
ನಾನುವಿನ ಉಪಟಳ
ಕಣ್ಣಪಾಪೆಯಲಿ ನಾನವಿತು
ಕುಳಿತಿರಲು
ಕಾಣುವ ನೋಟಗಳಿಗೆ
ಲೆಕ್ಕ ಹಾಕುವರಾರು?
ತಲೆಯೊಳಗೆ ನಾನೆಂಬುದು
ತತ್ತಿ ಇಟ್ಟಿರುವಾಗ
ಬರುವ ಯೋಚನೆಗಳನು
ಎಣಿಸಿದವರಾರು?
ಮನದ ಮೂಲೆಮೂಲೆಯಲು
ನಾನೇ ಮಲಗಿರುವಾಗ
ಜಗದ ಸೊಬಗಿಗೆ
ಜಾಗವೆಲ್ಲಿಹುದು?
ಮೌನದ ಬಲೆಯೊಳಗೂ
ಸ್ವಗತಗಳೇ ತುಂಬಿರಲು
ಖಾಲಿಯಾಗುವ ಗಳಿಗೆ
ಬರುವುದುಂಟೇನು?
ನಾಲಿಗೆಯ ತುಂಬೆಲ್ಲ
ರುಚಿಗಳೇ ಮೆತ್ತಿರಲು
ಸಹಜತೆಯ ಸವಿಯದಕೆ
ತಿಳಿದಿತೇನು?
ನೋಟ- ಕೂಟಗಳು
ಜೊತೆಯಾಗಿ ಎಳೆಯಲು
ಬಾಳ ಬಂಡಿಯು ತನ್ನ
ಗುರಿ ಸೇರುವುದೇನು?
ಕಾಗದದ ದೋಣಿಯನೇ
ನಾನೆಂದುಕೊಂಡಾಗ
ಭವದಲೆಯ ಹೊಡೆತವನು
ತಡೆಯಲಾದೀತೆ?
ತಾ ಬರಿಯ ಗಾಳಿಪಟ
ಸೂತ್ರ ಇನ್ನಾರೋ
ಎಂದುಕೊಂಡಂತೆ ಹಾರು ಹಕ್ಕಿ
ಅಹಮಿಕೆಯ ಅರಮನೆಯೇ
ನನ್ನದೆನುವಾಗ
ಇರುವಿಕೆಯ ಆಗಸಕೆ
ಹಾರಲಾದೀತೇ?
ತನ್ನದಲ್ಲದ ತನುವಿನಲಿ
ಕೋಟೆಯೊಳು ಕೋಟೆ ಕಟ್ಟಿ
ಕಾಮಿಸುತಾ ಕಲ್ಪಿಸುತಾ
ಒಡೆತನ ಸಾಧಿಸಿಹ
ಮನದ ಮುಖ ಕಳಚದೆ
ಅಹಮಿಕೆ ಕರಗದು
ಅಂತರಂಗ ಕಾಣದು
ನಾನು ಮರೆಯಾಗದು…
Comments 1
Padmalaya
Dec 13, 2024ಬಿಡಾಕಾಗದಿದ್ದರೆ ಪೂಜೆ ಮಾಡಬಹುದು…