
ನನ್ನ ಬುದ್ಧ ಮಹಾಗುರು
ನನ್ನ ಬುದ್ಧ ಮಹಾಗುರುವು…
ಧರ್ಮವಲ್ಲ ದೈವವಲ್ಲ
ನುಡಿಯಲ್ಲ ಪಡಿಯಲ್ಲ
ವಿಗ್ರಹವಲ್ಲ ಅನುಗ್ರಹವಲ್ಲ
ಸಂಭ್ರಮವಲ್ಲ ಉತ್ಸವವಲ್ಲ
ಸುಖವಲ್ಲ ದುಃಖವಲ್ಲ
ವಾದವಲ್ಲ ಬೇಧವಲ್ಲ
ಮಂತ್ರವಲ್ಲ ತಂತ್ರವಲ್ಲ
ಮಾನಾವಮಾನ ಅಲ್ಲವೇ ಅಲ್ಲ!
ನನ್ನ ಬುದ್ಧ ಮಹಾಗುರುವೆಂದರೆ
ಕಥೆಯಲ್ಲ ವ್ಯಥೆಯಲ್ಲ
ಜಾತಿಯಲ್ಲ ಜ್ಯೋತಿಯಲ್ಲ
ಬೆಡಗಲ್ಲ ಬೆರಗಲ್ಲ
ಜನುಮವಲ್ಲ ಜರೆಯಲ್ಲ
ಕೋಪವಲ್ಲ ತಾಪವಲ್ಲ
ರೂಪವಲ್ಲ ನೋಟವಲ್ಲ
ಅನ್ಯವಲ್ಲ ಅನನ್ಯವಲ್ಲ
ಧ್ಯಾನವಲ್ಲ ಧಾತನಲ್ಲ
ಅವ ಲೋಕಪರ ನಿರಂತರ…
ನನ್ನ ಬುದ್ಧಮಹಾಗುರುವು…
ಅಲ್ಲಮನ ಅಲ್ಲಗಳಲಿ
ಬಸವಣ್ಣನ ತಾಯ್ಗರುಳ ಸಂಬಂಧದಲಿ
ವೇಮನನ ವಿಮಲ ಪ್ರಜ್ಞೆಯಲಿ
ಸೂಫಿಗಳ ನಡೆಸಾರದಲಿ
ಕಬೀರನ ಕರೆಗಳಲಿ
ತಾವೋನ ತಾವಲ್ಲದ ತಾವಿನಲಿ
ಮಂಟೇದಯ್ಯನ ನೀಲಿ ಗ್ಯಾನದಲಿ
ಬಾಬಾಸಾಹೇಬರ ಮಹಾಕರುಣೆಯಲಿ
ಸದಾ ಎಚ್ಚರದಿ ಎಚ್ಚೆತ್ತುಕೊಂಡಿಹನು!!!
ಆದರೆ…
ತಪ್ಪು ನುಡಿವ ಕರ್ಮಿಯಾಗಿಹ
ಜಾತಿಬಿಡದ ನೀಚನಾಗಿಹ
ಸಂಗ್ರಹೇಚ್ಚೆಗೆ ಜಾರಿಕೊಂಡಿಹ
ನಾ ಮೇಲೆನುವ ಮದಾಂಧನಾಗಿಹ
ನನ್ನ ನಾ ಕಲ್ಪಿಸಿಕೊಳ್ಳುತ್ತಿರುವ
ನನ್ನ ನಾ ಸುಖಿಸುತ್ತಿರುವ
ನನ್ನೊಳು ನಾ ಚದುರಿಹೋಗಿರುವ
ನನ್ನೊಳು ಹುಡುಕಲು ಆತ ಎಲ್ಲಿಹನು?
Comments 6
Mahantesh Mysuru
Jan 6, 2020ಬುದ್ದ ಮಹಾಗುರು ಕವನ ತುಂಬಾ ಚನ್ನಾಗಿದೆ. ಮತ್ತೆ ಮತ್ತೆ ಮನನ ಮಾಡುವಂತಿದೆ. ರೂಪವಲ್ಲ ನೋಟವಲ್ಲ, ಅನ್ಯವಲ್ಲ ಅನನ್ಯವಲ್ಲ, ಧ್ಯಾನವಲ್ಲ ಧಾತನಲ್ಲ… ಸಾಲುಗಳು ಬಹಳ ಸೊಗಸಾಗಿವೆ.
ಶಿವಕುಮಾರ್ ಸಾಲಿ
Jan 8, 2020ಬುದ್ದನಂತಹ ಜ್ಞಾನಿಯನ್ನು ನಿಜಕ್ಕೂ ಎಲ್ಲೆಲ್ಲಿ ಕಾಣಬೇಕೆಂದು ಸೂಚಿಸಿದ ಶರಣ ನಾಗರಾಜವರಿಗೆ ವಂದನೆಗಳು
Chetan M.P
Jan 9, 2020ಕವನದ ಒಂದೊಂದು ಪದವೂ ಮನನಯೋಗ್ಯ
Dinesh P
Jan 14, 2020ಬುದ್ಧನನ್ನ ಬದುಕಿನಲ್ಲಿ ಕಾಣುವ ಸುಂದರ ಪರಿಕಲ್ಪನೆ.
Jayaraj Bidar
Jan 16, 2020ಬುದ್ದನನ್ನು ಎಲ್ಲಿ, ಹೇಗೆ ಹುಡುಕಿಕೊಳ್ಳಬೇಕೆಂದು ಗೊತ್ತಾಯಿತು. ಬುದ್ದನ ಜಾಗದಲ್ಲಿ ಬಸವನ ಹೆಸರು ಹಾಕಿದರೂ ಕವನಕ್ಕೆ ಚ್ಯುತಿ ಬರುವುದಿಲ್ಲ. ಮಹಾತ್ಮರನ್ನು ಹೀಗೇ ಹುಡುಕಿಕೊಳ್ಳಬೇಕು.
Chinmayi
May 15, 2021ಬುದ್ದ ಬುದ್ದನಿಗೇ ಸರಿ