ದೇವರಲ್ಲಿ ಬೇಡುವ ವರ: ಲಿಂಗಭಕ್ತಿ-ಜಂಗಮಪ್ರೇಮ
ಜ ಎಂದಲ್ಲಿ ಜನನ ನಾಸ್ತಿಯಾಗಿ,
ಗ ಎಂದಲ್ಲಿ ಗಮನ ನಾಸ್ತಿಯಾಗಿ,
ಮ ಎಂದಲ್ಲಿ ಮರಣ ನಾಸ್ತಿಯಾಗಿ,
ಅರಿತು ತಿರುಗುವುದು ಸ್ವಯ ಚರ ಪರವಲ್ಲದೆ,
ಕೂಟಕ್ಕೆ ನೆರೆದ ಅಗುಳಾಸೆಯ ವಿಹಂಗಮನಂತಾಗಬೇಡ.
ತ್ರಿವಿಧಾಕ್ಷರವ ತ್ರಿಗುಣದಲ್ಲಿ ಇರಿಸಿ ತ್ರಿಗುಣಕ್ಕೆ ಹೊರಗಾಗು.
ತ್ರಿಗುಣರಹಿತ ಸಗುಣಭರಿತನಾಗು.
ಅದ ನಿನ್ನ ನೀನರಿ, ಲಿಂಗ ಜಂಗಮವೆ
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
ಕೋಲಶಾಂತಯ್ಯನವರು ಜಂಗಮ ಪದಕ್ಕೆ ವಿಶಿಷ್ಟ ಅರ್ಥ ನೀಡಿದ್ದಾರೆ. ವಾಸ್ತವವಾಗಿ ಜಂಗಮ ಎಂದರೆ ಭಕ್ತರ ಮನೆಯ ಹವ್ಯಕವ್ಯ ತೀರಿಸುವವರು, ವಂಶಪಾರಂಪರ್ಯವಾಗಿ ಬಂದವರು ಎನ್ನುವ ಭಾವನೆ ಇದೆ. ಜಂಗಮರದೇ ಒಂದು ಜಾತಿ, ಅವರು ಇತರರಿಗಿಂತ ಶ್ರೇಷ್ಠರು ಎನ್ನುವ ಭ್ರಮೆ ಜಂಗಮರಿಗೆ ಮತ್ತು ಅವರನ್ನು ಜಂಗಮರೆಂದು ತಮ್ಮ ಮನೆಯ ಕಾರ್ಯಗಳಿಗೆ ಆಹ್ವಾನಿಸುವವರಿಗೆ ಇದ್ದೇ ಇರುವುದು. ಅಂಥ ಭ್ರಮೆಯನ್ನು ಹೋಗಲಾಡಿಸಿದ್ದಾರೆ ಈ ವಚನದಲ್ಲಿ. ಜಂಗಮ ಎನ್ನುವುದು ಒಂದು ತತ್ವ. ಅದು ಸದಾ ಚಲನಶೀಲವಾದುದು. ಅದಕ್ಕೆ ನಾಶ ಎಂಬುದೇ ಇಲ್ಲ. ಅಂಥ ತತ್ವ ಜನನ, ಗಮನ, ಮರಣಕ್ಕೆ ಅತೀತವಾದ ಶಿವ ಚೈತನ್ಯ. ಅಂಥ ಚೈತನ್ಯವನ್ನು ಅರ್ಥಮಾಡಿಕೊಂಡು ಆ ತತ್ವವನ್ನು ಮೈಗೂಡಿಸಿಕೊಂಡ ವ್ಯಕ್ತಿ ಯಾರೇ ಆದರೂ ಜಂಗಮ ಆಗಲು ಸಾಧ್ಯ. ಜಂಗಮತ್ವ ಜಾತಿಯಿಂದ, ಹುಟ್ಟಿನಿಂದ ಬರುವಂತಹುದಲ್ಲ. ಜಂಗಮ ತತ್ವಕ್ಕೆ ಲಿಂಗಭೇದವೂ ಇಲ್ಲ. ಜಾತಿ, ಲಿಂಗ, ವಂಶ ಎನ್ನುವುದು `ಜಂಗಮ’ ತತ್ವದಲ್ಲಿ ಬಂದರೆ ಅವರು ಒಂದೊಂದು ಅಗುಳು ಆಹಾರಕ್ಕಾಗಿ ಸುತ್ತುವ ಪಕ್ಷಿಯಂತಾಗುವರು ಎಂದು ವಿಡಂಬಿಸುವ ಮೂಲಕ ಜಂಗಮ ತ್ರಿಗುಣರಹಿತವಾಗಿರಬೇಕು ಎನ್ನುವರು. ಬಸವಣ್ಣನವರನ್ನು ಜಂಗಮಪ್ರಾಣಿ ಎಂದೇ ಕರೆಯಲಾಗುವುದು. ಜಂಗಮಪ್ರಾಣಿ ಎಂದರೆ ಎಲ್ಲರನ್ನೂ ಗೌರವಿಸುವ, ಪ್ರೀತಿಸುವ, ಸಕಲ ಜೀವಾತ್ಮರ ಒಳಿತು ಬಯಸುವ ವ್ಯಕ್ತಿ ಎಂದು ಅರ್ಥ. ಲಿಂಗಪ್ರೇಮಿಯಾಗುವುದು ಸುಲಭ, ಜಂಗಮಪ್ರೇಮಿಯಾಗುವುದು ಕಡುಕಷ್ಟ. ಲಿಂಗ ಬೇಡದು, ಕಾಡದು, ಕಿರುಕುಳ ನೀಡದು. ಆದರೆ ಜಂಗಮ ಹಾಗಲ್ಲ. ಸಂದರ್ಭಾನುಸಾರವಾಗಿ ಬೇಡಬಹುದು, ಕಾಡಬಹುದು, ಕಿರುಕುಳ ನೀಡಬಹುದು. ಜಂಗಮ ಕಾಡುವಲ್ಲಿ, ಬೇಡುವಲ್ಲಿ, ಕಿರುಕುಳ ನೀಡುವಲ್ಲಿ ಸದುದ್ದೇಶ ಇರುವುದನ್ನು ಗಮನಿಸಬೇಕು. ಬಸವಣ್ಣನವರು ಜಂಗಮಪ್ರಾಣಿಯಾಗಿ ಸಕಲ ಜೀವಾತ್ಮರಿಗೆ ಒಳಿತನ್ನು ಬಯಸಿದವರು. ಅವರು ಜಂಗಮವೇ ಲಿಂಗ ಎಂದರೆ ಜನರನ್ನೇ ದೇವರೆಂದು ಭಾವಿಸಿದ್ದರು. ತಮ್ಮಂತೆಯೇ ಇತರರು ಎನ್ನುವ ಹೃದಯ ವೈಶಾಲ್ಯತೆ ಅವರದಾಗಿತ್ತು. ಹಾಗಾಗಿ ಅವರನ್ನು ಜಂಗಮಸ್ವರೂಪಿ ಎಂದು ಗೌರವಿಸಿದ್ದು ಸ್ವಾಗತಾರ್ಹ.
ಮನುಷ್ಯ ಯಾವಾಗಲೂ ಸಮಾಜಕ್ಕಾಗಿ ಏನು ಕೊಡುಗೆ ನೀಡಬೇಕು ಎಂದು ಚಿಂತನೆ ಮಾಡಿ ಸಾಧ್ಯವಾದ ಸತ್ಕಾರ್ಯಗಳನ್ನು ಮಾಡುತ್ತಿರಬೇಕು. ನಾವೆಲ್ಲರೂ ಬಸವಾದಿ ಶಿವಶರಣರ ಪರಂಪರೆಯಲ್ಲಿ ಬಂದವರು. ಅವರು ಬಾಳಿದಂತೆ ಬಾಳಬೇಕಾದ್ದು ನಮ್ಮ ಪರಂಪರೆಗೆ ಸಲ್ಲಿಸುವ ಗೌರವ. ಮನುಷ್ಯ ಇರುವಷ್ಟು ಕಾಲ ನಕಾರಾತ್ಮಕ ಭಾವನೆ ಬಿಟ್ಟು ಸಕಾರಾತ್ಮಕ ಭಾವನೆ ಬೆಳೆಸಿಕೊಂಡು ಸತ್ಕ್ರಿಯೆಯಲ್ಲಿ ದೇಹ, ಮನಸ್ಸು, ಬುದ್ಧಿಯನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಬದುಕಿಗೆ ಕೃಷಿ, ಶಿಕ್ಷಣ, ಆಡಳಿತ, ಆರ್ಥಿಕತೆ, ಆರೋಗ್ಯ, ನೈತಿಕ ಮೌಲ್ಯ, ಪರಿಸರ ಸಂರಕ್ಷಣೆ ಇಂಥವುಗಳು ಬೇಕೇ ಬೇಕು. ಈ ಕ್ಷೇತ್ರದಲ್ಲಿ ವ್ಯಕ್ತಿ ಮಾಡಬೇಕಾದದ್ದೇನು ಎಂದು ಪ್ರಶ್ನಿಸಿಕೊಂಡು ಎಷ್ಟು ಸಾಧ್ಯವೋ ಅಷ್ಟು ಕೊಡುಗೆಯನ್ನು ಆಯಾಕ್ಷೇತ್ರಕ್ಕೆ ಕೊಡುವ ಸಂಕಲ್ಪ ತಳೆಯಬೇಕು. ಆ ಸಂದರ್ಭದಲ್ಲಿ ನಾನು ಎನ್ನುವ ಅಹಂ ಹೆಡೆಯಾಡದಂತೆ ಎಚ್ಚರವಹಿಸಬೇಕು. ಅಷ್ಟೆಲ್ಲ ಸಾಧನೆ ಮಾಡಲು ನನ್ನಿಂದ ಸಾಧ್ಯವೇ ಎನ್ನುವ ಭಯ, ಸಿನಿಕತನ, ಅನುಮಾನವನ್ನು ಕಿತ್ತೆಸೆಯಬೇಕು. ಆಯಾ ಕ್ಷೇತ್ರದಲ್ಲಿ ಕಿಂಚಿತ್ ಸೇವೆಯನ್ನು ಮಾಡುವೆ ಎನ್ನುವ ಛಲ ಮತ್ತು ಮನೋಬಲ ಬೆಳೆಸಿಕೊಳ್ಳಬೇಕು. ಸಾಮಾನ್ಯವಾಗಿ ಯೋಚನೆಗಳು ಜಗತ್ತನ್ನು ಆಳುತ್ತವೆ. ಕಲ್ಯಾಣ ರಾಜ್ಯದ ಸತ್ಚಿಂತನೆಯೇ ಇಲ್ಲದಿದ್ದರೆ ಕಲ್ಯಾಣದ ಕನಸು ನನಸಾಗದು. ಹಾಗಾಗಿ ಸತ್ಚಿಂತನೆಯ ಜೊತೆಗೆ ನಾನು ಎನ್ನುವುದನ್ನು ಬಿಟ್ಟು ನಾವು ಎನ್ನುವುದನ್ನು ವಿಸ್ತರಿಸಿಕೊಳ್ಳಬೇಕು. ಮನುಷ್ಯ ಸರಿಯಾದರೆ ಸಮಾಜ ಸರಿಯಾಗುವುದು. ಮನುಷ್ಯ ಜಾತಿ, ಲಿಂಗ, ಅಧಿಕಾರ, ಸಂಪತ್ತು ಹೀಗೇ ಏನೇನೋ ಕೆಸರಿನಲ್ಲಿ ಸಿಕ್ಕು ಒದ್ದಾಡುತ್ತಿದ್ದಾನೆ. ಆ ಕೆಸರಿನಿಂದ ಹೊರಬರುವ ಪ್ರಯತ್ನ ಬಹುಮುಖ್ಯ. ಅದಕ್ಕೆ ಬೇಕಾದ್ದು ನಿಸ್ವಾರ್ಥ, ನಿರ್ಭಯ, ನಿರಹಂಕಾರ, ಜಂಗಮಪ್ರೇಮ, ನಿರಂತರ ಪ್ರಯತ್ನ; ಜೊತೆಗೆ ಆತ್ಮಕಲ್ಯಾಣ, ಲೋಕಕಲ್ಯಾಣದ ಚಿಂತನೆ. ಈ ನೆಲೆಯಲ್ಲಿ ಸತ್ಚಿಂತನೆ ಮಾಡುತ್ತ ಅದನ್ನು ಅನುಷ್ಠಾನದಲ್ಲಿ ತರಲು ಒಂದೊಂದೇ ಹೆಜ್ಜೆಗಳನ್ನಿಡುತ್ತಿದ್ದರೆ ಅಸಾಧ್ಯವೂ ಸಾಧ್ಯವಾಗುವುದು.
ಮೊದಲೇ ಹೇಳಿದಂತೆ ಜಂಗಮ ಒಬ್ಬ ವ್ಯಕ್ತಿ, ಒಂದು ತತ್ವ, ಜನನ ಮರಣ ರಹಿತವಾದುದು, ದೇವರು ಎಂದೆಲ್ಲಾ ಅರ್ಥಗಳಿವೆ. ಸಂದರ್ಭಕ್ಕನುಗುಣವಾಗಿ ಅದು ತನ್ನ ಅರ್ಥವನ್ನು ವಿಸ್ತರಿಸಿಕೊಳ್ಳುವುದು. ಸರಳವಾಗಿ ಹೇಳಬೇಕೆಂದರೆ ಅರಿವು, ಆಚಾರ ಒಂದಾದದ್ದು ಜಂಗಮ. ಬಸವಣ್ಣನವರು `ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ’ ಎಂದಿದ್ದಾರೆ. ಪಂಚೇಂದ್ರಿಯಗಳಿಗೆ ಸಿಲುಕುವುದೆಲ್ಲವೂ ಸ್ಥಾವರ. ಈ ಇಂದ್ರಿಯಗಳನ್ನು ಹೊರತುಪಡಿಸಿ ಆತ್ಮಾವಲೋಕನಕ್ಕೆ ದಾರಿ ಮಾಡಿಕೊಡುವಂತಹುದು ಜಂಗಮ. ಪ್ರೀತಿ, ನೀತಿ, ವಿಶ್ವಾಸ, ಸಂತೋಷ, ವಾತ್ಸಲ್ಯ, ಕರುಣೆ, ದಯೆ, ಕುತೂಹಲ, ಸಹಕಾರ ಇಂಥ ಮೌಲ್ಯಗಳೆಲ್ಲವೂ ಜಂಗಮ. ಈ ಮೌಲ್ಯಗಳಿಗೆ ಅಳಿವಿಲ್ಲ. ಪಂಚೇಂದ್ರಿಯಗಳಿಗೆ ಸಿಲುಕುವ, ನಿಲುಕುವ ಪ್ರತಿಯೊಂದಕ್ಕೂ ಅಳಿವಿದೆ. ವ್ಯಕ್ತಿ ಜಂಗಮದಿಂದಲೇ ಸ್ಥಾವರದ ಕಡೆಗೆ ಹೆಜ್ಜೆ ಹಾಕುವನು. ಸ್ಥಾವರ ನಾಶವಾಗುತ್ತದೆ. ಮಾತಿನಿಂದಲೇ ಎಲ್ಲವೂ ಸೃಷ್ಟಿಯಾಗುವುದು. ಒಳ್ಳೆಯದನ್ನು ಮಾತನಾಡಿದರೆ ಒಳ್ಳೆಯದೇ ಸೃಷ್ಟಿಯಾಗುವುದು. ಇದು ಆಗುವುದಿಲ್ಲ, ಇದು ಒಳ್ಳೆಯದಲ್ಲ, ಇದು ಸರಿಯಿಲ್ಲ ಎನ್ನುತ್ತಿದ್ದರೆ ಅದರಂತೆಯೇ ಆಗುವುದು. ಹಾಗಾಗಿ ಒಳ್ಳೆಯದನ್ನೇ ಆಡುವ ಮೂಲಕ ಏನು ಬೇಕಾದರೂ ಒಳಿತನ್ನು ಮಾಡಬಹುದು. ಅದು ಕಾರಣವೇ ಬಸವಣ್ಣನವರು ಆಡುವ ಮಾತುಗಳು ಮುತ್ತಿನ ಹಾರದಂತೆ, ಮಾಣಿಕ್ಯದ ದೀಪ್ತಿಯಂತೆ, ಸ್ಫಟಿಕದ ಸಲಾಕೆಯಂತೆ, ಲಿಂಗಮೆಚ್ಚಿ ಅಹುದಹುದು ಎನ್ನುವಂತೆ ಇರಬೇಕು ಎಂದಿದ್ದಾರೆ. ಆದರ್ಶ ಸಮಾಜ ನಿರ್ಮಾಣದ ಕಡೆ ನಡೆಯುವ ಮನಸ್ಥಿತಿಯೇ ಜಂಗಮ. ಬಸವಾದಿ ಶಿವಶರಣರು ಅದನ್ನೇ ತಮ್ಮ ಬದುಕಿನ ಅವಧಿಯಲ್ಲಿ ಮಾಡಿದ್ದು.
ಜಂಗಮ ಎನ್ನುವುದು ಶಕ್ತಿ. ಅದು ಸಂಚಾರ ಮಾಡುವಂತಹುದು. ಸ್ಥಾವರಕ್ಕೆ ಚೈತನ್ಯ ಬರಬೇಕು ಎಂದರೆ ಜಂಗಮದ ನೆರವು ಬೇಕೇ ಬೇಕು. ವ್ಯಕ್ತಿ ಮಾಡುವ ಕಾಯಕದಿಂದ ಆತನಿಗೂ ಒಳ್ಳೆಯದಾಗಬೇಕು, ಇತರರಿಗೂ ಒಳ್ಳೆಯದಾಗಬೇಕು. ಈ ಭಾವ ಬಲಗೊಂಡರೆ ಅದು ಸಹ ಜಂಗಮಸ್ಥಿತಿ. ಕಲೆ, ಸಾಹಿತ್ಯ, ಸಂಗೀತ, ಧರ್ಮ, ಸಂಸ್ಕೃತಿ ಇವುಗಳ ಅಭಿವೃದ್ಧಿಗೆ ಸದಾ ತುಡಿಯುತ್ತಿದ್ದ ವ್ಯಕ್ತಿ ಅಥವಾ ಸಂಘಟನೆಯಲ್ಲಿ ಸ್ವಲ್ಪ ಹಿಂಜರಿಕೆಯಾದರೂ ಇಡೀ ವ್ಯವಸ್ಥೆಯೇ ಸ್ಥಾವರವಾಗಿಬಿಡಬಹುದು. ಅದನ್ನು ಮತ್ತೆ ಕ್ರಿಯಾಶೀಲಗೊಳಿಸುವ, ಪುನಶ್ಚೇತನ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದೇ ಜಂಗಮದ ಕಾರ್ಯ. ಸದಾಲೋಚನೆ, ಸತ್ಕಾರ್ಯಗಳನ್ನು ಮಾಡುತ್ತಿದ್ದರೆ ವ್ಯಕ್ತಿಗೆ ಸಂತೋಷವಾಗುವುದಲ್ಲದೆ ಸಮಾಜಕ್ಕೂ ಒಳಿತಾಗುವುದು. ಕೆಲವರನ್ನು ದಾರಿ ತಪ್ಪಿಸುವ ಅಂಶಗಳೇ ಹೊಗಳಿಕೆ. ಉದಾ: ಅವರು ಅವಿರಳ ಜ್ಞಾನಿ, ಅನುಭಾವಿ, ಆಧುನಿಕ ಬಸವಣ್ಣ ಎಂದೆಲ್ಲ ಹೊಗಳುತ್ತಿದ್ದರೆ ಅವೇ ಅವರನ್ನು ದಾರಿತಪ್ಪಿಸಬಹುದು. ಹಾಗಾಗಿ ಪದಗಳ ಬಳಕೆ ಮಾಡುವಾಗ, ಹೊಗಳುವಾಗ ಎಚ್ಚರಿಕೆ ಇರಬೇಕು. ಇಲ್ಲವಾದರೆ ಹೊಗಳಿಸಿಕೊಂಡವರು ಜಂಗಮಸ್ಥಿತಿ ಉಳಿಸಿಕೊಳ್ಳದೆ ಸ್ಥಾವರವಾಗಿ ಇಲ್ಲವೇ ಅಹಂಕಾರಿಯಾಗಿ ಸಮಾಜದ ವಿಘಟನೆಗೂ ಕಾರಣವಾಗಬಹುದು.
ಸ್ಥಾವರ ಮತ್ತು ಜಂಗಮ ಎನ್ನುವ ತತ್ವಗಳು ಆಯಾ ವ್ಯಕ್ತಿಗಳ ಮನಸ್ಥಿತಿಯೂ ಹೌದು. ವ್ಯಕ್ತಿ ನಿರಂತರ ಕ್ರಿಯಾಶೀಲನಾಗಿದ್ದರೆ ಆತನೇ ಜಂಗಮ. ಬದಲಾಗಿ ಜೋಬದ್ರಗೇಡಿಯಾಗಿದ್ದರೆ, ಜಡಜೀವಿಯಂತೆ ಬಾಳಿದರೆ ಅವನೇ ಸ್ಥಾವರ. ನೀರು ಸ್ಥಾವರವೂ ಆಗಬಲ್ಲುದು, ಜಂಗಮವೂ ಆಗಬಲ್ಲುದು. ನೀರು ನಿರಂತರವಾಗಿ ಹರಿಯುತ್ತಿದ್ದರೆ ಶುದ್ಧಿಯನ್ನು ಕಾಯ್ದುಕೊಂಡು ಜಂಗಮವಾಗುವುದು. ನಿಂತಲ್ಲಿಯೇ ನಿಂತರೆ ಮಲೆತು ಅಶುದ್ಧವಾಗಿ ಸ್ಥಾವರ ಎನಿಸಿಕೊಳ್ಳುವುದು. ಇದೇ ರೀತಿ ಜಂಗಮ ಮತ್ತು ಸ್ಥಾವರ ಮನುಷ್ಯನ ಸ್ವಭಾವಕ್ಕೆ ಸಂಬಂಧಪಟ್ಟವು. ಕೆಲವು ಯುವಕರನ್ನು ನೋಡಿದರೆ ವಯಸ್ಸಾದ ಮುದುಕರಂತೆ ಕಾಣುವರು. ಕೆಲವು ವಯೋವೃದ್ಧರು ಯುವಕರನ್ನು ನಾಚಿಸುವಷ್ಟು ಲವಲವಿಕೆಯಿಂದ ಕ್ರಿಯಾಶೀಲರಾಗಿರುವರು. ಇವರಲ್ಲಿ ಯಾರು ಜಂಗಮ? ಯಾರು ಸ್ಥಾವರ? ಈ ನಿಟ್ಟಿನಲ್ಲಿ ಗಂಭೀರ ಚಿಂತನ ಮಂಥನ ನಡೆಯಬೇಕಾಗಿದೆ. ಮನುಷ್ಯ ಬದುಕಿದಷ್ಟು ಕಾಲ ಶಾಂತಿ, ನೆಮ್ಮದಿ, ನೈತಿಕ ಮೌಲ್ಯಗಳನ್ನು ಕಾಪಾಡಿಕೊಂಡರೆ ಅದೇ ಜಂಗಮಸ್ಥಿತಿ.
ಆಡುತ್ತ ಹಾಡುತ್ತ ಭಕ್ತಿಯ ಮಾಡಬಹುದು ಲಿಂಗಕ್ಕೆ;
ಅದು ಬೇಡದು, ಬೆಸಗೊಳ್ಳದು,
ತಂದೊಮ್ಮೆ ನೀಡಬಹುದು.
ಕಾಡುವ ಬೇಡುವ ಜಂಗಮ ಬಂದಡೆ,
ನೀಡಲುಬಾರದು ಕೂಡಲಸಂಗಮದೇವಾ.
ಜಂಗಮ ಸೇವೆ ಅಷ್ಟು ಸುಲಭ ಅಲ್ಲ ಎಂದು ಬಸವಣ್ಣನವರು ಹೇಳಿದ್ದಾರೆ. ಲಿಂಗಪೂಜೆ ಮಾಡುವುದು ಸುಲಭ. ವಚನಗಳನ್ನು ಹಾಡುತ್ತ, ಭಾವುಕರಾಗಿ ಕುಣಿಯುತ್ತ ಲಿಂಗಕ್ಕೆ ಭಕ್ತಿಯನ್ನು ಸಲ್ಲಿಸಬಹುದು. ಏಕೆಂದರೆ ಅದು ಬೇಡುವುದಿಲ್ಲ, ಬೇಸರಗೊಳ್ಳುವುದಿಲ್ಲ. ಅದಕ್ಕೆ ಒಮ್ಮೆ ನೀಡಿದರೆ ಸಾಕು. ಅದೇ ಜಂಗಮ ಕಾಡುವ, ಬೇಡುವ ಲಕ್ಷಣವುಳ್ಳುದು. ಜಂಗಮ ಸೇವೆ ನಿಜಕ್ಕೂ ಒಂದು ಸವಾಲು. ಜಂಗಮ ಸೇವೆ ಒಂದು ಸಾಧನೆ. ಅದು ಒಳಿತಿನ ಕಡೆಗೆ ಸದಾ ತುಡಿಯುವಂತೆ ಮಾಡುವುದು. ಕಠಿಣ ಎಂದರೂ ಅವರು ಜಂಗಮಸೇವೆಯನ್ನು ಸಂತೋಷದಿಂದ ಸ್ವಾಗತಿಸುವರು. ಬಸವಣ್ಣನವರನ್ನು ಜಂಗಮ ಪ್ರೇಮಿ ಎನ್ನುವ ಭರಾಟೆಯಲ್ಲಿ ಅವರನ್ನು ಹುಂಬರಂತೆಯೂ ಚಿತ್ರಿಸಿರುವುದುಂಟು. ಹುಂಬ ಎಂದರೆ ವಿಚಾರಹೀನ. ಹರಿಹರ ಬಸವಣ್ಣನವರನ್ನು `ಜಂಗಮಪ್ರಾಣಿ’ ಎಂದಿದ್ದಾರೆ. ಜಂಗಮಪ್ರೇಮಿಯಾಗಿದ್ದ ಬಸವಣ್ಣನವರು ತಮ್ಮ ಮನೆಗೆ ಯಾರೇ ಬಂದರೂ ಅವರ ಬಯಕೆಗಳನ್ನೆಲ್ಲ ತೃಪ್ತಿಪಡಿಸುತ್ತಿದ್ದರು ಎಂದು ಹೇಳುವ ಉದ್ದೇಶ ಹರಿಹರನದು. ಅಲ್ಲಿ ಜಂಗಮ ಎಂದರೆ ತತ್ವಬದ್ಧ ಜೀವಿ ಎಂದಲ್ಲ. ಬದಲಾಗಿ ವಂಶಪಾರಂಪರೆಯಿಂದ ಬಂದ ವ್ಯಕ್ತಿ ಎಂದು ಅರ್ಥವಾಗುವುದು. ಹಾಗಾಗಿ ತಮ್ಮ ಮಹಾಮನೆಗೆ ಯಾರೇ ಬಂದು ಏನನ್ನೇ ಕೇಳಿದರೂ ಅವರ ಬಯಕೆಯನ್ನು ತೃಪ್ತಿಪಡಿಸುವ ವ್ರತ ಬಸವಣ್ಣನವರದಾಗಿತ್ತು ಎನ್ನುವುದನ್ನು ಹೇಳುವುದು ಹರಿಹರನ ಉದ್ದೇಶ. ಬಸವಣ್ಣನವರ ಮನೆಗೆ ಒಬ್ಬ ಜಂಗಮ ಬರುವರು. ರಾತ್ರಿ ಪೂಜೆ ಪ್ರಸಾದ ಮುಗಿಸಿಕೊಂಡು ಅಲ್ಲೇ ತಂಗುವರು. ಆಗ ಅವರು ಹೇಳುವುದು: ಬಸವಣ್ಣ ನಾವು ಹೆಣ್ಮಕ್ಕಳಿಲ್ಲದೆ ಮಲಗುವುದಿಲ್ಲ ಎಂದು. ಅವರ ಬಯಕೆಯನ್ನು ನೆರವೇರಿಸಲು ಬಸವಣ್ಣನವರು ಇಡಿ ಕಲ್ಯಾಣಪಟ್ಟಣದಲ್ಲಿ ಹುಡುಕಿಸಿದರೂ ಒಬ್ಬ ವೇಶ್ಯೆಯೂ ಸಿಗುವುದಿಲ್ಲ. ಬೇರೆ ದಾರಿ ಕಾಣದೆ ತಮ್ಮ ಧರ್ಮಪತ್ನಿ ನೀಲಾಂಬಿಕೆಯವರನ್ನೇ ಆ ಜಂಗಮರ ಬಳಿ ಕಳಿಸುವರು. ಆ ತಾಯಿ ಬಸವಣ್ಣನವರ ಆದೇಶದಂತೆ ಜಂಗಮರ ಬಳಿ ಹೋದಾಗ ಜಂಗಮಯ್ಯ ಸಾಕ್ಷಾತ್ ಶಿವನಾಗಿದ್ದನಂತೆ. ಆಗ ನೀಲಾಂಬಿಕೆ ಒಳಗಿದ್ದ ಜಂಗಮ ಸಂಗಮನಾಥ ಎಂದು ಬಸವಣ್ಣನವರಿಗೆ ವರದಿ ಕೊಡುವಳು. ಅವರು ಸಂಗಮನಾಥ ಎಂದೇ ನಾನು ನಿನ್ನನ್ನು ಅವರ ಬಳಿ ಕಳಿಸಿದ್ದು ಎಂದು ಬಸವಣ್ಣ ಉತ್ತರಿಸುವರು. ಈ ರೀತಿ ಬಸವಣ್ಣ ಎಂದರೆ ಜಂಗಮಪ್ರಾಣಿ ಎಂದು ಚಿತ್ರಿಸಿರುವ ಹರಿಹರ ಬಸವಣ್ಣನವರ ಹಾಗೂ ನೀಲಾಂಬಿಕೆಯವರ ವ್ಯಕ್ತಿತ್ವಕ್ಕೆ ಅಪಚಾರ ಮಾಡುತ್ತಿದ್ದೇನೆ ಎನ್ನುವ ಅರಿವಿಲ್ಲದೆ ಅವರನ್ನೇ ಹುಂಬರನ್ನಾಗಿಸಿದ್ದಾರೆ ಎನಿಸುವುದು. ಇಂಥ ಚಿತ್ರಣವೇ ವೇಷಧಾರಿ ಜಂಗಮರ ಅನಾಚಾರಗಳಿಗೆ ಪ್ರೇರಣೆ ನೀಡುವುದು. ಅವರು ಸಮಾಜವನ್ನು ದುರ್ಬಳಕೆ ಮಾಡಿಕೊಳ್ಳಲು ಮುಂದಾಗುವರು. ವಾಸ್ತವವಾಗಿ ಜಂಗಮ ಎನ್ನುವುದು ವ್ಯಕ್ತಿಯಲ್ಲ, ಜಾತಿಯಲ್ಲ; ಅದು ಒಂದು ತತ್ವ. ಆ ತತ್ವವನ್ನು ಬದುಕಿನಲ್ಲಿ ಸಾಕಾರಗೊಳಿಸಿಕೊಂಡರೆ ಮಾತ್ರ ಆತ ಜಂಗಮ. ಜಂಗಮ ಎನ್ನುವುದು ಬಹುದೊಡ್ಡ ಚಲನಶೀಲ ಮೌಲ್ಯ. ಇದನ್ನು ಜನರು ಅರ್ಥ ಮಾಡಿಕೊಂಡಾಗ ಎಲ್ಲರೊಳಗೂ ಜಂಗಮತ್ವ ಅಳವಡಲು ಸಾಧ್ಯವಾಗುವುದು. ಜಂಗಮತ್ವ ಪ್ರತಿಯೊಬ್ಬರ ವ್ಯಕ್ತಿತ್ವದಲ್ಲೇ ಇರುವ ಮೌಲ್ಯ. ಹರಿಹರ ಹೇಳುವ ಕತೆ ಭಾವುಕರಿಗೆ ಇಷ್ಟವಾಗಬಹುದು. ಆದರೆ ಅನಾಚಾರಿಗಳು, ದುರಾಚಾರಿಗಳು, ದುಷ್ಟರು ಇದೇ ಪ್ರಸಂಗವನ್ನು ಮುಂದೆ ಮಾಡಿಕೊಂಡು ಭಕ್ತರ ಶೋಷಣೆಗೆ ದಾರಿ ಮಾಡಿಕೊಳ್ಳಬಹುದು. ಹರಿಹರ ಮಹಾಕವಿ ಆಗಿದ್ದರೂ ಅವನ ನಿಲವನ್ನು ಒಪ್ಪಬೇಕಾಗಿಲ್ಲ. ವಿಮರ್ಶೆ ಮಾಡದಿದ್ದರೆ ಹರಿಹರ ಹೇಳಿದ್ದನ್ನು ಒಪ್ಪಿಕೊಳ್ಳಬೇಕಾಗುವುದು. ಲಿಂಗ, ಜಂಗಮ ಕುರಿತು ಬಸವಣ್ಣನವರ ಮತ್ತೊಂದು ವಚನ ಎಲ್ಲರನ್ನೂ ಎಚ್ಚರಿಸುವಂತಿದೆ.
ಉದಯದ ಮಾಗಿಯ ಬಿಸಿಲು, ಅಂಗಕ್ಕೆ ಹಿತವಾಯಿತ್ತು.
ಮಧ್ಯಾಹ್ನದ ಬಿಸಿಲು ಅಂಗಕ್ಕೆ ಕರ ಕಠಿಣವಾಯಿತ್ತು?
ಮೊದಲಲ್ಲಿ ಲಿಂಗಭಕ್ತಿ ಹಿತವಾಯಿತ್ತು,
ಕಡೆಯಲ್ಲಿ ಜಂಗಮಭಕ್ತಿ ಕಠಿಣವಾಯಿತ್ತು?
ಇದು ಕಾರಣ ಕೂಡಲಸಂಗಮದೇವನವರ ಬಲ್ಲನಾಗಿ ಒಲ್ಲನಯ್ಯಾ.
ಲಿಂಗಪೂಜೆ ಬೆಳಗಿನ ಹಿತವಾದ ಬಿಸಿಲು ಇದ್ದಂತೆ. ಅದು ಸಹ್ಯವಾದುದು. ಅದೇ ಜಂಗಮ ಭಕ್ತಿ, ಮಧ್ಯಾಹ್ನದ ಬಿಸಿಲು ಇದ್ದಂತೆ. ಅದು ತುಂಬಾ ಸುಡುತ್ತಿರುತ್ತದೆ. ಆ ಬಿಸಿಲಿನಲ್ಲಿ ಮೈ ಕಾಯಿಸಿಕೊಳ್ಳಲು ಸಾಧ್ಯವಿಲ್ಲ. ಅದು ಅತಿಯಾದ ಹಿಂಸೆ ಕೊಡುವುದು. ಪ್ರೀತಿಯಿಂದ ಸದಾ ಕಾಯಕಶೀಲನಾಗಿದ್ದರೆ ವ್ಯಕ್ತಿಯ ವಯಸ್ಸು ವೃದ್ಧಿಯಾಗುವುದು. ಆತ ತನ್ನ ಕಾಯಕ ನಿಷ್ಠೆ ಮತ್ತು ಜಂಗಮಪ್ರೇಮವನ್ನು ನಿರಂತರವಾಗಿ ಉಳಿಸಿಕೊಂಡು ಹೋಗುವುದು ಮುಖ್ಯ. ಲಿಂಗನಿಷ್ಠೆ ಮತ್ತು ಜಂಗಮಪ್ರೇಮ ಎರಡೂ ಅಗತ್ಯ. ನಾವು ಬೆಳಗಿನಜಾವ ನಮ್ಮ ಆವರಣದಲ್ಲಿ ವಾಯುವಿಹಾರ ಹೋಗುವಾಗ ಅಲ್ಲಿನ ಗಿಡ-ಮರಗಳು, ಹಕ್ಕಿ-ಪಕ್ಷಿಗಳು, ಶಾಲಾ ಮಕ್ಕಳು, ವಿವಿಧ ಕಟ್ಟಡಗಳನ್ನೆಲ್ಲ ನೋಡುತ್ತಿದ್ದಾಗ ಬಂದ ಯೋಚನೆ: ನಮಗೆ 71 ವರ್ಷ. ನಮ್ಮ ಗುರುಗಳು ಸ್ವಾಮಿಗಳು 60 ವರ್ಷಕ್ಕೆ ನಿವೃತ್ತರಾಗಬೇಕು ಎನ್ನುವ ಸಂದೇಶ ನೀಡಿದ್ದರು. ಆ ಸಂದೇಶದ ಹಿಂದೆ ಜಂಗಮತ್ವವನ್ನು ನಿರಂತರ ಕಾಪಾಡಿಕೊಂಡು ಹೋಗುವ ವ್ಯಕ್ತಿ ಮತ್ತೆ ಸ್ವಾಮಿಯಾಗಿ ಬರಬೇಕು ಎನ್ನುವ ದೂರದೃಷ್ಟಿ ಇತ್ತೆನಿಸುವುದು. ಅದಕ್ಕನುಗುಣವಾಗಿಯೇ ಅವರು ನಡೆದುಕೊಂಡು ಮತ್ತೊಬ್ಬರಿಗೆ ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟರು. ಆ ಸ್ಥಾನಕ್ಕೆ ಬಂದವರು ಮಾಡುವ ಸೇವಾಕಾರ್ಯಗಳನ್ನು ನೋಡಿ ಆನಂದಿಸುತ್ತಿದ್ದರು. ನಾವು ಅವರ ಆಲೋಚನೆಯನ್ನು ಕಾರ್ಯಗತಗೊಳಿಸದಿದ್ದರೆ ಇಲ್ಲಿಯ ವ್ಯವಸ್ಥೆ ಸ್ಥಾವರವಾಗಿಬಿಡಬಹುದಲ್ಲ ಎನ್ನುವ ಚಿಂತೆ ಆಗಾಗ ಕಾಡುವುದು. ಮರುಕ್ಷಣ ಅನಿಸಿದ್ದು ಸ್ಥಾವರವಾದಾಗಲೇ ಜಂಗಮತ್ವಕ್ಕೆ ಬೆಲೆಯಲ್ಲವೇ ಎಂದು. ಸ್ಥಾವರದಿಂದಲೇ ಜಂಗಮ. ಪ್ರಕೃತಿಯಲ್ಲಿ ನಿರಂತರವಾಗಿ ಸ್ಥಾವರ ಮತ್ತು ಜಂಗಮ ತತ್ವಗಳನ್ನು ಕಾಣುತ್ತಿರುತ್ತೇವೆ. ಗಿಡ-ಮರಗಳು ವಸಂತ ಋತುವಿನಲ್ಲಿ ಚಿಗಿತು ನಳನಳಿಸುವವು. ಶಶಿರ ಋತು ಬರುತ್ತಲೇ ಅವು ಎಲೆಗಳನ್ನು ಒಣಗಿಸಿಕೊಂಡು ನೆಲಕ್ಕೆ ಸುರಿಸಿ ಬೋಳಾಗುತ್ತವೆ. ಇನ್ನೇನು ನಾಶವಾದವು ಎನಿಸುವುದು. ಆದರೆ ಅದು ನಾಶವಲ್ಲ. ಹೊಸ ಹುಟ್ಟಿಗೆ ಪ್ರೇರಣೆ ಮತ್ತು ಕಾರಣ. ಹಾಗಾಗಿ ಸ್ಥಾವರತ್ವ ಮತ್ತು ಜಂಗಮತ್ವ ಬದುಕಿನಲ್ಲಿ ಅನಿವಾರ್ಯ. ಆದರೆ ಯಾವಾಗ ಜಂಗಮವಾಗಬೇಕು, ಯಾವಾಗ ಸ್ಥಾವರವಾಗಬೇಕು ಎನ್ನುವ ಎಚ್ಚರ ಇರಬೇಕು. ಜಂಗಮ, ಸ್ಥಾವರ ಎನ್ನುವುದು ಆಯಾ ವ್ಯಕ್ತಿಗಳ ಮನಸ್ಥಿತಿಗೆ ಸಂಬಂಧಿಸಿದ್ದು. ಪಂಚೇಂದ್ರಿಯಗಳ ಮೂಲಕ ಇಂದ್ರೀಯಾತೀತ ಸತ್ಯದ ಬೆಳಕನ್ನು ಕಂಡುಕೊಳ್ಳುವುದೇ ಜಂಗಮತ್ವ. ಪ್ರತಿಯೊಬ್ಬರೂ ಜಂಗಮ ತತ್ವವನ್ನು ಅಳವಡಿಸಿಕೊಂಡಾಗ ಸೃಷ್ಟಿಕ್ರಿಯೆ ಇನ್ನಷ್ಟು ಪರಿಣಾಮಕಾರಿಯಾಗುವುದು. ಮನಸ್ಸಿದ್ದಲ್ಲಿ ಮಾರ್ಗ ಎನ್ನುವಂತೆ ಯಾರು ಬೇಕಾದರೂ ಶರಣನಾಗಬಹುದು, ಜಂಗಮನಾಗಬಹುದು. ಅದರಿಂದ ಆತ್ಮಕಲ್ಯಾಣ ಮತ್ತು ಲೋಕಕಲ್ಯಾಣ ಎರಡೂ ಸಾಧ್ಯವಾಗುವುದು.
ಸಾಮಾನ್ಯವಾಗಿ ಪ್ರತಿಯೊಬ್ಬರೂ ಭವಿಷ್ಯದ ಬಗ್ಗೆ ಭಯ, ಆತಂಕ, ಕುತೂಹಲ ಹೊಂದಿರುತ್ತಾರೆ. ಇವತ್ತು ತಾಂತ್ರಿಕವಾಗಿ ಮನುಷ್ಯ ಅದ್ಭುತ ಸಾಧನೆ ಮಾಡಿದ್ದಾನೆ. ಆದರೆ ಮಾನಸಿಕವಾಗಿ ಏನಾಗಿದ್ದಾನೆ ಎನ್ನುವುದರತ್ತ ಗಮನ ಹರಿಸಬೇಕಾಗಿದೆ. ಮನೆಯವರನ್ನು, ನೆರೆಹೊರೆಯವರನ್ನು ಪ್ರೀತಿಸದೆ ದ್ವೇಷಿಸುವಂತಹ ಸ್ವಭಾವ ಏಕೆ ಬಂತು? ವಾಸ್ತವವಾಗಿ ಸಕಲ ಜೀವರಾಶಿಯನ್ನೇ ಮನುಷ್ಯ ಪ್ರೀತಿಸ ಬೇಕಾಗಿತ್ತು. ಭವಿಷ್ಯ ನಿರ್ಮಾಣದಲ್ಲಿ ದ್ವೇಷ, ಅಸೂಯೆ, ಮತ್ಸರ, ಹಿಂಸೆ, ಕ್ರೋಧ ಇಂಥವುಗಳನ್ನು ನಾಶ ಮಾಡಿ ಪ್ರೀತಿ, ವಿಶ್ವಾಸದಿಂದ ಬಾಳಲು ಸಾಧ್ಯವಿಲ್ಲವೇ ಎನ್ನುವ ಚಿಂತನೆ ಮಾಡಬೇಕಿದೆ. ಮನುಷ್ಯ ಬದಲಾಗುವ ಭರಾಟೆಯಲ್ಲಿ ಇದ್ದುದಕ್ಕೆ ಶರಣಾಗುವುದನ್ನು ಮರೆಯುತ್ತಿದ್ದಾನೆ. ಇರುವುದನ್ನು ಮೊದಲು ಒಪ್ಪಿಕೊಳ್ಳಬೇಕು. ಬದಲಾವಣೆ ನಿರಂತರವಾಗಿ ನಡೆಯುತ್ತಿರುತ್ತದೆ. ಭವಿಷ್ಯ ಹೀಗೇ ಆಗುತ್ತೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಆದರೆ ಒಳ್ಳೆಯದು ಆಗುತ್ತದೆ ಎನ್ನುವ ಭರವಸೆ ಇಟ್ಟುಕೊಂಡು ಒಳ್ಳೆಯ ಆಲೋಚನೆ, ಕಾರ್ಯಗಳನ್ನು ಮಾಡುತ್ತ ಹೋಗಬೇಕು. ಇಂದು ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ. ಅದು ಪ್ರಗತಿಯ ಸಂಕೇತವಲ್ಲ ಎನ್ನದೆ ಅದಕ್ಕೆ ಮೊದಲು ಶರಣಾಗಿ ಸಕಾರಾತ್ಮಕವಾಗಿ ಅದನ್ನು ಬಳಸಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕು. ಅದರಿಂದ ಒಳಿತೇ ಆಗುವುದು. ಗಣಕಯಂತ್ರ, ಜಂಗಮ ವಾಣಿ, ಅಂತರ್ಜಾಲ ಮಾಹಿತಿ ಇವೆಲ್ಲ ಹೆಚ್ಚುಹೆಚ್ಚು ಪ್ರಯೋಜನಕಾರಿ ಆಗಿರುವುದನ್ನು ಇಂದಂತೂ ಮರೆಯಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿ ಕೆಟ್ಟವನು ಎಂದು ಯೋಚಿಸುತ್ತಿದ್ದರೆ ಅಥವಾ ಮಾತನಾಡುತ್ತಿದ್ದರೆ ಅದೇ ಮನಸ್ಸಿನಲ್ಲಿ ಉಳಿಯುವುದು. ಕೆಲವೊಬ್ಬರು ತಮ್ಮದನ್ನೇ ಕೊಚ್ಚಿಕೊಳ್ಳುತ್ತಿರುತ್ತಾರೆ. ಅವರು ಏನು ಹೇಳುತ್ತಾರೆ ಎಂದು ಯಾರೂ ಗಂಭೀರವಾಗಿ ಕೇಳಿಸಿಕೊಳ್ಳುವುದಿಲ್ಲ. ಅವರು ತಮ್ಮೊಬ್ಬರನ್ನು ಬಿಟ್ಟು ಇತರರನ್ನು ಅಪಹಾಸ್ಯ ಮಾಡುವರು. ನಿಂದಿಸುವರು. ತೇಜೋವಧೆ ಮಾಡುವರು. ಅದಕ್ಕೆ ತಕ್ಷಣ ಪ್ರತಿಕ್ರಿಯಿಸದೆ ಸುಮ್ಮನೇ ಕೇಳಿಸಿಕೊಂಡರೆ ಅವರೇ ಬದಲಾಗುವರು. ಹಾಗಾಗಿ ಅಂಥವರನ್ನೂ ಪ್ರೀತಿಸಲು ಕಲಿಯಬೇಕು. ಅವರನ್ನು ಕೆಟ್ಟವರಾಗಿ ನೋಡುವ ಅಗತ್ಯವಿಲ್ಲ. ಅದೂ ಶರಣನಾಗುವ ಸ್ಥಿತಿ. ಒಬ್ಬರನ್ನು ಬದಲಾಯಿಸಬೇಕು ಎಂದು ಏನೆಲ್ಲ ಉಪಾಯಗಳನ್ನು ಮಾಡುತ್ತ ನಮ್ಮ ಎಲ್ಲ ಶಕ್ತಿಯನ್ನೇ ಹಾಳುಮಾಡಿಕೊಳ್ಳುವ ಬದಲು ಮೌನವಾಗಿರುವುದನ್ನು ರೂಢಿಸಿಕೊಳ್ಳಬೇಕು. ಇದ್ದುದನ್ನು ಇದ್ದಂತೆ ಒಪ್ಪಿಕೊಂಡು ಅವರಲ್ಲೇ ಬದಲಾವಣೆ ಆಗುವಂತಹ ಸಂದರ್ಭ ಸೃಷ್ಟಿಸುವುದು ಸ್ವಾಗತಾರ್ಹ. ಏಕೆಂದರೆ ಪ್ರಪಂಚದಲ್ಲಿ ಎಲ್ಲರೂ ಕೆಟ್ಟವರಿಲ್ಲ. ಎಲ್ಲವೂ ಕೆಟ್ಟಿಲ್ಲ. ಒಳ್ಳೆಯವರೂ ಇದ್ದಾರೆ, ಒಳ್ಳೆಯದೂ ಸಾಕಷ್ಟಿದೆ.
ಮನುಷ್ಯ ಯಾವಾಗಲೂ ಒಂದೇ ರೀತಿ ಇರುವುದಿಲ್ಲ. ಆತ ಇದ್ದುದೆಲ್ಲವನ್ನೂ ತ್ಯಾಗ ಮಾಡಿ ನಿಜವಾದ ಸಂತನಾಗುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಒಳ್ಳೆಯ ಆಲೋಚನೆಗಳನ್ನು ಮಾಡುತ್ತ ನಾವೇ ಪ್ರೀತಿ ವಿಶ್ವಾಸ ತೋರಿಸುತ್ತಿದ್ದರೆ ಉಳಿದವರೂ ಒಳ್ಳೆಯವರಾಗುವರು. ಅವರಿಗೂ ಸಮಾಜದ ಬಗ್ಗೆ ಕಳಕಳಿ ಮೂಡುವುದು. ಕೆಲವರು ನಕಾರಾತ್ಮಕ ಅಂಶಗಳನ್ನೇ ಹೇಳುತ್ತಿರುತ್ತಾರೆ. ಅವರಿಗೆ ಒಳ್ಳೆಯದನ್ನು ಮಾತನಾಡಿ ಗೊತ್ತೇ ಇರುವುದಿಲ್ಲ. ಅಷ್ಟೊಂದು ದುರ್ವಿಚಾರ, ದುರ್ವಿಷಯಗಳಿಗೆ ಅಂಟಿರುತ್ತಾರೆ. ಅವರವರ ಆಲೋಚನೆಗಳೇ ಅವರನ್ನು ರೂಪಿಸುವ ಅಂಶಗಳು. ಸದಾಲೋಚನೆ ಮಾಡುವ ಸ್ವಭಾವ ಬೆಳೆಸಿಕೊಂಡರೆ ಜಂಗಮಸ್ವರೂಪಿಗಳಾಗುವರು. ದುರಾಲೋಚನೆ ಮಾಡುವ ಸ್ವಭಾವಕ್ಕೆ ಅಂಟಿ ಕೊಂಡರೆ ಸ್ಥಾವರವಾಗುವರು. ಸದಾಲೋಚನೆಯ ಸ್ವಭಾವಕ್ಕೆ ಅಂಟಿಕೊಂಡರೆ ವ್ಯಕ್ತಿ ಮತ್ತು ಸಮಷ್ಠಿಗೆ ಒಳಿತಾಗುವುದು. ನಿಸ್ವಾರ್ಥ, ನಿಷ್ಠೆ, ನಿರಹಂಕಾರ ಬೆಳೆಸಿಕೊಂಡು ಸಾರ್ವಜನಿಕರ ಜೊತೆ ಬೆರೆತು ಕೆಲಸ ಕಾರ್ಯಗಳನ್ನು ಮಾಡುವ ಮನಸ್ಸುಳ್ಳವರಾದರೆ ಅದೇ ಜಂಗಮ ತತ್ವ ಅಳವಡಿಸಿಕೊಂಡಂತೆ. ಒಳ್ಳೆಯ ವಿಚಾರಗಳನ್ನು ಎಲ್ಲೆಡೆ ಪಸರಿಸಬೇಕು. ಆ ವಿಚಾರಗಳು ಆಚರಣೆಯಲ್ಲಿ ಬರುವಂತೆ ನೋಡಿಕೊಳ್ಳಬೇಕು. ಪ್ರಪಂಚದಲ್ಲಿ ಸಾಕಷ್ಟು ಒಳ್ಳೆಯ ಕೆಲಸ ಕಾರ್ಯಗಳು ನಡೆಯುತ್ತಿದ್ದು ಅವುಗಳನ್ನು ಮೆಚ್ಚಿ ಮುಂದುವರಿಸಿಕೊಂಡು ಹೋಗಬೇಕು. ಒಬ್ಬರನ್ನು ಕಳ್ಳ ಎಂದು ದೂಷಣೆ ಮಾಡುತ್ತಿದ್ದರೆ ಅವನೆಂದೂ ಬದಲಾಗಲು ಸಾಧ್ಯವಿಲ್ಲ. ಅವನಿಗೆ ವಿವೇಕ ಹೇಳಿ ತಿದ್ದುವ ಕಾರ್ಯ ಮಾಡಿದರೆ ಆತ ಸಜ್ಜನನಾಗಿ ಬಾಳುವನು. ಅದೇ ಜಂಗಮದ ಕೆಲಸ. ಬಸವಣ್ಣನವರು ಮಾಡುತ್ತಿದ್ದುದೇ ಜಂಗಮದ ಕಾರ್ಯವನ್ನು. ಸದ್ವಿಚಾರಗಳನ್ನು ಕೇಳುತ್ತ, ಕೇಳುತ್ತ ಎಷ್ಟೋ ಜನರು ಬದಲಾಗುವರು. ಹಾಗಂತ ಸದ್ವಿಚಾರಗಳಿಂದಲೇ ಎಲ್ಲರನ್ನೂ ಪರಿವರ್ತನೆ ಮಾಡುತ್ತೇವೆ ಎನ್ನುವ ಭ್ರಮೆ ಬಿಟ್ಟು ಒಳ್ಳೆಯ ಆಲೋಚನೆಗಳನ್ನು ಮಾಡುವುದು ವ್ಯಕ್ತಿಗತ ವಿಕಾಸಕ್ಕೆ ರಾಜಮಾರ್ಗ ಎಂದು ಭಾವಿಸಬೇಕು. ಆಗ ಮನುಷ್ಯ ವಿವೇಕದ ದಾರಿಯಲ್ಲಿ ಸಾಗುವನು. ವ್ಯಕ್ತಿಗೆ ಸದಾಶಯ, ಸದಾಲೋಚನೆಗಳೇ ಇಲ್ಲದಿದ್ದರೆ ಜಗತ್ತಿನಲ್ಲಿ ಬದಲಾವಣೆಯೇ ಆಗುತ್ತಿರಲಿಲ್ಲ. ಪ್ರತಿಯೊಂದು ಪ್ರಗತಿಗೂ ಶಕ್ತಿ ತುಂಬಾ ಮುಖ್ಯ. ಅಕ್ಕಮಹಾದೇವಿಯವರು ಹೇಳುವುದು:
ಲೋಕದ ಚೇಷ್ಟೆಗೆ ರವಿ ಬೀಜವಾದಂತೆ,
ಕರಣಂಗಳ ಚೇಷ್ಟೆಗೆ ಮನವೇ ಬೀಜ.
ಎನಗುಳ್ಳುದೊಂದು ಮನ.
ಆ ಮನ ನಿಮ್ಮಲ್ಲಿ ಸಿಲುಕಿದ ಬಳಿಕ
ಎನಗೆ ಭವವುಂಟೆ ಚೆನ್ನಮಲ್ಲಿಕಾರ್ಜುನಾ?
ಮನಸ್ಸು ಅದ್ಭುತವಾದುದು ಮತ್ತು ನಿಗೂಢವಾದುದು. ಅದು ಅಷ್ಟು ಸುಲಭವಾಗಿ ಅರ್ಥವಾಗುವುದಿಲ್ಲ. ನಮ್ಮ ದೇಹದಲ್ಲಿ ವಂಶಪಾರಂಪರ್ಯವಾಗಿ ಬಂದ ಮೆದುಳಿನ ಒಂದು ಸರಪಳಿ ಇದೆ. ಇದನ್ನು ಮೀರುವ ಸಾಮರ್ಥ್ಯ ಬೇಕು. ಮನವೆಂಬುದು ಮಹಾದೇವನ ಅರಿವು ನೋಡಾ ಎನ್ನುವರು. ಮನಸ್ಸಿಗೆ ಅಸಾಧ್ಯ ಎನ್ನುವುದೇ ಇಲ್ಲ. ಹಾಗಾಗಿ ಪ್ರತಿಯೊಬ್ಬರೂ ತಮ್ಮ ಮನಸ್ಸಿನ ಶಕ್ತಿ ಸಾಮರ್ಥ್ಯವನ್ನು ಅರ್ಥ ಮಾಡಿಕೊಂಡು ಸರಿಯಾದ ಸಂಸ್ಕಾರ ನೀಡುತ್ತಿದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದು. ಈ ದಿಶೆಯಲ್ಲಿ ಮನಸ್ಸನ್ನು ಸುಸಂಸ್ಕೃವಾಗಿಟ್ಟುಕೊಳ್ಳುವುದು ಬಹುಮುಖ್ಯ. ಅದು ನನ್ನಿಂದ ಆಗುವುದಿಲ್ಲ ಎನ್ನುವ ಬದಲು ಸಾಧ್ಯವಾದಷ್ಟು ಸಾಧಿಸೋಣ ಎನ್ನುವ ಸಕಾರಾತ್ಮಕ ಚಿಂತನೆ ಇಟ್ಟುಕೊಳ್ಳುವುದು ಬಹುಮುಖ್ಯ. ನಿರಂತರ ಪ್ರಯತ್ನ, ನಿಸ್ವಾರ್ಥ, ನಿರ್ಭಯ ಮತ್ತು ಎಲ್ಲ ಜೀವರಾಶಿಗಳಿಗೆ ಒಳಿತು ಮಾಡುವ ಗುಣ ಬೆಳೆಸಿಕೊಂಡರೆ ಆತ್ಮಕಲ್ಯಾಣದ ಜೊತೆಗೆ ಲೋಕಕಲ್ಯಾಣವೂ ಆಗುವುದು.
ಲಿಂಗವ ಪೂಜಿಸುತ್ತ ಜಂಗಮದ ಮುಖವ ನೋಡುತ್ತಿಪ್ಪ
ಸುಖವ ಕೊಡು, ಕಂಡಾ ಲಿಂಗವೆ,
ಪರಮಸುಖವ ಕೊಡು, ಕಂಡಾ ಲಿಂಗವೆ.
ಕೂಡಲಸಂಗಮದೇವಾ, ಇದೇ ವರವ ನಿಮ್ಮಲ್ಲಿ ಬೇಡುವೆ.
Comments 9
Jayaraj Bidar
Feb 14, 2022ಲಿಂಗ-ಜಂಗಮ ಲಿಂಗಾಯತದ ದೊಡ್ಡ ಪರಿಕಲ್ಪನೆಗಳು. ಲೇಖನ ವಿಸ್ತಾರವಾಗಿದ್ದು ಅಧ್ಯಯನಪೂರ್ಣವಾಗಿದೆ.
Kumarappa Baliga
Feb 14, 2022ಸ್ಥಾವರಕ್ಕೆ ಚೈತನ್ಯ ಸಿಕ್ಕಾಗಲೇ ಅದು ಜಂಗಮವಾಗುವುದು ಅಂದರೆ ಚಲಿಸುವುದು. ಸದಾಚಾರ, ಸತ್ಕಾರ್ಯಗಳಲ್ಲಿ ಜಂಗಮತ್ವವಿದೆ ಎನ್ನುವುದು ನಿಜ. ಜೀವನದಲ್ಲಿ ಅವುಗಳ ಅನುಭಾವವಾಗುವುದು ಶರಣರಾದವರಿಗೆ ಮಾತ್ರವೇ. ಅವುಗಳ ವಿಸ್ತಾರವನ್ನು ಶಬ್ದಗಳಲ್ಲಿ ಹೇಳಲಾಗದು!
ಪಂಚಾಕ್ಷರಿ ಹಳೇಬೀಡು
Feb 16, 2022ಜಂಗಮ ಜಾತಿಯಲ್ಲ ತತ್ವ ಎಂದು ಮನ ಮುಟ್ಟುವಂತೆ ಅತ್ಯಂತ ಸರಳವಾಗಿವಿವರಣೆ ನೀಡಿದ ಗುರುಗಳಿಗೆ ಶರಣುಶರಣಾರ್ಥಿ.
Channappa Ilkal
Feb 21, 2022ಸ್ಥಾವರ ಮತ್ತು ಜಂಗಮ ಎನ್ನುವ ತತ್ವಗಳು ಆಯಾ ವ್ಯಕ್ತಿಗಳ ಮನಸ್ಥಿತಿಯೂ ಹೌದು. ವ್ಯಕ್ತಿ ನಿರಂತರ ಕ್ರಿಯಾಶೀಲನಾಗಿದ್ದರೆ ಆತನೇ ಜಂಗಮ. ಬದಲಾಗಿ ಜೋಬದ್ರಗೇಡಿಯಾಗಿದ್ದರೆ, ಜಡಜೀವಿಯಂತೆ ಬಾಳಿದರೆ ಅವನೇ ಸ್ಥಾವರ- ಹೊಸ ವಿಚಾರ ನೀಡಿದ ಗುರುಗಳಿಗೆ ಶರಣುಗಳು.
ಕರಿಬಸವಯ್ಯ ಚಿಲ್ಲಾಳಿ
Feb 23, 2022ಲಿಂಗಾಯತವು ಧರ್ಮವಾದರೆ ಅದು ಹರಿವ ನದಿ, ಜಾತಿಯಾದರೆ ಬಚ್ಚಲ ನೀರು- ಎಂದ ದೇವನೂರು ಮಹಾದೇವ ಅವರ ಮಾತುಗಳು ನೆನಪಾದವು. ಹರಿಯುವಿಕೆಯ ಜಂಗಮತ್ವ ಈಗೀಗ ಲಿಂಗಾಯತರಲ್ಲಿ ಕಣ್ಮರೆಯಾಗಿ, ಅದ್ಭುತ ಧರ್ಮವೊಂದು ಸ್ಥಾವರವಾಗಿ ಬಚ್ಚಲು ನೀರಿನಂತೆ ವಾಸನೆಗಟ್ಟುತ್ತಿದೆ.
Shanthkumar
Feb 24, 2022ಲಿಂಗ ಭಕ್ತಿ ಮತ್ತು ಜಂಗಮ ಪ್ರೇಮಕ್ಕಾಗಿ ಬಸವಣ್ಣನವರು ಪರಿತಪಿಸಿದರು ಎನ್ನುವುದಕ್ಕಿಂತ ಇವೆರಡೂ ಮಹಾನ್ ತತ್ವಗಳು ಅವರು ಕಂಡುಕೊಂಡ ಲೋಕೋಪಕಾರಿ ಸತ್ಯಗಳು ಎಂದರೆ ಹೆಚ್ಚು ಸೂಕ್ತವೆನಿಸುತ್ತದೆ.
Hariprasad
Feb 24, 2022THIS BLOG IS BOTH EDUCATIVE AND ENGAGING. I AM IMPRESSED CERTAINLY. THANKS FOR SHARING THE LINKS.
ಗಂಗಾಧರ ಮೂರ್ತಿ, ಸವಣೂರು
Feb 27, 2022ಲಿಂಗಭಕ್ತಿ, ಜಂಗಮ ಪ್ರೇಮದಲ್ಲಿರುವ ಸುಖವನ್ನು ಶರಣರು ಮಾತ್ರ ಬಲ್ಲರು. ಲಿಂಗಪೂಜೆಯ ಮರ್ಮವನ್ನು, ಜಂಗಮ ಸೇವೆಯ ದಾರಿಗಳನ್ನೂ ವಿವರ ವಿವರವಾಗಿ ದಾಖಲಿಸಲಾಗಿದೆ.
Prasad Patil
Feb 28, 2022ವಾಸ್ತವವಾಗಿ ಜಂಗಮ ಮತ್ತು ಲಿಂಗ, ಜಾತಿ ಮತ್ತು ಭೌತಿಕ ಸಾಧನಗಳಲ್ಲ. ಅವೆರಡೂ ತತ್ವಗಳು, ಶರಣರು ಬದುಕಿ, ಪಾಲಿಸಿದ ವಿಶೇಷ ಪರಿಕಲ್ಪನೆಗಳು. ಎಲ್ಲಿಯವರೆಗೆ ಲಿಂಗಾಯತರು ಅವುಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಲಿಂಗಾಯತ ಸಮಾಜವು ಸ್ವತಂತ್ರ ಧರ್ಮದ ಸ್ಥಾನಮಾನ ಪಡೆಯುವುದು ಸಾಧ್ಯವಿಲ್ಲ.