. ಆ ಮೂಲಕ ಅವರು ನಮ್ಮ ವಿಚಾರಗಳನ್ನೂ, ಜೀವನವನ್ನೂ ಹೊಕ್ಕಿದ್ದರು. ಅಲ್ಲಿಂದ ಪ್ರತಿ ವರ್ಷದ ನಮ್ಮ(ತಂಗಿ ಮತ್ತು ನಾನು) ನೆಚ್ಚಿನ ಬೇಸಿಗೆ ರಜೆಯ ತಾಣ ಧಾರವಾಡ ಅಥವಾ ಬೆಂಗಳೂರು ಆಶ್ರಮವಾಗಿತ್ತು. ಇಲ್ಲವೇ ಅಪ್ಪಾಜಿ ಎಲ್ಲಿ ಪ್ರವಚನ ಹೇಳುತ್ತಿದ್ದರೋ ಅಲ್ಲಿಗೆ ಹೋಗುತ್ತಿದ್ದೆವು. ಎಷ್ಟು ಸುಂದರವಾಗಿದ್ದವು ಆ ದಿನಗಳು…
ಕಳೆದ ಶತಮಾನದ 60ರ ದಶಕದಲ್ಲಿ ಸಂಪ್ರದಾಯಸ್ಥ ಕುಟುಂಬದ ಹೆಣ್ಣುಮಗಳೊಬ್ಬಳು ಸನ್ಯಾಸ ಜೀವನಕ್ಕಾಗಿ ಮನೆ ತೊರೆದು ಬರುವುದು ಸಾಮಾನ್ಯ ಸಂಗತಿಯಾಗಿರಲಿಲ್ಲ. ಹಾಗೆ ಎಲ್ಲವನ್ನೂ ತೊರೆದು ಬಂದ ಮಾತಾಜಿಯನ್ನು ಅಂಗೈಯಲ್ಲಿಟ್ಟು ಪ್ರೀತಿ-ವಾತ್ಸಲ್ಯ ಕೊಟ್ಟು ಬೆಳೆಸಿದರು ಲಿಂಗಾನಂದ ಅಪ್ಪಾಜಿ. ದಿಟ್ಟರಾಗಿದ್ದರೂ ಆರಂಭದಲ್ಲಿ ಮಾತಾಜಿ ತೀರಾ ಸಂಕೋಚ ಸ್ವಭಾವದವರಾಗಿದ್ದರಂತೆ. ಆದರೆ ಗ್ರಹಣ ಶಕ್ತಿ ತೀಕ್ಷ್ಣವಾಗಿತ್ತು. ಸ್ನಾತಕೋತ್ತರ ಪದವಿಯಲ್ಲಿ ಓದುತ್ತಿರುವಾಗಲೇ ಬಸವ ತತ್ವ ದರ್ಶನ ಎನ್ನುವ 800 ಪುಟಗಳ ಗ್ರಂಥ ರಚಿಸಿದ್ದು ಅವರ ತೀಕ್ಷ್ಣ ಬುದ್ಧಿಮತ್ತೆಗೆ ಸಾಕ್ಷಿ. ಲಿಂಗಾಯತ ಧರ್ಮದ ತಿಳಿವಳಿಕೆಯನ್ನು, ಬಸವ ಧರ್ಮದ ಕೆಚ್ಚನ್ನು ಅಪ್ಪಾಜಿ ಅವರಲ್ಲಿ ಹಂತಹಂತವಾಗಿ ತುಂಬಿದರು. ಕನಸು ಬಿತ್ತಿ ನೀರೆರೆದರು, ಅವರ ಎಲ್ಲ ಹೆಜ್ಜೆಗಳಲ್ಲಿ ಬೆಂಗಾವಲಾಗಿ ನಿಂತರು. ಬಸವ ಕಲ್ಯಾಣದಲ್ಲಿ ನಡೆದ ಅಷ್ಟಶತಮಾನೋತ್ಸವ ಸಮಾರಂಭದಲ್ಲಿ ಸ್ತ್ರೀ ಸಮಾನತೆಯನ್ನು ಎತ್ತಿ ಹಿಡಿಯಲು ‘ಮಹಿಳಾ ಜಗದ್ಗುರು ಪೀಠ’ ಸ್ಥಾಪನೆ ಮಾಡುವ ಬಗ್ಗೆ ಮಾತಾಜಿ ಮಾತನಾಡಿದಾಗ ಅದನ್ನು ಸಾಧ್ಯವಾಗಿಸಿದರು. ಗುರುವಿನ ವಿಷಯದಲ್ಲಿ ಮಾತಾಜಿ ಮಹಾ ಭಾಗ್ಯಶಾಲಿಯಾಗಿದ್ದರು.
ಮಾತಾಜಿ ಬುದ್ಧಿವಂತರು. ಉತ್ತಮ ವಾಗ್ಮಿಗಳು. ನೇರ ಮಾತು. ನಿಷ್ಠುರ ನಡೆ. ನಂಬಿದ ವಿಚಾರಗಳಲ್ಲಿ ಬದ್ಧತೆ. ಅವರ ನೆನಪಿನ ಶಕ್ತಿ ಅಗಾಧವಾಗಿತ್ತು. ಸಂಸ್ಥೆಗಳನ್ನು ಕಟ್ಟುವುದು ಸುಲಭವಲ್ಲ. ಧಾರವಾಡ, ಬೆಂಗಳೂರು, ಕುಂಬಳಗೋಡು, ಕೂಡಲಸಂಗಮ, ಬಸವಕಲ್ಯಾಣ, ಈಚಲಕರಂಜಿ, ದೆಹಲಿ… ಹೀಗೆ ಎಲ್ಲೆಡೆ ಸಂಸ್ಥೆಗಳನ್ನು ವಿಸ್ತರಿಸಿದ ಅವರ ಕೌಶಲ್ಯ, ವ್ಯವಹಾರ ಚತುರತೆ ಅಗಾಧವಾಗಿತ್ತು. ಸಂಸ್ಥೆಯ ನೂರೆಂಟು ವ್ಯವಹಾರಗಳ ಜೊತೆಗೆ ಕಾರ್ಯಕ್ರಮಗಳು, ಮಾಸಪತ್ರಿಕೆ, ಪುಸ್ತಕಗಳ ಪ್ರಕಟಣೆ… ಹೀಗೆ ಕೈಯಲ್ಲಿ ಬಿಡುವಿಲ್ಲದಷ್ಟು ಕೆಲಸಗಳು. ಇಕ್ಕಟ್ಟುಗಳನ್ನು ಎದುರಿಸುವಲ್ಲಿ ಸಿದ್ಧಹಸ್ತರು. ಮಾತಿನಲ್ಲಿ ಖಾಚಿತ್ಯ, ಬರವಣಿಗೆಯಲ್ಲಿ ಲಾಲಿತ್ಯ, ಓದಲು-ಬರೆಯಲು ಕುಳಿತರೆ ಸಂಪೂರ್ಣ ತನ್ಮಯತೆ. War and Peace ಮಾದರಿಯಲ್ಲಿ ಅವರೊಂದು ಜಾಗತಿಕ ಮಟ್ಟದ ಕಾದಂಬರಿ ಬರೆಯಬೇಕೆಂಬುದು ನಮ್ಮ ಒತ್ತಾಯವಾಗಿತ್ತು. ಅವರ ಮಂಚದ ಮೇಲೆ, ಬರೆಯುವ ಡೆಸ್ಕಿನ ಮೇಲೆ ಹಾಳೆಗಳು, ಪುಸ್ತಕಗಳು, ರಸೀದಿ ಚೀಟಿಗಳು ರಾಶಿ ರಾಶಿ ಗುಪ್ಪೆಯಾಗಿ ಬಿದ್ದಿರುತ್ತಿದ್ದವು. ಅವುಗಳನ್ನು ಜೋಡಿಸುವುದು ಅಸಾಧ್ಯವೆನಿಸಿ, ಆ ಬಗ್ಗೆ ನಾನು ಬೇಸರಿಸಿಕೊಂಡಾಗೆಲ್ಲ “there is an order in disorder” ಎನ್ನುತ್ತಾ ನಗುತ್ತಿದ್ದರು. ಗೊಂದಲದ ಗೂಡಾಗಿದ್ದ ಲಿಂಗಾಯತ ಸಮಾಜ ಅವರಿಗೆ ಹಾಗೇ ಕಂಡಿತ್ತೇನೋ!!
ಆ ದಿನ ಜೂನ್ 30, 1995.
ಅಪ್ಪಾಜಿ ಲಿಂಗೈಕ್ಯರಾದ ಭಯಾನಕ ಸಮಾಚಾರ ನನ್ನ ಕಿವಿಗೆ ಬಿದ್ದಾಗ ನಾನು ಸಿಟಿ ಬಸ್ಸಿನಲ್ಲಿದ್ದೆ. ಮೋಡಗಳೇ ಇಲ್ಲದ ಆಕಾಶದಲ್ಲಿ ಎಲ್ಲಿಂದಲೋ ಬಂದು ಹೊಡೆಯುವ ಬರಸಿಡಿಲಿನಂತಿತ್ತು ಆ ಸುದ್ದಿ. ಎಂದಿನಂತೆ ಆ ದಿನವೂ ಹಾಸ್ಟೆಲಿನಿಂದ ಜಸ್ಟಿಸ್ ಗೆ (ಐಎಎಸ್ ಅಧ್ಯಯನ ಕೇಂದ್ರ) ಹೊರಟಿದ್ದೆ. ತಲೆ ಗಕ್ಕನೆ ನಿಂತಂತಾಗಿ ಕೈಕಾಲು ಸ್ವಾಧೀನ ತಪ್ಪುತ್ತಿತ್ತು… ಹೃದಯ ಕಿತ್ತು ಬಂದಂತೆ, ಪರದೇಶಿಯಾದಂತೆ ಮನಸ್ಸು ತತ್ತರಿಸಿಹೋಗಿತ್ತು… ಆ ಕ್ರೂರ ಸುದ್ದಿಯನ್ನು ಒಪ್ಪಿಕೊಳ್ಳಲು ಮನಸ್ಸು ಸುತಾರಾಂ ತಯಾರಿರಲಿಲ್ಲ…. ಅದೊಂದು ಭಯಾನಕ ದಿನ. ಏಕೆಂದರೆ ಆ ದಿನ, ಅಂದರೆ ಅವರು ಲಿಂಗೈಕ್ಯರಾದ ದಿನವೇ ನನಗೆ ತಮ್ಮನ್ನು ಬಂದು ಕಾಣಲು ವಾರದ ಹಿಂದಷ್ಟೇ ಅಪ್ಪಾಜಿ ಆದೇಶಿಸಿದ್ದರು.
ಬೆಂಗಳೂರಿನ ಜಯನಗರದಲ್ಲಿರುವ ಜಸ್ಟಿಸ್ ಸಂಸ್ಥೆಯಲ್ಲಿ ನಾನು ಐಎಎಸ್ ಗೆ ತಯಾರಿ ನಡೆಸುತ್ತಿರುವಾಗ ಒಂದು ದಿನ ಲಿಂಗಾನಂದ ಅಪ್ಪಾಜಿಯನ್ನು ನೋಡಬೇಕೆನಿಸಿತು. ಅವತ್ತು ಜೂನ್ 20, ಅವರೆಲ್ಲಿದ್ದಾರೆಂದು ವಿಚಾರಿಸಿದವಳೇ ದಿಢೀರೆಂದು ಹೊರಟುಬಿಟ್ಟೆ. ಆಗ ಹಿರಿಯೂರಿನಲ್ಲಿ ಅವರ ಪ್ರವಚನ ನಡೆಯುತ್ತಿತ್ತು. ಮೂರ್ನಾಲ್ಕು ದಿನ ಅಲ್ಲೇ ಜೊತೆಗಿದ್ದೆ. ಅಪ್ಪಾಜಿ ಬಳಲಿದಂತೆ ಕಂಡರು, ಮುಖದಲ್ಲಿ ಆಯಾಸವಿತ್ತು. ಆದರೂ ಮುಗಿಯದಷ್ಟು ಮಾತುಗಳು… ಚರ್ಚೆಗಳು… (ಆ ಭೇಟಿಯ ವಿವರಗಳನ್ನೆಲ್ಲ ಮತ್ತೆ ಯಾವಾಗಲಾದರೂ ಬರೆಯುವೆ) ಅಲ್ಲಿಂದ ಮರಳುವಾಗ ಮುಂದಿನವಾರ ಬಂದುಬಿಡು ಎಂದು ಮಮತೆಯಿಂದ ಒತ್ತಾಯಿಸಿದ್ದರು…. ಅಷ್ಟರಲ್ಲೇ… ಅರೆ, ಏನಾಯಿತು? ಹೇಗಾಯಿತು?… ಇಂದಿಗೂ ನನಗಿದು ತಿಳಿಯದ ಒಗಟು. ಇದ್ದಕ್ಕಿದ್ದಂತೆ ಕೊನೆಯ ದಿನಗಳಲ್ಲಿ ನನ್ನನ್ನು ಅದ್ಹೇಗೆ ಅವರು ಕರೆಸಿಕೊಂಡರು? ಫೋನಿಲ್ಲ, ಪತ್ರವಿಲ್ಲ… ನನಗೇಕೆ ಹೋಗಬೇಕೆನಿಸಿತು? ನಿಜಕ್ಕೂ ಅದೊಂದು ಅನೂಹ್ಯ ಬಾಂಧವ್ಯ… ಅವರು ಆಗಾಗ ಹೇಳುತ್ತಿದ್ದ ಟೆಲಿಪಥಿಯೇ ಇರಬೇಕು! ಅವರ ಆ ಅಂತಿಮ ಭೇಟಿ ನನ್ನ ಪಾಲಿಗೆ ಒಂದು ಅವಿಸ್ಮರಣೀಯ. ಇದು ಕಾಕತಾಳೀಯವೋ, ಪವಾಡವೋ ನಾನರಿಯೇ!!
ತಂದೆಗಿಂತ ಮಿಗಿಲಾಗಿ, ತಾಯಿಗಿಂತ ಆಪ್ತರಾಗಿದ್ದವರು ಅಪ್ಪಾಜಿ. ಬದುಕನ್ನು ಅದು ಇದ್ದಂತೆ ನೋಡುವ ಪ್ರಾಮಾಣಿಕತೆ. ಕಲ್ಮಶವಿಲ್ಲದ ತಾಯ ಮಮತೆ. ವಾತ್ಸಲ್ಯದಲ್ಲಿ ಅಮ್ಮನಿಗಿಂತ ಅಮ್ಮ. ಪ್ರೀತಿಯಲ್ಲಿ ಆಕಾಶದಂಥ ಅಪ್ಪ. ಹಾಸ್ಯಪ್ರಿಯರಾಗಿದ್ದ ಅವರು ಸದಾ ಹಸನ್ಮುಖಿ. ನಗುತ್ತಿದ್ದರೆ ಮಗುವಿನ ಸ್ವಚ್ಛ ಹಾಲು ಬಿಳುಪು. ಅವರಲ್ಲಿ ಥಟ್ಟನೆ ಕಾಣಿಸಿಕೊಳ್ಳುವ ಸಿಟ್ಟಿನ ಅವಧಿ ಕ್ಷಣ ಮಾತ್ರ. ಮನಸ್ಸಿನಲ್ಲಿ ಯಾರ ಬಗೆಗೂ ಕಹಿ ಭಾವನೆ ತಾಳಿದವರಲ್ಲ. ಜ್ಞಾನದ ಎಲ್ಲ ಬಾಗಿಲುಗಳನ್ನು ತೆಗೆದು ತೋರುವ ಉತ್ಸಾಹ ಅವರಲ್ಲಿತ್ತು. ಮಡಿವಂತಿಕೆ ಮತ್ತು ಹಿಪೋಕ್ರಸಿ ಅವರ ಹತ್ತಿರ ಸುಳಿಯಲಿಲ್ಲ. ಸಣ್ಣಪುಟ್ಟ ವಿಷಯಗಳಲ್ಲಿಯೂ ವಿಶೇಷ ಕಾಳಜಿ ತೋರುವ, ಶಿಷ್ಯರಿಗೆ ಯಾವ ತೊಂದರೆಯೂ ಆಗದಂತೆ ನೋಡಿಕೊಳ್ಳುವ ಮಾತೃ ಹೃದಯ. ಎಂಥದೇ ವಿಷಯವನ್ನು ಅವರೊಂದಿಗೆ ಮುಕ್ತವಾಗಿ ಸಂಕೋಚವಿಲ್ಲದೆ ಚರ್ಚಿಸಬಹುದಾಗಿತ್ತು. ದೈವಿಕ ಒತ್ತಡಗಳಿಲ್ಲದೆ ಮಾನವೀಯ ನೆಲೆಯಿಂದ, ವಾಸ್ತವಿಕ ದೃಷ್ಟಿಯಿಂದ ಅವರು ವಿಷಯ ಪ್ರವೇಶ ಮಾಡುತ್ತಿದ್ದ ರೀತಿ ನನಗೆ ವಿಶೇಷವೆನಿಸುತ್ತಿತ್ತು. ಪ್ರತಿದಿನ ತಮ್ಮ ಪ್ರವಚನದ ಬಗೆಗಿನ ನಮ್ಮ ಅಭಿಪ್ರಾಯವನ್ನು, ಪ್ರಶ್ನೆಗಳನ್ನು ರಾತ್ರಿಯ ವಾಕ್ ವೇಳೆಯಲ್ಲಿ ಕೇಳುತ್ತಿದ್ದರು. ಸಂಕೀರ್ಣ ಪ್ರಶ್ನೆಗಳನ್ನು ಉತ್ತೇಜಿಸುತ್ತಿದ್ದರು. ಹೀಗೆ ನಮ್ಮ ತಲೆಯಲ್ಲಿ ಪ್ರಶ್ನೆಗಳನ್ನು ಬಿತ್ತಿದರು. ಕಠೋಪನಿಷತ್ತಿನ ಸಂಪೂರ್ಣ ಪಠ್ಯವನ್ನು, ಬದುಕಲು ಕಲಿಯಿರಿ ಪುಸ್ತಕಗಳನ್ನು, ಸ್ವಾಮಿ ದಯಾನಂದ ಸರಸ್ವತಿ, ವಿವೇಕಾನಂದ ಹಾಗೂ ರಮಣಮಹರ್ಷಿಗಳನ್ನು ಅವರ ಬಳಿ ಓದಿ ತಿಳಿವ ಭಾಗ್ಯ ನನ್ನದಾಗಿತ್ತು. ಯಾರ ಬಗೆಗೂ ಕಹಿ ತುಂಬಿಕೊಳ್ಳದೆ ಮನಸ್ಸನ್ನು ಹಗುರಾಗಿ ಹೇಗೆ ಇಟ್ಟುಕೊಳ್ಳಬೇಕು, ಧರ್ಮದ ದಂದುಗಳಾಚೆ ಮನುಷ್ಯತ್ವವನ್ನು ಹೇಗೆ ಜೋಪಾನ ಮಾಡಿಕೊಳ್ಳಬೇಕು… ಅಪ್ಪಾಜಿ ಕಲಿಸಿದ್ದು ಒಂದೇ, ಎರಡೇ… ಬದುಕಿನ ಅತ್ಯಮೂಲ್ಯವಾದ ಪಾಠಗಳನ್ನು ಹೇಳಿಕೊಟ್ಟಿದ್ದರು…
ಮಾರ್ಕ್ಸ್ ವಾದಿ ಧರ್ಮದ ಹೊಣೆ ಹೊತ್ತಿದ್ದು
1950. ಅದು ಸಮಾಜವು ಆಧುನಿಕತೆಯನ್ನು ಸ್ವೀಕರಿಸಿ ನಿಧಾನವಾಗಿ ಹೊರಳುತ್ತಿದ್ದ ಕಾಲಮಾನ. ಸರಿಯುತ್ತಿದ್ದ ಹಳೆಯ ಜಗತ್ತು, ಉದಯಿಸುತ್ತಿದ್ದ ಹೊಸ ಜಗತ್ತು, ನಡುವಿನ ಗೊಂದಲಗಳು, ತಾಕಲಾಟಗಳು. ಎಲ್ಲ ಕ್ಷೇತ್ರಗಳು ಅಶಾಂತಿಯ ಗರ್ಭ ಹೊತ್ತಂತೆ ತಹತಹಿಸುತ್ತಿದ್ದವು. ಬಾಗೇವಾಡಿ ತಾಲ್ಲೂಕಿನ ಮನಗೂಳಿಯ ಸಂಗಮೇಶ ಕಾವಿ ಹಾಕಿ, ಸ್ವಾಮಿ ಲಿಂಗಾನಂದರಾದದ್ದು, ವಿವೇಕಾನಂದರಂತೆ ಪೇಟ ಕಟ್ಟಿಕೊಂಡು ಬಸವ ಸಂದೇಶಗಳನ್ನು ಹೊತ್ತು ನಡೆದದ್ದು ಪ್ರತಿಯೊಂದೂ ಅಚ್ಚರಿಯ ಬೆಳವಣಿಗೆ. ಚಿಕ್ಕಂದಿನಿಂದಲೇ ಅವರಲ್ಲೊಬ್ಬ ಬಂಡಾಯಗಾರನಿದ್ದ. ಬಾಲ್ಯದ ಬಡತನ, ಮಾರ್ಕ್ಸ್ ತತ್ವಗಳತ್ತ ಒಲವು, ತೀಕ್ಷ್ಣ ಬುದ್ಧಿಮತ್ತೆ, ಪ್ರಶ್ನಿಸುವ ಸ್ವಭಾವ, ಏನಾದರೂ ಸಾಧಿಸುವ ಛಲ ಅವರ ವ್ಯಕ್ತಿತ್ವವನ್ನು ಕಟೆದಿದ್ದವು. ಆಧ್ಯಾತ್ಮದತ್ತ ಅವರು ಹೊರಳಿದ್ದು ಆಕಸ್ಮಿಕವಾಗಿ. ಮನುಷ್ಯ ಬದಲಾಗುವುದಾದರೆ ಮಾತ್ರವೇ ವ್ಯವಸ್ಥೆ ಬದಲಾಗುವುದು. ಕಾನೂನು ಕ್ರಮಗಳೆಲ್ಲ ಒಂದು ಹಂತದ ಪ್ರಯತ್ನಗಳು ಮಾತ್ರ. . ಜಗತ್ತಿನ ಸಮಸ್ಯೆಗಳಿಗೆಲ್ಲ ಬಸವ ಧರ್ಮದಲ್ಲಿ ಉತ್ತರವಿದೆ ಎಂದು ಕಂಡುಕೊಂಡಿದ್ದೇ ಆ ದಾರಿ ತುಳಿದಿದ್ದರು. ಲಿಂಗಾಯತ ಧರ್ಮದ ಚಾರಿತ್ರಿಕ ಘಟ್ಟವೊಂದರಲ್ಲಿ ಅಪ್ಪಾಜಿಯ ಆಗಮನಕ್ಕೆ ವಿಶೇಷ ಮಹತ್ವವಿದೆ.
“ನಾನು ಯಾವ ಮಠಾಧಿಕಾರಿಗಳನ್ನೂ ದ್ವೇಷಿಸುತ್ತಿಲ್ಲ. ಆದರೆ ಅವರು ಯಾಕೆ ನನ್ನನ್ನು ಅನಾದರದಿಂದ ಕಾಣುತ್ತಿದ್ದಾರೆ ಗೊತ್ತೆ? ನಾನು ಅಯ್ಯನವರ ಜಾತಿಯಲ್ಲಿ ಹುಟ್ಟಿದವನಲ್ಲ. ಕಾರಣ ನನಗೆ ಗುರುವಾಗಲು, ಜಂಗಮನಾಗಲು, ಸ್ವಾಮಿಯಾಗಲು ಹಕ್ಕಿಲ್ಲವೆಂಬುದು ಅವರ ವಾದ. ಹುಟ್ಟಿನಿಂದ ಗುರು, ಜಂಗಮರಾಗಲು ಆಗದು. ಅರ್ಹತೆಯಿಂದ ಗುರುತ್ವ, ಜಂಗಮತ್ವ ಹೊಂದಿರಬೇಕೆಂಬುದು ನನ್ನ ವಿಚಾರ. ಇದು ಶರಣರ ವಿಚಾರ…” ಜಂಗಮವು ಜಾತಿ ವಾಚಕವಲ್ಲ, ತತ್ವ ವಾಚಕವೆಂದು ತಮ್ಮ ‘ಜಂಗಮ ದರ್ಶನ’ ಪುಸ್ತಕದ ಮುನ್ನುಡಿಯಲ್ಲಿ ಅಪ್ಪಾಜಿ ಬರೆದಿದ್ದರು. ಇದು ಪ್ರಕಟವಾದದ್ದು ಅರ್ಧ ಶತಮಾನದಷ್ಟು ಹಿಂದೆ, 1965ರಲ್ಲಿ. ತಮ್ಮ ಪ್ರವಚನಗಳಿಗೆ ಅಡ್ಡಿಪಡಿಸುತ್ತಿರುವ ಕರ್ಮಠರ ಕಾಕದೃಷ್ಟಿಯಿಂದ ತಾವು ನೊಂದಿರುವುದಾಗಿ ಅದರಲ್ಲಿ ಬರೆದಿದ್ದಾರೆ. ಹುಟ್ಟಿನಿಂದ ವ್ಯಕ್ತಿ ಶ್ರೇಷ್ಠ-ಕನಿಷ್ಠ ಆಗಲಾರ ಎಂದು ಪ್ರತಿಪಾದಿಸಲೆಂದೇ ಹುಟ್ಟಿಕೊಂಡ ಧರ್ಮದಲ್ಲಿ ಅದೇ ಶ್ರೇಷ್ಠ-ಕನಿಷ್ಠತೆಯ ತಾರತಮ್ಯ ಜಾತಿ ಜಂಗಮರ ಮತ್ತೊಂದು ರೂಪದಲ್ಲಿ ತೂರಿಕೊಂಡಿತ್ತು. ಆ ದಿನಗಳಲ್ಲಿ ಭಕ್ತವರ್ಗದ ವ್ಯಕ್ತಿಯೊಬ್ಬರನ್ನು ಧರ್ಮಪ್ರಚಾರಕನನ್ನಾಗಿ, ಮಠಾಧಿಪತಿಯನ್ನಾಗಿ ಕಲ್ಪಿಸಿಕೊಳ್ಳಲಾಗಲಿ, ಸ್ವೀಕರಿಸಲಾಗಲಿ ಸಾಧ್ಯವಾಗದಷ್ಟು ಸಮಾಜ ತನ್ನ ಸ್ವಂತಿಕೆ ಕಳೆದುಕೊಂಡಿತ್ತು. ಮೌಢ್ಯ-ಅಂಧಶ್ರದ್ಧೆ ಹುಲುಸಾಗಿ ಬೆಳೆದಿತ್ತು. ಆ ಕಾಲಘಟ್ಟದ ಮೂಲ ಸಮಸ್ಯೆಗೆ ಅಪ್ಪಾಜಿ ಕೈ ಹಾಕಿದ್ದರು. ಬಸವಣ್ಣನವರ ತತ್ವಗಳನ್ನು ಮೂಲೆಗುಂಪಾಗಿಸಿದ್ದ ಮೇಲ್ವರ್ಗದ ವ್ಯಸನಿಗಳ ಮುಂದೆ ದಿಟ್ಟತನದಿಂದ ಹೀಗೆ ಶರಣರ ವಿಚಾರವನ್ನು ಎತ್ತಿಕೊಂಡು ಮಾತಾಡಿದ್ದರು. ಲಿಂಗಾಯತ ಸಮಾಜಕ್ಕೆ ಕವಿದ ಮಂಪರನ್ನು ಎಚ್ಚರಿಸಿದ್ದರು. ಗುರುತ್ವ ಮತ್ತು ಜಂಗಮತ್ವಗಳು ಬರುವುದು ಅರ್ಹತೆಯಿಂದಲೇ ಹೊರತು ಹುಟ್ಟಿನಿಂದ ಬರುವ ಜಾತಿಯಿಂದಲ್ಲ ಎಂದು ತೋರಿಸಿಕೊಟ್ಟರು.
ಆ ಸಂದರ್ಭದಲ್ಲಿ ಅಪ್ಪಾಜಿ ಇಟ್ಟ ಒಂದೊಂದು ಹೆಜ್ಜೆಯೂ ಕ್ರಾಂತಿಕಾರಿಯಾಗಿತ್ತು. ಆಗ ಪಂಚಪೀಠಗಳು ಅಕ್ಷರಶಃ ಲಿಂಗಾಯತ ಧರ್ಮೀಯರನ್ನು ಆಳುತ್ತಿದ್ದವು. ಲಿಂಗಾಯತ ಧರ್ಮದೊಳಗೆ ನುಸುಳಿ ತಮ್ಮ ಆಧಿಪತ್ಯ ಸ್ಥಾಪಿಸಿದ್ದ ಪಟ್ಟಭದ್ರಹಿತಾಸಕ್ತಿಗಳು, ಪುರೋಹಿತಶಾಹಿ ವರ್ಗದವರು ಅವುಗಳಲ್ಲಿನ ಸಮಾನತೆಯ ಗುಣವನ್ನು ಮುಚ್ಚಿಹಾಕಿದ್ದರು. ಇಂಥ ದಾಸ್ಯ ವಾತಾವರಣದಲ್ಲಿ ಕ್ರಾಂತಿಕಾರಿಯಂತೆ ಕಾಣಿಸಿಕೊಂಡಿದ್ದರು ಅಪ್ಪಾಜಿ. ಅವರು ಬರೆದ ದೇವರು, ಲಿಂಗಾಯತ ದರ್ಶನ, ಲಿಂಗಪೂಜಾ ವಿಧಾನ, ಅಕ್ಕನ ಪ್ರವಚನ, ಜಂಗಮ ದರ್ಶನದಂತಹ ಕೃತಿಗಳು ಹೊಸ ವಿಚಾರದ ಸಂಚಲನವನ್ನು ಸೃಷ್ಟಿಸಿದ್ದವು. ಈಗ ಓದಿದರೂ ಅವರ ಸೃಜನಶೀಲ ವಿಚಾರಗಳು ಅಪ್ಯಾಯವೆನಿಸುತ್ತವೆ. ಕೆಲವು ಸಂಗತಿಗಳ ಹೊರತಾಗಿ ಅವರ ವಿಚಾರಗಳಲ್ಲಿನ ಸ್ಪಷ್ಟತೆ, ತತ್ವ ಮಂಡನೆಯಲ್ಲಿನ ಖಾಚಿತ್ಯ ಅನನ್ಯವಾದುದು.
ಈ ಹಿನ್ನೆಲೆಯಲ್ಲಿ ಅಪ್ಪಾಜಿಯ ವಿಶ್ವಕಲ್ಯಾಣ ಸಂಸ್ಥೆಗೆ ಮಾತಾಜಿಯ ಆಗಮನವನ್ನು ಊಹಿಸಿಕೊಂಡರೆ ಅರ್ಥವಾಗುತ್ತದೆ. ಸಂಕುಚಿತ ಮನಸ್ಸಿನ ಸಮಾಜ ತನ್ನ ಕಿರುಕುಳವನ್ನು ಮತ್ತಷ್ಟು ಹೆಚ್ಚಿಸಿತು. ಎಲ್ಲ ಕಡೆಗಳಿಂದ ವಿರೋಧಗಳು ವ್ಯಕ್ತವಾದವು. ಆ ಸಂದರ್ಭದಲ್ಲಿ ಅವರು ತಮ್ಮ ಆತ್ಮೀಯ ಶಿಷ್ಯರಿಗೆ ಬರೆದ ಪತ್ರಗಳಲ್ಲಿ ಸಚಿತ್ರವಾಗಿ ಆ ಸಂಘರ್ಷದ ದಿನಗಳನ್ನು ಕಾಣಬಹುದು. “ಆರು ಮುನಿದು ನಮ್ಮನೇನ ಮಾಡುವರು? ಊರು ಮುನಿದು ನಮ್ಮನೆಂತು ಮಾಡುವುದು?” ಎಂಬಂತೆ ಅಪ್ಪಾಜಿ ಗಟ್ಟಿಯಾಗಿ ನಿಂತರು. ಅವರ ಛಲ ಇಮ್ಮಡಿಸಿತ್ತು. ಮಹಿಳೆ ಗುರುವಾಗಬಲ್ಲಳು, ಜಂಗಮಳಾಗಬಲ್ಲಳು, ಮಠಾಧೀಶಳೂ ಆಗಬಲ್ಲಳೆಂಬುದನ್ನು ಸಾಕಾರಗೊಳಿಸಿದರು. ಇಬ್ಬರೂ ಜೋಡೆತ್ತಿನಂತೆ ಧರ್ಮ ಪ್ರಚಾರ ಕಾರ್ಯ ಕೈಗೆತ್ತಿಕೊಂಡರು. ಅಲ್ಲಿಂದ ಹಿಂತಿರುಗಿ ನೋಡುವ ಪ್ರಶ್ನೆಯೇ ಉದ್ಭವಿಸಲಿಲ್ಲ. ಅವರ ಮಿಷನರಿ ಝೀಲ್ ಎದುರು ಟೀಕಿಸುವ ಬಾಯಿಗಳು ತೆಪ್ಪಗಾದವು. ಮುಂದೇನಾಯಿತೆಂಬುದು ಈಗ ಇತಿಹಾಸ, ಜಗಜ್ಜಾಹೀರ.
ನಾನು ಕಂಡ ಅಪೂರ್ವ ಗುರು-ಶಿಷ್ಯರು ಅವರು. ಶರಣ ತತ್ವಗಳನ್ನು ತಮ್ಮ ಬದುಕಿನುದ್ದಕ್ಕೂ ಎತ್ತಿಹಿಡಿದ ಅವರು ಎಂದಿಗೂ ನಿರಾಶಾವಾದಿಗಳಾಗಿರಲಿಲ್ಲ. ಅವರ ಮಾತುಗಳಲ್ಲಿ ಪ್ರಗತಿಪರ ವಿಚಾರಗಳಿದ್ದವು. ಚಿಂತನೆಗಳಲ್ಲಿ ದಿಟ್ಟತನವಿತ್ತು. ನಿರ್ಭಿತಿಯಿಂದ ಘಂಟಾಘೋಷವಾಗಿ ಬಸವಣ್ಣನವರ ವಿಚಾರಗಳನ್ನು ಮಂಡಿಸುತ್ತಿದ್ದರು. ಅವರ ಪ್ರವಚನ ಎಂಥ ನಿರಭಿಮಾನಿಯಲ್ಲೂ ಅಭಿಮಾನ ತುಂಬುತ್ತಿತ್ತು. ಹಿಂದೂ ಯಾರು? ಎನ್ನುವ ಸ್ಪಷ್ಟತೆ, ಇಷ್ಟಲಿಂಗ ಜನಕ ಬಸವಣ್ಣ, ವೀರಶೈವ ಪದ ತೊರೆದು ಲಿಂಗಾಯತ ಪದ ಬಳಕೆ ಆರಂಭಿಸಿದ್ದು, ಕೂಡಲಸಂಗಮದಲ್ಲಿ ಶರಣಮೇಳದಂಥ ಬೃಹತ್ ಸಮಾವೇಶ ಆಯೋಜಿಸಿದ್ದು, ರಾಷ್ಟ್ರೀಯ ಬಸವದಳ ಹುಟ್ಟುಹಾಕಿದ್ದು, ಲಿಂಗಾಯತ ಸ್ವತಂತ್ರ ಧರ್ಮವೆಂದು ಸಾರುತ್ತಾ ಅದಕ್ಕೆ ಹೋರಾಟದ ರೂಪು ನೀಡಿದ್ದು… ಅವರ ಹಲವಾರು ಗಮನೀಯ ಕಾರ್ಯಗಳಲ್ಲಿ ಪ್ರಮುಖವಾದವುಗಳು.
ಅವರೊಂದು ದಂತಕಥೆ
ಫ್ಯಾಸಿಸ್ಟ್ ಹಾಗೂ ಸಾಮ್ರಾಜ್ಯಶಾಹಿ ವಿರೋಧಿ ಮನೋಭಾವ ಮತ್ತು ಸಮಾಜವಾದ ಅಪ್ಪಾಜಿಯ ಜೀವಮಾನದ ಬದ್ಧತೆಗಳಾಗಿದ್ದವು. ಅವರ ಪ್ರವಚನಗಳಲ್ಲಿ ಕಳಕಳಿ ಇತ್ತು. ಸತ್ಯವನ್ನು ನಿರ್ಭಯವಾಗಿ ಮಂಡಿಸುವ ಎದೆಗಾರಿಕೆ ಇತ್ತು. ಎಷ್ಟು ಸಲ ಕೇಳಿದರೂ ಅವರ ಮಾತುಗಳಲ್ಲಿ ತಾಜಾತನ ಇರುತ್ತಿತ್ತು. ಊಟಕ್ಕೆ ಉಪ್ಪಿನಕಾಯಿ ಎಂದು ಕಥೆ, ಹಾಸ್ಯ ಬೆರೆಸಿ ಎಂಥ ಗಹನ ತತ್ವವನ್ನೂ ಸಾಮಾನ್ಯರಿಗೂ ಅರ್ಥವಾಗುವಂತೆ ಹೇಳುತ್ತಿದ್ದರು. ಸಾರ್ವಜನಿಕರು ಕದಲದೆ ಮಂತ್ರಮುಗ್ಧರಾಗಿ ಕೇಳುತ್ತಿದ್ದರು. ಅನ್ಯ ಧರ್ಮೀಯರಿಗೆ ನೋವಾಗದ ಹಾಗೆ, ಅವರ ಭಾವನೆಗಳಿಗೆ ಧಕ್ಕೆಯಾಗದ ಹಾಗೆ ಪ್ರವಚನ ಮಾಡುವ ಕಲೆ ಅವರಿಗೆ ಸಿದ್ಧಿಸಿತ್ತು. ಗಲಗಲಿಯಲ್ಲಿ ಜೋಷಿ ಕುಟುಂಬದವರು, ಮಂಗಳೂರಿನಲ್ಲಿ ಪೈ ಬಳಗದವರು, ಸಾಗರದಲ್ಲಿ ಶೇ.90 ರಷ್ಟು ಹವ್ಯಕ ಬ್ರಾಹ್ಮಣರು, ಚಿತ್ರದುರ್ಗ- ಶಿವಮೊಗ್ಗಗಳಲ್ಲಿ ಮುಸ್ಲಿಮರು, ಬೆಂಗಳೂರಿನಲ್ಲಿ ಜೈನರು ಮುಂಭಾಗದಲ್ಲೇ ಕುಳಿತು ಅಪ್ಪಾಜಿಯ ಪ್ರವಚನವನ್ನು ಮೈಮರೆತು ಆಲಿಸುತ್ತಿದ್ದುದನ್ನು ಕಣ್ಣಾರೆ ಕಂಡು ವಿಸ್ಮಿತಳಾಗಿದ್ದೇನೆ. 1956 ರಿಂದ ಕೊನೆಯುಸಿರಿನ ತನಕ ಸುಮಾರು ನಾಲ್ಕು ದಶಕಗಳ ಕಾಲ ಪ್ರವಚನಗಳ ಮೂಲಕ ಅಪ್ಪಾಜಿ ಧರ್ಮಪ್ರಚಾರ ಮಾಡಿದರು. “ಪ್ರವಚನ ಪಿತಾಮಹ” ಎಂದು ಅವರನ್ನು ಕರೆಯುವುದರಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲ.
ಅಪ್ಪಾಜಿ ಪ್ರವಚನ ಹೇಳಲು ವೇದಿಕೆ ಏರಿದರೆ ಗಾಂಭೀರ್ಯದ ಪರ್ಯಾಯ ಪದವೇ ರೂಪು ಪಡೆದಂತೆ. ಮೈಕಿನ ಮುಂದೆ ಸಿಡಿಲ ಸಿಂಹ. ನಿರರ್ಗಳ ಮಾತಿನ ನಂತರ ಮುಖದ ಮೇಲೆ ನಿರ್ಲಿಪ್ತತೆಯ ತೇಜ. ಯಾರಾದರೂ ಹೊಸ ವಿಚಾರಗಳನ್ನು ವೇದಿಕೆಯ ಮೇಲೆ ಹೇಳಿದರೆ ಭಲೇ! ಭೇಷ್ ಎನ್ನುತ್ತಾ ಚಪ್ಪಾಳೆ ತಟ್ಟಿ ಹುರಿದುಂಬಿಸುವ ಹೃದಯ ವೈಶಾಲ್ಯತೆ. ಪ್ರಗತಿಪರ ವಿಚಾರಧಾರೆಯ ಚಿಂತನೆ, ಜೀವ ಕಾರುಣ್ಯದ ದೃಷ್ಟಿಕೋನ. ಸಮಾಜ, ರಾಜಕಾರಣ, ಧರ್ಮ, ಆಧ್ಯಾತ್ಮ, ಬದುಕು, ಇತ್ಯಾದಿ ಸಂಗತಿಗಳ ಬಗ್ಗೆ ಅವರಿಗೆ ಸ್ಪಷ್ಟ ನಿಲುವುಗಳಿದ್ದವು. ರಾಜಕೀಯದ ಬಗ್ಗೆ ವಿಶೇಷ ಆಸಕ್ತಿ. ರೇಡಿಯೋದಲ್ಲಿ ಪ್ರತಿ ಹೊತ್ತಿನ ಪ್ರದೇಶ ಸಮಾಚಾರ ಹಾಗೂ ವಾರ್ತೆಗಳನ್ನು ತಪ್ಪದೇ ಕೇಳುತ್ತಿದ್ದರು. ಧಾರ್ಮಿಕ ಕ್ಷೇತ್ರಕ್ಕೆ ಅವರು ಕಾಲಿಡದಿದ್ದರೆ ಖಂಡಿತವಾಗಿಯೂ ಅವರೊಬ್ಬ ಸಮರ್ಥ ರಾಜಕಾರಣಿ ಹಾಗೂ ರಾಜನೀತಿಜ್ಞರಾಗಿರುತ್ತಿದ್ದರು. ಅವರಲ್ಲಿ ಕಲಿಯ ಬೇಕಾದದ್ದು ಸಮೃದ್ಧವಾಗಿತ್ತು…
ಅಪ್ಪಾಜಿಯೊಂದಿಗೆ ಒಡನಾಟವಿದ್ದ ಯಾರೇ ಆಗಿರಲಿ- ಸಾಹಿತಿಗಳಾಗಲಿ, ರಾಜಕಾರಣಿಗಳಿರಲಿ, ಅಧಿಕಾರಿಗಳಾಗಿರಲಿ, ಹಳೆಯ ಶಿಷ್ಯರೇ ಇರಲಿ, ಅವರಲ್ಲೆಲ್ಲಾ ಅಪ್ಪಾಜಿ ಬಿಟ್ಟು ಹೋದ ನೆನಪುಗಳು ಬೆಟ್ಟದಷ್ಟಿವೆ. ಅವುಗಳನ್ನೆಲ್ಲ ಅವರು ಆಪ್ತವಾಗಿ ಎದೆಯಲ್ಲಿಟ್ಟುಕೊಂಡಿದ್ದಾರೆ, ಪ್ರಸಂಗ ಬಂದಾಗಲೆಲ್ಲ ಕಕ್ಕುಲಾತಿಯಿಂದ ಸ್ಮರಿಸಿಕೊಳ್ಳುತ್ತಾರೆ. ಮಾತಾಜಿ ಲಿಂಗೈಕ್ಯರಾಗುವ ಕೆಲ ಗಂಟೆಗಳ ಮೊದಲು ಐಸಿಯೂ ಪಕ್ಕದ ಚೇಂಬರಿನಲ್ಲಿ ಕುಳಿತು ವೈದ್ಯರಿಗಾಗಿ ಕಾಯುತ್ತಾ ಕುಳಿತ ಆ ಅಲ್ಪ ಸಮಯದಲ್ಲಿಯೇ ಅಲ್ಲಿ ನೆರೆದಿದ್ದ ಎಲ್ಲರೂ ಅಪ್ಪಾಜಿಯ ನೆನಪುಗಳನ್ನು ಮೆಲುಕು ಹಾಕುತ್ತಿದ್ದರು. ಮಾತಾಜಿಯ ಕೊನೆ ದಿನಗಳ ಬರವಣಿಗೆಯನ್ನು ವರ್ಣಿಸುತ್ತಿದ್ದರು. ಅವರ ಜೀವನ ಮತ್ತು ಸಾಧನೆಗಳನ್ನು ಅದರ ಎಲ್ಲ ವಾಸ್ತವತೆಯಲ್ಲಿ ಗಮನಿಸಿದರೂ ನಿಸ್ಸಂದೇಹವಾಗಿ ಅವರೀರ್ವರು ಅವಿಸ್ಮರಣೀಯರು.
ಇಂದಿನ ಲಿಂಗಾಯತ ಸಮಾಜವು ಹಿಂದಿನ ಎಲ್ಲ ಮಹನೀಯರ ಹೋರಾಟಗಳ ಫಲ. ಇವತ್ತಿನ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಧರ್ಮ ಪ್ರಸಾರವು ಕೇವಲ ಪ್ರಚಾರದ ಹಾದಿ ತುಳಿದಾಗ ಅದರ ಅಂತಃಸತ್ವ ಕುಗ್ಗುತ್ತದೆ. ಧಾರ್ಮಿಕ ಲಾಂಛನಗಳು ಪ್ರಚಾರ ಸಾಮಗ್ರಿಗಳಾದಾಗ ಮೌಲ್ಯ ಕಳೆದುಕೊಳ್ಳುತ್ತವೆ. ಅಬ್ಬರವಿದ್ದಲ್ಲಿ ಅಂತರಾತ್ಮದ ದನಿ ಕೇಳುವುದಿಲ್ಲ. ಸಂಪ್ರದಾಯದೊಂದಿಗೆ ಬಸವ ತತ್ವ ಯಾವತ್ತೂ ಸಹಬಾಳ್ವೆ ನಡೆಸುವುದು ಸಾಧ್ಯವಿಲ್ಲ. ಬಸವ ತತ್ವ ಮತ್ತು ಯಾವುದೇ ವರ್ಗದ ಆಧಿಪತ್ಯ (supremacy of any kind) ಒಂದಾಗಿ ಹೋಗಲಾರವು. ಹೀಗಾಗಿ ಮಠ, ಕಾವಿ, ಪೀಠ, ಕಿರೀಟಗಳು ಇಲ್ಲಿ ಬೆಲೆ ಪಡೆದುಕೊಳ್ಳುವುದಿಲ್ಲ. ಅಂದು ಅಪ್ಪಾಜಿ ಮತ್ತು ಮಾತಾಜಿ ಯಾವುದನ್ನು ಶರಣರ ಆಶಯವೆಂದು ಎತ್ತಿಹಿಡಿದರೋ ಇಂದೂ ನಾವು ಈ ಹಿನ್ನೆಲೆಯಲ್ಲಿ ಅದೇ ಕೆಲಸ ಮಾಡಬೇಕಿದೆ.
ಶರಣರು ಅರಿವಿಗಾಗಿ ಧರ್ಮ ಹಿಡಿದು, ಸಮಾನತೆಗಾಗಿ ಪ್ರಾಣ ಕೊಟ್ಟವರು. ತಮ್ಮ ಹಿಂದಿನದನ್ನು, ಸಮಕಾಲೀನವಾದುದನ್ನು ನಿಷ್ಠುರವಾಗಿ ವಿಮರ್ಶಿಸುತ್ತಲೇ ಹೊಸ ಹಾದಿ ಕಂಡುಕೊಂಡವರು. ಆ ಅನ್ವೇಷಣೆ, ಈಗ ಈ ಗಳಿಗೆಗೂ ಮುಂದುವರಿಯಬೇಕು. ಇಲ್ಲದಿದ್ದರೆ ಕ್ರಾಂತಿಕಾರಿ ಪರಂಪರೆ ಗೊಡ್ಡು ಧರ್ಮವಾಗಿ ತನ್ನ ಚಲನಶೀಲತೆಯನ್ನು ಕಳೆದುಕೊಳ್ಳುತ್ತದೆ. ಶರಣರ ಚಿಂತನೆಗಳಿಗೆ ವಿರುದ್ಧವಾದ ಹೆಚ್ಚು ವಿನಾಶಕಾರಿಯಾದ ನಂಬಿಕೆಗಳಿಗೆ ಜೋತುಬಿದ್ದು ಸರಿ ತಪ್ಪುಗಳನ್ನು ಗುರುತಿಸಲಾಗದ ಅಂಧಕಾರಕ್ಕೆ ಜಾರಿ ಬಿಡುತ್ತೇವೆ. ಸುತ್ತ ವಿರೋಧಗಳಿದ್ದರೂ ಆ ಗುರುದ್ವಯರು ಹೇಗೆ ಕೆಚ್ಚೆದೆಯಿಂದ ಅವುಗಳನ್ನು ಎತ್ತಿ ಹಿಡಿದುಕೊಂಡು ಅದಕ್ಕಾಗಿ ತಮ್ಮ ಬಾಳು ಸವೆಸಿದರೋ ಆ ಕೆಚ್ಚು ನಮ್ಮಲ್ಲೂ ಮುಂದುವರಿಯಬೇಕು. ಈ ಕಾಲದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು.
ಮೂಢನಂಬಿಕೆಗಳನ್ನು ಪ್ರೋತ್ಸಾಹಿಸುವ ಪುರೋಹಿತಶಾಹಿಯು ಎಷ್ಟು ಅಪಾಯಕಾರಿಯೋ ಇವತ್ತು ಸನ್ಯಾಸಿ- ಭಕ್ತ; ಗುರು-ಶಿಷ್ಯ ಎಂದು ಅಂತರ ಕಾಯ್ದುಕೊಳ್ಳುವ ಮಠೀಯ ಕಾವಿ ವ್ಯವಸ್ಥೆಯೂ ಅಷ್ಟೇ ಅಪಾಯಕರವಾಗಿ ಕಾಣುತ್ತಿದೆ. ಮಠಗಳೂ ದೇವಸ್ಥಾನಗಳಂತೆ ಶಕ್ತಿ ಕೇಂದ್ರಗಳಾಗಿ ಬೆಳೆಯುತ್ತಿರುವ ಈ ದಿನಗಳಲ್ಲಿ ಹೀಗೆ ಯೋಚಿಸುವುದು ಅನಿವಾರ್ಯವಾಗಿದೆ. ಶರಣರು ಎಲ್ಲ ಬಗೆಯ ಸರ್ವಾಧಿಕಾರವನ್ನೂ ಕಿತ್ತೊಗೆದವರು. ಮಠಗಳು ಮಹಾಮನೆಗಳಾದಾಗ ಮಾತ್ರವೇ ಇದು ಸಾಧ್ಯವಾಗುವುದು. ಏಕೆಂದರೆ ಅನುಮಾನಗಳನ್ನು, ಗೊಂದಲಗಳನ್ನು, ದ್ವಂದ್ವಗಳನ್ನು, ಸಂದಿಗ್ಧಗಳನ್ನು ಇಟ್ಟುಕೊಂಡು ಸಮಾಜ ಮುಂದಕ್ಕೆ ಚಲಿಸಲಾರದು. ಸ್ವಚ್ಛ ಮನದ ವಾರಸುದಾರರನ್ನು ಸೃಷ್ಟಿಸದಾದಾಗ ಸಮಾಜವು ಗುಲಾಮಿ ಪದ್ಧತಿಯ ಮತ್ತೊಂದು ರೂಪವನ್ನು ಹೊತ್ತುಕೊಂಡು ಮುಂದುವರೆಯುತ್ತದೆ ಅಷ್ಟೆ. ಗುಡಿ-ಗುಂಡಾರಗಳನ್ನು ಸುತ್ತುತ್ತಾ ದೇವಾನುದೇವತೆಗಳ ಸ್ತುತಿಗಳಲ್ಲಿ ಮುಳುಗಿದ್ದ ಜನರನ್ನು ಏಕದೇವೋಪಾಸನೆಯತ್ತ ವಾಲುವಂತೆ ಮಾಡಿದ್ದು ಸರಳ ಪರಿವರ್ತನೆಯಲ್ಲ. ಕೊರಳಲ್ಲಿ ಇಷ್ಟಲಿಂಗ, ಹಣೆಯಲ್ಲಿ ವಿಭೂತಿ, ಬಾಯಿಯಲ್ಲಿ ವಚನಗಳು ಉದುರುವಂತಾದದ್ದೂ ಸಾಧನೆಯೇ. ಅನೇಕಾನೇಕರಲ್ಲಿ ಅಂಥ ಬದಲಾವಣೆಯನ್ನು ಪೂಜ್ಯರ ಪ್ರವಚನಗಳು ತಂದಿವೆ. ಆದರೆ ವ್ಯಕ್ತಿಯೊಬ್ಬನ ಶರಣತ್ವದ ಪಯಣ ಅಲ್ಲಿಗೇ ನಿಲ್ಲುವುದಿಲ್ಲ. ಪ್ರತಿಯೊಬ್ಬನಲ್ಲೂ ತಾನೇ ಗುರು, ಲಿಂಗ, ಜಂಗಮವಾಗುವ ಸಾಮರ್ಥ್ಯವಿದ್ದು ಅದನ್ನು ಅನಾವರಣ ಮಾಡಿಕೊಳ್ಳಲು ಅವರಿಗೆ ಅಗತ್ಯ ತಿಳಿವಳಿಕೆ ಮತ್ತು ವಾತಾವರಣವನ್ನೂ ಒದಗಿಸಬೇಕು. ಮನುಷ್ಯ ಜನ್ಮದ ಮಹತ್ತನ್ನು ತಿಳಿಯುವ ಅರಿವು ನೀಡುವ ವಚನ ಸಾಹಿತ್ಯವನ್ನು ವೈಯಕ್ತಿಕ ಬದುಕಿಗೂ, ಸಮಾಜಕ್ಕೂ ದಕ್ಕಿಸಿಕೊಳ್ಳಬೇಕಾದುದು ಇಂದಿನ ತುರ್ತು ಅಗತ್ಯ.
ಗುರುದ್ವಯರು ಜನರಲ್ಲಿ ಹೊಸ ಜಾಗೃತಿ ತಂದರು. ಸಮಾಜದಲ್ಲಿ ಬದಲಾವಣೆಯ ಭರವಸೆಯನ್ನು ಹುಟ್ಟುಹಾಕಿದರು. ಪರ್ಯಾಯ ಚಳುವಳಿಯಂತೆ ಆರಂಭವಾದ ಅವರ ಸಂಘಟನೆಯು ಇದ್ದಕ್ಕಿದ್ದಂತೆ ದುರ್ಬಲವಾದದ್ದು ಯಾಕೆಂದು ನಾನಿಲ್ಲಿ ಚರ್ಚಿಸುವುದಿಲ್ಲ. ಯಾಕೆಂದರೆ ಎಲ್ಲ ಹೋರಾಟಗಳಲ್ಲಿಯೂ ಏರಿಳಿತಗಳಿರುತ್ತವೆ. ಅವು ಆತ್ಮಾವಲೋಕನಕ್ಕೆ ದಾರಿಮಾಡಿಕೊಡುತ್ತವೆ. ಇವತ್ತು ಬಸವಣ್ಣನವರ ಹೆಸರು ವ್ಯಾಪಕವಾಗಿ ಕರ್ನಾಟಕದಲ್ಲಿ ಕೇಳುತ್ತಿದ್ದರೆ ಅದರ ಹಿಂದೆ ಅಪ್ಪಾಜಿ ಮತ್ತು ಮಾತಾಜಿಯವರ ಪರಿಶ್ರಮ ಅಧಿಕವಾಗಿದೆ. ತನ್ನನ್ನು ಗಂಧದಂತೆ ತೇಯುವ ಸಂಸಾರಿಯಂತೆ ಧರ್ಮಜಾಗೃತಿಯಲ್ಲಿ ಸಮಾಜಕ್ಕಾಗಿ ದುಡಿದವರು ಅವರು. ವಿಮರ್ಶಕ ದೃಷ್ಟಿಯಲ್ಲೂ ಅವರ ಜೀವನ ಸತ್ವ ತನ್ನ ಮಹತ್ವವನ್ನು ತೋರಬಲ್ಲುದು. ಅವರ ಕೊಡುಗೆ ಹಿರಿದಾದುದು, ನೆನಪು ಗಾಢವಾದುದು. ಒಪ್ಪದ ವಿಚಾರಗಳನ್ನು ಬದಿಗೆ ಸರಿಸಿ ಅಪ್ಪಟ ಅಪ್ಪಾಜಿ ಮತ್ತು ಅಪ್ಪಟ ಮಾತಾಜಿಯವರನ್ನು ನೋಡಲು ಸಾಧ್ಯವಾಗುವುದಾದರೆ ನಾವು ಅಪ್ಪಟ ಶರಣಮಾರ್ಗಿಗಳೆಂದೇ ಅರ್ಥ. ಅವರ ತಾತ್ವಿಕ ಹಾಗೂ ಬದುಕಿನ ನಡೆಗಳನ್ನು ಸಂಗ್ರಹಿಸುವ, ವಿಶ್ಲೇಷಿಸುವ ಬರಹ ಇದಲ್ಲ. ಕೆಲವು ನೆನಪುಗಳಲ್ಲಿ ಅವರನ್ನು ತೋರಿಸುವ ಒಂದು ಪುಟ್ಟ ಪ್ರಯತ್ನ ಮಾತ್ರ. ಈಗ ಇಬ್ಬರೂ ನೆನಪು. ಮಧುರ ಆಪ್ತ ನೆನಪು. ಮಾತಾಜಿ ಲಿಂಗೈಕ್ಯರಾದ ಈ ಸಂದರ್ಭದಲ್ಲಿ ಅಪ್ಪಾಜಿಯ ಅಗಲಿಕೆ ಮತ್ತೊಮ್ಮೆ ತೀವ್ರವಾಗಿ ಕಾಡಿತು. ಅವರ ಹೋರಾಟದ ಕೆಚ್ಚನ್ನು ಮುಂದುವರಿಸಿಕೊಂಡು ಹೋಗುವ ಮೂಲಕ ಮಾತ್ರವೇ ಅವರ ಋಣ ತೀರಿಸುವುದು ಸಾಧ್ಯ ಎನ್ನಿಸಿತು.
Comments 17
ಜಿ.ಬಿ.ಪಾಟೀಲ
Apr 4, 2019ಬಯಲಾದ ಬಸಯೋಗಿಗಳು, ಶ್ರೀ ಲಿಂಗಾನಂದ ಶರಣರ ಬಗ್ಗೇ ಹೇಚ್ಚಿನ ತಿಳುವಳಿಕೆ ಇಲ್ಲದ ನನಗೆ ಅವರ ಬಗ್ಗೆ ಹೇಚ್ಚಿನ ವ್ಯಾಸಂಗ ಮಾಡಲು ಪ್ರಚೋದಿಸುವ ಲೇಖನ . ಮಠದಲ್ಲಿರುವ ಗಿಳಿ ಬರಿ ಧಾರ್ಮಿಕ ಚಿಂತನೆ ಮಾಡಲ್ಲ ಸಾಮಾಜಿಕ ಚಿಂತನೆಯನ್ನು ಮಾಡಬಲ್ಲದು ಎಂದು ದ್ರಡಿಕರಿಸಿದ ಲೇಖನ, ಮಾತಾಜಿಯ ಎಲ್ಲ ಮುಖಗಳನ್ನು ತೋರಿಸುವ ಪ್ರಯತ್ನ ಮಾಡಿಲ್ಲ.
Kamalesh Jevergi
Apr 4, 2019ಲೇಖನ ಚೆನ್ನಾಗಿ ಬಂದಿದೆ. ಭಾವನಾತ್ಮಕ ಚಿತ್ರಣ ಬಹಳ ಹಿಡಿಸಿತು. ಲಿಂಗಾನಂದ ಸ್ವಾಮಿಗಳ ಬಗ್ಗೆ ವೈಯಕ್ತಿಕವಾಗಿ ನನಗೆ ಅಂಥ ಆಸಕ್ತಿ ಇರಲಿಲ್ಲ. ನಿಮ್ಮ ಲೇಖನ ಓದಿದ ಮೇಲೆ ಅವರ ಬಗ್ಗೆ ವಿಶೇಷ ಗೌರವ ಮೂಡಿತು, ಥ್ಯಾಂಕ್ಸ.
Dr.mallesh, Mysuru
Apr 4, 2019Befitting tribute in words. To be in association with such great people is itself a great gift. I am sure they were also very happy to have had an unselfish deeply devoted seeker like you. They have left an indelible impression of their philosophy in you which is seen in your appealing write up. Apart from your heartfelt gratitude to them, your article also reflects your conviction, determination and unselfish desire to make this society to follow the paths of such great reformers.
mahadev hadapad natuvara
Apr 4, 2019ಲಿಂಗಾನಂದ ಸ್ವಾಮೀಜಿಯವರು ಲಿಂಗೈಕ್ಯರಾದಾಗ ನಾನು 9 ನೇ ತರಗತಿಯಲ್ಲಿದ್ದೆ. ನಮ್ಮೂರಿನ ಮಠದಲ್ಲಿ ಆ ಪೂಜ್ಯರ ಬಗ್ಗೆ ಮಾತಾಡಿಕೊಳ್ಳುವುದನ್ನ ಕೇಳಿಸಿಕೊಂಡೆ. ಓದುವ ಹುಡುಗನಾದ ನಾನು ಆಗ ಅಪಾರ್ಥ ಮಾಡಿಕೊಂಡೆನೇನೋ..! ಆದರೆ ಮಾತಾಜೀಯವರ ಬಸವಪ್ರೇಮವೇ ನನ್ನೊಳಗೂ ಲಿಂಗಾಯತ ತತ್ವದ ಬಗ್ಗೆ ಅಪಾರವಾದ ಒಲವನ್ನು ಸೃಷ್ಟಿಸಿತು. ಮಾತಾಜೀ ಬಗ್ಗೆ ಇನ್ನಷ್ಟು ಬರೆಯಬಹುದಿತ್ತೇನೋ..!
ಗಂಗಾಧರಯ್ಯ ಹಿರೇಮಠ
Apr 5, 2019ಮೊದಲಿನಿಂದ ಕೊನೆಯ ತನಕ ಒಂದೇ ಗುಕ್ಕಿನಲ್ಲಿ ಓದಿ ಮುಗಿಸಿದೆ. ಬರವಣಿಗೆ ತೀವ್ರವಾಗಿ ಮನಮುಟ್ಟುವ ಹಾಗಿದೆ. ಲಿಂಗಾನಂದ ಅಪ್ಪಾವರ ಪ್ರವಚನವನ್ನು ನಾನು ಯಾವತ್ತಿಗೂ ಮರೆಯುವುದಿಲ್ಲ. ವಿವೇಕಾನಂದರಂತೆ ಕಾಣುತ್ತಿದ್ದರು.
ತಾರಾದೇವಿ ಸಾಗರ
Apr 5, 2019ಓದುತ್ತಾ ಓದುತ್ತಾ ಅತ್ತು ಬಿಟ್ಟೆ. ಭಾವುಕವಾದ ಮನಸ್ಸು ಮೌನವಾಗಿಬಿಟ್ಟಿತು. ಅಪ್ಪಾಜಿ ಅಪ್ಪಾಜಿಯೇ. ಕಮ್ಯೂನಿಸ್ಟ್ ಓದಿಕೊಂಡ ಅವರು ಬಸವಣ್ಣನವರತ್ತ ವಾಲಿದ್ದು ನಮ್ಮ ಪುಣ್ಯ. ಅವರ ಮಾತುಗಳನ್ನು ಕೇಳಿದ ನಾವು ಪುಣ್ಯವಂತರು. ಭಾವನಾತ್ಮಕ ಬರವಣಿಗೆ ಅಕ್ಕಾ.
jayakumar .K.S
Apr 5, 2019ತುಂಬಾ ಹತ್ತಿರದಲ್ಲಿ ಅವರನ್ನು ಕಂಡವರು ಅನಿಸುತ್ತದೆ.
ಲಿಂಗಾನಂದರ ತೋಟದ ಹೂವುಗಳಲ್ಲೆ ಬಹು ಅಪರೂಪದ ˌ ಸುಂದರ ಹಾಗು ಮುಳ್ಳಿನ ಗುಲಾಬಿ .
ಆದರೆ ಮಾತಾಜಿ ಸಂಸ್ಥೆಯಲ್ಲಿ ಬೆಳೆದ ರತ್ನಗಳ ಬಗ್ಗೆ ಬರೆದಿದ್ದರೆ ಚೆನ್ನಾಗಿತ್ತು
Sharmila patel
Apr 8, 2019ಸ್ವಾಮಿ ಲಿಂಗಾನಂದರ ಬಗೆಗೆ ಕೇಳಿ ತಿಳಿದಿದ್ದೆ, ಈಗ ನಿಮ್ಮ ದೃಷ್ಟಿಯಲ್ಲಿ ನೋಡಿದ ಬಳಿಕ ಅವರನ್ನು ಭೇಟಿಯಾಗಲಿಲ್ಲವಲ್ಲ ಎಂದು ಹಲಹಳಿಕೆಯಾಗುತ್ತಿದೆ. ನಿಮ್ಮ ಕೊನೆಯ ಮಾತುಗಳು ತುಂಬಾ ಸೂಕ್ತವಾಗಿವೆ, ವಿಚಾರಯೋಗ್ಯವಾಗಿವೆ.
Karibasappa nagavara
Apr 8, 2019” ತನ್ನನ್ನು ಗಂಧದಂತೆ ತೇಯುವ ಸಂಸಾರಿಯಂತೆ ಧರ್ಮಜಾಗೃತಿಯಲ್ಲಿ ಸಮಾಜಕ್ಕಾಗಿ ದುಡಿದವರು ಅವರು. “ ಸಂಸಾರಿಗಳನ್ನು ಸನ್ಯಾಸಿಯೊಂದಿಗೆ ಹೋಲಿಕೆ ಮಾಡಿದ್ದು ಆಶ್ಚರ್ಯದ ಜೊತೆಗೆ ಆನಂದ ಕೊಟ್ಟಿತು. ಯಾರೂ ದೊಡ್ಡವರಲ್ಲ, ಬದುಕು ಎಲ್ಲರಿಗೂ ಸಮ. ನಿಮ್ಮ ಮಾತುಗಳಲ್ಲಿಯ ಕಳಕಳಿ ಗಮನಾರ್ಹವಾದುದು ತಾಯಿ.
ದೇವಕಿ ಗಾಣಾಪುರ
Apr 9, 2019ಮಗಳು ತಾಯಿಗಿಂತ ತಂದೆಯನ್ನು ಹೆಚ್ಚು ಪ್ರೀತಿಯಿಂದ ನೋಡುವಂತಿದೆ ನಿಮ್ಮ ಲೇಖನ. ಹಿನ್ನೆಲೆಯಲ್ಲಿ ಮಾತೆಯವರನ್ನು ಇಟ್ಟುಕೊಂಡು ಅಪ್ಪಾಜಿಯವರ ಒಡನಾಟವನ್ನು ಭಾವತುಂಬಿ ಬಣ್ಣಿಸಿರುವುದು ಇದಕ್ಕೆ ಸಾಕ್ಷಿ. ಮಧುರ ಬರವಣಿಗೆಯಲ್ಲಿ ನೋವು ಜಿನುಗುತ್ತದೆ.
rajappa patil
Apr 10, 2019ಕಣ್ಣಲ್ಲಿ ನೀರು ಬಂತು ಇಬ್ಬರ ಬಗ್ಗೆ ನೀವು ನೀಡಿದ ಚಿತ್ರಣ ಮನಮುಟ್ಟುವಂತಿದೆ. ಲಿಂಗಾನಂದ ಅಪ್ಪಗಳನ್ನು ಮೊದಲಿನಿಂದ ಕಂಡವನು ನಾನು, ಅವರ ನೆನಪುಗಳು ಮತ್ತೆ ಎದ್ದುಬಂದವು ತಾಯಿ.
ಮಹಾಲಿಂಗಪ್ಪ ಮೈಸೂರು
Apr 12, 2019ಲಿಂಗಾನಂದ ಅಪ್ಪಾಜಿಯವರ ಬಗೆಗೆ ಕೇಳಿದ್ದೆ, ಅವರ ಒಂದೆರಡು ಭಾಷಣಗಳ ತುಣುಕುಗಳನ್ನು ಯೂಟ್ಯೂಬಿನಲ್ಲಿ ನೋಡಿದ್ದೆ. ಈ ಲೇಖನದಲ್ಲಿ ಅವರನ್ನು ಹತ್ತಿರದಿಂದ ಕಂಡ ಅನುಭವವಾಯಿತು, ಅವರೊಂದು ದಂತಕಥೆ ಹಾಗೂ ಕೊನೆಯ ಭಾಗ ಬಹಳ ಚೆನ್ನಾಗಿದೆ, ಯೋಚಿಸಲು ಪ್ರೇರೇಪಿಸುವಂತಿದೆ. ಕಾಲಕ್ಕೆ ಅನುಗುಣವಾಗಿ ವ್ಯಕ್ತಿಗಳನ್ನು ನೋಡಬೇಕೆನ್ನುವುದು ನಿಜ ಅಕ್ಕಾವ್ರೆ.
ಡಾ. ಪಂಚಾಕ್ಷರಿ ಹಳೇಬೀಡು
Apr 15, 2019ಇಂದು ಬಸವ ಎಂದು ಹೇಳುವವರಲ್ಲಿ ಕನಿಷ್ಠ ೮೦% ನೇರವಾಗಿ ಅಥವಾ ಪರೋಕ್ಷವಾಗಿ ಲಿಂಗಾನಂದ ಅಪ್ಪಾಜಿಯವರ ಮತ್ತು ಮಾತಾಜಿಯವರ ಪ್ರವಚನಗಳಿಂದ ಪ್ರಭಾವಿತರಾಗಿದ್ದಾರೆ. ಅವರ ನಿರ್ಗಮನ ಬಸವಾಭಿಮಾನಿಗಳಲ್ಲಿ ನಿರ್ವಾತವನ್ನು ಸೃಷ್ಟಿಸಿದೆ. ತಮ್ಮ ಲೇಖನ ನಮ್ಮನ್ನು ಅವರೀರ್ವರ ಬಳಿಗೆ ನೇರವಾಗಿ ಕೊಂಡೊಯ್ದಂತಾ ಅನುಭವವಾಯ್ತು.
dr.basappa
Apr 17, 2019ಡಾ.ಬಸಪ್ಪ ಕವಲೂರು
ಮಾತೆಮಹಾದೇವಿ ಹಾಗೂ ಲಿಂಗಾನಂದರನ್ನು ಹತ್ತಿರದಿಂದ ನೋಡಿದವರಲ್ಲಿ ನಾನೂ ಒಬ್ಬ. ಲಿಂಗಾನಂದ ಸ್ವಾಮೀಜಿ ಹುಟ್ಟು ಹಾಕಿದ ಚಳುವಳಿ ನಭೂತೋ…. ಎನ್ನುವಂತದುದು. ಅವರು ಹುಟ್ಟು ಹೋರಾಟಗಾರರು, ಅವರ ಎಲ್ಲ ಆಶೋತ್ತರಗಳು ಈಡೇರಬೇಕಾಗಿದ್ದವು. ನನ್ನ ಬದುಕಿನ ಮೇಲೆ ಅವರ ಪ್ರಭಾವ ಅಗಾಧವಾಗಿತ್ತು. ನಿಮ್ಮ ಭಾವನೆಗಳನ್ನು ಗೌರವಿಸುತ್ತೇನೆ.
Shambhulingaiah
Apr 17, 2019ಸುಂದರ ಸಮತೋಲನದ ನುಡಿಕಾಣಿಕೆ. ಅಪ್ಪಾಜಿ ನಿಮ್ಮ ಮೇಲೆ ತುಂಬಾ ಪ್ರೀತಿ-ಮಮತೆ ಇಟ್ಟಿದ್ದರು. ಅವರ ಕನಸುಗಳನ್ನು ನೀವು ಎಲ್ಲಿದ್ದರೂ ಈಡೇರಿಸುವ ಶಕ್ತಿ ದೇವರು ದಯಪಾಲಿಸಲಿ. ತಂದೆಯ ಬಗೆಗೆ ಮಗಳ ಹೃದಯಸ್ಪರ್ಶಿ ನೆನಪು, ಮಧುರ ನೆನಪೇ.
ರಾವಂದೂರು ಶಿವಕುಮಾರ
Apr 23, 2019ಅರ್ಥಪೂರ್ಣವಾದ ಲೇಖನ.
ಸನತಕುಮಾರ ಬೆಳಗಲಿ
Apr 28, 2019ತುಂಬಾ ಆಪ್ತವಾದ ಬರಹ. ಇಬ್ಬರ ವ್ಯಕ್ತಿತ್ವವನ್ನು ಆತ್ಮೀಯವಾಗಿ ಅನಾವರಣಗೊಳಿಸಿದ್ದೀರಿ. ಲಿಂಗಾನಂದ ಸ್ವಾಮೀಜಿ ನಮ್ಮ ಬಿಜಾಪುರ ಜಿಲ್ಲೆಯವರು, ಮೊದಲು ಕಮ್ಯೂನಿಸ್ಟರಾಗಿದ್ದವರು, ನಂತರ ಬಸವ ಜ್ಯೋತಿ ಹಿಡಿದು ಹೊರಟರು.